‘ಶೆಟ್ಟಿ ಶಗಣಿ ತಿಂದ ಹಾಗೆ’ – ಇದು ನಮ್ಮ ಸಂಬಂಧಿಗಳ, ತೀರಾ ಆಪ್ತ ಸ್ನೇಹಿತರ ವಲಯದಲ್ಲಿ ಪ್ರಚಲಿತವಾಗಿರುವ ಒಂದು ತಮಾಷೆಯ ನುಡಿಗಟ್ಟು. , ‘ಬೇಡ ನೋಡು, ಕೊನೆಗೆ ಶೆಟ್ಟಿ ಆಗುತ್ತೀಯಾ…” , ‘ಅಯ್ಯೋ ಎಷ್ಟು ಹೇಳಿದರೂ ಕೇಳಲಿಲ್ಲ, ಕೊನೆಗೆ ನೋಡು, ಶೆಟ್ಟಿ ಶಗಣಿ ತಿಂದ ಹಾಗಾಯ್ತು’ ಎಂದು ಬೇಸ್ತುಬಿದ್ದವರನ್ನು – ನಮ್ಮ ಮಾತಿನಲ್ಲಿಯೇ ಹೇಳುವುದಾದರೆ ಗುಂಡಿಗೆ ಬಿದ್ದವರು – ಛೇಡಿಸಲು ಈ ನುಡಿಗಟ್ಟನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ. ಇದನ್ನು ಹುಟ್ಟುಹಾಕಿದ ಶ್ರೇಯ ನಮ್ಮಮ್ಮನಿಗೇ ಸಲ್ಲುತ್ತದೆ.

ಇರಲಿ, ಏನಿದು ಶೆಟ್ಟಿ ಶಗಣಿ ತಿಂದ ಕಥೆ?

ಸುಮಾರು ವರ್ಷಗಳ ಹಿಂದೆ (ಕನಿಷ್ಟ ೨೫-೩೦ ವರ್ಷಗಳಾದರೂ ಆಗಿರಬೇಕು) ‘ಮಯೂರ’ ಮಾಸಪತ್ರಿಕೆಯಲ್ಲಿ ಒಂದು ಪುಟ್ಟ ಕಥೆ ಪ್ರಕಟವಾಗಿತ್ತು. ಕಥೆ ಅನ್ನುವುದಕ್ಕಿಂದ ಜಾಗ ತುಂಬಿಸಲು ‍BOxನಲ್ಲಿ ಪ್ರಕಟವಾಗಿದ್ದ ಪುಟ್ಟ ಬರಹ. ಆ ಕಥೆಯ ಸಾರಾಂಶವೇನೆಂದರೆ :-

ಒಂದೂರಿನಲ್ಲಿ ಒಬ್ಬ ಜಿಪುಣ ಶೆಟ್ಟಿ ಇರುತ್ತಾನೆ. ದಿನಸಿ ವ್ಯಾಪಾರ ಅವನ ಉದ್ಯೋಗ. ಒಂದು ದಿನ ಆ ಶೆಟ್ಟಿ ಕಲಬೆರಕೆ ಮಾಡಿ ಅಧಿಕಾರಿಗಳ ಕೈಗೆ ಸಿಕ್ಕು ಬೀಳುತ್ತಾನೆ. ಅವನನ್ನು ರಾಜನ ಎದುರು ವಿಚಾರಣೆಗೆ ಒಯ್ಯಲಾಗುತ್ತದೆ. ರಾಜ ಎಲ್ಲವನ್ನೂ ಕೇಳಿ ಶೆಟ್ಟಿಯದು ತಪ್ಪೆಂದು ನಿರ್ಧರಿಸಿ, ಅವನಿಗೆ ಶಿಕ್ಷೆ ವಿಧಿಸಲು ನಿರ್ಧರಿಸುತ್ತಾನೆ. ಮೂರು ವಿಧದ ಶಿಕ್ಷೆಗಳನ್ನು ಪ್ರಕಟಿಸಿ, ಅದರಲ್ಲಿ ಯಾವುದನ್ನಾದರೂ ಆಯ್ದುಕೊಳ್ಳುವಂತೆ ಶೆಟ್ಟಿಗೆ ಸೂಚಿಸುತ್ತಾನೆ. ಮೂರು ವಿಧದ ಶಿಕ್ಷೆಗಳು ಯಾವುವೆಂದರೆ –

೧. ಸಾವಿರ ವರಹಗಳನ್ನು ದಂಡವಾಗಿ ಕಟ್ಟುವುದು.

