ಭಾಗ – 19

ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ.

ಹಳ್ಳಿಯ ಪಂಡಿತರು ಕೊಡುತ್ತಿರುವ ಹಸಿರು ಔಷಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ. ಜೆನಿಗೆ ಮಡಿ ಹುಡಿ ಗೊತ್ತಿಲ್ಲ, ಶಾರದಮ್ಮನವರಿಗೆ ಇಂಗ್ಲಿಷ್ ಬರುವುದಿಲ್ಲ. ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ. ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ.

***

ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ…

ರಸಿಕ – ಮಳೆ ಹಿಡಕೊಂತ

ಚಿತ್ರ: ರಸಿಕ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಹಾಡು ಕೇಳಿ

ಚಿಟಪಟ ಚಿಟಪಟ ಚಿಟಪಟ ಅಂತ
ಹಿಡುಕೊಂತ ಮಳೆಯು ಹಿಡುಕೊಂತ

ಅತ್ತ ಜೋರಾಗೂ ಬರದು
ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು
ಧ್ಯಾನ ಮಾಡೋಕೂ ಬಿಡದು

ನೆನೆಯುವ ಜೀವಾನ ನೆನೆಸುವ ಈ ಸೋನೆ
ಬಯಸಿದ ಆಸೇನಾ ಬರಿಸುವ ಈ ಸೋನೆ

ಬೇಡ ಅನ್ನೋಕೂ ಬಿಡದು
ಬೇಕು ಅನ್ನೋಕೂ ಬಿಡದು

ಮಳೆಯಲ್ಲಿ ಮಗುವಾಗಿ ಜಿಗಿಯುವ ಈ ಜಾಣೆ
ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ

ಮುದ್ದು ಮಾಡೋಕೂ ಬಿಡದು
ಜಿಡ್ಡು ಹೋಗೋಕೂ ಬಿಡದು

ಗುಡುಗುಡು ತಾನ ಮುಗಿಲೊಳಗೆ
ಧಿರನನ ಧಿರನನ ಧಿರನನ
ಢವ ಢವ ಗಾನ ಎದೆಯೊಳಗೆ
ಧಿರನನ ಧಿರನನ ಧಿರನನ ||

ಸ್ವರಗಳ ಮಳೆಯಲ್ಲಿ ಕಾಲಕೆ ಸನ್ಮಾನ
ಒಲವಿನ ಮಳೆಯಲ್ಲಿ ಹೃದಯಕೆ ಸನ್ಮಾನ
ಅತ್ತ ಸಂಗೀತ ಶರಣು ಇತ್ತ ಪ್ರಾಯಾನೂ ಶರಣು

ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ
ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
ಮಳೆಯು ನಮ್ಮನ್ನು ಬಿಡದು
ನಾವು ಪ್ರೀತಿನ ಬಿಡೆವು

ಥಕ ಥಕ ಮಿಂಚು ಮಳೆಯೊಳಗೆ
ಧಿರನನ ಧಿರನನ ಧಿರನನ
ಮಿಕ ಮಿಕ ಸಂಚು ಕಣ್ಣೊಳಗೆ
ಧಿರನನ ಧಿರನನ ಧಿರನನ ||

           ***

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಚಿತ್ರ : ಕಣ್ತೆರೆದು ನೋಡು
ಸಾಹಿತ್ಯ : ಜಿ.ವಿ.ಅಯ್ಯರ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯಕ : ಜಿ.ಕೆ. ವೆಂಕಟೇಶ್

ಹಾಡು ಕೇಳಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೆವೆನ್ನಿ
ಗೆಳೆತನದ ವರದ ಹಸ್ತ ನೀಡಿಬನ್ನಿ
ಮೊಳೆತಿರುವ ಭೇದಗಳ ಬಿಟ್ಟು ಬನ್ನಿ||

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚಬನ್ನಿ||

ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತವೈಭವ ಕಾಣುವಾ|
ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶವ ಸಾರುವಾ||

ಭಾಗ – 18

ಸುದ್ದಿ ತಿಳಿದು ಬೆಂಗಳೂರಿಂದ ರಾಜೀವ, ಆಕಾಶ, ಜೆನ್ನಿ, ಹ್ಯಾರಿ, ಕೇಶವ ಮತ್ತವನ ಸಂಸಾರ, ಎಲ್ಲರೂ ಹಳ್ಳಿಗೆ ಬಂದಿಳಿದರು. ಬಹಳಷ್ಟು ಚರ್ಚೆಗಳ ಬಳಿಕ ಹ್ಯಾರಿ ತಾತನ ಸಂಸ್ಕಾರ ಮಾಡುವುದೆ ಸೂಕ್ತವೆಂದು ಎಲ್ಲರಿಗೂ ತೋಚಿತು, ಆದರೆ ಆತನಿಗೆ ಉಪನಯನವಾಗಿಲ್ಲ ಎನ್ನುವುದನ್ನು ಶಾರದಮ್ಮ ಸೂಚಿಸಿದಾಗ ರಾಜೀವ ತಾನು ಮಾಡುವುದಾಗಿ ಮುಂದೆ ನಿಂತ. ಎಲ್ಲರ ಸಮ್ಮತಿಯಿತ್ತು, ಧಾರಿಣಿಯ ಗೈರುಹಾಜರಿಯ ನೋವಿನ ಜೊತೆಗೆ.

ದುಃಖದಿಂದ ತತ್ತರಿಸುತ್ತಿದ್ದ ಶಾರದಮ್ಮನವರಿಗೆ ಬಲವಂತದಿಂದ ಸ್ವಲ್ಪ ಹಾಲು ಕುಡಿಸಿ ಮಲಗಿಸಿ ಹೊರ ಬಂದ ಸರೋಜ ಹಾಲಿನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯನ್ನು ನೋಡಿ ಸ್ಥಂಭೀಭೂತರಾಗಿ ನಿಂತುಬಿಟ್ಟರು.
`ನನ್ನ ಮಗ ಭರತ…!’ ಮನಸ್ಸು ಗುಣು ಗುಣಿಸಿತು ತುಟಿ ಒಡೆದು ಆಡಲಿಲ್ಲ. `ಏನಾಯ್ತೇ ಸರೋಜಾ…’ ಕೇಶವಚಿಕ್ಕಪ್ಪ ತಲೆ ಸುತ್ತಿ ನೆಲಕ್ಕೆ ಬೀಳುತ್ತಿದ್ದ ತಮ್ಮ ಪತ್ನಿಯನ್ನು ಹಿಡಿದುಕೊಳ್ಳುತ್ತಾ ನುಡಿದರು.

ಹೊಸರೂಪಿನ ಭರತ ಖಾನನನ್ನು ನೋಡಿದೊಡನೆ ಶಾರದಮ್ಮ ವ್ಯಗ್ರರಾದರು. “ನೀನೇ ನನ್ನ ಕುಂಕುಮ ಅಳಿಸಿದ ನೀಚ, ರಾಕ್ಷಸ… ಬರಬೇಡ ಇಲ್ಲಿಗೆ… ಹೋಗು… ದೂರ ಹೋಗು…” ಎಂದೆಲ್ಲ ಅರಚಾಡಿ ನೊಂದುಕೊಂಡರು. ಅವರನ್ನು ಸಮಾಧಾನಿಸಲು ಸಾಕುಬೇಕಾಯಿತು. ಎಲ್ಲರೂ ಸ್ವಲ್ಪ ಶಾಂತರಾದಾಗ ಭರತ ಖಾನ ತನ್ನ ಹೊಸ ರೂಪದ ಹಿಂದಿನ ರಹಸ್ಯ, ತನಗೆ ಭಾರತ ಸರಕಾರ ಕೊಟ್ಟಿರುವ ಹೊಸ ಜವಾಬ್ದಾರಿಯ ಹುದ್ದೆ ಮತ್ತು ತಾನದನ್ನು ಭಾರತೀಯನಾಗಿ ಸ್ವೀಕರಿಸಿ, ಭಾರತೀಯನಾಗಿ ನಿಭಾಯಿಸುವ ನಿರ್ಧಾರಗಳನ್ನು ತಿಳಿಸಿದಾಗ ರಾಜೀವ, ಆಕಾಶ್, ಪ್ರವಲ್ಲಿಕಾ ತುಸು ನಿರಾಳಗೊಂಡರು.

ಇತ್ತ ಧಾರಿಣಿಯನ್ನು ಕಾಯುತ್ತಿರುವ ಟಿಮ್ ಮತ್ತವನ ಕೂಟಕ್ಕೆ ಅತ್ತ ಕಡೆ ಜೋಯಿಯಿಂದ ಒತ್ತಡ ಹೆಚ್ಚುತ್ತಿತ್ತು. ಇತ್ತ ಕಡೆ ಯಾವುದೇ ರೀತಿಯ ಮುನ್ನಡೆ ಸಾಧಿಸಲಾಗದೆ ಟಿಮ್ ಒದ್ದಾಡುತ್ತಿದ್ದ. ಅದೇ ಸಮಯಕ್ಕೆ `ಶಶ್’ ಶಾರದಮ್ಮನ ದೇಹಾಂತದ ಸುದ್ದಿಯನ್ನು ತಂದೊಪ್ಪಿಸಿದ, ಟಿಮ್ ಮುಂದೆ ಧಾರಿಣಿಗೆ. ಧಾರಿಣಿಯನ್ನು ಈ ನೆಪದಲ್ಲಾದರೂ ಬಿಡಿಸಬಹುದು ಅನ್ನುವುದು ಆತನ ಹಂಚಿಕೆ. ಆತ ಅಂದುಕೊಂಡಂತೆಯೇ ಧಾರಿಣಿ ಅಧೀರಳಾಗಿ, ಮೂರ್ಛೆತಪ್ಪಿ ಬಿದ್ದು, ಮತ್ತೆ ಎದ್ದು ಗೋಳಾಡತೊಡಗಿದಳು. ಟಿಮ್ ಗೊಂದಲಗೊಂಡ. ಏನು ಮಾಡುವುದೆಂದು ತಿಳಿಯದೆ, ಕೂಡಲೇ ಜೋಯಿಗೆ ಕರೆಮಾಡಿದ.
***** ***** *****
ಮೊದಲಿಗೆ ಕಿರುಚಾಡಿದ ಜೋಯಿ, ನಂತರ ಯಾರಾದರೂ ನಂಬಿಕಸ್ತರ ಜೊತೆ ಧಾರಿಣಿಯನ್ನು ಹಳ್ಳಿಗೆ ಕಳಿಸಿ ಕ್ರಿಮೇಷನ್ ಮುಗಿದೊಡನೆ ಮತ್ತೆ ಬೆಂಗಳೂರಿಗೆ ಕರೆಸುವ ಏರ್ಪಾಡು ಮಾಡಲು ಆಜ್ಞೆ ಮಾಡಿದ. ಟಿಮ್’ಗೆ ಈ ಕೆಲಸಕ್ಕೆ ಶಶ್’ಗಿಂತ ಉತ್ತಮ ವ್ಯಕ್ತಿ ಇಲ್ಲವೆನಿಸಿತು. ಆತನ ಜೊತೆಗೆ ಧಾರಿಣಿಯನ್ನು ಕಳಿಸಲು ಮುಂದಾದ. ಅತ್ತೂ ಅತ್ತೂ ಸುಸ್ತಾಗಿದ್ದ ಧಾರಿಣಿಗೆ ಯಾವುದೇ ಪ್ರತಿಕ್ರಿಯೆ ತೋರಿಸುವ ಹುಮ್ಮಸ್ಸೂ ಇಲ್ಲವಾಗಿತ್ತು. ನಿರ್ಜೀವ ದೇಹದಂತೆ ಶಶ್ ಜೊತೆ ಅವನೇ ತಂದ ಟ್ಯಾಕ್ಸಿಯಲ್ಲಿ ಹಳ್ಳಿ ಕಡೆ ಹೊರಟಳು.

ಹಳ್ಳಿಗೆ ಇನ್ನೂ ಸ್ವಲ್ಪ ದೂರ ಇದೆ ಅನ್ನುವಾಗಲೇ ಶಶಾಂಕ ಟ್ಯಾಕ್ಸಿ ಬಿಟ್ಟ. ರಸ್ತೆ ಬದಿಯ ಮರದ ನೆರಳಲ್ಲಿ ಒಂದಿಷ್ಟು ಕೂತು, ಧಾರಿಣಿಗೆ ತನ್ನ ನಾಟಕದ ಕಥೆಯನ್ನು ವಿವರಿಸಿದ. ಅಮ್ಮನಿಗೆ ಏನೂ ಆಗಿಲ್ಲವೆಂದೂ ಇವಳನ್ನು ಬಿಡಿಸಲು ತನ್ನ ನಾಟಕವೆಂದೂ ತಿಳಿಸಿದ. ಇಷ್ಟು ದಿನ ಬಂಧಿಯಾಗಿದ್ದ ಧಾರಿಣಿ ಇದನ್ನು ನಂಬಲು ಕೆಲ ಕ್ಷಣಗಳೇ ಹಿಡಿದವು. ಆದರೂ ಮನಸ್ಸನ್ನು ಯಾವುದೋ ಬಾಧೆ ಹಿಂಡುತ್ತಿತ್ತು. “ಥ್ಯಾಂಕ್ಸ್” ಎಂದಷ್ಟೇ ಅಂದಳು. ಹಳ್ಳಿಗೆ ಹೋಗುವ ಬಸ್ಸು ಬಂದಾಗ, ಕೈತೋರಿಸಿ ಇಬ್ಬರೂ ಬಸ್ಸೇರಿ ಮೌನವಾಗಿ ಮನೆ ಸೇರಿದರು.

