ತಿಂಗಳಾಯಿತೇ? – ಕೆ.ಎಸ್.ನರಸಿಂಹಸ್ವಾಮಿ

ಕವನ – ತಿಂಗಳಾಯಿತೇ?
ಕವಿ – ಕೆ.ಎಸ್.ನರಸಿಂಹಸ್ವಾಮಿ

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ |
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು ||

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ |
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ ||

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ |
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು ||

ಹಿಂದಿರುಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ ||

*  *    *  *  *   *    *   *   *   *

ಕಿರುತೆರೆ – ಕಿರಿಕಿರಿ

“ಧಾರಾವಾಹಿ ನಿರ್ದೇಶಕರು, ಒಬ್ಬ ವ್ಯಕ್ತಿಗೆ ಕನಿಷ್ಠ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ”  –  (ಬೊ.ರ. ಬ್ಯುರೋ)

ಎಂದೂ ಅಸತ್ಯವನ್ನೇ ಬೊಗಳುವ ಅಸತ್ಯಾನ್ವೇಷಿಗಳು ಈ ಬಾರಿ ಮಾತ್ರ ಅಪ್ಪಿತಪ್ಪಿ ಪರಮ ಸತ್ಯದ ಸುದ್ದಿಯನ್ನೇ ತಮ್ಮ ಬೊಗಳೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಮೊದಲಿಗೆ ಅವರನ್ನು ಅಭಿನಂದಿಸುತ್ತಿದ್ದೇನೆ. 

ಅನ್ವೇಷಿಗಳ ವರದಿಗೆ ಮತ್ತಷ್ಟು ಪುರಾವೆ ಒದಗಿಸುವುದಾದರೆ – “ಕಾದಂಬರಿ” –  ಇಬ್ಬರು ಹೆಂಡತಿಯರು, “ಮಾಂಗಲ್ಯ” –  ಒಬ್ಬಳು ಹೆಂಡತಿ , ಇನ್ನೊಬ್ಬಳು ಹೆಂಡತಿಯಲ್ಲದವಳು. “ತಕಧಿಮಿತ” -ಪೋಲಿಸ್ ಅಧಿಕಾರಿ ಸಮರ್ಥನಿಗೆ ಇನ್ನೊಬ್ಬ ಮಹಿಳಾ ಪೋಲಿಸ್ ಅಧಿಕಾರಿಯ ಜೊತೆ ಸಂಬಂಧ, ಸಮರ್ಥನ ತಂದೆಗೂ (ಶ್ರೀನಿವಾಸ್ ಪ್ರಭು) ಚಂದ್ರಮತಿ , ಪ್ರತಿಮಾ ಎಂಬ ಇಬ್ಬರು ಹೆಂಡತಿಯರು. “ರಂಗೋಲಿ” – ಇಬ್ಬರು,  “ನಾಕು ತಂತಿ”ಯಲ್ಲಿ ಶ್ರೀನಿವಾಸಪ್ರಭು ಅವರದೂ ಇದೇ ಕಥೆ.  ಇಬ್ಬರು ಹೆಂಡತಿಯರಲ್ಲದೆ, ಲೆಕ್ಕವಿಲ್ಲದಷ್ಟು ಅನೈತಿಕ  ಸಂಬಂಧಗಳು!  ಅವರದು characterless ಮಂತ್ರಿಯ ಪಾತ್ರವಾದ್ದರಿಂದ , ಅದಕ್ಕೊಂದು ಸಮರ್ಥನೆಯಾದರೂ ಇದೆ.  ಇದು ನಾನು ಆಗೀಗ ನೋಡಿರುವ ಕೆಲವು ಮಾತ್ರ.  ನೋಡಿರದ ಉಳಿದ ಕಣ್ಣೀರು ಧಾರಾವಾಹಿಗಳ ಬಗ್ಗೆ ಗೊತ್ತಿಲ್ಲ.

