ಸುದೀಪ ಮನೆ ತಲುಪುವುದಕ್ಕೂ, ಸೀತಾಬಾಯಿ,ಕನ್ನಿಕಾ ಆಟೊದಿಂದಿಳಿಯುವುದಕ್ಕೂ ಸರಿಯಾಯಿತು. ಸದ್ಯ, ಅಮ್ಮನಿಂದ ಬೈಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ತಪ್ಪಿತು ಅಂದುಕೊಂಡ ಸುದೀಪ. ಬೀಗ ತೆರೆದು ಲಗ್ಗೇಜುಗಳನ್ನು ಹೊತ್ತು ಒಳಸಾಗಿಸಿದ. ಕನ್ನಿಕಾಳು ಸುದೀಪನಿಗೆ ನೆರವಾದಳು. “ಪ್ರಯಾಣ ಸುಖವಾಗಿತ್ತೇನೇ ಕುನ್ನಿಕಾ?” ಎಂದು ಅವಳನ್ನು ರೇಗಿಸಲು ಮರೆಯಲಿಲ್ಲ ಸುದೀಪ.

ಕಾಫಿ ಬೆರೆಸುತ್ತಿದ್ದ ಸೀತಾಬಾಯಿಯ ಮನಸ್ಸಿನಲ್ಲಿ ಕನಸುಗಳ ಮೆರವಣಿಗೆ! ಈ ಬಾರಿ ಸುದೀಪನಿಂದ ಮದುವೆಗೆ ಒಪ್ಪಿಗೆ ಪಡೆಯಲೇಬೇಕು ಎಂಬ ನಿರ್ಧಾರದಿಂದಲೇ ಕನ್ನಿಕಾಳೊಡನೆ ಬೆಂಗಳೂರಿಗೆ ಹೊರಟು ಬಂದಿದ್ದರು.

ಮರುದಿನ ಕನ್ನಿಕಾಳ ತರಬೇತಿಯ ಮೊದಲ ದಿನ. ಅವಳನ್ನು ತರಬೇತಿ ಕಛೇರಿಯಲ್ಲಿ ಬಿಟ್ಟು ಬರಲು ಅಮ್ಮನ ಅಪ್ಪಣೆಯಾಯಿತು. ಕೇಳಿಸಿಕೊಂಡ ಕನ್ನಿಕಾಳ ಮುಖ ಹೊಸದಾಗಿ ಅರಳುತ್ತಿರುವ ಕೆಂಗುಲಾಬಿ. ಮುಜುಗರವಾದರೂ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ ಸುದೀಪ. ಅವಳನ್ನು ಅಲ್ಲಿ ಬಿಟ್ಟು ಬಂದು ಅಮ್ಮನ ಜೊತೆ ಇಂದು ಕಳೆಯುವುದು. ತನ್ನ ಮನದಲ್ಲಿರುವುದನ್ನು ಅಮ್ಮನಿಗೆ ನೇರವಾಗಿ ತಿಳಿಸುವುದು. ಆಮೇಲೆ, ಅದೇನಾಗುತ್ತೋ ನೋಡಿಕೊಳ್ಳೋಣ…. ಅಂದುಕೊಂಡ. ಸುನಯನಳ ಜೊತೆ ಭೇಟಿ ಇದ್ದದ್ದು ಸಂಜೆಗೆ. ಅಷ್ಟರಲ್ಲಿ ಅಮ್ಮನಿಗೆ ತನ್ನ ನಿಲುವು ತಿಳಿಸಬೇಕು. ಸಂಜೆಗೆ ಅವಳನ್ನೇ ಇಲ್ಲಿಗೆ ಕರೆತಂದರಾಯಿತು ಎಂದೆಲ್ಲ ಮಂಡಿಗೆ ತಿಂದ, ಮನದೊಳಗೆ. ತುಂಬಾ ರುಚಿಯೆನಿಸಿತು, ಹಿತವಾಗಿತ್ತು.

ಕನ್ನಿಕಾಳನ್ನು ಹೊತ್ತ ಬೈಕ್ ರಸ್ತೆಯಲ್ಲಿ ವಾಹನದಟ್ಟಣೆಯ ನಡುವೆ ತೆವಳುತ್ತಿದ್ದರೆ, ಇವನ ಮನದ ತುಂಬಾ ಯೋಚನೆಯ ಹೊಗೆ. ಕನ್ನಿಕಾ ತನ್ನ ಬೆನ್ನಿಗೆ ಅಂಟಿದಂತೆ ಕುಳಿತದ್ದೂ ಅವನ ಗಮನಕ್ಕೆ ಬಂದಿರಲಿಲ್ಲ. ತನ್ನ ಕತ್ತಿನ ಹಿಂದೆ, ಕಿವಿಯ ಬುಡದಲ್ಲಿ ಪಿಸುಗುಡುತ್ತಿದ್ದ ಅವಳ ಬಿಸಿಯುಸಿರಿನ ಏರಿಳಿತವೂ ಅವನನ್ನು ತಟ್ಟಿರಲಿಲ್ಲ. ಅವಳ ಕಛೇರಿಯ ಮುಂದೆ ನಿಲ್ಲಿಸಿದಾಗ ಅವಳ ಮುಖ ಕುಂಬಳಕಾಯಿ ಆಗಿದ್ದದ್ದು ಮಾತ್ರ ಅವನ ಕಣ್ಣಿಗೆ ಗೋಚರಿಸಿತು. “ಈ ಬೆಂಗಳೂರಿನ ಟ್ರಾಫಿಕ್ಕೇ ಹೀಗೆ ಕಣೇ. ಹೊಂದಿಕೊಳ್ಳೋದನ್ನ ಕಲಿ. ಸಂಜೆ ಐದೂಕಾಲಿಗೆ ಮತ್ತೆ ಇಲ್ಲೇ ಹಾಜರಾಗುತ್ತೇನೆ. ಬರಲಾ?” ಅಂದು ರೊಯ್ಯನೆ ಅಲ್ಲೇ ಯೂ-ಟರ್ನ್ ಹೊಡೆದು, ಮುಖ ತಿರುಗಿಸಿ ಹೊರಟೇಬಿಟ್ಟ. ಅವಳ ಸಿಟ್ಟಿಗೂ ಧೂಳು ಮುಸುಕಿತು.