ಚಾವಡಿಯಲ್ಲಿ ಯಾವುದೋ ಚರ್ಚೆಯಲ್ಲಿ ಮುಳುಗಿದ್ದ ರಾಜೀವ, ಆಕಾಶ, ಭರತರನ್ನು ಕಂಡ ಧಾರಿಣಿಗೆ ಏನೋ ನಡೆದಿದೆ ಅನ್ನುವ ಅರಿವು ಮೂಡಿತು. “ಅಕ್ಕಾ” ಅನ್ನುತ್ತಾ ಪ್ರವಲ್ಲಿಕಾ ಓಡಿ ಬಂದಾಗಲೇ ಉಳಿದವರೆಲ್ಲರೂ ಇವರಿಬ್ಬರತ್ತ ಗಮನ ಹರಿಸಿದರು. ತಂಗಿಯ ಹಿಂದೆಯೇ ಓಡಿ ಬಂದ ಬರಿಹಣೆಯ ಅಮ್ಮನನ್ನು ಕಂಡಾಗ ಧಾರಿಣಿಯ ಹೃದಯ ಕುಸಿದು ಬಿತ್ತು. “ಅಪ್ಪಾ..” ಎಂದದ್ದಷ್ಟೇ, ಅವಳ ಸ್ವರ ಅಡಗಿಕೂತಿತು. ಇಬ್ಬರನ್ನು ಸಮಾಧಾನ ಮಾಡುವ ಸರದಿ ಪ್ರವಲ್ಲಿಕಾ ಸರೋಜಮ್ಮನವರಿಗೆ. ಇವೆಲ್ಲದರ ನಡುವೆಯೇ ಶಶಾಂಕ ಟಿಮ್ ಮತ್ತವನ ಕಾರ್ಯಾಚರಣೆಯ ವಿವರ ನೀಡಿದ್ದು ರಾಜೀವ ಮತ್ತು ಆಕಾಶ್ ಇಬ್ಬರಿಗೂ ಪರಿಸ್ಥಿತಿಯ ಹಿನ್ನೆಲೆ ಒದಗಿಸಿತು. ಭರತ ಇದನ್ನು ತಾನು ಸಂಭಾಳಿಸುವುದಾಗಿ ಭರವಸೆ ನೀಡಿದ. ಭರತನ ಪ್ರತಿಯೊಂದು ಚರ್ಯೆಯನ್ನೂ ಗಮನಿಸುತ್ತಿದ್ದರು ಸರೋಜಮ್ಮ. ಆದರೆ ಅದು ಬೇರೆ ಯಾರ ದೃಷ್ಟಿಗೂ ಬಿದ್ದಿರಲಿಲ್ಲ.

ಶಾಸ್ತ್ರಿಗಳ ಸಂಸ್ಕಾರಗಳೆಲ್ಲ ಮುಗಿದವು. ಮುಂದೇನು ಎನ್ನುವ ಪ್ರಶ್ನೆ ಎಲ್ಲರೆದುರು ಮತ್ತೊಮ್ಮೆ ಎದ್ದು ನಿಂತಿತು.

***** ***** *****

ಭಾಗ – 17

ರಾತ್ರಿ ಎಂಟರ ಸಮಯ. ಹುಡುಗಿಯರ ಹಾಸ್ಟೆಲ್ಲಿನಲ್ಲಿ, ಮಾಲಾ ಟಿ.ವಿ. ನೋಡುತ್ತ ಕುಳಿತಿದ್ದಳು. ಸಮಾಚಾರ ಪ್ರಾರಂಭವಾಯಿತು. “ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಎನ್ ಕೌಂಟರ್ ದಲ್ಲಿ ಭರತಖಾನ ಎನ್ನುವ ಕುಖ್ಯಾತ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ.” ಎಂದು ಸುದ್ದಿ ವಾಚಕರು ಹೇಳುತ್ತಿದ್ದರು. ಮಾಲಾ ಒಮ್ಮೆಲೆ ಎಲ್ಲ ಹುಡುಗಿಯರನ್ನು ಕೂಗಿ ಕರೆದಳು. ಪ್ರವಲ್ಲಿಕಾ, ತ್ರಿವೇಣಿ, ಜ್ಯೋತಿ, ಮೀರಾ ಎಲ್ಲರೂ ಓಡಿ ಬಂದರು.
“ಪ್ರವಲ್ಲಿಕಾಳನ್ನು ಅಪಹರಿಸಿದ್ದ ಭರತಖಾನನನ್ನು ನಮ್ಮ ಸೈನಿಕರು ಗುಂಡು ಹೊಡೆದು ಕೊಂದಿದ್ದಾರೆ”, ಮಾಲಾ ಆವೇಶದಿಂದ ಹೇಳಿದಳು.
“ಸರಿಯಾದ ಶಾಸ್ತಿ ಆಯಿತು ಆ ಕೀಚಕನಿಗೆ”, ಜ್ಯೋತಿ ಆಕ್ರೋಶದಿಂದ ನುಡಿದಳು. ಯಾಕೊ ಪ್ರವಲ್ಲಿಕಾಳ ಕಣ್ಣಾಲಿ ತುಂಬಿದವು. ಹೊರಳಿ ನಿಂತು ಗೆಳೆತಿಯಿಯರಿಗೆ ಕಾಣದಂತೆ ಕಣ್ಣೊರೆಸಿಕೊಂಡಳು.
ಆ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ. ಕಣ್ಣೆದುರಿಗೆ ಭರತಖಾನನೆ ಬರುತ್ತಿದ್ದ. ಎತ್ತರದ ನಿಲುವಿನ, ಚೂಪುಗಲ್ಲದ, ದಟ್ಟ ಕೂದಲಿನ ಸುಂದರಾಂಗ. ತನ್ನ ನೆಚ್ಚಿನ ಹೀರೊ ಸುದೀಪನನ್ನೆ ಹೋಲುತ್ತಿದ್ದ. ಮೂಗು ಮಾತ್ರ ‘ಅಣ್ಣಾವ್ರ’ ಮೂಗಿನಂತೇ ನಿಡಿದಾಗಿತ್ತು. ‘ಫನಾ’ದಲ್ಲಿಯ ಆಮೀರಖಾನನಂತೆ ಹೋತದ ಗಡ್ಡ ಬೇರೆ.

ದ್ವೇಷ ಮತ್ತು ಪ್ರೀತಿ ಇವುಗಳನ್ನು ಪ್ರಚೋದಿಸುವ ಕೇಂದ್ರಗಳು ಮಿದುಳಿನಲ್ಲಿ ಒಂದೇ ಕಡೆಗೆ ಇರುತ್ತವೆ ಎಂದು ನರಶಾಸ್ತ್ರಪಂಡಿತರು ಹೇಳುತ್ತಾರೆ. ಪಾಕಿಸ್ತಾನದಿಂದ ಬೆಂಗಳೂರಿಗೆ ಕರೆತರುವಾಗ ಭರತಖಾನ ತನ್ನನ್ನು ಪ್ರೀತಿ ಹಾಗು ಗೌರವದಿಂದ ನೋಡಿಕೊಂಡ ರೀತಿಯಿಂದ ಪ್ರವಲ್ಲಿಕಾಳಿಗೆ ಅವನ ಬಗೆಗಿನ ದ್ವೇಷ ಮಾಯವಾಗಿ ಅಲ್ಲಿ ಪ್ರೀತಿ ಚಿಗುರಿತ್ತು.
………………………………..
ಸಮಾಚಾರ ತಿಳಿಯುತ್ತಿದ್ದಂತೆ ಓಸಾಮಾ ಶೋಕತಪ್ತನಾದ. “ಭರತಖಾನನಿಂದ ತಿಳಿಯಬೇಕಾದ್ದನ್ನೆಲ್ಲ ತಿಳಿದುಕೊಂಡು ಆ ಬಳಿಕ ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಈ ನೀಚ ಇಂಡಿಯನ್ನರು. ಈಗ ಎನ್ ಕೌಂಟರ್ ದ ನಾಟಕ ಆಡುತ್ತಿದ್ದಾರೆ” ಎಂದುಕೊಂಡ. ಅವನಿಗೆ ಮತ್ತೊಂದು ಯೋಚನೆಯೂ ಹೊಳೆಯಿತು. ಶರಣು ಬಂದ ವೈರಿಯನ್ನು ಕೊಂದಂತೆ ನಾಟಕವಾಡಿ, ಅದಕ್ಕೆ ಪ್ರಚಾರ ಕೊಟ್ಟು, ಆ ಬಳಿಕ ಪ್ಲ್ಯಾಸ್ಟಿಕ್ ಸರ್ಜರಿಯ ಮೂಲಕ ಆ ವ್ಯಕ್ತಿಯ ರೂಪಾಂತರ ಮಾಡಿ ಗುಪ್ತಚಾರನಂತೆ ಉಪಯೋಗಿಸುವದು ಎರಡನೆಯ ಜಾಗತಿಕ ಯುದ್ಧಕಾಲದಿಂದಲೂ ಉಪಯೋಗದಲ್ಲಿರುವ ಒಂದು ತಂತ್ರ. ಭರತಖಾನನಿಗೂ ಹಾಗೆಯೇ ಆಗಿರಬಹುದೆ? “ಆಯಿತು, ಎಲ್ಲಾದರೂ ಸುಖವಾಗಿರಲಿ ಹಾಳಾದವನು” ಎಂದುಕೊಂಡ ಓಸಾಮಾ ಮಂಡಿಯೂರಿ ಅಲ್ಲಾನಿಗೆ ಪ್ರಾರ್ಥನೆ ಮಾಡಿದ.
……………………………………………….
ಬೆಂಗಳೂರಿನ ಹವ್ಯಾಸಿ ನಾಟ್ಯಸಂಘದವರು ‘ಯವನಿಕಾ’ದಲ್ಲಿ Parting Shot’ ಅನ್ನುವ ಇಂಗ್ಲಿಶ್ ನಾಟಕವಾಡುತ್ತಿದ್ದಾರೆ. ಪ್ರವಲ್ಲಿಕಾಳೆ ಹೀರೋಯಿನ್ ನಾಟಕದ ಕೊನೆಗೆ ಪ್ರಚಂಡ ಕರತಾಡನ.
ಪ್ರೇಕ್ಷಾಗೃಹ ಖಾಲಿಯಾದ ನಂತರ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಯೊಬ್ಬ ರಂಗದ ಮೇಲೆ ಬಂದ. ಅಚ್ಚುಕಟ್ಟಾಗಿ ಶೇವ್ ಮಾಡಿದ ದುಂಡು ಮುಖ, ಮಂಡ ಮೂಗು, ಕ್ಲೋಜ್ ಕಟ್ ಕ್ರಾಪು. ನೀಲಿ ಸಫಾರಿ ಧರಿಸಿದ್ದಾನೆ.
ಆತ ಪ್ರವಲ್ಲಿಕಾಳಿಗೆ ನಮಸ್ಕಾರ ಮಾಡಿ “ತುಂಬಾ ಚೆನ್ನಾಗಿ ಅಭಿನಯಿಸುತ್ತೀರಿ” ಎಂದು ಹೇಳಿ ತಿರುಗಿ ನಡೆದ.
ಆತ ಎರಡು ಹೆಜ್ಜೆ ಇಟ್ಟಿರಲಿಲ್ಲ, ಪ್ರವಲ್ಲಿಕಾ ಕೂಗಿದಳುಃ “ಭರತಖಾನ್!”
ಆತ ಆಶ್ಚರ್ಯದಿಂದ ಹೊರಳಿ, ಹೇಳಿದಃ ” ನೀವು ತಪ್ಪು ತಿಳಿದಿರಬೇಕು; ನನ್ನ ಹೆಸರು ಹರಿದಾಸ.”
ಪ್ರವಲ್ಲಿಕಾ ನಕ್ಕಳು. “ಭರತಖಾನ, ನೀನು ಯಾರನ್ನಾದರೂ ಮೋಸಗೊಳಿಸಬಹುದು. ಆದರೆ ನಿನ್ನ ಪ್ರಿಯತಮೆಯನ್ನು ಮೋಸಗೊಳಿಸಲಾರೆ.”
ಆತ ಗಲಿಬಿಲಿಗೊಂಡು ಅವಳ ನಗುತ್ತಿರುವ ಕಣ್ಣುಗಳನ್ನೇ ನೋಡತೊಡಗಿದ.
ಪ್ರವಲ್ಲಿಕಾ ತನ್ನೆರಡೂ ತೋಳುಗಳನ್ನು ಚಾಚಿ, “ನಮ್ಮ ನಿಕಾ ಎಲ್ಲಿ? ದುಬೈ ಅಥವಾ ಅಫಘಾನಿಸ್ತಾನ?” ಎಂದು ನಕ್ಕಳು.
ಆತ ಸರ್ರನೆ ಅವಳ ತೋಳುಗಳಲ್ಲಿ ಸೇರಿಕೊಂಡ.
“ಇಲ್ಲಿಯೇ, ಈ ರಂಗದ ಮೇಲೆ” ಎನ್ನುತ್ತ ಆತ ತನ್ನ ಬಿಳಿ ಪಾರಿವಾಳಕ್ಕೆ ಮುತ್ತು ಕೊಟ್ಟ.

***********
ಶಾಸ್ತ್ರಿಗಳಿಗೆ ಭರತಖಾನನಾಡಿದ ಕಪಟನಾಟಕ ಗೊತ್ತಾಗಿತ್ತು. ಹರಿದಾಸನ ವೇಷ ಹಾಕಿಕೊಂಡು ಬಂದು ತಮ್ಮನ್ನೆಲ್ಲಾ ಮರುಳುಗೊಳಿಸಿದವನು ಭಯೋತ್ಪಾದಕ ಭರತಖಾನನೇ ಎಂದು ತಿಳಿದು ನೊಂದುಹೋಗಿದ್ದರು. ಮೇಲಿಂದ ಮೇಲೆ ಬಂದೆರಗಿದ ಆಘಾತಗಳು ಅವರ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸಿದ್ದವು. ಮನೆತನದ ಶಾಸ್ತ್ರ, ಸಂಪ್ರದಾಯಗಳನ್ನೆಲ್ಲಾ ಗಾಳಿಗೆ ತೂರಿ ವಿದೇಶೀಯಳೊಬ್ಬಳನ್ನು ಸಂಗಾತಿಯಾಗಿ ಸ್ವೀಕರಿಸಿ, ಈಗ ಕಣ್ಮರೆಯಾಗಿಹೋಗಿರುವ ಮಗ, ಅದೆಷ್ಟೋ ಅಮಾಯಕರ ಬದುಕನ್ನು ಬಲಿ ತೆಗೆದುಕೊಂಡಿರುವ ನರರಾಕ್ಷಸ ಭರತಖಾನನನ್ನು ಮದುವೆಯಾಗುತ್ತೇನೆಂದು ಹಟ ಹಿಡಿದಿರುವ ಮಗಳು ಪ್ರವಲ್ಲಿಕಾ, ಅಪಾಯವೆಂದು ತಿಳಿದಿದ್ದೂ ಬಿಸಿಲುಗುದುರೆಯ ಬೆನ್ನುಹತ್ತಿರುವ ಹಿರಿಯ ಮಗಳು ಧಾರಿಣಿ… ಎತ್ತ ನೋಡಿದರೂ ಅವರಿಗೆ ನಿರಾಸೆಯೇ ಕಾದಿತ್ತು. ಬದುಕು ಸಾಕುಸಾಕೆನ್ನಿಸಿತ್ತು.