ನಾನು ಅಡಿಗೆ ಮನೆಯಲ್ಲಿ ಮೆದು ಚಪಾತಿ ತಯಾರಿಸುವ ಹೊತ್ತಿಗೆ ಸರಿಯಾಗಿ, ಹಾಲ್‍ನಲ್ಲಿರುವ ಟಿವಿಯಲ್ಲಿ “ಕಾದಂಬರಿ” ಬರುವುದರಿಂದ ಈ ಧಾರಾವಾಹಿಯ ಕೆಲವು ಕಂತುಗಳನ್ನು ನೋಡಿರುವ ಪುಣ್ಯ ನನ್ನದು. ಈ ಧಾರಾವಾಹಿಯ ಬಗ್ಗೆ ಏನೇನೂ ತಿಳಿಯದ ಪಾಮರರಿಗೆ ಸ್ವಲ್ಪವಾದರೂ ಕಥೆ ಹೇಳಿ ಜ್ಞಾನಾರ್ಜನೆ ಮಾಡಿಸಬೇಕೆಂದುಕೊಂಡೆ. ಆದರೆ ಹಲವಾರು ಕವಲುಗಳುಳ್ಳ, ಈ ಮಹಾ (ಮೆಗಾ )ಕಥೆಯನ್ನು ಎಲ್ಲಿಂದ ಪ್ರಾರಂಭಿಸಿ,ಎಲ್ಲಿ ಮುಗಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಸುಮ್ಮನಾಗಿಬಿಟ್ಟೆ.

ಉದಯ ಧಾರಾವಾಹಿಗಳಂತೂ ಅಸಂಬಂದ್ಧ, ಅತಾರ್ಕಿಕ ಘಟನೆಗಳ ಸರಮಾಲೆ.   ಅಮೆರಿಕಾಗೆ ಉದಯ ಚಾನಲ್ ಬಂದ ಹೊಸದರಲ್ಲೇ, ಅದನ್ನು ಮನೆಗೆ ಬರಮಾಡಿಕೊಂಡ ಮೊದಲಿಗರಲ್ಲಿ ನಾವೂ  ಒಬ್ಬರು.  ಆಗಲೇ  ಶುರುವಾಗಿ, ಸುಮಾರು ಕಂತುಗಳನ್ನು ಮುಗಿಸಿದ್ದ  ಕುಂಕುಮಭಾಗ್ಯ, ಮಾಂಗಲ್ಯ,ನಾಕು ತಂತಿ ಧಾರಾವಾಹಿಗಳು (೩ ವರ್ಷ ಸಮೀಪಿಸುತ್ತಿದೆ) ಇವತ್ತಿಗೂ ಪ್ರಸಾರವಾಗುತ್ತಿವೆಯೆಂದರೆ, ಕಥೆ ಇನ್ನೆಷ್ಟು ಹಿಗ್ಗಾಮುಗ್ಗಾ ಜಗ್ಗಿ ಹೋಗಿರಬಹುದೆಂಬುದನ್ನು ನಿಮ್ಮ ಊಹೆಗೇ ಬಿಡುತ್ತಿದ್ದೇನೆ. ದೂರದರ್ಶನದಲ್ಲಿ ಆಗ  -ಧಾರಾವಾಹಿಗಳ ಪ್ರಾರಂಭದ ಕಾಲ  –  ಬರುತ್ತಿದ್ದ ಧಾರಾವಾಹಿಗಳು ಕೇವಲ ೧೩ ಕಂತುಗಳಲ್ಲಿ ಮುಗಿಯುತ್ತಿದ್ದವೆಂದು ಈಗ ನಂಬುವುದೇ ಕಷ್ಟವಾಗುತ್ತಿದೆ.  ಉದಯದಲ್ಲಿ ಇದ್ದುದ್ದರಲ್ಲಿ ಸ್ವಲ್ಪ ಚೆನ್ನಾಗಿವೆ ಎನ್ನುವಂತಿದ್ದ – ಕುಟುಂಬ, ಕನ್ನಡಿಯಿಲ್ಲದ ಮನೆ ಮುಂತಾದ ಧಾರಾವಾಹಿಗಳು ಯಾಕೋ ಪ್ರಾರಂಭದಲ್ಲಿಯೇ ನಿಂತು ಹೋದವು, ಯಾಕೆಂದು ಕಾರಣ ಕೂಡ ತಿಳಿಯಲಿಲ್ಲ.

