೧
ಇದಾವ ಹಾಡು ?
ಇದಾವ ತಾಲ ?
ಇದಾವ ರಾಗ ?
ನನ್ನ ಪುಟ್ಟ ಪುರಂದರ ವಿಠಲಾ !
೨
ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ;
ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ;
ಇದಾವ ರಸ ?
ಇದಾವ ಭಾವ ?
ಇದಾವ ಹಾವ ?
ನನ್ನ ಪುಟ್ಟ ಪುರಂದರ ವಿಠಲಾ !
೩
ಮಾತಿನ ಸೂತಕವಿಲ್ಲದ ನಾದದ ನಾದುವ ಸೊಲ್ಲು,
ಅರ್ಥದ ಪಾತಕವಿಲ್ಲದ ಜೀವದ ಭಾವದ ಸೊಲ್ಲು,
ಇದಾವ ರೀತಿ ?
ಇದಾವ ಗಮಕ ?
ಇದಾವ ಯಮಕ ?
ನನ್ನ ಪುಟ್ಟ ಪುರಂದರ ವಿಠಲಾ !
೪
ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ ಪಾಡು
ವಾಚಾಮಗೋಚರವೇ – ಈ ನಿನ್ನ ಧ್ವನಿ ಕಾವ್ಯ. . . . . . . . . .
ಹಿಂದಿನ ನೆನಸೋ ?
ಇಂದಿನ ಮನಸೋ ?
ಮುಂದಿನ ಕನಸೋ ?
ನನ್ನ ಪುಟ್ಟ ಪುರಂದರ ವಿಠಲಾ !
(‘ಉಯ್ಯಾಲೆ’ ಸಂಕಲನದ ಈ ಕವಿತೆಯನ್ನು ನನಗೆ ಕೊಟ್ಟಿದ್ದು ಸುನಾಥ ಕಾಕಾ. ಎಚ್. ಕೆ. ನಾರಾಯಣ ಅವರು ಹಾಡಿರುವ ಈ ಹಾಡು ಎಲ್ಲಾದರೂ ಸಿಗಬಹುದೇ?)
ಕೃತ್ತಿವಾಸನೆ ಹಿಂದೆ ನೀ ನಾ |
ಲ್ವತ್ತು ಕಲ್ಪ ಸಮೀರನಲಿ ಶಿ |
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||
ಹತ್ತು ಕಲ್ಪದಿ ತಪವಗೈದಾ |
ದಿತ್ಯರೊಳಗುತ್ತಮನೆನಿಸಿ ಪುರು |
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||
ಪಾಕಶಾಸನ ಮುಖ್ಯ ಸಕಲ ದಿ |
ವೌಕಸರಿಗಭಿನಮಿಪೆ ಋಷಿಗಳಿ |
ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||
ಆ ಕಮಲನಾಭಾದಿ ಯತಿಗಳ |
ನೀಕಕಾನಮಿಸುವೆನು ಬಿಡದೆ ರ |
ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||
ಮನದೊಳಗೆ ಸುಂದರ ಪದಾರ್ಥವ|
ನೆನೆದುಕೊಡೆ ಕೈಗೊಂಡು ಬಲು ನೂ|
ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ|
ರನು ಸದಾ ಸಂತಯಿಸುವನು ಸ|
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ|| ೨೨ ||
ಚೇತನಾಚೇತನ ವಿಲಕ್ಷಣ|
ನೂತನ ಪದಾರ್ಥಗಳೊಳಗೆ ಬಲು|
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರ ಭವಾದ್ಯರೊ|
ಳಾತತೆ ಪ್ರತಿಮ ಪ್ರಭಾವ ಧ|
ರಾತಳ ದೊಳೆಮ್ಮೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||
ತಂದೆ ತಾಯ್ಗಳು ತಮ್ಮ ಶಿಶುವಿಗೆ|
ಬಂದ ಭಯಗಳ ಪರಿಹರಿಸಿ ನಿಜ|
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ||
ಹಿಂದೆ ಮುಂದೆಡಬಲದಿ ಒಳ ಹೊರ|
ಗಿಂದಿರೇಶನು ತನ್ನವರ ನೆಂ|
ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||