ಶಾರದಮ್ಮ ಪ್ರವಲ್ಲಿಕಾಳಿಗೆ ಎಷ್ಟೆಷ್ಟೋ ತಿಳುವಳಿಕೆ ಹೇಳಿನೋಡಿದರು. ಅವಳು ತನ್ನ ನಿರ್ಧಾರವನ್ನು ಬದಲಿಸಲು ತಯಾರಿರಲಿಲ್ಲ. ತಾಯಿ-ಮಗಳ ಮಾತುಕತೆಯನ್ನು ನಿರ್ವಿಕಾರ ಚಿತ್ತದಿಂದ ಕೇಳುತ್ತಿದ್ದ ಶಾಸ್ತ್ರಿಗಳು ಸರಸರನೆ ಎದ್ದು ಮನೆಯಿಂದ ಹೊರನಡೆದರು. ಪ್ರವಲ್ಲಿಕಾ ಮತ್ತು ಶಾರದಮ್ಮನವರೂ ಭಯದಿಂದ ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಯಾವುದೋ ಕರೆಯನ್ನು ಹಿಂಬಾಲಿಸಿದವರಂತೆ ದೊಡ್ದದೊಡ್ದ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ಪ್ರವಲ್ಲಿಕಾ, ಶಾರದಮ್ಮ ಅವರ ಹಿಂದೆ ಓಡು ನಡಿಗೆಯಲ್ಲಿ ಅವರನ್ನು ಕೂಗಿ ಕರೆಯುತ್ತಾ ಹಿಂದೆ ಓಡಿದರು. ಶಾಸ್ತ್ರಿಗಳು ಊರ ಮುಂದಿನ ದೇವಾಲಯ ತಲುಪಿದವರೇ ಮುಖ್ಯ ದ್ವಾರದ ಮುಂದೆ ಕುಸಿದುಬಿದ್ದರು. “ಲಕ್ಷ್ಮೀ ನರಸಿಂಹಾ… ನಿನ್ನ ಪರೀಕ್ಷೆ ಸಾಕಾಯಿತಪ್ಪಾ, ನನ್ನ ಕಣ್ಣ ಮುಂದೆ ನಡೆಯುತ್ತಿರುವ ಈ ಅನಾಚಾರಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಮುಂದೆ ನಡೆಯಲಿರುವ ಅನರ್ಥಗಳಿಗೆ ಸಾಕ್ಷಿಯಾಗಿ ನನ್ನನ್ನು ಇಲ್ಲಿ ಉಳಿಸಬೇಡ. ಇನ್ನು ನಿನ್ನ ಪಾದಕ್ಕೆ ಸೇರಿಸಿಕೋ.” ಎಂದು ಕೊನೆಯ ಬಾರಿಗೆ ಕೈಮುಗಿದು ಬೇಡಿದರು.

ಪ್ರವಲ್ಲಿಕಾ ನೆಲದ ಮೇಲೆ ಬಿದ್ದಿದ್ದ ಶಾಸ್ತ್ರಿಗಳನ್ನು ಅಲುಗಾಡಿಸಿದಳು. ಆದರೆ ಶಾಸ್ತ್ರಿಗಳ ಜೀವದ ಹಕ್ಕಿ ಅವರ ಇಷ್ಟ ದೈವ ನರಸಿಂಹನ ಸನ್ನಿಧಿಯನ್ನು ಸೇರಿ ಕೆಲವು ಕ್ಷಣಗಳೇ ಕಳೆದಿದ್ದವು.

ಭಾಗ – 16

ಮೋಶೆ ಕೋಹೆನ್ ಪ್ರತಿ ವರ್ಷವೂ ತನ್ನ ಹೆಂಡತಿ ಸಾರಾ ಹಾಗು ಮಗಳು ಗೋಲ್ಡಾ ಜೊತೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗುತ್ತಾನೆ. ಸಾರಾಗೆ ಪೇಂಟಿಂಗ್ಸ್ ಗಳ ಹುಚ್ಚು. ಪ್ಯಾರಿಸ್ ಹಾಗು ವರ್ಸಲೇಸ್ ಗಳ ಮ್ಯೂಜಿಯಮ್ ಗಳಿಗೆ ಅವಳು ಭೇಟಿ ಕೊಡುವದನ್ನು ತಪ್ಪಿಸುವದಿಲ್ಲ. ಮೋಶೆಗೆ ಲಲಿತ ಕಲೆಗಳೆಂದರೆ ತಾತ್ಸಾರ. MOSSADದ ಎರಡನೆಯ ಮುಖ್ಯಸ್ಥನಾದ ಅವನಿಗೆ ಲಲಿತ ಕಲೆಗಳು ಲಲಿತೆಯರ ವಿಭಾಗವೆನ್ನುವ ಮನೋಭಾವ. ಹೆಂಡತಿ ಮ್ಯೂಜಿಯಮ್ ಗೆ ಹೋದ ತಕ್ಷಣ ಮೋಶೆ ಕ್ಯಾಬರೆಗೆ ಓಡುತ್ತಾನೆ.
ಫ್ರೆಂಚ ಕ್ಯಾಬರೆ ಎಂದರೆ ಅವನಿಗೆ ಇನ್ನಿಲ್ಲದ ಮೋಹ. ಕೇವಲ ಹತ್ತು ವರ್ಷದ ಗೋಲ್ಡಾ ತಾಯಿಯನ್ನು ಹಿಂಬಾಲಿಸುತ್ತಾಳೆ.

ಮೋಶೆ ನಗ್ನ ಫ್ರೆಂಚ್ ಸುಂದರಿಯರ ಸೌಂದರ್ಯವನ್ನು ಕಣ್ಣುಗಳಿಂದ ಹೀರುತ್ತ, ಶಾಂಪೇನ್ ಆಸ್ವಾದಿಸುತ್ತಿದ್ದಾನೆ. ಅವನ ಸೆಲ್ ಫೋನ್ ಧ್ವನಿ ಮಾಡಿತು. ಮೊನಿಟರ್ ದಲ್ಲಿ ಸಾರಾಳ ಹೆಸರು ಕಂಡಿತು.
“ಥತ್ತೇರಿ,…….ಸೂಪಿನಲ್ಲಿ ನೊಣ!”, ಎಂದು ಗೊಣಗುತ್ತ ಮೋಶೆ ಸೆಲ್ಲಿನಲ್ಲಿ ವ್ಹಿಸ್ಪರಿಸಿದಃ “ಪ್ರಿಯೆ, ನಾನೀಗ ಫ್ರೆಂಚ್ ಗುಪ್ತಚಾರ ಇಲಾಖೆಯ ಮುಖ್ಯಸ್ಥನೊಂದಿಗೆ ಮಹತ್ವದ ಮಾತುಕತೆಯಲ್ಲಿದ್ದೇನೆ. ಇನ್ನೊಂದು ಗಂಟೆಯ ಬಳಿಕ ಹೊಟೆಲ್ಲಿಗೇ ಬರುವೆ.”
“ಈಡಿಯಟ್! ಗೋಲ್ಡಾ ಕಾಣೆಯಾಗಿದ್ದಾಳೆ. ತಕ್ಷಣವೇ ಮ್ಯೂಜಿಯಮ್ಮಿಗೆ ಬಾ.”
ಸೆಲ್ ಫೋನ್ ಬಂದಾಯಿತು. ಮೋಶೆಯ ಮುಖದಲ್ಲಿ ಬೆವರಿಳಿಯಿತು. ಹೊರಗೋಡಿ ಬಂದವನೇ, ಟ್ಯಾಕ್ಸಿಯನ್ನು ಮ್ಯೂಜಿಯಮ್ ಕಡೆಗೆ ಧಾವಿಸಲು ಹೇಳಿದ. ಮ್ಯೂಜಿಯಮ್ ಗೇಟಿನಲ್ಲಿ ಅಳುತ್ತಿದ್ದ ಸಾರಾ ನಿಂತಿಕೊಂಡಿದ್ದಳು. ಮೋಶೆ ಸಾರಾಳ ಹತ್ತಿರ ಬರುತ್ತಿದ್ದಂತೆಯೆ, ಅವನ ಸೆಲ್ ಫೋನ್ ಮತ್ತೆ ಗುಣಗುಣಿಸಿತು.” ಗಾಬರಿಯಾಗಬೇಡ, ಮಿಸ್ಟರ್ ಮೋಶೆ! ಗೋಲ್ಡಾ ನಮ್ಮ ಬಳಿ ಸುರಕ್ಷಿತವಾಗಿದ್ದಾಳೆ. ನೀನು ಫ್ರೆಂಚ್ ಪೋಲೀಸರನ್ನಾಗಲಿ ಅಥವಾ ಗುಪ್ತಚಾರ ಇಲಾಖೆಯನ್ನಾಗಲಿ ಸಂಪರ್ಕಿಸುವ ಮೂರ್ಖತನ ಮಾಡಬೇಡ. ನಿನ್ನ ಹೊಟೆಲ್ಲಿಗೆ ಮರಳು. ಅಲ್ಲಿ ನಿನಗೆ ಹೆಚ್ಚಿನ ವಿವರಗಳು ದೊರೆಯುವವು.”

ಹೊಟೆಲ್ಲಿಗೆ ಮರಳಿದ ಮೋಶೆಗೆ ರಿಸೆಪ್ಶನ್ನಿನಲ್ಲಿ ಒಂದು ಸಂದೇಶ ಕಾದಿತ್ತುಃ
“ಮೋಶೆ, ನಿನ್ನ ಮೂರ್ಖ ಗುಪ್ತಚಾರ ಪಡೆ, ದುಬೈದಿಂದ ‘ಪ್ರವಲ್ಲಿಕಾ’ ಎನ್ನುವ ಹೆಸರಿನ ಒಬ್ಬ ಇಂಡಿಯನ್ ಹುಡುಗಿಯನ್ನು ವಿನಾಕಾರಣವಾಗಿ ಅಪಹರಿಸಿದ್ದಾರೆ. ಅವಳನ್ನು ತಕ್ಷಣವೇ ಪೇಶಾವರಕ್ಕೆ ಕರೆ ತಂದು ಪಾಕಿಸ್ತಾನದ ISI HQSಗೆ ಒಪ್ಪಿಸಬೇಕು. ಈ ದಿನ ರಾತ್ರಿ ಹತ್ತು ಗಂಟೆಯವರೆಗೆ ಇಂಡಿಯನ್ ಹುಡುಗಿ ಪೇಶಾವರದಲ್ಲಿ ಕಾಣದಿದ್ದರೆ, ನಿನ್ನ ಮುದ್ದು ಮಗಳ ಮೇಲೆ ಹಿಂಸೆ ಪ್ರಾರಂಭವಾಗುವದು. ನೀನು ಜಾಣನಾದರೆ ನಿನಗೆ ನಿನ್ನ ಮಗಳು ಮರಳಿ ದೊರೆಯುವಳು. ಖುದಾ ಹಾಫೀಜ್!
………………………………………….
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದ ಶಾಸ್ತ್ರಿಗಳಿಗೆ ಹರಿದಾಸರು ಕಾಣಲಿಲ್ಲ. ಶೌಚಕ್ಕೆ ಹೋಗಿರಬಹುದು ಎಂದುಕೊಂಡರು. ಸಂಜೆಯಾದರೂ ಅವರ ಸುಳಿವಿಲ್ಲ. ತಂಬೂರಿಯೇನೋ ಅಲ್ಲಿಯೇ ಇದೆ. ಅದರ ಬುರುಡೆಯ ಬಿರಟೆಯೊಂದು ಬಿಚ್ಚಿದ್ದು ಕಂಡಿತು. ಅದನ್ನು ಸರಿಪಡಿಸಿ ತಂತಿಗಳ ಮೇಲೆ ಕೈ ಎಳೆದರು. ಸುಶ್ರಾವ್ಯ ಆಲಾಪವಾಯಿತು. ಹರಿದಾಸರು ನಾರದ ಮುನಿಗಳೇ ಎನ್ನುವದರಲ್ಲಿ ಶಾಸ್ತ್ರಿಗಳಿಗೆ ಏನೂ ಸಂಶಯ ಉಳಿಯಲಿಲ್ಲ. ಎಲ್ಲಿಂದಲೋ ಪ್ರತ್ಯಕ್ಷತರಾಗಿ, ಈಗ ಎಲ್ಲಿಯೋ ಮಾಯವಾಗಬೇಕಾದರೆ, ಇದು ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳಿಗೆ ಮಾತ್ರ ಸಾಧ್ಯ. ತಮ್ಮ ನೆನಪಿಗಾಗಿ ಈ ತಂಬೂರಿಯನ್ನು ಬಿಟ್ಟು ಹೋಗಿರಬೇಕು! ಶಾಸ್ತ್ರಿಗಳು ತಂಬೂರಿಗೆ ಸಾಷ್ಟಾಂಗ ಪ್ರಣಾಮ ಹಾಕಿದರು.
……………………………………………..
ಪೇಶಾವರದಲ್ಲಿ ಇಳಿದ ಭರತಖಾನ ಅಲ್ಲಿಯ ISI HQSಗೆ ತೆರಳಿದ. ಅವನ ಬಿಳಿಯ ಪಾರಿವಾಳ ಅಲ್ಲಿಯೇ ಮುದುಡಿಕೊಂಡು ನಿಂತಿತ್ತು. HQSದ ಅಧಿಕಾರಿ, “ನಿಮಗಾಗಿ ಹೆಲಿಕಾಪ್ಟರ್ ಸಿದ್ಧವಿದೆ. ಓಸಾಮಾ ಅಫಘಾನದ ಗವಿಯಲ್ಲಿ ತಮಗಾಗಿ ಕಾಯುತ್ತಿದ್ದಾರೆ” ಏಂದು ಹೇಳಿದ. ಪ್ರವಲ್ಲಿಕಾಳಿಗೆ ಬಲವಂತವಾಗಿ ಹಿಮದುಡುಗೆ ತೊಡಿಸಿ, ಹೆಲಿಕಾಪ್ಟರನಲ್ಲಿ ಹತ್ತಿಸಿದ ಭರತಖಾನ ಅಫಘಾನದ ಕಡೆಗೆ ಹಾರಿದ.

