ಇಕ್ಕಳ – ಕೆ.ಎಸ್.ನರಸಿಂಹಸ್ವಾಮಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ      

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

***

4 thoughts on “ಇಕ್ಕಳ – ಕೆ.ಎಸ್.ನರಸಿಂಹಸ್ವಾಮಿ”

  1. ಶ್ರೀ ತ್ರಿ ಅವರೆ,

    “ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
    ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
    ಇವರ ಬಯಕೆಗಳೇನೊ! ಇವರದೇ ಟೀಕೆ
    ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!”

    ಅಂತ ನೀವು ನೇರವಾಗಿ ನಮ್ಮನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದೀರಾ ಹೇಗೆ?
    🙂

  2. ಕೆ.ಎಸ್.ನ ಅವರ ಪ್ರೇಮಗೀತೆಗಳನ್ನು ಓದಿದ್ದೆ.ಅವರ ಈ ರೀತಿಯ ಕವನವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ಅವರು ಬಹುಷಃ ಆಫೀಸ್‍ನಲ್ಲಿರುವ ಮ್ಯಾನೇಜರ್-ಬಾಸ್‍ಗಳನ್ನು ನೋಡಿ ಈ ರೀತಿ ಬರೆದಿರಬಹುದೇ !

  3. ಅವರು ಬಹುಷಃ ಆಫೀಸ್‍ನಲ್ಲಿರುವ ಮ್ಯಾನೇಜರ್-ಬಾಸ್‍ಗಳನ್ನು ನೋಡಿ ಈ ರೀತಿ ಬರೆದಿರಬಹುದೇ !

    ಯಾಕೆ? ಇಂತಹ ಜನ ಆಫೀಸಿನಲ್ಲಿಯೇ ಇರಬೇಕು ಎಂದೇನಿಲ್ಲವಲ್ಲಾ? 🙂

Leave a Reply

Your email address will not be published. Required fields are marked *