ನಿನ್ನೆ ಸಂಜೆ ದಿನಸಿ ಪದಾರ್ಥಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಳ್ಳುತ್ತಿದ್ದೆ. ತರಕಾರಿಗಳು ಎಂದಿನಂತಿಲ್ಲದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದವು. ಅವೂ ಕೂಡ ತಾಜಾ ಇರಲಿಲ್ಲ.  ಕ್ಯಾಬೇಜ್, ಕಾಲಿಫ್ಲವರಿಗೆ ತುಂಬಾ ರಾಸಾಯನಿಕ ಸಿಂಪಡಿಸಿರುತ್ತಾರೆ, ದ್ರಾಕ್ಷಿಯಂತೂ ವಿಷದಲ್ಲಿಯೇ ಬೆಳೆಯುವ ಹಣ್ಣು ಎಂದು ಬರೆದು, ಪೆಜತ್ತಾಯರು ಬೇರೆ ಹೆದರಿಸಿದ್ದರು.  ಇಲ್ಲಿ ಬೆಳೆಯುವ ಸೊಪ್ಪುಗಳಿಗೆಲ್ಲ ಏನೋ ರೋಗ ಬಂದಿದೆಯಂತೆ ಎಂದು ಎರಡು ದಿನದ ಹಿಂದೆ ಟೀವಿ ವಾರ್ತೆಯಲ್ಲಿ ಬಂದಿತ್ತು. ಈರುಳ್ಳಿ ವಾಸನೆ ಆಗಲ್ಲ, ಬೆಳ್ಳುಳ್ಳಿ ಸೇರಲ್ಲ. ತಿನ್ನೋದೇನು? ಅಂತ ಹುಡುಕುತ್ತಿದ್ದಾಗ ನನ್ನ ಸ್ನೇಹಿತೆಯೊಬ್ಬರ ಫೋನ್ ಬಂತು.

ಅವರು ಹೇಳುತ್ತಿದ್ದರು – “ಇವತ್ತು ರಾತ್ರಿ ಟೆಂಪರೇಚರ್ ತುಂಬಾ ಕೆಳಗೆ ಹೋಗುತ್ತದಂತೆ. ಗಿಡಗಳನ್ನೆಲ್ಲ ಮನೆಯೊಳಗೆ ಇಟ್ಟುಕೊಂಡುಬಿಡಿ. ಗುಲಾಬಿ ಹೊರಗೇ ಇರಲಿ ಪರವಾಗಿಲ್ಲ. ಉಳಿದ ಗಿಡಗಳನ್ನು ಒಳಗಿಡಲು ಇದು ಸಕಾಲ.”  ದೂರವಾಣಿ ಮಾಡಿದವರು ಹಲವಾರು ವರ್ಷಗಳಿಂದ ಈ ದೇಶದಲ್ಲೇ ನೆಲೆಸಿದ್ದು, ಗಿಡಗಳನ್ನು ಪೋಷಿಸಿ,ಪಾಲಿಸಿರುವ” ಹೆತ್ತ ತಾಯಿ” ಅನುಭವವಿರುವವರು.  ನಾನು ಮೊದಲೇ ಅವರಲ್ಲಿ ಮಾಡಿಕೊಂಡಿದ್ದ ವಿನಂತಿಯನ್ನು ಮನ್ನಿಸಿ ಈ ಕರೆ ಮಾಡಿದ್ದರು. ಅಯ್ಯೋ ಚಳಿಗಾಲ ಶುರುವಾಗಿ ಬಿಟ್ಟಿತೇ?  ಇಷ್ಟು ದಿನ ಇದ್ದ ಸುಡುಬಿಸಿಲು, ರಾತ್ರಿ ಒಂಭತ್ತರವರೆಗೆ ಇರುತ್ತಿದ್ದ ಬೆಳಕು ಎಲ್ಲ ಬರೀ ಭ್ರಮೆಯೇ ಅನ್ನಿಸತೊಡಗಿತು.

