ಸಂಪದದಲ್ಲಿ “ಮನುಧರ್ಮಶಾಸ್ತ್ರ” ಪುಸ್ತಕ ಓದಲು ಸಿಕ್ಕಿತು. ಲೇಖಕರು ಎನ್.ಕೆ ನರಸಿಂಹಮೂರ್ತಿ. ಅಲ್ಲಿ ತಂದಿರಿಸಿದ್ದ ಸುನಿಲ ಜಯಪ್ರಕಾಶ್ ಅವರಿಗೆ ಧನ್ಯವಾದಗಳು. ಆ ಪುಸ್ತಕದಲ್ಲಿ ಅತಿಥಿ ಪದಕ್ಕಿದ್ದ ಅರ್ಥ – ಈಗ ಬಳಕೆಯಲ್ಲಿರುವುದಕ್ಕಿಂತ ಬೇರೆಯಾಗಿರುವುದು ತಿಳಿದು ಆಶ್ಚರ್ಯವಾಯಿತು.

ಬರಹ ನಿಘಂಟಿನ ಪ್ರಕಾರ – ಅತಿಥಿಯೆಂದರೆ, ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ.   ಮನೆಗೆ ಬರುವ ನೆಂಟರು, ಸ್ನೇಹಿತರನ್ನು ಅತಿಥಿ ಎನ್ನುವುದು ವಾಡಿಕೆ. ಒಟ್ಟು ಮನೆಗೆ ಸೇರದ ಹೊರಗಿನವರು ಯಾರೇ ಆದರೂ ಅವರು ಅತಿಥಿಗಳು. ಅವರು ಎಷ್ಟು ದಿನ ನಮ್ಮಲ್ಲಿ ಉಳಿಯುತ್ತಾರೆಂಬುದು ಅಪ್ರಸ್ತುತ.

ಆ ಪುಸ್ತಕದಲ್ಲಿ ಅತಿಥಿ ಪದಕ್ಕಿರುವ ವ್ಯಾಖ್ಯಾನ –

ಏಕರಾತ್ರಂ ತು ನಿವಸನ್ನತಿಥಿರ್ಬ್ರಾಹ್ಮಣ: ಸ್ಮೃತಃ |
ಅನಿತ್ಯಂ ಹಿ ಸ್ಥಿತೋ ಯಸ್ಮಾತ್ತಸ್ಮಾದತಿಥಿರುಚ್ಯತೇ||

“ಗೃಹಸ್ಥನಲ್ಲಿಗೆ ಬಂದು ಒಂದು ರಾತ್ರಿ ಮಾತ್ರ ಉಳಿದುಕೊಳ್ಳುವವನು ಅತಿಥಿ ಎಂದು ಕರೆಯಲ್ಪಡುವನು. ಎರಡನೆಯ ತಿಥಿಗೆ ಕಾಯದೆ ಹೊರಟು, ಅನಿತ್ಯನಾಗುವುದರಿಂದ ಅವನು ಅತಿಥಿ.” 

ಎಷ್ಟೋ ಜನ ಈ ದೇಶಕ್ಕೆ ಬಂದು ದಶಕಗಳೇ ಕಳೆದಿದ್ದರೂ – “ನಾವು ಈ ದೇಶದ ಅತಿಥಿ” ಎನ್ನುವುದನ್ನು ಕೇಳಿಸಿಕೊಂಡಿದ್ದೇನೆ. ಅವರಿಗೆ ಈ ಹೊಸ (ಹಳೆಯ) ಅರ್ಥ ತಿಳಿಸಿದರೆ ಏನನ್ನುವರೋ? 🙂

                                                                             ***                                
 

12 thoughts on “ಅತಿಥಿ ಎಂದರೆ ಯಾರು?”

