ಕವನ -ಕನ್ನಡ ಪದಗಳು
ಕವಿ – ಜಿ. ಪಿ. ರಾಜರತ್ನಂ

ಹಾಡು ಕೇಳಿ –

ಯೆಂಡ ಯೆಡ್ತಿ ಕನ್ನಡ ಪದಗೊಳ್
  ಅಂದ್ರೆ ರತ್ನಂಗ್ ಪ್ರಾಣ !
ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-
  ತಕ್ಕೋ ! ಪದಗಳ್ ಬಾಣ !     |೧|

ಭಗವಂತ್ ಏನ್ರ ಬೂಮಿಗ್ ಇಳಿದು
  ನನ್ ತಾಕ್ ಬಂದಾಂತ್ ಅನ್ನು ;
ಪರ್‍ ಗಿರೀಕ್ಷೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು !        |೨|

‘ಯೆಂಡ ಕುಡಿಯಾದ್ ಬುಟ್‍ಬುಡ್ ರತ್ನ !’,
  ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ
  ದೇವರ್ ಮಾತ್ಗ್ ಅಡ್ಬಂದ್ರೆ !       |೩|

‘ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
  ಅಂತ್ ಔನ್ ಏನಾರ್ ಅಂದ್ರೆ-
ಕಳೆದೋಯ್ತ್ ಅಂತ ಕುಣದಾಡ್ತೀನಿ
  ದೊಡ್ ಒಂದ್ ಕಾಟ ! ತೊಂದ್ರೆ !   |೪|

‘ಕನ್ನಡ ಪದಗೋಳ್ ಆಡೋದ್ನೆಲ್ಲ
  ನಿಲ್ಲೀಸ್ ಬುಡಬೇಕ್ ರತ್ನ !’
ಅಂತ್ ಔನ್ ಅಂದ್ರೆ – ದೇವ್ರ್ ಆದ್ರ್ ಏನು !
  ಮಾಡ್ತೀನ್ ಔನ್ಗೆ ಖತ್ನ !             |೫|

ಆಗ್ನೆ ಮಾಡೋ ಐಗೋಳ್ ಎಲ್ಲಾ
  ದೇವ್ರೆ ಆಗ್ಲಿ-ಎಲ್ಲ !
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
  ಮಾನಾ ಉಳಸಾಕಿಲ್ಲ !              |೬|

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
  ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ !
  ನನ್ ಮನಸನ್ ನೀ ಕಾಣೆ !         |೭|

ಯೆಂಡ ಓಗ್ಲಿ ! ಯೆಡ್ತಿ ವೋಗ್ಲಿ !
  ಎಲ್ಲಾ ಕೊಚ್ಕೊಂಡ್ ವೋಗ್ಲಿ !
ಪರ್ಪಂಚ್ ಇರೋತನಕ ಮುಂದೆ
  ಕನ್ನಡ್ ಪದಗೋಳ್ ನುಗ್ಲಿ!          |೮|

*******************

12 thoughts on “ಕನ್ನಡ ಪದಗಳು – ಜಿ.ಪಿ.ರಾಜರತ್ನಂ”

  1. ‘ಕನ್ನಡ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗೋಳ್ ಆಡೋದ್ನೆಲ್ಲ
    ನಿಲ್ಲೀಸ್ ಬುಡಬೇಕ್ ರತ್ನ !’
    ಅಂತ್ ಔನ್ ಅಂದ್ರೆ – ದೇವ್ರ್ ಆದ್ರ್ ಏನು !
    ಮಾಡ್ತೀನ್ ಔನ್ಗೆ ಖತ್ನ ! ಅಂತ ಸ್ವಲ್ಪ ಬದಲಾವಣೆ ಮಾಡಬೇಕಾಗುತ್ತೆ ಈಗ. 🙂

  2. ಯಾವ್ಗ್ಲೋ ಓದಿದ್ದು, ಮರ್ತ್ ಬುಟ್ಟಿದ್ದೆ.
    ಗ್ಯಪ್ತಿಗ್ ಬತ್ತು ಈಗ.