ಒಂದರ್ಧ ಗಂಟೆಯಲ್ಲಿಯೇ ಅಕಾಲಿಕ ಹಿಮವರ್ಷ ಹಾಗು ಭೀಕರ ಬಿರುಗಾಳಿ ಪ್ರಾರಂಭವಾಯಿತು. ಈ ಋತುವಿನಲ್ಲಿ ಹೀಗಾಗಬಾರದು. ಭರತಖಾನನಿಗೆ ಹೆಲಿಕಾಪ್ಟರ್ ನಿಯಂತ್ರಣ ಬಹಳ ಕಷ್ಟವಾಯಿತು. ತಾನು ಎಲ್ಲಿ ಹೋಗುತ್ತಿದ್ದೇನೆ ಎನ್ನುವದೇ ಅವನಿಗೆ ತಿಳಿಯದಾಯಿತು. ಕೊನೆಗೊಮ್ಮೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಹಿಮಬಂಡೆಯೊಂದಕ್ಕೆ ಅಪ್ಪಳಿಸಿತು. ಭರತಖಾನನಿಗೆ ತನ್ನ ಕೈಕಾಲುಗಳನ್ನು ಚಲಿಸಲೂ ಆಗಲಿಲ್ಲ. ಭೂಮಿ ಹಾಗು ಆಕಾಶ ತುಂಬಿದ ಬಿಳಿ ಹಿಮ ಬಿಟ್ಟು ಮತ್ತೇನೂ ಕಾಣದು. ಈ ಹಿಮದ ಮಧ್ಯೆ ಓರ್ವ ದೇವತೆ ಪ್ರತ್ಯಕ್ಷಳಾದಂತೆ ಅವನಿಗೆ ತೋರಿತು. ತನ್ನ ಮರಗಟ್ಟಿದ ದೇಹವನ್ನು ಅವಳೇ ಎಳೆಯುತ್ತ ಸಾಗಿಸುತ್ತಿರುವಂತೆ ಅವನಿಗೆ ಭಾಸವಾಯಿತು. ತಾನು ಚಿಕ್ಕವನಿದ್ದಾಗ ತನ್ನ ತಂದೆ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳು ಅವ ಮನಸ್ಸಿನಲ್ಲಿ ಕೇಳತೊಡಗಿದವುಃ “ಯಾ ದೇವಿ ಸರ್ವಭೂತೇಷು ಚೈತನ್ಯರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
…………………………………………………
ಹೀಗೆ ಎಷ್ಟು ಹೊತ್ತು ಕಳೆಯಿತೊ ಅವನಿಗೆ ತಿಳಿಯದು. ಎಚ್ಚರವಾದಾಗ, ಎಣ್ಣೆ ದೀಪದ ಮಂದ ಬೆಳಕಿನಲ್ಲಿ ಶಾಂತ ಮುಖದ ವೃದ್ಧರೊಬ್ಬರು ಕಂಡರು. ಅವರ ಪಕ್ಕದಲ್ಲಿ ಪ್ರವಲ್ಲಿಕಾ.
“ಎಚ್ಚರವಾಯಿತೆ ಮಗೂ? ಸ್ವಲ್ಪ ಬಿಸಿ ಗಂಜಿ ಕುಡಿ”, ವೃದ್ಧರು ಮೃದುವಾಗಿ ನುಡಿದರು.
“ನೀವಾರು? ಇದು ಯಾವ ಜಾಗ?”,ಭರತಖಾನ ಕೇಳಿದ.
“ಮಗು, ನೀನು ಪಾಕಿಸ್ತಾನದ ಹಿಂಗ್ಲಾಜ ಹಳ್ಳಿಯಲ್ಲಿರುವ ಮಾತಾ ಹಿಂಗ್ಲಜಾ ದೇವಿಯ ಗುಡಿಯಲ್ಲಿರುವೆ. ನೀನು ಎಚ್ಚರ ತಪ್ಪಿ ಬಿದ್ದಾಗ, ಈ ಹುಡುಗಿ ನಿನ್ನನ್ನು ನಾಲ್ಕು ಕಿಲೋಮೀಟರ್ ದೂರದವರೆಗೆ ಎಳೆಯುತ್ತ, ಇಲ್ಲಿಗೆ ತಂದಿದ್ದಾಳೆ. ನಿನಗೆ ಎರಡು ದಿನಗಳವರೆಗೆ ಎಚ್ಚರವಿರಲಿಲ್ಲ.”,ವೃದ್ಧರು ನುಡಿದರು.
“ಹಾಗಾದರೆ ತಾನು ಕನಸಿನಲ್ಲಿ ಕಂಡ ದೇವಿ ಪ್ರವಲ್ಲಿಕಾಳೆ? ನನ್ನನ್ನು ಬಿಟ್ಟು ಓಡಿ ಹೋಗದೆ, ನನಗೆ ಆರೈಕೆ ಮಾಡಿದವಳು ಪ್ರವಲ್ಲಿಕಾಳೆ?”, ಭರತಖಾನ ಅಚಚರಿಪಟ್ಟ. ತಂದೆ ತನ್ನೆದುರು ನುಡಿಯುತ್ತಿದ್ದ ಶ್ಲೋಕಗಳು ನೆನಪಾದವುಃ “ಯಾ ದೇವಿ ಸರ್ವಭೂತೇಷು ಕ್ಷಮಾರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
ಭರತಖಾನ ಎದ್ದು ನಿಂತ. ವೃದ್ಧರ ಕಾಲಿಗೆರಗಿ, “ನನ್ನನ್ನು ಕ್ಷಮಿಸಿರಿ; ನಾನೊಬ್ಬ ಭಯೋತ್ಪಾದಕ”, ಎಂದು ನುಡಿದ.
“ಕ್ಷಮಿಸಲು ನಾನಾರಪ್ಪ, ಪ್ರವಲ್ಲಿಕಾಳೆ ನಿನ್ನನ್ನು ಕ್ಷಮಿಸಿದ್ದಾಳಲ್ಲ!”, ಎಂದರು ವೃದ್ಧರು.
“ಪ್ರವಲ್ಲಿಕಾ, ಮೊದಲು ನಿನ್ನನ್ನು ಸುರಕ್ಷಿತವಾಗಿ ನಿಮ್ಮೂರಿಗೆ ಮುಟ್ಟಿಸುವೆ. ಆ ಬಳಿಕ ನಾನು ಅಫಘಾನಿಸ್ತಾನಕ್ಕೆ ಹೋಗುವೆ”, ಭರತಖಾನ ಹೇಳಿದ.
………………………………..
ಓಸಾಮಾ ಬಿನ್ ಲಾಡೆನ್ ಅಚ್ಚರಿಯಿಂದ ನೋಡುತ್ತಿದ್ದಾನೆ. ಭರತಖಾನ ತನ್ನ ಪಿಸ್ತೂಲನ್ನು ಓಸಾಮಾನ ಎದುರಿಗೆ ಇಟ್ಟು, “ವಲೀಸಾಬ್, ನನ್ನ ಮನಸ್ಸು ಬದಲಾಗಿದೆ. ನಾನು ಭಯೋತ್ಪಾದನೆಯನ್ನು ಬಿಟ್ಟು ಬಿಡುತ್ತಿದ್ದೇನೆ”, ಎಂದು ಹೇಳುತ್ತಿದ್ದಾನೆ.
“ಎಲ್ಲಿ ಹೋಗುತ್ತಿ?”, ಓಸಾಮಾ ಕೇಳಿದ.
“ಇಂಡಿಯನ್ ಆರ್ಮಿಗೆ ಸರೆಂಡರ್ ಆಗುತ್ತೇನೆ.”, ಭರತಖಾನ ದೃಢವಾದ ದನಿಯಲ್ಲಿ ಉತ್ತರಿಸಿದ.
ಓಸಾಮಾ ನಿಬ್ಬೆರಗಾದ, ಸಿಂಹದ ಗವಿಯಲ್ಲಿ ನಿಂತುಕೊಂಡೆ, ಸಿಂಹದ ಹಲ್ಲೆಣಿಸುವ ಧೈರ್ಯಕ್ಕೆ! ಅದಕ್ಕೆ ಅಲ್ಲವೆ ಈ ಬಚ್ಚಾ ತನಗೆ ಅಷ್ಟು ಪ್ರೀತಿಯವನಾದದ್ದು, ತನ್ನ ಮಾನಸಪುತ್ರನಾದದ್ದು. ಆದರೆ ಈಗ ತನಗೇ ದ್ರೋಹ ಬಗೆಯುತ್ತಿದ್ದಾನೆ. ಅಪ್ಪನನ್ನೇ ಬಾಂಬು ಹಾಕಿ ಉಡಾಯಿಸಿದವನಿಗೆ ಚಿಕ್ಕಪ್ಪನ ಮೇಲೆಂತಹ ಪ್ರೀತಿ?
ಓಸಾಮಾ ವ್ಯಗ್ರನಾದ. ಅವನ ಬೆರಳು ಪಿಸ್ತೂಲಿನ ಸೇಫ್ಟಿ ಕ್ಯಾಚನ್ನು ಹಿಂದೆ ಸರಿಸಿತು. ಒಡೆಯನ ಅಪ್ಪಣೆಯಾದರೆ ಭರತಖಾನನನ್ನು ಕೊಚ್ಚಿಹಾಕಲು, ಓಸಾಮಾನ ಅನುಯಾಯಿಗಳು ಸಿದ್ಧರಾಗಿ ನಿಂತಿದ್ದರು.
ಭರತಖಾನನ ಕಡೆಗೆ ಬೆನ್ನು ಮಾಡಿದ ಓಸಾಮಾ ತನ್ನ ಅನುಚರರಿಗೆ ಅಪ್ಪಣೆ ಮಾಡಿದಃ”ಇವನನ್ನು ಭಾರತದ ಗಡಿಯಲ್ಲಿ ಸುರಕ್ಷಿತವಾಗಿ ಇಳಿಸಿ ಬನ್ನಿರಿ”.
ಅವನ ಜೀವನದಲ್ಲಿಯೆ ಮೊದಲ ಬಾರಿಗೆ ಒಂದು ಹನಿ ನೀರು ಓಸಾಮಾನ ಕಣ್ಣಿನಿಂದ ಜಾರಿತು.

ಭಾಗ – 15

ತೇಜಸ್ಸು ಉಕ್ಕುವ ಮುಖ, ಹಣೆಯಲ್ಲಿ ನಾಮ, ತಲೆಗೆ ಪಾವುಡ. ಕೈಯಲ್ಲಿ ತಾಳ ಹಾಗು ತಂಬೂರಿ ಹಿಡಿದುಕೊಂಡು, “ಹರಿಯ ನೆನೆಯಲೆ ಮನವೆ. . . ” ಎಂದು ಹಾಡುತ್ತ, ತಮ್ಮ ಮನೆಯಂಗಳದಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ಪ್ರತ್ಯಕ್ಷರಾದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ ಸಾಕ್ಷಾತ್ ಶ್ರೀಹರಿಯನ್ನೇ ಕಂಡಷ್ಟು ಸಂತೋಷವಾಯಿತು.

“ಬನ್ನಿ, ಬನ್ನಿ, ಒಳಗೆ ದಯಮಾಡಿಸಿ”, ಎಂದು ಆದರದಿಂದ ಕರೆದು, ಕೈಕಾಲಿಗೆ ನೀರು ತರಲು, ಹೆಂಡತಿಗೆ ಕೂಗಿ ಹೇಳಿದರು. ಶಾರದಮ್ಮನವರೂ ಸಹ ಸಂಭ್ರಮದಿಂದ ನೀರು ತಂದು ಕೊಟ್ಟು ನಡುಮನೆಯಲ್ಲಿ ಮಣೆ ಹಾಕಿದರು. ಬಾಯಾರಿಸಿಕೊಳ್ಳಲಿ ಬ್ರಾಹ್ಮಣ ಎಂದು ಒಂದು ಲೋಟ ಬಿಸಿ ಬಿಸಿ ಬಾದಾಮಿ ಹಾಲನ್ನು ಮುಂದಿಟ್ಟರು. ಹಾಲನ್ನು ಕಂಡು ಬೆಚ್ಚಿಬಿದ್ದ ಹರಿದಾಸರು ಬಾಳೆಹಣ್ಣಷ್ಟೆ ತಮಗೆ ಸಾಕು ಎಂದು ಹೇಳಿದರು.
“ಯಾವ ಊರಾಯಿತು, ಸ್ವಾಮಿ ತಮ್ಮದು?”, ಶಾಸ್ತ್ರಿಗಳು ಗೌರವದಿಂದ ಕೇಳಿದರು.
“ಅಲ್ಲಿರುವದುssss ನಮ್ಮ ಮನೇssss
ಇಲ್ಲಿರುವದೂssss ಸುಮ್ಮನೇssssss”
ಎಂದು ಉಸರಿದ ದಾಸರು,
“ಹರಿ ನಾರಾಯಣ, ಹರಿನಾರಾಯಣ, ಹರಿ ನಾರಾಯಣ, ಎನು ಮನವೆ”, ಎಂದು ತಾಳ ಕುಟ್ಟುತ್ತ ಹಾಡಲಾರಂಭಿಸಿದರು.
ಇದೆಲ್ಲ ಸಂಭ್ರಮ, ಸಂತೋಷವನ್ನು ಕೇಳಿಸಿಕೊಂಡ ಜೇನಿ ಹಾಗು ಹ್ಯಾರಿ ಅಟ್ಟದಿಂದ ಕೆಳಗಿಳಿದು ಬಂದರು.
‘ಹರಿ, ಹರಿ’ ಎಂದು ಹಾಡುತ್ತಿದ್ದದ್ದನ್ನು ಕೇಳಿದ ಹ್ಯಾರಿ,
“Mummy why is he calling my name?”, ಎಂದು ಕೇಳಿದ.(ಹ್ಯಾರಿಯನ್ನು ಅವನ ಅಪ್ಪ ಪ್ರತಾಪ ‘ಹರಿ’ ಎಂದೇ ಕರೆಯುತ್ತಿದ್ದ.)
ತಕ್ಷಣವೇ ಹರಿದಾಸರು,
“ಹರಿ ಓಮ್ ಹರಿ,
ಹರಿ ಓಮ್ ಹರಿ,
Bury your worry,
Come here, ಮರಿ”
ಎಂದು ರಾಗವಾಗಿ ಹೇಳಿದರು.

