ನಮ್ಮ ಮಕ್ಕಳು – ತಾರೆಗಳ ತೋಟದಿಂದ

ಚಿತ್ರ : ನಮ್ಮ ಮಕ್ಕಳು (೧೯೬೯)
ಸಾಹಿತ್ಯ : ಆರ್.ಎನ್ ಜಯಗೋಪಾಲ್
ಸಂಗೀತ : ವಿಜಯ ಭಾಸ್ಕರ್
ಗಾಯಕಿ : ಎಸ್.ಜಾನಕಿ,ಸಂಗಡಿಗರು

ಹಾಡು ಕೇಳಿ 

ತಾರೆಗಳ ತೋಟದಿಂದ ಚಂದಿರ ಬಂದ
ನೈದಿಲೆಯ ಅಂದ ನೋಡಿ ಆಡಲು ಬಂದ

ಹಾಲಿನ ಕೊಳದಿ ಮಿಂದು ಬಂದು
ಹೂಬಳ್ಳಿ ಉಯ್ಯಾಲೆ ಆಡಿ ನಿಂದು
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೆ ತಾ ಹೂವಿಗಿತ್ತ ಮುತ್ತನೊಂದು

ಹೂವಿನ ರಾಣಿಯ ಜೊತೆಗೂಡಿ
ನಗುವ ಸಖನ ಪರಿ ನೋಡಿ
ಕೋಪದಿಂದ ಕೂಡಿ ಕಣ್ಣು ಮುಖ ಬಾಡಿ
ತಾರೆಗಳು ನೋಡುತ್ತಿತ್ತು ದೂರ ಓಡಿ

ಮೂಡಿರೆ ಬಾನಲ್ಲಿ ಕೆಂಪು ಬಣ್ಣ
ಚಂದಿರ ತೆರೆದ ತನ್ನ ಕಣ್ಣ
ಕಾಲ ಮೀರಿತೆಂದು ಬಾನನೇರಿ ನಿಂದು
ನೈದಿಲೆಗೆ ಕೈಯ ಬೀಸಿ ಹೋದ ಮುಂದು

ನೈದಿಲೆಯ ಆಟ ನೋಡಿ ನಕ್ಕನು ಭಾನು
ನೈದಿಲೆಯು ತನ್ನ ಮುಖ ಮುಚ್ಚಿತು ತಾನು

*      *         *      *         *

ಕೊಳದ ಪಕ್ಕದ ಹೊಲದ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹ ಸ್ವಾಮಿ
ಸಂಗೀತ – ಪ್ರವೀಣ್ ಗೋಡ್ಕಿಂಡಿ
ಗಾಯಕಿ – ಎಂ.ಎಸ್.ಶೀಲಾ

ಹಾಡು ಕೇಳಿ

ಕೊಳದ ಪಕ್ಕದ ಹೊಲದ
ಮೈತುಂಬಾ ನಾ ಕಂಡೆ
ಬಿಳಿ ಹಳದಿ ಹೂಗಳನು ಸೇವಂತಿಗೆ
ನೀರ ಮೇಗಣ ಗಾಳಿ ಬೀಸಿತೋ ನನ ಮೇಲೆ
ಅದರ ಕಂಪಿಗೆ ನಾನು ಮಾರು ಹೋದೆ

ಅಲ್ಲೊಂದು ತಾಣದಲಿ
ಜಾಲಿ ಹೂಗಳ ಕಂಡೆ
ಕೆಂಡ ಸಂಪಿಗೆ ಬಿತ್ತು ನನ್ನ ಮೇಲೆ
ಬಾಂದಳದ ತನಕ ಸೇವಂತಿಗೆಯ ಆಹ್ವಾನ
ಚೆಲುವಿಗಿಂಪಿಗೆ ನಾನು ಕೈಯ ಮುಗಿದೆ

ಒಲವು ದೇವರ ಹೆಸರು
ಚೆಲುವು ಹೂವಿನ ಬದುಕು
ಸೇವಂತಿಗೆಯ ಬದುಕು ಕಂಪಿನಲ್ಲಿ
ಎಲೆಮರೆಯ ಹಕ್ಕಿ ಹಾಡಾಗುವುದು ಕೋಗಿಲೆ
ಧನ್ಯತೆಯ ಕಾಣುವುದು ಇಂಪಿನಲ್ಲಿ

ಹಕ್ಕಿ ಹಾಡಿನ ನಡುವೆ
ಅರಳಿತ್ತು ಹಳದಿ ಹೂ
ಬಿಳಿಯ ಹೂ ಅರಳಿತ್ತು ಸೋನೆಯಲ್ಲಿ
ಕೋಗಿಲೆಯ ಹೊಸ ಹಾಡ ಕೇಳುತ್ತ ಮುನ್ನಡೆದೆ
ನನ್ನ ಬುಟ್ಟಿಯ ತುಂಬಾ ಸೇವಂತಿಗೆ!