  1. “ಈ ದೇಶಕ್ಕೆ ಬಂದು ದಶಕಗಳೇ ಕಳೆದಿದ್ದರೂ – “ನಾವು ಈ ದೇಶದ ಅತಿಥಿ” ಎನ್ನುವುದನ್ನು ಕೇಳಿಸಿಕೊಂಡಿದ್ದೇನೆ.”– ನಿಜ, ನಾನು ಯಾವಾಗಲೂ ಹಾಗೆ ಹೇಳುತ್ತಿದ್ದೆ. ಇನ್ನೀಗ ಯೋಚನೆ ಮಾಡಬೇಕಿದೆ. ತಾತ್ಕಾಲಿಕವಾಗಿ ಇಲ್ಲಿರುವ ನಾವುಗಳು (ಕೆಲವರು, ಎಲ್ಲರೂ ಅಲ್ಲ!), ಅತಿಥಿಗಳಲ್ಲದಿದ್ದರೆ, ಇನ್ಯಾರು? ಬೇರೇನು ಹೆಸರು ನಮಗೆ? (aliens ಅನ್ನೋದು ಸರಿಯೇನೋ! ಸರಿಯೇನು? 🙂 ಗೊತ್ತಿಲ್ಲಪ್ಪ) ಹೆಸರಿನ ಹಿಂದೆ ಹೋದರೆ ಮತ್ತಷ್ಟು ಗೊಂದಲವೇ.

    “alien” ಅನ್ನಿಸಿಕೊಳ್ಳುವುದಕ್ಕಿಂತ ಅತಿಥಿ ಅನ್ನಿಸಿಕೊಂಡೇನು. ಯಾಕೆಂದರೆ, ಶ್ಲೋಕದ ಎರಡನೇ ಸಾಲನ್ನು ತಗೊಂಡರೆ,
    “ಅನಿತ್ಯಂ ಹಿ ಸ್ಥಿತೋ ಯಸ್ಮಾತ್ತಸ್ಮಾದತಿಥಿರುಚ್ಯತೇ” ಅನ್ನುವುದು “ನಿತ್ಯವೂ ಇರದವನು, (ಅನಿತ್ಯನಾದವನು) ಅತಿಥಿ ಎಂದು ಕರೆಯಲ್ಪಡುತ್ತಾನೆ” ಎಂದಾಗುತ್ತದೆ. ಅಂದರೆ ಇಲ್ಲಿ ನಿತ್ಯ ಪದಕ್ಕೆ ಒಂದು ಹಗಲು/ಇರುಳುಗಳ ಕಟ್ಟುಪಾಡು ಇಡದೆ, ಇಲ್ಲಿಯೇ ನೆಲೆ ನಿಲ್ಲದವನು ಅನ್ನುವ ವಿಶಾಲಾರ್ಥ ಜೋಡಿಸಲೇ? ಆಗ ಅನಿವಾಸಿ ಅನಿತ್ಯರಾದ ನಮ್ಮ ಮನಸ್ಸಿಗೆ ಒಂದಿಷ್ಟು ಸಮಾಧಾನ ಸಿಕ್ಕೀತೆ?
    ನೀವೇನಂತೀರಿ?

  2. “ಆಗ ಅನಿವಾಸಿ ಅನಿತ್ಯರಾದ ನಮ್ಮ ಮನಸ್ಸಿಗೆ ಒಂದಿಷ್ಟು ಸಮಾಧಾನ ಸಿಕ್ಕೀತೆ?” –

    ಅಲ್ಲಿದೆ ನಮ್ಮನೆ ಇದು ಸುಮ್ಮನೆ ಅಂದುಕೊಳ್ಳುವ ಹಿತಾನುಭವ 🙂

  3. ನಮಸ್ಕಾರ,

    ಅತಿಥಿ ಎಂದರೇನು ಎಂಬುದನ್ನು ವಿವರಿಸುವಾಗ, ನನಗೆ ಧನ್ಯವಾದಗಳನ್ನು ಅರ್ಪಿಸಿದ್ದಕ್ಕಾಗಿ ನಿಮಗೂ ನನ್ನಿ. ಈ ಪದ್ಯದ ಹಿನ್ನೆಲೆಯಲ್ಲಿ, “ಅತಿಥಿ” ಎಂಬುದಾಗಿ ಯಾರನ್ನಾದರೂ ಕರೆಯಲು ಸ್ವಲ್ಪ ಮುಜುಗರವಾಗುತ್ತದೆ. “ಆಪತ್ತಿಗಾದವನೇ ನೆಂಟ” ಎಂಬ ನಾಣ್ಣುಡಿಯೇ ಇರಲಿ ಬಿಡಿ 😉