ಶಾಸ್ತ್ರಿಗಳಿಗೆ ಹಾಗು ಶಾರದಮ್ಮನವರಿಗೆ ಪರಮಾಶ್ಚರ್ಯ. ಜೇನಿಗೆ ಸಂತೋಷಾಘಾತ. ‘ಇಂಡಿಯಾದಲ್ಲಿ spiritual power ಇದೆ.’ ಎಂದು ಪ್ರತಾಪ ಹೇಳುತ್ತಿದ್ದದ್ದು ನಿಜವೆನಿಸಿತು ಜೇನಿಗೆ. ತಕ್ಷಣವೇ ತಾನೂ ಸಹ ಇಂಡಿಯನ್ನರಂತೆ ಹರಿದಾಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ, “ಸ್ವಾಮಿಜಿ, ಹ್ಯಾರಿಗೆ ಯಾವ ರೋಗವಾಗಿದೆಯೊ, ಯಾವ ಡಾಕ್ಟರಿಗೂ ಗೊತ್ತಾಗುತ್ತಿಲ್ಲ. ದಯವಿಟ್ಟು ನಿಮ್ಮ spritual power ಉಪಯೋಗಿಸಿ ಅವನನ್ನು ಗುಣಪಡಿಸಿ”, ಎಂದು ಕೋರಿದಳು.

“ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೊ!
ಘನ್ನಮಹಿಮ ಜಗನ್ನಾಥವಿಠಲಪ್ರಿಯ
ನಿನ್ನಾರಾಧನೆ ಮಾಡಿಸೊ!”
ಎಂದು ಹರಿದಾಸರು ರಾಘವೇಂದ್ರಸ್ವಾಮಿಗಳ ಮೇಲೆ ಆ ಹೊಣೆ ಹೊರಿಸಿದರು.
. . . . . . . . . . . . . . . . . . . . . . . . .
ಒಂದೇ ಗಂಟೆಯಲ್ಲಿ ಆ ಕುಟುಂಬದವರೆಲ್ಲರ ವಿಶ್ವಾಸ ಗಳಿಸಿಕೊಂಡ ಭರತಖಾನನಿಗೆ ಪ್ರವಲ್ಲಿಕಾ ಹಾಗು ಧಾರಿಣಿ ಇವರೀರ್ವರೂ ಇಲ್ಲಿಯವರೆಗೂ ನಾಪತ್ತೆಯಾಗಿಯೇ ಇರುವದು ಗೊತ್ತಾಯಿತು.
ಜೇನಿ ಇವಳು WTO ಸ್ಫೋಟದಲ್ಲಿ ಮೃತನಾದ ಪ್ರತಾಪನ ಅಮೇರಿಕನ್ ಹೆಂಡತಿ ಎಂದೂ ಗೊತ್ತಾಯಿತು. ತಿಳಿಯದ ರೋಗದಿಂದ ಬಳಲುತ್ತಿರುವ ತನ್ನ ಮಗ ಹ್ಯಾರಿಯನ್ನು ಇಂಡಿಯಾಕ್ಕೆ ಕರೆದುಕೊಂಡ ಬಂದ ಜೇನಿಯ ಉದ್ದೇಶವೂ ಗೊತ್ತಾಯಿತು.

ಆ ರಾತ್ರಿ ತಮ್ಮ ಕೊನೆಯ ಕೀರ್ತನೆಯನ್ನು ಹಾಡುವ ಮುನ್ನ ಹರಿದಾಸರು, ತಂಬೂರಿಯ ಮೇಲಿನ ಬಿರಡೆಯನ್ನು ಸರಿಗೊಳಿಸುವಂತೆ ನಟಿಸುತ್ತ, ಅದರಲ್ಲಿ ಅಡಗಿಸಿದ್ದ ಶಕ್ತಿಶಾಲಿ ಟ್ರಾನ್ಸಮಿಟರದ ಬಟನ್ ಒತ್ತಿದರು. ಆಮೇಲೆ ಕೊನೆಯ ಕೀರ್ತನೆಯನ್ನು ಹಾಡಿದರುಃ
“ಗಿಳಿಯು ಪಂಜರದೊಳಿಲ್ಲಾ, ಓ ಸಾಮಾ, ಓಸಾಮಾ!
ಬರಿದೇ ಪಂಜರವಾಯಿತಲ್ಲಾ!”
,,,,,,,,,,,,,,,,,,,,,,,,,,,,,,,,,,,
ಇತ್ತ ಟ್ರಾನ್ಸಮಿಟರ್ ರಿಸೀವರನಲ್ಲಿ ಓಸಾಮಾ ಭರತಖಾನನ ಈ ಒರಲನ್ನು ಕೇಳಿದ. ತನ್ನ ಮಾನಸಪುತ್ರನಿಗೆ ಒದಗಿದ ಈ ದುರ್ಗತಿಯಿಂದ ಅವನಿಗೆ ಖೇದವಾಯಿತು. ಭರತಖಾನನ ಗಿಳಿಯನ್ನು ಭಾರತೀಯ ದೂತಾವಾಸದಿಂದ ಅಪಹರಿಸಿದ ಸುದ್ದಿಯೂ ಅವನಿಗೆ ಇಷ್ಟರಲ್ಲೆ ತಿಳಿದಿತ್ತು. ಇಂತಹ ಧೈರ್ಯ, ಚಾಕಚಕ್ಯತೆ ಹಾಗು ಸಂಘಟನಾ ಶಕ್ತಿ ಇರುವ ಸಂಸ್ಥೆಗಳು ಎರಡೇ ಎರಡಿವೆ. ಒಂದು ಅಮೆರಿಕದ CIA, ಎರಡನೆಯದು ಇಸ್ರೇಲಿನ MOSSAD. ಇರಾಕ ರಣಭೂಮಿಯಲ್ಲಿ ಸಿಲುಕಿದ CIA ಈ ಚಿಲ್ಲರೆ ಕೆಲಸಕ್ಕೆ ಕೈಹಾಕುವದಿಲ್ಲ. ಹಾಗಾದರೆ ಇದು MOSSADದ ಕೆಲಸ! (ಏತಕ್ಕಾಗಿ ಈ ಸಾಹಸ ಮಾಡಿದರೊ?) ಅರಬರ ಆಜನ್ಮ ವೈರಿಗಳಾದ ಇಸ್ರೇಲಿಗಳ ಈ ವ್ಯೂಹದಿಂದ ಭರತಖಾನನ ಪ್ಯಾರಿ ಲಕಡಿಯನ್ನು ಹೊರತರುವದು ಅಸಾಧ್ಯ. ಆದರೆ ಅಸಾಧ್ಯವೆನ್ನುವದು ಲಾಡೆನ್ನನ ಶಬ್ದಕೋಶದಲ್ಲಿಲ್ಲ!

***

ಸಕಲ ಪೀಡಾ ಪರಿಹಾರಕ್ಕೆಂದು ಶಾಸ್ತ್ರಿಗಳ ಮನೆಯಲ್ಲಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರವನ್ನು ಸಾಂಗೋಪಾಂಗವಾಗಿ ನೆರವೇರಿಸಲಾಯಿತು. ಹರಿದಾಸರು ದಿನವೆಲ್ಲ ಕೀರ್ತನೆಳನ್ನು ಹಾಡುತ್ತ ಎಲ್ಲರ
ಮನಸ್ಸನ್ನು ಗೆದ್ದುಕೊಂಡರು. ಹ್ಯಾರಿಯಂತೂ “ಸ್ವಾಮೀಜಿ ಅಂಕಲ್ ” ಎನ್ನುತ್ತ ಅವರ ಜೊತೆಗೇ ಇರುತ್ತಿದ್ದ. ಹರಿದಾಸರು ಹಯಗ್ರೀವ, ಬಾಳೆಹಣ್ಣು ಮೆದ್ದು ಮೆದ್ದು ತಮ್ಮ ಕಳೆಯನ್ನು ಹೆಚ್ಚಿಸಿಕೊಂಡರು. ಯಾಕೊ ಹಾಲು ಮಾತ್ರ ಅವರಿಗೆ ವರ್ಜ್ಯ. ಕೆಲವೊಮ್ಮೆ ಹರಿದಾಸರಿಗೆ ಒಳಗೊಳಗೇ ಅಂಜಿಕೆಯಾಗಿಬಿಡುತ್ತಿತ್ತುಃ ತಾನು ನಿಜವಾಗಿಯೂ ಕಾಫರನೇ ಆಗಿಬಿಡುವೇನೇನೋ ಎಂದು. ಆದರೆ ಮತ್ತೆ ಗಟ್ಟಿ ಮನಸ್ಸು ಮಾಡಿಕೊಂಡು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರುಃ “ಲವ್ ಕೆ ಲಿಯೆ ಕುಛ್ ಭೀ ಕರೇಗಾ!”

……………………..
ಅಫಘಾನಿಸ್ತಾನದ ಗುಡ್ಡಗಾಡಿನ ತನ್ನ ಗವಿಯಲ್ಲಿ ಒಂದು ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದ ಓಸಾಮಾನ ಟ್ರಾನ್ಸಮೀಟರ್ ಬೀಪ್ ಎಂದಿತು. ರಿಸೀವರ ಮೇಲೆತ್ತಿದಾಗ ಖನ್ನಡದ ಖಿರ್ತನೆಯೊಂದು ಕೇಳಿಸಿತುಃ
“ತಾಳುವಿಕೆಗಿಂತ ಅನ್ಯ ತಪವು ಇಲ್ಲ!”

ಓಸಾಮಾ ನಿಟ್ಟುಸಿರುಬಿಟ್ಟ.

ಭಾಗ – 14

ಶಾರದಮ್ಮ, ಶಾಸ್ತ್ರಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳಾದ ಪ್ರವಲ್ಲಿಕಾ, ಧಾರಿಣಿಯರಿಬ್ಬರೂ ಕಣ್ಮರೆಯಾಗಿಹೋಗಿದ್ದು ಅವರನ್ನು ದಿಗ್ಭಾಂತರನ್ನಾಗಿಸಿತ್ತು. ಆಕಾಶ ಮತ್ತು ಅಮೆರಿಕಾದಿಂದ ಬಂದಿದ್ದ ರಾಜೀವ ಅವರನ್ನು ಸಂತೈಸುವಲ್ಲಿ ವಿಫಲರಾಗಿದ್ದರು. ಧಾರಿಣಿ, ಪ್ರವಲ್ಲಿಕಾರ ಬಗ್ಗೆ ಅವರಿಗೂ ಸರಿಯಾದ ಮಾಹಿತಿ ತಿಳಿದಿರಲಿಲ್ಲ. ಪ್ರವಲ್ಲಿಕಾಳಿಂದ ’ತಾನು ಕ್ಷೇಮವಾಗಿದ್ದೇನೆ’ ಎಂಬ ಸಂದೇಶ ಬಂದಿದ್ದರೂ ಅವಳು ದುಬೈಗೆ ಹೋಗಿದ್ದೇಕೆ? ಅವಳನ್ನು ಅಲ್ಲಿಗೆ ಕರೆದೊಯ್ದವರಾರು ಎಂಬ ಶಾರದಮ್ಮನ ಪ್ರಶ್ನೆಗೆ ಯಾರೂ ಉತ್ತರಿಸುವಂತಿರಲಿಲ್ಲ. ಯಾವ ಗಳಿಗೆಯಲ್ಲಿ ಯಾರಿಂದಲಾದರೂ, ಏನಾದರೂ ವಿಷಯ ತಿಳಿದೀತೇ ಎಂದು ಎಲ್ಲರೂ ಕಾದು ಕುಳಿತಿದ್ದರು.

ಒಟ್ಟಿನಲ್ಲಿ ಶಾಸ್ತ್ರಿಗಳು ಭವಿಷ್ಯ ನೋಡಿ ಹೇಳಿದ್ದ ಗಂಡಾಂತರ ಕಾಲ ಇದೇ ಇರಬಹುದೆಂಬುದನ್ನು ಮಾತ್ರ ಎಲ್ಲರೂ ನಂಬಿದಂತಿತ್ತು. ’ದೇವರು ದಿಂಡರು ಯಾವುದೂ ಇಲ್ಲ, ಜ್ಯೋತಿಷ್ಯ, ಗ್ರಹಚಾರ ಎಲ್ಲಾ ಶುದ್ಧ ಸುಳ್ಳು, ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ….’ ಎಂದು ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಕಾಶನಿಗೂ ತಮ್ಮೆಲ್ಲರನ್ನೂ ಮೀರಿದ ಶಕ್ತಿಯೊಂದು ಎಲ್ಲೋ ದೂರದಲ್ಲಿದ್ದುಕೊಂಡು ನಮ್ಮನ್ನೆಲ್ಲಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರಬಹುದೇ ಅನಿಸುವ ಮಟ್ಟಿಗೆ, ಇದ್ದಕ್ಕಿದ್ದಂತೆ ಎದುರಾದ ಪರಿಸ್ಥಿತಿ ಎಲ್ಲರನ್ನೂ ಕಂಗಾಲು ಮಾಡಿಹಾಕಿತ್ತು.