ಈಟಿವಿಯ ಕೆಲವು ಕಾರ್ಯಕ್ರಮಗಳು ಉತ್ತಮವಾಗಿರುತ್ತವೆಂದು ಕೇಳಿ ಬಲ್ಲೆ. ಈಟಿವಿ ಅಮೆರಿಕಾದಲ್ಲಿ ಸದ್ಯದಲ್ಲೇ ಲಭ್ಯವಾಗಲಿದೆ ಎಂದು  ಹೇಳುತ್ತಲ್ಲೇ ಬಂದಿದ್ದಾರಾದರೂ, ಇನ್ನೂ ಬಂದಿಲ್ಲ. ಕಾರಣವೇನೋ ಯಾರಿಗೂ ಗೊತ್ತಿಲ್ಲ. ಈಟಿವಿ ಇಲ್ಲಿಗೆ ಬಂದಿದ್ದೇ ಆದಲ್ಲಿ ಬಹಳಷ್ಟು ಮನೆಗಳಿಂದ ಉದಯ ಎತ್ತಂಗಡಿಯಾಗುವುದು ನಿಸ್ಸಂದೇಹ! ಈ ಕಾರಣದಿಂದಲೇ ಉದಯದವರು ಈಟಿವಿಗೆ ಅಡ್ಡಗಾಲು ಹಾಕುತ್ತಿರಬಹುದೇ ಎಂದು ನನಗೊಂದು ನಿರಾಧಾರ, ನಿಷ್ಕಾರಣ ಸಂದೇಹವೂ ಉಂಟು.

ನೀವೂ ಯಾವುದೇ ಭಾಷೆಯ ಟಿವಿ ಧಾರಾವಾಹಿ ನೋಡುತ್ತೀರಾದರೆ,ನಿಮಗೆ ಇಷ್ಟವಾದ ದೃಶ್ಯಗಳನ್ನು ಕಣ್ಮುಂದೆ ಕಟ್ಟುವಂತೆ (ಬಣ್ಣ ಬಣ್ಣವಾಗಿ) ಚಿತ್ರಿಸಿ. 🙂

ಹಸುರು – ಕುವೆಂಪು

ಕವನ – ಹಸುರು
ಕವಿ   – ಕುವೆಂಪು

ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ !

ಹಸುರಾಗಸ, ಹಸುರು ಮುಗಿಲು ;
ಹಸುರು ಗದ್ದೆಯಾ ಬಯಲು  ;
ಹಸುರಿನ ಮಲೆ ; ಹಸುರು ಕಣಿವೆ ;
ಹಸುರು ಸಂಜೆಯೀ ಬಿಸಿಲೂ !

ಆಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ !

ಅದೊ ಹುಲ್ಲಿನ ಮಕಮಲ್ಲಿನ
ಹೊಸ ಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ !

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು !
ಹಕ್ಕಿಯ ಕೊರಲಿಂಪು ಹಸುರು ;
ಹಸುರು ಹಸುರಿಳೆಯುಸಿರೂ !

ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !*

(*ಆಶ್ವೀಜಮಾಸದಲಿ ‘ಕವಿಶೈಲ”ದ ನೆತ್ತಿಯಲ್ಲಿ ದೊರೆಕೊಂಡ ರಸಾನುಭೂತಿ)

———————————————————

ಸು.ರಂ.ಎಕ್ಕುಂಡಿ – ಯಾವ ಕಾಣಿಕೆ?