ಮನೆಗೆ ಬಂದಾಗ ಅಮ್ಮನಿಗೆ ಅಚ್ಚರಿ. ಅವರೇನೋ ಸ್ನಾನ ಮುಗಿಸಿ ಅಡುಗೆಗೆ ತಯಾರಿ ನಡೆಸಿದ್ದರು. ತಾನೂ ಪುಟ್ಟ ಅಡುಗೆಮನೆಯಲ್ಲಿ ಮಣೆ ಎಳೆದುಕೊಂಡು ಕೂತ. ಮಗ ಮಾತಿಗೆ ಜಾಡು ಹುಡುಕುತ್ತಿರುವ ಸೂಚನೆ ಸೀತಾಬಾಯಿಗೆ ಸಿಕ್ಕಿತು.
“ಏನಂದಳು ಕನ್ನಿಕಾ?” ಕೇಳಿದರು.
“ಅವಳೇನಂತಾಳೆ? ಅವಳನ್ನು ಆಫೀಸಿನಲ್ಲಿ ಬಿಟ್ಟು, ಇವತ್ತು ನಿನ್ನ ಜೊತೆ ಸುಮ್ನೆ ಮಾತಾಡ್ತಾ ಕಾಲ ಹಾಕ್ತೀನಿ ಅಂತ ಮನೆಗೇ ಬಂದೆ.”
ಮಗನ ಮೇಲೆ ಮಮತೆ ಉಕ್ಕಿತು. ಅವನ ಪುಂಡ ಕೂದಲನ್ನು ಬೆರಳುಗಳಲ್ಲಿ ನೇವರಿಸುತ್ತಾ,
“ಬೇಗ ಮದುವೆ ಆಗೋ ಅಂದ್ರೆ ಕೇಳಲ್ಲ. ಈಗ ಅಮ್ಮನ ಮುಂದೆ ಕೂತಿರೋ ಆಸೇನಾ? ಹೆಂಡ್ತಿ ಬರ್ಲಿ, ಆಮೇಲೆ ನನ್ನ ಕೇಳೋರಿಲ್ಲ, ಅಲ್ವಾ?” ಛೇಡಿಸಿದರು.
“ಹೆಂಡ್ತೀನೂ ಇಲ್ಲೇ ಕೂಡಿಸ್ಕೊಂಡು ನಿನ್ನ ಮುಂದೆ ಕೂತಿರ್ತೇನಮ್ಮ, ಅದಕ್ಕೇನು?”
“ಯಾರಪ್ಪಾ ಅಂಥ ಗುಣವಂತೆ, ನನ್ನ ಮುಂದೆ ಕೂತಿರುವಷ್ಟು ತಾಳ್ಮೆ ಇರುವವಳು?” ಮತ್ತೆ ಛೇಡಿಸಿದರು, ಕನ್ನಿಕಾಳ ಹೆಸರನ್ನು ನಿರೀಕ್ಷಿಸುತ್ತಾ.
“ಅಮ್ಮ, ನೇರವಾಗಿ ಹೇಳ್ತೇನೆ, ಕೇಳು. ಸುತ್ತು ಬಳಸಿ ಮಾತು ಬೇಡ. ಅದು ನಿನಗೂ ಹಿಡಿಸೋದಿಲ್ಲ, ನನಗ್ಗೊತ್ತು. ನಿನ್ನ ತಲೆಯಲ್ಲಿ ಕನ್ನಿಕಾ ನಿನ್ನ ಸೊಸೆ ಅಂತ ಗಾಳಿಗೋಪುರ ಕಟ್ಟಿದ್ದೀಯ, ಅದೂ ನನಗ್ಗೊತ್ತು. ಅದೆಲ್ಲ ಆಗೋದಿಲ್ಲ. ಅವಳ ಮೇಲೆ ನನಗೆ ಎಂದಿಗೂ ಆ ಭಾವನೆ ಬಂದಿರಲೇ ಇಲ್ಲ. ಎಂದಿಗೂ ಬರೋದಿಲ್ಲ. ಪಕ್ಕದ ಮನೆಯಲ್ಲಿ ಬೆಳೀತಿರೋ ನನ್ನ ತಂಗಿ ಅಂತಲೇ ನಾನು ಅವಳನ್ನ ಕಂಡಿದ್ದು. ಅಂಥವಳನ್ನು ಮದುವೆಯಾಗು ಅಂತ ಒತ್ತಾಯ ಮಾಡ್ತೀಯ?”
“ಹಾಗಂದ್ರೆ ಹೇಗೋ? ಅವಳೇ ನನ್ನ ಸೊಸೆ ಅಂದುಕೊಂಡಿದ್ದೆ. ನಮ್ಮ ಮನೆಗೆ ಚೆನ್ನಾಗಿ ಹೊಂದಿಕೊಂಡ ಹುಡುಗಿ. ನಿನ್ನಪ್ಪ ಇದ್ದಕ್ಕಿದ್ದ ಹಾಗೆ ತೀರಿಕೊಂಡಾಗ, ಆ ನಾರ್ಣಪ್ಪ ನಮಗೆ ಮಾಡಿದ ಸಹಾಯಕ್ಕೆ…”
“ಹೌದಮ್ಮ, ಅವರು ಸಹಾಯ ಮಾಡಿದ್ದಾರೆ. ಹಾಗಂತ, ನನ್ನ ತಂಗಿಯಂಥವಳನ್ನೇ ಮದುವೆಯಾಗೋದು ಸರಿಯೇ? ಅಣ್ಣನಾಗಿ ಅವಳಿಗೆ ನಾನೇ ಗಂಡು ನೋಡ್ತೇನೆ. ಅವಳ ಮದುವೆಯ ಜವಾಬ್ದಾರಿ ನನ್ನದು ಅಂತಲೇ ಹೇಳು ನಾರ್ಣಪ್ಪನವರಿಗೆ. ಆದರೆ, ನನ್ನ ಮದುವೆಯ ಕಲಶಗಿತ್ತಿ ಅವಳು, ಮದುವಣಗಿತ್ತಿಯಲ್ಲ; ಗೊತ್ತಾಯ್ತಾ?”

