ರಾಜೀವ ಕೈಲಿದ್ದ ಬ್ರೀಫ್‍ಕೇಸನ್ನು ಮಂಚದ ಮೇಲೆ ಎಸೆದ ಸದ್ದಿಗೆ ಕಂಪ್ಯೂಟರಿನ ಚಾಟ್ ವಿಂಡೋದಲ್ಲಿ ಯಾರೊಡನೆಯೋ ಹರಟೆಯಲ್ಲಿ ಮುಳುಗಿಹೋಗಿದ್ದ ಧಾರಿಣಿ ತುಸು ಬೇಸರದಿಂದಲೇ ಅತ್ತ ತಿರುಗಿದಳು. ರಾಜೀವನ ಮುಖ ಎಂದಿನಂತಿರಲಿಲ್ಲ. ತಲೆ ಕೆದರಿಹೋಗಿತ್ತು. ಬೆಳಗ್ಗೆ ಧರಿಸಿಕೊಂಡು ಹೋಗಿದ್ದ ಬಿಳಿಯ ಶರ್ಟ್ ಮುದುರಿತ್ತು. “ಯಾರೊಂದಿಗಾದರೂ ಹೊಡೆದಾಡಿಕೊಂಡು ಬಂದೆಯಾ?” ಎಂದು ತಮಾಷೆಯಾಗಿ ಕೇಳಲು ಹೊರಟವಳನ್ನು ರಾಜೀವನ ಬಿಗಿದ ಮುಖಭಾವ ತಡೆದು ನಿಲ್ಲಿಸಿತು. ರಾಜೀವನ ಕಣ್ಣುಗಳು ಅತ್ತಂತೆ ಕೆಂಪಾಗಿದ್ದವು. ಯಾರದೋ ಮೇಲಿನ ಕೋಪಕ್ಕೆ ಪ್ರತೀಕಾರ ತೀರಿಸುವಂತೆ ಅವನ ಹಲ್ಲುಗಳು ಕಟಕಟಿಸುತ್ತಿದ್ದವು.

ಧಾರಿಣಿಗೆ ರಾಜೀವನ ಸ್ಥಿತಿಯನ್ನು ಕಂಡು ಭಯವಾಯಿತು. ಎಂದೂ ಸಹನೆಯ ಮೂರ್ತಿಯಾಗಿರುವ ರಾಜೀವನಿಗೇನಾಗಿದೆ? ಡೈನಿಂಗ್ ಟೇಬಲ್ಲಿನ ಮೇಲಿದ್ದ ಗಾಜಿನ ದೊಡ್ಡ ಲೋಟದ ತುಂಬಾ ತಣ್ಣೀರು ತುಂಬಿಸಿ ತಂದು ರಾಜೀವನ ಮುಂದಿಟ್ಟಳು. ರಾಜೀವ ಇಡೀ ಲೋಟದ ನೀರನ್ನು ಗಟಗಟನೆ ಕುಡಿದ. ಅವನು ಯಾವುದೋ ಆವೇಗವನ್ನು ಅಡಗಿಸಿಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿದ್ದಂತಿತ್ತು.

ಧಾರಿಣಿ ಕೇಳಲೋ ಬೇಡವೋ ಎಂಬ ಅನುಮಾನದಲ್ಲಿಯೇ ಮೆಲ್ಲನೆ – “ರಾಜೀವ, ಏನಾಯಿತು?” ಎಂದಳು. ರಾಜೀವ ಧಾರಿಣಿಯ ಪ್ರಶ್ನೆಗೆ ಉತ್ತರಿಸದೆ ಸುಮ್ಮನೆ ಅವಳ ಕಡೆಗೊಮ್ಮೆ ಅಸಹಾಯಕ ನೋಟ ಹರಿಸಿದ.

***

ಪ್ರವಲ್ಲಿಕ ಎದುಸಿರು ಬಿಡುತ್ತಾ ಬೆದರಿದ ಹರಿಣಿಯಂತೆ ರೂಮೊಳಗೆ ಬಂದು ದಬ್ ಎಂದು ಬಾಗಿಲು ಮುಚ್ಚಿದ್ದನ್ನು ಕಂಡು ಫಿಲಂಫೇರ್ ಓದುತ್ತಾ ಮಂಚದ ಮೇಲೆ ಕೂತಿದ್ದ ಕಾಂತಿ ಗಾಭರಿಯಿಂದ ಎದ್ದು `ಏನಾಯ್ತೇ ವಲ್ಲೀ…?’ ಅನ್ನುತ್ತಾ ಪ್ರವಲ್ಲಿಕ ಕಡೆಗೆ ಓಡಿ ಬಂದಳು…

ಪ್ರವಲ್ಲಿಕ ಮೊದಲೇ ಭಯಸ್ತೆ… ಏನೋ ಆಗಬಾರದ್ದು ಆಗಿದೆ … ಅದಕ್ಕೇ ಹೀಗೆ ಕಂಪಿಸುತ್ತಿದ್ದಾಳೆ…ಅಂತ ಕಾಂತಿಗೆ ಖಾತ್ರಿಯಾಯಿತು…
ಅವಳ ಬೆನ್ನು ಸವರಿ ನೀರಿನ ಬಾಟಲು ಕೊಡುತ್ತಾ `ಮೊದಲು ಸುಧಾರಿಸ್ಕೋ ವಲ್ಲೀ…ಏನಾಯ್ತು ನಿಧಾನವಾಗಿ ಹೇಳು…’ ಅಂದಳು ಕಾಂತಿ
ಪ್ರವಲ್ಲಿಕ ಎಷ್ಟು ಗಾಭರಿಯಾದ್ದಳೆಂದರೆ ಸುಧಾರಿಸಿ ಕೊಳ್ಳಲು ಅವಳಿಗೆ ಆ ರಾತ್ರಿ ಪೂರ್ತಿ ಸಾಲದೇನೋ ಅನ್ನಿಸಿತು ಕಾಂತಿಗೆ…

ಏಳು ಹೊಡೆಯಿತು ಢಣ್…ಢಣ್… ಢಣ್…

ನಾನು ಹೋಗಿ ನಿಂಗೂ ಊಟ ತಂದ್ಬಿಡ್ತೀನಿ… ಇಲ್ದಿದ್ರೆ ಏನೂ ಸಿಗಲ್ಲ ಅಷ್ಟೇ… ನಮ್ ಹಾಸ್ಟೆಲ್ ಕಥೆ ನಿಂಗೆ ಗೊತ್ತಲ್ಲಾ… ಎನ್ನುತ್ತಾ ಕಾಂತಿ ಇಬ್ಬರ ತಟ್ಟೇನೂ ತೊಗೊಂಡು ಡೈನಿಂಗ್ ಹಾಲ್ ಕಡೆ ಹೊರಟಳು.

