ಅಮ್ಮನ ಪ್ರೀತಿಯ ನೆನಪಿಸುವ ತಿಳಿಸಾರು

“ನಿಮಗೆ ಅತ್ಯಂತ ಇಷ್ಟದ ತಿಂಡಿ, ತಿನಿಸು, ಅಡುಗೆ ಯಾವುದು?” ಇದು ಅತಿ ಸುಲಭದ ಪ್ರಶ್ನೆ ಮತ್ತು ಕಠಿಣವಾದ ಪ್ರಶ್ನೆಯೂ ಹೌದು! ಎಷ್ಟೇ ಸರಳ ಅನ್ನಿಸಿದರೂ, ಯಾರಾದರೂ ಇದ್ದಕ್ಕಿದ್ದಂತೆ ನಮ್ಮನ್ನು ನಿಲ್ಲಿಸಿ, ಈ ಪ್ರಶ್ನೆ ಕೇಳಿದರೆ, ಕ್ಷಣ ಕಾಲವಾದರೂ ಯೋಚಿಸಲೇ ಬೇಕಾಗುತ್ತದೆ. ಮೈಸೂರು ಪಾಕ್ ಇಷ್ಟವೆಂದರೆ ಜಿಲೇಬಿ, ಜಾಮೂನುಗಳು “ನನ್ನಲ್ಲಿ ಕೋಪವೇ? ನಾ ನಿನಗೆ ಬೇಡವೇ?” ಎಂದು ಪೆಚ್ಚುಮುಖ ಹಾಕಿಕೊಂಡಂತಾಗುತ್ತದೆ. ವಾಂಗಿಭಾತ್ ನನ್ನ ಅಚ್ಚುಮೆಚ್ಚು ಎಂದರೆ ಮಾವಿನಕಾಯಿ ಚಿತ್ರಾನ್ನಕ್ಕೆ ಅನ್ಯಾಯವಾಗುತ್ತದೆ. ಬೋಂಡ ಮೆಚ್ಚೆಂದರೆ ಪಕೋಡ ಒಲ್ಲೆನೆಂಬ ಅರ್ಥ ಮೂಡುತ್ತದೆ. ಇದು ಬೇಕೆಂದರೆ ಅದು ಬೇಡವೇ ಅನ್ನಿಸುವುದಿದೆ.

ಯಾರಾದರೂ ಶ್ರಮ ವಹಿಸಿ ಇಂತಹದೊಂದು ಮೋಜಿನ ಸರ್ವೇ ನಡೆಸಿದ್ದೇ ಆದಲ್ಲಿ ಬಹಳ ಚೆನ್ನಾಗಿರುತ್ತದೆ. ಆಗ ವಿವಿಧ ಬಗೆಯ ತಿಂಡಿ, ತಿನಿಸುಗಳ ದೊಡ್ಡದೊಂದು ಪಟ್ಟಿಯೇ ನಮ್ಮೆದುರು ಪ್ರತ್ಯಕ್ಷವಾಗಬಹುದು. ಎಲ್ಲರಿಗೂ ಚಿರಪರಿಚಿತವಾಗಿರುವ ಉತ್ತರ, ದಕ್ಷಿಣ ಭಾರತದ ಅಡುಗೆಗಳಲ್ಲದೆ, ಬೇರೆ ಬೇರೆ ಪ್ರಾಂತ್ಯಗಳ, ದೇಶ ವಿದೇಶಗಳ ರುಚಿಕರ ಖಾದ್ಯಗಳ ಸುಂದರ ಮೆರವಣಿಗೆ ನಮ್ಮೆದುರು ನಡೆಯುವುದಂತೂ ಖಂಡಿತ. ಯಾವುದೋ ಒಂದು ಬಗೆಯ ತಿಂಡಿಯನ್ನು ಇಷ್ಟವೆಂದು ಮತ್ತೆ ಮತ್ತೆ ತಿನ್ನುತ್ತಾ ಹೋದರೆ, ಆ ಪದಾರ್ಥ ತನ್ನ ತುಷ್ಟಿಗುಣವನ್ನು ಕಳೆದುಕೊಳ್ಳುತ್ತದೆ. ಸಿಹಿತಿಂಡಿ ಎಷ್ಟೇ ಇಷ್ಟವಾದರೂ ಅತಿಯಾದ ಸಿಹಿ ನಾಲಿಗೆಗೆ- ದೇಹದ ಆರೋಗ್ಯಕ್ಕೂ ಕಹಿ ಅನ್ನಿಸುತ್ತದೆ. “ಲೋಕೋ ವಿಭಿನ್ನ ರುಚಿಃ” ಎನ್ನುವಂತೆ ಒಬ್ಬರಿಗೆ ರುಚಿಯೆನಿಸಿದ್ದು ಇನ್ನೊಬ್ಬರಿಗೆ ಸಹಿಸದು. ಒಬ್ಬರಿಗೆ ಅನಿಷ್ಟವೆನಿಸಿದ್ದು ಮತ್ತೊಬ್ಬರಿಗೆ ಪರಮ ಪ್ರಿಯ. ಉಪ್ಪಿಟ್ಟು ಇಷ್ಟವಿಲ್ಲವೆಂದು ಹೀಗಳೆಯುವವರು ಕೆಲವರಾದರೆ ಅದನ್ನೇ ಮೆಚ್ಚಿಕೊಳ್ಳುವ ಹಲವರೂ ಇದ್ದಾರೆ.

ನಿಮ್ಮೆಲ್ಲರ ಅಚ್ಚುಮೆಚ್ಚಿನ ಅಡುಗೆ, ತಿಂಡಿ ಯಾವುದಿರಬಹುದೆಂಬ ಕುತೂಹಲ ನನಗೂ ಇದೆ. ನೀವೆಲ್ಲ ಅದನ್ನು ಬರೆದು ತಿಳಿಸುವವರೆಗೆ ಕಾಯುತ್ತೇನೆ. ಅದಕ್ಕೆ ಮೊದಲು ನನ್ನ ಇಷ್ಟವೇನೆಂದು ಹೇಳಿಬಿಡುತ್ತೇನೆ. ಯಾವುದೋ “ಒಂದು” ತಿನಿಸನ್ನು ನನ್ನ ಮೆಚ್ಚಿನದೆಂದು ಗುರುತಿಸುವುದು ಕಷ್ಟವಾದರೂ, ಸದಾಕಾಲವೂ ನನಗೆ ಬೇಕು ಎಂದು ಅನ್ನಿಸುವ ಏಕಮಾತ್ರ ಅಡುಗೆಯೆಂದರೆ ತಿಳಿಸಾರು. ಇದು ಹಳತಾಯಿತೆಂದು ಕಳಚಿಕೊಳ್ಳಲಾಗದ ಸತಿ-ಪತಿಯರ ಸಂಬಂಧದ ಹಾಗೆ ; ಹಳೆಯ ಅಡುಗೆಯೇ ಆದರೂ ದಿನದಿನವೂ ಹೊಸದಾಗಿಯೇ ಕಾಣಿಸುವ ಮೋಹಕತೆ ತಿಳಿಸಾರಿಗಿದೆ. ತಿನ್ನಲು ಸುಲಭ, ಮಾತ್ರವಲ್ಲ ತಯಾರಿಸುವುದು ಕೂಡ ಬಹಳ ಸುಲಭ.

ಹಸಿರು ಬಾಳೆ ಎಲೆಯ ಮೇಲೆ ಮಲ್ಲಿಗೆ ಹೂವಿನಂತಹ ಬಿಳುಪಾದ ಅನ್ನ. ಅದರ ಮೇಲೆ ತಿಳಿಸಾರು. ಒಂದು ಚಮಚ ತುಪ್ಪ. ಜೊತೆಗಿಷ್ಟು ಕರಿದ ಹಪ್ಪಳ, ಸಂಡಿಗೆಗಳು, ಉಪ್ಪಿನಕಾಯಿ. ರುಚಿಗೆ ಬೇಕಾದರೆ ಸೌತೆಕಾಯಿ ಕೋಸಂಬರಿ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇಷ್ಟಿದ್ದರೆ ನನಗಂತೂ ಸಾಕೇ ಸಾಕು! ಇದರ ಮುಂದೆ ಪಂಚಭಕ್ಷ್ಯ ಪರಮಾನ್ನಗಳು ಯಾರಿಗೆ ಬೇಕು? ಬೇಡವೇ ಬೇಡವೆಂದಲ್ಲ ಮತ್ತೆ! ಒಮ್ಮೊಮ್ಮೆ ಇದ್ದರೆ ಬೇಕು. ಇರದಿದ್ದರೂ ಸರಿಯೇ. ಹೆಂಡಕುಡುಕ ರತ್ನನಿಗೆ ಕೈಹಿಡಿದ ಪುಟ್ನಂಜಿ ನಗುತ್ತಾ ಕೊಟ್ಟ ಉಪ್ಪು ಗಂಜಿಯೇ ಪ್ರಪಂಚವಾದಂತೆ, ನಾನು ತಿಳಿಸಾರಿನಿಂದಲೇ ಸಂತೃಪ್ತಳು.

ಹಿಂದೆಲ್ಲಾ, ವಧು ಪರೀಕ್ಷೆಯ ಸಮಯದಲ್ಲಿ “ಹುಡುಗಿಗೆ ಅಡುಗೆ ಮಾಡಲು ಬರುತ್ತದೆಯೆ?” ಎಂದು ವಿಚಾರಿಸಿದಾಗ, “ಹೆಚ್ಚೇನೂ ಬರದಿದ್ದರೂ ಅನ್ನ, ಸಾರು ಮಾಡಲಂತೂ ಬರುತ್ತದೆ” ಎಂಬ ಸಿದ್ಧ ಉತ್ತರ ಬರುತ್ತಿತ್ತು- ಸಾರು ಮಾಡಲು ಗೊತ್ತಿದ್ದರೆ ನೆಮ್ಮದಿಯಾಗಿ ಬದುಕಲಂತೂ ತೊಂದರೆಯಿಲ್ಲ ಎಂಬ ಕ್ಷೇಮ ಭಾವನೆಯೂ ಆ ಮಾತಿನ ಹಿಂದೆ ಪ್ರತಿಧ್ವನಿಸುತ್ತಿತ್ತು. ತಿಳಿಸಾರು ತಯಾರಿಸಲು ಪಾಕ ಪುಸ್ತಕವನ್ನು ತಿರುವಿ ಹಾಕುವುದೇನೂ ಬೇಕಾಗಿಲ್ಲ. ಕಷ್ಟದಿಂದ ಕಲಿಯುವ ಅಗತ್ಯವೂ ಇಲ್ಲ. ಎಲ್ಲರೂ ಕಲಿಯಬಹುದಾದ, ಎಲ್ಲರೂ ಮಾಡಬಹುದಾದ, “ಸುಲಭದ ಮುಕ್ತಿಗೆ ಸುಲಭವೆಂದೆನಿಸುವ” ಸರಳ ಅಡುಗೆಯಿದು.

ಸಾರು ರುಚಿಯೆನಿಸಬೇಕಾದರೆ, ಬೇಳೆಯನ್ನು ಮೆತ್ತಗಾಗುವಂತೆ ಬೇಯಿಸಿಕೊಳ್ಳುವುದು ಅತ್ಯಗತ್ಯ. ಕುಕ್ಕರುಗಳಲ್ಲಿ ಕೇಳುವುದೇ ಬೇಡ. ನಿಮಿಷಗಳಲ್ಲಿ ಎಂತಹ ಗಟ್ಟಿ ಬೇಳೆಯಾದರೂ ಹಣ್ಣಾಗಿ ಬೆಂದು ಹೋಗಿರುತ್ತದೆ. ತೆರೆದ ಪಾತ್ರೆಯಲ್ಲಿ ಬೇಳೆ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿಭಿನ್ನ ರುಚಿಗೆ ಕೆಲವರು ತೊಗರಿ ಬೇಳೆಯ ಜೊತೆಗೆ ಹೆಸರು ಬೇಳೆ, ಕಡಲೆ ಬೇಳೆಯನ್ನು ಬೆರೆಸುತ್ತಾರಾದರೂ, ತೊಗರಿಬೇಳೆಯಂತೂ ಕಡ್ಡಾಯ. ಕೆಲವು ದಿನಗಳ ಹಿಂದೆ, ಅಮೆರಿಕದಲ್ಲಿ ತೊಗರಿಬೇಳೆಯ ಬೆಲೆ ಗಗನಕ್ಕೇರಿದಾಗ ಹೌಹಾರಿದ ಸಾರು ಪ್ರಿಯರಲ್ಲಿ ನಾನೂ ಒಬ್ಬಳು! ತೊಗರಿಬೇಳೆಯ ಜೊತೆ ಒಂದು ಟೊಮ್ಯಾಟೊ ಬೇಯಲು ಹಾಕಿದರೆ ಸಾರಿಗೆ ಹೆಚ್ಚುವರಿ ರುಚಿ ಲಭ್ಯವಾಗುತ್ತದೆ.

ನುಣ್ಣಗೆ ಬೆಂದ ಬೇಳೆಯನ್ನು ನೋಡಿದಾಗಲೆಲ್ಲ ನನಗೆ ಬೇಂದ್ರೆಯವರ “ಬೆಳಗು” ಕವಿತೆಯ “…ನುಣ್ಣನೆ ಎರಕವ ಹೊಯ್ದಾ…” ಸಾಲು ನೆನಪಾಗುವುದೊಂದು ವಿಶೇಷ. ಈ ನುಣ್ಣನೆಯ ಬೇಳೆಯನ್ನು ಕಡೆದು, ಆ ಬೇಳೆಯ ಕಟ್ಟಿಗೆ, ಸಾರಿನ ಪುಡಿ, ಹುಣಿಸೆ ರಸ, ಉಪ್ಪು ಬೆರೆಸಿ ಹದವಾಗಿ ಕುದಿಸಬೇಕು. ಸಾರಿನ ಪುಡಿ ಮನೆಯಲ್ಲಿ ಮಾಡಿಕೊಳ್ಳಲು ಆಗದಿದ್ದರೆ, ಅಂಗಡಿಗಳಲ್ಲಿ ಸಿಗುವ ಸಿದ್ಧ ಸಾರಿನ ಪುಡಿಗಳಿಗೆ ಮೊರೆ ಹೋಗಬಹುದು. ಸಿಹಿ ಇಷ್ಟವಾಗುವಂತಿದ್ದರೆ ಮಾತ್ರ ಒಂದು ಪುಟ್ಟ ಚೂರು ಬೆಲ್ಲ, ಇಲ್ಲದಿದ್ದರೆ ಇಲ್ಲ. ಸಾರಿನ ಪುಡಿಯ ಘಾಟು ವಾಸನೆ ಹೋಗುವ ತನಕ ಸಾರು ಕುದಿಯಬೇಕು. ಹೀಗೆ ಕುದಿಯುವಾಗಲೇ ಕೊತ್ತಂಬರಿ ಸೊಪ್ಪನ್ನು ಹಾಕಬೇಕು. ಕೊನೆಗೆ ಒಂದು ಸೌಟಿನಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ಅಲ್ಲಿಗೆ ಘಮಘಮಿಸುವ ತಿಳಿಸಾರಿನ ಅವತಾರವಾದಂತೆ!

ಸಾರು ಕುದಿಯುವ ಹಂತದಲ್ಲಿ ಮನೆ ತುಂಬ ಹರಡುವ ಪರಿಮಳವನ್ನು ಆಸ್ವಾದಿಸಿಯೇ ಸವಿಯಬೇಕು. ಸಾರು ಕುದಿದಷ್ಟು ರುಚಿ ಹೆಚ್ಚು ಎನ್ನುತ್ತಾರೆ. ಹಾಗೆಂದು ವಿಪರೀತ ಕುದಿಸಿದರೆ ಸಾರಿನಲ್ಲಿರುವ ನೀರೆಲ್ಲಾ ಆವಿಯಾಗಿ, ತಿಳಿಸಾರಿನ ಬದಲು, ಬಗ್ಗಡದಂತಹ ಗಟ್ಟಿ ಸಾರಿನ ರುಚಿ ನೋಡಬೇಕಾದ ಪಾಡು ನಮ್ಮದಾಗುತ್ತದೆ. ಸಾರು ಹದವಾಗಿ ಕುದಿಯಬೇಕು. ಆದರೆ ಉಕ್ಕಿ ಸುರಿದು ಹೋದರೆ, ಅದರಲ್ಲಿರುವ ಸಾರವೆಲ್ಲವೂ ನಷ್ಟವಾದಂತೆಯೇ. “ಉಕ್ಕಿದರೆ ಸಾರಲ್ಲ, ಸೊಕ್ಕಿದರೆ ಹೆಣ್ಣಲ್ಲ” ಎಂಬ ಗಾದೆಯೂ ಸಾರು ಉಕ್ಕಿದರೆ ರುಚಿ ಕೆಡುತ್ತದೆ ಎಂದು ನಮ್ಮನ್ನು ಎಚ್ಚರಿಸುತ್ತದೆ.

ನಮ್ಮ ಮನೆಗೆ ಒಮ್ಮೆ ಗುಜರಾತಿ ಮಿತ್ರರು ಬಂದಿದ್ದರು. ಅವರ ಮಗು ನಾನು ಮಾಡಿದ್ದ ಸಾರನ್ನು ನೋಡಿ “ಸೂಪ್, ಸೂಪ್” ಎಂದು ಬಾಯಲ್ಲಿ ನೀರೂರಿಸುತ್ತಿತ್ತು. ಸಾರನ್ನು ಕೆಲವರು ಸೂಪ್ ಎಂದು ಅನುವಾದಿಸುತ್ತಾರೆ. ಸಾರನ್ನೂ ಸೂಪಿನಂತೆ ಬಟ್ಟಲಿನಲ್ಲಿ ಹಾಕಿಕೊಂಡು ಕುಡಿಯಬಹುದಾದರೂ ಸೂಪೇ ಬೇರೆ; ಸಾರೇ ಬೇರೆ. ಕನ್ನಡೇತರರು- ಈಚೆಗೆ ಕನ್ನಡಿಗರೂ- ಸಾರನ್ನು “ರಸಂ” ಎಂದು ಕರೆಯುತ್ತಾರಾದರೂ ನನಗೇಕೋ ‘ಸಾರು’ ಪದದಲ್ಲಿರುವ ಮಾಧುರ್ಯ ಆ ಪದದಲ್ಲಿ ಕಂಡುಬಂದಿಲ್ಲ! ಬಹುಶಃ ಇದಕ್ಕೆ ನನ್ನ ಪೂರ್ವಗ್ರಹವೂ ಕಾರಣವಿರಬಹುದು.

ಮೊಸರನ್ನವನ್ನು ತಾಯಿಗೆ ಹೋಲಿಸುತ್ತಾರೆ. ಭೋಜನದ ಪ್ರಾರಂಭದಲ್ಲಿ ಬಡಿಸುವ ಪಾಯಸವನ್ನು‘ ತಾಯಿ’ ಎನ್ನುತ್ತಾರೆ. ಎಲೆ ತುದಿಯಲ್ಲಿ ಬಡಿಸುವ ತೊವ್ವೆಯನ್ನೂ ಕೆಲವರು‘ ತಾಯಿ’ ಅನ್ನುವುದಿದೆ. ಸಾರನ್ನು ಯಾರೂ ತಾಯಿ ಎಂದಿಲ್ಲವಾದರೂ, ಅದೇಕೋ ತಿಳಿಸಾರು ನನಗೆ ತಾಯಿಯ ನೆನಪನ್ನೇ ತರುತ್ತದೆ. ಬಾಲ್ಯದಲ್ಲಿ ಅಮ್ಮ ಮಾಡಿ ಹಾಕಿದ ತಿಳಿಸಾರಿನ ನೆನಪು ನನ್ನ ಮನದಾಳದಲ್ಲಿ ಗಟ್ಟಿಯಾಗಿ ನಿಂತಿರುವುದರಿಂದ ಹೀಗನ್ನಿಸಬಹುದು. ಅಮ್ಮ ಮಾಡುತ್ತಿದ್ದ ಬೇಳೆ ಸಾರು ಮಾತ್ರವಲ್ಲದೆ, ಬೇಳೆಯ ಹಂಗೇ ಇಲ್ಲದ ಗೊಡ್ಡು ಸಾರು, ಮಾವಿನ ಕಾಯಿ ಸಾರು, ಬಾಣಂತನದ ಸಮಯದಲ್ಲಿ ಮಾಡಿ ಹಾಕುತ್ತಿದ್ದ ಮೆಣಸಿನ ಸಾರು- ಇವೆಲ್ಲವೂ ಅಮ್ಮನ ನೆನಪನ್ನು ಸಾರಿನೊಡನೆ ಕಟ್ಟಿಹಾಕಿರಬೇಕೆಂದು ಭಾವಿಸುತ್ತೇನೆ.

ನಾನು ಬರೆದಿರುವ “ಅಮ್ಮ” ಎಂಬ ಕವನದಲ್ಲಿಯೂ ಅಮ್ಮನ ನೆನಪನ್ನು ನಾನು ತಿಳಿಸಾರಿಗೇ ಹೋಲಿಸಿದ್ದೇನೆ. ಆ ಸಾಲುಗಳು ಹೀಗಿವೆ- “ಇಲ್ಲಿ ಅಮೆರಿಕಾದ ಅಡುಗೆ ಮನೆಯಲ್ಲಿ ತಿಳಿಸಾರು ಕುದಿವಾಗ ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ”. ತಿಳಿಸಾರು ಕುದಿವಾಗ ಅಮ್ಮ ಏಕೆ ನೆನಪಾಗುತ್ತಾಳೋ ಗೊತ್ತಿಲ್ಲ. ನನ್ನಲ್ಲಿ ತಾಯಿ, ತಾಯ್ನಾಡಿನ ಬಗೆಗೆ ಭಾವನಾತ್ಮಕ ಸೆಳೆತಗಳು ಹೆಚ್ಚಾಗಿರುವುದರಿಂದ ನನಗೆ ಮಾತ್ರ ಹೀಗನ್ನಿಸುತ್ತಿದೆಯೆಂದು ಮೊದಲು ತಿಳಿದಿದ್ದೆ. ಆದರೆ ಅನೇಕರಿಗೆ ನನ್ನಂತೆ ತಿಳಿಸಾರು ತಾಯಿಯ ಕೈಯಡುಗೆಯನ್ನು ನೆನಪಿಸುತ್ತದೆಂದು ನಂತರ ತಿಳಿಯಿತು.

ನನ್ನ ಅಮ್ಮನಿಗಂತೂ ಅಡುಗೆ ಮಾಡಲು ನನಗಿರುವ ಅನುಕೂಲದ ನಾಲ್ಕನೆಯ ಒಂದು ಭಾಗವೂ ಇರಲಿಲ್ಲವೆನ್ನಬಹುದು. ಕುಕ್ಕರ್ ಬಳಕೆಯಲ್ಲಿಲ್ಲದ ಕಾರಣ ತೆರೆದ ಪಾತ್ರೆಯಲ್ಲಿ ಬೇಳೆ ಬೇಯಿಸಬೇಕಾಗಿತ್ತು. ನಮ್ಮೂರಿನ ಗಡಸು ನೀರಿನಲ್ಲಿ ಬೇಳೆ ಎಂದೂ ಮೆತ್ತಗೆ ಬೇಯುತ್ತಿರಲಿಲ್ಲ. ಆದರೂ ಆ ಸಾರಿಗೆ ರುಚಿ ತುಂಬುತ್ತಿದ್ದುದು ಅಮ್ಮನ ಅಕ್ಕರೆಯಲ್ಲದೆ, ಬೇರೇನೂ ಅಲ್ಲವೆಂಬುದು ನನ್ನ ಗಟ್ಟಿ ನಂಬಿಕೆ. ಇದೇ ಮಾತನ್ನು ನನ್ನ ಅಕ್ಕನೂ ಈಚೆಗೆ ದೃಢಪಡಿಸಿದಳು.

ತಿಳಿಸಾರು ಎಲ್ಲರಿಗೂ ಇಷ್ಟವೆನ್ನಿಸಬೇಕಾಗಿಲ್ಲ. “ದಿನವೂ ಅನ್ನ, ಸಾರಿನ ಸಪ್ಪೆ ಊಟವೆ?” ಎಂದು ಮೂಗೆಳೆಯುವವರೂ ಇದ್ದಾರೆ. ಯಾವುದೇ ಸಂತಸ, ಸಂಭ್ರಮ, ವಿಶೇಷಗಳಿಲ್ಲದ ಸಪ್ಪೆ ಬದುಕನ್ನು “ಸಾರನ್ನದಂತಹ ಬದುಕು” ಎಂದು ನಗೆಯಾಡಬಹುದು. ಸಸ್ಯಾಹಾರಿಗಳನ್ನು “ಪುಳಿಚಾರು” ಎಂದು ವಿನೋದ ಮಾಡಲಾಗುತ್ತದೆ. ಅದೇನೇ ಇರಲಿ, “ಊಟ ತನ್ನಿಚ್ಛೆ, ನೋಟ ಪರರಿಚ್ಛೆ” ಎಂಬುದಂತೂ ಅಂತಿಮ ಸತ್ಯ. ನಾವು ತಿನ್ನುವ ಅಡುಗೆ ಯಾವುದೇ ಇರಲಿ ಸತ್ವಪೂರ್ಣವಾಗಿರಲಿ. ಸಾರಯುಕ್ತವಾಗಿರಲಿ. ನನ್ನ ಪಾಲಿಗಂತೂ ಏನೇ ಬರಲಿ, ಸಾರಿರಲಿ!
***
(ಏಪ್ರಿಲ್, ೧೧, ೨೦೦೭ `ದಟ್ಸ್ ಕನ್ನಡ’ ತುಳಸಿವನ’ ಆಂಕಣ)

ಡೈರಿ ಹೇಳೆ, ಮುಂದೇನೆ?

ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ. ಫೆಡೆಕ್ಸ್‌ನವನು ಯಾವುದೋ ಪ್ಯಾಕೇಜು ತಂದಿದ್ದು, ಸಹಿಗಾಗಿ ಕಾದಿರಬಹುದೆಂದೆಣಿಸಿ ಬಾಗಿಲಿನ ಮಾಯಾಕಿಂಡಿಯಲ್ಲಿ ಇಣುಕಿದೆ. ಸಮವಸ್ತ್ರ ತೊಟ್ಟ ಕೊರಿಯರಣ್ಣನ ನಿರೀಕ್ಷೆಯಲ್ಲಿದ್ದ ನನಗೆ ಕಂಡಿದ್ದು ಮುಳ್ಳಿನ ಮೇಲೆ ನಿಂತಿದ್ದಂತೆ, ಚಡಪಡಿಸುತ್ತಾ ನಿಂತಿದ್ದ ಹೆಂಗಸಿನ ಮುಖ.

ಅವಳ ಮುಖಚರ್ಯೆ ಭಾರತೀಯತೆಯನ್ನು ಸಾರಿದರೂ ನನ್ನ ಪರಿಚಿತಳಂತೂ ಅಲ್ಲ! ಇವಳಾರಿರಬಹುದು? ಈ ಹೊತ್ತಿನಲ್ಲಿ ನನ್ನಲ್ಲೇನು ಕೆಲಸ? ಬಾಗಿಲು ತೆರೆಯಲೇ? ಬೇಡವೇ? ಅಪರಿಚಿತರಿಗೆ ಬಾಗಿಲು ತೆರೆದು ಅಪಾಯವನ್ನು ಆಹ್ವಾನಿಸಿಕೊಂಡವರ- ಅಲ್ಲಿ ಇಲ್ಲಿ ಓದಿದ, ಕೇಳಿದ ಘಟನೆಗಳೆಲ್ಲಾ ನೆನಪಾಗಿ ಕೈ ಚಿಲುಕದತ್ತ ಸರಿಯಲು ಅನುಮಾನಿಸಿತು. ಕ್ಷಣವೊಂದು ಯುಗವಾದಂತೆ ಚಡಪಡಿಕೆಯಲ್ಲಿದ್ದ ಹೆಂಗಸು ಮತ್ತೊಮ್ಮೆ ಕರೆಘಂಟೆ ಒತ್ತಿದಳು. ಯೋಚನೆಗಳನ್ನು ತಳ್ಳಿ ಬಾಗಿಲು ತೆರೆದೆ.

ಅವಳು ಸರಕ್ಕನೆ ನನ್ನನ್ನು ಸರಿಸಿ ಒಳಬಂದಿದ್ದು ನನ್ನಲ್ಲಿ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು. ನನ್ನ ಮಾತಿಗೆ ಕಾಯದೆ ಆತುರದಿಂದ ಅವಳು ತನ್ನ ಪರಿಚಯ ಮಾಡಿಕೊಂಡಳು. ಅವಳ ಮನೆ ಇರುವುದು ನನ್ನ ನೆರೆಹೊರೆಯಲ್ಲಿಯೇ ಎಂದಳು. ತನ್ನ ಮನೆ ನಂಬರ್ ಹೇಳಿದಳು. ಆ ಮನೆ ನಾನು ನಿತ್ಯ ಕಾರೋಡಿಸಿಕೊಂಡು ಹೋಗಿಬರುವ ಹಾದಿಯಲ್ಲಿಯೇ ಇರುವುದೆಂಬುದು ನನ್ನರಿವಿಗೆ ಹೊಳೆಯಿತು. ಆ ಮನೆಯ ಎದುರು ಆಗೀಗ ಆಕೆಯನ್ನು ಕಾರಿನ ಕಿಟಕಿಯಿಂದ ಅಸ್ಪಷ್ಟವಾಗಿ ಕಂಡದ್ದೂ ನೆನಪಾಗಿ ಆತಂಕ ಮರೆಯಾಗಿ ನಿಂತೇ ಇದ್ದ ಅವಳನ್ನು ಕುಳ್ಳಿರಿಸಿದೆ. ಮುಳ್ಳಿನ ಮೇಲೆ ಕೂತಂತೆ ತಲ್ಲಣಿಸುತ್ತಿದ್ದ ಅವಳು, ‘ನಿನ್ನಿಂದ ಒಂದು ಚಿಕ್ಕ ಸಹಾಯವಾಗಬೇಕು? ದಯವಿಟ್ಟು ಮಾಡುತ್ತೀಯಾ?…’ ಎಂದಳು. ಇದು ನನ್ನಿಂದ ಏನೋ ಪಡೆಯಲು, ಬಹುಶಃ ಹಣಕಾಸಿನ ನೆರವಿಗೆ ಇದು ಪೀಠಿಕೆ ಎಂದುಕೊಳ್ಳುತ್ತಾ, ‘ನನಗೆ ಕೆಲಸವಿದೆ… ಅದೇನು ಬೇಗ ಹೇಳು…’ ಎಂದೆ, ನಿರಾಸಕ್ತಿಯ ದನಿಯಲ್ಲಿ.

ಅವಳು ತನ್ನ ಕೈಚೀಲದಿಂದ ನೂರರ, ಐವತ್ತರ ನಾಲ್ಕಾರು ಡಾಲರು ನೋಟುಗಳನ್ನು ತೆರೆದು ನನ್ನ ಮುಂದಿಟ್ಟಳು. ನಾನು ಆಶ್ಚರ್ಯದಿಂದ ‘ಈ ಹಣವನ್ನು ನನಗೇಕೆ ಕೊಡುತ್ತಿದ್ದೀಯಾ?’ ಕೇಳಿದೆ. ‘ಈ ಹಣ ನಿನಗಲ್ಲ. ಇದನ್ನು ನೀನು ಹೇಗಾದರೂ ಮಾಡಿ ನನ್ನ ಮಕ್ಕಳಿಗೆ ತಲುಪಿಸಬೇಕು. ನನ್ನ ಹಿರಿಯ ಮಗನೂ, ನಿನ್ನ ಮಗನೂ ಒಂದೇ ತರಗತಿಯಲ್ಲಿಯೇ ಓದುತ್ತಿದ್ದಾರೆಂದು ನನಗೆ ಗೊತ್ತಿದೆ. ಹಾಗಾಗಿ ನಿನ್ನಿಂದ ಈ ಕೆಲಸ ಈ ಸಾಧ್ಯವೆಂದು ಬಂದಿದ್ದೇನೆ.’ ಎಂದು ತನ್ನ ಮಗನ ಹೆಸರು, ಚಹರೆಗಳನ್ನು ಹೇಳಿ ದೈನ್ಯದಿಂದ ಕುಳಿತಳು. ‘ನಿನ್ನ ಮಗನಿಗೆ ನೀನೇ ಕೊಡಬಹುದಲ್ಲ? ನಾನೇಕೆ?’ ನನ್ನಲ್ಲಿ ತುಂಬಿ ತುಳುಕುತ್ತಿದ್ದ ಪ್ರಶ್ನೆಗಳು…

‘ನಾನು ಈಗ ಆ ಮನೆಯಲ್ಲಿಲ್ಲ. ನನ್ನ ಗಂಡ ಮಕ್ಕಳನ್ನು ಮಾತ್ರ ಮನೆಯಲ್ಲಿಟ್ಟುಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ. ಅದೊಂದು ದೊಡ್ಡ ಕಥೆ. ಮತ್ತೆಂದಾದರೂ ನಿನ್ನ-ನನ್ನ ಭೇಟಿಯಾದರೆ ಆಗ ಹೇಳುತ್ತೇನೆ. ಸದ್ಯಕ್ಕೆ ನಾನು ಗೆಳತಿಯೊಬ್ಬಳ ಮನೆಯಲ್ಲಿದ್ದೇನೆ. ಅವಳ ನೆರವಿನಿಂದ ರೆಸ್ಟೊರೆಂಟೊಂದರಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿ ದುಡಿದು ಉಳಿಸಿದ ಹಣವನ್ನು ನನ್ನ ಮಕ್ಕಳಿಗೆ ತಲುಪಿಸಬೇಕೆನ್ನಿಸಿತು. ನನ್ನ ಮನೆಯ ಮುಂದೆಯೇ ಹಾದುಬಂದೆ, ಗಂಡನ ಕಾರು ಕಾಣಿಸಿತು. ಹಾಗಾಗಿ ಮಕ್ಕಳನ್ನು ನೋಡಲು ಸಾಧ್ಯವಾಗಲಿಲ್ಲ. ನಾನು ಹೆಚ್ಚು ಹೊತ್ತು ಇಲ್ಲಿ ಇರುವಂತಿಲ್ಲ ; ಇದ್ದರೆ ನೀನೂ ತೊಂದರೆಯಲ್ಲಿ ಸಿಲುಕುತ್ತೀ. ನನಗೆ ಸಹಾಯ ಮಾಡು, ನಿನ್ನನ್ನು ನಂಬಿದ್ದೇನೆ…’ ಎಂದು ನನ್ನ ಕೈಯನ್ನೊಮ್ಮೆ ಮೆಲ್ಲನೆ ಒತ್ತಿ, ಸುರಿಯುತ್ತಿದ್ದ ಕಣ್ಣೀರನ್ನು ತೊಡೆದುಕೊಳ್ಳಲೂ ಪುರಸೊತ್ತಿಲ್ಲದವಳಂತೆ, ತೆರೆದೇ ಇದ್ದ ಬಾಗಿಲಿನಿಂದೋಡಿ ಮರೆಯಾದಳು. ಬಿರುಬಿಸಿಲಿನ ಈ ಮಧ್ಯಾಹ್ನದಲ್ಲಿ ನಾನು ಕುಳಿತೇ ಕನಸು ಕಾಣುತ್ತಿದ್ದೇನೆಯೇ? ಎಂದುಕೊಂಡೆ : ನನ್ನ ಮುಂದಿದ್ದ ಡಾಲರು ನೋಟುಗಳು ಅಲ್ಲವೆಂದವು.

***
(`Vijaya Next’ ಪತ್ರಿಕೆಯ ‘ಅವಳ ಡೈರಿ’ ಅಂಕಣದಲ್ಲಿ ಪ್ರಕಟಿತ.)

`ಕರುಣಿಸೋ ರಂಗಾ!’ – ಇಂಥ ಇನ್ನಷ್ಟು ಸಂತಸಗಳ ಈ ಬಾಳಿಗೆ!

sjoshi

ನಿನ್ನೆ, ಜುಲೈ, ಹದಿಮೂರರ ಸಂಜೆ, ಅರೋರಾದ ಬಾಲಾಜಿ ದೇವಸ್ಥಾನದಲ್ಲಿ, ವಿದ್ಯಾರಣ್ಯ ಕನ್ನಡಕೂಟದ ವಾರ್ಷಿಕ ‘ದಾಸ ದಿನ’ ಆಚರಣೆಯ ಪ್ರಯುಕ್ತ ಗಾಯಕ ಶ್ರೀನಿವಾಸ ಜೋಷಿಯವರ ಸಂಗೀತ ಕಾರ್ಯಕ್ರಮವಿತ್ತು. ಪಂಡಿತ ಭೀಮಸೇನ ಜೋಷಿಯವರ ಮಗನೂ, ಶಿಷ್ಯನೂ ಆದ ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರು. ತಂದೆಯನ್ನು ನೆನಪಿಸುವ ಅದೇ ರೂಪ, ಅಷ್ಟೊಂದು ಪಕ್ವಗೊಂಡಿರದ, ಆದರೆ ಅದೇ ದನಿ! ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ತುಂಬಿ ಮೊರೆಯುತ್ತಿದ್ದ ಹಲವಾರು ನಿರೀಕ್ಷೆಗಳು! ಪ್ರಸಿದ್ಧರ ಮಕ್ಕಳಿಗೆ, ಹೆತ್ತವರ ನೆರಳಿನಿಂದ ಹೊರಬಂದು ತಮ್ಮದೇ ಛಾಪನ್ನು ಮೂಡಿಸಿಕೊಳ್ಳುವುದು ಅದೆಷ್ಟು ಕಷ್ಟವಲ್ಲವೇ ಅನ್ನಿಸಿತು. ಜನರ ಮನಸ್ಸು ಅವರಿಗೇ ಅರಿವಿಲ್ಲದಂತೆ, ಕೈಯಲ್ಲಿ ತಕ್ಕಡಿ ಹಿಡಿದು ಅಳೆಯತೊಡಗುತ್ತದೆ. ಆ ದನಿಯೊಡನೆ ಈ ದನಿಯ ಹೋಲಿಕೆ ಬೇಡವೆಂದರೂ ಶುರುವಾಗುತ್ತದೆ.

ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಈ ಗಾಯಕನದು ಅದ್ಭುತ ಪರಿಣತಿ, ಅದನ್ನೇ ಹಾಡುವ ಒಲವು. ಆದರೆ, ದಾಸದಿನದ ಪ್ರಯುಕ್ತ, ಕೆಲವು ದಾಸರ ಕೃತಿಗಳನ್ನು ಹಾಡುವಂತೆ ಮೊದಲೇ ಕೋರಿಕೊಳ್ಳಲಾಗಿತ್ತದ್ದರಿಂದ ಅವರು ಅದನ್ನು ಹಾಡಲು ಒಪ್ಪಿದ್ದರು. ಮೊದಲೊಂದು ಪ್ರಾರ್ಥನೆಯ ಗೀತೆಯನ್ನು ಪ್ರಾರಂಭಿಸಿ, ನಂತರ ದಾಸಸಾಹಿತ್ಯಕ್ಕೆ ಲಗ್ಗೆಯಿಟ್ಟರು. ವಾದಿರಾಜರ ‘ಹರಿಸ್ಮರಣೆ ಮಾಡೊ ನಿರಂತರ’, ವಿಜಯದಾಸರ ‘ಸದಾ ಎನ್ನ ಹೃದಯದಲ್ಲಿ’ ಬಿಟ್ಟರೆ ಉಳಿದಿದ್ದೆಲ್ಲಾ ಪುರಂದರ ದಾಸರ ಪದಗಳು!

sj and bj

‘ಕರುಣಿಸೋ ರಂಗಾ ಕರುಣಿಸೋ… ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ’… ಎಂದು ಅವರು ಮುಂದಿನ ಹಾಡನ್ನು ಘೋಷಿಸಿದೊಡನೆ ಶೋತೃ ವೃಂದದಿಂದ ಚಪ್ಪಾಳೆ. ಯಾಕೆಂದರೆ, ಆ ಹಾಡಿನೊಂದಿಗೆ ತೇಲಿಬಂದಿದ್ದು ಪಂಡಿತ್ ಭೀಮಸೇನ್ ಜೋಷಿಯವರ ನೆನಪು. ಇದೇ ಅದ್ಧೂರಿಯ ಸ್ವಾಗತ ‘ಬಾಗ್ಯದ ಲಕ್ಷ್ಮೀ ಬಾರಮ್ಮಾ…’ ಹಾಡಿಗೂ. ಭೀಮಸೇನ ಜೋಷಿಯವರ ‘ದಾಸವಾಣಿ’ ಆಲ್ಬಂ‍ನಲ್ಲಿರುವ ಈ ಹಾಡಿನ ಧ್ವನಿಮುದ್ರಣದ ಬಗ್ಗೆ ಶ್ರೀನಿವಾಸ ಜೋಷಿಯವರು ಕೆಲವು ನೆನಪುಗಳನ್ನು ಹಂಚಿಕೊಂಡರು. ಈ ಹಾಡಿನ ಧ್ವನಿಮುದ್ರಣದ ದಿನ ಹನ್ನೆರಡರ ಬಾಲಕನಾಗಿದ್ದ ಅವರೂ ಅಲ್ಲಿದ್ದರಂತೆ! ಈ ಕೃತಿಯ ರಾಗ ಸಂಯೋಜನೆಯನ್ನು ಸ್ವತಃ ಭೀಮಸೇನಜೋಷಿಯವರೇ ಮಾಡಿದ್ದಂತೆ. ಆದರೆ, ‘ಭಾಗ್ಯದ ಲಕ್ಷ್ಮೀ…’ ಸಮುದಾಯದ ಸಾಂಪ್ರದಾಯಿಕ ಆಸ್ತಿಯಾದ್ದರಿಂದ, ಸಂಗೀತ ಸಂಯೋಜಕರಾಗಿ ತಮ್ಮ ಹೆಸರನ್ನು ಹಾಕಿಕೊಳ್ಳಲು ನಿರಾಕರಿಸಿದರಂತೆ. ಆದರೆ, ಕ್ಯಾಸೆಟ್ ಕವರಿನ ಮೇಲೆ ಯಾವುದಾದರೂ ಹೆಸರು ಇರಲೇಬೇಕಾದ ಅನಿವಾರ್ಯತೆಯಿಂದ ಭೀಮಸೇನ ಜೋಷಿಯವರ ಹೆಸರನ್ನೇ ಅಲ್ಲಿ ಹಾಕಲಾಯಿತು.

ನಂತರ,‘ಭಾಗ್ಯದ ಲಕ್ಷಿ ಬಾರಮ್ಮಾ’ ಬಹಳ ಜನಪ್ರಿಯವಾಗಿದ್ದು, ಅದಕ್ಕೆ ಈ ಹಾಡನ್ನು ಒಂದು ಕನ್ನಡ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೂ ಕಾರಣವಾಯಿತು ಎಂದು ನಟ ದಿವಂಗತ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡರು. ಆದರೆ, ಅವರಿಗೆ ಸಿನಿಮಾ ಹೆಸರು ನೆನಪಿಗೆ ಬರಲಿಲ್ಲ. ಅಲ್ಲೇ ಮುಂದಿನ ಸಾಲಿನಲ್ಲಿದ್ದ, ನಾನು ಮತ್ತು ಇನ್ನ್ಯಾರೋ ಕೂಗಿ ಹೇಳಿದೆವು… ‘ನೋಡಿ ಸ್ವಾಮಿ… ನಾವಿರೋದೇ ಹೀಗೆ!’, ‘ಅನಂತ್ ನಾಗ್-ಶಂಕರ್ ನಾಗ್ ಸಿನಿಮಾ!’ ಎಂದು. 🙂

ಭೀಮಸೇನ ಜೋಷಿಯವರ ಮಾತೃಭಾಷೆ ಕನ್ನಡವಾಗಿದ್ದರೂ, ಇವರಿಗೆ ಕನ್ನಡ ಬಾರದು. ಹಿಂದಿನ ದಿನ ಸ್ನೇಹಿತರ ಮನೆಯಲ್ಲಿ ಭೇಟಿಯಾಗಿದ್ದ ಅವರನ್ನು ಈ ಬಗ್ಗೆ ಕೇಳಿದಾಗ, ‘ಕನ್ನಡ ಸ್ವಲ್ಪ ಅರ್ಥವಾಗುತ್ತದೆ, ಆದರೆ ಮಾತಾಡಲು ಬರುವುದಿಲ್ಲ’ ಎಂದಿದ್ದರು. ಎಂಟು-ಒಂಭತ್ತರ ಎಳೆವಯಸ್ಸಿನಲ್ಲೇ ಗುರುವಿಗಾಗಿ ಹುಡುಕಾಟ ನಡೆಸುತ್ತಾ, `ಕುಂದಗೋಳ’ದಲ್ಲಿ ತಮ್ಮ ಗುರುವನ್ನು ಕಂಡುಕೊಂಡು, ಕೊನೆಗೆ ತಮ್ಮ ಕಾರ್ಯಕ್ಷೇತ್ರ ಮುಂಬಯಿಯನ್ನು ತಲುಪಿ, ಅಲ್ಲೇ ನೆಲೆಸಿದ್ದ ಭೀಮಸೇನೆಜೋಷಿಯವರ ಮಗನಿಗೆ ಕನ್ನಡ ಮಾತಾಡಲು ಬರಬಹುದೆಂದು ನಾವು ನಿರೀಕ್ಷಿಸಿರಲೂ ಇಲ್ಲ ಅನ್ನಿ.

sjoshi3

ಹಾಗಾಗಿ, ದಾಸರ ಪದಗಳ ಕನ್ನಡ ಉಚ್ಚಾರಣೆಯಲ್ಲಿ ಕೆಲವು ತಪ್ಪುಗಳಿದ್ದವಂತೆ. ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಹಾಡಿನಲ್ಲಿಯೂ ಕೆಲವು ಎದ್ದು ಕಾಣುವ ದೋಷಗಳಿದ್ದವೆಂದು ಕೆಲವರು ಹೇಳಿದರು. ನಾನು ಎಷ್ಟರ ಮಟ್ಟಿಗೆ ಆ ಗಾಯನದಲ್ಲಿ ಮುಳುಗಿಹೋಗಿದ್ದೆನೆಂದರೆ ನನಗೆ ಒಂದೂ ಗೊತ್ತಾಗಿರಲಿಲ್ಲ. ‘ತಪ್ಪು ನೋಡದೆ ಬಂದೆಯಾ?’ ಕಾರ್ಯಕ್ರಮದಲ್ಲಿ ಹಾಡಲಾದ ಮತ್ತೊಂದು ದಾಸರ ಪದ, ದೇವ ಶ್ರೀಹರಿಯ ಜೊತೆಗೆ, ನನ್ನಂತಹ, ಒಂದೂ ತಪ್ಪುಗಳನ್ನು ಗಮನಿಸದ ಶ್ರೋತೃಗಳಿಗೂ ಅರ್ಪಣೆಯಾದಂತಾಯಿತು.

‘ದೇವ ಬಂದಾ ನಮ್ಮ ಸ್ವಾಮಿ ಬಂದಾ!’ – ಈ ಹಾಡು ಭೀಮಸೇನ ಜೋಷಿಯವರ ಧ್ವನಿಯಲ್ಲೇ ನಾನು ಮೊದಲು ಕೇಳಿದ್ದು. ನಂತರವೂ ಅದೆಷ್ಟು ಬಾರಿ ಕೇಳಿದ್ದೇನೋ ಲೆಕ್ಕವಿಟ್ಟಿಲ್ಲ. ಈ ಹಾಡನ್ನು ಬೇರೆ ದನಿಗಳಲ್ಲೂ ಕೇಳಿದ್ದರೂ ನನಗೆಂದೂ ಅದು ರುಚಿಸಿಲ್ಲ. ಈ ಗಾಯಕ ಅದನ್ನು ಇನ್ನು ಹೇಗೆ ಹಾಡಿ, ಮನದಲ್ಲಿರುವ ಸುಂದರ ಚಿತ್ರವನ್ನು ಮಸುಕಾಗಿಸುತ್ತಾರೋ ಎಂದು ನನಗೆ ಅಳುಕಿತ್ತು. ಇಲ್ಲ! ಹಾಗೇನೂ ಆಗಲಿಲ್ಲ. ಶ್ರೀನಿವಾಸ ಜೋಷಿಯವರು ಹಾಡುತ್ತಿದ್ದರೆ ಮನದಲ್ಲಿ ಭೀಮಸೇನ ಜೋಷಿಯವರೇ ರೂಪತಳೆದುಕೊಳ್ಳುತ್ತಿದ್ದರು. ತಂದೆಯಿಂದ ಮಗನ ಹುಟ್ಟು, ಮಗನ ಮೂಲಕ ತಂದೆ ಇಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತಿರುವ ಈ ಅದ್ಭುತಕ್ಕೆ ಬೆರಗಾದೆ! ಅವಿನಾಶ್ ಡಿಘೆಯವರ ಹಾರ್ಮೋನಿಯಂ, ಪ್ರಶಾಂತ್ ಪಾಂಡವ್ ಅವರ ತಬಲವಾದನ, ಶ್ರೀನಿವಾಸ್ ಅವರ ಸಂಗೀತದ ಮೆರುಗನ್ನು ನಿಸ್ಸಂಶಯವಾಗಿ ಹೆಚ್ಚಿಸಿದ್ದವು.

ಸಂಗೀತದ ನಂತರ, ಭೀಮಸೇನ ಜೋಷಿಯವರ ಬದುಕಿನ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದ ‘ಕಿರುಚಿತ್ರ’ವನ್ನು ಪ್ರದರ್ಶಿಸಲಾಯಿತು. ಅದರಲ್ಲಿ, ಭೀಮಸೇನ ಜೋಷಿಯವರು ಒಂದು ವರ್ಷದ ಪುಟ್ಟ ಮಗುವನ್ನು ಮುದ್ದಾಡುವ, ಆಟವಾಡುವ ದೃಶ್ಯವೊಂದು ಬಂತು. ಅದನ್ನೇ ನೋಡುತ್ತಿದ್ದ ಶ್ರೀನಿವಾಸ ಜೋಷಿಯವರು ತಕ್ಷಣ ಹಿಂತಿರುಗಿ ನಮ್ಮೆಲ್ಲರತ್ತ ನೋಡಿ ‘ಅದು ನಾನೇ!’ ಎಂದು ನಕ್ಕರು. ಕಣ್ಣುಗಳಲ್ಲಿ ಪಿತೃವಾತ್ಸಲ್ಯದ ಒಂದು ಸುಂದರ ನೆನಪಿತ್ತು.

