ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?

ಭಾರತದ ಮುಖ್ಯ ಭೂಮಿ ದೂರಾಗತೊಡಗಿತು. ಸರಿಯುತ್ತಿದ್ದ ಭಾರತವನ್ನು ಸುಮಾರು ಹೊತ್ತು ಸುಮಾರು ಹೊತ್ತು ವೀಕ್ಷಿಸಿದ ಚಂದ್ರು ನನ್ನತ್ತ ತಿರುಗಿ ನನ್ನ ಕೈಕುಲುಕಿದರು. ನಾನು ಅವರತ್ತ ತಿರುಗಿ ಏಕೆನ್ನುವಂತೆ ನೋಡಿದೆ.

“ಈ ದೇಶವನ್ನು ಒಂದು ಸಾರಿಯಾದರೂ ನಮ್ಮ ಜೀವಿತದಲ್ಲಿ ಬಿಟ್ಟು ಹೋಗುತ್ತಿದ್ದೆವಲ್ಲ” ಎಂದರು.

ನನಗೆ ಭಾರತದ ಭಯಾಜನಕ ಸ್ವರೂಪ ಒಮ್ಮೆಲೆ ಕಣ್ಣಿಗೆ ಕಟ್ಟಿತು. “ದರಿದ್ರ ದೇಶ. ನೋಡಿ ಹೇಗಿದೆ ಆ ಬಡತನ, ಆ ರಾಜಕಾರಣಿಗಳು. ಆ ಭ್ರಷ್ಟಾಚಾರ, ಆ ಜನಸಂಖ್ಯೆ, ಆ ಪರಿಸರ ನಾಶ ಸಾಕಪ್ಪ! ಈ ಶನಿಯನ್ನು ಬಿಟ್ಟು ದೂರ ಹೋಗುತ್ತಿರುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ” ಎಂದೆ.

ಇಬ್ಬರೂ ಸೇರಿಕೊಂಡು ಭಾರತವನ್ನು ಮನಸ್ಸು ತೃಪ್ತಿಯಾಗುವರೆಗೂ ಬಯ್ದೆವು. ನಾವು ಇಷ್ಟೊಂದು ದೇಶಪ್ರೇಮವೇ ಇಲ್ಲದವರೆಂದು ಗೊತ್ತಾದುದು ಆಗಲೇ………..”

ಈ ಪುಸ್ತಕವನ್ನು ಈಗಾಗಲೇ ಬಹಳಷ್ಟು ಜನ ಓದಿ ಹಳೆಯದಾಗಿರಬೇಕು. ನನಗೆ ಈಗ ಸಿಕ್ಕಿತು. ಇದರಲ್ಲಿ ಬರುವ ಕೆಲವು ವಾಕ್ಯ, ಸಂಭಾಷಣೆಗಳನ್ನು ಗುಂಪಿನಲ್ಲಿ ಕುಳಿತು ಗಟ್ಟಿಯಾಗಿ ಓದಿ ನಗಬೇಕೆನ್ನಿಸುತ್ತದೆ. ಈ ಪುಸ್ತಕ ಓದುವಾಗ ಆಗಾಗ ನಗಲು ನನಗೆ ಕನಿಷ್ಟ ಒಂದೆರಡು ನಿಮಿಷಗಳು ಬೇಕಾಗುವುದರಿಂದ ಮುಗಿಸುವುದು ಬಹಳ ನಿಧಾನವಾಗಬಹುದು. ಅಷ್ಟರಲ್ಲಿ ಈ ಪುಸ್ತಕ ಯಾವುದಿರಬಹುದೆಂದು ಊಹಿಸುತ್ತೀರಾ? ಒಂದು ಸುಳಿವು – ಇದು ತಿಳಿಹಾಸ್ಯದ ಶೈಲಿಯಲ್ಲಿರುವ ಒಂದು ಪ್ರವಾಸ ಕಥನ.

ಉತ್ತರಿಸುವವರೂ ಉತ್ತರಿಸದವರೂ ಇಲ್ಲಿ ಸರಿ ಸಮಾನರು. ಯಾಕೆಂದರೆ ಯಾರಿಗೂ ಬಹುಮಾನವಿಲ್ಲ! 🙂

ಗಾನಜೀವನೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ಅಶ್ವಿನಿ
ಸಂಗೀತ – ವಿಶ್ವೇಶ್ ಭಟ್
ಆಲ್ಬಮ್ – ಘಮ ಘಮ

ಹಾಡು ಕೇಳಿ

ಆವ ರಾಗವ ಪಾಡುವೇ – ಓ ಚೆಲುವೇ
ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ|| ಪ||