೨. ಇನ್ನೂರು ಛಡಿಯೇಟುಗಳನ್ನು ತಿನ್ನುವುದು.

೩. ನೂರು ಶಗಣಿ ಉಂಡೆಗಳನ್ನು ತಿನ್ನುವುದು

ಕಂಜೂಸು ಶೆಟ್ಟಿ, ಅನ್ಯಾಯವಾಗಿ ಸಾವಿರ ವರಹ ದಂಡ ಕಟ್ಟುವ ಬದಲು, ಹೇಗೋ ಕಷ್ಟಪಟ್ಟು ಶಗಣಿ ಉಂಡೆಯನ್ನೇ ತಿಂದು ಬಿಟ್ಟರಾಯಿತೆಂದು ಯೋಚಿಸಿಕೊಂಡು ತಿನ್ನತೊಡಗುತ್ತಾನೆ. ಕಷ್ಟಪಟ್ಟು ಐವತ್ತು ಉಂಡೆಗಳನ್ನು ಹೇಗೋ ತಿಂದು ಮುಗಿಸುವುದರೊಳಗೆ ಹೊಟ್ಟೆ ತೊಳಸಿ ಬಂದು, `ಆಯ್ಯಯ್ಯಪ್ಪಾ… ಈ ಕೆಲಸ ನನ್ನಿಂದಾಗದು, ಇನ್ನೂರು ಛಡಿಯೇಟನ್ನೇ ಕೊಡಿ. ಏಟಿನ ನೋವನ್ನಾದರೂ ತಡೆಯಬಹುದು, ಈ ಅಸಹ್ಯ ಸಹಿಸಲಾರೆ” ಎಂದು ಮೊರೆಯಿಡುತ್ತಾನೆ. ಆಗಲೆಂದು ಒಪ್ಪಿದ ರಾಜ ಇನ್ನೂರು ಛಡಿಯೇಟನ್ನು ಹೊಡೆಯುವಂತೆ ಭಟರಿಗೆ ಆದೇಶಿಸುತ್ತಾನೆ. ಹಾಗೂ-ಹೀಗೂ ನೂರು ಏಟು ತಿಂದ ಶೆಟ್ಟಿ, ಕೊನೆಗೆ ನೋವು ತಡೆಯಲಾರದೆ ಬೊಬ್ಬೆ ಹೊಡೆಯುತ್ತಾನೆ – ’ದಯವಿಟ್ಟು ನಿಲ್ಲಿಸಿ. ನಾನು ಸಾವಿರ ವರಹ ದಂಡವನ್ನೇ ಕೊಟ್ಟುಬಿಡುತ್ತೇನೆ!”

ಶಿಕ್ಷೆಯಲ್ಲಿ ಹೇಳಿರುವ ಮೊತ್ತ ವ್ಯತ್ಯಾಸವಿರಬಹುದೇನೊ. ಆದರೆ ಕಥೆ ಇಷ್ಟೇ. ಈ ಕಥೆಯನ್ನು ಓದಿದ ಅಮ್ಮನಿಗೆ ಅದು ಇಷ್ಟವಾಯಿತೇನೊ. ಕಥೆಯನ್ನು ಅಲ್ಲೇ ಇದ್ದ ನನಗೂ, ನಮ್ಮ ತಂದೆಗೂ ಹೇಳಿದರು. ಆಗಾಗ ಬರುತ್ತಿದ್ದ ತವರು ಮನೆಯವರಿಗೆ, ನಮ್ಮ ಅಕ್ಕ, ಅಣ್ಣಂದಿರಿಗೆ, ಆಪ್ತರಿಗೆ, ಇಷ್ಟರಿಗೆ….ಅವರು ಅವರಿಗೆ ಬೇಕಾದ ಮತ್ತಷ್ಟು ಜನರಿಗೆ ಹೇಳಿ ಕಥೆ ಬಾಯಿಮಾತಿನಲ್ಲಿಯೇ ಬಿಟ್ಟಿ ಪ್ರಚಾರ ಪಡೆದುಕೊಂಡಿತು. ಈ ಕಥೆಯನ್ನು ನಮ್ಮಂತೆಯೇ ಆಗ ಓದಿದ ಇತರ ಓದುಗರಿರಲಿ, ಸ್ವತಃ ಕಥೆ ಬರೆದವರಿಗೂ ಮರೆತೇ ಹೋಗಿರಬಹುದೇನೋ. ಆದರೆ ಅಮ್ಮನ ಆದರಕ್ಕೆ ಪಾತ್ರವಾದ ಈ ಕಥೆ ನಮ್ಮ ಬಳಗದಲ್ಲಿ ಮಾತ್ರ ಶಾಶ್ವತವಾಗಿ ಉಳಿದುಹೋಯಿತು. ಎಷ್ಟರಮಟ್ಟಿಗೆಂದರೆ, ಭಾರತದಲ್ಲಿ ಹುಟ್ಟಿದರೂ ಇಲ್ಲೇ ಬೆಳೆದು ದೊಡ್ದವರಾಗುತ್ತಿರುವ ನನ್ನ ಮಕ್ಕಳಿಗೂ ‘ಶೆಟ್ಟಿ… ಶಗಣೆ’ ನುಡಿಗಟ್ಟನ್ನು ಮಾತಿನ ಸಂದರ್ಭದಲ್ಲಿ, ಎಲ್ಲಿ, ಯಾವಾಗ ಬಳಸಬೇಕೆಂದು ಗೊತ್ತಾಗುವಷ್ಟು!

