ರಚನೆ : ಪುರಂದರದಾಸರು

ವಿದ್ಯಾಭೂಷಣ

ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ
ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ
ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ |

ಮಥುರಾ ಪಟ್ಟಣವಂತೆ, ಮಾವ ಕಂಸನಂತೆ
ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ
ಉದಯದಿ ಪಯಣವಂತೆ, ಹೇ ಕಾಂತೆ |

ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ,
ಎಲ್ಲಾ ಕಪಟವಂತೆ, ಎಲ್ಲೂ ಹೀಗಿಲ್ಲವಂತೆ
ನಿಲ್ಲದೆ ಯಶೋದೆಯ ಕಣ್ಣಲ್ಲುದಕವಂತೆ |

ಮಲ್ಲರ ಕೂಟವಂತೆ, ಮತ್ತೆ ಕಾಳಗವಂತೆ,
ಬಲ್ಲಿದ ಗಜಗಳಂತೆ, ಬಿಲ್ಲ ಹಬ್ಬಗಳಂತೆ, ಬೀದಿ ಶೃಂಗಾರವಂತೆ
ಅಲ್ಲಿ ತಾಯ್ತಂದೆಯರ ಕಾಲಿಗೆ ನಿಗಡವಂತೆ |

ಮತ್ತೆ ಪಾಂಡವರಂತೆ, ಮೋಹದ ಸೋದರ ಅತ್ತೆಯ ಮಕ್ಕಳಂತೆ
ಸುತ್ತ ಶತೃಗಳಂತೆ, ಸಕಲ ಕಾರ್ಯಗಳಂತೆ
ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ!

ತಾಳಲಾರೆವು ನಾವು, ಪುರಂದರವಿಠಲನು ಬಾಲತ್ವದಲಿ ಪೋದರೆ
ಕಾಲ ಒದಗಿತಮ್ಮ ಕಾಮಿನೀಜನರೆಲ್ಲ
ಆಲೋಚನೆಯ ಮಾಡಿ ಆಣೆಯಿಡುವ ಬನ್ನಿ||

3 thoughts on “ಅಕ್ಕಾ, ಅಕ್ರೂರ ಬಂದನಂತೆ!”

  1. ತ್ರಿವೇಣಿಯವರೇ,

    ನೀವು ದಾಸರ ಪದಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದೀರಿ. ಶರಣರ ವಚನಗಳು ತುಳಸೀವನದಲ್ಲಿ ಮೇಲ್ನೋಟಕ್ಕೆ ನನ್ನ ಕಣ್ಣಿಗೆ ಬಿದ್ದಿಲ್ಲ. ತುಳಸೀವನ ಎಂದಾಕ್ಷಣ ವನಮಾಲಿಗೆ ಅಗ್ರಸ್ಥಾನವೋ ಹೇಗೆ? ಘನಶೂಲಿಗೂ ಸ್ವಲ್ಪ ಜಾಗ ಕೊಡಬಹುದಲ್ಲ.

    ದಯವಿಟ್ಟು ಈ ಸಲಹೆಯನ್ನು ನಗುತ್ತ ಲಘುವಾಗಿ ಸ್ವೀಕರಿಸಿ. 🙂

    -ಬಸವರಾಜು

  2. ಖಂಡಿತ ಹಾಗೇನೂ ಇಲ್ಲ. ವಚನಗಳೆಂದರೆ ನನಗೂ ಬಹಳ ಇಷ್ಟ. ವಿಚಾರಮಂಟಪ ತಾಣದಲ್ಲಿ ಈಗಾಗಲೇ ಬಹಳಷ್ಟು ವಚನ ಸಂಗ್ರಹವಿರುವುದರಿಂದ, ಅವುಗಳನ್ನು ಮತ್ತೊಮ್ಮೆ ನನ್ನ ತಾಣದಲ್ಲಿ ಪ್ರಕಟಿಸುವ ಅಗತ್ಯ ಕಾಣಲಿಲ್ಲ. ನನ್ನ ಸೈಟಿನಿಂದ ಲಿಂಕ್ ಕೊಟ್ಟಿದ್ದೇನೆ ನೋಡಿ.

    “ಘನಶೂಲಿಗೂ ಸ್ವಲ್ಪ ಜಾಗ ಕೊಡಬಹುದಲ್ಲ…..”

    – ಶಿವನನ್ನು ಸ್ತುತಿಸುವ ಹಾಡುಗಳು ಈಗಾಗಲೇ ಇವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.