**********************

ನಾನೂ ಸೀತೆಯಲ್ಲ – ನಗೆಹನಿ

ಇದು ಉದಯ ಟಿವಿಯ “ನಗೆ ಸಖತ್ ಸವಾಲ್” ಕಾರ್ಯಕ್ರಮದಲ್ಲಿ ಕೇಳಿದ ನಗೆಹನಿ. ನನ್ನದೇ ಮಾತುಗಳಲ್ಲಿ,  🙂

ಸೀತೆ ಆಸೆ ಪಟ್ಟ ಚಿನ್ನದ ಜಿಂಕೆಯನ್ನು ಅರಸುತ್ತಾ ರಾಮ, ಅವನನ್ನು ಅನುಸರಿಸಿ ಲಕ್ಷ್ಮಣ ಮನೆಯಿಂದ ದೂರವಿರುತ್ತಾರೆ.  ಲಕ್ಷ್ಮಣ ತನ್ನ ಬಾಣದಿಂದ ರೇಖೆ ಎಳೆದು,  ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಬರದಂತೆ ಎಚ್ಚರಿಸಿ ಹೋಗಿರುತ್ತಾನೆ. ಕಪಟ ವೇಷದಿಂದ ಬಂದ ರಾವಣನ ಮೋಸವರಿಯದ ಸೀತೆ ರೇಖೆಯನ್ನು ದಾಟಿ, ರಾವಣನಿಗೆ ಭಿಕ್ಷೆ ನೀಡಲು ಹೋಗುತ್ತಾಳೆ. ಆಗ ರಾವಣ ತನ್ನ ಗಡ್ಡ,ಮೀಸೆಗಳನ್ನು ಕಿತ್ತೆಸೆದು, – “ಸೀತಾ, ಮೋಸ ಹೋದೆಯಾ? ನಾನು ರಾವಣ, ಸನ್ಯಾಸಿಯಲ್ಲ,”  ಎಂದು ಗಹಗಹಿಸಿ ನಗುತ್ತಾನೆ. ಆಗ ಅವಳು – “ನಾನೂ ಸೀತೆಯಲ್ಲ ಹೋಗ್. ಅವರ ಮನೆ ಕೆಲಸದವಳು.”  ಎಂದು ರಾವಣನಿಗೆ ಬೈದು ಒಳಗೆ ಹೋಗುತ್ತಾಳೆ!

ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು

ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ, ತೆಂಗಿನ ಕರಟಕ್ಕೊಂದು ಪರ್ಯಾಯ ಪದ.  ಯಾವುದೇ ಹಣ್ಣಿನ ಹೊರಪದರವಾದ ಸಿಪ್ಪೆಯನ್ನು ಚಿಪ್ಪು ಎನ್ನಬಹುದಾದರೂ, ತೆಂಗಿನಕಾಯಿಗೆ ಈ ಪದ ಬಳಕೆ ಹೆಚ್ಚು.  ಏನೂ ಸಿಗದ ನಿರಾಶೆ ಆಕ್ರೋಶ ರೂಪದಲ್ಲಿ ವ್ಯಕ್ತವಾದಾಗ “ಚಿಪ್ಪಿಗೆ” ಇನ್ನೂ ಹೆಚ್ಚಿನ ಒತ್ತು ಕೊಡಲು  – “ಅಷ್ಟೆಲ್ಲಾ ಮಾಡಿದ್ದಕ್ಕೆ ಕೊನೆಗೆ ನನಗೇನು ಸಿಕ್ಕಿತು? ಚಿಕ್ಕನಾಯಕನ ಹಳ್ಳಿ ಚಿಪ್ಪು” ಎಂದು ಹೇಳಲಾಗುತ್ತದೆ. ಹಣ್ಣಿನ ಹೊರಪದರವಾದ ಚಿಪ್ಪಿನಂತೆ, ಹಣ್ಣಿನ ಒಳಗಿರುವ “ಗೊರಟೆ” ಯನ್ನು ಇದೇ ಅರ್ಥದಲ್ಲಿ ಬಳಸುತ್ತಾರೆ.  ಒಟ್ಟಿನಲ್ಲಿ ಇದೊಂದು “ತಿರುಳಿಲ್ಲದ್ದು, ತಿರುಳಲ್ಲದ್ದು’ ಎಂಬುದನ್ನು ಸೂಚಿಸಲು ಉಪಯೋಗಿಸುವ ಪದ.

