ತೇಲಿದೆ ನೆನಪಿನ ದೋಣಿಯಲಿ…

ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ.  ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 )   ಪುಸ್ತಕವನ್ನು ವೇಗವಾಗಿ, ಗಬಗಬನೆ  ಓದುವ ಸ್ವಭಾವ ನನ್ನದಲ್ಲ.  ರುಚಿಕರವಾದ ಪುಸ್ತಕವೊಂದು ಬೇಗ ಓದಿದರೆ ಮುಗಿದೇ ಹೋಗುತ್ತದೆಂಬ ಜಿಪುಣತನದಿಂದ ಒಂದೊಂದೇ ಸಾಲುಗಳನ್ನು ನಿಧಾನವಾಗಿ ಓದುತ್ತಾ ಹೋಗುತ್ತೇನೆ.

ಸಣ್ಣ,ಪುಟ್ಟ ಪುಸ್ತಕಗಳನ್ನೆಲ್ಲ ಮೊದಲು ಮುಗಿಸಿದ್ದಾಯಿತು. ಕಾರಂತರ ಆತ್ಮ ಕಥೆ – ಹುಚ್ಚು ಮನಸ್ಸಿನ ಹತ್ತು ಮುಖಗಳು , ಭೈರಪ್ಪ- ದೂರಸರಿದರು ( ಎರಡನೆಯ ಸಲ), ಜುಗಾರಿ ಕ್ರಾಸ್-ತೇಜಸ್ವಿ,  ಬ್ಲಾಕ್ ಫ್ರೈಡೇ – ರವಿ ಬೆಳಗೆರೆ(ಅನುವಾದ), ಏರಿಳಿತದ ಹಾದಿಯಲ್ಲಿ – ಸುಧಾಮೂರ್ತಿ, ಹೇಮಂತ ಗಾನ – ವ್ಯಾಸರಾಯ ಬಲ್ಲಾಳ, ಗತಿ-ಬಿ.ಟಿ. ಲಲಿತಾ ನಾಯಕ್, ದೇವರು – ಎ.ಎನ್.ಮೂರ್ತಿರಾವ್, ನಮ್ಮೊಳಗೊಬ್ಬ ನಾಜೂಕಯ್ಯ – ಟಿ.ಎನ್.ಸೀತಾರಾಂ…..

ಕೊನೆಗೆ ಈಗ ಕುವೆಂಪು ಆತ್ಮಕಥೆಯಾದ “ನೆನಪಿನ ದೋಣಿ” ಕೈಗೆತ್ತಿಕೊಂಡಿದ್ದೇನೆ. ಕೈಯಲ್ಲಿ ಹಿಡಿದು ಓದಲು ಕಷ್ಟವೆನಿಸುವಷ್ಟು ದಪ್ಪದ ಪುಸ್ತಕ. ೧೨೬೮ ಪುಟಗಳ ಈ ಬೃಹತ್ ಹೊತ್ತಿಗೆ ,ನೀರಸ ನಿರೂಪಣೆಯಿಂದ ಕೂಡಿದ್ದರೆ ಅದನ್ನು ಓದುವುದಿರಲಿ, ಮುಟ್ಟಲೂ ನನಗೆ ಭಯವಾಗುತ್ತಿತೇನೋ. ಆದರೆ ಕುವೆಂಪು ಅವರ ತಿಳಿಹಾಸ್ಯದ, ನವಿರಾದ ಬರವಣಿಗೆ  ಇರುವ ಈ ಪುಸ್ತಕದ ಓದು ದೋಣಿ ವಿಹಾರದಂತೆಯೇ ಹಿತವಾಗಿ ಸಾಗುತ್ತಿದೆ.   ಮಲೆನಾಡಿನ ಕುಗ್ರಾಮದ ಬಾಲಕನೊಬ್ಬ ಮಹಾಕವಿಯಾಗಿ ರೂಪುಗೊಂಡ ಮಹಾ ಜೀವನ ಯಾನವನ್ನು, ಯಾವ ಭಾವಾವೇಶವಿಲ್ಲದೆ, ಸುಲಲಿತ ಶೈಲಿಯಲ್ಲಿ ದಾಖಲಿಸುತ್ತಾ ಹೋಗುತ್ತಾರೆ ಕುವೆಂಪು.