ಮಗನ ಖಡಾಖಂಡಿತ ಮಾತು ಕೇಳಿ ಸೀತಾಬಾಯಿ ಖಿನ್ನರಾದರು. ಅಡುಗೆ ಮುಗಿಸಿ ಉಸ್ಸೆನ್ನುತ್ತಾ ಅಲ್ಲೆಲ್ಲ ಒರಸಿದರು. ಅಮ್ಮನಲ್ಲಿದ್ದ ನಿರುತ್ಸಾಹ ಗಮನಿಸಿದ ಸುದೀಪ.
“ನಡಿಯಮ್ಮ, ದೇವಸ್ಥಾನಕ್ಕೆ ಹೋಗಿ ಬರೋಣ. ಅಲ್ಲಿ ನಿನಗೆ ನೆಮ್ಮದಿ ಸಿಗ್ತದೆ. ಬಾ”
ದೇವಸ್ಥಾನವೆಂದಿದ್ದಕ್ಕೆ ಅವನನ್ನು ಹಿಂಬಾಲಿಸಿದರು. ಬೈಕ್ ಅಮ್ಮನಿಗೆ ಹಿಡಿಸುವುದಿಲ್ಲವೆಂದು ಆಟೋ ಕರೆದ ಸುದೀಪ.

ದೇವಳದ ಜಗಲಿಯಲ್ಲಿ ಕೂತು ಮತ್ತೆ ಲೆಕ್ಕಾಚಾರ ಹಾಕತೊಡಗಿದ. ಅಮ್ಮನ ಮನದ ತುಮುಲ ಪೂರ್ತಿಯಾಗಿ ಅವನಿಗೆ ಅರ್ಥವಾಗಿತ್ತೋ ಇಲ್ಲವೋ, ಆದರೆ ಅವರಿಗೆ ಗೊಂದಲವಾಗಿರುವುದು ಅವನ ಅರಿವಿಗೆ ಬಂದಿತ್ತು. ಸೀತಾಬಾಯಿ ಮಣ-ಮಣ ಮಾಡುತ್ತಾ ಸುತ್ತು ಬರುತ್ತಿದ್ದರು. ಪ್ರತೀ ಸುತ್ತಿಗೂ ಒಂದು ನಮಸ್ಕಾರ. ಅವರ ದೈವಭಕ್ತಿ ಅವನಿಗೆ ಒಮ್ಮೆ ನಗು ತರಿಸಿತಾದರೂ ಅವರಿಗೆ ಅದರಲ್ಲೇ ಸಮಾಧಾನ ಇದೆಯೆನ್ನುವುದು ತಿಳಿದಿತ್ತು. ಸುಮ್ಮನೇ ಅವರನ್ನೇ ನೋಟದಲ್ಲಿ ಹಿಂಬಾಲಿಸುತ್ತಾ ಕುಳಿತ. ತನ್ನ ಮುಂದೆ ದಾಟಿ ಸಾಗುತ್ತಿದ್ದವರ ಪರಿವೆಯೇ ಇರಲಿಲ್ಲ ಅವನಿಗೆ. ಇವನ ಅನ್ಯಮನಸ್ಕತೆಯ ಪರಿವೆ ಅಮ್ಮನಿಗಿರಲಿಲ್ಲ. ಅಮ್ಮನ ನೆರಳಿನಂತಾಗಿದ್ದ ಅವನ ನೋಟದ ಪರಿಧಿಗೆ ಬಂದ ಒಂದು ಆಕೃತಿ ದೇವರ ಮುಂದೆ ನಿಂತದ್ದನ್ನು ಕಂಡಾಗ “ಸುನೀ…” ಅನ್ನುತ್ತಾ ಜಗಲಿಯಿಂದ ಹಾರಿದ, ಅವಳ ಪಕ್ಕದಲ್ಲಿ ನಿಂತ. ಆಕೆಯ ನೋಟದಲ್ಲೂ ಅಚ್ಚರಿಯಿತ್ತು.
