“ಮೈ ಇನ್ ಪರ್ ಕೊಯಿ ಎಹಸಾನ್ ನಹಿ ಕರನಾ, ಬಲ್ ಕೀ ಯೆ ಮುಜ್ ಪರ್ ಎಹಸಾನ್ ಕರ ರಹೆ ಹೈ” – ಝೀ ಟಿವಿಯ ಯಾವುದೋ ಸಿನಿಮಾವೊಂದರ ನಡುವೆ ಮೂಡಿ ಬಂದ ಈ ಸಂಭಾಷಣೆ ನನ್ನ ಮನಸ್ಸನ್ನು ಸೆಳೆಯಿತು. ಈ ಅರ್ಥ ಬರುವ ಸಂಭಾಷಣೆ ಬಹಳಷ್ಟು ಸಲ ಕೇಳಿದ್ದರೂ, ಈ ಬಾರಿ ಮಾತ್ರ ನನಗೆ ಹೊಸ ಅರ್ಥವೊಂದು ಹೊಳೆಯಿತು.

“ಹೇಸಾನ” – ಈ ಪದದ ಬಗ್ಗೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತೋ ಗೊತ್ತಿಲ್ಲ. ನಮ್ಮ ಬಳಗದಲ್ಲಿ ಈ ಪದ ಆಗಾಗ ಚಲಾವಣೆಯಾಗುತ್ತಿರುತ್ತದೆ. “ಇಷ್ಟು ದಿನ ಸುಮ್ಮನಿದ್ದು ಈಗೇನೊ ದೊಡ್ಡದಾಗಿ ಹೇಸಾನ ಹೊರಿಸುವವರ ಹಾಗೆ ಬಂದರು”, “ನಿನ್ನದೇನು ಮಹಾ ಹೇಸಾನ?” – ಈ ರೀತಿಯಾಗಿ ಈ ಪದ ಪ್ರಯೋಗ. ಒಟ್ಟಿನಲ್ಲಿ ಇಂಗ್ಲೀಷಿನ favour, ಕನ್ನಡದ ಉಪಕಾರ, ದಾಕ್ಷಿಣ್ಯ …ಅನ್ನುವ ಅರ್ಥದಲ್ಲಿಯೇ ಈ ಪದದ ಬಳಕೆ ಇದೆ. ನನ್ನ ಗಮನಕ್ಕೆ ಬಂದಾಗೆಲ್ಲ, ಈ ಪದ ದೂರು, ಅಸಮಾಧಾನ, ಆಕ್ಷೇಪವನ್ನು ವ್ಯಕ್ತಪಡಿಸುವ ರೂಪದಲ್ಲಿಯೇ ಈ ಉಪಯೋಗವಾಗಿರುವುದು ಹೆಚ್ಚು. ಒಳ್ಳೆಯ ಅರ್ಥದಲ್ಲಿ , `ಕೃತಜ್ಞತೆ’ ಸೂಚಕವಾಗಿ ಬಳಸುವುದು ಕಡಿಮೆ. ಅದೇಕೋ ಈ ಪದದ ಮೇಲೆ ನನಗೆ ಎಳ್ಳಷ್ಟೂ ಅಕ್ಕರೆಯಿಲ್ಲ. ಮಾತಿನಲ್ಲಿನಾಗಲೀ, ಬರಹದಲ್ಲಾಗಲೀ ಈ ಪದವನ್ನು ಎಂದೂ ಬಳಸಿಕೊಂಡಿಲ್ಲ. ಮಲತಾಯಿ ಧೋರಣೆ ಅನುಸರಿಸಿ ನಾನು ದೂರವಿಟ್ಟಿರುವ ಕೆಲವಾರು ಪದಗಳಲ್ಲಿ ಇದೂ ಒಂದು. ಆದರೂ, ಪಾವೆಂ ಅವರ ಪದಾರ್ಥ ಚಿಂತಾಮಣಿ ಅಥವಾ ಪದ ಮೂಲ ಚರ್ಚಿಸುವ ಇತರ ಪುಸ್ತಕಗಳಲ್ಲಿ ಈ ಪದದ ಹುಟ್ಟಿನ ಬಗ್ಗೆ ಏನಾದರೂ ಇದೆಯೇ ಎಂದು ತಿಳಿಯುವ ಕುತೂಹಲ ಇದ್ದೇ ಇದೆ.

“ಎಹಸಾನ್” ಪದ ಕೇಳಿದಾಗ, ‘ಹೇಸಾನ’ ಪದಕ್ಕೆ ಇದೇ ಮೂಲವಿದ್ದೀತೇ ಎನ್ನಿಸಿತು. ಕನ್ನಡವೊಂದನ್ನು ಬಿಟ್ಟು ಬೇರಾವ ಭಾಷೆಯನ್ನೂ ನುಡಿಯಲರಿಯದ ಬಾಯಿಗಳ ಹಲ್ಲು, ನಾಲಿಗೆಗಳಡಿಯಲ್ಲಿ ಸಿಕ್ಕಿ ಹಾಕಿಕೊಂಡು, ಬಹುಶಃ ಉರ್ದು ಮೂಲದ್ದಿರಬಹುದಾದ ಎಹಸಾನ್ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡು ‘ಹೇಸಾನ’ ಆಗಿದ್ದಿರಬಹುದೇ?

