ನನ್ನ ಮನವ ನನಗೆ ಕೊಡು
ಓ ಸಮಾಜ ಭೈರವ;
ನನ್ನ ನಗೆಯ ನನ್ನ ಬಗೆಯ
ನನ್ನ ಜಗವ ನನಗೆ ಬಿಡು,
ನನ್ನ ಮನವ ನನಗೆ ಕೊಡು.

ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ,
ಬಳಿಕ ಮುಗುಳ ಮಾಲೆಯ;
ಉಡಿಸ ಬರಲು ಬೇಡ ನನ್ನ ಮನಕೆ ನಿನ್ನ ಚೇಲವ,
ನಿನ್ನ ದಯೆಯ ಸಾಲವ;
ಬಿಟ್ಟು ಬಿಡೋ ಎಲೆಲೆ, ನನ್ನ ಮನವ ತನ್ನ ಪಾಡಿಗೆ,
ತನ್ನ ಹಲವು ಹಾಡಿಗೆ.

ನೀನು ಸಮೆದ ಈ ಪಂಜರ ಅತಿ ಸುಂದರವಹ! ಮೆಚ್ಚಿಗೆ
ನನ್ನದದಕೆ, ತಕ್ಕುದಯ್ಯ ಅದೇ ನಿನ್ನ ಹುಚ್ಚಿಗೆ,
ಬಿಟ್ಟುಬಿಡು ನನ್ನ ಮಾತ್ರ ನನ್ನ ಎದೆಯ ನೆಚ್ಚಿಗೆ;
ನನ್ನನಲ್ಲಿ ಸೆರೆದೊಡಲು ಮಾಡಬೇಡ ಸಂಚನು,
ಹಾಕಬೇಡ ಹೊಂಚನು.

ನನ್ನ ಮನವು ಹಾಯಬೇಕು ದಿಗ್ದಿಗಂತದಾಚೆಗೂ,
ಏರಬೇಕು ಮುಗಿಲಿನಾಚೆ ತಾರೆಯಾಚೆಯಾಚೆಗೂ,
ಇಳಿಯಬೇಕು ಪಾತಾಳದ ಗಹನ ತಿಮಿರದಾಳಕು,
ಇನ್ನು ಇನ್ನು ಆಗಲಕೂ, ಮೇಲಕೂ, ಆಳಕೂ!

ನುಚ್ಚು ನೂರು ನಾನು ನಿನ್ನ ಒಂದೇ ಪದಘಾತಕೆ,
ನಿನ್ನ ನಿಃಶ್ವಾಸದೊಂದು ವೀಚಿಘಾತಮಾತ್ರಕೆ;
ತಳುವು ಕೊಂಚ; ನೀರ ಗುಳ್ಳೆ ಕುಣಿದು ಕುಣಿದು ಒಡೆಯಲಿ;
ಒಡೆವ ಮೊದಲು ಅದರ ಬಣ್ಣದಾಟವನಿತು ತೀರಲಿ.
ತಳುವು ಕೊಂಚ, ಓ ಭೈರವ, ಏತಕಿನಿತು ಅವಸರ?
ಬಂದ ಯಾತ್ರಿ ನಿಲ್ಲಲಾರ – ಅವನೂ ಗಮನಕಾತರ!

ಅಣುವಿನಲ್ಲು ಆ ಮಹತ್ತು ಬಿತ್ತದಂತೆ ಮಲಗಿದೆ;
ಅದುಮ ಬೇಡ ಅದನು; ಗಾಳಿ, ಬೆಳಕು ಮಳೆಗೆ, ಬಿಸಿಲಿಗೆ
ತೆರವಾಗಲಿ ಅದು ಯಥೇಚ್ಛ; ಮೊಳೆವ ಕಾಲ ಬಂದರೆ
ಮೊಳೆಯಲೇಳು ಅದು ಅಬಾಧ, ನಿನಗೇನಿದೆ ತೊಂದರೆ?

ಆ ಹೆಸರೂ ಸೇರದೇನು ನಿನ್ನ ಯಶೋಮಾಲೆಗೆ?
ಹುಲ್ಲಿಗಿಲ್ಲ, ಕಳ್ಳಿಗಿಲ್ಲ.
ಹೂವಿಗೇಕೆ ಸೌಸವ?
ಎಂದು ಹಿಸುಕಬೇಡವದನು.
ಅದನು ಅದರ ಲಸನಕೆ,
ತನ್ನತನದ ತನನಕೆ
ಬಿಟ್ಟು ಬಿಡು, ಬಿಟ್ಟು ಬಿಡು,
ಓ ಸಮಾಜ ಭೈರವ!

One thought on “ಸಮಾಜ ಭೈರವ – ಗೋಪಾಲಕೃಷ್ಣ ಅಡಿಗ”

  1. ಗೋಪಾಲಕೃಷ್ಣ ಅಡಿಗರ ಮನೋಧರ್ಮವನ್ನು ಬಿಂಬಿಸುವ ಸುಂದರ ಕವನವನ್ನು ನೀಡಿದ್ದೀರಿ. ನಿಮಗ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.