ಆವರಾಗವ ಪಾಡಿ – ಆವ ಮಾಟವ ಮಾಡಿ |
ಆವ ಜೀವವ ಕಾಡಿ – ನೀನಿಂತು ನಲಿಯುವೆ || ಅನು ಪಲ್ಲವಿ||

ಕಲಹಂಸೆ ಲಲಿತಸ್ವರೆ – ಓ ಮನೋಹರೆ|
ವಿಲಸಿತ ವಿವರಾಧರೇ – ಓ ಚದುರೇ ||
ಮನಸಿನ ಗುಹೆಯಲಿ – ಮಲಗಿರ್ಪ ದನಿಗಳ |
ಹೊನಲಾಗಿ ಹರಿಸಿ ಜಾ-ಲಿಸುವೆ ನಮ್ಮಸುಗಳ ||

ಮಧುರ ಗೀತಾಯುಧದೆ ನಮ್ಮಯ |
ಚದುರ ಚೆನ್ನಿಗ ಕೇಶವೇಶನ ||
ಹೃದಯರಾಜ್ಯವ ಸೂರೆಗೊಳ್ಳುವ |
ಮದನಬಲ ಪಟ್ಟಾಧಿಕಾರಿಣಿ ||

***

ತಿಳಿಮುಗಿಲ ತೊಟ್ಟಿಲಲಿ – ಎಸ್.ವಿ.ಪರಮೇಶ್ವರ ಭಟ್ಟ

ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ
ಸಂಗೀತ: ಸಿ. ಅಶ್ವಥ್
ಗಾಯಕ: ಡಾ. ರಾಜ್‍ಕುಮಾರ್

ಹಾಡು ಕೇಳಿ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು |

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು|

ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ
ಜೇನುಗನಸಿನ ಹಾಡು ಕೇಳುತಿತ್ತು |

ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು |

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತಿತ್ತು |

ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು |

ಹಯಗ್ರೀವ ಹಯಗ್ರೀವೇತಿ..

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ .
ನರಂ ಮುಂಚನ್ತಿ ಪಾಪಾನಿ ದರಿದ್ರಮಿವ ಯೋಷಿತಃ

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ .
ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾ ಪ್ರವಾಹವತ್

ಈ ಹಯಗ್ರೀವದ ಸ್ಮರಣೆ ನನಗೆ ಸುಮ್ಮಸುಮ್ಮನೆ ಆಗಿದ್ದಲ್ಲ. ದಟ್ಸ್ ಕನ್ನಡದಲ್ಲಿ ವಾಣಿ ಅದರ ಬಗ್ಗೆ ಬರೆದಾಗಿನಿಂದ. ಹಾಗೆ ಮರೆತು ಸುಮ್ಮನಾಗುತ್ತಿದ್ದೆನೇನೋ. ಅಷ್ಟರಲ್ಲಿ ಕನ್ನಡಪ್ರಭದವರಿಂದ ಮತ್ತೆ ಹಯಗ್ರೀವ ಸ್ಮರಣೆ. ಸಿಹಿ ತಿಂಡಿಗಳನ್ನು ಅತಿಯಾಗಿ ಇಷ್ಟಪಡುವ ನನ್ನ ಮನಸ್ಸನ್ನು ಚಂಚಲಗೊಳಿಸುವ ಈ ಜಾಲ ಪಿಶಾಚಿಗಳ ಸಂಚು ಕೊನೆಗೂ ಯಶಸ್ವಿಯಾಯಿತು. ನಮ್ಮ ಮನೆಯಲ್ಲಿಯೂ ಹಯಗ್ರೀವ ದೇವರ ಅವತಾರವಾಯಿತು.

ಇತರ ಸಿಹಿತಿಂಡಿಗಳಂತೆ ಬೆಣ್ಣೆ,ತುಪ್ಪಗಳಂತಹ ಕೊಬ್ಬು ಪದಾರ್ಥಗಳನ್ನು ಅತಿಯಾಗಿ ಬೇಡದ ಆರೋಗ್ಯಕರ ತಿನಿಸು. ತಯಾರಿಸಲು ಸುಲಭ ಕೂಡ. ಹದ ಹೆಚ್ಚು ಕಡಿಮೆಯಾಗಿ ಹಾಳಾಗುವ ಸಂಭವ ಇಲ್ಲ. ಸಿಹಿ ಕಡಿಮೆಯಾದರೆ ಸಕ್ಕರೆ ಬೆರೆಸಿ ತಿನ್ನಬಹುದು. ಹೆಚ್ಚಾದರೆ ಮಾತ್ರ ಏನೂ ಮಾಡುವ ಹಾಗಿಲ್ಲ.:)ತಯಾರಿಸುವ ವಿಧಾನ ಎರಡೂ ತಾಣಗಳಲ್ಲಿಯೂ ಲಭ್ಯವಿದೆ.