ನಮ್ಮಮ್ಮನಿಗೆ, ಓದಿದ್ದು ಏನೇ ಇಷ್ಟವಾದರೂ, ಅದನ್ನು ಓದದೆ ಇದ್ದ ಇತರರಿಗೂ ಹೇಳುವುದೊಂದು ಸುಂದರ ಅಭ್ಯಾಸವಿತ್ತು. ಅದು ಹೇಗೆಂದರೆ, ವರ್ಣರಂಜಿತವಾಗಿ, ರಸವತ್ತಾಗಿ, ಕೇಳುವರ ಕಣ್ಮುಂದೆ ಘಟನೆಗಳು ಚಿತ್ರವಾಗಿ ಮೆರವಣಿಗೆ ಹೊರಡುವ ಹಾಗೆ! ಅದು ಅಮ್ಮನಿಗೆ ಕರಗತವಾಗಿದ್ದ ಕಲೆ. ‘ಕಸ್ತೂರಿ’ಯಲ್ಲಿ ಆಗ ಬರುತ್ತಿದ್ದ ‘ಪುಸ್ತಕ ವಿಭಾಗ’ವಂತೂ ಅಮ್ಮನ ಅಚ್ಚುಮೆಚ್ಚು. ಅಮ್ಮನ ಬಾಯಲ್ಲಿ ಕೇಳಿದ ಅದರ ಎಷ್ಟೊ ಕಥೆಗಳನ್ನು, ನಾನೇ ಹುಡುಕಿ ಓದಿದಾಗ ಸಪ್ಪೆ ಅನ್ನಿಸಿದಿದ್ದಿದೆ. ‘ವೆಂಕಟೇಶ ಮಹಾತ್ಮೆ’ಯಲ್ಲಿ ಬರುವ `ಮಾಧವ’ ಬ್ರಾಹ್ಮಣನ ಕಥೆಯನ್ನು ಅಮ್ಮನಿಂದ ಬಣ್ಣದಲ್ಲಿ ಕೇಳಿದ್ದ ನಮಗೆ, ಮೊದಲಬಾರಿ ತಿರುಪತಿಗೆ ಕುಟುಂಬಯಾತ್ರೆ ಹೊರಟಾಗ ವೆಂಕಟೇಶ್ವರನಿಗಿಂತ ಮಾಧವನನ್ನು ನೋಡುವ ತವಕವೇ ಹೆಚ್ಚಾಗಿತ್ತು. ಯಾವುದೋ ಮೆಟ್ಟಿಲೊಂದರ ಮೇಲೆ ಅಡ್ಡಬಿದ್ದಂತೆ ಮಲಗಿರುವ ಮಾಧವನ ಬಡಕಲು ಮೂರ್ತಿಯನ್ನು ನೋಡಿ ನಮಗಾದ ನಿರಾಸೆ ಅಷ್ಟಿಷ್ಟಲ್ಲ. (ದೇಗುಲದ ಕೆಲಸಗಾರರು, ಎಲ್ಲಾ ವಿಗ್ರಹಗಳಿಗೂ ನಾಮ ಬಳಿದು ಇಲ್ಲಿಗೂ ಬಂದವರು, ನಾಮ ಹಚ್ಚಲು ಅಡ್ಡಬಿದ್ದಿರುವ ಮಾಧವನ ಮುಖ ಕಾಣದೆ ಅವನ ಹಿಂಭಾಗಕ್ಕೇ ಮೂರು ನಾಮ ಬಳಿದು ಹೋಗಿದ್ದರು!)

