ನಿನ್ನ ಕಾಡುವುದಿಲ್ಲವೇ?

ಅಂದಿನಿಂದ ಇಂದಿನವರೆಗೂ
ಜೊತೆ ಜೊತೆಯಾಗೇ
ನಡೆದುಬ೦ದೆವಲ್ಲಾ
ಬದುಕ ಹಿರಿದಾರಿಯುದ್ದಕ್ಕೂ….

ಪಯಣದ ಹಾದಿಯಲ್ಲಿ –
ಕಂಡಿದ್ದು, ಉಂಡಿದ್ದು ನೂರಾರು.
ತಂಪಿನ ನೆಳಲಲ್ಲಿ ಸುಖಿಸಿದ್ದುಂಟು,
ಬೆಂಕಿಯ ಮಡಿಲಲ್ಲಿ ಬಳಲಿದ್ದುಂಟಾದರೂ
ಅದಾವುದೂ ಮರೆಯದ ನೆನಪಾಗುಳಿಯದೆ,

ಅಂದು ನೂರು ನಿಟ್ಟುಸಿರುಗಳ ಮರೆಸಿ
ನಾವು ನಕ್ಕ ಆ ಒ೦ದೊ೦ದು ನಗೆಯೂ
ದೈತ್ಯ ಮರದ ತೊಗಟೆಯ ಸೀಳಿ
ಮೆಲ್ಲಮೆಲ್ಲಗೆ ಇಣುಕುವ ಹಸಿರು ಚಿಗುರುಗಳಾಗಿ
ಕಣ್ಣು ಮಿಟುಕಿಸಿ, ಇಂದಿಗೂ ನಿನ್ನ ಕಾಡುವುದಿಲ್ಲವೇ?

***

ಚಂದ್ರೋದಯ -ಓಹೋ ಚಂದ್ರಮ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಗಾಯಕ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಾಡು ಕೇಳಿ    

ಓಹೋ ಚಂದ್ರಮ, ಕೇಳಯ್ಯಾ ಚಂದ್ರಮ ಒಲವಿನ ಕತೆಯ
ಒಲ್ಲದ ಒಲವಿನಲಿ ಬಾಳುವ ಈ ಜೊತೆಯ ||ಪ||

ಗುಲಾಬಿ ಹೂವಿನಲ್ಲಿ ಅದೇಕೋ ನಗುವೇ ಇಲ್ಲ
ಮುಳ್ಳಿಂದ ಮುತ್ತಿನೆಡೆಗೆ ಅದೇಕೋ ಬಾರದಲ್ಲ
ಕಂಗಳಿಂದ ಕಂಗಳ ಕನಸು ಕಾಣಲು ಕೊಡದಲ್ಲ
ಹೃದಯದಿಂದ ಹೃದಯವ ಅಳೆದು ನೋಡಲು ಬಿಡದಲ್ಲ
ಸಪ್ತಪದಿಗಳೆಂಬ ಸೆರೆಯಲಿರುವ ಹೊಸ ಕತೆಯ ||೧|
 

ನಿಟ್ಟುಸಿರ ಜಗಳದಲ್ಲಿ ದೂರಾಯ್ತು ಜೋಡಿ ಮಂಚ
ಭಾವಗಳ ಕದನದಲ್ಲಿ ಬೋಳು ಹೃದಯದ ಪ್ರಪಂಚ
ಅಂತರಂಗದ ಆಗಸ ಬೆಳಕು ಕಾಣದೆ ಅಲೆಯುತಿದೆ
ಅಂದದ ಈ ಅಂತ:ಪುರ ಅರ್ಥವಿಲ್ಲದೆ ಅಳುತಾ ಇದೆ
ವಿರಹವೆಂಬ ವಿಷವ ವಿನಾ ಕಾರಣ ಕುಡಿದವರ ||೨||

***