ಹಯಗ್ರೀವ ದೇವರ ಪರಮ ಭಕ್ತರಾದ ಶ್ರೀವಾದಿರಾಜರು ನೆಲೆಸಿರುವ ಸ್ಥಳ ಸಿರಸಿ ಸಮೀಪದ ಸೋಂದಾ. ಯಾವಾಗ ನೆನಪಾದರೂ ಮನಸ್ಸನ್ನು ಪ್ರಸನ್ನಗೊಳಿಸುವ ನೆಮ್ಮದಿಯ ನೆಲೆ, ಪ್ರಕೃತಿಯ ಮಡಿಲಲ್ಲಿರುವ ಸುಂದರ ಭಕ್ತಿ ತಾಣ. ಆ ಬಗ್ಗೆ ವಿಕಿಪೀಡಿಯಾಗಾಗಿ ನಾನೇ ತಯಾರಿಸಿ ಹಾಕಿರುವ ಲೇಖನ ಇಲ್ಲಿದೆ.

ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕ – ಡಾ.ರಾಜ್‍ಕುಮಾರ್
ಸಂಗೀತ – ಸಿ.ಅಶ್ವಥ್

ಹಾಡು ಕೇಳಿ

ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ
ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ |

ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು
ತೆರೆದ ಕಂಗಳುದಕ ಸುರಿಸಿ ತೊಳೆದುವೆನ್ನ ಮನವನು
ಕಣ್ಣ ಹನಿಯು ಮಣಿಯ ತೆರದಿ ಕಣ್ಣಿನೊಡವೆ ಆಯಿತು
ತುಟಿಗೆ ಬಂದ ಮಾತು ತಿರುಗಿ ಬಂದ ಕಡೆಗೆ ಹೋಯಿತು ||

ಮುಗಿಲ ಹಿಂದೆ ಹಗಲು ಜಾರಿ ಹೊನ್ನ ಬೆಳಕನೆರೆಯಿತು
ಮೌನದೊಳಗೆ ಪ್ರೇಮ ತೋರಿ ಹಂಬಲ ಮಳೆಗರೆಯಿತು
ನಲ್ಲೆ ಮುಡಿದ ಮೊಲ್ಲೆಯರಳು ‘ಇಲ್ಲೇ ನಿಲ್ಲಿ’ರೆಂದಿತು
ಓರೆಗಣ್ಣಿನೊಂದು ಹೊರಳು ‘ಹೋಗಬೇಡಿ’ರೆಂದಿತು ||

ಇರುಳನಲ್ಲೇ ಕಳೆಯಲಿಲ್ಲ, ಅಪ್ಪಿ ಮುತ್ತನೊತ್ತಲಿಲ್ಲ
ಕಣ್ಣನೀರನೊರಸಲಿಲ್ಲ, ಒರಟನಾದೆನು ಏತಕೆ?
ಸರಸ ವಿರಸವಾಯಿತಲ್ಲ, ಹೊರಟು ಬಂದೆನು ಏತಕೆ?||

*   *    *     *    *    *    *    *   *    *

ಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ

ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವು ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ;

ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;
ಮರವನಪ್ಪಿದ ಬಳ್ಳಿ ಬಳುಕುವಂತೆ ;

ನಾವು ಆಡುವ ಮಾತು ಹೀಗಿರಲಿ ಗೆಳೆಯ,
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ,
ಮೌನ ಮೊಗ್ಗೆಯನೊಡಿದು ಮಾತರಳಿ ಬರಲಿ
ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ.