ಶಾಸ್ತ್ರಿಗಳು ಮನೆ ಮುಂದಿನ ತೋಟದ ಅಂಗಳದಲ್ಲಿ ಚಿಂತಾಮಗ್ನರಾಗಿ ಕೂತಿದ್ದರು ಎದುರಿಗೆ ಕಾಣಿಸಿಕೊಂಡ ಅವಳನ್ನು ನೋಡಿ ಕಣ್ಣುಜ್ಜಿಕೊಂಡರು ತಿಳಿನೀಲಿ ಜೀನ್ಸ್ ಅದರಮೇಲೆ ದೊಗಳೆ ಶರ್ಟ್ ಧರಿಸಿದ ಹೊಂಗೂದಲಿನ ನೀಲಿಕಂಗಳ ಚೆಲುವೆ ನಸು ನಗುತ್ತಿದ್ದಾಳೆ! ಕನಸೇ ಇದು..?ಅಲ್ಲಾ…ಅವಳ ಜೊತೆ ಇ ದ್ದ ಅರೇಳರ ಪುಟಾಣಿ ಹುಡುಗ ಬಂದು ಶಾಸ್ಸ್ರಿಗಳ ಕೈ ಎಳೆದಾಗ ಅದು ಖಾತ್ರಿ ಯಾಯಿತು ಆದರವಳು ಅಮೆರಿಕನ್ ಆಯಕ್ಸೆಂಟ್ನಲ್ಲಿ ಮಾತಾಡಲಾರಂಭಿಸಿದಾಗ ಮಾತ್ರ ಶಾಸ್ತಿಗಳು ಕಕ್ಕಾಬಿಕ್ಕಿಯಾದರು ಆ ಪುಟಾಣಿಯ ಮೊಗದಲ್ಲಿ ಕಂಡ ಮಿಂಚು ಪರಿಚಿತವೆನಿಸಿತು….ಶಾರದಾ…ಶಾಸ್ರಿಗಳ ಕೂಗಿಗೆ ಹೊರಬಂದ ಶಾರದಮ್ಮನೂ ಕಣ್ಣರಿಳಿಸಿಕೊಂಡು ನಿಂತು ಬಿಟ್ಟಿದ್ದಾರೆ ಆಗವರ ನೆರವಿಗೆ ಬಂದವನು ಸದ್ಯಕ್ಕೆ ಮನೆಯಲ್ಲೇ ಇದ್ದ ಆಕಾಶ. ಅವಳು ಹೇಳಿದ್ದನ್ನು ಆಕಾಶ ಕನ್ನಡಕ್ಕೆ ಮಾಡಿ ಹೇಳಿದಾಗ….`ಇವನು ನಿಮ್ಮ ಮೊಮ್ಮಗ…ಪ್ರತಾಪನ ಮಗ…ಪ್ರತಾಪ ಕಣ್ಮರೆಯಾಗುವಾಗ ನಾನು ನಾಲ್ಕು ತಿಂಗಳ ಬಸುರಿ…ತಂಗಿ ಮದುವೆಗೆಂದು ಇಂಡಿಯಾಗೆ ಹೋದಾಗ ಅಪ್ಪನ ಹತ್ರ ಮಾತಾಡಲು ಸಂಕೋಚವೆನಿಸಿ ಪ್ರತಾಪ್ ವಾಪಸು ಬಂದು ಬಿಟ್ಟಿದ್ದರು ಮದುವೆಗೆ ಮುಂಚೆ ನಾವಿಬ್ಬರೂ ದುಡುಕಿದ್ದು ಸಂಪ್ರದಾಯಸ್ತರಾದ ಅಪ್ಪನ ಬಳಿ ಹೇಳಲು ಅವರು ತುಂಬಾ ಹಿಂಸೆ ಪಟ್ಟು ಕೊಂಡಿದ್ದರು ಅಪ್ಪ ನಮ್ಮನ್ನು ಕ್ಷಮಿಸುತ್ತಾರೆಯೇ..ಅಂತ ತುಂಬಾ ಸಲ ಹೇಳುತ್ತಿದ್ದರು ಹಾಗಾಗಿ ಅವರು ಕಣ್ಮರೆಯಾದ ಮೇಲೆ ನಾನು ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ ನಿಶ್ಯಬ್ದವಾಗಿ ನ್ಯೂಯಾರ್ಕ್ ತೊರೆದು ಕ್ಯಾಲಿಫೋರ್ನಿಯಾಗೆ ಹೊರಟು ಹೋದೆ ಇವನು ಹುಟ್ಟಿದ ನಾನು ಕೆಲಸ ಮಾಡುತ್ತಾ ಇವನನ್ನು ಬೆಳೆಸುತ್ತಾ ಪ್ರತಾಪನ ನೆನಪಲ್ಲಿ ಸಮಾಧಾನವಾಗಿಯೇ ಇದ್ದೆ ವಿಧಿ ಸಹಿಸಲಿಲ್ಲ…ನನ್ನ ಮುದ್ದು ಮರಿಗೀಗ ಅಪರೂಪದ ಕಾಯಿಲೆ ಅಮೆರಿಕಾದ ಡಾಕ್ಟರುಗಳೆಲ್ಲಾ ನಮ್ಮ ಕೈಬಿಟ್ಟಾಗಿದೆ…ಪ್ರತಾಪ ಬಹುವಾಗಿ ನಂಬಿದ್ದ ನಿಮ್ಮಊರ ದೇವರು ನನಗೆ ಸಹಾಯ ಮಾಡುವನೆಂದು ನಂಬಿ ಬಂದಿದ್ದೇನೆ …ಆ ದೇವರ ಕೃಪೆ ಈ ಮಗುವಿಗೆ ದಯಮಾಡಿ ದೊರಕಿಸಿ ಕೊಡಿ…’

ಶಾಸ್ರಿ ದಂಪತಿಗಳು ದಿಕ್ಕು ತೋಚದೆ ನಿಂತು ಬಿಟ್ಟಿದ್ದಾರೆ…ಇವಳನ್ನು ನಂಬುವುದು ಹೇಗೆ…? ಮಗುವಿನ ಮುಖದಲ್ಲೇನೋ ಪ್ರತಾಪನ ಹೋಲಿಕೆ ಕಾಣುತ್ತಿದೆ ಎಂದು ಹೇಳೋಣವೆಂದು ಶಾರದಮ್ಮನ ಮನಸ್ಸು… ಆದರೆ ಶಾಸ್ರ್ತಿಗಳು ಏನನ್ನುವರೋ ಎಂಬ ಭಯ.

ಅಷ್ಟರಲ್ಲಿ ತೋಟದಿಂದ ಹುಶ್ಶಪ್ಪಾ ಅಂತ ಮನೆಗೆ ಬಂದ ರಾಜೀವನ್ನು ನೋಡಿ ಅವಳ ಕಣ್ಣುಗಳು ನಿರಾಳತೆಯಿಂದ ಮಿಂಚಿದರೆ ರಾಜೀವ ಅವಳನ್ನು ನೋಡಿ `ಜೆನೀ… ನೀನೂ..ಇಷ್ಟು ವರ್ಷದ ನಂತರ ಇಲ್ಲೀ..ಅಂತ ಆಶ್ಚರ್ಯಚಕಿತನಾಗಿ ಹೇಳಿದ.

***

ಓಸಾಮಾ ಬಿನ್ ಲಾಡೆನ್ನಿನ ಹೆಗಲ ಮೇಲೆ ಮುಖ ಇಟ್ಟುಕೊಂಡು, ಭರತಖಾನ ಗೋಳೊ ಎಂದು ಅಳುತ್ತಿದ್ದ. “ಒಂದು ಲಕಡಿ ನಿಂಗೆ ಸಿಗ್ಲಿಲ್ಲಾ ಅಂತ ಯಾಕ್ಲೇ ಅಳ್ತೀ,ಬರತಾ!” ಅಂತ ಲಾಡೆನ್ ಭರತಖಾನನಿಗೆ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದ. “ಹತ್ತು ಲಕಡಿಗೋಳ್ ಜೊತೆ ನಿನ್ನ ನಿಕಾ ಮಾಡ್ತೀನಿ. ನನ್ನೆ ಎಗಲ ಮ್ಯಾಲಿಂದು ನಿನ್ನ ತೆಲಿ ತೆಗಿ.”, ಅಂತ ಧೈರ್ಯ ಹೇಳಿದ.
“ಛೆ! ನಿನಗೆ ಕನ್ನಡ ಕಲಿಸಿದ್ದೆ ತಪ್ಪಾಯ್ತು ನೋಡು. ನನಗೇನೂ ನಿನ್ನ ಲಕಡಿ ಬೇಕಾಗಿಲ್ಲ. ನನ್ನ ಅಳಲೇ ಬೇರೆ. ಒಂದು full bottle ಕುಡಿದು ಸ್ಟ್ರೇಟಾಗಿ ನಿಲ್ಲೊ ನಾನು; ಆ ಹುಡುಗಿ ಒಂದು ಕಪ್ಪು ಹಾಲಿನಲ್ಲಿ ಒಂದು ಚಮಚೆ ವ್ಹಿಸ್ಕಿ ಕೂಡಿಸಿ ಕೊಟ್ರೆ knock out ಆದೆನಲ್ಲಾ!” ಎಂದು ತನ್ನ ಕೊರಗು ತೋಡಿಕೊಂಡ. “ಮೊದಲೆ out ಆದವನಿಗೆ ‘ಹಾಲು ok, ಅಲ್ಕೋಹಾಲು ಯಾಕೆ?’ ಇರಲಿ, ಮುಂಡೆ ಬೆಚ್ಚ ಆಗಬೇಡ. ಮುಲ್ಲನ್ನು ಮುಲ್ಲಿನಿಂದಲೆ ತೆಗೀಬೇಕು ಅಂತ ನೀನೆ ಹೇಲ್ತಾ ಇದ್ದೆಲ್ಲಪ್ಪ, ಈಗ ನಾನು ಹೇಲೋದನ್ನಷ್ಟು ಕೇಲು. ನೀನು ಬಾರತಕ್ಕೆ ಮರಲಿ ಓಗು. ಆ ಲಕಡಿಯನ್ನು ಕಾಫರ ಸೋಗಿನಲ್ಲಿಯೇ ಮೋಸ ಮಾಡು. ಆದರೆ ಒಂದು ಮಾತು ತಲ್ಯಾಗ ಇಟ್ಕೋ. ಆ ಲಕಡಿ ಹಾಲು ಕೊಟ್ಟರೆ ಕುಡಿಯಬೇಡ!”, ಎಂದು ತನ್ನ ಮಾನಸಪುತ್ರನಿಗೆ ಕುಟಿಲೋಪಾಯ ಹೇಳಿಕೊಟ್ಟ ಲಾಡೆನ್.

ಈ ಕಾರಣದಿಂದ, ಭರತಖಾನ ಭರತದಾಸನಾಗಿ ಕೈಯಲ್ಲಿ ತಂಬೂರಿ ಹಿಡಿದುಕೊಂಡು ಒಂದು ಮುಂಜಾವಿನಲ್ಲಿ ಶಾಸ್ತ್ರಿಗಳ ಎದುರಿಗೆ ಪ್ರತ್ಯಕ್ಷನಾದ.
“ನಿನ್ನಂಥ ವೈದ್ಯರಿಲ್ಲೋ ಹರಿಯೇ!” ಎಂದು ಹಾಡುತ್ತ ಎದುರಿಗೆ ಬಂದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ “ಹರಿಯೆ ತನ್ನ ಮೊರೆಯ ಕೇಳಿ ಬಂದನೇನೋ” ಎಂದೆನಿಸಿತು.
***

ಆತುರಗಾರನ ಬುದ್ದಿ ಮಟ್ಟ ಎಂಬ ಗಾದೆ ಭರತ ಖಾನನನ್ನೇ ನೋಡಿ ಮಾಡಿರಬೇಕು!ಪ್ರವಲ್ಲಿಕಾಳನ್ನು ತನ್ನದಾಗಿಸಿಕೊಳ್ಳಲು ದಾಸ ಯ್ಯನ ವೇಷ ತೊಟ್ಟು ಅವನು ಶಾಸ್ತ್ರಿಗಳ ಹಳ್ಳಿಗೆ ಬರುವ ಅವನ ಯೋಜನೆಯನ್ನು ಒಂದೆರಡು ದಿನಗಳು ಮುಂದೂಡಿದ್ದಿದ್ದರೆ ಚೆನ್ನಾಗಿರುತ್ತಿತ್ತು!ಒಟ್ಟಿನಲ್ಲಿ ಖಾನನ ಟೈಮ್ ಚೆನ್ನಾಗಿಲ್ಲ ಅಷ್ಟೇ…ಹೋಗಲಿ ಪ್ರವಲ್ಲಿಕಾದಾದರೂ ಚೆನ್ನಾಗಿದೆಯೇ…?ಉಹುಂ…

ಭಾರತೀಯದೂತಾವಾಸದ ಸೋಫಾಮೇಲೆ ಕೂತು ವಿಶ್ರಮಿಸಿ ಕೊಳ್ಳುತ್ತಾ ಏನೋ ಸಾಧಿಸಿದ ತೃಪ್ತಿಯಿಂದ ಬೀಗುತ್ತಿರುವ ಪ್ರವಲ್ಲಿಕಾಗೆ ಇನ್ನೆರಡು ಗಂಟೆಗಳಲ್ಲಿ ತನ್ನ ಜೀವನಕ್ಕೆ ಊಹಿಸದ ತಿರುವು ಸಿಗಲಿದೆ ಎಂಬ ಸಣ್ಣ ಸುಳಿವೂ ಇಲ್ಲ ಪಾಪ…ಬಿಳಿಯ ಪಾರಿವಾಳದಂತೆ ನಾಜೂಕಾಗಿರುವ ಹೆದರು ಪುಕ್ಕಿ ಪ್ರವಲ್ಲಿಕಾ ಮುಂದೆ ತುಳಿಯಲಿರುವ ಹಾದಿ ತುಂಬಾ ಕಷ್ಟದ್ದು…ಅನೂಹ್ಯವಾದುದ್ದು…ಮತ್ತು ಅದು ಅವಳ ವ್ಯಕ್ತಿತ್ವವನ್ನೇ ಬದಲಾಯಿಸುವಂಥದ್ದು…

