ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ

where to buy cheap colchicine ಕವನ -ಕನಸಿನೊಳಗೊಂದು ಕಣಸು
ಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)

follow link          ತಾಯಿ ಮಕ್ಕಳ ಸಂವಾದ
(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ)

“ಯಾರು ನಿಂದವರಲ್ಲಿ ತಾಯೆ” ಎಂದೆ
  “ಯಾರು ಕೇಳುವರೆನಗೆ, ಯಾಕೆ ತಂದೆ ?”

“ಬೇಸರದ ದನಿಯೇಕೆ ಹೆಸರ ಹೇಳಲ್ಲ”
  “ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”

“ನೀನಾರ ಮನೆಯವಳು ಮುತ್ತೈದೆ ಹೇಳು”
  “ನಾನಾರ ಮನೆಯವಳೊ ಬಯಲನ್ನೆ ಕೇಳು”

“ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ?”
  “ಗುಪ್ತರಾದರೊ ಏನೊ ಇಷ್ಟರಲ್ಲೆ !”

“ಇರುವರೇ ಇದ್ದರೆ ಮಕ್ಕಳೆಂಬುವರು?”
  “ಇರುವರೆಂದರು ಕೂಡ ಯಾರು ನಂಬುವರು ?”

“ಮನೆಯಿಲ್ಲವೇ ಇರಲು ಪರದೇಶಿಯೇನು?”
  “ಮನೆಯೆ ಮುನಿದೆದ್ದಿರಲು ಯಾ ದೇಶವೇನು ?”

“ನಿನ್ನ ಮಾತಿನಲಿಹುದು ಒಡಪಿನಂದ!”
  “ನನ್ನ ಹತ್ತಿರದೊಂದೆ ಉಳಿದಿಹುದು ಕಂದ”

“ರಾಜಮುಖಿ, ನಿನ್ನಲ್ಲಿ ರಾಜಕಳೆಯಿಹುದು !”
  “ಸಾಜಮಾದರು ಪಕ್ಷವಿದು ವಧ್ಯವಹುದು !”

“ಯಾವುದಾದರು ನಾಡದೇವಿಯೇ ನೀನು ?”
  ಭಾವುಕರ ಕಂಗಳಿಗೆ ದೇವಿಯೇ ನಾನು”

“ಈಗ ಬಂದಿಹುದೇಕೆ ಏನು ಬೆಸನ ?”
  “ಯೋಗವಿಲ್ಲದೆ ತಿಳಿಯದೆನ್ನ ವೆಸನ !”

“ಹಾದಿ ಯಾವುದು ಹೇಳು, ಯಾವ ಯೋಗ ?”
  “ಆದಿ ಅಂತವು ಇಲ್ಲದಂಥ ತ್ಯಾಗ !”

“ಬೇಡಬಂದಿಹೆ ಏನು ಏನಾದರೊಂದು ?”
  “ಬೇಡಿದರೆ ಬೇಡಿದುದ ಕೊಡುವೆಯಾ ಇಂದು ?”

“ಅಹುದು ಕೊಡುವೆನು ಎಂದು ನಾನೆನ್ನಬಹುದೆ ?”
  “ಬಹುದು-ಗಿಹುದಿನ ಶಂಕಿ ವೀರನಹುದೇ ?”

“ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ”
  ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ”

“ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ”
  “ಬಲ್ಲವರು ದೈವವನು ಪರಿಕಿಸುವರೊಮ್ಮೆ !”

“ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ?”
  “ಗಂಡುಸಾದರೆ ನಿನ್ನ ಬಲಿಕೊಡುವೆಯೇನು ?”

        *      *      *
ಮನವು ನಡುಗಿತು ತನುವು ನವಿರಿಗೊಳಗಾಯ್ತು ;
  ನೆನವು ನುಗ್ಗಿತು-ಹೊರಗೆ ಕಂಡೆ-ಬೆಳಗಾಯ್ತು

****** **** ***** ******* *********

ಟಿಪ್ಪಣಿ : ಈ ಕವನ ಬೇಂದ್ರೆಯವರು ಯಾವಾಗ ಬರೆದಿದ್ದೋ, ಸಂದರ್ಭ ಯಾವುದೋ ಗೊತ್ತಿಲ್ಲ. ಈ ಕವನದ ಶೀರ್ಷಿಕೆಯ ಕೆಳಗೆ “ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ” ಎಂದಿದೆ.

ಇನ್ನು, ಈಗಿನ ಕನ್ನಡನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ?

7 thoughts on “ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ”

 1. 🙁

  ಇದು ನಮ್ಮ ದುರ್ವಿಧಿಯೇ ಸರಿ.

  “ಅಹುದು ಕೊಡುವೆನು ಎಂದು ನಾನೆನ್ನಬಹುದೆ ?”
  “ಬಹುದು-ಗಿಹುದಿನ ಶಂಕಿ ವೀರನಹುದೇ ?”

  ಏನು ಹೇಳಲು ಗೊತ್ತಾಗ್ತಾ ಇಲ್ಲ. ನಾಲಕ್ ಸರ್ತಿ ಓದಿದೆ 🙁

  “ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ?”
  “ಗಂಡುಸಾದರೆ ನಿನ್ನ ಬಲಿಕೊಡುವೆಯೇನು ?”

  ಖಂಡಿತ, ಆದರೆ, ಬಲಿ ತೆಗೆದುಕೊಳ್ಳುವ ಕಾಲವಲ್ಲವೇ?