  4. ಈ ಪದ್ಯದ ಹಿನ್ನೆಲೆಯಲ್ಲಿ, “ಅತಿಥಿ” ಎಂಬುದಾಗಿ ಯಾರನ್ನಾದರೂ ಕರೆಯಲು ಸ್ವಲ್ಪ ಮುಜುಗರವಾಗುತ್ತದೆ. “ಆಪತ್ತಿಗಾದವನೇ ನೆಂಟ” ಎಂಬ ನಾಣ್ಣುಡಿಯೇ ಇರಲಿ ಬಿಡಿ 😉

    – ಸುನಿಲರೇ, ತುಳಸೀವನಕ್ಕೆ ಸ್ವಾಗತ. ಇಲ್ಲಿಗೆ ಮೊದಲಬಾರಿ ಬಂದಿರುವ ನೀವು ಮತ್ತೆ ಮತ್ತೆ ಬರುತ್ತೀರೆಂಬ ನಂಬಿಕೆಯಿಂದ ನಿಮ್ಮನ್ನು ಅತಿಥಿ ಎಂದು ಕರೆಯುವುದಿಲ್ಲ. 🙂

  5. ಅತಿಥಿಯ ವಿಶ್ಲೇಷಣೆಯ ಬಳಿಕ “ಅಭ್ಯಾಗತ”ರು ಬರುತ್ತಾರೆಯೆ?
    ಆ ಪದವೂ ಒಂದಿಷ್ಟು ಗೊಂದಲ ಹುಟ್ಟಿಸುವಂಥದ್ದೇ. ನನಗೆ ತಿಳಿದಿರುವಂತೆ, ಇಬ್ಬಗೆಯ ಅರ್ಥ ವಿವರಣೆಗಳನ್ನು ಕೇಳಿದ್ದೇನೆ. ಸರಿಯಾಗಿ ತಿಳಿದವರು ಈ ಸಂದೇಹ ಪರಿಹರಿಸುತ್ತೀರಾ?

  6. ಕ್ಷಮಿಸಿ, ಇಬ್ಬಗೆಯ ಅರ್ಥ ಯಾವ್ಯಾವುವೆಂದು ಹೇಳಲು ಮರೆತೆ…

    (೧) ಅಭ್ಯಾಗತ ಅಂದರೆ ಕರೆಯದೇ ಬಂದವನು (ಅತಿಥಿ ಕರೆಸಿಕೊಂಡು ಬಂದವ- ಆಮಂತ್ರಿತ)

    (೨) ಅಭ್ಯಾಗತನೇ ಆಮಂತ್ರಿತ…!?

    ಇವೆರಡರಲ್ಲಿ ಯಾವುದು ಸರಿ?

  7. ಅಭ್ಯಾಗತನೂ ಅತಿಥಿಯೇ. ಆದರೆ ಅನಿರೀಕ್ಷಿತವಾಗಿ ಬಂದವನು ಎಂದು ನಾನು ತಿಳಿದಿದ್ದೇನೆ.

  8. ನಮ್ಮ ತಿಥಿ ಮಾಡಲು ಯಾರು ನಮ್ಮ ಮನೆಗೆ ಬರುತ್ತಾರೋ ಅವರೇ ನಮ್ಮ ಅತಿಥಿಗಳು

  9. ಅಭ್ಯಾಗತ – ಈಗಷ್ಟೇ ಬಂದವರು ಎಂದಿರಬಹುದೇ ಅರ್ಥ ಮತ್ತು ಭಾವ..? ಸುನಾಥರ ಉತ್ತರ ಓದಿ ತುಂಬ ನಗು ಬಂತು..

