ತಿಲ್ಲಾಣ – ಅಂಬಿಕಾತನಯದತ್ತ


ಇದಾವ ಹಾಡು ?
ಇದಾವ ತಾಲ ?
ಇದಾವ ರಾಗ ?
ನನ್ನ ಪುಟ್ಟ ಪುರಂದರ ವಿಠಲಾ !


ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ;
ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ;
ಇದಾವ ರಸ ?
ಇದಾವ ಭಾವ ?
ಇದಾವ ಹಾವ ?
ನನ್ನ ಪುಟ್ಟ ಪುರಂದರ ವಿಠಲಾ !


ಮಾತಿನ ಸೂತಕವಿಲ್ಲದ ನಾದದ ನಾದುವ ಸೊಲ್ಲು,
ಅರ್ಥದ ಪಾತಕವಿಲ್ಲದ ಜೀವದ ಭಾವದ ಸೊಲ್ಲು,
ಇದಾವ ರೀತಿ ?
ಇದಾವ ಗಮಕ ?
ಇದಾವ ಯಮಕ ?
ನನ್ನ ಪುಟ್ಟ ಪುರಂದರ ವಿಠಲಾ !


ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ ಪಾಡು
ವಾಚಾಮಗೋಚರವೇ – ಈ ನಿನ್ನ ಧ್ವನಿ ಕಾವ್ಯ. . . . . . . . . .
ಹಿಂದಿನ ನೆನಸೋ ?
ಇಂದಿನ ಮನಸೋ ?
ಮುಂದಿನ ಕನಸೋ ?
ನನ್ನ ಪುಟ್ಟ ಪುರಂದರ ವಿಠಲಾ !

(‘ಉಯ್ಯಾಲೆ’ ಸಂಕಲನದ ಈ ಕವಿತೆಯನ್ನು ನನಗೆ ಕೊಟ್ಟಿದ್ದು ಸುನಾಥ ಕಾಕಾ. ಎಚ್. ಕೆ. ನಾರಾಯಣ ಅವರು ಹಾಡಿರುವ ಈ ಹಾಡು ಎಲ್ಲಾದರೂ ಸಿಗಬಹುದೇ?)

6 thoughts on “ತಿಲ್ಲಾಣ – ಅಂಬಿಕಾತನಯದತ್ತ”

 1. ಮೊದಲ ಚರಣವಷ್ಟೆ ನನಗೆ ಗೊತ್ತಿತ್ತು. ಪೂರ್ತಿ ಕವಿತೆ ಒದಗಿಸಿದ ಸುನಾಥ ಅವರಿಗೂ, ಪೋಸ್ಟ ಮಾಡಿದ ನಿಮಗೂ ವಂದನೆಗಳು.

  ಹುಟ್ಟು ಹಬ್ಬದ ಶುಭಾಶಯಗಳು ತ್ರಿವೇಣಿ ಮೇಡಂ!!!

 2. ಹೌದು ಕಾಕಾ. “ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ;
  ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ” ಈ ಸಾಲುಗಳನ್ನು ಓದುವಾಗ ಆ ವಾತ್ಸಲ್ಯ ಭಾವ ನನ್ನ ಮನಸ್ಸನ್ನು ಆವರಿಸಿಕೊಳ್ಳುತ್ತದೆ.

 3. ರೂಪಾ, ಶುಭಾಶಯಗಳಿಗೆ ಧನ್ಯವಾದಗಳು.

  ಆದರೆ, ನಾನಿನ್ನೂ ಹುಟ್ಟೇ ಇಲ್ಲ. ನಾಳೆ. 🙂

 4. ಈದಿನ ನಿಮ್ಮ ಹುಟ್ಟುಹಬ್ಬವೆಂದು ತಿಳಿದಂತಾಯ್ತು.
  Many happy returns of the day,ತ್ರಿವೇಣಿ!
  -ಕಾಕಾ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.