ಇಲ್ಲಿ ಬೇಸಿಗೆಯಲ್ಲಿ ಮೈತುಂಬಿ ಬೆಳೆಯುವ ಗಿಡಗಳನ್ನು ಹೊರಗಿನ ಚಳಿ,ಮಂಜಿನಿಂದ ಕಾಪಾಡಲು ಆ ಗಿಡಗಳನ್ನು ಮನೆಯೊಳಗೆ ತಂದಿಟ್ಟುಕೊಂಡು ಜೋಪಾನ ಮಾಡುತ್ತಾರೆ.  ಆದರೆ ನಾನೇಕೋ ಈ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ.  ಹಿಂದಿನ ಎರಡು ವರ್ಷಗಳಲ್ಲಿಯೂ ಹೊರಗೆ ಬಿಸಿಲಿನಲ್ಲಿ ನಳನಳಿಸುತ್ತಿದ್ದ ಗಿಡಗಳೆಲ್ಲ ಒಳಗೆ ತಂದಿಟ್ಟ ಕೆಲವೇ ದಿನಗಳಲ್ಲಿ ರವಿಯ ವಿರಹವನ್ನು ತಾಳಲಾರೆವೆಂಬಂತೆ ಬಸವಳಿದು ಹೋಗಿದ್ದವು. 

ಗಿಡಗಳನ್ನು ಯಾವಾಗ ಒಳಗೆ ತಂದಿಡಬೇಕೆಂದು ತಿಳಿಯದೆ ನಾನು ಬಸವಣ್ಣನವರು ಹೇಳಿದಂತೆ “ತನ್ನಂತೆ ಪರರ ಬಗೆದೊಡೆ” ಎಂಬ ನಿಯಮವನ್ನೇ ಗಿಡಗಳಿಗೂ ಅನ್ವಯಿಸುತ್ತಿದ್ದೆ.  ಅಂದರೆ ಮನೆಯ ಹೊರಗೆ ನಿಂತು, ಥಂಡಿ ತಡೆಯಲಾರೆ ಎಂದು ನನಗನ್ನಿಸಿದರೆ ಆಗ ಗಿಡಗಳನ್ನು ಒಳಗೆ ವರ್ಗಾಯಿಸುತ್ತಿದ್ದೆ. ಅದು ತಡವಾಗುತ್ತಿತ್ತೋ, ಗಿಡಗಳು ನನಗಿಂತ ಬಹಳ ಸೂಕ್ಷ್ಮ ಸ್ವಭಾವದವುಗಳೋ, ಬೇರಾವ ಕಾರಣವೋ ಗೊತ್ತಿಲ್ಲ. ಗಿಡಗಳು ಮುರುಟಿಹೋಗುತ್ತಿದ್ದವು.  ಒಟ್ಟಿನಲ್ಲಿ ಎಂದೂ ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ಹೊಸ ಗಿಡ ತಂದು ನೆಡುವುದೇ ಆಗಿದೆ ಹೊರತು ಹಳೆಯದು ಎಂದೂ ಉಳಿದಿಲ್ಲ.

ಈ ನೆಲದಲ್ಲಿ ಬೆಳೆಯುವ ಕೆಲವು ಸಸ್ಯಗಳ ಮೇಲೆ ಚಳಿಗಾಲದ ಹವೆ ಯಾವ ಪರಿಣಾಮವನ್ನೂ ಬೀರದು. ಆದರೆ ಭಾರತದ ಒಣ ಹವಾಮಾನದಲ್ಲಿ ಹಾಯಾಗಿ ಬಾಳುವ ತುಳಸಿ, ಕರಿಬೇವು  ಹವಾಮಾನದಲ್ಲಿ ಸ್ವಲ್ಪ ವೈಪರೀತ್ಯವಾದರೂ ತತ್ತರಿಸಿ ಹೋಗುತ್ತವೆ.  ಕಳೆದ ವರ್ಷ ನನಗೊಂದು ಕಹಿ ಅನುಭವವೂ ಆಗಿದೆ.  ಆಗ ಮನೆಯಲ್ಲಿದ್ದ ಕರಿಬೇವಿನ ಗಿಡ ಸುಮಾರು ದೊಡ್ಡದಾಗಿತ್ತು. ಕುದಿಯುತ್ತಿರುವ ಸಾರಿಗೆ ಆಗೀಗ ನಾಲ್ಕೈದು ಎಲೆಗಳನ್ನು ದಯಪಾಲಿಸುವಷ್ಟು  ಉದಾರಿಯಾಗಿತ್ತು.  ಚಳಿಗಾಲದಲ್ಲಿ ಮನೆಯೊಳಗೆ ತಂದಿಟ್ಟ ಮೇಲೂ  ಸುಮಾರು ದಿನಗಳು ಚೆನ್ನಾಗಿಯೇ ಇತ್ತು. ಒಂದು ದಿನ ಹೊರಗೆ ಹದವಾದ ಹೂ ಬಿಸಿಲಿತ್ತು.  