“ಅರೆ, ಸುದೀಪ… ನೀನಿಲ್ಲಿ! ಈ ಹೊತ್ತಲ್ಲಿ! ಆಫೀಸ್ ಇಲ್ವಾ?”
“ಹ್ಞಾಂ! ಹ್ಞೂಂ! ಇತ್ತು… ಇಲ್ಲ… ರಜೆ ಹಾಕಿದೆ….” ಏನೇನೋ ಒದರಿ ಕೊನೆಗೆ “ಅಮ್ಮ ಬಂದಿದ್ದಾರೆ” ಅಂದ. ಅಷ್ಟರಲ್ಲಿ ಪ್ರದಕ್ಷಿಣೆ ಮುಗಿಸಿದ ಸೀತಾಬಾಯಿ ದೇವರ ಮುಂದೆ ನಮಸ್ಕರಿಸಿ ಎದ್ದು ನಿಂತರು. ಅಮ್ಮನ ಕಡೆ ತಿರುಗಿದ ಸುದೀಪ, “ಅಮ್ಮ, ಇವರು ಕುಂದಾಪುರದ ನೀಲಿಕೇರಿಯವರು, ಸುನಯನಾ” ತೊದಲಿದ.
“ನಿನ್ನ ಸ್ನೇಹಿತನ….” “ಹೌದು, ನನ್ನ ಗೆಳೆಯನ ಊರಿನವರು. ಆವತ್ತು ಹೋಗಿ ಬಂದದ್ದು ಹೇಳಿದ್ದೆನಲ್ಲ” ಅಮ್ಮನ ಅರ್ಧ ಮಾತನ್ನು ಪೂರ್ತಿಗೊಳಿಸಿದ. ಸೀತಾಬಾಯಿಯವರ ಮುಖದಲ್ಲಿ ಏನೋ ಒಂದು ಮಿಶ್ರ ಭಾವನೆ. ಸುನಯನಾ ಅದನ್ನು ಕಂಡಳೇನೋ ಅಂದುಕೊಂಡ. ಅವಳ ನೋಟ ಬೇರೆಲ್ಲೋ ಇತ್ತು, ಬಚಾವಾದಂತೆ ಅನಿಸಿತವನಿಗೆ. ಅಷ್ಟರಲ್ಲಿ ಅಮ್ಮನೇ “ಹೋಗೋಣವೇನೋ” ಅಂದು, ಸುನಯನಾ ಕಡೆ ತಿರುಗಿ “ನಿಮ್ಮ ಮನೆಯವರ ಜೊತೆ ಬಾರಮ್ಮ ಮನೆಗೆ” ಅಂದರು. ಸುನೀ ಮತ್ತು ಸುದೀಪ ನೋಟ ಹಂಚಿಕೊಂಡರು, ಅಮ್ಮನ ಕಣ್ಣಿಗೂ ಅದು ಬಿತ್ತು. ಮೌನವಾಗಿಯೇ ಹೊರನಡೆದ ಸುದೀಪ, ಅಮ್ಮನೊಡನೆ ಆಟೋ ಹತ್ತಿ ಮನೆ ಸೇರಿದ.