  10. ಅಭಿ + ಆಗತ = ಅಭ್ಯಾಗತ (ಯಣ ಸಂಧಿ).

    ಅಭಿ = ಈಗ (ಇದು ಹಿಂದಿ ಶಬ್ದ).
    ಆಗತ = ಬಂದವನು (ಇದು ಸಂಸ್ಕೃತ ಶಬ್ದ).
    ಅಭ್ಯಾಗತ = ಈಗಷ್ಟೇ ಬಂದವನು.

    ಅರ್ಥ ವಿಶ್ಲೇಷಣೆ – ಭಾಗವತರು

  11. “ನಮ್ಮ ತಿಥಿ ಮಾಡಲು ಯಾರು ನಮ್ಮ ಮನೆಗೆ ಬರುತ್ತಾರೋ ಅವರೇ ನಮ್ಮ ಅತಿಥಿಗಳು.”

    – ಸುನಾಥರೇ, ನೀವು ಅತಿಥಿಗಳಿಂದ ಬಹಳ ನೊಂದಿದ್ದೀರಿ ಅನಿಸುತ್ತಿದೆ.

    ಭಾಗವತರೇ, ನಿಮ್ಮ ಅರ್ಥ ವಿಶ್ಲೇಷಣೆ ಅದ್ಭುತವಾಗಿದೆ.

    – ಅಭ್ಯಾಗತ – ಈಗಷ್ಟೇ ಬಂದವರು ಎಂದಿರಬಹುದೇ ?

    ಸಿಂಧು, ನೀವು ಭಾಗವತರ ಅಭಿ ಆಗತ ಎಂಬ ವಿಶ್ಲೇಷಣೆಯನ್ನೇ ಆಧಾರವಾಗಿಟ್ಟುಕೊಂಡಂತಿದೆ. 🙂

  12. ಜಗಲಿ ಭಾಗವತರ ಹೊಸ ವ್ಯಾಕರಣ ತುಂಬ ಸ್ಫೂರ್ತಿದಾಯಕವಾಗಿದೆ.(ಅಭೀ+ಆಗತ= ಅಭ್ಯಾಗತ!). ಅವರು “ಪಾಣಿನಿ-ಭಾಗವತ ವ್ಯಾಕರಣ” ಎನ್ನುವ ವ್ಯಾಕರಣ ಗ್ರಂಥ ಬರೆಯುತ್ತಿದ್ದರೆ, ಅದಕ್ಕೆ ನನ್ನ ಮೂರು ಕಿರು ಕೊಡುಗೆಗಳನ್ನು ಈ ಮೂಲಕ ಸಮರ್ಪಿಸುತ್ತಿದ್ದೇನೆಃ
    (೧) ಜೋಶಿ= ಜೋಶ (ಹಿಂದಿ) ಇದ್ದವನು= ಉತ್ಸಾಹ ಇದ್ದವನು
    (೨) ದೋಷಿ= ದೋಷ (ಸಂಸ್ಕೃತ) ಇದ್ದವನು.(Note: ಶ್ರೀ ದೋಷಿ ಇವರು ಭಾರತೀಯ ಕ್ರಿಕೆಟ ಟೀಮಿನಲ್ಲಿ spin bowler ಆಗಿ ಆಡಿದ್ದಾರೆ.)
    (೩) Democracy=Demon+cracy(ಕನ್ನಡದ ಅಕ್ಷರಲೋಪ ಸಂಧಿ)
    (=ರಾಕ್ಷಸ ರಾಜ್ಯ)
    ಭಾಗವತರೆ,
    ನಿಮ್ಮ ವ್ಯಾಕರಣ ಗ್ರಂಥ ವಿಶಾಲ ತಳಹದಿಯ ಮೇಲೆ ಬೇಗನೇ ಬರಲೆಂದು ಹಾರೈಸುತ್ತೇನೆ.

Leave a Reply to ಜಗಲಿ ಭಾಗವತ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.