***
ರಾಜೀವ ನ್ಯೂರ್ಯಾಕ್ ನಗರಿಯ ಸುಪ್ರಸಿದ್ದ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ. ಇತ್ತೀಚಿಗೆ ತಾನೇ ತನ್ನ ಪ್ರೀತಿಯ ಹುಡುಗಿ ಧಾರಣಿಯನ್ನು ಮದುವೆಯಾಗಿ ಭಾರತದಿಂದ ಬಂದಿದ್ದ. ಕಂಪಿಸುತ್ತಿದ್ದ ರಾಜೀವ ಧಾರಣಿಗೆ ಟಿ.ವಿ ಆನ್ ಮಾಡಲು ಹೇಳಿದ. ಧಾರಣಿ ರಿಮೋಟ್ ಒತ್ತುತ್ತಿದ್ದಂತೆ ಸಿ.ಎನ್.ಎನ್ ಚಾನಲ್‍ನಲ್ಲಿ ಆ ಸುದ್ದಿ ಮೂಡಿಬರುತಿತ್ತು.

‘ನ್ಯೂರ್ಯಾಕ್‍ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆತ್ಮಾಹುತಿ ದಾಳಿ…’

ಅವತ್ತು ಕ್ಯಾಲೆಂಡರ್ ಸೆಪ್ಟೆಂಬರ್ ೧೧ ತೋರಿಸುತಿತ್ತು…

***

ಧಾರಿಣಿ ಬೊಗಸೆಯಲ್ಲಿ ತನ್ನ ತುಂಬು ಕೆನ್ನೆಗಳ ತುಂಬಿ ಕೂತಿದ್ದಳು ಒಂದಿಷ್ಟೂ ಅಲುಗದೆ…ಕಲಾವಿದನೊಬ್ಬ ಬರೆದ ಚಿತ್ರದಂತೆ…ತನ್ನ ಹತ್ತಿರವಿದ್ದ ಕೀನಿಂದ ಬಾಗಿಲು ತೆರೆದು ಒಳಬಂದ ರಾಜೀವ ಅವಳೆಡೆಯೇ ನೆಟ್ಟನೋಟದಿಂದ ನೋಡಿದ. ಅವನು ಬಂದ ಪರಿವೆಯೇ ಇಲ್ಲದೆ ಧಾರಿಣಿ ಕೂತೇ ಇದ್ದಳು…ಕೆನ್ನೆ ಮೇಲೆ ಕಣ್ಣೀರು ಕರೆಗಟ್ಟಿತ್ತು…ಅವಳು ಬಹಳ ಹೊತ್ತಿನಿಂದ ಹಾಗೇ ಕೂತಿರಬೇಕು…ಎದುರಿಗಿದ್ದ ಟಿ.ವಿ ಏನೋ ಕಿರಿಚಿಕೊಳ್ಳುತ್ತಿತ್ತು. ರಾಜೀವ ಅವಳ ಬಳಿ ಬಂದು ಅವಳ ಭುಜ ಹಿಡಿದು ಅಲುಗಿಸಿದ `ಏನಾಯ್ತು ಧಾರಿಣೀ…’ಧಾರಿಣಿ ನಿಧಾನವಾಗಿ ಎದ್ದು ಬೆರಳಿನಿಂದ ಮುಂಗುರುಳು ನೇವರಿಸಿ ಕೊಳ್ಳುವ ನೆಪದಲ್ಲಿ ಕಣ್ಣು ಕೆನ್ನೆ ಗಳನ್ನು ಒರೆಸಿಕೊಳ್ಳುತ್ತಾ ರಾಜೀವನಿಗೋಸ್ಕರ ಟೀ ಮಾಡಲು ಒಳ ನಡೆದಳು.ರಾಜೀವ ಟಿ.ವಿ. ಕಡೆಗೊಮ್ಮೆ ನೋಡಿದ ಅವನಿಗೆ ಅರ್ಥವಾಯಿತು… ಕಿಚನ್ ಗೆ ಬಂದು ಟೀ ಸೋಸುತ್ತಿದ್ದ ಧಾರಿಣಿಯ ಭುಜ ಬಳಸಿ ಕಕ್ಕುಲತೆಯಿಂದ ಹೇಳಿದ “ನಾಡಿದ್ದಿಗೆ ಆರು ವರ್ಷವಾಗುತ್ತೆ ಧಾರಿಣಿ…ಎಷ್ಟು ನೋಯುತ್ತೀಯಮ್ಮಾ…ಸಮಾಧಾನ ಮಾಡಿಕೋ…ಧಾರಿಣಿ ಮಾತಾಡದೆ ಅವನೆದೆಯಲ್ಲಿ ಮುಖ ಹುದುಗಿಸಿ ಬಿಕ್ಕಳಿಸಿದಳು…

***

8 thoughts on “ಎಲ್ಲಿಂದ ಆರಂಭವೋ? – 1”

  1. ಪ್ರವಲ್ಲಿಕ ಎದುಸಿರು ಬಿಡುತ್ತಾ ಬೆದರಿದ ಹರಿಣಿಯಂತೆ ರೂಮೊಳಗೆ ಬಂದು
    ದಬ್ ಎಂದು ಬಾಗಿಲು ಮುಚ್ಚಿದ್ದನ್ನು ಕಂಡು ಫಿಲಂಫೇರ್ ಓದುತ್ತಾ ಮಂಚದ ಮೇಲೆ ಕೂತಿದ್ದ ಕಾಂತಿ ಗಾಭರಿಯಿಂದ ಎದ್ದು `ಏನಾಯ್ತೇ ವಲ್ಲೀ…?’ ಅನ್ನುತ್ತಾ ಪ್ರವಲ್ಲಿಕ ಕಡೆಗೆ ಓಡಿ ಬಂದಳು…

    ಪ್ರವಲ್ಲಿಕ ಮೊದಲೇ ಭಯಸ್ತೆ… ಏನೋ ಆಗಬಾರದ್ದು ಆಗಿದೆ … ಅದಕ್ಕೇ ಹೀಗೆ ಕಂಪಿಸುತ್ತಿದ್ದಾಳೆ…ಅಂತ ಕಾಂತಿಗೆ ಖಾತ್ರಿಯಾಯಿತು…
    ಅವಳ ಬೆನ್ನು ಸವರಿ ನೀರಿನ ಬಾಟಲು ಕೊಡುತ್ತಾ `ಮೊದಲು ಸುಧಾರಿಸ್ಕೋ ವಲ್ಲೀ…
    ಏನಾಯ್ತು ನಿಧಾನವಾಗಿ ಹೇಳು…’ ಅಂದಳು ಕಾಂತಿ
    ಪ್ರವಲ್ಲಿಕ ಎಷ್ಟು ಗಾಭರಿಯಾದ್ದಳೆಂದರೆ ಸುಧಾರಿಸಿ ಕೊಳ್ಳಲು ಅವಳಿಗೆ
    ಆ ರಾತ್ರಿ ಪೂರ್ತಿ ಸಾಲದೇನೋ ಅನ್ನಿಸಿತು ಕಾಂತಿಗೆ…