ತಿಂಗಳುಗಳ ನಂತರ ಅಮ್ಮನ ಕೈಯಡುಗೆಯ ಊಟ, ಆದರೂ ಯಾಕೋ ರುಚಿಸಲಿಲ್ಲ. ಅಮ್ಮ ಕೋಣೆಯಲ್ಲಿ ಅಡ್ಡಾಗಿದ್ದರೆ ಇವನಿಗೆ ಸುನೀ ಚಿಂತೆ ಹತ್ತಿತ್ತು. ಜಗಲಿಯಲ್ಲಿ ಕೂತು ರಸ್ತೆಯ ಮೇಲಿನ ಬಿಸಿಲಿನ ಝಳ ದೃಷ್ಟಿಸುತ್ತಿದ್ದ, ಮೊಬೈಲ್ ಫೋನ್ ಕಿಣಿಕಿಣಿಗುಟ್ಟಿತು. ಯಾಮಿನಿಯ ಕರೆ. ತಲ್ಲಣ, ಗೊಂದಲಗಳ ನಡುವೆಯೇ ಉತ್ತರಿಸಿದ.
“ಸುದೀಪ್, ನೀವು ನಮ್ಮನೆಗೆ ನಾಳೆ ಸಂಜೆ ಬರಬೇಕು. ಸೃಷ್ಟಿಯ ಬರ್ತ್’ಡೇ ಮಾಡ್ತಿದ್ದೇವೆ. ಖಂಡಿತಾ ಬನ್ನಿ.”
“ನೋಡ್ತೇನೆ, ಖಂಡಿತಾ ಅಂತ ಹೇಳಲ್ಲ. ಅಮ್ಮ ಬಂದಿದ್ದಾರೆ, ಊರಿಂದ.”
“ಇನ್ನೂ ಒಳ್ಳೇದಾಯ್ತು, ಅವರನ್ನೂ ಕರ್‍ಕೊಂಡ್ ಬನ್ನಿ. ಅಪ್ಪನೂ ಹೇಳ್ತಿದ್ದಾರೆ, ನೀವು ಬರಲೇಬೇಕು. ಇಲ್ಲದಿದ್ರೆ ನಮಗೆಲ್ಲ ಬೇಜಾರಾಗತ್ತೆ, ಸೃಷ್ಟಿಗೂ…”
ಪುಟಾಣಿ ಚಿನಕುರುಳಿಯ ಜೊತೆ ಕಾಲ ಕಳೆಯುವ ಕಲ್ಪನೆಯೇ ಮುದ ನೀಡಿತು, “ಸರಿ, ಬರ್ತೇವೆ” ಅಂದ.ಸಂಜೆ ಕನ್ನಿಕಾಳನ್ನು ಮನೆಗೆ ಕರೆತಂದು ಬಿಟ್ಟು ಮತ್ತೆ ಹೊರಗೆ ನಡೆದ. ಅದೇ ದೇವಸ್ಥಾನದ ಜಗಲಿಯಲ್ಲಿ ಕೂತು ಸುನಯನಾಳಿಗೆ ಕರೆ ಮಾಡಿದ. ಆಕೆಯಿಂದ ಉತ್ತರವಿಲ್ಲ. ಪದೇ ಪದೇ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಹತಾಶನಾದ. ಅವಳ ಗೆಳತಿಯ ಸಂಪರ್ಕವೂ ಇಲ್ಲದಿರುವುದನ್ನು ನೆನಪಿಸಿಕೊಂಡು ತನ್ನನ್ನೇ ಶಪಿಸಿಕೊಂಡ. ಆ ರಾತ್ರೆಯ ನೀರವದಲ್ಲಿ ಮನೆಯೊಳಗಿನ ಮೂರು ಜೀವಗಳಿಗೂ ಒಂದೊಂದು ಬಗೆಯ ನಿಟ್ಟುಸಿರು.

                                                                     ***

ಸಂಜೆ ಕನ್ನಿಕಾಳನ್ನು ಮನೆಗೆ ಕರೆತಂದು ಬಿಟ್ಟು ಮತ್ತೆ ಹೊರಗೆ ನಡೆದ. ಅದೇ ದೇವಸ್ಥಾನದ ಜಗಲಿಯಲ್ಲಿ ಕೂತು ಸುನಯನಾಳಿಗೆ ಕರೆ ಮಾಡಿದ. ಆಕೆಯಿಂದ ಉತ್ತರವಿಲ್ಲ. ಪದೇ ಪದೇ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಹತಾಶನಾದ. ಅವಳ ಗೆಳತಿಯ ಸಂಪರ್ಕವೂ ಇಲ್ಲದಿರುವುದನ್ನು ನೆನಪಿಸಿಕೊಂಡು ತನ್ನನ್ನೇ ಶಪಿಸಿಕೊಂಡ. ಆ ರಾತ್ರೆಯ ನೀರವದಲ್ಲಿ ಮನೆಯೊಳಗಿನ ಮೂರು ಜೀವಗಳಿಗೂ ಒಂದೊಂದು ಬಗೆಯ ನಿಟ್ಟುಸಿರು.

ಬೆಳಗ್ಗೆ ಕನ್ನಿಕಾಳನ್ನು ಆಫೀಸಿಗೆ ಕರೆದೊಯ್ದಾಗ ಆಕೆ ಸುದೀಪನ ಬೆನ್ನಿಗೆ ಅಂಟಲಿಲ್ಲ. ಅವಳ ಗಾಂಭೀರ್ಯದಲ್ಲಿ ಅರ್ಥವಿತ್ತು. ಸಂಜೆ ಅಮ್ಮನೂ ಕನ್ನಿಕಾಳೂ ಸಡಗರವಿಲ್ಲದೇ ತಯಾರಾದರೆ ಸುದೀಪ ಉದಾಸನಾಗಿದ್ದ. ಯಾಮಿನಿಯ ಮನೆಯ ದಾರಿ ತಿಳಿದದ್ದೇ. ನಡೆದರೆ ಸುಮಾರು ಇಪ್ಪತ್ತು ನಿಮಿಷಗಳ ಹಾದಿ. ನಡೆಯುವ ಉತ್ಸಾಹ ಇರಲಿಲ್ಲವಾಗಿ, ಆಟೋ ಹಿಡಿದ. ಮನೆಯ ಮುಂದೆ ನಿಂತಾಗ ಯಾಮಿನಿಯ ಅಪ್ಪನೇ ಗೇಟ್ ಬಳಿ ನಿಂತಿದ್ದರು, ಯಾರಿಗೋ ಕಾಯುತ್ತಿರುವಂತೆ.