ಚಿತ್ರ: ಮಸಣದ ಹೂವು (೧೯೮೫)
ಗಾಯಕ: ಎಸ್.ಪಿ ಬಾಲಸುಬ್ರಹ್ಮಣ್ಯಮ್
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಸು.ರಂ.ಎಕ್ಕುಂಡಿ

ಹಾಡು ಕೇಳಿ

ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ|

ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಳಿಯೊಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಹಂಸ ನಾವೆಯ ನಾ ತರಲಾರೆ|

ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ
ನಂದನ ವನದ ಮಂದಾರ ಪುಷ್ಪವ
ನಾ ನಿನಗೆ ತರಲಾರೆ|

ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ
ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ
ಸೂರ್ಯ ಚಂದ್ರರ ನಾ ತರಲಾರೆ|

*  *  *  *  *   *    *  *   *  *   *   * *

ಮಾಂಗಲ್ಯ ಭಾಗ್ಯ – ಆಸೆಯ ಭಾವ

ಚಿತ್ರ – ಮಾಂಗಲ್ಯ ಭಾಗ್ಯ (೧೯೭೬)
ಸಾಹಿತ್ಯ- ವಿಜಯ ನಾರಸಿಂಹ
ಸಂಗೀತ –  ರಾಜನ್-ನಾಗೇಂದ್ರ
ಗಾಯಕ –  ಎಸ್.ಪಿ. ಬಾಲಸುಬ್ರಮಣ್ಯಂ

ಹಾಡು ಕೇಳಿ

ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ

ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|

ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೇ ಚೇತನ

ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ |

ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ
ಮೇರೆಯೇ ಇಲ್ಲದ ತುಡಿತವು ತುಂಬಿದೆ

ಯಾವುದೊ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|

*    *     *     *     *     *      *

ನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ
ಕವಿ – ದಿನಕರ ದೇಸಾಯಿ

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
 ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
 ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
 ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
 ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
 ನಿಜ ಸೇವೆಗೈಯಲಿಕೆ ಬರಲಿ ಮುಂದು

*  *  *   *   *  *  *  * * * * * * * * * * * *

ಬೀchi ಬಂದರು ದಾರಿ ಬಿಡಿ!

 ಬೀchi:ಬುಲೆಟ್ಟು,ಬಾಂಬ್ಸು,ಭಗವದ್ಗೀತೆ -ಅಂಕಿತ ಪುಸ್ತಕ

ಈ ವಾರಾಂತ್ಯದ ವಿನೋದಕ್ಕೆ ಆಗಮಿಸಿರುವ ಮುಖ್ಯ ಅತಿಥಿ ಬೀchi. 

ಇದನ್ನೋದಿ ,  ಅರ್ಥಕೋಶಕ್ಕಿಂತ ಅನರ್ಥಕೋಶವೇ ಹೆಚ್ಚು ಇಷ್ಟವಾಗುವ ಅಪಾಯವೂ ಇದೆ,ಎಚ್ಚರಿಕೆ! 🙂

ಅನರ್ಥ – ಅಪಾರ್ಥಗಳು : (ಬೀchi – ತಿಂಮ ರಸಾಯನದಿಂದ)

ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ ನಾಲ್ಕು ಮೃಗವಲ್ಲ, ನಾಲಿಗೆಯು ನಾಲ್ಕುಂಟು ವಿಪರೀತವಲ್ಲ, ಸರ್ಪವನ್ನು ಧರಿಸಿ ಮೂಷಿಕದ ಮೇಲಿರುವ ಗಣಪತಿ. (ಇದೇನು? ಸರಿಯಾಗಿ ಅರ್ಥವಾಗಲಿಲ್ಲ ನನಗೆ)

ಇತ್ಯಾದಿ – ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ.

ಬೈತಲೆ – ಬರೀ ಬೈಗುಳನ್ನೇ ತುಂಬಿಕೊಂಡಿರುವ ತಲೆ – ಉದಾ: ಮಾಸ್ತರ ತಲೆ, ಮಡದಿಯ ತಲೆ.

ವಿಮಾ ಏಜಂಟ್ – ಪರ ಪತ್ನೀ ಹಿತೈಷಿ ; ನಿನ್ನ ನಂತರವೇ ನಿನ್ನ ಮಡದಿಗೆ ಸುಖ ಎಂದು ಸೂಚ್ಯವಾಗಿ ಸತ್ಯವನ್ನೇ ಹೇಳುವವ.