ನಾನು ಮತ್ತೆ ಬಸವಣ್ಣನವರ ನಿಯಮವನ್ನೇ ಅನುಸರಿಸಿ, ಪಾಪ!  ಕರಿಬೇವಿಗೂ ಸ್ವಲ್ಪ ಬಿಸಿಲು ಬೀಳಲಿ ಎಂದು ಆ ಗಿಡವನ್ನು ತಂದು ಬಿಸಿಲಿಗಿಟ್ಟೆ.  ಒಂದೆರಡು ಘಂಟೆಗಳ ನಂತರ ಮತ್ತೆ ಒಳಗೆ ತಂದಿಟ್ಟೆ. ಅಷ್ಟೇ. ಅದೇನು ವ್ಯತ್ಯಾಸವಾಯಿತೋ ಗೊತ್ತಿಲ್ಲ. ಗಿಡ ಆ ಕ್ಷಣದಿಂದಲೇ ಕಳೆಗುಂದುತ್ತಾ ಹೋಯಿತು. ಪ್ರತಿ ದಿನವೂ ನಾನು ನೋಡನೋಡುತ್ತಿದ್ದಂತೆಯೇ ಕಾಯಿಲೆ ಹಿಡಿದ ಮನುಷ್ಯರಂತೆ ಕ್ಷೀಣಿಸುತ್ತಾ ಹೋಗಿ,  ಒಂದು ದಿನ ಸತ್ತೇ ಹೋಯಿತು!  

ಶ್ರೀನಿ  ಅಶಾವಾದಿಯಂತೆ,  ಈ ಗಿಡ ಮತ್ತೆ ಇದ್ದಕ್ಕಿದ್ದಂತೆ ಒಂದು ದಿನ ಚಿಗುರಲೂ ಬಹುದು. ಈಗಲೇ ಇದನ್ನು ಎಸೆಯುವುದು ಬೇಡ ಅಂದರು. ನಾನೂ ಕೂಡ “ನೀನೊಲಿದರೆ ಕೊರಡು ಕೊನರುವುದಯ್ಯಾ..” ಎಂದು ನಂಬಿದವಳೇ.  ಎಂದೋ ಒಂದು ಸುದಿನ ಈ ಬಾಡಿ ಹೋದ ಗಿಡದಲ್ಲೂ ಜೀವ ಸಂಚಾರವಾದೀತೇನೋ ಎಂದು  ಕಾಯುತ್ತಿದ್ದೆ.  ಆ ಗಿಡವನ್ನು ಹೊರಗೆ ಎಸೆಯದೆ ಹಾಗೆಯೇ ಇರಿಸಿದ್ದೆ. ಆದರೆ ನನ್ನ ಆಸೆ ಫಲಿಸಲಿಲ್ಲ.

ಅಂದು ಬಿಸಿಲಿದೆ ಎಂದು ಗಿಡವನ್ನು ಹೊರಗಿಡದೆ ಇದ್ದಿದ್ದರೆ ಗಿಡ ಸಾಯುತ್ತಿರಲಿಲ್ಲ. ನನ್ನದೇ ತಪ್ಪು ಎಂದು ಹಳಹಳಿಸಿದೆ. ಒಣಗಿ ನಿಂತ ಕರಿಬೇವಿನ ಗಿಡವನ್ನು ನೋಡಿದಾಗಲೆಲ್ಲಾ ಆನಂದರ ಸಣ್ಣ ಕಥೆ “ನಾನು ಕೊಂದ ಹುಡುಗಿ” ನೆನಪಾಗಿ , ಈ ಗಿಡವನ್ನು ನಾನೇ ಕೈಯಾರೆ ಕೊಂದೆನೇ ಎಂಬ ಅಪರಾಧಿ ಮನೋಭಾವನೆ ಆವರಿಸುತ್ತಿತ್ತು. 