“ಬನ್ನಿ, ಬನ್ನಿ ತಾಯೀ. ನೀವು ಬಂದಿದ್ದು ಸಂತೋಷ. ಬಾ ಮಗಳೇ. ಯಾಮಿನಿ ಒಳಗಿದ್ದಾಳೆ.” ಹಿಗ್ಗುತ್ತಾ ನುಡಿದರು ರಾಯರು. ಅವರ ಸರಳತೆ ಅಮ್ಮನ ಬಿಗುವನ್ನು ಒಂದಿಷ್ಟೇ ಇಷ್ಟು ಸಡಿಲಾಗಿಸಿತು. ಒಳಗೆ ಸೃಷ್ಟಿ ಯಾಮಿನಿಯ ಕೊರಳಿಗೆ ಜೋತುಬಿದ್ದು ಏನೋ ಕ್ಯಾತೆ ತೆಗೆದಿದ್ದಳು. ಸುದೀಪನನ್ನು ಕಂಡ ಕೂಡಲೇ, “ಸುದೀ ಮಾಮ. ಇದ್ಯಾರು ಅಜ್ಜಿ? ಯಾರು ಈ ಆಂಟೀ? ನಂಗೆ ಬಲೂನ್ ತಂದ್ಯಾ? ಎಲ್ಲಿ ಹಾಕ್ತೀ?” ಕೊನೆಯಿಲ್ಲದ ಪ್ರಶ್ನೆಗಳು. ಅವಳ ಮುದ್ದು ಮಾತಿಗೆ ಅಮ್ಮನ ಮುಖದ ನೆರಿಗೆಗಳು ಸಡಿಲಾದವು. ಕನ್ನಿಕಾ ಮಂಡಿಯೂರಿ ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಯಾಮಿನಿಯ ಕಣ್ಣುಗಳಲ್ಲೆದ್ದ ಪ್ರಶ್ನೆಗೆ ಸುದೀಪ ಉತ್ತರಿಸಿದ, “ಯಾಮಿನಿ, ಇವರು ನನ್ನಮ್ಮ, ಇವಳು ತಂಗಿ, ಕನ್ನಿಕಾ…”
“ಓಹ್, ನಿಮಗೆ ತಂಗಿಯಿದ್ದದ್ದು ಗೊತ್ತೇ ಇರಲಿಲ್ಲ”
“ನಾನು ಹೇಳಿರಲೇ ಇಲ್ಲ”
ತಿಳಿನಗು ಹಗುರಾದ ನಡುಮನೆಯಲ್ಲಿ ಹರಡಿತು.

ಹೊರಗೆ ಆಟೋ ನಿಂತ ಸದ್ದಾದಾಗ ಎಲ್ಲರ ನೋಟ ಗೇಟ್ ಕಡೆ. ರಾಯರು ಸಂಭ್ರಮದಿಂದ “ಯಾಮಿನೀ” ಅಂದರು. ಪುಟ್ಟ ಹುಡುಗಿಯಂತೆ ಜಿಗಿಯುತ್ತಾ ಹೊರಗೋಡಿದ ಯಾಮಿನಿ ಆಟೋದಿಂದ ಇಳಿದ ಸ್ಫುರದ್ರೂಪಿ ತರುಣನನ್ನು ತಬ್ಬಿಕೊಂಡದ್ದು ಮಾತ್ರ ಇನ್ನೂ ನಡುಮನೆಯಲ್ಲಿದ್ದ ಇವರೆಲ್ಲರ ನೋಟಕ್ಕೆ ದಕ್ಕಿತು. ಆತನ ಹಿಂದೆಯೇ ಇಳಿದ ಸುನಯನಾಳನ್ನು ಕಂಡಾಗ ಅಮ್ಮನ ಕಣ್ಣಲ್ಲಿ ಕುತೂಹಲ, ಸುದೀಪನಲ್ಲಿ ಕೋಲಾಹಲ. ತರುಣನ ಕೈಹಿಡಿದು, ಇನ್ನೊಂದು ಕೈಯಲ್ಲಿ ಮಗಳನ್ನು ತಬ್ಬಿಹಿಡಿದು ಒಳಬರುತ್ತಿದ್ದ ಯಾಮಿನಿ ಅಪರಿಚಿತಳಂತೆ ಕಂಡಳು ಸುದೀಪನಿಗೆ. ಆ ದಿನ ರಾಯರು ತನ್ನ ಮನೆಗೆ ಬಂದು ತನ್ನಲ್ಲಿ ಹೇಳಿದ, ಕೇಳಿದ ಮಾತುಗಳ ಅರ್ಥ ಹುಡುಕಹೊರಟು ಕಣ್ಣು ಕತ್ತಲಿಟ್ಟಂತೆ ಅನಿಸಿತವನಿಗೆ. ಒಂದು ಮೂಲೆಯ ಕುರ್ಚಿಯಲ್ಲಿ ಕುಕ್ಕರಿಸಿದ.

