ಕವನ – ಮಲ್ಲಿಗೆ
ಕವಿ – ಜಿ.ಎಸ್.ಶಿವರುದ್ರಪ್ಪ

ಜಿ.ಎಸ್.ಎಸ್ - ಚಿತ್ರ:ವಿಶ್ವಕನ್ನಡ
ನೋಡು ಇದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರ ಗಿಡದಿಂ-
ದೆಂತು ಮೂಡಿತೋ ಬೆಳ್ಳಗೆ !

ಮೇಲೆ ನಭದಲಿ ನೂರು ತಾರೆಗ-
ಳರಳಿ ಮಿರುಗುವ ಮುನ್ನವೆ
ಬೆಳ್ಳಿಯೊಂದೇ ಬೆಳಗುವವಂದದಿ
ಗಿಡದೊಳೊಂದೇ ಹೂವಿದೆ

ಸತ್ವಶೀಲನ ಧ್ಯಾನ ಮೌನವೆ
ಅರಳಿ ಬಂದೊಲು ತೋರಿದೆ !
ಒಲವು ತುಂಬಿದ ಮುಗುದೆಯೆದೆಯಿಂ-
ದೊಗೆದ ನಲ್ನುಡಿಯಂತಿದೆ

ಕವಿಯ ಮನದಿಂದುಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ,
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ.

ಮೌನದಲಿ ಮೊಳೆಯುತ್ತ ಮೆಲ್ಲನೆ
ತನಗೆ ತಾನೇ ತಿಳಿಯದೆ
ಮೊಗ್ಗಿನಲಿ ಮಲಗಿದ್ದ ಚೆಲುವಿದು
ಇಂದು ಕಣ್ಣನು ತೆರೆದಿದೆ

ಎನಿತು ನವುರಾಗಿಹವು ದಳಗಳು
ಹಸುಳೆ ಕಾಣುವ ಕನಸೊಲು !
ಏನು ಇಂಪಿನ ಕಂಪು ಇದರದು
ಆ ಮಹಾತ್ಮರ ಮನದೊಲು

ಹರಿವ ಮನವನು ಹಿಡಿದು ಒಂದೆಡೆ
ನಿಲಿಸಿ ತೊಳೆದಿದೆ ಹೂವಿದು
ಚೆಲುವು ಬಾಳನು ಹಸುನುಗೊಳಿಸುವ
ಅಚ್ಚರಿಯ ಪರಿ ಎಂಥದು!

**     **      **       **

10 thoughts on “ಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪ”

  1. ತುಂಬಾ ಸೊಗಸಾದ ಕವನ ಶಾಲೆಯಲ್ಲಿ ಓದಿದ್ದು ನೆನಪಿಗೆ ಬಂತು
    ಚೆಲುವು ಬಾಳನು ಹಸುನುಗೊಳಿಸುವ
    ಅಚ್ಚರಿಯ ಪರಿ ಎಂಥದು
    ಎಷ್ಟು ಸತ್ಯವಾದ ಮಾತು!
    ವೃಂದ ಗಾನದಲ್ಲಿ ಕೇಳಿದ್ದೆ ಸಾದ್ಯವಾದರೆ ಕೇಳಿಸುವಿರಾ?

  2. ತ್ರಿವೇಣಿಯವರೇ,

    ಕನ್ನಡದ ಇಂತಹ ಸುಂದರ ಕವನಮಲ್ಲಿಗೆಗಳನ್ನು ಹೆಕ್ಕಿ ಹೆಕ್ಕಿ ನಮಗೆ ಓದೋಕೆ ಕೊಡ್ತಾ ಇರೋ ನಿಮಗೆ ವಂದನೆಗಳು.

    >ಎನಿತು ನವುರಾಗಿಹವು ದಳಗಳು
    ಹಸುಳೆ ಕಾಣುವ ಕನಸೊಲು !

    ಎಂತ ಮನೋಜ್ಞ ಕಲ್ಪನೆ..

    ರಾಷ್ಟ್ರಕವಿಗಳಿಗೆ ನಮನಗಳು!

    ಅಂದಾ ಹಾಗೆ..
    >ಒಲವು ತುಂಬಿದ ಮುಗುದೆಯೆದೆಯಿಂ-
    ದೊಗೆದ ನಲ್ನುಡಿಯಂತಿದೆ
    ಇಲ್ಲಿನ ಕೊನೆ ಪದ ನಾಲ್ನುಡಿ ಅಲ್ವಾ?

  3. ಮಾಲಾ, ಈ ಹಾಡನ್ನು ಆಕಾಶವಾಣಿಯಲ್ಲಿ ,ಎಚ್. ಆರ್ ಲೀಲಾವತಿ ಅವರ ಧ್ವನಿಯಲ್ಲಿ ಕೇಳಿದ ನೆನಪು. ಈಗ ಸಿಗುವುದು ಕಷ್ಟ.ಪ್ರಯತ್ನಿಸುತ್ತೇನೆ.

  4. ಒಂದು ಹೂವು ಎಷ್ಟು ಸುಂದರವಾಗಿರುತ್ತದೋ. ಅಷ್ಟೆ ಸುಂದರವಾಗಿ. ಮಲ್ಲಿಗೆ ಹೂವಿನ ಸೌಂದರ್ಯವನ್ನು.ಜಿ ಎಸ್ ಎಸ್ ಅವರು ತಮ್ಮ ಕವಿತೆಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ.

  5. ಸೌಂದರ್ಯ ಹಾಗೂ ರಸ ಸಹಿತ ಕವಿತೆ ಹೊಸ ಉಲ್ಲಾಸ ಮೂಡಿಬರುವ ಸಾಲುಗಳು ಅತಿ ಮನೋಜ್ಞ.

Leave a Reply to Shiv Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.