ಈ ಬಾರಿ ಹಾಗಾಗಬಾರದೆಂದೇ ನನ್ನ ಸ್ನೇಹಿತೆಗೆ ಮೊದಲೇ ಹವಾಮಾನ ಮುನ್ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದೆ.  ಅದರಂತೆ,  ಸಕಾಲದಲ್ಲಿ ಗಿಡಗಳನ್ನು ಒಳಗೆ ತಂದು ಬೆಚ್ಚಗೆ ಇಟ್ಟಿದ್ದೇನೆ . ಆದರೆ ಮುಂದಿದೆ ಮಾರಿ ಹಬ್ಬ!   ಮುಂದಿರುವ ಐದಾರು ತಿಂಗಳ ಹಿಮ ಸುರಿಯುವ ಕ್ರೂರ ಚಳಿಗಾಲದಲ್ಲಿ ಗಿಡಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವುದು ಹೇಗೆ? ಈ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ಟಿಪ್ಸ್ ಕೊಡಿ ಪ್ಲೀಸ್…

11 thoughts on “ನಾನು ಕೊಂದ ಗಿಡ!”

  1. ವೇಣಿ, ನಿನ್ನ ಲೇಖನ ಓದಿ ನಂಗೆ ನಾನು ಡೆನ್ವರ್ ನಲ್ಲಿದ್ದಾಗ ನಮ್ಮ ಮನೆಯ ಹಿಂದೆ ಮಾಡಿದ ಪುಟ್ಟ ಹೂವಿನ ಹಾಸಿಗೆ(flower bed) ನೆನಪಾಗ್ತಿದೆ. ನನಗೂ ಈ ಹೂ ಗಿಡಗಳ ಹುಚ್ಚು ಬಹಳ. ಅದರಲ್ಲೂ ಶಾವಂತಿಗೆ, ಗುಲಾಬಿ ಮತ್ತು ಕೆಂಪು ಜಾಜಿ ಅಂತ ಎಲ್ಲಾ ಗಿಡ ತಂದು ಬೇಸಿಗೆ ಶುರುವಾದೊಡನೆ ಹಾಕಿದೆ, ಕಣ್ಣು ಕೋರೈಸುವಷ್ಟು ಹೂ ಸುರಿದೋಯ್ತು. ಅವೆಲ್ಲಾ ನೆಲದಲ್ಲೇ ಹಾಕಿದ ಗಿಡಗಳು. ಆದರೆ ಜಾಜಿ ಗಿಡ ಮಾತ್ರ ಅಂಗಡಿಯಿಂದ ತಂದ ದೊಡ್ಡ ಹೂಕುಂಡದಲ್ಲೇ ಇತ್ತು. ತುಂಬಾ ಚೆನ್ನಾಗಿ ಚಿಗುರಿ ಶ್ರಾವಣ ಮಾಸದಲ್ಲಿ ದೇವರಿಗೆ ಏರಿಸಲು ಒಂದು ಪುಟ್ಟ ಹಾರದಷ್ಟು ಹೂ ಸಿಗುತ್ತಿತ್ತು.

