ರಚನೆ – ವಿಜಯದಾಸರು

ಧ್ರುವ ತಾಳ

ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು
ಕಾರ್ಯನಿರ್ಮಲಿನ ಕಾರಣವಾಗುವುದು.
ಮಾಯಾ ಹಿಂದಾಗುವುದು ನಾನಾ ರೋಗದ ಬೀಜ
ಬೇಯಿಸಿ ಕಳೆವುದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾಯಿತು ದುಷ್ಕರ್ಮದಿಂದ
ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ
ಹೇಯಸಾಗರದೊಳು ಬಿದ್ದು ಬಳಲಿ,
ನೋಯಿಸಿಕೊಂಡು, ನೆಲೆಗಾಣದೆ, ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ
ರಾಯರಾ ಔಷಧಿ ನಿಯಮಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪ-
ನಯ್ಯ, ದೇವಾದಿಗಳಿಗೆ ಧರ್ಮಜ್ಞಗುಣ ಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ.
ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ನ್ಯಾಯವಂತನಾಗಿ ಚೇಷ್ಟೆ ಮಾಳ್ಪ-
ವಾಯುವಂದಿತ ನಿತ್ಯ ವಿಜಯವಿಠಲರೇಯ
ಪ್ರೀಯನು ಕಾಣೋ ನಮಗೆ ಅನಾದಿರೋಗ ಕಳೆವ ||೧||

ಮಟ್ಟ ತಾಳ

ಧನ್ವಂತರಿ ಶ್ರೀ ಧನ್ವಂತರಿ ಎಂದು
ಸನ್ನುತಿಸಿ ಸತತಾವಿಚ್ಚಿನ್ನ ಜ್ಞಾನದಿಂದ
ನಿನ್ನವ ನಿನ್ನವನೆಂದು ಘನತೆಯಲಿ ನೆನೆವ
ಮನುಜ ಭುವನದೊಳು ಧನ್ಯನು ಧನ್ಯನೆನ್ನಿ
ಘನ್ನ ಮೂರುತಿ ಒಲಿವ ವಿಜಯವಿಠಲ ಸುಪ್ರ
ಸನ್ನ ಸತ್ಯನೆಂದು ಬಣ್ಣಿಸು ಬಹುವಿಧದಿ ||೨||

ತ್ರಿಪುಟ ತಾಳ

ಶಶಿಕುಲೋದ್ಭವ ದೀರ್ಘಾತಮ ನಂದನ ದೇವ,
ಶಶಿವರ್ಣಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯವಂದ್ಯ
ಶಶಿಗರ್ಭ ಭೂರುಹ ಲತೆ ತಾಪ ಓಡಿಸುವ
ಔಷಧಿ ತುಳಸಿಜನಕ ವಾಸುದೇವ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದೆ ಮಹೋದಧಿ ಮಥಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷಘಟ ಧರಿಸಿ.
ಅಸಮದೈವವೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವುದು
ದಶದಿಶದಲಿ ಮೆರೆವ ವಿಜಯವಿಠಲ ಭಿಷಕು
ಅಸು ಇಂದ್ರಿಯಂಗಳ ರೋಗನಿವಾರಣ ||೩||

ಅಟ್ಟತಾಳ

ಶರಣು ಶರಣು ಧನ್ವಂತರಿ ತಮೋಗುಣನಾಶ,
ಶರಣು ಆರ್ತಜನಪರಿಪಾಲಕ, ದೇವ
ತರುವೇ, ಭವತಾಪಹರಣ, ದಿತಿಸುತ
ಹರಣ ಮೋಹಕಲೀಲಾ ಪರಮ
ಪೂರಣ ಬ್ರಹ್ಮ, ಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರುಕ್ರಮ ಉರಗಶಾಯಿ
ವರಕಿರೀಟ, ಮಹಾಮಣಿ ಕುಂಡಲಕರ್ಣ,
ಮಿರುಗುವ ಹಸ್ತಕಂಕಣ, ಹಾರಪದಕ,
ವರಗಾಂಚಿಪೀತಾಂಬರ, ಚರಣಭೂಷಾ,
ಸಿರಿವತ್ಸಲಾಂಛನ ವಿಜಯವಿಟಲರೇಯ
ತರಣಿಗಾತರ, ಜ್ಞಾನಮುದ್ರಾಂಕಿತಹಸ್ತ ||೪||

ಆದಿತಾಳ

ಏಳುವಾಗಲಿ, ಮತ್ತೆ ತಿರುಗುವಾಗಲಿ,
ಬೀಳುವಾಗಲಿ ನಿಂದು ಕುಳ್ಳಿರುವಾಗಲಿ
ಹೇಳುವಾಗಲಿ, ಪೋಗಿ ಸತ್ಕರ್ಮ ಮಾಡುವಾಗಲಿ,
ಬಾಳುವಾಗಲಿ, ಭೋಜನ ನಾನಾ ಷಡ್ರಸ ಸ
ಮ್ಮೇಳವಾಗಲಿ, ಮತ್ತೆ ಪುತ್ರಾದಿಗಳೊಡನೆ
ಖೇಳವಾಗಲಿ ಮನುಜ ಮರೆಯದೆ ಒಮ್ಮೆ ತನ್ನ
ನಾಲಗೆ ಕೊನೆಯಲ್ಲಿ ಧನ್ವಂತರಿ ಎಂದು
ಕಾಲ ಅಕಾಲದಲ್ಲಿ ಸ್ಮರಿಸದರೆ ಅವಗೆ
ವ್ಯಾಳೆವ್ಯಾಳೆಗೆ ಬಾಹೋ ಭವಬೀಜ ಪರಿಹಾರ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ ||೫||

ಜೊತೆ

ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ಸಿರಿ ವಿಜಯವಿಠಲ ಒಲಿವ ||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.