 2. ಅಯ್ಯೊ ಮ್ಯಾಡಂ, ಹಿಂದಿನ ಕಾಮೆಂಟ್ನಲ್ಲಿ ಅಕ್ಷರಲೋಪವಿದೆ, ದಯವಿಟ್ಟು ಬದಲಾಯಿಸಿ 🙂

 3. ಇರಲಿ ಬಿಡು ಭೂತಪ್ಪ. ಈಗಿನ (ಪ.ಭಾ.ಗಾ.) ಹಾಡುಗಳಲ್ಲಿ ಹಾಗೇ ಕೇಳಿ ಅಭ್ಯಾಸವಾಗಿದೆ. 🙂

 4. ಜ್ಯೋತಿಗೆ,

  “ಕಾಣಿಕೆ” ಕವನದಲ್ಲಿ ಕಳೆಯ ಬೆಳಕು ಹೊಳೆಸಿದಂತೆ, ಈ ಕವನದಲ್ಲಿರುವ ” “ಸಾಜಮಾದರು ಪಕ್ಷವಿದು ವಧ್ಯವಹುದು !” ಈ ಸಾಲನ್ನಿಷ್ಟು ಬಿಡಿಸಿಕೊಡಲು ಸಾಧ್ಯವೇ?  ಸಾಜ=ಸಹಜ?

  ಬೇರೆ ಯಾರೂ ತಿಳಿಸಬಾರದೆಂದು ಅರ್ಥವಲ್ಲ 🙂

   

   

 5. ವೇಣಿ, ಬೇಂದ್ರೆ-ಕವನಗಳನ್ನು ಬಿಡಿಸಲು ಎಂಟೆದೆ ಬೇಕು, ನನಗಿರೋದು ಒಂದೇ. ಸಾಜ = ಸಹಜ. “ರಾಜಕಳೆಯಿರುವುದು ಸಹಜವಾದರೂ ಒಪ್ಪಿಕೊಳ್ಳುವುದು ವಧಾಸ್ಥಾನಕ್ಕೆ ನಡೆದಂತೆ” ಎನ್ನುವ ಅರ್ಥವಿರಬಹುದು…. ಈ ಕವನವನ್ನು ಯಾವಾಗ, ಯಾಕೆ ಬರೆದರು ಅನ್ನುವ ವಿವರಣೆ ಯಾರಿಗಾದರೂ ತಿಳಿದಲ್ಲಿ ಅರ್ಥೈಸುವುದು ಸುಲಭವಾಗುತ್ತದೆ.

 6. ಬೇಂದ್ರೆಯವರು ಇದನ್ನು ಯಾವಾಗ ಬರೆದಿರಬಹುದು ?
  ಅದು ಯಾವಾಗ ಬರೆದಿದ್ದರೂ ಆವಾಗಿಗೂ ಈಗೀನ ವಸ್ತುಸ್ಥಿತಿಗೂ ಸ್ಪಲ್ಪನೂ ಬದಲಾಗಿಲ್ಲ 🙁
  >ಮನೆಯಿಲ್ಲವೇ ಇರಲು ಪರದೇಶಿಯೇನು?”
  “ಮನೆಯೆ ಮುನಿದೆದ್ದಿರಲು ಯಾ ದೇಶವೇನು ?”

 7. ಜ್ಯೋತಿ, ಕವನದ ಕಾಲದ ಕುರಿತು ಸಂಕಲನದ(ಆಧುನಿಕ ಕವಿತೆ) ಸಂಪಾದಕರ ಅಸಹಾಯಕತೆಯ ನುಡಿಗಳಿವು – “ಕವನಗಳು ರಚಿತವಾದ ಕಾಲವನ್ನು ಖಚಿತವಾಗಿ ನಮೂದಿಸುವ ಪರಿಪಾಠ,ಶಿಸ್ತು ನಮ್ಮ ಕವಿಗಳಲ್ಲಿ ಬೆಳೆದು ಬಂದಿಲ್ಲ. ಸಂಕಲನ ರೂಪದಲ್ಲಿ ಪ್ರಕಟವಾದ ಕಾಲದ ದಾಖಲೆಗಳೇನೋ ದೊರೆಯುತ್ತವೆ. ಆದರೆ ಎಂದೋ ಬರೆದ ಕವನಗಳೂ ಯಾವಗಲೋ ಪ್ರಕಟವಾಗುವ ಗ್ರಂಥಗಳಲ್ಲಿ ಸೇರ್ಪಡೆಯಾಗುವುದುಂಟು”

  ಬಹುಶ: ಕವನದ ಕಾಲ ರಾಜಪ್ರಭುತ್ವ ರದ್ದಾಗಿದ್ದ, ಕೊನೆಗೊಳ್ಳುತ್ತಿದ್ದ ಕಾಲವೆಂದು ಭಾವಿಸಿದರೆ, ನೀನು ಹೇಳಿದ ಅರ್ಥ ಸರಿಯಾಗಿ ಹೊಂದಿಕೆಯಾಗುತ್ತದೆ. ರಾಜತ್ವಕ್ಕೇ ಮನ್ನಣೆ ಇಲ್ಲದಾಗ ರಾಜಕಳೆ ಕೂಡ ಅವಹೇಳನದ ಸಂಗತಿಯಾಗಿ ಪರಿಣಮಿಸುವುದು ಸಹಜವೇ!

Leave a Reply

Your email address will not be published. Required fields are marked *