ಮಗುವಿಗೊಂದು ಮಗು!

ಕಳೆದ ಭಾನುವಾರ ಯಾವುದೋ ಶಾಪಿಂಗ್ ಮಾಲಿನಲ್ಲಿದ್ದೆವು. ಇದ್ದಕ್ಕಿದ್ದಂತೆ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಟ್ರೋಲರಿನಲ್ಲಿ ಮಲಗಿದ್ದ ಮಗುವೊಂದು ರಚ್ಚೆ ಹಿಡಿದು ಅಳತೊಡಗಿತು. ಅದರ ಜೊತೆಗೆ ಇದ್ದ ಹೆಂಗಸು ಅದನ್ನು ಸಮಾಧಾನಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು. ಆ ಮಗು ಅವಳ ಉಪಾಯಗಳೊಂದಕ್ಕೂ ಜಪ್ಪೆನ್ನದೆ ಉಸಿರುಗಟ್ಟಿಕೊಂಡು ಕಿರುಚಿ ಅಳುತ್ತಿತ್ತು. ಅತ್ತು ಕೆಂಪುಕೆಂಪಾಗಿದ್ದ ಆ ಮಗುವಿನ ಮುಖವನ್ನು ನೋಡಿದರೆ ಅದು ಹುಟ್ಟಿ ಕೆಲವೇ ದಿನಗಳಾಗಿರಬೇಕೆನಿಸಿತು. ಮಗುವಿನ ತಾಯಿಯೆಂದು ನಾನು ತಿಳಿದಿದ್ದ ಹೆಂಗಸು ಮಗುವನ್ನು ಅಲ್ಲೇ ಬಿಟ್ಟು ಯಾರನ್ನೋ ಹುಡುಕುವಂತೆ ಅಲ್ಲಿಂದ ಹೊರಟಳು. ಐಲ್‍ಗಳ (aisle) ನಡುವೆ ಮರೆಯಾದಳು. ತಿರುಗಿ ಬರುವಾಗ ಅವಳ ಜೊತೆಗೆ ಹದಿಮೂರೋ, ಹದಿನಾಲ್ಕೋ ಇರಬಹುದಾದ ವಯಸ್ಸಿನ ಹುಡುಗಿಯೊಬ್ಬಳಿದ್ದಳು. ಅವಳೇ ಆ ಮಗುವಿನ ತಾಯಿಯೆಂದು ನಂತರ ತಿಳಿಯಿತು. ಹದಿಹರಯದ ಆ ಬಾಲೆ ತಾನು ಹೆತ್ತ ಮಗುವಿನ ಹೊಣೆಯನ್ನು ಅಮ್ಮನಿಗೊಪ್ಪಿಸಿ ತನಗೆ ಬೇಕಾಗಿದ್ದ ಲಿಪ್‍ಸ್ಟಿಕ್ಕನ್ನೋ, ಶಾಂಪುವನ್ನೋ, ಮತ್ತಾವುದೋ ಮೇಕಪ್ ಸಾಮಗ್ರಿಯನ್ನೋ ಆಸೆಯಿಂದ ತನ್ನ ತಳ್ಳುಗಾಡಿಗೆ ತುಂಬಿಸಿಕೊಳ್ಳುತ್ತಿದ್ದಿರಬೇಕು.

ತಾಯಿ – ಅವಳಿಗೂ ಚಿಕ್ಕ ವಯಸ್ಸೇ – ಕೋಪದಿಂದ ಮಗಳಿಗೆ ಅಳುತ್ತಿರುವ ಮಗುವನ್ನು ತೋರಿಸಿ ಏನೋ ಬೈದಳು. ಎಲ್ಲರ ಗಮನವೂ ತಮ್ಮತ್ತ ಹರಿದಿದ್ದು ನೋಡಿ ಅವಳಿಗೂ ಮುಜುಗರವಾಗಿರಬೇಕು. ಬಹುಶ: ಮಗುವನ್ನು ಬಿಟ್ಟು ಅಲ್ಲಿ ಇಲ್ಲಿ ಹೋಗಬೇಡವೆಂದು ಬುದ್ಧಿ ಹೇಳಿದಳೆಂದು ನಾನು ಊಹಿಸಿಕೊಂಡೆ. ತಾಯಿಯ ಬುದ್ಧಿವಾದದತ್ತ ಹುಡುಗಿಯ ಗಮನವಿದ್ದರೆ ತಾನೇ? ಅವಳ ಚಂಚಲ ನೋಟ ಸುತ್ತಮುತ್ತ ತುಂಬಿದ್ದ ಕಣ್ಣು ಸೆಳೆಯುವ ಹಲವಾರು ವಸ್ತುಗಳತ್ತ ನೆಟ್ಟಿತ್ತು. ಇನ್ನೂ ಬಾಲ್ಯದ ಆಟ, ಹುಡುಗಾಟ ಮಾಯವಾಗಿರದ, ತಾನೇ ಮಗುವಾಗಿರುವ ಆ ಹುಡುಗಿಯ ಮಡಿಲು ತುಂಬಿರುವ ಮತ್ತೊಂದು ಮಗು! ಇದಕ್ಕೆ ಏನನ್ನೋಣ? ಆಧುನಿಕತೆಯ ಅಡ್ದ ಪರಿಣಾಮ? ನವ ನಾಗರೀಕತೆ ನಮಗಿತ್ತ ಶಾಪ?

ಅಮಾಯಕತೆ ತುಂಬಿತುಳುಕುತ್ತಿದ್ದ ಆ ಎಳೆಯ ಕಣ್ಣುಗಳನ್ನು ನೋಡಿ ನನಗೇಕೋ ಬಹಳ ಸಂಕಟವಾಯಿತು.

ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ
ಕವನ ಸಂಕಲನ – ಗಂಗಾವತರಣ
ಗಾಯಕರು – ವಿಶ್ವೇಶ್, ಅಶ್ವಿನಿ
ಆಲ್ಬಮ್ – ಘಮಘಮ

ಹಾಡು ಕೇಳಿ

ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ?
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀ ಹೊರಟಿದ್ದೀಗ ಎಲ್ಲಿಗಿ ?

ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ
ಮನಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗಿ ?

ಗಾಳಿ ತಬ್ಬತಾವ ಹೂಗಂಪ
ಚಂದ್ರನ ತೆಕ್ಕಿಗಿದೆ ತಂಪ
ನಿನ ಕಂಡರ ಕವದಾವ ಜೊಂಪ ||
ನೀ ಹೊರಟಿದ್ದೀಗ ಎಲ್ಲಿಗಿ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡsಕ
ಹೀಂಗ ಬಿಟ್ಟು ಇಲ್ಲಿ ನನ್ನ ನಡsಕ ||
ನೀ ಹೊರಟಿದ್ದೀಗ ಎಲ್ಲಿಗಿ ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗಿ ?

ನಾವು ಬಂದೆವಲ್ಲಿದಿಲ್ಲಿಗಿ
ಬಾಯಿ ಬಿಟ್ಟಾವಲ್ಲ ಮಲ್ಲಿಗಿ
ನೀರೊಡೆದಿತಲ್ಲ ಕಲ್ಲಿಗಿ ||
ನೀ ಹೊರಟಿದ್ದೀಗ ಎಲ್ಲಿಗಿ ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗಿ ?