ಕವನ : ಗಗನದಿ ಸಾಗಿವೆ
ಕವಿ : ಚೆನ್ನವೀರ ಕಣವಿ

ಗಗನದಿ ಸಾಗಿವೆ ಬಾಗಿವೆ ಮೋಡ
ಹೋಗಿದೆ ನೀರನು ಸುರಿದು;
ಬರುವುವು, ಬಂದೇ ಬರುವುದು ನೋಡ
ತುಂಬಿಸಿ, ತುಳುಕಿಸಿ ಹರಿದು.

ಇಳೆಗೂ ಬಾನಿಗು ಮಳೆ ಜೋಕಾಲಿ
ತೂಗಿದೆ, ತಂಗಿದೆ ಚೆಲುವು;
ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ
ಹೆಸರಿಗು ಕಾಣದು ನೆಲವು.

ನಸುಕೋ, ಸಂಜೆಯೊ, ಮಿಸುಕದು ಬೆಳಕು,
ತಾಯಿಯ ಮೊಲೆಗಿದೆ ಕೂಸು;
ಇರುಳೇ ಹೊರಳಿತು, ಹಗಲೇ ಮರಳಿತು,
ಚಿಗುರೆಲೆ ಹೂವಿಗೆ ಹಾಸು.

ಬೇಸಗೆ ಬಣಬಣ, ಚಳಿಗೋ ಒಣ ಒಣ
ಶ್ರಾವಣ ತಣ್ಣಗೆ ನಡುವೆ;
ಎಲ್ಲಿದೆ ಬೆಂಕಿ? ಎಲ್ಲಿದೆ ಬೆಳಕು?
ಬೀಸುವ ಗಾಳಿಗೆ ಬಿಡುವೆ?

ನೀರೇ ಹರಿದಿದೆ, ನೀರೇ ಬೆರೆದಿದೆ
ನೀರೇ ಕರೆದಿದೆ ಮೊರೆದು;
ಯಾರೆ? ಎಂದರು, ನೀರೇ ಬರುವದು
ಬೆನ್ನಿನ ಹಿಂದೆಯೆ ಸರಿದು.

ಬೆಚ್ಚಗೆ ಒಳಗೆ, ಹಚ್ಚಗೆ ಹೊರಗೆ
ಹುಚ್ಚನು ಬಿಡಿಸಿದೆ ಮಳೆಯು;
ಎಚ್ಚರು ಎಚ್ಚರು ಎನ್ನುತ ಹರಿದಿದೆ
ತುಂಬಿದ ಬಾಳಿನ ಹೊಳೆಯು.

* ಹೂವು ಹೊರಳುವವು ಸೂರ್ಯನ ಕಡೆಗೆ (ಆಯ್ದ ಭಾವಗೀತೆಗಳ ಸಂಗ್ರಹ)

6 thoughts on “ಗಗನದಿ ಸಾಗಿವೆ – ಚೆನ್ನವೀರ ಕಣವಿ”

  1. ಚೇತನ್, ಸವಿನುಡಿಗೆ ಧನ್ಯವಾದ. ಕಣವಿಯವರ ಮತ್ತಷ್ಟು ಭಾವಗೀತೆಗಳನ್ನು ಇಲ್ಲಿ ಸೇರಿಸುವ ಉದ್ದೇಶವಿದೆ. ತುಳಸಿವನಕ್ಕೆ ಬರುತ್ತಿರಿ 🙂

  2. ಈಗ ಬೆಂಗಳೂರು ರೇಡಿಯೋದಲ್ಲಿ ಬೆಂಗಳೂರು ಲತಾ ಅವರು ಹಾಡಿದ ಈ ಭಾವಗೀತೆಯನ್ನು ಕೇಳಿದೆ.. ರಚನೆಗಾಗಿ ಇಲ್ಲಿ ನೋಡಿದೆ.. ಚೆನ್ನಾಗಿದೆ ಧನ್ಯವಾದಗಳು

Leave a Reply to chethan Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.