ಆದರ್ಶ ದಂಪತಿಗಳು – ಎರಡು ದೇಹಗಳು, ಒಂದೇ ಜೀವ – ಗಂಡ ನಿರ್ಜೀವಿ! ಗಂಡ ಸಂಗೀತಗಾರ – ಕಿವುಡಿ ಹೆಂಡತಿ.

ಮಾನ – ಹೆಂಣಿನ ಮಾನವನ್ನು ಕಾಯಲು ಗಂಡೇ ಬೇಕು – ಗಂಡಿನ ಮಾನವನ್ನು ಕಳೆಯಲು ಹೆಂಣೇ ಸಾಕು.

ಏಕಾಂತ – ಏಕಮಾತ್ರ ಗಂಡ ಉಳ್ಳವಳು; ಅತೃಪ್ತಿಯಲ್ಲಿರುವವರಿಗೆ ಏಕಾಂತವೂ ಸಂತೆಯೇ.

ಯಾರೋ – “ಯಾರೋ ಅಂದರು” ಎಂದು ಆರಂಭಿಸಿದರೆ ಆಯಿತು – ಮುಂದು ಬರುವುದೆಲ್ಲವೂ ಸುಳ್ಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಊದುಬತ್ತಿ – ದೇವರ ಬೀಡಿ

ಕವಿ – ಹುಚ್ಚರ ಮೆಚ್ಚುಗೆ ಪಡೆಯುವ ಹಿರಿ ಹುಚ್ಚ!

ಕಲೋಪಾಸಕ – ಕಲೆಯನ್ನೇ ನಂಬಿ ಉಪವಾಸ ಬೀಳುವವನು.

ಕ್ಷಯ – ಶ್ರೀಮಂತರ ಕ್ಷಯವೇ ಡಾಕ್ಟರನ ಅಕ್ಷಯಪಾತ್ರೆ.

ಏ – ಅನೇಕರಿಗೆ ಹೆಂಡತಿಯ ಹೆಸರು!

ಅಂತೆ – ಸುಳ್ಳೆಂಬ ಮಹಾವೃಕ್ಷದ ಮೂಲಬೀಜ.

ತಲೆ – ಉಳ್ಳವರು ಬಹಳಿಲ್ಲ – ಉಳ್ಳವರಿಗೆ ಇದರ ಅರುವಿಲ್ಲ – ಇಲ್ಲದವರಿಗೆ ಇದೆಯೆಂಬ ಭ್ರಮೆ ಇದೆ.

ಬಾಡಿಗಾರ್ಡ್ – ಕುಬುಸ

ಕುಪಿತ – ಕೆಟ್ಟ ತಂದೆ

ಮಧುರಮ್ಮ – ಕುಡುಕನ ಹೆಂಡತಿ

ಅರ್ಥಗರ್ಭಿತ – ಹಣಕ್ಕೆ ಗರ್ಭಿಣಿಯಾದವಳು.

ಕುಕ್ಕರ್ – ನಾಲ್ವರು ಪುರುಷರು ಮಾಡುವಷ್ಟು ಕೆಲಸವನ್ನು ಅದೊಂದೆ ಮಾಡುತ್ತದೆ – ಅರ್ಥಾತ್ ಓರ್ವ ಸ್ತ್ರೀ ಮಾಡುವಷ್ಟು ಅನ್ನಿ; ಕುಕ್ಕರ್ ಕೊಂಡ ಮೇಲೂ ಲಗ್ನವಾಗುವವನು ಶತ ಮೂರ್ಖ!

ಶ್ರೀಮತಿ – ಶ್ರೀಯನ್ನು (ಹಣವನ್ನು) ಗಳಿಸುವುದರಲ್ಲಿಯೇ ಮತಿಯನ್ನೆಲ್ಲಾ ವ್ಯಯ ಮಾಡುವವಳೇ ಶ್ರೀಮತಿ.

