ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು ಹುಟ್ಟಿದ ಮನೆಗೆ ಅವಳು ಕಾಲಿಡುವಹೊತ್ತಿಗೆ ಸುನೇತ್ರಳ ಅಪ್ಪ ಮಗಳಿಗೆ ಕಾಯದೆ ಕೊನೆಯ ಮನೆ ಸೇರಿಕೊಂಡಿದ್ದಾಗಿತ್ತು. ಆಗಿನಿಂದ ಸುನೇತ್ರಳ ಎದೆಯಲ್ಲಿ ಕೊರಗು ಮನೆಮಾಡಿತು. ಅಮ್ಮ ಅವಳನ್ನು ಅಪ್ಪಿ ಸಮಾಧಾನಿಸಿದ್ದಳು- ‘ಕಂದಾ, ಹೋಗಲಿಬಿಡೆ. ಮನಸ್ಸಿಗೆ ಹಚ್ಚಿಕೋಬೇಡ. ನಿನ್ನ ತಂದೆಗೆ ನಿನ್ನ ಕಷ್ಟ ಗೊತ್ತಾಗದಿರುತ್ತದಾ? ಸತ್ತವರಿಗೂ ದೇವರ ಥರ ಎಲ್ಲಾ ತಿಳಿವ ಶಕ್ತಿ ಬಂದಿರತ್ತಂತೆ ಕಣೆ.’ ಸುನೇತ್ರಳಿಗೂ ಹೌದೆನ್ನಿಸಿತ್ತು. ತಂದೆಯ ಕರ್ಮಾಂತರಗಳೆಲ್ಲ ಮುಗಿಸಿಕೊಂಡು ಸುನೇತ್ರ ಮನೆಗೆ ಮರಳಿದಳು. ತನ್ನ ದಿನಚರಿಯಲ್ಲಿ ಮುಳುಗಿಹೋದಳು. ಆಗೀಗ ಅಪ್ಪ ಅರಿವಿಗೆ ಕುಟುಕುತ್ತಿದ್ದ. ನಿಂತಲ್ಲಿ, ಕೂತಲ್ಲಿ, ಹೋದಲ್ಲಿ, ಬಂದಲ್ಲಿ ಅವಳಿಗೆ ಅಪ್ಪನನ್ನು ಕಂಡ ಭ್ರಾಂತಿಯಾಗುತ್ತಿತ್ತು. ಅಮ್ಮನ ಮಾತನ್ನು ನೆನೆದು ಅಪ್ಪನನ್ನು ಮರೆಯಲೆಳೆಸುತ್ತಿದ್ದಳು.

ಅಂದೇಕೊ ಮಕ್ಕಳಿಗೆ ಅಂಗಳದಲ್ಲಿಯೇ ಉಣ್ಣುವ ಉತ್ಸಾಹ ಬಂದಿತ್ತು. ‘ಬಿಸಿಲು… ಬೇಡಿರೋ’ ಎಂದು ಅಂಗಲಾಚಿದರೂ ಅಮ್ಮನನ್ನು ಕಾಡಿ ಅಲ್ಲೇ ತಿನ್ನುತ್ತಾ ಕುಳಿತವು. ಮಕ್ಕಳನ್ನು ಕಾಯುತ್ತಾ ಕುಳಿತ ಸುನೇತ್ರಳ ಕೈಯಲ್ಲಿ ಅಕ್ಕಿ ತುಂಬಿದ ಮೊರ. ಆರಿಸಲೆಂದು ತಂದವಳು ಅನ್ಯಮನಸ್ಕಳಾಗಿ ಮನದಲ್ಲೇನೋ ಹೆಣೆದುಕೊಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ ಕಪ್ಪನೆ ಕಾಗೆಯೊಂದು ಹಾರಿ ಬಂದು ಅವಳ ಎದುರು ಬಂದು ಕುಳಿತಿತು. ಕೈಯಲ್ಲಿದ್ದ ಅಕ್ಕಿಯನ್ನು ಅದರಿಂದ ರಕ್ಷಿಸುವ ಸಲುವಾಗಿ ‘ಹಚ್ಯಾ…..’ ಎನ್ನಳು ಹೋದವಳು, ‘ಹಚ್ಯಾ……’ ಎನ್ನುವುದು ನಾಯಿಗಲ್ಲವೇ ಅನ್ನಿಸಿ ಸುಮ್ಮನಾದಳು. ಕಾಗೆ ಓಡಿಸುವುದು ಹೇಗೆ ಮತ್ತೆ?

