2 thoughts on “ಭಾಗ-7”

  1. ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ ತೂಗುತ್ತಿದ್ದ ಶಾರದಮ್ಮನವರಿಗೆ ಪಕ್ಕದ ಮನೆಯ ಹುಡುಗ ಓಡೋಡಿ ಬಂದು ತೇಕುತ್ತಾ ಹೇಳಿದ ಸುದ್ದಿ ದಿಗಿಲು ಹುಟ್ಟಿಸಿತ್ತು. “ದೊಡ್ಡಮ್ಮಾ, ಪೇಟೆಯಲ್ಲಿ ಎಲ್ಲ ಮಾತಾಡ್ತಿದ್ದಾರೆ, ವಲ್ಲೀ ಅಕ್ಕನಿಗೆ ತೊಂದರೆ ಆಗ್ತಿದೆಯಂತೆ. ಅವ್ಳ ಹಾಸ್ಟೆಲ್ ಹೊರಗೆ ರೌಡಿಗಳಿದಾರಂತೆ. ಅವ್ಳು ಯಾರೋ ಮಂತ್ರಿ ಜೊತೆ ಮಾತಾಡಕ್ಕೆ ಅವ್ಳ ಫ್ರೆಂಡ್ ಜೊತೆ ಹೋಗಿದ್ದು ಸರಿಯಲ್ವಂತೆ. `ಇನ್ನು ಅವ್ಳ ಕತೆ ಗೋ…ವಿಂದ’, ಅಂತ ಏನೇನೋ ಮಾತಾಡ್ತಿದಾರೆ ದೊಡ್ಡಮ್ಮ.” ಅಂದ. ಶಾರದಮ್ಮ “ಏನೂಂದ್ರೆ, ಇಲ್ಲಿ ಬನ್ನಿ… ಕೇಳ್ರೀ… ಏನೂಂದ್ರೇ…” ಕೂಗಿಕೊಳ್ಳುತ್ತಾ ಎಚ್ಚರತಪ್ಪಿ ಬಿದ್ದುಬಿಟ್ಟರು.

  2. ಪ್ರಪಂಚದ ವ್ಯವಹಾರಗಳನ್ನೆಲ್ಲ ಬದಿಗಿಟ್ಟು ದೇವಧ್ಯಾನ ಮಾಡಬೇಕೆಂದು ಇಚ್ಛಿಸುತ್ತಾ ಮಾಡು ದಿಟ್ಟಿಸುತ್ತಾ ಮಲಗಿದ್ದ ಶಾಸ್ತ್ರಿಗಳಿಗೆ ಮಡದಿಯ ಕೂಗು ಪಕ್ಕನೆ ದಾಖಲಾಗಲಿಲ್ಲ. ಸುದ್ದಿ ತಂದ ಹುಡುಗನೇ ಒಳಗೆ ಬಂದು ಕೋಣೆಯ ಬಾಗಿಲು ದೂಡಿ ವಿಷಯ ತಿಳಿಸಿದಾಗ ದಡಬಡಿಸಿ ಎದ್ದರು. ಚೊಂಬು ನೀರಿನೊಡನೆಯೇ ಚಾವಡಿಗೆ ನಡೆದು ಶಾರದೆಯ ಕೆನ್ನೆ ತಟ್ಟಿ, ಗಲ್ಲ ಅಲುಗಿಸಿ, ಹಣೆಗೆ, ಕಣ್ಣಿಗೆ ನೀರು ತಟ್ಟಿದರು. “ಲೇ, ಶಾರದಾ, ಏಳೇ, ಏನಾಯ್ತೇ, ಏಳೇ ಮೇಲೆ. ನನ್ನನ್ನು ಬಿಟ್ಟು ನೀನು ಅದ್ಹ್ಯಾಗ್ ಹೋಗ್ತೀಯೇ… ಏಳೇ, ಕಣ್ಬಿಡೇ…!!” ಗದ್ಗದ ಸ್ವರದೊಂದಿಗೂ ಪ್ರೀತಿ ಒಸರುತ್ತಿದ್ದ ಶಾಸ್ತ್ರಿಗಳ ಮುಖವನ್ನೇ ದಿಟ್ಟಿಸುತ್ತಾ ನಿಂತಿದ್ದ ಜ್ಞಾನೋದಯ ಆದವನಂತೆ ಒಮ್ಮೆಲೇ ಓಡಿ ಹೋಗಿ ತನ್ನ ತಾಯಿಯನ್ನು ಕರೆತಂದ. ಇನ್ನೊಂದು ಮಹಿಳೆಯನ್ನು ನೋಡುತ್ತಲೇ ಶಾಸ್ತ್ರಿಗಳು ಪಕ್ಕಕ್ಕೆ ಸರಿದು ತನ್ನವಳನ್ನು ಅವರ ಆರೈಕೆಗೆ ಬಿಟ್ಟುಕೊಟ್ಟರು. ಗಂಡ ಹಣೆಗೆ, ಕಣ್ಣಿಗೆ ತಟ್ಟಿದ್ದ ನೀರಿಗೋ, ಅರಿವಿನ ಪರಿಗೋ, ಶಾರದಮ್ಮ ಮೆಲ್ಲನೆ ಕಣ್ಣುಬಿಟ್ಟರು. “ಏನೂಂದ್ರೇ, ಬೆಂಗಳೂರಿಗೆ ಹೋಗೋಣ, ನಡೀರಿ” ಅಂದರು.

Your email address will not be published. Required fields are marked *