ಓದುತ್ತಿದ್ದಂತೆಯೇ,  ಈ ಪುಸ್ತಕದಲ್ಲಿ ನನಗೆ ಪ್ರಿಯವೆನಿಸಿದ  ಕೆಲವು ಸಂಗತಿಗಳನ್ನು ಇಲ್ಲಿ ದಾಖಲಿಸಲೇ ಎಂದು ಒಮ್ಮೆ ಯೋಚಿಸಿದೆ. ಆಮೇಲೆ ಈ ಪುಸ್ತಕವನ್ನು ಇಡಿಯಾಗಿ ಸವಿಯುವ ಓದುಗರ ಕುತೂಹಲವನ್ನು ಹಾಳುಗೆಡವುದು ಬೇಡವೆಂದು ಆ ಯೋಜನೆಯನ್ನು ಕೈಬಿಟ್ಟೆ.  ಅಲ್ಲದೆ ಕಾಪಿ ರೈಟ್ ಹೊಂದಿರುವ ಇಂತಹ ಕೃತಿಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುವುದು ಸರಿಯಲ್ಲವೆನಿಸಿತು. ನಾಲ್ಕನೆಯ ಒಂದು ಭಾಗ ಕೂಡ ಮುಗಿದಿರದ ಈ ನೆನಪಿನ ದೋಣಿಯ ಪಯಣ ಇನ್ನೂ ದೀರ್ಘವಾಗಿದೆ. ಬರುವವರಿದ್ದರೆ ಜೊತೆ ಬನ್ನಿ…

 

*       *      *

ನೀಲಾ – ಆ ಮೇರು ಈ ಮೇರು

ನೀಲಾ : ೨೦೦೧
ಗಾಯಕರು : ರಾಜೇಶ್, ವಾಣಿ ಜಯರಾಂ
ಸಂಗೀತ : ವಿಜಯ ಭಾಸ್ಕರ್
ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ

ಹಾಡು ಕೇಳಿ –

ಆ ಮೇರು ಈ ಮೇರು
ಆಸೆಯ ಹೂ ತೇರು
ಎಳೆ ಎಳೆಯೋ ಬಸವಣ್ಣಾ
ತುಂಬೈತೆ ಕಣ್ಣಾ..
ಎಷ್ಟೊಂದು ಬಣ್ಣಾ..
ತುಂಬೈತೆ ಕಣ್ಣಾ ..ಎಷ್ಟೊಂದು ಬಣ್ಣಾ..

ಆ ಗಾಲಿ ಈ ಗಾಲಿ
ಉರುಳುರುಳಿ ಸಾಗಾಲಿ
ಜೋಗುಳದ ನೆನಪಿರಲಿ
ಜೀವಕ್ಕೆ ಜೊತೆ ಇರಲಿ

ಆ ಊರು ಈ ಊರು
ತಿರುಗಿದರೂ ಏಸೂರು
ಎಲ್ಲೈತೋ ನನ್ನೂರು
ಸಿಗದಲ್ಲ ತವರೂರು

ತುಂಬೈತೆ ಕಣ್ಣಾ
ಎಷ್ಟೊಂದು ಬಣ್ಣಾ

ಊರೂರು ತವರೂರು
ಎಲ್ಲಾರು ನಮ್ಮೋರು
ಕನಸಿಗರೇ ಗೆಲ್ಲೋರು
ಒಯ್ಯೋಣ ಈ ತೇರು

*        *      * 

(ವಿಜಯ ಭಾಸ್ಕರ್ ಸಂಗೀತ ನೀಡಿದ ಕೊನೆಯ ಚಿತ್ರ.
ವಾಣಿ ಜಯರಾಂ ಹಾಡಿರುವ ಕೊನೆಯ ಕನ್ನಡ ಚಿತ್ರವೂ ಹೌದು – ಸದ್ಯಕ್ಕೆ)