ಭಾರತೀಯ ದೂತಾವಾಸದ ಆ ಅಧಿಕಾರಿ ಭರತ ಖಾನನನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾನೆ.ಭಾರತದ ಮಣ್ಣಲ್ಲಿ ಹುಟ್ಟಿ ಇಂಡಿಯಾ ಗೌರ್ನಮೆಂಟಿನಿಂದ ದೊಡ್ಡ ಮೊತ್ತದ ಸಂಬಳ ಏಣಿಸಿಕೊಂಡೂ ಹುಟ್ಟಿದ ನೆಲಕ್ಕೇ ದ್ರೋಹ ಬಗೆಯುವ ನೀಚರ ಗುಂಪಿಗೆ ಸೇರಿದವನು ಆತ ಒಸಾಮ ಕೊಡುವ ಕಾಸಿಗಾಗಿ ಅವನ ಏಜಂಟನಾಗಿ ಕೆಲಸ ಮಾಡುತ್ತಿರುವವನು.ಪ್ರವಲ್ಲಿಕಾ ಖಾನನಬಗ್ಗೆ ಮುಂಬೈ ಗೆ ಕಳಿಸಿದ ವಿವರಗಳ ವಾಸನೆ ಹಿಡಿದು ಇವಳನ್ನು ಖಾನನಿಗೆ ಒಪ್ಪಿಸಬೇಕೆಂದು ಸಂಚು ಮಾಡುತ್ತಿದ್ದಾನೆ
ಅಂತೂ ಖಾನ ಸಿಗದಿದ್ದರೂ ಅವನ ಬಂಟನಿಗಾದರೂ ಸುದ್ದಿ ಮುಟ್ಟಿಸಿದೆನೆಂದು ಅವನು ತೃಪ್ತಿಯಿಂದ ಮೀಸೆ ಸವರಿಕೊಂಡ
**********************

ಮುಂದಿನರ್ಧ ಗಂಟೆಯಲ್ಲಿ ಪ್ರವಲ್ಲಿಕಾ ಜೀಪೊಂದರಲ್ಲಿ ಕುಳಿತು ದುಬೈನ ಹೊರವಲಯದ ರಸ್ತೆಯಲ್ಲಿ ಸಾಗುತ್ತಿದ್ದಳು ಅವಳನ್ನು ಬೀಳ್ಕೊಟ್ಟ
ಭಾರತೀಯದೂತಾವಾಸದ ಅಧಿಕಾರಿ `ನೀವೇನೂ ಯೋಚಿಸಬೇಡಿ ಮೇಡಂ… ನೀವು ದೇಶಕ್ಕೆ ಮಾಡಿರುವ ಉಪಕಾರ ಅಮೂಲ್ಯವಾದುದು ಇವರು ನಿಮ್ಮನ್ನು ಸುರಕ್ಷಿತವಾಗಿ ಇಂಡಿಯಾ ತಲುಪಿಸುತ್ತಾರೆ’ ಎಂದು ಹೇಳಿ ಕೈ ಕುಲುಕಿದ್ದ. ಅಪ್ಪ ಅಮ್ಮಅಕ್ಕನನ್ನು ಕಾಣುವ ತವಕದಲ್ಲಿರುವ ಪ್ರವಲ್ಲಿಕಾಗೆ ಕಣ್ತುಂಬಾ ಕನಸುಗಳು…!

***

ಪ್ರವಲ್ಲಿಕಾಳನ್ನು ಒಫ್ಫಿಸಿದ್ದಕ್ಕೆ ದೊಡ್ಡಮೊತ್ತದ ಬಹುಮಾನವೇ ನನಗೆ ಕಾದಿದೆ ಎಂದು ಜೊಲ್ಲು ಸುರಿಸಿಕೊಂಡ ಆ ಅಧಿಕಾರಿಗಾಗಲೀ ಪ್ರವಲ್ಲಿಕಾಗಾಗಲೀ ತಿಳಿಯದ ವಿಶಯವೆಂದರೆ ಪ್ರವಲ್ಲಿಕಾಳನ್ನು ಕರೆದೊಯ್ದಿದ್ದು ಮೊಸಾದ್(MOSSAD) ಎಂದು! ಮೊಸಾದ್ ತನ್ನ ಚಾಣಾಕ್ಷತನಕ್ಕಾಗಿ ಜಗತ್ತಿನಾದ್ಯಂತ ಹೆಸರಾಗಿರುವ ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ಖಾನನ ಪೋನನ್ನು ಟ್ಯಾಪ್ ಮಾಡಿ ಪ್ರವಲ್ಲಿಕ ಎಂಬ ಈ ವ್ಯಕ್ತಿ ಯಾವುದೋ ವ್ಯವಹಾರದ ಪ್ರಮುಖ ಕೊಂಡಿ ಇರಬಹುದೆಂದು ಶಂಕಿಸಿ ಅವಳನ್ನು ಖಾನನ ಬಂಟರು ಬರುವ ಮೊದಲೇ ಕರೆದೊಯ್ದು ಬಿಟ್ಟಿದ್ದರು.

***

ಹುಚ್ಚುಮನಸ್ಸಿನ ಹತ್ತುಮುಖಗಳು

ಈಚಿನ ದಿನಗಳಲ್ಲಿ ಜ್ಞಾನಪೀಠ ಪಡೆದ ಸಾಹಿತಿಗಳನ್ನು ಲೇವಡಿ ಮಾಡಲು ಬಳಸುತ್ತಿರುವ ’ಜ್ಞಾನಪಿತ್ಥ” ಪದ ಮೊದಲ ಬಾರಿ ಬಳಕೆಗೆ ತಂದವರಾರು?

ಬೇರಾರೂ ಅಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೇ ಆಗಿರುವ ಡಾ.ಶಿವರಾಮ ಕಾರಂತರು! “ಹುಚ್ಚುಮನಸ್ಸಿನ ಹತ್ತುಮುಖಗಳು” ಎಂಬ ಕಾರಂತರ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ನಂತರ ಅಭಿನಂದನಾ ಸಮಾರಂಭಗಳ ಬಗ್ಗೆ ಬರೆಯುತ್ತಾ ಕಾರಂತರು ಬರೆಯುತ್ತಾರೆ – “ಸುಮಾರು ಮೂರು ತಿಂಗಳು ನಾನು ಬೇರೆ ಯಾವುದನ್ನೂ ಮಾಡದಾದೆ; ಇದೊಂದೇ ಕೆಲಸ ನನಗೆ. ನನ್ನ ಸಾಹಿತ್ಯ ಓದಿದದವರು, ಓದದೆ ಬರಿದೆ ಅಭಿಮಾನ ತಾಳಿದ ಅಸಂಖ್ಯ ಜನರು. ನನ್ನನ್ನು ತಂತಮ್ಮ ಊರುಗಳಿಗೆ ಕರೆಯಿಸಿಕೊಂಡರು; ಪ್ರಶಂಸೆಯ ಸುರಿಮಳೆಯನ್ನೇ ಕರೆದರು. ಅಸಂಖ್ಯ ಮಾಲೆಗಳನ್ನು ಹೊರಿಸಿದರು; ಶಾಲುಗಳನ್ನು ಹೊದೆಸಿದರು; ಅಭಿನಂದನಾ ಪತ್ರಗಳಲ್ಲಿ ಸಂಸ್ಕೃತ ಶಬ್ದಭಂಡಾರವನ್ನೆಲ್ಲ ಸೂರೆ ಮಾಡಿದರು. ಇದು ಮೀತಿ ಮೀರಿದ ಪ್ರಶಂಸೆಯಲ್ಲವೇ – ಎಂಬ ಭಾವನೆ ನನ್ನನ್ನು ಆಗಾಗ ಕಾಡುತ್ತಿತ್ತು. ಹೊಗಳಿಕೆಗೂ ಒಂದು ಮಿತಿ ಬೇಕು – ಎನಿಸುತ್ತಿದೆ. ನಾನು ಪರಿಹಾಸ್ಯಕ್ಕಾಗಿ ಎಷ್ಟೋ ಬಾರಿ ನನ್ನನ್ನು ಸನ್ಮಾನಿಸಿದವರ ಮುಂದೆ ’ಜ್ಞಾನಪೀಠ’ ಪ್ರಶಸ್ತಿ ’ಜ್ಞಾನಪಿತ್ಥ’ವಾಗಬಾರದು ಎಂದದ್ದುಂಟು”.

ಜ್ಞಾನಪೀಠ ಪ್ರಶಸ್ತಿ ಪಡೆದ ಸಂದರ್ಭದ ಇನ್ನೊಂದು ಘಟನೆಯ ಬಗ್ಗೆ ಕಾರಂತರುಬರೆಯುತ್ತಾರೆ –

ಕನ್ನಡಕ್ಕೆ ಮೊದಲಬಾರಿ ಜ್ಞಾನಪೀಠ ತಂದುಕೊಟ್ಟ ಕುವೆಂಪು, ಎರಡನೆಯ ಬಾರಿ ’ನಾಕುತಂತಿ”ಗಾಗಿ ಜ್ಞಾನಪೀಠ ಪಡೆದ ಬೇಂದ್ರೆಯವರು ಪ್ರಶಸ್ತಿಯನ್ನು ಬೇರೆ ಭಾಷೆಯ ಲೇಖಕರೊಡನೆ ಹಂಚಿಕೊಳ್ಳಬೇಕಾಯಿತಂತೆ. ಇದರಿಂದಾಗಿ ಪ್ರಶಸ್ತಿಯ ಜೊತೆಗೆ ಬರುವ ಒಂದು ಲಕ್ಷ ಮೊತ್ತವೂ ಇಬ್ಬರಲ್ಲಿ ಹಂಚಿಹೋಗಿತ್ತು. ಕಾರಂತರು ಪಡೆದಾಗ ಬೇರಾವ ಭಾಷೆಗೂ ಪ್ರಶಸ್ತಿ ಹೋಗದೆ ಪೂರ್ತಿ ಹಣ ಕಾರಂತರಿಗೆ ದೊರಕಿದ್ದು ಜನರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಯಿತು. ಕನ್ನಡ ಪತ್ರಿಕೆಗಳಲ್ಲಿ ’ಹಿಂದಿನವರಿಗೆ ಕೊಟ್ಟದ್ದು ಅರ್ಧ ಪ್ರಶಸ್ತಿ, ಕಾರಂತರಿಗೆ ಕೊಟ್ಟದ್ದು ಇಡೀ” ಎಂದು ಪ್ರಕಟವಾಗಿತ್ತಂತೆ!

***

ನಾ.ಕಸ್ತೂರಿಯವರ ಅನರ್ಥ ಕೋಶ

ನಿನ್ನೆ, ನಾ.ಕಸ್ತೂರಿಯವರ ಅನರ್ಥಕೋಶ ಓದುತ್ತಿದ್ದೆ. ಓದುತ್ತಿರುವಾಗ ನನಗಂತೂ ತುಂಬಾ ನಗು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ, ಬಿದ್ದು ಬಿದ್ದು ನಗುವಂತೆ ಮಾಡುವ ಹಾಸ್ಯ ಎನ್ನುವುದು ಇದ್ದರೆ ಅದು ಇದೇ ರೀತಿ ಇರುತ್ತದೇನೋ.  ಒಬ್ಬಳೇ ಓದಿಕೊಂಡು ನಗುವ ಬದಲು ನಿಮ್ಮೊಡನೆ ಹಂಚಿಕೊಂಡರೆ ಹೇಗೆ ಅನ್ನಿಸಿತು. ನನ್ನನ್ನು ತುಂಬಾ ನಗಿಸಿದ ಕೆಲವನ್ನು ಇಲ್ಲಿ ಬರೆಯುತ್ತಿದ್ದೇನೆ. ಇದನ್ನು ಓದಿ ನಿಮಗೆ ನಗುವೇ ಬರದಿದ್ದರೆ ನೀವು ಬಲು ಗಟ್ಟಿಗರು ಎಂದು ಅರ್ಥ. ಭಲೇ!

ಅಂದಹಾಗೆ, ನಗುವುದು ಅನ್ನುವುದಕ್ಕೆ ಕೆಲವರು ನಗಾಡುವುದು ಅನ್ನೋದನ್ನು ಕೇಳಿದ್ದೇನೆ. ಯಾವುದು ಸರಿ?