ಸುಂದರ ಸಂಜೆ, ಸೊಗಸಾದ ಔತಣ, ಸಂಗೀತಪ್ರಿಯರೊಡನೆ ಸಂವಾದ! ಬದುಕಿನ ಸಾರ್ಥಕ್ಯಕ್ಕೆ ಸಾಲದೇ?

ತೆರೆಯೋ ಬ್ಲಾಗಿಲನು!

ಒಂದಾನೊಂದು ಕಾಲದಲ್ಲಿ, ಅಂದರೆ ತುಂಬಾ ಹಿಂದೇನಲ್ಲ. ಅದು ಬ್ಲಾಗುಗಳ ಬಾಗಿಲು ತೆರೆದುಕೊಳ್ಳುತ್ತಿದ್ದ ಕಾಲ. ಒಂದೊಂದಾಗಿ, ಕನ್ನಡ ಬ್ಲಾಗುಗಳು ಶುರುವಾಗುತ್ತಿದ್ದವು. ದಿನ ಬೆಳಗಾದರೆ, ಚಂದಚಂದದ ಕಾವ್ಯತ್ಮಕ ಹೆಸರಿನೊಂದಿಗೆ ಹೊಸದೊಂದು ಬ್ಲಾಗ್ ವೆಬ್ ಅಂಗಳದಲ್ಲಿ ಅಂಬೆಗಾಲಿಡುತ್ತಾ ಅಡಿಯಿಡುತ್ತಿತ್ತು ಅಕ್ಷರಗಳ ತೋರಣ ಕಟ್ಟಿದ್ದ, ಆ ಸುಂದರ ಮನೆಗಳಿಗೆ ಹೋಗಿಬರುವುದೆಂದರೆ ನನಗಂತೂ ಖುಷಿಯೋ ಖುಷಿ. ಚಂದದ ಸೀರೆಯುಟ್ಟು, ಅಂದವಾಗಿ ಅಲಂಕರಿಸಿಕೊಂಡು, ಮನೆಯಿಂದ ಮನೆಗೆ ಅರಿಶಿನ-ಕುಂಕುಮಕ್ಕೆ ಹೋಗಿಬರುವ ನವರಾತ್ರಿ ಸಂಜೆಯ ಸಂಭ್ರಮ. ಈ ಫೇಸ್‍ಬುಕ್ಕೆಂಬ ಮಾಯಾವಿ ನಮ್ಮೆಲ್ಲರನ್ನೂ ಆಗ ಇಷ್ಟಾಗಿ ಆವರಿಸಿರಲಿಲ್ಲ. ಹಾಗಾಗಿ, ಪರಸ್ಪರ ಮಾತುಕಥೆಗಿದ್ದ ಅನಿವಾರ್ಯ ಹರಟೆಕಿಟಕಿಗಳಂತಿದ್ದವು ಈ ಬ್ಲಾಗುಗಳು.

ಈ ಬ್ಲಾಗ್ ತಿರುಗಾಟದಲ್ಲಿ ನನ್ನ ನೆನಪಿನ ಸಂಚಿಗೆ ಸೇರಿಹೋದ ಮರೆಯದ ಚಿತ್ರಗಳೆಷ್ಟೋ. ಪರಿಚಿತರಾದ ಹಿರಿಯ/ಕಿರಿಯ ಗೆಳೆಯ-ಗೆಳತಿಯರು ಅದೆಷ್ಟೋ! ಸುಶೃತ, ಶ್ರೀನಿಧಿ, ತೇಜಸ್ವಿನಿ, ಸಿಂಧು, ಜ್ಯೋತಿ, ಮಾಲಾ, ಶಿವು, ಶುಭದಾ, ವೇಣು, ಜಗಲಿ ಭಾಗವತ, ವಿಕ್ರಮ್, ಶಾಂತಲಾ, ಅನ್ವೇಷಿಗಳು, ಚೇತನಾ, ತವಿಶ್ರೀ, ನೀಲಾಂಜನ, ಶ್ರೀಮಾತಾ, ಶ್ರೀದೇವಿ, ಸುರೇಖ, ಸತೀಶ್, ಸುಧನ್ವ, ಸುಶೀಲ್ ಸಂದೀಪ್, ಮಧು… (ಇನ್ನೂ ತುಂಬಾ ಹೆಸರುಗಳಿವೆ…ಈ ಪಟ್ಟಿ ಪರಿಪೂರ್ಣವಲ್ಲವೆಂದು ಗೊತ್ತಿದೆ…) ಒಬ್ಬೊಬ್ಬರ ಬ್ಲಾಗು ಅವರದ್ದೇ ಅರಮನೆ. ಅವರವರ ರುಚಿ-ಅಭಿರುಚಿಗೆ ತಕ್ಕಂತೆ ಬ್ಲಾಗಿನ ಅಲಂಕರಣ. ಒಂದಿದ್ದಂತೆ ಇನ್ನೊಂದಿಲ್ಲ! ಒಂದೊಂದಕ್ಕೂ ಅದರದ್ದೇ ಆದ ಅಂದ-ಚಂದ-ರುಚಿ-ಪರಿಮಳ! ಆ ಬೆರಗಿನ ಲೋಕದಲ್ಲಿ ಏನಿತ್ತು? ಏನಿರಲಿಲ್ಲ?

ಅಲ್ಲೇ ಹೊಸ ಪರಿಚಯಗಳು ಮೊಳಕೆಯೊಡೆಯುತ್ತಿದ್ದವು ; ಸ್ನೇಹಸುಮಗಳು ಅರಳಿ ನಗುತ್ತಿದ್ದವು ; ಮುನಿಸು, ಕಲಹ, ಜಗಳ, ರಗಳೆಗಳಿಗೂ ಅದೇ ವೇದಿಕೆ. ಕೊನೆಗೆ ರಾಜಿ, ಪಂಚಾಯ್ತಿಗಳೂ ಅಲ್ಲೇ ನಡೆಯಬೇಕಿತ್ತು. ನಾವಿನ್ನು ಓದಲು-ಬರೆಯಲು ಮರೆತುಹೋದೆವಾ ಎನ್ನುವ ಕೊರಗನ್ನು ಕೊನೆಯಾಗಿಸುವಂತೆ ಓದಿದಷ್ಟೂ ಮುಗಿಯದ ಬರಹಗಳ ರಾಶಿ ಅಲ್ಲಿತ್ತು. ಅದೊಂದು ಬರಹ ಬೃಂದಾವನವೇ ಸೈ!

ನನ್ನ ತುಳಸಿವನದಲ್ಲಿ ‘ಬೊಗಸೆಯಲ್ಲಿ ಬ್ಲಾಗ್ಸ್’ ವಿಭಾಗದಲ್ಲಿ ಸುಮಾರು ಬ್ಲಾಗುಗಳಿಗೆ ಲಿಂಕ್ ಕೊಟ್ಟಿದ್ದೆ. ಎಷ್ಟೋ ದಿನಗಳ ನಂತರ ನನ್ನ ಬ್ಲಾಗಿನ ಧೂಳು ಕೊಡವಿದಾಗ, ಆ ಲಿಂಕುಗಳನ್ನೆಲ್ಲಾ ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋದೆ. ಕೆಲವು ತೆರೆಯಲೇ ಇಲ್ಲ. ಕೆಲವು ನಿಂತೇ ಹೋಗಿದ್ದವು. ಇನ್ನೂ ಕೆಲವು ಆಗೊಮ್ಮೆ ಈಗೊಮ್ಮೆ ಉಸಿರಾಡುತ್ತಾ ದಿನ ಎಣಿಸುತ್ತಿದ್ದವು. ಓದಿದ ಶಾಲೆಯ ಮುರುಕು ಬೆಂಚಿನ ಮೇಲೆ ಕೂತು ಹಳೆಯ ಗೆಳೆತನವನ್ನು ನೆನೆಯುವಂತೆ, ಎಲ್ಲಾ ಬ್ಲಾಗುಗಳನ್ನು ಒಮ್ಮೆ ಭೇಟಿಯಾಗಿ ‘ಹಾಯ್’ ಹೇಳಿಬಂದೆ. ಈ ಬ್ಗಾಗುಗಳ ಒಡೆಯ/ಒಡತಿಯರು ತಮ್ಮ ಮನೆಗೆ ಮರಳಿಬರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸಿಬಂದೆ.

ನೆನಪಿನಲ್ಲೊಂದು ಚಿತ್ರ

‘ಪುಟ್ಟಣ್ಣಾ, ಇಲ್ಲೇ ಇರ್ತೀಯಾ? ಅಕ್ಕನ ಜೊತೆ ಹೋಗಿ, ಅಲ್ಲಿ…. ಕಾಣ್ತಾ ಇದೆ ನೋಡು. ಆ ಅಂಗಡಿಗೆ ಹೋಗಿ ಈಗ ಬಂದುಬಿಡ್ತೀವಿ. ಬರ್ತಾ ನಿಂಗೆ ಚಾಕಲೇಟ್ ತರ್ತೀವಿ. ಆಯ್ತಾ?’ ತಾಯಿ ನುಡಿದಾಗ ಗುಂಗುರುಗೂದಲ ಪುಟ್ಟನ ಕಣ್ಣುಗಳಲ್ಲಿ ಚಕ್ಕನೆ ಹರವಿಕೊಂಡ ಆಸೆಯ ಕಾಮನಬಿಲ್ಲು. ತನಗೆ ಸಿಗಲಿದ್ದ ಸಿಹಿತುಣುಕಿನ ಆಸೆಗೆ, ತಾಯಿ ಮತ್ತು ತನಗಿಂತ ಸ್ವಲ್ಪ ದೊಡ್ಡವಳಾದ ಅಕ್ಕನ ಜೊತೆ ಹೋಗದೆ, ತಾನು ಮನೆಯಲ್ಲೇ ಉಳಿಯಲು ಒಪ್ಪಿ ತಲೆಯಾಡಿಸಿದ ಪುಟ್ಟ. ಜೊತೆಗೆ, `ನೀನು ದೊಡ್ಡವನಲ್ವಾ? ಮನೆ ನೋಡಿಕೊಳ್ತಾ ಇರು’ ಎಂದು ಅಮ್ಮ ಹೊರಿಸಿದ್ದ ಹೊಣೆಗಾರಿಕೆಯೂ ಆ ಪುಟ್ಟ ಹೆಗಲ ಮೇಲಿತ್ತು.

ಮಗನ ಒಪ್ಪಿಗೆ ಸಿಕ್ಕಿದ್ದೇ ತಡ, ಮಲಗಿದ್ದ ಕಾಯಿಲೆ ಅತ್ತೆಗೆ ಕೂಗಿ ಹೇಳಿ, ಮಗಳ ಕಾಲಿಗೆ ಚಪ್ಪಲಿ ತೊಡಿಸಿ, ‘ಬೇಗ ನಡಿ. ಅವನು ಮನಸ್ಸು ಬದಲಿಸಿ, ನಾನು ಬರ್ತೀನಿ ಅಂತ ಹಟ ತೆಗೆದರೆ ಕಷ್ಟ.’ ಎಂದು ಬಾಗಿಲು ಮುಂದೆ ಹಾಕಿಕೊಂಡು, ಕಾಂಪೋಂಡಿನ ದೊಡ್ಡ ಗೇಟಿಗೂ ಚಿಲುಕ ಸಿಕ್ಕಿಸಿ ಸರಸರ ಹೆಜ್ಜೆ ಹಾಕಿದಳು. ಅವಳಿಗೆ ಪುಟ್ಟನನ್ನು ಜೊತೆ ಕರೆದೊಯ್ಯಬಾರದೆಂದೇನಿಲ್ಲ. ಆದರೆ, ದಷ್ಟಪುಷ್ಟವಾದ ಮಗುವನ್ನು ಸೊಂಟದಲ್ಲಿ ಹೊತ್ತು, ಇನ್ನೊಂದು ಕೈಯಲ್ಲಿ ದಿನಸಿ ತುಂಬಿದ್ದ ಭಾರದ ಚೀಲಗಳನ್ನು ಹೊತ್ತು ನಡೆಯುವುದು ಅವಳಿಗೆ ಕಷ್ಟವಾಗುತ್ತಿತ್ತು. ಅದಕ್ಕೆಂದು ಈ ಉಪಾಯ.