*                      *                      *

wordpress – help

ತುಳಸಿವನದಲ್ಲಿ ,ಕಾಮೆಂಟ್ಸ್ moderate ಮಾಡಲು ಶುರುಮಾಡಿದ ಮೇಲೆ spam ಬರುವುದು ನಿಂತಿತ್ತು. ಈಗ ಮತ್ತೆ ಬರತೊಡಗಿವೆ.   ಇದನ್ನು ತಡೆಯೋದು ಹೇಗೆ? (delete ಮಾಡುವುದು ಬಿಟ್ಟು ಬೇರೇನಾದರೂ ಉಪಾಯ) wordpress ಬಳಸಿ ಅನುಭವವಿದ್ದವರು ತಿಳಿಸಿ.

ಟಿಪ್ಪು ವಿವಾದ – ಲೇಖನ ಸುಗ್ಗಿ!

ನೀವು  ಸುದ್ದಿಯ ಹಸಿವಿನವರಾಗಿದ್ದರೆ,  ಡಿ.ಎಚ್.ಶಂಕರ ಮೂರ್ತಿಯವರು ಪ್ರಾರಂಭಿಸಿದ ಟಿಪ್ಪೂ ವಿವಾದದ ಕುರಿತು ,ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಿರುವ  ಲೇಖನ ಸರಣಿಗಳನ್ನು ಗಮನಿಸಿಯೇ ಇರುತ್ತೀರಿ.  ಕನ್ನಡದ ಪ್ರಮುಖ ಸಾಹಿತಿಗಳು/ವಿದ್ವಾಂಸರಿಗೆ, ತಮ್ಮ ಸತ್ವಪೂರ್ಣ ಲೇಖನಗಳ ಮೂಲಕ. ಒಂದು ಅರ್ಥಪೂರ್ಣ, ಮುಕ್ತ ಸಂವಾದ ನಡೆಸಲು ವಿ.ಕ ವೇದಿಕೆ ಒದಗಿಸಿಕೊಟ್ಟಿದೆ.

ಮೊಟ್ಟ ಮೊದಲು ಆಧಾರಗಳ ಕಡತವನ್ನೇ ಹೊತ್ತು ಆಖಾಡಕ್ಕಿಳಿದಿದ್ದು ಎಸ್.ಎಲ್.ಭೈರಪ್ಪನವರು. (ಚಿದಾನಂದ ಮೂರ್ತಿ, ಸೂರ್ಯನಾಥ್ ಕಾಮತ್ ಲೇಖನಗಳು ಈ ಮುಂಚೆ ಪ್ರಕಟವಾಗಿವೆ.)  ತಮ್ಮ ಕಾದಂಬರಿಗಳನ್ನು ಬರೆಯುವಾಗ ವರ್ಷಗಟ್ಟಲೆ ಸಿದ್ಧತೆ ನಡೆಸುವ, ಎಸ್.ಎಲ್.ಭೈರಪ್ಪನವರು  ಈ ಲೇಖನವನ್ನೂ ಕೂಡ ಅಷ್ಟೇ ಶ್ರಮವಹಿಸಿ ಸಿದ್ಧಪಡಿಸಿದಂತಿತ್ತು. ( ಭೈರಪ್ಪನವರ ಲೇಖನವನ್ನು ಹಲವಾರು ತಪ್ಪುಗಳೊಡನೆ ಪ್ರಕಟಿಸಿ,ಮರುದಿನ ತಿದ್ದುಪಡಿ ಸೂಚಿಸಲಾಗಿತ್ತು!)  ಗಿರೀಶ್ ಕಾರ್ನಾಡರು ಈ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಭೈರಪ್ಪನವರ ಲೇಖನಕ್ಕೆ ನನ್ನ ಲೇಖನದ ಮೂಲಕವೇ ಪ್ರತಿಕ್ರಿಯಿಸುತ್ತೇನೆ ಎಂದಿದ್ದು ಓದಿ,ಕಾರ್ನಾಡರು ಮತ್ತೇನೆಲ್ಲಾ ಹೊಸ ದಾಖಲೆ ಹೊತ್ತು ತರಬಹುದೆಂದು ನಿರೀಕ್ಷಿಸಿದವರಿಗೆಲ್ಲಾ ಬಹಳ ನಿರಾಸೆಯಾಯಿತು. ಕಾರ್ನಾಡರು ಚರ್ಚೆಯನ್ನು ದಾರಿ ತಪ್ಪಿಸಲು ಪ್ರಯತ್ನಪಟ್ಟಂತಿತ್ತು. ಟಿಪ್ಪುವಿನ ಇತಿಹಾಸಕ್ಕಿಂತ ಭೈರಪ್ಪನವರ ನಿಂದನೆಯೇ ಕಾರ್ನಾಡರಿಗೆ ಮುಖ್ಯವಾಯಿತೆಂಬ ಅನಿಸಿಕೆ ಓದುಗರಲ್ಲಿ ಮೂಡಿತು.