    ಏಳು ಹೊಡೆಯಿತು ಢಣ್…ಢಣ್… ಢಣ್…

    ನಾನು ಹೋಗಿ ನಿಂಗೂ ಊಟ ತಂದ್ಬಿಡ್ತೀನಿ… ಇಲ್ದಿದ್ರೆ ಏನೂ ಸಿಗಲ್ಲ ಅಷ್ಟೇ… ನಮ್ ಹಾಸ್ಟೆಲ್ ಕಥೆ ನಿಂಗೆ ಗೊತ್ತಲ್ಲಾ… ಎನ್ನುತ್ತಾ ಕಾಂತಿ ಇಬ್ಬರ ತಟ್ಟೇನೂ ತೊಗೊಂಡು ಡೈನಿಂಗ್ ಹಾಲ್ ಕಡೆ ಹೊರಟಳು

  2. ನ್ಯೂರ್ಯಾಕ್ ನಗರಿಯ ಸುಪ್ರಸಿದ್ದ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ. ಇತ್ತೀಚಿಗೆ ತಾನೇ ತನ್ನ ಪ್ರೀತಿಯ ಹುಡುಗಿ ಧಾರಣಿಯನ್ನು ಮದುವೆಯಾಗಿ ಭಾರತದಿಂದ ಬಂದಿದ್ದ.

    ಕಂಪಿಸುತ್ತಿದ್ದ ರಾಜೀವ ಧಾರಣಿಗೆ ಟಿ.ವಿ ಆನ್ ಮಾಡಲು ಹೇಳಿದ. ಧಾರಣಿ ರಿಮೋಟ್ ಒತ್ತುತ್ತಿದ್ದಂತೆ ಸಿ.ಎನ್.ಎನ್ ಚಾನಲ್‍ನಲ್ಲಿ ಆ ಸುದ್ದಿ ಮೂಡಿಬರುತಿತ್ತು.

    ‘ನ್ಯೂರ್ಯಾಕ್‍ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆತ್ಮಾಹುತಿ ದಾಳಿ…’

    ಅವತ್ತು ಕ್ಯಾಲೆಂಡರ್ ಸೆಪ್ಟೆಂಬರ್ ೧೧ ತೋರಿಸುತಿತ್ತು…

  3. ಧಾರಿಣಿ ಬೊಗಸೆಯಲ್ಲಿ ತನ್ನ ತುಂಬು ಕೆನ್ನೆಗಳ ತುಂಬಿ ಕೂತಿದ್ದಳು ಒಂದಿಷ್ಟೂ ಅಲುಗದೆ…ಕಲಾವಿದನೊಬ್ಬ ಬರೆದ ಚಿತ್ರದಂತೆ…ತನ್ನ ಹತ್ತಿರವಿದ್ದ ಕೀನಿಂದ ಬಾಗಿಲು ತೆರೆದು ಒಳಬಂದ ರಾಜೀವ ಅವಳೆಡೆಯೇ ನೆಟ್ಟನೋಟದಿಂದ ನೋಡಿದ…
    ಅವನು ಬಂದ ಪರಿವೆಯೇ ಇಲ್ಲದೆ ಧಾರಿಣಿ ಕೂತೇ ಇದ್ದಳು…ಕೆನ್ನೆ ಮೇಲೆ ಕಣ್ಣೀರು ಕರೆಗಟ್ಟಿತ್ತು…ಅವಳು ಬಹಳ ಹೊತ್ತಿನಿಂದ ಹಾಗೇ ಕೂತಿರಬೇಕು…ಎದುರಿಗಿದ್ದ ಟಿ.ವಿ ಏನೋ ಕಿರಿಚಿಕೊಳ್ಳುತ್ತಿತ್ತು…ರಾಜೀವ ಅವಳ ಬಳಿ ಬಂದು
    ಅವಳ ಭುಜ ಹಿಡಿದು ಅಲುಗಿಸಿದ `ಏನಾಯ್ತು ಧಾರಿಣೀ…’ಧಾರಿಣಿ ನಿಧಾನವಾಗಿ ಎದ್ದು ಬೆರಳಿನಿಂದ ಮುಂಗುರುಳು ನೇವರಿಸಿ ಕೊಳ್ಳುವ ನೆಪದಲ್ಲಿ ಕಣ್ಣು ಕೆನ್ನೆ ಗಳನ್ನು ಒರೆಸಿಕೊಳ್ಳುತ್ತಾ ರಾಜೀವನಿಗೋಸ್ಕರ ಟೀ ಮಾಡಲು ಒಳ ನಡೆದಳು
    ರಾಜೀವ ಟಿ.ವಿ. ಕಡೆಗೊಮ್ಮೆ ನೋಡಿದ ಅವನಿಗೆ ಅರ್ಥವಾಯಿತು… ಕಿಚನ್ ಗೆ ಬಂದು ಟೀ ಸೋಸುತ್ತಿದ್ದ ಧಾರಿಣಿಯ ಭುಜ ಬಳಸಿ ಕಕ್ಕುಲತೆಯಿಂದ ಹೇಳಿದ “ನಾಡಿದ್ದಿಗೆ ಆರು ವರ್ಷವಾಗುತ್ತೆ ಧಾರಿಣಿ…ಎಷ್ಟು
    ನೋಯುತ್ತೀಯಮ್ಮಾ…ಸಮಾಧಾನ ಮಾಡಿಕೋ…ಧಾರಿಣಿ ಮಾತಾಡದೆ ಅವನೆದೆಯಲ್ಲಿ ಮುಖ ಹುದುಗಿಸಿ ಬಿಕ್ಕಳಿಸಿದಳು…

  4. ಟಿ.ವಿ ಯಲ್ಲಿ ವಾರ್ತೆ ನೋಡುತ್ತಿದ್ದ ಶಾರದಮ್ಮ ಆ ಸುದ್ದಿ ಕೇಳಿದಾಕ್ಷಣ `ಏನ್ರೀ…ಬನ್ನೀ ಇಲ್ಲೀ…’ ಅಂತ ಕೂಗಿಕೊಂಡು ಶಾಸ್ತ್ರಿಗಳನ್ನು ಕರೆದರು. ಅಂಗಳದಲ್ಲಿ ಕೂತು ಯಾವುದೋ ಗ್ರಂಥ ಓದುವುದರಲ್ಲಿ ಮಗ್ನ ರಾಗಿದ್ದ ಅವರು ಹೆಂಡತಿ