    ಆಮೇಲೆ ಯಾರೋ ಹೇಳಿದರು ‘ನೆಲಕ್ಕೇ ಹಾಕಿ . ಚಳಿಗಾಲ ಶುರುವಾಗಿ ಹಿಮ ಸುರಿಯ ತೊಡಗಿದಾಗ ಎಲ್ಲಾ ಗಿಡದಂತೇ ಇದೂ ನೆಲಕಚ್ಚುತ್ತದೆ , ಆದರೆ ಮತ್ತೆ ಬೇಸಿಗೆ ಹೊತ್ತಿಗೆ ಚಿಗುರುತ್ತದೆ’ ಅಂದರು. ಅಷ್ಟು ಹೊತ್ತಿಗೆ ಚಳಿಗಾಲ ಕಾಲಿಡತೊಡಗಿದ್ದರಿಂದ ಬಿಸಿಲಿಗೆ ಹೊರಗಿಟ್ಟು ಹಿಮ ಸುರಿದಾಗ ಒಳಗೆ ತಂದಿಟ್ಟು ಸುಮಾರಾಗಿ ಚೆನ್ನಾಗೇ ಇದ್ದ ಗಿಡ ನೆಲಕ್ಕೆ ನೆಟ್ಟ ಒಡನೇ ನೆಲದ ಥಂಡಿಗೋ ಏನೋ ದಿನದಿನಕ್ಕೂ ಕ್ಷೀಣಿಸಿ ಸತ್ತೇ ಹೋಯಿತು. ಮತ್ತೆ ಬೇಸಿಗೆ ಬಂತು.  ನಾನು ಆಸೆಯಿಂದ ನೋಡುತ್ತಿದ್ದೆ, ಜಾಜಿ ಈಗ ಚಿಗುರುತ್ತದೆ ಆಗ ಚಿಗುರತ್ತೆ ಅಂತ.  ಆದರೆ ಜೊತೆಯಲ್ಲಿದ್ದ ಗುಲಾಬಿ, ಶಾವಂತಿಗೆ ಚಿಗುರಿ ಹೂ ಬಿಡಲು ಶುರುವಾದರೂ ಇದು ಕಣ್ತೆರೆಯಲೇ ಇಲ್ಲ.

    ಹೂ ಕುಂಡದಲ್ಲಿದ್ದ ಕೆಲವು ಗಿಡಗಳಿಗೂ ಇದೇ ಗತಿ. ಆದರೆ ಚಳಿಗಾಲದಲ್ಲಿ ಒಣಗಿ ಬೇಸಿಗೆಯಲ್ಲಿ ಮತ್ತೆ ಉಸಿರಾಡುವ ಹೂಗಿಡಗಳು ಅಂದರೆ ಶಾವಂತಿಗೆ ಮತ್ತು ಗುಲಾಬಿ ಎರಡೇ ಅನ್ಸತ್ತೆ. ಹೊರಗೆ ಬಿಸಿಲು ಮೂಡಿದಾಗೆಲ್ಲಾ ಗಿಡವನ್ನ ಹೊರಗಿಡು ಆದರೆ ತುಂಬಾ ಹೊತ್ತಲ್ಲ, ಯಾಕೇಂದ್ರೆ ವಾತಾವರಣದಲ್ಲಿರುವ ಥಂಡಿಯಿಂದಲೂ ಗಿಡ ಒಣಗುತ್ತದೆ. ನಂತರ ಒಳಗಡೆ ಇಡಬಹುದು.

  2. ಅದಕ್ಕೊಂದು ಉಪಾಯವಿದೆ….
    ನಿಮ್ಮ ಮನೆಯಲ್ಲಿರೋ ಎಲ್ಲಾ ಗಿಡಗಳನ್ನು ಗೋಣಿಚೀಲದಲ್ಲಿ ಸುತ್ತಿ, ಅದಕ್ಕೆ ಕಂಬಳಿ ಹೊದ್ದು… ಅದರ ಮೇಲೆ ಗಾಳಿಯಾಡದಂತೆ, ಬೆಳಕೂ ಆಡದಂತೆ ಪ್ಲಾಸ್ಟಿಕ್ ಸುತ್ತಿ…. ಚಳಿಗಾಲ ಕಳೆದ ಮೇಲೆ ತೆರೆದು ನೋಡಿ…

    ಚಳಿಯಿಂದ ರಕ್ಷಿಸಿದ ಹಾಗೂ ಆಗುತ್ತೆ… ಅವುಗಳಿಗೆ ಬೆಚ್ಚನೆಯ ಪಾಲನೆ ಮಾಡಿದ ಹಾಗೂ ಆಗುತ್ತೆ…. 🙂 🙂 🙂