ಕ್ರಿಶ್ಚಿಯನ್ – ಆರು ದಿನಗಳು ಮಾಡಿದ ಹಳೆಯ ಪಾಪಗಳಿಗಾಗಿ ಆದಿತ್ಯವಾರ ಪಶ್ಚಾತ್ತಾಪ ಪಟ್ಟು, ಹೊಸ ಪಾಪಗಳಿಗೆ ಪರ್ಮಿಟ್ಟು ಪಡೆಯುವ ಪುಣ್ಯಾತ್ಮ.

ಏಕಾದಶಿ – ಹೊಟ್ಟೆ ತುಂಬಿದವನು ಏಕಾದಶಿ ಮಹಿಮೆಯನ್ನು ಬಹು ಚೆನ್ನಾಗಿ ಭೋದಿಸಬಲ್ಲ.

ನಾಚಿಕೆ – ಬತ್ತಲೆ ಇರುವವರ ರಾಜ್ಯದಲ್ಲಿ ಬಟ್ಟೆಯುಟ್ಟವನೇ ನಾಚಬೇಕು: ನಾಚಿಕೆಯನ್ನು ಒಂದೇ ಒಂದು ಬಾರಿ ಬಿಟ್ಟರಾಯಿತು – ಮತ್ತೆ ಅದರ ಕಾಟವೇ ಇಲ್ಲ.

ಮುತ್ಸದ್ದಿ – ಸದ್ದಿಲ್ಲದೆ ಮುತ್ತು ಕೊಡುವವನೆ ಮುತ್ಸದ್ದಿ.

ಉಭಯ ಸಂಕಟ – ಒಳಗೆ ಭಾಷಣ – ಹೊರಗೆ ಗುಡುಗು, ಸಿಡಿಲು; ಒಳಗೆ ರೇಡಿಯೋ ಸಂಗೀತ – ಹೊರಗೆ ಉರಿಬಿಸಿಲು ; ಒಳಗೆ ಮನೆಯವಳು – ಹೊರಗೆ ದೇಶಭಕ್ತರು.

ಜೀವನ – ಜೀವನದ ಮೊದಲರ್ಧ ಹೆತ್ತ ತಂದೆ ತಾಯಿಗಳಿಂದ ಕೆಡುತ್ತದೆ- ಉಳಿದರ್ಧ ಹುಟ್ಟಿದ ಮಕ್ಕಳಿಂದ ಕೆಡುತ್ತದೆ.

ಜಾತಿ – ದೇವರು ಕೊಟ್ಟ ಬುದ್ಧಿಗೆ ದೆವ್ವವು ಕೊಟ್ಟ ಅಫೀಮು ; ದಿವಾಳಿ ತೆಗೆದವನ ವ್ಯಾಪಾರ ಹೆಚ್ಚು – ಜಾತಿಗೆಟ್ಟವನ ಆಚಾರ ಹೆಚ್ಚು.

ಆಸ್ಪತ್ರೆ – ಸಾವೆಂಬ ಭವ್ಯಗೃಹದ ಒಳಂಗಳ; ಈ ಜಗತ್ತೇ ಒಂದು ಆಸ್ಪತ್ರೆ – ಇಲ್ಲಿಗೆ ಬರುವುದು ಬದುಕಲಿಕ್ಕಲ್ಲ , ಸಾಯಲಿಕ್ಕೆ; ಆಸ್ಪತ್ರೆ ಸ್ಮಶಾನಕ್ಕೆ ಸಮೀಪವಿದ್ದಷ್ಟೂ ಸುಖ – ಹೊರುವವರಿಗೆ.