    ಕೂಗು ಕೇಳಿ ಓಡಿಬಂದು ಟಿ.ವಿ ಯಲ್ಲಿ ತಾವೂ ಇಣುಕಿದರು.ಶಾರದಮ್ಮನಂತೂ `ವಲ್ಲೀ…’ ಅಂತ ಅಳಲೇ ಪ್ರಾರಂಭಿಸಿ ಬಿಟ್ಟರು. ತಡಿಯೇ… ಅವಳ್ಯಾಕೆ ಅವಳ ಹಾಸ್ಟೆಲ್ ಬಿಟ್ಟು ಬೀದಿ ಅಲೆಯಲು ಹೋಗ್ತಾಳೆ ನೀ ಸ್ವಲ್ಪ

    ಸುಮ್ನಿರ್ತೀಯಾ… ನಾನು ಕೇಶವಂಗೆ ಫೋನ್ ಮಾಡಿ ಇವತ್ತೇ ಅವಳ ಹಾಸ್ಟೆಲ್ ಗೆ ಹೋಗಿ ಅವಳನ್ನ ನೋಡು ಅಂತ ಹೇಳ್ತೀನಿ… ಎಂದು ಶರ್ಟು ಏರಿಸಿಕೊಂಡು ಹಳ್ಳಿಯ ಏಕೈಕ ಫೋನ್ ಬೂತ್ ಆದ ಮೂರ್ತಿ ಅಂಗಡಿ ಕಡೆಗೆ ನಡೆದರು
    ಶಾರದಮ್ಮ ಹೊಡೆದು ಕೊಳ್ಳುತ್ತಿದ್ದ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಲು ದೇವರ ಮುಂದೆ ತುಪ್ಪದ ದೀಪ ಹಚ್ಚಿ ಮುಡಿಪು ಕಟ್ಟಿಟ್ಟು ಬಿಕ್ಕುತ್ತಾ ವಿಷ್ಣು ಸಹಸ್ತ್ರ ನಾಮ ಹೇಳಿ ಕೊಳ್ಳಲಾರಂಭಿಸಿದರು

    ಪ್ರವಲ್ಲಿಕ ಹಾಸ್ಟೆಲ್ ನಲ್ಲಿ ಪೋನ್ ಇಲ್ಲ ಪೋಲಿ ಹುಡುಗರು ಹುಡುಗಿಯರಿಗೆ ಪೋನ್ ಮಾಡಿ ಕಾಡುತ್ತಾರೆಂದು ವಾರ್ಡನ್ ಪೋನ್ ಕೀಳಿಸಿಬಿಟ್ಟಿದ್ದಾರೆ.ಆದರೆ ಇಂಥಾ ಎಮರ್ಜೆನ್ಸಿಯಲ್ಲಿ ತಂದೆ ತಾಯಿಯರಿಗೆ ಭಯವಾಗುವುದಿಲ್ಲವೇ…ಇಲ್ಲಿ ನೋಡಿದರೆ

    ಶಾರದ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅಳಕ್ಕೆ ಶುರು ಮಾಡಿ ಬಿಡುತ್ತಾಳೆ. ಅಮ್ಮ ನ ಈ ಸ್ವಭಾವ ಗೊತ್ತಿದ್ರೂ ಪ್ರವಲ್ಲಿಕ ಮೂರ್ತಿ ಅಂಗಡಿಗೆ ಒಂದು ಪೋನ್ ಮಾಡಬಾರದೇ…’ ಅಂತ ಮಗಳನ್ನು ಬೈದು ಕೊಳ್ಳುತ್ತಾ ಹೆಂಡತಿ ಬಗ್ಗೆ ಮರುಗುತ್ತಾ
    ಶಾಸ್ತ್ರಿಗಳು ಮೂರ್ತಿ ಅಂಗಡಿಗೆ ಬಂದು ಸ್ನೇಹಿತ ಕೇಶವನಿಗೆ ಪೋನ್ ಮಾಡಿ ಪ್ರವಲ್ಲಿಕ ಬಗ್ಗೆ ಒಂಚೂರು ನಿಗ ಇಡಬೇಕೆಂದು ಕೇಳಿಕೊಂಡರು.ಮೂರ್ತಿ ಗೆ ದುಡ್ದು ಕೊಡಲು ಹೋದಾಗ ಅವನು ನಿರಾಕರಿಸಿ ಬಿಟ್ಟ `ಶಾರದಮ್ಮ ಹೇಗಿದ್ದಾರೆ..?’ ಅಂತ

    ಅವನು ವಿಚಾರಿಸಿದ್ದಕ್ಕೆ`ಹಾಗೇ ಇದ್ದಾಳೆ… ಏನು ಮಾಡುವುದಪ್ಪ ಪುತ್ರಶೋಕಂ ನಿರಂತರಂ ಅಂತ ಕೇಳಿಲ್ವೇ…’ ಎಂದು ನಿಟ್ಟುಸಿರು ಬಿಡುತ್ತಾ ಹೊರಟರು.ಆಗಷ್ಟೇ ಅಂಗಡಿಯೊಳಗೆ ಬಂದ ಮೂರ್ತಿ ಹೆಂಡತಿ `ಧಾರಿಣಿ

    ಹೇಗಿದ್ದಾಳೆ..?ಏನಾದ್ರೂ ಸಮಾಚಾರ ಉಂಟಾ…? ಅಂತ ಕೇಳಿದ್ದು ಮಗನ ನೆನಪಲ್ಲಿ ಮುಳುಗಿದ್ದ ಅವರಿಗೆ ಕೇಳಿಸಲಿಲ್ಲ…

    ****************
    ಶಾಸ್ತ್ರಿಗಳು ಆಶಿಸಿದಂತೆ ಪ್ರವಲ್ಲಿಕ ಅಂದು ಬೀದಿ ಅಲೆಯಲು ಹೋಗದೆ ತೆಪ್ಪಗೆ ಹಾಸ್ಟೆಲ್ ನಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅವಳ ಗೆಳತಿಗೊಂದು ಬರ್ತ್ ಡೇ ಕಾರ್ಡ್ ಕೊಳ್ಳಲು ಅವಳು `ಸಪ್ನಾ’ಗೆ ಹೋಗಿದ್ದು ಮೊದಲ ತಪ್ಪು
    ಕೆಂಪೇ ಗೌಡ ರೋಡ್ನಲ್ಲಿ ಗೂಂಡಾ ನನ್ನು ನೋಡಿ ನಡುಗುತ್ತಾ ಬಾಯಿ ಮುಚ್ಚಿ ಕೊಂಡು ಬಂದು ಬಿಟ್ಟಿದ್ದರೆ ಸೇಫಾಗಿದ್ದಿರುತ್ತಿದ್ದಳೋ ಏನೋ…ಅವನು ಕಾರ್ ಬಾಂಬ್ ಇಡುವುದನ್ನು ನೋಡಿಬಿಟ್ಟಿದ್ದಳು ಅಲ್ಲದೇ ಕಿತ್ತೂರು ರಾಣಿಯ ಸ್ಟೈಲ್ ನಲ್ಲಿ (ಅಫ್ಕೋರ್ಸ್