  3. ಅನ್ವೇಷಿಗಳೇ, “ಎಲ್ಲಾ ಗಿಡಗಳನ್ನು ಗೋಣಿಚೀಲದಲ್ಲಿ ಸುತ್ತಿ, ಅದಕ್ಕೆ ಕಂಬಳಿ ಹೊದ್ದು… ಅದರ ಮೇಲೆ ಗಾಳಿಯಾಡದಂತೆ, ಬೆಳಕೂ ಆಡದಂತೆ ಪ್ಲಾಸ್ಟಿಕ್ ಸುತ್ತಿ…. ಚಳಿಗಾಲ ಕಳೆದ ಮೇಲೆ ತೆರೆದು ನೋಡಿ…” ಎಂದು ಮಾತ್ರ ಹೇಳಿದ್ದೀರಿ. ತೆರೆದು ನೋಡಿದಾಗ ಗಿಡದ ಗತಿ ಏನಾಗಿರತ್ತೆ ಅಂತ ನಾನೇ ಅನ್ವೇಷಣೆ ಮಾಡಿಕೊಳ್ಳಬೇಕೇ? 🙂

    ಬಹುಶ: ಮನಿ(plant)ಯನ್ನು ನೀವು ಹೇಳಿದಂತೆ ಸಂರಕ್ಷಣೆ ಮಾಡಬಹುದು ಅನ್ನಿಸತ್ತೆ 🙂

  4. ಮೀರಾ, ನಿನ್ನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಬೇರೆಯವರ ಅನುಭವದಿಂದ ಪಾಠ ಕಲಿಯಬೇಕು ಅನ್ನೋದು ಇದಕ್ಕೇ ಇರಬೇಕು. ಸರಿ, ನಿನಗೆ ಆ ಸಲಹೆ ಕೊಟ್ಟವರು ಯಾರು? ಅನ್ವೇಷಿಗಳೇನಾದರೂ ಡೆನ್ವರಿಗೂ ಹೋಗಿದ್ರಾ ಅಂತ ಅನುಮಾನ 🙂

  5. ಅನ್ವೇಷಿಗಳು ಹೇಳಿದಂತೇ ಮಾಡಿದ್ದು ನಾನು, ಅದು ನಾನು ಡೆನ್ವರ್ ಬಿಟ್ಟು ಬರೋವಾಗ. ನಾನೇ ಅಲ್ಲಿಲ್ಲದ ಮೇಲೆ ನನ್ನ ಗಿಡಗಳನ್ನ ಹೇಗೆ ಜೋಪಾನ ಮಾಡೋದು ಅಂತ ಕಾಯ್ತಿದ್ದೆ, ಅಷ್ಟ್ರಲ್ಲಿ ಇವರ ಸಲಹೆ ಸಿಕ್ಕಿ ಅದರಂತೇ ಮಾಡಿ ಬಂದೆ. ಮತ್ತೇನಾದರೂ ಜೀವನದಲ್ಲಿ ಅಲ್ಲಿಗೆ ಹೋಗುವ ಅವಕಾಶ ಸಿಕ್ಕಿದರೆ ಹೋಗಿ ನೋಡಿದರೆ ಗೊತ್ತಾಗತ್ತೆ ಇವರ ಸಲಹೆಯ ಪರಿಣಾಮ.

  6. ‘ನಾನು ಕೊಂದ ಗಿಡ’ ಅನ್ನೋದರ ಬದಲಿಗೆ ‘ಸತ್ತುಹೋದ ಗಿಡ’ ಎಂದಿದ್ದರೆ ಚೆನ್ನಾಗಿತ್ತೇನೋ. ಏನೋ ಬಿಸಿಲು ಬಿದ್ದು ಚಿಗುರಿಕೊಳ್ಳಲಿ ಎಂದು ತಾನೇ ನೀವದನ್ನು ಹೊರಗಡೆ ಇರಿಸಿದ್ದು – ಅದಕ್ಕೂ ಅರ್ಥವಾಗುತ್ತೆ ಬಿಡಿ.

