ಅವಳು-
ದುಡಿದುಡಿದು ಸತ್ತವಳು,
ದುಡಿದು ಬೇಸತ್ತವಳು,
ಬದುಕ ಹೆಗ್ಗಾಲಿಯ ಕೆಳಗೆ
ನುಚ್ಚು ನೂರಾದವಳು

ಅವಳಿಲ್ಲ ಈಗ-
ಹೀಗನ್ನುವುದು ದಾಷ್ಟೀಕ
ಇದ್ದೇ ಇದ್ದಾಳೆ ಮನದಾಳದೊಳಗೆ-

ನಾನೊಂದು ಕಣ್ಣೀರಿಡುವಾಗ
ಮೈದಡವಿ ಸಂತೈಸುತ್ತಾಳೆ,
ನನ್ನ ಸುಖ, ಸಾಧನೆಗಳಿಗೆ
ತಾನೂ ಸಂಭ್ರಮಿಸಿ ನಲಿಯುತ್ತಾಳೆ,
ತೀರದ ಕೊರಗಾಗಿ ಕಾಡುತ್ತಾಳೆ,
ಆರದ ಗಾಯವಾಗಿ ಉರಿಯುತ್ತಾಳೆ,
ಭಾರದ ನೆನಪಾಗಿ ಮೀಟುತ್ತಾಳೆ

ಇಲ್ಲಿ…… ಅಮೆರಿಕಾದ ಅಡಿಗೆ ಮನೆಯಲ್ಲಿ
ತಿಳಿಸಾರು ಕುದಿವಾಗ
ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ
ನನ್ನ ಎಳೆ ಕಂದಗಳ ಹಾಲು ನಗೆಯಲ್ಲಿ ಫಕ್ಕನೆ
ಮಿಂಚಿ ಮರೆಯಾಗುತ್ತಾಳೆ….
ದೂರದಾರಿಯಲ್ಲಿ ಏಕಾಂಗಿ ನಡೆವಾಗ
ಮಂದ ದನಿಯಲ್ಲಿ ನನ್ನ ಹೆಸರು
ಕೂಗಿ ಕರೆಯುತ್ತಾಳೆ

ಅವಳು… ಮಹಾದೇವಿಯಲ್ಲ,
ಮಹಾನುಭಾವಳಲ್ಲ,
ಎಲ್ಲೆಲ್ಲೂ ಕಾಣಸಿಗುವ ಸರ್ವೇ ಸಾಧಾರಣ
ಪ್ರೇಮಮಯಿ ಹೆಂಗಸು!

ಅವಳು…ಅವಳೇ…ನನ್ನಮ್ಮ..
ಆಗಿರಲೂಬಹುದು ಅವಳು ನಿಮ್ಮಮ್ಮ!!

(೨೦೦೧, ಮದರ್ಸ್ ಡೇ)

***

4 thoughts on “ಅಮ್ಮ”

  1. thumba chennagide nimma kavana. naanu swalpa gadyapriya, aadru nimma sarala bhasheya ammana kuritha kayva istavaaythu.

  2. ಕವನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಕೃಪೇಶ್.

  3. Mother’s Day ದಿನದಂದು ಅಮ್ಮನಿಗೆ ಸೊಗಸಾದ ಕೊಡುಗೆ ನೀಡಿದ್ದೀರಿ.
    ನಿಮಗೂ ಸಹ ಶುಭಾಶಯಗಳು.

  4. ಅವಳು…ಅವಳೇ…ನನ್ನಮ್ಮ..
    ಆಗಿರಲೂಬಹುದು ಅವಳು ನಿಮ್ಮಮ್ಮ!!

    ಅಮ್ಮ ಏಲ್ಲರಿಗೂ ಏಲ್ಲಾ ಕಾಲಕ್ಕೂ ಮುಗಿಲೆತ್ತರಕ್ಕೆ ನಿಲ್ಲುವ ಒಂದು ಚೇತನ.. ಆದರೆ ಅದಕ್ಕೆ ಅಪವಾದವಾಗಿ ನಾನೋರ್ವ ಅಮ್ಮನನ್ನು ಕಂಡೆ. ಆಕೆ ತನ್ನ ಗಂಡನನ್ನು ಮತ್ತು ಮುದ್ದು ಕಂದನನ್ನು ತೊರೆದು, ಮತ್ತೊರ್ವನೊದಿಗೆ ಮದುವೆಯಾಗಿ ಇಂದಿಗೂ ಜೀವನ ಸಾಗಿಸುತ್ತಿದ್ದಾಳೆ. ತಾಯ್ತನಕ್ಕೇ ಅಪವಾದವಾಗಿ !

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.