    ನಡುಗುತ್ತಾ ತೊದಲುತ್ತಾ)
    ಪೋಲೀಸ್ ಗೆ ಹೇಳಿ ಬಿಡುತ್ತೇನೆ ಅಂತ ಬೇರೆ ಹೇಳಿ ಬಿಟ್ಟಿದ್ದಳು.ಬಿಳಿ ಪಾರಿವಾಳದ ತರ ನಾಜೂಕಾಗಿ ಇರುವ ಈ ಹುಡುಗಿಗೆ ತಮ್ಮನ್ನು ತಡೆಯುವ ಶಕ್ತಿ ಇಲ್ಲವೆಂದು ಗೂಂಡಾ ಪಡೆಗೆ ಗೊತ್ತಿತ್ತಾದ್ದರಿಂದ ಇವಳನ್ನು ನಂತರ ನೋಡಿಕೊಂಡರಾಯಿತು ಬಿಡು
    ಅಂತ ಆ ಗಳಿಗೆಯಲ್ಲಿ ನಿರ್ಲಕ್ಶಿಸಿಬಿಟ್ಟಿದ್ದರೂ ಅವರು ಅವಳನ್ನು ಬೇಟೆ ಆಡದೇ ಬಿಡುವುದಿಲ್ಲ…

    ನ್ಯೂಯಾರ್ಕ್ನಲ್ಲಿ ಆರು ವರ್ಶದ ಹಿಂದೆ ಕಣ್ಮರೆಯಾದ ಪ್ರತಾಪನ ಆತ್ಮಕ್ಕೆ ಇದರಿಂದ ಶಾಂತಿ ಸಿಗುತ್ತದೆ ಎಂದು ನಂಬಿದ ಅವಳ ಸುಕೋಮಲ ಮನಸ್ಸಿಗೆ ಮಾಫಿಯಾದ ಆಳ ಅಗಲಗಳು ನಿಲುಕದ ವಿಷಯ ಆದರೆ ತನ್ನಣ್ಣನ ಸಾವಿಗಾಗಿ ಸೇಡು ತೀರಿಸಿ

    ಕೊಳ್ಳುತ್ತೇನೆ ಎಂಬ ಹುಂಬ ಧೈರ್ಯದ ಈ ಹುಡುಗಿಯನ್ನು ರಕ್ಷಿಸುವವರು ಯಾರು??

  5. ಬೆಳಗ್ಗೆಯಿಂದ ಹೇಗೊ ಸುಧಾರಿಸಿಕೊಂಡಿದ್ದರೂ, ರಾತ್ರಿಯಾಗುತ್ತಿದ್ದಂತೆ ಶಾಸ್ತ್ರಿಗಳು ಮಗನ ನೆನಪಿನಲ್ಲಿ ವಿಹ್ವಲಗೊಳ್ಳತೊಡಗಿದರು.

    ಏನೇನೊ ಕನಸುಗಳು… ರಣಹದ್ದೊಂದು ತನ್ನ ಮಗನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನೆದುರೇ ಇನ್ನೇನು ಕಣ್ಣನ್ನು ಕುಕ್ಕಲು ತಯಾರಾದಂತೆ…ರೌದ್ರಾವತಾರ ತಾಳಿದ ಕಡಲು ಉಕ್ಕಿಹರಿದು ತನ್ನ ಮಗನನ್ನು ಕೊಚ್ಚಿ ಒಯ್ದಂತೆ….”ಅಪ್ಪಾ” ಅನ್ನುವ ಆರ್ತನಾದದೊಂದಿಗೆ ಕಣ್ಣೆದುರೇ ಮಗನ ದೇಹ ಇಂಚಿಂಚೆ ನೀರೊಳಗೆ ಕಣ್ಮರೆಯಾದಂತೆ….ಭಗ್ಗನೆ ಭುಗಿಲೆದ್ದ ಬೆಂಕಿ ಕಣ್ಣೆದುರೇ ಮಗನ ದೇಹವನ್ನು ಇಂಚಿಂಚೆ ಸುಡುತ್ತಿರುವಂತೆ….ರುದ್ರ ಭಯಾನಕ, ಬೀಭತ್ಸ ಕನಸುಗಳು…

    ಶಾಸ್ತ್ರಿಗಳು ನಿದ್ದೆಕಣ್ಣಲ್ಲೆ ಬೊಬ್ಬೆಹೊಡೆಯತೊಡಗಿದರು, ತನ್ನೆರಡೂ ಕೈಗಳನ್ನು ಜೋರಾಗಿ ಗಾಳಿಯಲ್ಲಿ ಆಡಿಸುತ್ತ… “ಮಗೂ, ಬಂದೆ ಇರು..ಯಾಕೆ ಓಡ್ತಿದೀಯಾ…ನಾನೂ ಬಂದೆ ಇರು…”.

    ದಡಬಡಿಸಿ ಎದ್ದ ಶಾರದಮ್ಮ ಕಂಗಾಲಾದರು. “ಏನಾಯ್ತೂಂದ್ರೆ…ಇಲ್ನೋಡಿ” ಅಂತ ಶಾಸ್ತ್ರಿಗಳನ್ನು ತನ್ನೆರಡೂ ಕೈಗಳಲ್ಲಿ ಹಿಡಿದು, ನಿದ್ದೆಯಿಂದ ಎಬ್ಬಿಸಲು ನೋಡಿದರು…ಶಾಸ್ತ್ರಿಗಳು ಬಡಬಡಿಸುತ್ತಲೇ ಇದ್ದರು…”ನೋಡೆ ಶಾರದಾ, ಹೇಗೆ ಹೋಗ್ತಿದ್ದಾನೆ ಒಂದೂ ಮಾತು ಆಡ್ದೆ, ನೀನಾದ್ರೂ ಬುದ್ಧಿ ಹೇಳೆ…” ಶಾರದಮ್ಮನಿಗೆ ದುಃಖ ಉಮ್ಮಳಿಸಿ ಬಂತು..ಗಂಡನನ್ನು ಸಂತೈಸುವ ಪರಿ ಗೊತ್ತಾಗದೆ..

