ಕವಿ – ಕುವೆಂಪು

ಹಾಡು ಕೇಳಿ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ.
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ.

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ.
ಅಲ್ಲಿ ಸಿರಿಗನ್ನಡ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ.

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ!

ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆ ಏನೆಂದು ಎಲ್ಲರರಿತಿರಲಿ:
ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ;
ನರಕವಿವನೊಳಗೊಂಡಿರಲು ನರಕವಿರಲಿ!

8 thoughts on “ನನ್ನ ಬಯಕೆ – ಕುವೆಂಪು”

  1. ತ್ರಿವೇಣಿಯವರೇ,
    ಎಷ್ಟು ಸುಂದರವಾದ ಪದ್ಯ. ನಮಗೆ ಐದನೆತ್ತಿಯಲ್ಲೋ, ಆರನೆತ್ತಿಯಲ್ಲೋ ಪಾಠವಾಗಿತ್ತು ಈ ಪದ್ಯ.
    ಸುಂದರವಾದ “ಬಾಗೇಶ್ರಿ” ರಾಗದಲ್ಲಿ ಹಾಡುವುದನ್ನೂ ಹೇಳಿಕೊಟ್ಟಿದ್ದರು ನನ್ನ ತಂದೆ. ಎಷ್ಟೆಲ್ಲ ,ಮಧುರ ನೆನಪುಗಳನ್ನು ಮರಳಿ ತಂತು ಈ ಪದ್ಯ ನನಗೆ.
    ತುಂಬ ಧನ್ಯವಾದಗಳು. ನನಗೂ ನನ್ನ ಮನೆ, ಊರಿಗೆ ಹೋಗಬೇಕೆಂಬ ಬಯಕೆಯನ್ನು ಮರಳಿ ತರುತ್ತಾ ಇದೆ 🙁

  2. ಮಧು, ಹೌದು. ಬಾಲ್ಯದ ಮಧುರ ನೆನಪುಗಳನ್ನು ಅರಳಿಸುವ ಸರಳ, ಸುಂದರ ಕವನ ಇದು. ಈ ಕವನದ ಹಾಡಿನ ರೂಪಕ್ಕಾಗಿ ಹುಡುಕಿದೆ. ಸಿಗಲಿಲ್ಲ. ನೀವೇ ‘“ಬಾಗೇಶ್ರಿ” ರಾಗದಲ್ಲಿ ಹಾಡಿ,ನನಗೂ ಕೇಳಿಸಿ.

  3. ಶಾಲೆಯಲ್ಲಿದ್ದಾಗ ಓದಿದ್ದ ನೆನಪು.. ಅದೇನೋ ಕಥೆ-ಕಾದಂಬರಿ ಓದುವ ಹುಚ್ಚು ಹತ್ತಿದರೂ ಕವನಗಳನ್ನ ತಿರಿವು ಹಾಕುವ ರೂಢಿ ಬರಲಿಲ್ಲ ನನಗೆ…

    ಗಳಪಿ ಅಂದರೆ ಕಾಡು ಎಂದರ್ಥವೇ?

  4. ಪ್ರಶಾಂತ್ , ಕನ್ನಡದ ಖ್ಯಾತ ಲೇಖಕ/ಅಧ್ಯಾಪಕರೊಬ್ಬರನ್ನು ಈ ಬಗ್ಗೆ ಕೇಳಿದೆ. ಅವರು ನೀಡಿರುವ ಸರಿಯಾದ ಅರ್ಥವಿದು –
    ‘ಗಳಪಿ – ಅಲ್ಲಿ 3 ಶಬ್ದಗಳಿವೆ. ಗಳಪಿ ಅಲೆದು ಅಡ್ಡಾಡೆ (ಅಡ್ಡಾಡಲು) ಗಳಹು ಎಂದರೆ ಹರಟೆ ಹೊಡೆ, ಅತಿಮಾತಾಡು; ಗಳಪಿ ಎನ್ನುವುದು ಗಳಹು ಎನ್ನುವುದರ ಭೂತಕಾಲ ರೂಪ. ಹರಟೆಹೊಡೆದು ಎಂದು ಅದರರ್ಥ.’

  5. `ಈ ಕವನದ ಹಾಡಿನ ರೂಪಕ್ಕಾಗಿ ಹುಡುಕಿದೆ. ಸಿಗಲಿಲ್ಲ’ ಎಂದಿದ್ದೆ. ಅದಕ್ಕಾಗಿ, ತಮ್ಮಲ್ಲಿದ್ದ ‘ಟುವ್ವಿ ಟುವ್ವಿ’ ಸಿಡಿಯನ್ನು ಕಳಿಸಿಕೊಟ್ಟಿರುವ, ಗೆಳತಿಗೆ ಆತ್ಮೀಯ ಧನ್ಯವಾದಗಳು. ಈಗ ಕವನದ ಜೊತೆಗೆ ಹಾಡು ಕೇಳಲೂಬಹುದು.

    ಕುವೆಂಪು ಅವರು ಆಶಿಸಿರುವುದು ಕೂಡ ಇಂತಹ ಸುಂದರ ಸ್ನೇಹವಿರುವ ಸಗ್ಗಕ್ಕಾಗಿಯೇ! ಅದು ಸ್ವರ್ಗವೇ ಆಗಿರಬೇಕು, ನರಕವಾಗಿರಲು ಹೇಗೆ ಸಾಧ್ಯ?

  6. ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಸಾಲದು ನಿಮಗೆ, ಬಡವನಿಗೆ ಭಾಗ್ಯ ದೊರೆತಂತಾಯಿತು. ಈ ಹಾಡನ್ನು ತುಂಬಾ ದಿನದಿಂದ ಹುಡುಕುತಿದ್ದೆ.

Leave a Reply to madhu Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.