ಸುನೇತ್ರಳಿಗೆ ಈಗ ನೆನಪಾಯಿತು. ‘ಹುಶ್…. ಹುಶ್’ ಎಂದು ಬರಿಗೈಯನ್ನು ಬೀಸಿದಳು. ಕಾಗೆ ಬೆಚ್ಚಲಿಲ್ಲ. ಬೆದರಲಿಲ್ಲ. ಸುನೇತ್ರಳ ಎದುರಿನಿಂದ ಕದಲಲಿಲ್ಲ. ಅವಳ ಕಡೆಗೆ ನಿಶ್ಚಲ ನೋಟ ಬೀರಲಾರಂಭಿಸಿತು. ಸುನೇತ್ರಳಿಗೆ ಭಯವಾಯಿತು. ಅವಳು ಕಾಗೆಯ ಕಣ್ಣುಗಳನ್ನು ಇಷ್ಟು ಹತ್ತಿರದಿಂದ ಎಂದೂ ನೋಡಿರಲೇ ಇಲ್ಲ. ಕಾಗೆ ಈಗ ಮಕ್ಕಳ ಕೈಯಲ್ಲಿದ್ದ ತಿನಿಸಿನ ಮೇಲೆ ಕಣ್ಣು ನೆಟ್ಟಿತ್ತು. ‘ಅಯ್ಯೋ, ತಿಂಡಿಯ ಆಸೆಗೆ ಮಕ್ಕಳಿಗೆ ಕುಕ್ಕಿದರೇನು ಗತಿ?’ ಕಂಗಾಲಾದಳು. ಕೈಯಲ್ಲಿದ್ದ ತಟ್ಟೆಯಿಂದ ಹಿಡಿ ಅಕ್ಕಿಯನ್ನು ಎತ್ತಿ ಕಾಗೆಯತ್ತ ತೂರಿದಳು. ಅವಳ ಈ ನಡೆಯನ್ನು ನಿರೀಕ್ಷಿಸದಿದ್ದ ಕಾಗೆ ವ್ಯಗ್ರವಾಯಿತು. ಪಟಪಟ ರೆಕ್ಕೆಗಳನ್ನು ಪಟಗುಟ್ಟಿಸಿ, ಸುನೇತ್ರಳನ್ನು ದುರುಗುಟ್ಟಿ ನೋಡಿ ಹಾರೇಹೋಯಿತು. ಸುನೇತ್ರ ನೋಡುತ್ತಲೇ ಇದ್ದಳು. ‘ಅಮ್ಮಾ, ಅಜ್ಜಿ ಹೇಳಿದ್ಳು ನಂಗೆ, ಸತ್ತವರು ಕಾಗೆಯ ರೂಪದಲ್ಲಿ ಬರುತ್ತಾರಂತೆ. ಹೌದೇನಮ್ಮಾ?’ ಪುಟ್ಟ ಮಗಳ ಪ್ರಶ್ನೆ ಸುನೇತ್ರಳ ಕಿವಿಗೆ ಬಡಿಯಿತು. ‘ಇಲ್ಲ ಪುಟ್ಟಿ, ಸತ್ತವರೆಲ್ಲ ಕಾಗೆಗಳಾಗುತ್ತಾರೆ ಅನ್ನೋದೆಲ್ಲ ಸುಳ್ಳು.’ ಎಂದಳು.

2 thoughts on “ಕಾಗೆಯೊಂದು ಹಾರಿಬಂದು….”

  1. ತುಳಸಿಯಮ್ಮಾ,

    ಕತೆ ತುಂಬಾ ಚೆನ್ನಾಗಿದೆ. ಮತ್ತೂ ಬೆಳೆಸಿದಿದ್ದರೆ ಮತ್ತೂ ಚೆನ್ನಾಗಿತ್ತು 😉

  2. Thanks Tejaswini .

    ಮತ್ತೂ ಬೆಳೆಸಿದಿದ್ದರೆ ….. ಏನಾಗಿರುತ್ತಿತ್ತೊ ಯಾರಿಗ್ಗೊತ್ತು ? 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.