ನಿಮಗೆ ಬೇರೆ ಯಾವುದಾದರೂ ಪದಗಳು ಗೊತ್ತಿದ್ದರೆ ಹೇಳಿ, ನಗೋಣ.  🙂

*                      *                     *                        *     

ಚಿತ್ರ ಕೃಪೆ : ಕನ್ನಡ ವಿಕಿಪೀಡಿಯ                                

* ಅಮೋಘ ಪ್ರಾರಂಭ  – ಪ್ರಾರಂಭ
* ಅಕ್ರಮಾದಿತ್ಯ    – ಪ್ರಜಾಹಿತಕ್ಕೆ ವಿರೋಧವಾಗಿ ರಾಜ್ಯಭಾರ ನಡೆಸುವ ರಾಜರುಗಳಿಗೆ ಈ ಬಿರುದು ಸಲ್ಲುತ್ತಿತ್ತಂತೆ.
* ಅದ್ಭುತ ದಿಗ್ದರ್ಶನ  – ಹಾಲಿವುಡ್ ಚಿತ್ರದ ಅನುಕರಣ
* ಅವಿವಾಹಿತ    – ಹೆಂಗಸೊಬ್ಬಳ ಕಾಡಿಸುವ ಸದವಕಾಶವನ್ನು ಕಳೆದುಕೊಳ್ಳುವವ.
* ಅಂಧರ್ವರು  – ಕುರುಡು ಸಂಗೀತಗಾರರು
* ಅಕ್ರೂರ      – ರಿಟೈರಾದ ಉನ್ನಾತಾಧಿಕಾರಿ.
* ಅಗ್ನಿತೀರ್ಥ  – ವ್ಹಿಸ್ಕಿ
* ಅಗ್ನಿಮಿತ್ರ   – ಪೆಟ್ರೋಲ್
* ಅಗ್ನಿಹೋತ್ರ   – ಬಿಡುವಿಲ್ಲದೆ ಸಿಗರೇಟು ಸೇದುವವ.
* ಅಣುಕಂಪ    – ಒಂದು ಊರಲ್ಲಿ ಅಣುಬಾಂಬು ಸಿಡಿದಾಗ ನೆರೆಯೂರುಗಳಲ್ಲಾಗುವ ಸಹತಾಪ.
* ಆ          – ದಂತವೈದ್ಯರ ಮೂಲಮಂತ್ರ: ಇದನ್ನು ಜಪಿಸಿದ ಕೂಡಲೆ ನಾವು ಬಾಯಿಬಿಡುತ್ತೇವೆ. ಅವರು ನಮ್ಮ ಹಲ್ಲು ಕಿತ್ತುತ್ತಾರೆ.
* ಆರತಿ – ರತಿಯ ಪಕ್ಕದಲ್ಲಿ ಈತ ಆಕಳಿಸುವುದು

* ಇಂಜಕ್ಷನ್     – ನುಂಗಲಾರದ ತುತ್ತು
* ಇಗ್ನೇಶ್ವರ    – ತನ್ನ ಹೆಸರಿನ ಉಚ್ಚಾರಣೆಗೆ ಒದಗುವ ವಿಘ್ನಗಳನ್ನು ನಿವಾರಿಸಲಾಗದ ಒಂದು ದೇವತೆ.
* ಈಚಮನ     – ಈಚಲುಮರದಡಿಯಲ್ಲಿ ಕುಳಿತು ಕುಡಿಯುವುದು
* ಉಗುಳುನಗೆ    – ಮಾತನಾಡಿದಾಗ ಮಂತ್ರಪುಷ್ಪದಂತೆ ನಗೆಯಾಡಿದಾಗಲೂ ಉಗುಳು ಪುಷ್ಪ.
* ಉತ್ತರಕ್ರಿಯೆ – ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಕೆಲಸ.
* ಉತ್ತರಾಯಣ – ಪರೀಕ್ಷೆಯ ಋತು, ಮಾರ್ಚ್ ತಿಂಗಳಿಂದ ಜೂನ್
* ಉಳಿತಾಯ – ನಮಗೆ ಸಾಲ ಕೊಡಬೇಕಾದವರು ಮಾಡಬೇಕಾದ ಕರ್ತವ್ಯ
* ಋಣ ಹದ್ದು   – ಸಾಲ ವಸೂಲು ಮಾಡುವುದಕ್ಕಾಗಿ ನಮ್ಮ ಬಾಗಿಲಿಗೆ ಬರುವವ.
* ಐಕ್ಯಮದ್ಯ   – ಹೆಂಡಕುಡುಕರ ಗೆಳೆತನ

* ಕಣ್ವಂತರಿ – ನೇತ್ರವೈದ್ಯ
* ಕಂಠಾಘೋಷ – ಬರಿಯ ಕೂಗು
* ಕುಂಠಾಘೋಷ – ಗೆಲ್ಲುತ್ತೇವೆ ಎಂಬ ಧೈರ್ಯವಿಲ್ಲದ ಪಕ್ಷದವರು ಮಾಡುವ ಪ್ರಚಾರ
* ಕಂತುವರಾಳಿ  – ಕಂತುಕಂತಾಗಿ ಸಾಲ ತೀರಿಸಬೇಕಾಗಿ ಬಂದಾಗ ನಾವು ಎಳೆಯುವ ರಾಗ
* ಕವಿವೇಕಿ      – ಅವಿವೇಕಿಯಾದ ಕವಿ
* ಕಹಿಷ್ಕರಿಸು  – ಕಹಿಯಾಗಿ ತೋರಿದ್ದರಿಂದ ದೂರವಿರಿಸು.
* ಕಾಕತಾಳಿನ್ಯಾಯ – ಕಾಗೆ ಕೂತಿದ್ದು, ತಾಳಿ ಕಟ್ಟಿದ್ದು.
* ಕಾಕತಾಳೀಯ – ಕಾಗೆಗೆ ತಾಳಿ ಕಟ್ಟಲು ಹೊರಡುವ ಸಾಹಸಿಯಂತೆ.
* ಕಾರಾಗೃಹಸ್ಥ  – ಹೊಸದಾಗಿ ಮದುವೆಯಾದವ.
* ಕಾಪ್ಯಾಯಮಾನ   – ಕಾಫಿ ಕುಡಿದ ಮೇಲೆ ಉಂಟಾಗುವ ಆಪ್ಯಾಯಮಾನ ಪರಿಸ್ಥಿತಿ.
* ಕಾಶಿ      – ಸತ್ತು ಸುಣ್ಣವಾಗುವುದಕ್ಕೆ ಪ್ರಶಸ್ತವಾದ ಊರು.
* ಕಿವುಡ      – ವಾಕ್ಚಿತ್ರಗಳನ್ನು ಮೂಕಚಿತ್ರಗಳಂತೆ ನೋಡುವ ಪುಣ್ಯವಂತ
* ಕೆಮ್ಮು      – ಒಂದು ರೀತಿಯ ಗುಪ್ತಭಾಷೆ
* ಕುಗ್ರಾಮ   – ಎರಡು ಮೈಲಿ ಸುತ್ತ ಯಾವ ಸಿನಿಮ ಮಂದಿರವೂ ಇಲ್ಲದ ಹಳ್ಳಿ.

* ಖಾರಾಗೃಹ   – ಖಾರವನ್ನು ಹೆಚ್ಚು ಬಳಸುವ ಹೋಟಲು
* ಖರ್ಚು    – ವರಮಾನಕ್ಕೆ ಸರಿಸಮಾನವಿಲ್ಲದ್ದು.
* ಖಂಡಿತವಾದಿ –  ಲೋಕವಿರೋಧಿ. ನಮ್ಮ ಮಿತ್ರನಲ್ಲದಿದ್ದರೆ, ಈತನಿಗೆ ಮೂರ್ಖ ಎಂದು ಹೆಸರು.
* ಖುದಾಸೀನ  – ದೇವರಿದ್ದಾನೆ ಎಂದು ಉದಾಸೀನನಾಗಿ ಕುಳಿತಿರುವುದು
* ಖಾಲಿ – ಸಾಮಾನ್ಯವಾಗಿ ಎಲ್ಲ ಬುರುಡೆಗಳಿಗೂ ಇದೇ ಸ್ಥಿತಿ
* ಖರಪತ್ರ – ಕತ್ತೆ ತಿಂಬ ಕಾಗದ
* ಖುಷಿಕೇಶ – ಮೊದಲನೆಯ ಮಗು ಗಂಡಾಗುವ ಭ್ರಮೆಯಿಂದ ಬಿಡುವ ಗಡ್ದ

* ಗಲ್ಲೆದೆ    – ಆಪಾದಿತನ ಗಲ್ಲು ಮಹೋತ್ಸವವನ್ನು ನೆರವೇರಿಸಿ ಕೃತಕೃತ್ಯರಾಗುವ ಮಂದಿ
* ಗುಠ್ಠಾಳ  – ಗುಟ್ಟನ್ನು ರಟ್ಟುಮಾಡಿ ಕೆಲಸವನ್ನು ಹಾಳು ಮಾಡುವವನು.
* ಗುರುಬತ್ತಿ   – ಹಲವು ಶಿಷ್ಯರ ಪೀಡಾಕ್ರಮ
* ಚೀರ್ತನೆ    – ಕೆಟ್ಟ ಶಾರೀರದವರು ಮಾಡುವ ಕೀರ್ತನೆ
* ಜಗಲಿ      – ಜಗಳಗಳ ಉಗಮಸ್ಥಾನ
* ಜಾಬವಂತ  – ನೌಕರಿಯನ್ನು ದೊರಕಿಸಿಕೊಡುವ ಜಾಣ
* ತ್ರಿಶಂಕೆ ಸ್ವರ್ಗ – ಮೂರು ವಿಕೆಟ್ಟುಗಳನ್ನು ಪಡೆದವ ಅನುಭವಿಸುವ ಆನಂದ

* ಧನಸ್ತಾಪ      – ಹಣಕ್ಕಾಗಿ ಇಬ್ಬರಿಗಿಂತ ಮೂವರು ಪ್ರೀತಿಯಿಂದ ಮಾಡುವ ಜಗಳ
* ಧನದನ್ನೆ – ವರದಕ್ಷಿಗೆಗಾಗಿ ಕೈಹಿಡಿದ ಸತಿ
* ನರಿಷಡ್ವರ್ಗ    – ಕುಹಕ,ಕುತಂತ್ರ
* ನುಡಿಮದ್ದು        – ಜನರನ್ನು ಉದ್ರೇಕಗೊಳಿಸುವ ಭಾಷಣ
* ನೇಯ್ಗೆಯವರು      – ಸಾಹಿತಿಗಳು
* ಪಕ್ಕಸಾಲಿಗ     – ಪಕ್ಕದಲ್ಲೇ ಮನೆ ಮಾಡಿಕೊಂಡು ಸಾಲ ಕೇಳುವವ
* ಪತಿ             – ಮನೆ ಮೂಲೆಯಲ್ಲಿ ಕೂತಿರುವ ದೇವರು
* ಪದ್ಯೋಗಿ          – ಸಿಕ್ಕಿದವರ ಕಿವಿಯಲ್ಲಿ ಪದ್ಯದ ಘಂಟಾನಾದ ಮೊಳಗಿಸುವವ.

* ಭಾವಜೀವಿ       – ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.
* ಭಾವಾಡಿಗ      – ಕವಿ
* ಭೀಮಾರಿ         – ನಮ್ಮ ದೇಶದ ಸಾಮಾನ್ಯ ಜನರು ಹೆಚ್ಚು ಪೂಜಿಸಬೇಕಾದ ದೇವತೆ.
* ಮದ್ಯವಯಸ್ಸು     – ಹೆಂಡದಾಸೆ ಪಡುವ ವಯಸ್ಸು
* ಮನಸ್ಸಾಕ್ಷಿ     – ನಮ್ಮನ್ನು ಇನ್ನೂ ಸಣ್ಣ ಮಾಡುವ ಒಳದನಿ
* ಮನಮೋಸಕ       – ಮನ ಮುದಗೊಂಡಾಗ ಹೋಗುವ ಮೋಸ.

* ಲೋಲನೆ ಪಾಲನೆ   – ಪರಸ್ತ್ರೀಯನ್ನು ಬಯಸಿದ ಗಂಡನನ್ನೂ ಮಗುವಿನಂತೆ ಲಾಲನೆಪಾಲನೆ ಮಾಡುವವಳು
* ವಧು       – ನಾವು ಮಾವನಿಂದ ಪಡೆದ ಮೊದಲನೆಯ ವಸ್ತು
* ವಯಸ್ಸು     – ಲೆಕ್ಕ ಹಾಕ್ತಾ ಹಾಕ್ತಾ ದು:ಖ ಜಾಸ್ತಿ. ಇದರ ಬೆಳವಣಿಗೆಯ ನಾಲ್ಕು ಹಂತಗಳು: ಹುಡುಗು, ಪಿಡುಗು, ಗುಡುಗು, ನಡುಗು.
* ವಸಂತ     – ಕವಿಗಳಿಗೆ ಹುಚ್ಚು ಬರುವ ಕಾಲ.

* ಶಸ್ತ್ರಕ್ರಿಯೆ – ಹಣದ ಗಂಟನ್ನು ವೈದ್ಯರು ಹೊರತೆಗೆಯುವ ರೀತಿ.
* ಷೆಡ್ದಕ     – ಮೋಟಾರ್ ಷೆಡ್ಡನ್ನೇ ಬಾಡಿಗೆಗೆ ತೆಗೆದು ಸಂಸಾರ ನಡೆಸುವವ.
* ಸಮಾರಂಪ    – ಸಾಮಾನ್ಯವಾಗಿ ಸಮಾರಂಭಗಳಲ್ಲಿ ಹೀಗಾಗುವುದೇ ಹೆಚ್ಚು.
* ಸರಸ ಸಂಭಾಷಣೆ  – ಚಿತ್ರಮಂದಿರಗಳಲ್ಲಿ ಪ್ರೇಕ್ಷಕಿಯರು ಮಾಡುವ ಟೀಕೆ
* ಸಾಲಗ್ರಾಮ        – ಸಾಲದಿಂದ ಕಟ್ಟಿರುವ ಮನೆಗಳ ಸಾಲು
* ಸೊಟ್ಟಹಾಸ        – ಮುಖ ಸೊಟ್ಟಗೆ ತಿರುಗಿಸು ಮಂದಹಾಸ ಬೀರುವುದು

* ಹಲ್ಲೋಲ           – ಸುಂದರವಾದ ದಂತಪಂಕ್ತಿ ಇರುವ ಹೆಮ್ಮೆ.
* ಹವ್ಯಾಸಂಗ       – ಹಲವು ಹವ್ಯಾಸಗಳ ನಡುವೆ ಮಾಡುವ ವ್ಯಾಸಂಗ.
* ಹಿಂಸತೂಲಿಕಾತಲ್ಪ  – ಚುಚ್ಚುವ ಹಾಸಿಗೆ
* ಹೊಟ್ಟೆನೋವು          – ತುಂಬಿದ ಹೊಟ್ಟೆಯ ಪಶ್ಚಾತ್ತಾಪ
* ಹುಚ್ಚುಮೆಚ್ಚಿನ     – ಹುಚ್ಚನ್ನೇ ಮೆಚ್ಚಿಕೊಳ್ಳುವ ಪರಮಾವಧಿ ಸ್ಥಿತಿ.

 

*              *                *                  *          *