ತುಸುದೂರ ಹೋಗಿ ತಿರುಗಿನೋಡಿದ ಮಗಳು ‘ಅಮ್ಮಾ, ತಮ್ಮಣ್ಣನ್ನ ನೋಡು. ಹೇಗೆ ನಮ್ಮನ್ನೇ ನೋಡ್ತಾ ನಿಂತಿದ್ದಾನೆ. ಪಾಪ… ಅವನ್ನೂ ಕರೆದುಕೊಂಡುಬರಬೇಕಿತ್ತು’ ಎಂದಳು. ಅಮ್ಮ ತಿರುಗಿ ನೋಡಲಿಲ್ಲ. ಅವಳ ಗಮನವೆಲ್ಲ ಒಂಟಿ ಮನೆಯಲ್ಲಿ ಮಲಗಿರುವ ಅತ್ತೆ, ಗೇಟಿಗಾತು ನಿಂತು, ಆರ್ತನಂತೆ ತಮ್ಮ ಹಾದಿ ಕಾಯುತ್ತಿರುವ ಪುಟ್ಟ ಮಗನನ್ನು ಆದಷ್ಟು ಬೇಗ ಸೇರಿಕೊಳ್ಳುವ ತವಕ. ಅದಕ್ಕೆ ಮುಂಚೆ ಅಗತ್ಯ ಪದಾರ್ಥಗಳ ಖರೀದಿಯಾಗಬೇಕು. ಅದಿಲ್ಲದೆ ರಾತ್ರಿ ಅಡುಗೆಯಾಗದು. ಒಂದೇ ಉಸುರಿಗೆ ಬೇಕಾದ್ದನ್ನೆಲ್ಲಾ ಕೊಂಡು, ಮಗನಿಗೆಂದು ಮಾತುಕೊಟ್ಟಿದ್ದ ಚಾಕಲೇಟನ್ನೂ ಕೊಂಡು ಇತ್ತ ತಿರುಗಿದರೆ, ದೂರದಿಂದ ಮಸುಕು ಮಸುಕಾಗಿ ಕಾಣುತ್ತಿದ್ದ ಸ್ಥಿರ ಚಿತ್ರ.

ಎರಡೂ ಕೈಗಳನ್ನು ಗಟ್ಟಿಯಾಗಿ ಗೇಟಿಗಾನಿಸಿ… ಅದೇ ಭಂಗಿಯಲ್ಲಿ… ಕಣ್ಣುಗಳಲ್ಲಿ ಒಂಟಿತನದ ಭಯದ ಜೊತೆಗೆ ಬರಲಿರುವ ಅಮ್ಮ, ಅಕ್ಕನ ನಿರೀಕ್ಷೆ. ಅವರು ತರಲಿರುವ ಸಿಹಿಗಾಗಿ ಕಾಯುತ್ತಿರುವ ಮುಗ್ಧ ಕಣ್ಣುಗಳು. ಎಂದಿನದನ್ನೋ ಇಂದು ನೆನೆಯುತ್ತಿದ್ದರೂ ಅವಳ ಕಣ್ಣುಗಳಲ್ಲೇಕೋ ನೀರು.

ಅವಳು ಬಂದಿದ್ದಳು…

ಕೈತೋಟದಲ್ಲಿ ಗಿಡಗಳ ಪಾತಿಯಲ್ಲಿ ಉದುರಿಬಿದ್ದ ಎಲೆಗಳನ್ನು ಹೆಕ್ಕುತ್ತಿದ್ದೆ. ಹಿಂದೇನೋ ಸದ್ದಾದಂತಾಗಿ ತಿರುಗಿದೆ. ಅವಳು ನಿಂತಿದ್ದಳು. ಕಣ್ಣುಗಳಲ್ಲಿ ವರ್ಷಗಳ ನಿದ್ರೆ ಬಾಕಿ ಇದ್ದಷ್ಟು ಆಯಾಸ. ಮುಖಭಾವ ಎಂದಿನಂತಿರಲಿಲ್ಲ. ಯಾವುದೋ ನಾನರಿಯದ ಸಂಕಟ ಅಲ್ಲಿದ್ದಂತಿತ್ತು. ‘ಅಂತೂ ಬಂದೆಯಾ? ಆ ದಿನ ಅದೇನೋ ಅವಸರವಿದ್ದಂತೆ ಇದ್ದಕ್ಕಿದ್ದಂತೆ ಎದ್ದು ಹೋದವಳು. ಈಗ ತಲೆ ಹಾಕುತ್ತಿದ್ದೀಯಲ್ಲ?’ ಎಂದೆ, ದೂರಿನ ದನಿಯಲ್ಲಿ. ಅವಳು ಅಸಹಾಯಕಳಂತೆ ಮುಖ ಕೆಳಗೆ ಹಾಕಿದಳು. ನನ್ನ ಸಿಟ್ಟು ಇನ್ನೂ ಮುಗಿದಿರಲಿಲ್ಲ. ‘ಎಷ್ಟು ಹಂಬಲಿಸಿದೆ ಗೊತ್ತಾ? ನಿನಗೆ ಹೇಗೆ ಗೊತ್ತಾಗಬೇಕು?’ ಎಂದೆ ಮಾತನ್ನು ಹರಿತವಾಗಿಸುತ್ತ. ಅವಳು ಮಾತಾಡಲಿಲ್ಲ. ಪಾಪ ಅನಿಸಿತು. ‘ಹೋಗಲಿಬಿಡು, ನಿನಗೆ ಬರಬೇಕೆನಿಸಿದರೂ ಅವರು ಬಿಡಬೇಕಲ್ಲ?’ ಎಂದೆ. ಹೌದೆನ್ನುವಂತೆ ಕತ್ತು ಹಾಕಿದಳು. ‘ಮತ್ತೆ, ಅಲ್ಲೆಲ್ಲಾ ಹೇಗಿದೆ? ಏನೂ ತೊಂದರೆಯಿಲ್ಲ ತಾನೇ?’ ಇಲ್ಲವೆನ್ನುವಂತೆ ತಲೆಯಾಡಿಸಿದಳು. ‘ಅದೇನು? ಇದ್ದಕ್ಕಿದ್ದಂತೆ ಬಂದಿದ್ದು?’ ಎಂದೆ. ಅವಳು ‘ನಿನ್ನನ್ನೇ ನೋಡಲು ಬಂದೆ.’ ಎನ್ನುವಂತೆ ಕೈತೋರಿ ನಕ್ಕಳು. ನಕ್ಕಾಗ ಅವಳ ಸುಂದರ ಹಲ್ಲುಗಳು ಹೊಳೆದವು.

ನಾನು ನನ್ನ ಕೆಲಸ ಮುಂದುವರೆಸಿದೆ. ಅವಳು ಅಲ್ಲೇ ಇದ್ದ ಹಾಸುಗಲ್ಲಿನ ಮೇಲೆ ಕುಳಿತಳು. ‘ಮತ್ತೆ, ಇಲ್ಲಿ ನೋಡಬೇಕಾದವರನ್ನೆಲ್ಲಾ ನೋಡಿದ್ದಾಯಿತಾ?’ ಎಂದೆ. ಅವಳು ಹೂಗುಟ್ಟಿದಳು. ಕಣ್ಣು ಯಾಕೋ ಹೊಳೆದಂತಾಯಿತು. ‘ಅಳುತ್ತಿದ್ದಾಳಾ?’ ಎಂದು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದೆ. ಇಲ್ಲ, ಅಳುತ್ತಿರಲಿಲ್ಲ. ಅಲ್ಲಿ ಹೊಳೆದಿದ್ದು ನನ್ನನ್ನು ನೋಡಿದ ಸಣ್ಣ ತೃಪ್ತಿ ಮಾತ್ರ. ‘ಈ ಸಲವಾದರೂ ಒಂದೆರಡು ದಿನ ನನ್ನೊಂದಿಗೆ ಇದ್ದು ಹೋಗಬಹುದಲ್ಲವೇ? ನೀನಿಲ್ಲದಾಗ ಇಲ್ಲಿ ನಡೆದಿದ್ದನ್ನೆಲ್ಲಾ ನಿನಗೆ ಹೇಳಬೇಕು. ನಿನ್ನ ಜೊತೆ ಆಡಬೇಕಾದ ಮಾತು ನೂರಿದೆ. ನೀನೀಗ ಹೋದರೆ ಅವೆಲ್ಲ ಮತ್ತೆ ನನ್ನಲ್ಲೇ ಉಳಿದುಹೋಗುತ್ತವೆ… ಇರುತ್ತೀಯಾ ತಾನೇ?’ ಎಂದೆ ನನ್ನನ್ನೇ ನಂಬಿಸಿಕೊಳ್ಳುವಂತೆ. ಅವಳಿಂದ ಉತ್ತರವಿಲ್ಲ. ‘ಅರೆ… ಇದುವರೆಗೂ ಮಾತಾಡಿದ್ದೆಲ್ಲಾ ನಾನೇ. ಅವಳೇಕೆ ಮಾತಾಡುತ್ತಿಲ್ಲ?’ ಎನ್ನಿಸಿ ಸರಕ್ಕನೆ ತಿರುಗಿದೆ. ಅವಳು ನನಗೆ ಬೆನ್ನು ಹಾಕಿ ಅಲ್ಲಿಂದ ಹೊರಟಾಗಿತ್ತು. ನಾನು ಎದ್ದು ಅವಳನ್ನು ಹಿಂಬಾಲಿಸಿ ಓಡತೊಡಗಿದೆ.

ಪುಸ್ತಕಗಳು ಮರಿ ಹಾಕುತ್ತವೆ!

ಯಾವುದೋ ಪುಸ್ತಕ ಬೇಕೆಂದು ಹುಡುಕುತ್ತಾ, ಬೇಸ್‌ಮೆಂಟಿನಲ್ಲಿದ್ದ ನನ್ನ ಪುಸ್ತಕ ಸಂಗ್ರಹದ ಮುಂದೆ ನಿಂತಿದ್ದೆ. ಹಿಂದೆಂದೋ ಹುಡುಕಿದಾಗ ತಿಪ್ಪರಲಾಗ ಹೊಡೆದರೂ ಸಿಗದಿದ್ದ ಪುಸ್ತಕಗಳೆಲ್ಲಾ ಈಗ ನಾನು ತಾನೆಂದು ಸಿಕ್ಕವು! ಆದರೆ ನನಗೆ ಆಗ ಬೇಕಾಗಿದ್ದ ಪುಸ್ತಕ ಮಾತ್ರ ಕೊನೆಗೂ ಸಿಗಲಿಲ್ಲ. ಮಹಾಭಾರತದಲ್ಲಿ ಕರ್ಣನಿಗೆ ಸಿಕ್ಕ ಶಾಪವನ್ನು ಸ್ವಲ್ಪ ಆಲ್ಟರ್ ಮಾಡಿ, ನನಗೂ ಯಾರೋ ಅದೇ ಶಾಪ ಕೊಟ್ಟಿರಬಹುದೇ ಅಂದುಕೊಂಡೆ. ಅಂದರೆ, ಬೇಕೆನ್ನಿಸಿದಾಗ ಬೇಕಾದ ಪುಸ್ತಕ ಸಿಗದಿರುವುದು! ಶಾಪ-ಕೋಪದ ಮಾತಿರಲಿ, ಪುಸ್ತಕಗಳನ್ನು ನೀಟಾಗಿ ಜೋಡಿಸಿಡದಿದ್ದರೆ ಏಳೇಳು ಜನುಮಕ್ಕೂ ನನಗೆ ಇದೇ ಗತಿಯೆನ್ನಿಸಿತು.