ಎಲ್ಲರೂ ನಡುಮನೆಯಲ್ಲಿ ಸೇರಿದಾಗ ರಾಯರು ಸುದೀಪನತ್ತ ನೋಡಿದರು. ಅವನ ಗೊಂದಲ ಅರ್ಥವಾದವರಂತೆ, ಅವನ ಬಳಿ ನಡೆದರು. ಪಕ್ಕದ ಕುರ್ಚಿಯಲ್ಲಿ ಕುಳಿತು ಹೇಳಿದರು, “ನೋಡಪ್ಪಾ, ಇವನು ನನ್ನ ಮಗ, ಯಾಮಿನಿಯ ಅಣ್ಣ, ಸೃಷ್ಟಿಯ ಅಪ್ಪ, ದಿಗಂತ್. ಪುನರ್ಜನ್ಮ ಪಡೆದ ಹಾಗೆ ಮತ್ತೆ ನಗುತ್ತಾ ಈ ಮನೆಗೆ ಬಂದಿದ್ದಾನೆ. ಅದಕ್ಕೆ ಕಾರಣ ಆ ದೇವತೆ, ಸುನಯನಾ ಅಂತ. ದಿಗಂತನ ಬಾಳು ದೊಡ್ಡ ಕಥೆ. ಅದೆಲ್ಲ ಈಗ ಬೇಡ. ಸದ್ಯಕ್ಕೆ ಇಷ್ಟು ತಿಳಕೋ, ಬದುಕಲ್ಲಿ ಆಘಾತಗಳು ಬಂದಾಗ ತಡೆಯುವ ಶಕ್ತಿ ಭಗವಂತನೇ ಕೊಡಬೇಕು. ಆತ ಕೊಡಲಿಲ್ಲವಾದ್ರೆ ನನ್ನ ಮಗನ ಹಾಗೆ ನೊಂದ ಜೀವ ಏನೇನೋ ದಾರಿ ಹುಡುಕಿಕೊಳ್ಳತ್ತೆ. ಅದರ ಪರಿಣಾಮ ಸುಂದರವಾಗಿರಲ್ಲ. ನಾವೇನೋ ಅದೃಷ್ಟವಂತರು. ಸುನಯನಾ ನಮ್ಮ ಪಾಲಿನ ಸುಂದರ ದೇವತೆಯಾಗಿ ಬಂದರು, ದಿಗಂತನಿಗೆ ಜೀವನದಲ್ಲಿ ಮತ್ತೆ ಉತ್ಸಾಹ, ಲವಲವಿಕೆ ಮೂಡಿಸಿದ್ದಾರೆ….” ರಾಯರ ಮಾತುಗಳೆಲ್ಲ ಇವನ ತಲೆಯಲ್ಲಿ ಅಯೋಮಯವಾಗುತ್ತಿದ್ದವು.

ಬೆಂಗಳೂರಲ್ಲಿ ಸುನೀಯನ್ನು ಮೊದಲ ಬಾರಿ ಭೇಟಿಯಾಗಿ ಸುಮಾರು ಆರು ತಿಂಗಳೇ ಕಳೆದಿತ್ತು. ಅದಾಗಿ ಎರಡು ಬಾರಿ ಮಾತ್ರ ಆಕೆಯನ್ನು ಮುಖತಃ ಕಂಡಿದ್ದ. ಒಮ್ಮೆ ಯಾವುದೋ ತರಕಾರಿ ಅಂಗಡಿಯೆದುರು, ಮತ್ತೊಮ್ಮೆ ನಿನ್ನೆ ದೇವಸ್ಥಾನದಲ್ಲಿ, ಅಮ್ಮನ ಜೊತೆ ಹೋದಾಗ. ಈ ನಡುವೆ ಫೋನ್ ಸಂಭಾಷಣೆ ಕೂಡಾ ಅಪರೂಪಕ್ಕೊಮ್ಮೆ ಮಾತ್ರ. ಆಗಲೇ ಯಾವಾಗಲೋ ಆಕೆ ಯಾವುದೋ ಆಸ್ಪತ್ರೆಯಲ್ಲಿ ಸ್ವಯಂಸೇವಕಿಯಾಗಿ ಹೋಗುತ್ತಿರುವ ಬಗ್ಗೆ ಹೇಳಿದ್ದಳು ಅನ್ನುವುದು ಅವನ ನೆನಪಿಗೆ ಬಂತು. ತಮ್ಮಿಬ್ಬರ ಸಂಭಾಷಣೆಗಳನ್ನೆಲ್ಲ ಮೆಲುಕುಹಾಕುತ್ತಿದ್ದಂತೆ, ಆಕೆ ತನ್ನಲ್ಲಿ ಸ್ನೇಹಿತನನ್ನು ಕಂಡಿದ್ದಳು ಅನ್ನುವುದು ಅವನಿಗೇ ಸ್ಪಷ್ಟವಾಯಿತು. ತಾನೇ ಕನಸು ಕಂಡವನು. ಈ ಆರು ತಿಂಗಳುಗಳಲ್ಲಿ ಆಕೆ ತನ್ನನ್ನು ಇನಿಯನ ಸ್ಥಾನದಲ್ಲಿ ಕಂಡಿರಲಿಲ್ಲ ಅನ್ನುವುದು ಅರಿವಾಯಿತು. ಕನ್ನಿಕಾಳ ಕನಸು ತಾನು ಒಡೆದೆ, ತನ್ನ ಕನಸು ವಿಧಿಗೆ ಆಟವಾಯಿತು ಅಂದುಕೊಂಡ. ಅಮ್ಮನ ಜೊತೆ ರಾಯರು ಮಾತಾಡುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಏಳುವ ಶಕ್ತಿ ಇರಲಿಲ್ಲ. ಕನ್ನಿಕಾ ತಂದಿತ್ತ ಹಣ್ಣಿನ ರಸದ ಲೋಟ ಗಟಗಟನೆ ಖಾಲಿಮಾಡಿದ. ಕಿಸಕ್ಕನೆ ನಕ್ಕಳು ಕನ್ನಿಕಾ. ಅವನೊಳಗಿನ ಕೋಲಾಹಲ ಅವಳಿಗೂ ತಿಳಿಯಿತೇ? ತಕ್ಕ ಶಾಸ್ತಿಯಾಯ್ತೆಂದು ನಕ್ಕಳೇ? ಸೃಷ್ಟಿ ಸುನಯನಾಳ ತೊಡೆಯೇರಿ ಅವಳನ್ನು ಮುದ್ದುಗರೆಯುತ್ತಿತ್ತು. ಯಾರನ್ನಾದರೂ ತನಗಿಷ್ಟ ಬಂದಂತೆ ಮುದ್ದಿಸುವ ಅವಳ ಸ್ವಾತಂತ್ರ್ಯ ಇವನನ್ನು ಅಣಗಿಸಿದಂತೆ ಕಂಡಿತು.