    ಕೊಂದೋರ ಪಾಪ ತಿಂದೋರ ಬಾಯಲ್ಲಿ ಅನ್ನೋ ಹಾಗೆ ನೀವು ಈ ಗಿಡದ ಎಲೆಗಳನ್ನೆಲ್ಲ ಒಗ್ಗರಣೆಗೆ ಬಳಸಿ, ಆಮೇಲೆ ಅವು ಮುಗಿದ ಮೇಲೆ ಒಂದು ತಿಂಗಳು ಒಗ್ಗರಣೆಗೆ ಕರಿಬೇವಿನ ಸೊಪ್ಪನ್ನೇ ಬಳಸೇ ಬೇಡಿ, ಅದೇ ನಿಮಗೆ ಪ್ರಾಯಶ್ಚಿತ.

    ಅದಕ್ಕೂ ಆಯಸ್ಸು ಮುಗಿದಿತ್ತು ಅಂತ ಕಾಣ್ಸುತ್ತೆ, ಮುಂದಿನ ಸಲ ನಿಮ್ಮನೇಲೆ ಚೆನ್ನಾಗಿ ಚಿಗುರಿರೋ ಕರಿಬೇವಿನ ಗಿಡ ಇದ್ದಾಗ ಅದನ್ನು ಸ್ವಲ್ಪ ಬೆಚ್ಚಗಿನ ಪ್ರದೇಶಕ್ಕೆ ಕಳಿಸಿಕೊಡಿ! 🙂

  7. ಮೀರಾ ಅವರೆ, ಏನಾಗಿದೆ ಅಂತ ನನಗೂ ನೋಡಬೇಕಾಗಿದೆ… ಅದಕ್ಕಾಗಿ ಎಲ್ಲಿ ಅಡಗಿಸಿಟ್ರಿ ಅಂತ ಹೇಳಿಬಿಡಿ… ಅಥವಾ ಅಲ್ಲಿಗೆ ಈ ಬ್ಲಾಗಿನಿಂದಲೇ ಒಂದು ಲಿಂಕ್ ಕೊಟ್ಟುಬಿಡಿ. 🙂

    ಶ್ರೀ ತ್ರೀ ಅವರೆ, ಡೆನ್ವರ್ ಡೆನ್‌ಗೆ ನಾನ್ಯಾವತ್ತೂ ಹೋಗಿಲ್ಲ…
    ಯಾಕಿದನ್ನು ಸ್ಪಷ್ಟಪಡಿಸುತ್ತೇನೆಂದರೆ, ಈ ಸಲಹೆ ಕೊಟ್ಟವರನ್ನು ಚಚ್ಚುವ ಉದ್ದೇಶ ಹೊಂದಿದ್ದೀರಿ ಅಂತ ನಮಗೆ ಗೊತ್ತಾಗಿದೆ. 🙂

    ನಾನು ಹೇಳಿದ್ದೇನು ಗೊತ್ತಾಗಿಲ್ವಾ? ಮುಂಬಯಿಯಲ್ಲಿ ಉಗ್ರರು ಗೋಣಿಚೀಲದಲ್ಲಿ ಅಡಗಿಸಿಟ್ಟ ಬಾಂಬ್ plant ಮಾಡಿದ್ದು ಹಾಗೇ ಅಂತ ಸುದ್ದಿ ಓದಿಲ್ಲವೇ? 🙂