ಪುಸ್ತಕಗಳಿಗೆಂದು ನಾನು ಮೀಸಲಿಟ್ಟಿದ್ದ ಜಾಗ ಎಂದೋ ಭರ್ತಿಯಾಗಿ ಹೋಗಿದ್ದರಿಂದ, ಅವು ಸುತ್ತಮುತ್ತಲಿದ್ದ ಜಾಗಗಳಲ್ಲೆಲ್ಲಾ ವ್ಯಾಪಿಸಿಕೊಂಡಿದ್ದವು. ದೊಡ್ಡ ಟಿವಿ ಬದಿಯಿದ್ದ ಡಿವಿಡಿ ಸ್ಟಾಂಡಿನಲ್ಲಿ ಕೆಲವು, ನನ್ನವನ ಕಂಪ್ಯೂಟರ್ ಟೇಬಲ್ಲಿನ ಕಾಲಿನ ಕೆಳಗೆ ‘ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ’ ಎಂದು ಆಶ್ರಯ ಪಡೆದಿರುವ ಮತ್ತೆ ಕೆಲವು, ಅಡುಗೆ ಮನೆಯ ಕೌಂಟರ್ ಟಾಪಿನಲ್ಲಿ ಕೆಲವು, ಭಾರತ ಪ್ರವಾಸ ಮುಗಿಸಿಕೊಂಡು ಬಂದು ಬಿಸಾಕಿದ ಖಾಲಿ ಸೂಟುಕೇಸುಗಳಲ್ಲಿ ಹಲವು. ಆ ಸೂಟ್‌ಕೇಸುಗಳನ್ನು ನಾನು ತೆರೆದು ನೋಡುವುದು ಮುಂದಿನ ಟ್ರಿಪ್ಪಿಗೆ ನಾನು ಟಿಕೆಟ್ ಬುಕ್ ಮಾಡಿದ ನಂತರವೇ ಆದ್ದರಿಂದ ಅಲ್ಲಿಯವರೆಗೆ ಅದರಲ್ಲಿರುವ ಪುಸ್ತಕಗಳೆಲ್ಲ ನನ್ನ ಪಾಲಿಗೆ ಇದ್ದೂ ಇಲ್ಲದವು. ಅವರದೇ ಆದ ಹೆಸರಿದ್ದರೂ ನಮಗೆಂದೂ ತಿಳಿದಿರದ ಅನಾಮಿಕರಂತೆ. ಕೆಲವು ಪುಸ್ತಕಗಳನ್ನು ನಾನು ನಮ್ಮ ಕಾರಿನಲ್ಲಿಯೂ ಇರಿಸಿಕೊಂಡಿದ್ದೇನೆ. ಅವು ಎಲ್ಲಿಗಾದರೂ ಲಾಂಗ್ ಡ್ರೈವ್ ಹೋಗುವಾಗ, ಮಾರ್ಗ ಮಧ್ಯೆ ಓದಿ ಮುಗಿಸುವುದೆಂದು ದೂರಾಲೋಚನೆಯಿಂದ ಇಟ್ಟಂಥವು! ಪ್ರಯಾಣದಲ್ಲಿ ಹರಟುತ್ತ, ಹಾಡು ಕೇಳುತ್ತಾ, ಐಫೋನ್, ಐಪ್ಯಾಡುಗಳ ಜಾಲಜಾಲಾಟಗಳಲ್ಲಿ ನನ್ನ ಬಹುಪಾಲು ಸಮಯ ಕಳೆದುಹೋಗುವುದರಿಂದ ಆ ಪುಸ್ತಕಗಳೆಲ್ಲ ರಾಮಪಾದ ಸ್ಪರ್ಶಕ್ಕಾಗಿ ಕಾದಿದ್ದ ಅಹಲ್ಯೆಯಂತೆ ತಮ್ಮ ಶಾಪ ವಿಮೋಚನೆಗಾಗಿ ಇನ್ನೂ ಕಾಯುತ್ತಲೇ ಇವೆ.

ಇದಲ್ಲದೆ, ನನ್ನ ಮಕ್ಕಳು ತಮ್ಮ ಟೆಕ್ಟ್ ಬುಕ್ಕುಗಳ ನಡುವೆ ಅಡಗಿಕೊಂಡಿರುವ ನನ್ನ ಪುಸ್ತಕಗಳನ್ನು ಆಗಾಗ ಪತ್ತೆ ಮಾಡಿ ಕೊಡುವುದುಂಟು. ‘ಅಮ್ಮಾ… ನಿನ್ನ ಪುಸ್ತಕ ಇಲ್ಲಿದೆ ನೋಡು… ‘ಸ…ಮ…ಗ್ರ… ಕಥೆಗಳು – ಎಚ್. ಎಸ್. ವೆಂಕಟೇಶಮೂರ್ತಿ, ಹಸಿರು ಹೊನ್ನು – ಬಿ. ಜಿ. ಎಲ್. ಸ್ವಾಮಿ,.,’ ಎಂದು ಜೋರಾಗಿ ಓದಿ, ನನ್ನಲ್ಲಿ ಇದೆಯೆಂದು ನೆನಪಿನಲ್ಲೇ ಇರದ ಪುಸ್ತಕಗಳನ್ನು ತಂದು ಕಣ್ಣೆದುರು ಹಿಡಿಯುವುದಿದೆ. ‘ಇರವು ಮುಖ್ಯವಲ್ಲ, ಇರವಿನ ಅರಿವು ಮುಖ್ಯ’ ಅನ್ನುವ ಬನ್ನಂಜೆಯವರ ನುಡಿ ಅದೆಷ್ಟು ಸತ್ಯ! ಪುಸ್ತಕಗಳ ಶೀರ್ಷಿಕೆಗಳನ್ನು ಮಾತ್ರ ಓದಬಲ್ಲಷ್ಟು ಕನ್ನಡ ಜ್ಞಾನವಿರುವ ಮಕ್ಕಳು ಹೀಗೆ ಅಕ್ಷರಗಳನ್ನು ಕೂಡಿಸಿಕೊಂಡು ಓದುವಾಗ ಕೇಳಲು ಬಹಳ ಖುಷಿ ನನಗೆ. ಒಮ್ಮೆ, ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದೆ. ಮಗಳು, ‘ಅಮ್ಮಾ… ನೋಡಿಲ್ಲಿ, ‘ನಾಗರ… ಹಾವು…’ ಎಂದು ಜೋರಾಗಿ ಕೂಗಿಕೊಂಡಳು. ಹಾವು ಎಂದರೆ ಹುಲಿಗಿಂತಲೂ ಹೆಚ್ಚು ಹೆದರುವ ನಾನು ‘ಎಲ್ಲಿ… ಎಲ್ಲಿ?…’ ಎಂದು ಕಂಗಾಲಾಗಿ ಓಡಿ ಬಂದರೆ, ಗೆಳೆಯರೊಬ್ಬರ ಮನೆಯಲ್ಲಿ ಅಂದು ಕಾಣಿಸಿದ್ದ ‘ನಾಗರಹಾವು’ ಅಲ್ಲಿತ್ತು!

‘ಇರಲಾರದೆ ಇರುವೆ ಬಿಟ್ಟುಕೊಂಡರು’ ಅನ್ನುತ್ತಾರಲ್ಲ ಹಾಗೆ, ನಮ್ಮೂರಿನಲ್ಲಿದ್ದ ಪುಟ್ಟ ಲೈಬ್ರರಿಯಿಂದ ತಂದು, ಎಂದೋ ಓದಿದ್ದ ತರಾಸು ಅವರ ಈ ಪುಸ್ತಕವನ್ನು ಗೆಳೆಯರೊಬ್ಬರ ಮನೆಯಲ್ಲಿ ಕಂಡೆ. ಅದನ್ನು ನೋಡಿ ಮನಸ್ಸಿನಲ್ಲಿದ್ದ ಹಳೆಯ ಮಧುರ ನೆನಪುಗಳೆಲ್ಲಾ ಮೇಲೆದ್ದುಬಂದು, ಅದನ್ನು ಮತ್ತೆ ಓದಬೇಕೆನ್ನುವ ಆಸೆಯಿಂದ ಅವರಿಂದ ಕಡ ತಂದು ಇಟ್ಟಿದ್ದಷ್ಟೆ. ಆಮೇಲೆ ಅದನ್ನು ಎಲ್ಲಿಟ್ಟಿದ್ದೆನೊ ಏನೋ ಆ ಕ್ಷಣದವರೆಗೂ ಕೈಗೂ ಸಿಕ್ಕಿರಲಿಲ್ಲ, ಓದಿರಲೂ ಇಲ್ಲ. ಗೆಳೆಯರು ಕಂಡಾಗಲೆಲ್ಲ, ಇನ್ನೂ ನಾನು ಆ ಪುಸ್ತಕ ಹಿಂತಿರುಗಿಸಿಲ್ಲವೆಂದು ನೆನಪಿಸುತ್ತಿದ್ದರು. ನನ್ನ ಗ್ರಹಚಾರಕ್ಕೆ, ವರ್ಷಗಳಿಂದ ಮುಟ್ಟಿಯೂ ನೋಡದ ಆ ಪುಸ್ತಕವನ್ನು ಈಗಲೇ ಓದುವ ಬಯಕೆ ಅವರಿಗೂ. ನಾನು ಏನೇನೋ ಸಬೂಬುಗಳನ್ನು ಹೇಳಿಕೊಂಡು ಕಾಲಕಳೆದೆ. ಕೊನೆಗೆ, ‘ಆ ಪುಸ್ತಕ ನಮ್ಮ ಮನೆಯಲ್ಲಿ ಇದ್ದಿದ್ದರೆ ಖಂಡಿತ ನನಗೆ ಕಾಣಿಸಿರುತ್ತಿತ್ತು, ಇಲ್ಲ ಎಂದರೆ, ಅದನ್ನು ನಿಮಗೆ ಎಂದೋ ನಾನು ವಾಪಸ್ ಕೊಟ್ಟಿರಬೇಕು. ನಿಮ್ಮ ಮನೆಯಲ್ಲೇ ಒಮ್ಮೆ ಹುಡುಕಿ ನೋಡಿ.’ ಎಂದು ದಬಾಯಿಸಿದೆ. ಪಾಪ! ಅವರೂ ನನ್ನಂತೆ ಮರೆವಿನ ಆಸಾಮಿಯೇ ಇರಬಹುದು, ‘ಓಹೋ ಹೌದಾ! ಇರಬಹುದು, ಇರಬಹುದು. ನನ್ನ ನೆನಪಿನ ಶಕ್ತಿ ನಿಮ್ಮಷ್ಟು ಚೆನ್ನಾಗಿಲ್ಲ ಬಿಡಿ.’ ಅಂದುಕೊಂಡು ಸುಮ್ಮನಾಗಿಬಿಟ್ಟಿದ್ದರು. ಈಗ ನೋಡಿದರೆ ಅದೇ ‘ನಾಗರಹಾವು’ ಇಲ್ಲಿ, ಪ್ರತ್ಯಕ್ಷವಾಗಿತ್ತು. ಆಮೇಲೆ ಅವರಿಗೆ ಇನ್ನೇನೋ ಸಮಜಾಯಿಷಿ ಕೊಟ್ಟು ಅದನ್ನು ಹಿಂತಿರುಗಿಸಿದ್ದಾಯಿತು.

ಹೀಗೆ, ಅಲ್ಲಷ್ಟು ಇಲ್ಲಷ್ಟು ಎಂದು ಜಾಗ ಸಿಕ್ಕಲ್ಲೆಲ್ಲಾ ನನ್ನ ಪುಸ್ತಕಗಳು ಅಕ್ರಮ ವಲಸೆಗಾರರಂತೆ ಹರಡಿಹೋಗಿಬಿಟ್ಟಿವೆ. ಕರ್ನಾಟಕ ಸರಕಾರದ ‘ಅಕ್ರಮ-ಸಕ್ರಮ’ ಯೋಜನೆಯಂತೆ, ನಾನೂ ಕೂಡ ಏನಾದರೂ ಯೋಜನೆ ಕೈಗೊಂಡು ಇವುಗಳನ್ನು ಒಂದು ಕ್ರಮದಲ್ಲಿರಿಸಲೇ ಎಂದುಕೊಂಡೆ. ಹಾಗಂದುಕೊಳ್ಳುತ್ತಿದಾಗಲೇ, ಅರೆ… ಇಷ್ಟೊಂದು ಪುಸ್ತಕಗಳು ಅದೆಲ್ಲಿಂದ ಬಂದವು? ನಾನು ಯಾವಾಗ, ಹೇಗೆ ತಾನೇ ಇಷ್ಟೊಂದು ಪುಸ್ತಕಗಳನ್ನು ಸಂಗ್ರಹಿಸಿದೆ? ವಿಮರ್ಶಕರ ಮನೆಯಂತೆ ನನ್ನ ಮನೆಯಲ್ಲೇಕೆ ಇಷ್ಟೊಂದು ಪುಸ್ತಕಗಳು ಬಂದು ಬಿದ್ದುಕೊಂಡಿವೆ? ಪತ್ರಿಕಾ ಕಛೇರಿಗಳಲ್ಲಿ, ಸಾದರ ಸ್ವೀಕಾರಕ್ಕೆಂದು ಕಳಿಸಿ ರಾಶಿ ಬಿದ್ದಿರುವ ಪುಸ್ತಕಗಳಂತೆ ನನ್ನ ಮನೆಗೆ ಇಷ್ಟೊಂದು ಪುಸ್ತಕಗಳು ಅದೆಲ್ಲಿಂದ, ಯಾವಾಗ ಬಂದು ದಾಂಗುಡಿಯಿಟ್ಟವು? ಯಾರು ಜೀವವೇ? ಯಾರು ತಂದವರು? ಇವುಗಳನ್ನೆಲ್ಲಾ ಎಂದಿಗಾದರೂ ಓದಿ ಮುಗಿಸಿಯೇನೇ? ಎಂಬೆಲ್ಲಾ ಯೋಚನೆಗಳು ಮುತ್ತಿಕೊಂಡವು.