ಹೆಂಡತಿ – ಹೆಂಡತಿಯೊಂದು ಹೊದಿಕೆ. ಹೊದ್ದುಕೊಂಡರೆ ಸೆಕೆ, ಬಿಟ್ಟರೆ ಚಳಿ. ಕನ್ನೆಗಳೆಲ್ಲವೂ ಒಳ್ಳೆಯರೇ – ಕೆಟ್ಟ ಹೆಂಡಂದಿರು ಎಲ್ಲಿಂದ ಬಂದಿರಬಹುದು? ಹೆಂಡತಿಗಿಂತಲೂ ಹೆಂಡತಿಯ ಭಾವಚಿತ್ರವನ್ನು ಕೆಲವರು ಹೆಚ್ಚು ಪ್ರೀತಿಸುತ್ತಾರೆ – ಅದಕ್ಕೆ ನಾಲಿಗೆ ಇಲ್ಲ!

ಸಂಗೀತಗಾರ – ತಾನು ಹಾಡುತ್ತಿರುವ ಹಾಡಿನ ಅರ್ಥವನ್ನೇ ಅರಿಯದ ಮಹಾರಸಿಕ; ಹೊಟ್ಟೆಯ ಪಾಡಿಗಾಗಿ ತೊಡೆ ಬಡಿದುಕೊಳ್ಳುವವ; ಹೊಲಿಯುವವನ ಬಲಕ್ಕೆ, ಅಳುವವನ ಎಡಕ್ಕೆ,ಹಾಡುವವನ ಮುಂದೆ ಎಂದೂ ಕೂಡಬೇಡ ; ಇವನ ಕಂಠವು ಸುಖವನ್ನು ಕೊಡುತ್ತದೆ – ಕೂಡಲೆ ಅವನ ಮುಖವು ಅದನ್ನು ಕಸಿದುಕೊಳ್ಳುತ್ತದೆ.

ತಿಂಮ ಉವಾಚ : ಗಂಡಿನಕ್ಕಿಂತಲೂ ಹೆಣ್ಣಿಗೆ ಹೆಚ್ಚು ಊಟ,ನಿದ್ರೆ, ಬಟ್ಟೆ ಬೇಕು. ಹೀಗೆಂದು ಯಾರು ಹೇಳುತ್ತಾರೆ?… ಡಾಕ್ಟರು. ಯಾವ ಡಾಕ್ಟರು?…ಲೇಡಿ ಡಾಕ್ಟರು…ಅದಕ್ಕಾಗಿಯೇ ಎಲ್ಲ ಊರುಗಳಲ್ಲಿಯೂ ಲೇಡಿ ಡಾಕ್ಟರರು ಹೆಂಗಸರೇ ಇರುತ್ತಾರೆ!

*     *        *         *      *      *         *        *    *     *     *    *     *

ಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ

ದೊಡ್ಡರಂಗೇಗೌಡ/ಉದಯ/ನಕ್ಷತ್ರ

ಹಾಡು ಕೇಳಿ –

ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 

ಕೊಳಲು – ಪ್ರವೀಣ್ ಗೋಡ್ಕಿಂಡಿ 

ಒಲುಮೆ ಪೂಜೆಗೆಂದೇ
ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನಾ

ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರಯ ತೂಗಿ ಸನಿಹ ಬಂದೆ
ಎಲ್ಲಾ ಪ್ರೀತಿ ಸಮ್ಮೋಹ ತಂದೆ

ಹರುಷ ತಂದ ಹಾದಿಯೇ ಚಂದ
ಒಲವಿನಾಸರೆ ರೋಮಾಂಚ ಬಂಧ

ಜೊತೆಯ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು

ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದೂ ಜೇನು

*    *    *     *     *      *

ಪರಸಂಗದ ಗೆಂಡೆತಿಮ್ಮ – ನಿನ್ನ ರೂಪು

ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಗಾಯಕಿ: ಎಸ್.ಜಾನಕಿ 

ಎಸ್.ಜಾನಕಿ - ಚಿತ್ರ ಕೃಪೆ:ಮೀರಾಕೃಷ್ಣ

ಹಾಡು ಕೇಳಿ

ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ

ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ
ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ

ತೆರೆಯದ ಬಯಕೆ ಬಾನು ದೂರ ದೂರ ಸರಿದೈತೆ
ಹರೆಯದ ಹಂಬಲ ಗಂಗೆ ಬಾಗಿ ಬಳುಕಿ ಹರಿದೈತೆ
ನಿನ್ನ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ

ಮರೆಯದ ಮೋಹ ಉಕ್ಕಿ ತೇಲಿ ತೇಲಿ ಮೊರೆದೈತೆ
ಇಂಗದ ದಾಹ ಬೇಗೆ ಕಾದೂ ಕಾದೂ ಕರೆದೈತೆ
ನಿನ್ನ ಸೇರುವ ರಾಗ ರಂಗಿಗೆ ನನ್ನ ಮನಸು ತೆರೆದೈತೆ

*         *             *             *            *

ಕಾಸರಗೋಡು-೭೭ – ವೇಣುಗೋಪಾಲ ಕಾಸರಗೋಡು

ಕವನ – ಕಾಸರಗೋಡು-೭೭
ಕವಿ – ವೇಣುಗೋಪಾಲ ಕಾಸರಗೋಡು

ಕಂಡ ಕಂಡ ದೈವ ದೇವರುಗಳಿಗೆ
ಅನ್ಯಥಾ ಶರಣಂ ನಾಸ್ತಿ ಪ್ರಭೋ ನೀವೆ ಗತಿ
ಎಂದು ಉದ್ದಂಡ ಬಿದ್ದೆವು
ಚೆಂಡೆ ಕಾಸರಕನ ಗೋಳಿ ಅಶ್ವಥ್ಥ
ಬಣ್ಣ ತೊಗಲುಗಳ ಗಣಿಸದೇ ಸುತ್ತು
ಬಂದೆವು ಹರಕೆ ಹೊತ್ತೆವು ಆಯಾ ಕ್ಷೇತ್ರಕ್ಕೆ
ಆಯಕಟ್ಟಿನ ನೈವೇದ್ಯ ನೀಡಿದೆವು ದಿವ್ಯ ಅಶರೀರ
ವಾಣಿಗಳ ನಂಬಿದೆವು ತಾಯ ಮಡಿಲಲ್ಲಿ
ಮಲಗುವ ಕನಸ ಕನವರಿಸಿದೆವು

ಪೂತನಿ ಹಾಲು ಕುಡಿದು ಕಹಿಯೆಂದು ಉಗುಳಿದೆವು
ಕೃಷ್ಣನಾಗಲೇ ಇಲ್ಲ ಕೇವಲ ಶಬರಿ ಬೊಗರಿಯ ಧ್ಯಾನ
ಗಿರಿಗಹ್ವರಗಳಲ್ಲಿ ಗೆರಿಲ್ಲಾ ಗೂಬೆ ಧ್ವನಿ
ಪ್ರತಿಧ್ವನಿಸುವುದೆ ಇಲ್ಲ ಈ ಅಹಲ್ಯ ಶಿಲೆ
ಮಿಸುಕಾಡುವುದೆ ಇಲ್ಲ ರಾಮಪಾದ ಸೋಕುವುದಿಲ್ಲ
ಬೀದಿಗೆ ಬಿದ್ದ ಚಿಗುರು ಕಂದನ ಕೂಗು
ಹೆತ್ತ ಕರುಳಿನ ಕಿವಿಗೆ ತಲುಪುವುದೆ ಇಲ್ಲ
ಚೊಚ್ಚಲ ಮರಿಯ ಮದ್ದಂತೆ ಬೆಕ್ಕಿನ ಪ್ರಸವದ ವೇದನೆಗೆ

ಮನುಷ್ಯನ ಕೊಲೆಗೆ ಗಲ್ಲು ವಿಧಿಸುವ ನಿಮಗೆ
ನಮ್ಮದೊಂದೇ ಪ್ರಶ್ನೆ ಉತ್ತರಿಸಿ
ಭಾಷೆ ಸಂಸ್ಕೃತಿ ಕೊಂದು ಕೈತೊಳೆವ ಕಟುಕರಿಗೆ
ಯಾವ ರೌರವ ಶಿಕ್ಷೆ ನಿಮ್ಮ ಸಂಹಿತೆಯಲ್ಲಿ?

*    *     *      *       *       *       *