    ‘ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
    ಅಂತ್ ಔನ್ ಏನಾರ್ ಅಂದ್ರೆ-
    ಕಳೆದೋಯ್ತ್ ಅಂತ ಕುಣದಾಡ್ತೀನಿ
    ದೊಡ್ ಒಂದ್ ಕಾಟ ! ತೊಂದ್ರೆ ! |೪|

    🙂

    ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
    ಬಾಯ್ ಒಲಿಸಾಕಿದ್ರೂನೆ-
    ಮೂಗ್ನಲ್ ಕನ್ನಡ್ ಪದವಾಡ್ತೀನಿ !
    ನನ್ ಮನಸನ್ ನೀ ಕಾಣೆ ! |೭|

    ಬದ್ಲಾವಣೆ ಮಾಡ್ಬೇಕ್ ಅಂತ ಅನ್ವೇಷಿಗಳು ಅಪ್ಪಣೆ ಕೊಡಿಸಿರುವುದರಿಂದ.

    ಬೆಂಗ್ಳೂರ್ಗ್ ಕಳ್ಸಿ ನಾಲ್ಗೆ ಸೀಳ್ಸಿ,
    ಬಾಯ್ ಒಲಿಸಾಕಿದ್ರೂನೆ-
    ಮೂಗ್ನಲ್ ಕನ್ನಡ್ ಪದವಾಡ್ತೀನಿ !
    ನನ್ ಮನಸನ್ ನೀ ಕಾಣೆ !

    ಇಂತಿ
    ಕುಡ್ಕ್ಭೂತ

  3. ಅನ್ವೇಷಿಗಳೇ,

    ಭಗವಂತ ಭೂಮಿಗೆ ಬಂದರೆ – ‘ಕನ್ನಡ ಮಧ್ಯೆ ಮಧ್ಯೆ ಇಂಗ್ಲಿಷ್ ಪದಗೋಳ್ ಆಡೋದ್ನೆಲ್ಲ ನಿಲ್ಲೀಸ್ ಬುಡಬೇಕ್ ರತ್ನ !’ – ಎಂದು ಖಂಡಿತ ಕೇಳುವುದಿಲ್ಲ. ಇಂಗ್ಲಿಷ್ ಪದಗೋಳ ಮಧ್ಯೆ ಮಧ್ಯೆ ಒಂದೆರಡು ಕನ್ನಡವಾದರೂ ಇದೆಯಲ್ಲ ಎಂದು ಸಂತೋಷದಿಂದ ಹಿಂತಿರುಗುತ್ತಾನೆ, ಇಲ್ಲೇ ಇದ್ದರೆ ನನಗೂ ಇಂಗ್ಲೀಷ್ ಅಂಟೀತು ಎಂದು!

    ಇದು ನನಗೆ ಹೇಗೆ ಗೊತ್ತಾಯಿತು ಅಂದರೆ ,ಇದು ನಮ್ಮ ದೇವರ ಸತ್ಯ !! 🙂

  4. ಕುಡುಕ ಭೂತವೇ, ನಿನ್ನನ್ನು ಬೆಂಗಳೂರಿಗೆ ಕಳಿಸುತ್ತೇವೆ.ನಾಲಿಗೆಯನ್ನೇನೂ ಸೀಳಿಸುವುದಿಲ್ಲ. ಲಕ್ಷಣವಾಗಿ ಬಾಯಿಂದಲೇ ಕನ್ನಡ ಮಾತಾಡು. ಅಲ್ಲಿಯ ಜನ “ಅರೆ, ಈ ಭೂತವೇ, ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಿದೆ, ನಾವ್ಯಾಕಿಲ್ಲ?” ಎಂದು ಅವರೂ ಕನ್ನಡ ಮಾತಾಡಲು ಶುರುಮಾಡಬಹುದು.