***

ಉದಯ ಟಿವಿ ಮತ್ತು someವೇದನೆ

ಉದಯ ಟಿವಿ ವೀಕ್ಷಕರಿಗೆ ಎರಡು ಸಂತೋಷದ ಸುದ್ದಿಗಳಿವೆ.ಉದಯ ಟಿವಿಯಲ್ಲಿ ಕೊನೆಗೂ “ಸಂವೇದನೆ” ಎಂಬ ಒಂದು ಉತ್ತಮ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿಂದೆ ಶೈಲಜಾ ಸಂತೋಷ್ ನಡೆಸಿಕೊಡುತ್ತಿದ್ದ “ಪರಿಚಯ” ಕಾರ್ಯಕ್ರಮದ ಮಾದರಿಯದು. ಈ ಬಾರಿ ಇದನ್ನು ಈಶ್ವರ ದೈತೋಟ ನಡೆಸಿಕೊಡುತ್ತಿದ್ದಾರೆ. ಶೈಲಜಾ ಸಂತೋಷ್ ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಹಳಷ್ಟು ಪ್ರಮುಖರನ್ನು ಮಾತಾಡಿಸಿರುವುದರಿಂದ ದೈತೋಟರ ಕೆಲಸ ಕಷ್ಟವಿದೆ. ಈವರೆಗೆ ಬಂದ ಅತಿಥಿಗಳಲ್ಲಿ ಅಂತಹ ಆಸಕ್ತಿ ಮೂಡಿಸುವವರಾರು (ನನಗೆ) ಇರಲಿಲ್ಲ. ಎಷ್ಟು ದಿನ ಮುಂದುವರೆಯುತ್ತದೋ ನೋಡಬೇಕು. ಮುನ್ನೋಟದಲ್ಲಿ ಎಸ್. ಎಲ್. ಭೈರಪ್ಪನವರು ಕಾಣಿಸಿಕೊಳ್ಳುವುದರಿಂದ ಆ ದಿನಕ್ಕಾಗಿ ನಿರೀಕ್ಷಿಸುತ್ತಿದ್ದೇನೆ.

ಇನ್ನೊಂದು: ನಾಗಾಭರಣ ನಿರ್ದೇಶನದ “ಅಪ್ಪ” ಧಾರಾವಾಹಿ ಅರ್ಧದಲ್ಲೇ ಎತ್ತಂಗಡಿಯಾಗಿರುವುದು! ಈ ಧಾರಾವಾಹಿ ನೋಡಿದಾಗಲೆಲ್ಲಾ “ಒಳ್ಳೆಯವರ ಮಾನ ಹಳ್ಳಿಯಲ್ಲಿ ಹೋಯಿತು” ಎಂಬ ಗಾದೆಮಾತಿನಂತೆ, ನಾಗಾಭರಣರು ಹಿರಿತೆರೆಯಲ್ಲಿ ಪಡೆದುಕೊಂಡ ಹೆಸರನ್ನು ಕಿರುತೆರೆಯಲ್ಲಿ ಅನ್ಯಾಯವಾಗಿ ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ಮಮ್ಮಲ ಮರುಗುತ್ತಿದ್ದೆ. ಈ ಹಿಂದೆ ಪ್ರಸಾರವಾಗುತ್ತಿದ್ದ “ಮಹಾಮಾಯೆ” ಎಂಬ ಮಾಟ-ಮಂತ್ರದ ಧಾರಾವಾಹಿ ಕೂಡ ಹಾಗೆಯೇ ಇತ್ತು.

ಕೆಲವು ದಿನಗಳ ಹಿಂದೆ ಅಂತರಂಗದಲ್ಲಿ – “ಸಣ್ಣಪುಟ್ಟ ನಿರ್ದೇಶಕರಿರಲಿ, ನಾಗಾಭರಣರಂತಹ ಉತ್ತಮ ನಿರ್ದೇಶಕರಿಗೇನಾಗಿದೆ? ಏಕ್ತಾ ಕಪೂರ್…ಇತ್ಯಾದಿಗಳೇ ವಾಸಿ, ಅವರು ಕೊನೆ ಪಕ್ಷ ಕಥೆಯನ್ನು ಬಬಲ್ ಗಮ್ಮಿನಂತೆ ಎಳೆದರೆ ಇವರಿಗೆ ಆ ಕಷ್ಟವೂ ಬೇಕಿಲ್ಲ. ನಾಗಾಭರಣರ “ಅಪ್ಪ” ಧಾರಾವಾಹಿಯಲ್ಲಿ ಎಪಿಸೋಡ್ ಪೂರ್ತಿ ಹಿಂದಿನ ಕಥೆಯನ್ನೇ ತೋರಿಸುತ್ತಾರೆ. (ಫ್ಲಾಷ್ ಬ್ಯಾಕ್ ತರ- ಒಂದೋ ಎರಡು ದೃಶ್ಯ ತೋರಿಸುವ ಬದಲು) ಧಾರಾವಾಹಿ ಸಾವಿರ ಕಂತಿಗೆ ಎಳೆಯಲು ಈ ಹೊಸ ತಂತ್ರ ಅನುಸರಿಸುತ್ತಿರಬಹುದು!” – ಎಂದು ನಾನು ಅಲವತ್ತುಕೊಂಡಿದ್ದು ಉದಯ ಟಿವಿ ನಿರ್ದೇಶರಿಗೇನಾದರೂ ಕೇಳಿಸಿತಾ? 🙂

ಏನೋ, ಉದಯ ಟಿವಿಯಲ್ಲಿ ಹೇಳೋರ್ ಕೇಳೋರ್ ಯಾರೋ ಇದಾರೆ ಅಂತ ಆಯಿತು!