ಚಿಕ್ಕನಾಯಕನ ಹಳ್ಳಿ ತೆಂಗು ಬೆಳೆಗೆ ಹೆಸರಾದ ತುಮಕೂರು ಜಿಲ್ಲೆಯ ಒಂದು ಹಳ್ಳಿ.  ಎಲ್ಲಾ ಹಳ್ಳಿಗಳನ್ನೂ ಬಿಟ್ಟು ಈ ಹಳ್ಳಿಯ ಹೆಸರನ್ನೇ ಚಿಪ್ಪಿನೊಡನೆ ಸೇರಿಸಲು ಏನು ಕಾರಣವಿರಬಹುದೋ ಗೊತ್ತಿಲ್ಲ. ಅಲ್ಲಿ ಬೇರೆಲ್ಲ ಕಡೆಗಿಂತ ಹೆಚ್ಚು ತೆಂಗಿನಕಾಯಿ ಬೆಳೆದು, ಅಷ್ಟೇ ಸಂಖ್ಯೆಯ ಚಿಪ್ಪೂ ಸಿಗುತ್ತದೆ ಎಂದಿರಬಹುದೇನೋ 🙂

“ದರ್ಜಿ” – ಎಂಬ ಪದವನ್ನು ಸೂಚಿಸುವ ಚಿಪ್ಪಿಗ, ಸಿಂಪಿಗ (ಸಿಂಪು -ಚಿಪ್ಪು) ಪದಕ್ಕೂ ಈ ಚಿಪ್ಪಿಗೂ ಏನಾದರೂ ಸಂಬಂಧ ಇದ್ದೀತೆ?

ಇರಲಿ, ವಿಶ್ವಕಪ್ ಪಡೆಯಲು ಬಯಸಿ ವೆಸ್ಟ್ ಇಂಡೀಸ್‍ಗೆ  ಹೋಗಿದ್ದ ಭಾರತಕ್ಕೆ ಸಿಕ್ಕಿದ್ದೂ ಕಪ್ಪಲ್ಲ, ಚಿಪ್ಪು! ಭಾರತ ಗೆಲ್ಲಲಿ ಎಂದು ಬಯಸಿ ಹೋಮ,ಹವನ ನಡೆಸಿದ, ಭಾರತ ಗೆಲ್ಲಲೆಂದು ಮನಸಾರೆ ಶುಭ ಹಾರೈಸಿ ಕಳಿಸಿದ ಅಸಂಖ್ಯ ಅಭಿಮಾನಿಗಳಿಗೂ , ಸಿಕ್ಕಿದ್ದು ಚಿಪ್ಪೇ! 🙂

ಈ ದಿಸೆಯಲ್ಲಿ ಯೋಚಿಸುತ್ತಿರುವಾಗ ಹೊಳೆದ ಒಂದು ಪುಟ್ಟ ಹನಿಗವನ. ಇದರ ಹೆಸರು – ” ಕಪ್ಪೆಚಿಪ್ಪು ” – ಇದನ್ನು ಓದುವಾಗ, ನಿಮ್ಮ ನಾಲಿಗೆ ತೊಡರಿ “ಚಿಪ್ಪೇ ಕಪ್ಪು” ಎಂದು ಓದಿಕೊಂಡರೂ ನನ್ನದೇನೂ ಅಭ್ಯಂತರವಿಲ್ಲ!

ಕಪ್ಪೇ ಚಿಪ್ಪು

 “ವಿಶ್ವ ಕಪ್ -೨೦೦೭”
ಎಂಬ ಕಪ್ಪೆಚಿಪ್ಪಿನಲ್ಲಿ
ಸಿಗಲಿಲ್ಲ
ಭಾರತಕ್ಕೆ ಮುತ್ತು!

ವಸಂತ – ಬಿ.ಎಂ.ಶ್ರೀ

ಕವಿ – ಬಿ.ಎಂ.ಶ್ರೀ
(ಇಂಗ್ಲೀಷ್ ಗೀತಗಳು)

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ
ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ !

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ
ಇನಿಯರ ಬೇಟ ; ಬನದಲಿ ಬೆಳದಿಂಗಳೂಟ ;
ಹೊಸ ಹೊಸ ನೋಟ ಹಕ್ಕಿಗೆ ನಲಿವಿನ ಪಾ��
ಕೂಹೂ ಜಗ್ ಜಗ್ ಪುವ್ವೀ!  ಟೂವಿಟ್ಟಾವೂ !

ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂಹೂ ಜಗ್ ಜಗ್ ಪುವ್ವಿ ಟೂವಿಟ್ಟಾವೂ !

ಬಂದ ವಸಂತ – ನಮ್ಮ ರಾಜ ವಸಂತ!

***********************

ವರ್ಷ ತೊಡಕಿಗೆ ಒಂದೆರಡು ಸಾಲು

 ಈ ಎರಡು ದಿನಗಳಲ್ಲಿ, ಪತ್ರಿಕೆ, ಟಿವಿ, ಶುಭಾಶಯ ಪತ್ರಗಳಲ್ಲಿ ಬಹಳ ಹೆಚ್ಚು ಸಲ ಕೇಳಿ ಬಂದಿರುವ ಪದಗಳೆಂದರೆ, ಸಿಹಿ-ಕಹಿ,ನೋವು-ನಲಿವು, ಬೇವು-ಬೆಲ್ಲ. ನಿಮ್ಮೆಲ್ಲರ ಮನೆಗಳಲ್ಲಿ ಯುಗಾದಿ ಹಬ್ಬ ಚೆನ್ನಾಗಿ ಆಚರಿಸಿದಿರಾ? ಸಿಹಿ ಅಡುಗೆ ಏನು ಮಾಡಿದ್ದಿರಿ? ನಮ್ಮನೆಯಲ್ಲಿ ಹೋಳಿಗೆ ಮಾಡಿದ್ದೆ. ಮಾಡಬೇಕೆನ್ನುವ ಯೋಚನೆ ಏನೂ ಇರಲಿಲ್ಲ. ಉದಯ ಟಿವಿಯಲ್ಲಿ ತಾರಾ ದಂಪತಿ ಶ್ರೀರಕ್ಷಾ ಮತ್ತು ಶಿವಕುಮಾರ್ ಬಂದಿದ್ದರು. ಶ್ರೀರಕ್ಷಾ ಹೋಳಿಗೆ ಮಾಡಿದರೆ, ಶಿವಕುಮಾರ್ ಪಲಾವ್ ಮಾಡಿದರು. ಶ್ರೀರಕ್ಷಾ ಹೋಳಿಗೆಯನ್ನು ಅತಿ ಸುಲಭವಾಗಿ ಮಾಡಿದ್ದನ್ನು ನೋಡಿ ನನಗೂ ಹೋಳಿಗೆ ಮಾಡಬೇಕೆನ್ನಿಸಿ ಮಾಡಿದ್ದು ಅಷ್ಟೆ.  ನೋಡೋಕೆ ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೆ ಸಿಹಿ ತಾನೇ? ತಿನ್ನಲು ಚೆನ್ನಾಗಿಯೇ ಇತ್ತು.:)ಭಾರತ ಕ್ರಿಕೆಟಿನಲ್ಲಿ ಗೆದ್ದ ಸಂತೋಷ ನಾವು ತಿಂದ ಹೋಳಿಗೆಯನ್ನು ಮತ್ತಷ್ಟು ಸವಿಯಾಗಿಸಿತು!:)

ಜ್ಯೋತಿ, ಹೋಳಿಗೆಗಳು ನಿನಗೆ ಕಳಿಸುವಷ್ಟು ಉತ್ತಮವಾಗಿ ಏನೂ ಇರಲಿಲ್ಲ.  🙂

ಭೂತಗಳು ಹೋಳಿಗೆ ಮಾಡಲ್ಲ ಎಂದು ತಿಳಿಯಿತು. ಆದರೆ ಭೂತವನ್ನು ಮನೆಗೆ ಬಾ ಎಂದು ಆಹ್ವಾನಿಸಲು ಸಾಧ್ಯವೇ? ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಬಂದು ಹೋಗು ಎಂದಂತೆ! 🙂