  8. ಶ್ರೀತ್ರಿ ಅವ್ರೇ,
    ನಿಮ್ಮ ಗಿಡ ಕೊಂದು ಬಿಟ್ಟಿರಿ ಅಂತ ಬೇಜಾರು ಮಾಡ್ಕೋಬೇಡಿ

    ನನ್ನ ಅನುಭವ ಹೀಗೆ ಹೇಳುತ್ತೆ, ನೀವಿರುವ ಜಾಗದ U.S.D.A zone ತಿಳಿದುಕೊಂಡು ನಿಮ್ಮ zone ನಲ್ಲಿ hardy ಆಗಿರುವ ಗಿಡ ಮಾತ್ರ ಹಾಕಿ.ಯಾವುದೇ garden web site ನಲ್ಲಿ ಇದರ ಬಗ್ಗೆ ನಿಮಗೆ ಮಾಹಿತಿ ಸಿಗುತ್ತೆ. ಅದಕ್ಕಿಂಥಾ ಸುಲಭ ಉಪಾಯವೆಂದರೆ ನೀವು,ನಿಮ್ಮಗಿಡಗಳು,ನಿಮ್ಮ ಶ್ರೀ,ಮರಿತ್ರೀ,ಕಿರಿಶ್ರೀ ಜೊತೆಗೆ ಕ್ಯಾಲಿಫೋರ್ನಿಯ ಬೇಏರಿಯಾಗೆ ಬಂದುಬಿಡಿ ವರ್ಷದ13 ತಿಂಗಳೂ ನಿಮ್ಮ ಗಿಡಗಳು ಹೂಸುರಿಸಿ
    ನಗದಿದ್ದರೆ ಕೇಳಿ.

  9. ಉತ್ತಮ ಸಲಹೆಗೆ ಧನ್ಯವಾದಗಳು ಮಾಲಾ. ಈವರ್ಷ ನನ್ನ ತೋಟಗಾರಿಕೆಗೆ ಪೂರ್ಣ ವಿರಾಮ ಇಟ್ಟಿದ್ದಾಯಿತು. ಮುಂದಿನ(ಪಂಚ ಅಲ್ಲ) ವಾರ್ಷಿಕ ಯೋಜನೆಯಲ್ಲಿ ನಿಮ್ಮ ಸಲಹೆ ನೆನಪಿಟ್ಟುಕೊಂಡು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ.

    CA ಗೆ ಬಂದರೆ ಕರಿಬೇವಿನ ಗಿಡದಲ್ಲೂ ಹೂವು ಸುರಿಯುತ್ತದೆಯೇ? ನನಗೆ ಎಲೆ ಸಾಕಾಗಿತ್ತು.

  10. ಓ…..ಎಸ್ ಕ್ಯಾಲಿಫೋರ್ನಿಯ ಅಂದ್ರೆ ಏನೆಂದು ಕೊಂಡಿರಿ ಮತ್ತೆ? ಕರಿಬೇವು ಮರಿಬೇವು ಮುಂತಾದ ಬೇವಿನ ಎಲ್ಲಾ ಬಂಧು ಬಾಂಧವರೂ ಹೂವು ಹಣ್ಣು ಕಾಯಿ ಕಡ್ಡಿ ಎಲ್ಲಾ ಸುರಿಸುತ್ತಾರೆ.(ಎಕ್ಸ್ಟ್ರಾ ಟ್ಯಾಕ್ಸ್ ಕಕ್ಕುತ್ತೀವಲ್ಲಾ ಅನ್ನೋದು ಸಿನಿಕರಾಡುವ ಮಾತು ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳ ಬೇಡಿ)

    ನಿಮಗೆ ಯಾವ ಎಲೆ ಬೇಕಾಗಿದೆಯೋ ಗೊತ್ತಾಗಲಿಲ್ಲಾ
    ವೀಳ್ಯದೆಲೆ, ಬಾಳೆಎಲೆ ಎರಡೂ ಇಲ್ಲಿ ಸಿಗುತ್ತೆ
    ಮೊನ್ನೆ ಇಲ್ಲಿನ ವಾಲ್ ಮಾರ್ಟ್ ನಲ್ಲಿ ಬಾಳೆ ಸಸಿಗಳೂ ಮಾರಾಟಕ್ಕಿದ್ದವು
    ನೀವಿಲ್ಲಿಗೆ ಬಂದರೆ ನಿಮ್ಮದೇ ಬಾಳೆ ಗಿಡದಲ್ಲಿ ಬೆಳೆದ ಬಾಳೇಕಾಯಿಯ ಬೋಂಡ ಮಾಡಿ ನಮಗೆಲ್ಲಾ ಕೊಡಬಹುದು!

Leave a Reply to Anveshi Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.