ಕನ್ನಡದ ಮತ್ತೊಬ್ಬ ಪ್ರಮುಖ ಲೇಖಕರಾದ ಸುಮತೀಂದ್ರ ನಾಡಿಗ್ ಈಗಾಗಲೇ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇವತ್ತಿನ(೩/೧೦/೦೬) ಸಂಚಿಕೆಯಲ್ಲಿ ಶತಾವಧಾನಿ ಗಣೇಶ್ ಅವರದು ಮತ್ತೊಂದು ಅತ್ಯುತ್ತಮ ಲೇಖನ.  ವಾಚಕರ ವಿಜಯದಲ್ಲೂ ಉತ್ತಮ ಪತ್ರಗಳು ಪ್ರಕಟವಾಗುತ್ತಿದೆ.  ಅಕ್ಕ ಸಮ್ಮೇಳನದಲ್ಲಿ ಭಾಗವಹಿಸದೆ, ಚಂಪಾ ಲೇಖನವನ್ನು ಓದಿಯೇ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದ ಜಿ.ಕೆ.ಗೋವಿಂದರಾವ್ ಯಾಕೋ ಈ ಬಗ್ಗೆ ಈವರೆಗೂ ಮೌನವಾಗಿರುವುದು ಆಶ್ಚರ್ಯವಾಗಿದೆ.  ಯಾರಿಗೆ ಗೊತ್ತು ? ಮುಂದಿನ ಲೇಖನ ಅವರದ್ದೇ ಇರಬಹುದು.

ಇತಿಹಾಸದ ಗಾಯ ಕೆರೆಯುವುದರಿಂದ ನಿಜವಾಗಿ ಏನಾದರೂ ಲಾಭವಿದೆಯೋ,ಇಲ್ಲವೋ ಯಾರಿಗೆ ಗೊತ್ತು?  ಸದ್ಯಕ್ಕೆ ಇಂತಹ ವಿದ್ವಪೂರ್ಣ ಲೇಖನಗಳ ಮೂಲಕ ಹೊಸಹೊಸ ಸಂಗತಿಗಳು ಹೊರಬರುತ್ತಿರುವುದೇ ಲಾಭ !! :),

-ಅಥವಾ ಇಂತಹ  ಲೇಖನಗಳನ್ನು ಓದುವುದರಿಂದ ಸಮಯ ವ್ಯರ್ಥ ಅಂತೀರೇನೋ?  ಅನ್ನಿ ಪರವಾಗಿಲ್ಲ, ನಿಮ್ಮ ಅಭಿಪ್ರಾಯವನ್ನೂ ಗೌರವಿಸುತ್ತೇನೆ. 🙂

*               *