ಕವಿ : ಅಂಬಿಕಾತನಯದತ್ತ

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರ
ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರಿತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಂನಿಮ್ಮ ಆತ್ಮಗಳಿಗೆ
ಅಂಬಿಗನು ಬಂದ ನಂಬಿಗನು ಬಂದ ಬಂದದ ದಿವ್ಯ ಘಳಿಗೆ

ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದದ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು

ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗು ಬಂದದೋ ಬಂದದಾ
ನವ ಮನು ಬಂದ ಹೊಸದ್ವೀಪಗಳಿಗೆ ಹೊರಟಾನ ಬನ್ನೀ ಅಂದದೋ ಅಂದದಾ

One thought on “ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ”

  1. ಹಲವು ಭಾವಗಳಿಗೆ ತೆರೆದುಕೊಳ್ಳುವ ಶ್ರೇಷ್ಟ ಕವಿ ಬೇಂದ್ರೆ ಅಜ್ಜ. ನನ್ನ ತೆಕ್ಕೆಗೆ ಅವರ ಕವನಗಳೆಲ್ಲ ಕುಣಿಸುವ ಕವಿ.
    ಸಾವಿರಾರು ಕಾಲಕೂ ನಿಲ್ಲುವ ಕವನವಿದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.