ಕೃಷ್ಣಪಕ್ಷದ ಮಧ್ಯರಾತ್ರಿ – ಅಂಬಿಕಾತನಯದತ್ತ

‘-ಹಿಂದೆ ಎಂದೋ ಒಮ್ಮೆ ಇಂದಿನೀ ರಾತ್ರಿ
ಕೃಷ್ಣ ಹುಟ್ಟಿದನಂತೆ – ಕೃಷ್ಣ ಹುಟ್ಟಿದನು.
ಮುಂದೆ ಎಂದೋ ಒಮ್ಮೆ ತಾ ಬರುವ ಖಾತ್ರಿ
ಕೃಷ್ಣ ಹೇಳಿದನಂತೆ ; ಪಾರ್ಥ ಕೇಳಿದನು :

“ಬಾಡಿರಲು ಬತ್ತಿರಲು ಧರ್ಮವು ; ಅಧರ್ಮ
ಮೊಳೆತಿರಲು ಚಿಗಿತಿರಲು ನಾ ಬರುವೆನೆಂ”ದು.
ಆಡಿದನು ಮಾಡಿಲ್ಲ. ಯಾರದೀ ಕರ್ಮ?
ಇನ್ನಾದರೂ ಅವನು ಬರುವುದೆಂದು?

ಭಾರತಕ್ಕಿಂತ ರಾಮಾಯಣಕ್ಕಿಂತ
ನನ್ನ ಕಾಲವೆ ಕಾಲು ಪಾಲು ಮೇಲು.
ಕೆಟ್ಟಿಲ್ಲ ಧರ್ಮ, ಹುಟ್ಟಿಲ್ಲಧರ್ಮಂತs
ಬಂದಿಲ್ಲ ದೇವರೂ ; ಇರಲಿ ಬುಡಮೇಲು !

ಹುಟ್ಟಿ ಬರುವುದು ಬೇಡ, ಕೆಡುವುದೂ ಬೇಡ.
ದೇವನೂ ಧರ್ಮವೂ ಇವು ಎರಡು ಜೋಡಿ.
‘ಕೆಟ್ಟ ಬುದ್ಧಿಯೆ ! ಬಾಯಿ ಮುಚ್ಚು ಕೆಡಬೇಡ.
ಮಂಗಮನವೇ ! ವಾದ ಸಾಕು ಖೋಡೀ.’

4 thoughts on “ಕೃಷ್ಣಪಕ್ಷದ ಮಧ್ಯರಾತ್ರಿ – ಅಂಬಿಕಾತನಯದತ್ತ”

  1. ಈ ಕವನದ ಹೆಸರೂ ಕೂಡ ಅದೆಷ್ಟು ಸೂಕ್ತವಾಗಿದೆ! ಕೃಷ್ಣಪಕ್ಷದಲ್ಲಿ ಕೃಷ್ಣ ಹುಟ್ಟಿದ, ನಿಜ. ಜೊತೆಗೆ, ಹೆಸರಿನಲ್ಲಿಯೇ ಅಂದು ಅಷ್ಟಮಿ ಅನ್ನುವುದನ್ನೂ ಆಗ ನಡುರಾತ್ರಿ ಅನ್ನುವುದನ್ನೂ ಸೂಚಿಸಿದ್ದಾರೆ (ಪಕ್ಷವೊಂದರ ಮಧ್ಯ ಅಷ್ಟಮಿಯ ದಿನ). ಒಂದೇ ಪದದಲ್ಲಿ (ಮಧ್ಯರಾತ್ರಿ) ಎರಡು ಅಂಶಗಳನ್ನು ತೋರಿಸುವುದು ಬೇಂದ್ರೆಯವರ ಮೇಲ್ಮೆ.
    ಕಾಕಾ ಹೇಳಿದಂತೆ ಇದರಲ್ಲಿ ತರ್ಕವೂ ಸೇರಿದೆ. ಮನುಷ್ಯನ ಮರ್ಕಟಮನದ ದ್ವಂದ್ವವೂ ಇಲ್ಲಿದೆ. ನಮ್ಮೊಳಗೇ ನಡೆಯುವ ಯುದ್ಧದ ಸಂಕೇತವೂ ಇದೆ. ಪರ-ವಿರುದ್ಧ ವಾದಗಳೆರಡನ್ನೂ ಮಾಡಬಲ್ಲ ಮನಸ್ಸಿನ ತೊಳಲಾಟಕ್ಕೆ ಕೊನೆ ಹಾಡಲು ಕೃಷ್ಣಪಕ್ಷದ ಕೃಷ್ಣನೇ ಕೊಳಲೂದುತ್ತಲೋ ಪಾಂಚಜನ್ಯ ಹಿಡಿದೋ ಬರಬೇಕೆ? ನಮ್ಮೊಳಗಿನ ಕೃಷ್ಣನನ್ನೂ ಬೇಂದ್ರೆಯವರಿಲ್ಲಿ ಸೂಚಿಸುತ್ತಿದ್ದಾರಲ್ಲವೆ?

  2. ಜ್ಯೋತಿ, ನಿನ್ನ ಟಿಪ್ಪಣಿಯ ನಂತರ ಕವನ ಮತ್ತಷ್ಟು ಅರ್ಥವಾಯಿತು!
    ಬೇಂದ್ರೆಯವರು ‘ವಾದ ಸಾಕು ಖೋಡೀ.’ ಎಂದು ಬೈದು ಬುದ್ಧಿಯ ಬಾಯಿ ಮುಚ್ಚಿಸದಿದ್ದರೆ ಇನ್ನಷ್ಟು ತರ್ಕಗಳು ಹೊರಹೊಮ್ಮಿರುತ್ತಿತ್ತೇನೊ. ಕಾಕಾ, ಈ ಕವಿತೆ ‘ಅವತರಿಸು ಬಾ ನಾರಾಯಣ’ದ ಮೊದಲು ಅಥವಾ ನಂತರ?

Leave a Reply

Your email address will not be published. Required fields are marked *