    ಐದು ನಿಮಿಷವೇ ಬೇಕಾಯ್ತು, ಶಾಸ್ತ್ರಿಗಳಿಗೆ ಪೂರ್ತಿ ಎಚ್ಚರವಾಗಲು…ಎಚ್ಚರವಾಗಿದ್ದೇ ತಪ್ಪಿನ ಅರಿವಾಯ್ತು..ಶಾರದಮ್ಮನನ್ನು ಗಟ್ಟಿಯಾಗಿ ಬಳಸಿಕೊಂಡು ಮನಸೋ ಇಚ್ಛೆ ಗಳಗಳನೆ ಅತ್ತುಬಿಟ್ಟರು..”ಅತ್ತು ಬಿಡು ಶಾರದಾ, ಅತ್ತು ಬಿಡು..” ಶಾರದಮ್ಮನನ್ನು ಪ್ರೀತಿಯಿಂದ ಮೈದಡವಿ, ತನ್ನೆದೆಗಾನಿಸಿಕೊಂಡ ಶಾಸ್ತ್ರಿಗಳು ತೀರ ಗಂಭೀರರಾದರು..

  6. “ಎಂಥ ತಮಾಷೆ ಅಲ್ವಾ, ಶಾರದಾ? ನಾವು ಯಾವತ್ತೂ ನಮ್ಮ ಕ್ಷಣಗಳು ನಿರಂತರವಾಗಿರತ್ತೆ ಅಂದ್ಕೊಳ್ತೇವೆ. ನಾವು ಪ್ರೀತಿಸುವ, ನಮ್ಮ ಇಷ್ಟದ, ಎಲ್ಲವೂ ನಮ್ಮೊಂದಿಗೆ ಯಾವಾಗಲೂ ಇರುತ್ತವೆ, ಇರಬೇಕು ಅನ್ನುವ ಹುಂಬ ಹಂಬಲದೊಂದಿಗೆ ಬದುಕುತ್ತೇವೆ…ಹ್ಮ್…ಬಹುಶಃ ಅದೇ ಹುಂಬತನದಿಂದಲೇ ಇರಬೇಕು, ನಮ್ಮ ಕ್ಷಣಗಳನ್ನು ಅನುಭವಿಸದೇ ಯಾವುದೋ ಹುಚ್ಚುಧಾವಂತಕ್ಕೆ ಬಿದ್ದವರ ಹಾಗೆ ಹಣ, ಅಂತಸ್ತು, ಯಶಸ್ಸು ಅಂತ ಬಿಸಿಲುಗುದುರೆಯ ಬೆನ್ನೇರಿ ಓಡುತ್ತಲೇ ಇರುತ್ತೇವೆ…ಓಟ…ಓಟ… ನಿರಂತರ ಓಟ….ಆರಾಮವಾಗಿ ಒಂದುಸಿರು ತೆಗೆದುಕೊಳ್ಳಲು ಪುರಸೊತ್ತಿಲ್ಲದಂತೆ….ಕ್ಷುಲ್ಲಕ ವಿಷಯಕ್ಕೂ ಜಿದ್ದಿಗೆ ಬಿದ್ದವರಂತೆ ಹೋರಾಡುತ್ತೇವೆ…..ನಮ್ಮತನ ಮೆರೆಯಲು, ಅದನ್ನು ಬೇರೊಬ್ಬರ ಮೇಲೆ ಹೇರಲು ಇನ್ನಿಲ್ಲದಂತೆ ಹೆಣಗುತ್ತೇವೆ……ಹ್ಮ್.”

    “ಶಾರದಾ, ನಾವೆಷ್ಟು ಅತ್ತರೂ ಅಷ್ಟೇ. ಪ್ರತಾಪ ಮತ್ತೆ ಬರಲಾರ.. ಬಹುಶಃ ಅವನ ಕರ್ತವ್ಯ ಮುಗಿಯಿತು ಅನ್ನಿಸುತ್ತೆ. ಯಾವತ್ತೂ ಚುರುಕಾಗಿ ನಗು ನಗುತ್ತಲೇ ಇದ್ದ ಅವನಿಗೆ ಅವಮಾನ ಮಾಡುತ್ತಿದ್ದೇವಾ ನಾವು ಅತ್ತು? ನಮ್ಮ ಪ್ರೀತಿಯ ವಸ್ತು ನಮ್ಮೊಂದಿಗೇ ಇರಬೇಕು ಅಂದರೆ ಅದು ಸ್ವಾರ್ಥವಲ್ಲವಾ? ನಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳಿಗೆ ಯಾಕೆ ಅತ್ತು ಕರೆಯೋಣ ಹೇಳು? ನಾನು ನಿಜ ಹೇಳಲಾ…ನೋಡು ಈ ಕ್ಷಣ ಇದೆಯಲ್ಲ, ನೀನು ನನ್ನ ತೆಕ್ಕೆಯೊಳಗೆ ಹೀಗೆ ಭದ್ರವಾಗಿ ಅಪ್ಪಿಕೊಂಡು ಕೂತುಬಿಟ್ಟಿದ್ದೀಯಲ್ಲ, ಎಷ್ಟು ಚಂದದ ಕ್ಷಣ ಅಲ್ಲವಾ? ಶಾರದಾ, ಬಹುಶಃ ಈ ಕ್ಷಣ ಮತ್ತೆ ಬರಲಾರದೇನೋ…ಬಾ ಶಾರದಾ..ಇಬ್ಬರೂ ಮನಸಾರೆ ನಕ್ಕು ಬಿಡೋಣ, ನಾಳೆಯೇ ಇಲ್ಲದೆನ್ನುವಂತೆ….ಈ ಕ್ಷಣವನ್ನ ಗೌರವಿಸೋಣ, ಆತ್ಯಂತಿಕವಾಗಿ ಪ್ರೀತಿಸೋಣ…..ನಕ್ಕು ಬಿಡು, ಶಾರದಾ.. ನಕ್ಕು ಬಿಡು……