ಸಿಹಿಯಾದ ಊಟ, ಸೊಗಸಾದ ನೋಟದೊಂದಿಗೆ ಆರಂಭವಾಗಿರುವ ಸರ್ವಜಿತ್  ಸಂವತ್ಸರ ಮತ್ತಷ್ಟು ಸಿಹಿ ಸುದ್ದಿಗಳನ್ನು ವರ್ಷದುದ್ದಕ್ಕೂ ನೀಡಲಿ ಎಂದು ಹಾರೈಸುತ್ತೇನೆ. ಕಳೆದ ಸಂವತ್ಸರದ ಹೆಸರು “ವ್ಯಯ” ಎಂದಿದ್ದರೂ ಅದೂ ಕೂಡ ನಮಗೆ ಅನೇಕ ವೈಯುಕ್ತಿಕ ಲಾಭಗಳನ್ನುತಂದು ನೀಡಿದ ವರ್ಷವೇ!  ನಿಮ್ಮ ಯುಗಾದಿ ಆಚರಣೆ ಹೇಗಿತ್ತು ಎಂದು ನೀವೂ ಒಂದೆರಡು ಸಾಲು ಬರೆದು ತಿಳಿಸಿ. ವರ್ಷತೊಡಕಿನಂದು ಬರೆದ ಸಾಲುಗಳು ಅಕ್ಷಯವಾಗಿ, ವರ್ಷ ಪೂರ್ತಿ ಏನಾದರೂ ಬರೆಯುತ್ತಲೇ ಇರುತ್ತೀರಿ (ಕಥೆ,ಲೇಖನ,ಕವನ) ಎಂಬ ಆಮಿಷವನ್ನೂ(ಲಂಚ) ನಿಮಗೆ ಒಡ್ಡುತ್ತಿದ್ದೇನೆ. 🙂

ಶಾನುಭೋಗರ ಮಗಳು – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕ – ಜಿ.ವಿ.ಅತ್ರಿ
ಸಂಗೀತ – ಸಿ.ಅಶ್ವಥ್

ಜಿ.ವಿ ಅತ್ರಿ/ಚಿತ್ರಕೃಪೆ:ವಿಶ್ವಕನ್ನಡ.ಕಾಂ

ಹಾಡು ಕೇಳಿ 

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ
ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲ |

ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂಥ ಬಾಳಿಗೆ ಒಲವೇ ನಿನ್ನ ಕನಸು |

ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು |

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ |

ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ?
ತೆರಳಿದನು ಜೋಯಿಸನು ತಣ್ಣಗಾಗಿ |

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು |

ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೇ ಇಂಥ ಕಪ್ಪು ಗಂಡು?
ಶಾನುಭೋಗರ ಮನೆಯ ತೋರಣವೇ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು |

ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ !

*     *    *     *       *       *

ರಾಮ ರಾಮ ಎಂಬೆರಡಕ್ಷರ

ರಾಗ – ಧನ್ಯಾಸಿ
ತಾಳ – ಆದಿ

ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||

ಹಾಲಾಹಲವನು ಪಾನವ ಮಾಡಿದ|
ಫಾಲಲೋಚನನೆ ಬಲ್ಲವನು ||
ಆಲಾಪಿಸುತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||೧||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ|
ಕುಂಜರ ರವಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ||೨||

ಕಾಲವನರಿತು ಸೇವೆಯ ಮಾಡಿದ |
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳ ಶಯನ ಶ್ರೀ ವಿಜಯವಿಠಲನ |
ಲೀಲೆ ಶರಧಿಯ ಕೇಳೇನು ||೩||

ಸುಬ್ಬಾಭಟ್ಟರ ಮಗಳು – ಬಿ.ಆರ್. ಲಕ್ಷ್ಮಣರಾವ್

 ಕವಿ – ಬಿ.ಆರ್. ಲಕ್ಷ್ಮಣರಾವ್

ಹಾಡು ಕೇಳಿ –  

ಸುಬ್ಬಾ ಭಟ್ಟರ ಮಗಳೇ
ಇದೆಲ್ಲಾ ನಂದೇ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ

ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆಯೆಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು
ಆರಿಸಿಕೊ ಬೇಕೇನು?

ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು

ಸುಗಂಧ ಬೀರುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಹೌದು !

ಪಾತರಗಿತ್ತಿಯ ಪಕ್ಕವನೇರಿ
ಧೂಪಡಕಾನಿಗೆ (?) ಹಾರಿ
ಪ್ರಾಯದ ಮಧು ಹೀರಿ

ಜುಳುಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳು ಮುಳುಗಿ
ದಿನ ಹೊಸತನದಲಿ ಬೆಳಗಿ

*  *    *    *    *     *

ಅವ್ವ – ಪಿ.ಲಂಕೇಶ್

ಕವನ – ಅವ್ವ
ಕವಿ – ಪಿ. ಲಂಕೇಶ್ 

ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ,

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?

ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ ;
ದೇವರ ಪೂಜಿಸಲಿಲ್ಲ ; ಹರಿಕತೆ ಕೇಳಲಿಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ : ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.

 

*     *      *      *     *       *       *