ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ
ಕೋಲೆ ಶ್ರೀಹರಿಯ ಬಲಗೊಂಬೆ ಕೋಲೆ ||ಪ||

ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧||

ಧರ್ಮ ನಡೆಯಲಾಗಿ ಮರ್ಮವ ತಾಳಿದ
ಕರ್ಮಹರ ಶ್ರೀಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ
ಕೂರ್ಮಾವತಾರನ ಬಲಗೊಂಬೆ ಕೋಲೆ ||೨||

ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ
ಹೋರಿಹೊಯಿದಾಡಿದ ನರಹರಿ ಕೋಲೆ
ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ ||೩||

ತರಳ ಪ್ರಹ್ಲಾದಗಾಗಿ ದುರುಳ ದೈತ್ಯನ ಕೊಂದು
ಕರುಳು ವನಮಾಲೆಯ ಧರಿಸಿದ ಕೋಲೆ
ಕರುಳ ವನಮಾಲೆಯ ಧರಿಸಿದಾ ಹರಿ
ನರಸಿಂಹಾವತಾರನ ಬಲಗೊಂಬೆ ಕೋಲೆ ||೪||

ನೇಮಿಸಿ ಮೂರುಪಾದ ಭೂಮಿಯ ಬೇಡಿದ
ಹೆಮ್ಮೆಯ ಪರಿಹರಿಸಿದ ಕೋಲೆ
ಹೆಮ್ಮೆಯ ಪರಿಹರಿಸಿದ ಬ್ರಾಹ್ಮಣನಾಗಿ
ವಾಮನಾವತಾರನ ಬಲಗೊಂಬೆ ಕೋಲೆ ||೫||

ಆಜ್ಞೆಯ ಮೀರಿದೆ ಅಗ್ರಜಳಾ ಶಿರ
ಶೀಘ್ರದಿಂದಲಿ ಇಳುಹಿದ ಕೋಲೆ
ಶೀಘ್ರದಿಂದಲಿ ಇಳುಹಿದ ಶಿರವನು
ಭಾರ್ಗವರಾಮನ ಬಲಗೊಂಬೆ ಕೋಲೆ ||೬||

ಕಾಮದಿಂದ ಸೀತೆಯನೊಯ್ದ ತಾಮಸದವನ ಕೊಂದು
ನೇಮ ಸ್ಥಾಪಿಸಿದೆ ಇಳೆಯೊಳು ಕೋಲೆ
ನೇಮಸ್ಥಾಪಿಸಿದೆ ಇಳೆಯೊಳು
ರಾಮಾವತಾರನ ಬಲಗೊಂಬೆ ಕೋಲೆ ||೭||

ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ
ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ
ಕೃಷ್ಣಾವತಾರನ ಬಲಗೊಂಬೆ ಕೋಲೆ ||೮||

ಕದ್ದು ತ್ರಿಪುರರ ಪೊಕ್ಕು ಇದ್ದ ಸತಿಯರ ವ್ರತ
ಸಿದ್ಧಿಯ ತಾನು ಅಳಿದನು ಕೋಲೆ
ಸಿದ್ಧಿಯ ತಾನು ಅಳಿದನು ಬುದ್ಧಿಯಲಿ
ಬೌದ್ಧಾವತಾರನ ಬಲಗೊಂಬೆ ಕೋಲೆ ||೯||

ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ
ನಲ್ಲ ತೇಜಿಯನೇರಿದ ಬಲ್ಲಿದನಾಗಿ
ಕಲ್ಕ್ಯಾವತಾರನ ಬಲಗೊಂಬೆ ಕೋಲೆ ||೧೦||

ವಸ್ತು ಪರಾತ್ಪರ ವಿಸ್ತಾರದೋರಲಾಗಿ
ಹತ್ತಾವತಾರ ಧರಿಸಿದ ಕೋಲೆ
ಹತ್ತಾವತಾರ ಧರಿಸಿದ ಮಹಿಪತಿ
ಅಂತರಾತ್ಮನ ಬಲಗೊಂಬೆ ಕೋಲೆ ||೧೧||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.