ತಾನು ಮೆಚ್ಚಿದ ಇಬ್ಬರು ಚೆಲುವೆಯರು, ತನ್ನನ್ನು ಆರಾಧಿಸಿದ ಒಬ್ಬಳು ಸುಂದರಿ. ಮೂವರ ಚಲನವಲನಗಳನ್ನು ಗಮನಿಸುತ್ತಾ ನಿರ್ಲಿಪ್ತನಂತೆ ಕೂತಿದ್ದ ಸುದೀಪನೆಡೆಗೆ ಅಮ್ಮ ನಗುತ್ತಾ ಬಂದಾಗ, ಎಲ್ಲ ತಿಳಿದವನಂತೆ ಗೋಣು ಹಾಕಿದ. ಸೀತಾಬಾಯಿ ಮೆತ್ತಗೆ ಕೇಳಿದರು, “ಏನೋ ಮಗಾ… ದೊಡ್ಡ ಮನಸ್ಸಿನ ಹುಡುಗಿ ಯಾಮಿನಿ. ನಿನ್ನ ಆಫೀಸಿನಲ್ಲೇ ಇದಾಳಲ್ಲ, ನಿನಗೂ ಗೊತ್ತು. ಏನಂತೀಯಾ? ರಾಯರಿಗೆ ಏನು ಉತ್ತರ ಕೊಡಲಿ?” “ಒಂದರ್ಧ ಘಂಟೆ ಇರಮ್ಮ, ಈಗ ಬಂದೆ” ಅನ್ನುತ್ತಾ ಹೊರಗೋಡಿದ ಸುದೀಪ. ಕಸಿವಿಸಿಗೊಳ್ಳುವ ಸರದಿ ಮನೆಮಂದಿಗೆಲ್ಲ.

ಹೇಳಿದಂತೆ ಅರ್ಧ ಘಂಟೆಯಲ್ಲೇ ಬಂದ. ಅಮ್ಮನ ಕೈಯಲ್ಲಿ ಹೂವು, ಹಣ್ಣುಗಳ ಜೊತೆಗೆ ಒಂದು ಪೊಟ್ಟಣವನ್ನೂ ಇಡುತ್ತಾ ಹೇಳಿದ, “ಅಮ್ಮಾ, ನೀನೂ ರಾಯರೂ ಇದ್ದೀರಿ. ಸೃಷ್ಟಿಯ ಬರ್ತ್’ಡೇ ಇವತ್ತು. ಇದಕ್ಕಿಂತ ಶುಭ ದಿನ ನನಗೆ ಬೇರೆ ಇಲ್ಲ. ನೀವಿಬ್ಬರೂ ಒಪ್ಪಿದರೆ, ಯಾಮಿನಿಗೆ ಈ ಉಂಗುರ ತೊಡಿಸಿಯೇ ಬಿಡ್ತೇನೆ. ನೀವಿಬ್ಬರೂ ಹ್ಞೂಂ ಅನ್ನಿ, ಆಶೀರ್ವಾದ ಮಾಡಿ, ಸಾಕು.”

ಮಗನ ಪುಂಡುಗೂದಲಿನಲ್ಲಿ ಅಮ್ಮ ಕೈಯಾಡಿಸಿದರು. ಕೊರಳುಬ್ಬಿ, ಕಣ್ತುಂಬಿ, ತಲೆಯಾಡಿಸಿದರು. ತನ್ನವರನ್ನು ನೆನಪಿಸಿಕೊಂಡರು.
                                                                      ||ಶುಭಂ||                                                  

                                                                          ***                                                                    

2 thoughts on “ಬಾಳೆಂಬ ಬಣ್ಣದ ಬುಗುರಿ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.