ರಚನೆ – ವಿಜಯದಾಸರು

ಧ್ರುವ ತಾಳ

ದುರ್ಗಾ ದುರ್ಗಿಯೆ ಮಹಾ ದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೆನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧರ್ಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಪ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು
ಸುರ್ಗಣ ಜಯಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠಲನಂಘ್ರಿ
ದುರ್ಗಾಶ್ರಯಮಾಡಿ ಬದುಕುವಂತೆ ಮಾಡು ||೧||

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜಗದಾ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿ ಭೂಮಿದುರ್ಗಾ ಸರುವೋತ್ತಮ
ನಮ್ಮ ವಿಜಯವಿಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ ||೨||

ತ್ರಿಪುಡೆ ತಾಳ

ಸ್ತುತಿ ಮಾಡುವೆ ನಿನ್ನ ಕಾಳಿ ಮಹಾ ಕಾಳಿ
ಉನ್ನತ ಬಾಹು ಕರಾಳವದನೆ ಚಂದಿರಮುಖಿ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿಂ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟದ್ವಿಹಸ್ತೆ ಹಸ್ತಿ ಹಸ್ತಿಗಮನೆ
ಅದ್ಭುತ ಪ್ರಭಾವೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ
ದ್ಗತಿ ಪ್ರದಾತೆ ಮಾಯೆ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯ ಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲಹಸ್ತೆ
ಸುವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ
ಶತಕೋಟಿ ಸನ್ನಿಭೆ ಹರಿ ಆಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೇ
ಅಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯ ಕರ್ತೆ ಶುಭ್ರ ಶೋಭನ ಮೂರ್ತೆ
ಪತಿತಪಾವನೆ ಧನ್ಯೆ ಸರ್ವೌಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿಬೇಕು ದುರ್ಗಾ ದುರ್ಗೆ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ||೩||

ಮಟ್ಟ ತಾಳ

ಶ್ರೀ ಲಕ್ಷ್ಮೀ ಕಮಲಾ ಪದ್ಮಾ ಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯೆ ವೃದ್ಧಿ ವಿ
ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯನಿತ್ಯಾನಂದಿ ತ್ರಾಹಿ
ಸುಶೀಲೆ ಸುಗಂಧ ಸುಂದರಿ ವಿದ್ಯಾಶೀಲೆ
ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಗಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಾಲ ಮಾಡದೆ ಉದ್ಧಾರ ಮಾಡು
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲ ಪ್ರಕ್ರೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ ||೪||

ಆದಿ ತಾಳ

ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕಭಿಮಾನಿನಿ
ತಾಪತ್ರಯ ವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದ ಬಾಲಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತುಬಂದಿರಲು ಹಾರಿ ಪೋಗೋದು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವುದೇನು ಪಾಂಡವರ ಮನೋಭೀಷ್ಟೆ
ಈ ಪಂಚಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೆ
ತಾಪಸ ಜನ ಪ್ರಿಯ ವಿಜಯ ವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪ ಶ್ರೀ ಭೂ ದುರ್ಗಾ ವರ್ಣತ್ರಯೆ ||೫||

ಜೊತೆ

ದುರ್ಗೆ ಹಾ ಹೇ ಹಾ ಹಾ ದುರ್ಗೆ ಮಂಗಳ ದುರ್ಗೆ|
ದುರ್ಗತಿ ಕೊಡದಿರು ವಿಜಯವಿಠಲಪ್ರಿಯೆ|

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.