    ಸಂಸ್ಕೃತವನ್ನು ಮೃತಭಾಷೆ ಎಂದು ದೂರಮಾಡಿದಂತೆ, ಕನ್ನಡವನ್ನೂ ಭೂತ ಭಾಷೆ ಎಂದು ದೂರವಿಡುವ ಅಪಾಯವೂ ಇಲ್ಲದಿಲ್ಲ ! 🙂

  5. >ಯೆಂಡ ಬುಟ್ಟೆ. ಯೆಡ್ತೀನ್ ಬುಟ್‍ಬುಡ್ !’
    ಅಂತ್ ಔನ್ ಏನಾರ್ ಅಂದ್ರೆ-
    ಕಳೆದೋಯ್ತ್ ಅಂತ ಕುಣದಾಡ್ತೀನಿ
    ದೊಡ್ ಒಂದ್ ಕಾಟ ! ತೊಂದ್ರೆ !

    ಇಲ್ಲಿ ಉಲ್ಲೇಖಿಸಿದ ದೊಡ್ ಕಾಟ ಯಾವುದು- ಯೆಂಡ ಅಥವಾ ಯೆಂಡ್ತೀ !?

  6. “ಇಲ್ಲಿ ಉಲ್ಲೇಖಿಸಿದ ದೊಡ್ ಕಾಟ ಯಾವುದು- ಯೆಂಡ ಅಥವಾ ಯೆಂಡ್ತೀ !?

    – ನಿಸ್ಸಂಶಯವಾಗಿ ಯೆಡ್ತಿ 🙂

    ಶಿವು, ಕವನವನ್ನು ಇನ್ನೊಮ್ಮೆ ನಿಧಾನವಾಗಿ ಓದಿಕೊಳ್ಳಿ. ರತ್ನನಿಗೆ ಹೆಂಡ,ಹೆಂಡತಿ,ಕನ್ನಡ ಪದಗಳು – ಈ ಮೂರನ್ನು ಕಂಡರೆ ಪ್ರಾಣವೇ. ಆದರೆ ತೀರಾ ದೇವರೇ ಬಂದು ಕೇಳಿದರೆ ಮೊದಲೆರಡನ್ನು ಬಿಟ್ಟು ಬಿಡಲು ಒಪ್ಪಬಲ್ಲ. ಕನ್ನಡಪದಗಳನ್ನು ಹಾಡುವುದು ಬಿಟ್ಟು ಬಿಡು ಅಂದರೆ ಮಾತ್ರ – “ದೇವ್ರ್ ಆದ್ರ್ ಏನು ! ಮಾಡ್ತೀನ್ ಔನ್ಗೆ ಖತ್ನ !” 🙂

  7. ಕನ್ನಡದ ಬಗ್ಗೆ ಇರಬೇಕಾದ ಅಭಿಮಾನನ ಪ್ರೀತಿಯ ನಿಲುವು

  8. ನಿಜವಾಗಲೂ ಅದ್ಭುತ ಕವಿಗಾರ ಕವನಗಳು ಇಂಥ ವ್ಯಕ್ತಿ ಮತ್ತೆ ಸಿಗುವುದಿಲ್ಲ ಡಾಕ್ಟರ್ ಬಿ ರಾಜರತ್ನಂ ಅವರಿಗೆ ತುಂಬು ಹೃದಯದ ಧನ್ಯವಾದಗಳು

  9. ನಮಸ್ಕಾರ ಗುರುಗಳೆ
    ನನಗೆ ಕನ್ನಡ ಪದಗೊಳು ಪಂದ್ಯದ ಬಗ್ಗೆ
    ಕವಿಯ ಕಳಿಕಳಿ 4/5 ಪುಟಗಳು ಇರಬೇಕು
    ದಯವಿಟ್ಟು ಕಳಿಸಿ

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.