  7. ಬಾಂಬು ಹೊತ್ತ ಕೆಂಪು ಮಾರುತಿ ಕಾರು ಭರ್ ಎಂದು ಮುಂದೆ ಹೋಯಿತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮೋಟರ ಸೈಕಲ್ ಮೇಲೆ ಕುಳಿತುಕೊಂಡು ಸುತ್ತಲೂ ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ಭರತಖಾನ ಮಾತ್ರ ಈ ಪುಟ್ಟ ಬಿಳಿಯ ಪಾರಿವಾಳವನ್ನು ಗಮನಿಸುತ್ತ ಅಲ್ಲಿಯೇ ನಿಂತುಕೊಂಡ. ಪ್ರವಲ್ಲಿಕಾ ಆಟೊ ಒಂದನ್ನು ಹಿಡಿದು ಪೋಲೀಸ ಸ್ಟೇಶನ್ನಿಗೆ ಓಡಿದಳು. ಭರತಖಾನ ಎಚ್ಚರಿಕೆಯಿಂದ ಅವಳನ್ನು ಹಿಂಬಾಲಿಸಿ, ತಾನೂ ಪೋಲೀಸ ಸ್ಟೇಶನ ಒಳಗೆ ನಡೆದ. ಏದುಸಿರು ಬಿಡುತ್ತ ಒಳಗೆ ಓಡಿದ ಪ್ರವಲ್ಲಿಕಾ ಎದುರಿಗೆ ಬರುತ್ತಿದ್ದ ಏ.ಸಿ.ಪಿ.ಗೆ ಡಿಕ್ಕಿ ಹೊಡೆದಳು.ಹಾಗೆಯೆ ಸಾವರಿಸಿಕೊಂಡು,”ಸರ್, ಕಾರಿನಲ್ಲಿ ಬಾಂಬು ಒಯ್ಯುತ್ತಿದ್ದಾರೆ” ಎಂದು ತೊದಲಿದಳು.ಇವಳ್ಯಾವಳೊ ಹುಚ್ಚಿ ಇರಬೇಕೆಂದುಕೊಂಡ ಏ.ಸಿ.ಪಿ. ಅಲ್ಲಿಯೇ ನಿಂತುಕೊಂಡಿದ್ದ ಕನಿಷ್ಠಬಿಲ್ಲೆಗೆ, “ಇವಳ ಕಂಪ್ಲೇಂಟ ಬರಕೊಳ್ಳಯ್ಯ” ಎಂದು ಹೇಳಿ ಹೊರನಡೆದರು. ಕನಿಷ್ಠಬಿಲ್ಲೆ ಪ್ರವಲ್ಲಿಕಾಳ ಹೆಸರು,ವಿಳಾಸ, ಕಂಪ್ಲೇಂಟ ಎಲ್ಲವನ್ನೂ ಬರೆದುಕೊಂಡ. ಅಷ್ಟರಲ್ಲಿ ಭರತಖಾನ ತನ್ನ ಗುಂಪಿನ ಟ್ಯಾಕ್ಸಿ ಒಂದಕ್ಕೆ ಮೋಬೈಲ ದಿಂದ ಕಾಲ್ ಮಾಡಿ ಪೋಲೀಸ್ ಸ್ಟೇಶನ್ ಎದುರಿಗೆ ಕರೆಯಿಸಿಕೊಂಡಿದ್ದ. ಪ್ರವಲ್ಲಿಕಾ ಹೊರಬರುತ್ತಿದ್ದಂತೆ, ಟ್ಯಾಕ್ಸಿ ಚಾಲಕ ಬಾಗಿಲನ್ನು ತೆರೆದ. ಭರತಖಾನ ಪ್ರವಲ್ಲಿಕಾಳ ಪರಿಚಿತನಂತೆಯೆ ನಟಿಸುತ್ತ ಅವಳನ್ನು ದಬ್ಬಿಕೊಂಡು ಒಳ ನಡೆದ. ಟ್ಯಾಕ್ಸಿ ಶರವೇಗದಲ್ಲಿ ಸಾಗಿತು.

    ಏ.ಸಿ.ಪಿ. ಮನೆ ಮುಟ್ಟುತ್ತಿದ್ದಂತೆಯೆ ಅವರ ಮೋಬೈಲ ರಿಂಗಣಿಸಿತು. ಸುದ್ದಿ ಕೇಳಿದ ಏ.ಸಿ.ಪಿ. ಹೌಹಾರಿದರು. “ಭಾಭಾ ಸಂಶೋಧನಾಲಯದಲ್ಲಿ ಬಾಂಬು ಸ್ಫೋಟ; ಪ್ರಯೋಗಾಲಯ ನುಚ್ಚು ನೂರು; ಐವರ ಸಾವು.”
    ಏ.ಸಿ.ಪಿ. ಕಾರನ್ನು ಭಾಭಾ ಸಂಶೋಧನಾಲಯದ ಕಡೆಗೆ ಓಡಿಸಿದರು. ಹಾಗೆಯೆ ಮೋಬೈಲಿನಲ್ಲಿ ತಮ್ಮ ಕಚೇರಿಗೆ ಮಾತಾಡಿ, ” ಬಾಂಬ್ ಬಗ್ಗೆ ಕಂಪ್ಲೇಂಟ್ ಕೊಡುತ್ತಿದ್ದಳಲ್ಲ ಒಬ್ಬ ಹುಡುಗಿ; ಅವಳನ್ನು ಸ್ಟೇಶನ್ನಿಗೆ ಮತ್ತೆ ಕರೆಯಿಸಿ ಕೂಡಿಸಿಕೊಳ್ಳಿ. ಅವಳು ಸಂಶಯಿತರೆ ಚೆಹರೆ ಹೇಳಿದ್ದರೆ, ಎಲ್ಲಾ ಸ್ಟೇಶನ್ನಿಗಳಿಗೂ ಕಳೆಯಿಸಿ ಕೊಡಿ. ಏರ್ ಪೋರ್ಟ್, ರೇಲ್ವೆ ಸ್ಟೇಶನ್ , ಬಸ್ ಸ್ಟ್ಯಾಂಡುಗಳಲ್ಲಿ ಮಫ್ತಿ ಸಿ.ಆಯ್. ಡಿ ಕಳಿಸಿರಿ ಎಂದು ತುರ್ತು ಆದೇಶ ನೀಡಿದರು.
    ………………………………………………………………….
    ಭರತಖಾನ ಸುಖಾಸನದಲ್ಲಿ ಕುಳಿತುಕೊಂಡು ಈ ಬಿಳಿಯ ಪಾರಿವಾಳವನ್ನು ಆರಾಮವಾಗಿ ನಿಟ್ಟಿಸುತ್ತಿದ್ದ. ಪ್ರವಲ್ಲಿಕಾ ಅವನ ಎದುರಿನಲ್ಲಿ ಕಟ್ಟಿಗೆಯ ಸ್ಟೂಲಿನ ಮೇಲೆ ಕುಳಿತುಕೊಂಡಿದ್ದಳು. ಹೆದರಿಕೆಯಿಂದ ಅವಳ ಮುಖ ಬಿಳಿಚಿಕೊಂಡಿತ್ತು. ಹಣೆಯ ಮೇಲೆ ಬೆವರ ಹನಿಗಳು ಸಾಲುಗಟ್ಟಿದ್ದವು. ತುಟಿಗಳು ಅದುರುತ್ತಿದ್ದವು. ಏದುಸಿರಿನಿಂದಾಗಿ ಎದೆ ಏರಿಳಿಯುತ್ತಿತ್ತು.

    ಬೇಟೆಯನ್ನು ಒಂದೇ ಏಟಿಗೆ ಕೊಲ್ಲುವದರಲ್ಲಿ ಏನೂ ಮಜಾ ಇರುವದಿಲ್ಲ, ಇಂಚಿಂಚು ಹರಿಯುತ್ತ, ಚಪ್ಪರಿಸುತ್ತ ತಿನ್ನಬೇಕು ಎನ್ನುವದು ಭರತಖಾನನ ತತ್ವ. ಅವನ ಬೇಟೆ ಅವನ ವಶದಲ್ಲಿದೆ, ಸಾವಕಾಶವಾಗಿ ಅನುಭವಿಸೋಣ ಎಂದುಕೊಂಡ ಭರತಖಾನ ಅವಳನ್ನು ಅಲ್ಲಿಯೇ ಬಿಟ್ಟು, ರೂಮ್ ಲಾಕ್ ಮಾಡಿ ಹೊರ ನಡೆದ.
    ………………………………………………………….