ಅಬ್ಬಾ! ಯಾವ ಮಣ್ಣಿನಲ್ಲಿಯೋ ಹುಟ್ಟಿ ಬೆಳೆದ ಪದವನ್ನು ಇನ್ನೆಲ್ಲಿಗೋ ಹೊತ್ತು ತಂದು, ಅದನ್ನು ತನ್ನದೇ ಅನ್ನಿಸಿಬಿಡುವ ಭಾಷಾ ಪ್ರವಾಹವೇ!

4 thoughts on “ಎಹೆಸಾನ್ ತೇರಾ ಹೋಗಾ ಮುಝ್ ಪರ್…..”

  1. ತ್ರಿವೇಣಿ,
    ಕನ್ನಡದಲ್ಲಿ ಬಳಕೆಯಾಗುತ್ತಿರುವ ಮತ್ತೊಂದು ಪದದ ಮೂಲವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.
    ಬೇರೆಡೆಯಿಂದ ಬಂದು ನಮ್ಮ ಕನ್ನಡದ ನೆಲದಲ್ಲಿ ಬೆಳೆದ ಹೂಬಳ್ಳಿಗಳಿಗೆ, ಸಿಹಿ ಹಣ್ಣುಗಳಿಗೆ ಲೆಕ್ಕವಿದೆಯೆ?

  2. ತುಳಸಿಯಮ್ಮ,

    ನನಗೆ ಹಿಂದಿಯಲ್ಲಿ ಬಹುವಾಗಿ ಬಳಕೆಯಲ್ಲಿರುವ “ಎಹೆಸಾನ್” ಪದಪ್ರಯೋಗ ಗೊತ್ತು. ಆದರೆ ಕನ್ನಡದಲ್ಲಿ ಎರವಲು ಪದವಾಗಿ ಬೀಡುಬಿಟ್ಟಿರುವ ಈ “ಹೇಸಾನ್” ಪದದ ಪರಿಚಯ ಈವರೆಗೂ ಇರಲಿಲ್ಲ. “ಹೇಸಾನ್”ನನ್ನು ನಮಗೆ ಪರಿಚಯಿಸಿ ತುಂಬಾ “ಎಹೆಸಾನ್” ಮಾಡಿರುವಿರಿ..:) ಧನ್ಯವಾದಗಳು..:)

  3. ವೇಣಿ,
    ಕನ್ನಡದ “ಹೇಸಾನ್” ಕೇಳಿರಲಿಲ್ಲ, ಬಳಸಿರಲಿಲ್ಲ. ಆದರೆ ಅದು ಖಂಡಿತವಾಗಿಯೂ ಹಿಂದಿಯ “ಎಹೆಸಾನ್” ಪದಕ್ಕೆ ಬಳಕೆಯಲ್ಲಿಯೂ ಉಚ್ಚಾರದಲ್ಲಿಯೂ ಹೋಲಿಕೆಯನ್ನಂತೂ ಪಡೆದಿದೆ.
    ಇಷ್ಟರ ಮಟ್ಟಿಗೆ “ಎಹೆಸಾನ್”ನ “ಎಹೆಸಾನ್” “ಹೇಸಾನ್” ಮೇಲಿದೆ. ಹೊಸ ಪದಸ್ವರೂಪ ತಿಳಿಸಿದ್ದಕ್ಕೆ ವಂದನೆಗಳು ಕಣೇ.

    ಕಾಕಾ ಹೇಳಿದಂತೆಯೇ, ಭಾಷೆಯೆನ್ನುವದು ವಿವಿಧ ಗಿಡಬಳ್ಳಿಗಳಿಂದ ಕಸಿ ಮಾಡಿಸಿಕೊಂಡ ಸಸ್ಯದಂತೆ. ನಾನಾ ರೂಪರಂಗಿನ ಶಾಖೋಪಶಾಖೆಗಳನ್ನು ಹೊಂದಿ ಸೊಗಸಾಗಿ ಬೆಳೆಯಬೇಕಾದ್ದು. ಅದರ ಫಲಾಸ್ವಾದ ನಮ್ಮ ಸೌಭಾಗ್ಯ, ಅಲ್ಲವೆ?

  4. ನನ್ನ ತುಳಸೀ ಮನೆಯ ಪ್ರೀತಿಯ ಸದಸ್ಯರಾದ ಕಾಕಾ, ತೇಜು, ಜ್ಯೋತಿ,
    ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.