10 thoughts on “ಶೆಟ್ಟಿ ಶಗಣಿ ತಿಂದ ಹಾಗೆ….”

  1. ಕತೆ ರಸವತ್ತಾಗಿತ್ತು. ಇದನ್ನು ನಮಗೆ ತಿಳಿಸಿದ್ದಕ್ಕಾಗಿ ನಿಮಗೆ ಹಾಗು ನಿಮ್ಮ ತಾಯಿಗೆ
    ಧನ್ಯವಾದಗಳು.

  2. ಹ್ಹ ಹ್ಹ ಸೂಪರ್ ಕತೆ ಇದು. ನನ್ನ ಸೋದರ ಮಾವ ಈ ಕತೆ ಪಾಪ್ಯುಲರೈಸ್ ಮಾಡಿದ್ರು ನಮ್ಮನೇಲಿ. ಅವರು ಹೇಳಿದ್ಮೇಲೆ ಶಗಣಿ ಉಂಡಿ-ಸಾವಿರ ವರಹ ಅಂತಲೇ ಪ್ರಸಿದ್ಧವಾಗಿಬಿಟ್ಟಿದೆ ನಮ್ಮ ಮನೇಲಿ. short cuts ತೊಗೊಳ್ಳೋಕೆ ಹೊರಟಾಗಲೆಲ್ಲ ಇನ್ನೊಮ್ಮೆ ಯೋಚಿಸೋ ಹಾಗೆ ಮಾಡುತ್ತದೆ ಈ ಕತೆ 🙂


    ಅನಿಲ

  3. ಕಾಕಾ, ನಿಮಗೂ ಧನ್ಯವಾದಗಳು.

    ಅನಿಲ, ನಿಮ್ಮ ಸೋದರಮಾವನೂ ನನ್ನಮ್ಮನಂತೆಯೇ ಈ ಕಥೆಯ ನೀತಿಗೆ ಮನಸೋತರವರಿರಬೇಕು. 🙂

  4. ಹ ಹ! ಚನ್ನಾಗಿದೇ ಕಥೇ! 🙂 ಮತ್ತೇ ನೀವೂ ನಿಮ್ಮಮ್ಮನಿಗೇ ಹೆಮ್ಮೆಯಾಗೊ ಥರ ಸುಪರ್ರಾಗಿ ಕಥೆ ಹೇಳ್ತೀರಾ, ನಮ್ಮಮ್ಮನ ಥರಾ! 🙂

  5. ಶ್ರೀಮಾತಾ, ನಿಮ್ಮ ಮಾತು ನಿಜವೆಂದುಕೊಂಡು ನಾನು ಮತ್ತಷ್ಟು ಕಥೆ ಹೇಳಲು ಶುರು ಮಾಡಿದರೆ, ಆಗ ಬೋರಾಯಿತು ಎನ್ನುವಂತಿಲ್ಲ! 🙂

  6. ಕಥೆ ಚೆನ್ನಾಗಿದೆ. ಇದನ್ನು ನಿನ್ನ ಬಾಯಿಂದ ಕೇಳಿದ್ರೂ ಮತ್ತೆ ಓದಿದಾಗ ಅದರ ಗಾಢತೆಯ ಅರಿವಾಗುತ್ತದೆ. ಇಲ್ಲೂ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಕಣೇ

  7. ಪ್ರಜಾವಾಣಿ ಲೇಖನ ನೋಡಿ ಇಲ್ಲಿಗೆ ಬಂದೆ. ತುಂಬಾ ತಮಾಷೆಯಾಗಿದೆ ಈ ಶೆಟ್ಟಿ ಕಥೆ

Leave a Reply to ಜ್ಯೋತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.