    ಭರತಖಾನನ ಅಪ್ಪ ಪ್ರೊ. ಸಯಾದುಲ್ಲಾ ಖಾನ ಹೆಸರಾಂತ ಇತಿಹಾಸ ಪಂಡಿತರು. ಭಾರತೀಯರೆಲ್ಲರೂ ಭಾರತದ ಸತ್ಸಂಪ್ರದಾಯಕ್ಕೆ ವಾರಸುದಾರರು. ಹಿಂದು, ಮುಸ್ಲಿಮ್ ಕ್ರಿಶ್ಚಿಯನ್ ಯಾರೇ ಇರಲಿ, ಈ ದೇಶದ ಪರಂಪರೆಯನ್ನು ಗೌರವಿಸಬೇಕು ಎನ್ನುವ ಮನೋಭಾವದವರು. ಆದುದರಿಂದಲೇ, ತಮ್ಮ ಮಗನಿಗೆ ಭರತಖಾನ ಎಂದು ಹೆಸರಿಟ್ಟರು. ಭರತಖಾನ ಗಣಕ ಶಾಸ್ತ್ರದಲ್ಲಿ ಇಂಜನಿಯರಿಂಗ್ ಪದವಿ ಪಡೆದ ಬಳಿಕ ಹೆಚ್ಚಿನ ಅಭ್ಯಾಸಕ್ಕಾಗಿ ಇಂಗ್ಲಂಡಿಗೆ ತೆರಳಿದ. ಅಲ್ಲಿ ಅವನಿಗೆ ಮುಸ್ಲಿಮ್ ಉಗ್ರಗಾಮಿಗಳ ಜೊತೆ ಸಖ್ಯ ಬೆಳೆಯಿತು. ಅತಿ ಗೋಪ್ಯದಿಂದ ಅವನಿಗೆ ಒಮ್ಮೆ ಬಿನ್ ಲಾಡೆನ್ ದರ್ಶನ ಸಹ ಲಭ್ಯವಾಯಿತು. ಭಾರತದಲ್ಲಿರುವ ಕಾಫಿರರನ್ನೆಲ್ಲ ನಿರ್ಮೂಲಗೊಳಿಸಿ ಅಲ್ಲಿ ಧರ್ಮರಾಜ್ಯ ಸ್ಥಾಪಿಸಲು ಬಿನ್ ಲಾಡೆನ್ ನೀಡಿದ ಆದೇಶದ ಮೇರೆಗೆ ಭರತಖಾನ ಬೆಂಗಳೂರಿಗೆ ಬಂದಿಳಿದಿದ್ದ.

  8. ಭಾರತೀಯ ಇತಿಹಾಸ ಸಂಶೋಧನಾ ಮಹಾಮಂಡಲದ ವಾರ್ಷಿಕ ಸಭೆ ನಡೆದಿದೆ. ಪ್ರಮುಖ ಭಾಷಣಕಾರರಾದ ಪ್ರೊ. ಸಯಾದುಲ್ಲಾಖಾನರ ಭಾಷಣ ನಡೆದಿದೆ.
    ” ಭಾರತದ ಮೇಲೆ ದಾಳಿ ಮಾಡಿದ ಆಕ್ರಮಣಕಾರರಲ್ಲಿ ಅತಿ ಹೆಚ್ಚಿನ ಹಾನಿ ಮಾಡಿದ ವಿದೇಶೀಯರೆಂದರೆ ತುರ್ಕರು ಹಾಗು ಪರ್ಶಿಯನ್ನರು. ಇವರಿಂದ ಧರ್ಮಾಂತರಗೊಂಡ ಭಾರತೀಯರು ತಾವು ಭಾರತೀಯರೆನ್ನುವದನ್ನೆ ಮರೆತರು. ಆಕ್ರಮಣಕಾರರಿಗಿಂತ ಹೆಚ್ಚು ಭೀಕರವಾಗಿ ಅವರು ಇತರ ಭಾರತೀಯರ ಮೇಲೆ ವರ್ತಿಸಿದರು. ಮಲ್ಲಿಕ ಕಾಫರ ಇದರ ಉದಾಹರಣೆ. ಆಬಳಿಕ ಸಹ Two nation theory ಸಾರಿದ
    ಜಿನ್ನಾ, ಈವತ್ತಿಗೂ India is a plural country ಎಂದು ಭಾಷಣ ಬಿಗಿಯುವ ಪಂಡಿತರು ತಾವೆಲ್ಲರೂ ಭಾರತೀಯ ಬೀಜದವರೇ ಎನ್ನುವದನ್ನು
    ಮರೆತ ಮಹಾನುಭಾವರು. ತಮ್ಮನ್ನು ಸೆರೆಹಿಡಿದವರ ವಿಚಾರಗಳನ್ನೇ ಆತ್ಮಸಾತ್ ಮಾಡಿಕೊಳ್ಳುವ ಈ ಮನೋವಿಕಾರಕ್ಕೆ Stockholm syndrome ಎಂದು ಕರೆಯಲಾಗುತ್ತದೆ. ಆದರೆ ಈ ದಾಸ್ಯಭಾವನೆಗೆ ನಾನು Mallik kaphar syndrome ಎಂದು ಕರೆಯುತ್ತೇನೆ.”

    ತನ್ನ ರೂಮಿನಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ಭರತಖಾನ್ ಎಡಗೈಯಲ್ಲಿ ಹಿಡಿದುಕೊಂಡಿದ್ದ ಚಿಕ್ಕ ರಿಮೋಟ ನ ಬಟನ್ ಒಂದನ್ನು ಒತ್ತಿದ. ಒಮ್ಮೆಲೆ ಕಿವಿ ಗಡಚಿಕ್ಕುವ ಭಯಂಕರ ಶಬ್ದದೊಂದಿಗೆ, ವೇದಿಕೆಯ ಮೇಲಿದ್ದ ಗಣ್ಯರ ಅಂಗಾಂಗಳು ತುಂಡುತುಂಡಾಗಿ ಹಾರಿದ ದೃಶ್ಯ ಕಂಡಿತು.
    ಭರತಖಾನ ವ್ಯಂಗ್ಯ ನಗುವೊಂದನ್ನು ನಕ್ಕ. “ಸಾಲಾ ಮಟಾಶ್!” ಎನ್ನುತ್ತ ಟಿ.ವಿ. ಬಂದು ಮಾಡಿದ.

Leave a Reply to Shiv Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.