ಈ ಪುಸ್ತಕ ಸಂತೆಯಲ್ಲಿ ಏನುಂಟು ಏನಿಲ್ಲ? ಗೆಳೆಯರು ತಮ್ಮ ಪುಸ್ತಕ ಪ್ರಕಟಿಸಿದಾಗ, ತಮ್ಮ ಸಹಿಯೊಂದಿಗೆ ಸಂದೇಶ ಬರೆದು ಕಳಿಸಿಕೊಟ್ಟಿರುವ ಪ್ರೀತಿ ತುಂಬಿದ ಪುಸ್ತಕಗಳು, ನಮ್ಮ ಪೆಜತ್ತಾಯರು ನನಗೆಂದೇ ಆರಿಸಿ ಕಳಿಸಿಕೊಟ್ಟಿರುವ ಕೆಲವು ಅಪರೂಪದ ಪುಸ್ತಕಗಳು, ದೇಶಕಾಲದ ಸಂಚಿಕೆಗಳು, ನಾನೇ ಪ್ರತಿಬಾರಿ ಭಾರತಕ್ಕೆ ಹೋದಾಗ, ‘ಅಂಕಿತ’, ‘ಸ್ವಪ್ನ’ದಲ್ಲಿ ಜಾಲಾಡಿ ತಂದೊಟ್ಟಿಕೊಂಡಿರುವ ನನ್ನದೇ ಆಯ್ಕೆ, ಅಭಿರುಚಿಯ ಪುಸ್ತಕಗಳು, ಅಕ್ಕ ಸಮ್ಮೇಳನ, ವಿವಿಧ ಜಾತಿ, ಧರ್ಮಗಳು ನಡೆಸುವ ಸಮ್ಮೇಳನಗಳ ಸ್ಮರಣ ಸಂಚಿಕೆಗಳು. ವಿವಿಧ ಕನ್ನಡಕೂಟಗಳ ಸಂಚಿಕೆಗಳು.., ಇದರ ಜೊತೆಗೆ ನನ್ನದೇ ಸಂಪಾದಕತ್ವದಲ್ಲಿ ಹೊರಬಂದಿರುವ ‘ಸಂಗಮ’ ಸಂಚಿಕೆಗಳ ಬಹುದೊಡ್ಡ ದಾಸ್ತಾನೇ ಇಲ್ಲಿದೆ. ಇದಲ್ಲದೆ, ಈ ಊರು ಬಿಟ್ಟು ಬೇರೆ ರಾಜ್ಯ ಅಥವಾ ದೇಶಕ್ಕೆ ನೆಲೆಸಲು ಹೋಗುವ ನಮ್ಮ ಅನೇಕ ಕನ್ನಡಿಗ ಮಿತ್ರರು, ಮನೆಯ ಎಲ್ಲಾ ಸಾಮಾನುಗಳನ್ನು ಸಾಗಿಸಿ, ಕೊನೆಗೆ ವಿಲೇವಾರಿಯಾಗದೆ ಉಳಿಯುವ ಕನ್ನಡ ಪುಸ್ತಕಗಳನ್ನು ಹೊತ್ತೊಯ್ಯಲು ಸಾಧ್ಯವಾಗದೆ, ಬಿಸಾಡಲೂ ಮನಸ್ಸಾಗದೆ, ಆ ಪುಸ್ತಕಗಳಿಗೆ ನಾನೇ ಯೋಗ್ಯ ವಾರಸುದಾರಳೆಂದು ನಿರ್ಧರಿಸಿ, ಕರೆದು ದಾನವಾಗಿ ಕೊಟ್ಟವೂ ಹಲವಾರಿವೆ. ಇಲ್ಲಿಂದ ರಜೆಗೆಂದು ಭಾರತಕ್ಕೆ ಹೋಗುವ ನನ್ನ ಆತ್ಮೀಯ ಸ್ನೇಹಿತರು ಅಲ್ಲಿಂದ ಬರುವಾಗ, ನನಗೆ ಉಡುಗೊರೆಯಾಗಿ ಪುಸ್ತಕಗಳನ್ನು ತಂದುಕೊಡುವುದಿದೆ. ಭೈರಪ್ಪನವರ ‘ಕವಲು, ಆವರಣ’ ಬಿಡುಗಡೆಯಾದಾಗ, ಅವುಗಳ ಕೆಲವಾರು ಪ್ರತಿಗಳು ಈರೀತಿಯಾಗಿ ನನಗೆ ದೊರಕಿದವು. ಭೈರಪ್ಪನವರ ಈ ಪುಸ್ತಕಗಳು ಬಹು ಮುದ್ರಣ ಕಂಡಿರುವುದರ ಹಿಂದೆ ನನ್ನ ಅಳಿಲು ಸೇವೆಯ ಪಾಲು ಇರುವುದು ಖಂಡಿತ ಅವರಿಗೂ ಗೊತ್ತಿರಲಿಕ್ಕಿಲ್ಲ!

ನನ್ನ ಆಶ್ಚರ್ಯಕ್ಕೆ ಕಾರಣವೂ ಇದೆ. ಹದಿಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಮನೆಯನ್ನು ಅವಸರದಲ್ಲಿ ಖಾಲಿ ಮಾಡಿಕೊಂಡು, ಇಬ್ಬರು ಪುಟ್ಟ ಮಕ್ಕಳೊಂದಿಗೆ ವಿಮಾನ ಹತ್ತಿದವಳು ನಾನು. ಮನೆ ತುಂಬಾ ಹರಡಿಬಿದ್ದಿದ್ದ ನನ್ನೆಲ್ಲಾ ಆಪ್ತ ವಸ್ತುಗಳ ನಡುವೆ ಏನು ಕೊಳ್ಳಲಿ? ಬಿಡಲಿ? ಎಂದು ದಿಗ್ಭ್ರಮೆಯಿಂದ ನಿಂತಿದ್ದು ಈಗಲೂ ನೆನಪಿದೆ. ತೀರಾ ಬೇಕೆನ್ನಿಸಿದ ಪುಸ್ತಕಗಳನ್ನು, ಅದೂ ಎರಡು ಸೂಟ್‌ಕೇಸುಗಳಲ್ಲಿ ಇತರ ಅಗತ್ಯ ವಸ್ತುಗಳ ಜೊತೆಗೆ ಹಿಡಿಯುವಷ್ಟನ್ನು ಮಾತ್ರ ತುಂಬಿಕೊಂಡು ಅಮೆರಿಕದ ನೆಲದ ಮೇಲೆ ಕಾಲಿಟ್ಟಿದ್ದೆ. ನನ್ನಲ್ಲಿದ್ದ ಪುಸ್ತಕಗಳಲ್ಲಿ, ಎಲ್ಲವನ್ನೂ ತರಲು ಸಾಧ್ಯವಿಲ್ಲದ್ದರಿಂದ ಎಲ್ಲವನ್ನೂ ತೆಗೆದುಕೊಂಡುಹೋಗಿ ಅಕ್ಕನ ಮನೆಯ ಕಪಾಟಿನಲ್ಲಿ ನೀಟಾಗಿ ಜೋಡಿಸಿಟ್ಟು, ನಾನು ಬಂದು ಕೇಳುವರೆಗೂ ಜೋಪಾನವಾಗಿಟ್ಟಿರಿ ಎಂದು ಆರ್ತವಾಗಿ ಮೊರೆಯಿಟ್ಟಿದ್ದೆ. ನಾನು ಬಂದು ಅವುಗಳನ್ನು ಮತ್ತೆ ಒಯ್ಯುವ ಭರವಸೆ ಅವರಲ್ಲಿ ಅದೆಷ್ಟಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಅಕ್ಕ-ಬಾವ ನನ್ನನ್ನು ಕರುಣೆಯಿಂದ ನೋಡುತ್ತಾ- ‘ಈ ಪುಸ್ತಕಗಳನ್ನು ನಾವು ಯಾರಾದರೂ ಓದಿದರೆ ತಾನೇ ಹಾಳಾಗಕ್ಕೆ? ನೀನು ಕೊಟ್ಟಿರುವ ಹಾಗೇ ಇರತ್ತೆ ಬಿಡು. ಯೋಚಿಸಬೇಡ.’ ಎಂದು ನುಡಿದಿದ್ದರು. ಅವರ ಕಪಾಟಿನ ತುಂಬಾ ತುಂಬಿದ್ದ ವೇದ-ವೇದಾಂತಕ್ಕೆ ಸಂಬಂಧಿಸಿದ ಘನ ಗಾಂಭೀರ್ಯದ ಪುಸ್ತಕಗಳ ಜೊತೆಗೆ, ನನ್ನಲ್ಲಿದ್ದ ತೀರಾ ಲೌಕಿಕವೆನ್ನಿಸುವ ಪುಸ್ತಕಗಳೂ ಸೇರಿ ಅಲ್ಲೊಂದು ಅಪೂರ್ವ ಸಂಗಮವೇರ್ಪಟ್ಟಿತ್ತು!

ಅಳೆದೂ ಸುರಿದು, ಹೆಚ್ಚು ಭಾರವಾಗದ, ನನಗೆ ಅತಿ ಮಹತ್ವವೆನ್ನಿಸಿದ ಕೆಲವೇ ಪುಸ್ತಕಗಳನ್ನು ಮಾತ್ರ ನನ್ನೊಡನೆ ತಂದಿದ್ದೆ. ಕನ್ನಡದ ಭಗವದ್ಗೀತೆ ಎಂದು ಹೆಸರಾದ ನನ್ನ ಅಚ್ಚುಮೆಚ್ಚಿನ ‘ಮಂಕುತಿಮ್ಮನ ಕಗ್ಗ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಪುರಂದರದಾಸರ ಪದಗಳು’, ‘ಹರಿಕಥಾಮೃತಸಾರ’, ನನ್ನ ಕಥೆ-ಕವನಗಳು ಪ್ರಕಟವಾಗಿದ್ದ ಕೆಲವು ಮಾಸಿಕ, ಪತ್ರಿಕೆಗಳು, ಎಂದಾದರೂ ನನ್ನಲ್ಲಿದ್ದ ಅಗಾಧ ಸೋಮಾರಿತನ ಕಳೆದರೆ ಕಲಿತಿದ್ದ ಹೊಲಿಗೆ ಮುಂದುವರೆಸಲು ಅನುಕೂಲವಾಗಲೆಂಬ ಮುಂದಾಲೋಚನೆಯಿಂದ ‘ಹೊಲಿಗೆ ಪುಸ್ತಕ’, ‘ಹೊಸರುಚಿ’ ಇತ್ಯಾದಿ… ಹೀಗೆ ಆಗ ತೀರಾ ಅಗತ್ಯವೆನ್ನಿಸಿದ್ದ ಕೆಲವೇ ಕೆಲವು… ಖಂಡಿತ, ನನ್ನನ್ನು ನಂಬಿ, ಇಷ್ಟನ್ನೇ ಅಂದು ನಾನು ಹೊತ್ತು ತಂದಿದ್ದು. ಈಗ ನೋಡಿದರೆ, ಆ ಒಂದೊಂದು ಪುಸ್ತಕವೂ ಗರ್ಭ ಧರಿಸಿ ನೂರಾರು ಮರಿಗಳನ್ನಿಟ್ಟಿದೆಯೋ ಎಂಬಂತೆ ನನ್ನ ಪುಸ್ತಕಗಳ ಸಂಗ್ರಹ ಬೃಹತ್ತಾಗಿ ಬೆಳೆದುಬಿಟ್ಟಿದೆ. ‘ಎರಡು ಹೆಜ್ಜೆಯಿಟ್ಟಾಯಿತು, ಇನ್ನು ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಹೇಳು?’ ಎಂದು ಬಲಿಯನ್ನು ಪ್ರಶ್ನಿಸಿದ ವಾಮನನಂತೆ ನನ್ನನ್ನು ಕೇಳುತ್ತಿರುವ ಈ ಪುಸ್ತಕಗಳಿಗೆ ಕೊಡಲು ಉತ್ತರವನ್ನು ನಾನು ಇನ್ನಷ್ಟೇ ಹುಡುಕಬೇಕಾಗಿದೆ.

************

ಚುಕ್ಕುಬುಕ್ಕು ತಾಣದಲ್ಲಿ ಪ್ರಕಟವಾದ ಬರಹ, ಲಿಂಕ್ ಇಲ್ಲಿದೆ:-

*

ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ ಇಂದು ದೂರಾಗುವುದು ಹೇಗೆ’ ಹಾಗೆ… ಹೀಗೆ… ಎಂದೆಲ್ಲಾ ಗಂಭೀರ ಚಿಂತನೆಯಲ್ಲಿ ಮುಳುಗಿ ಹೋಗಿರುವಾಗ, ನನ್ನ ಮಂಕು ಮಂಡೆಯಲ್ಲಿ ಸುಳಿದಾಡುತ್ತಿರುವ ವಿಷಯವೇನು ಗೊತ್ತಾ? – ಮಾತಾಡದೆ ಇರುವುದು ಹೇಗೆ? ಆಡಿದರೂ ಕಡಿಮೆ ಮಾತಾಡುವುದು ಹೇಗೆ?

ಮೊಬೈಲುಗಳಲ್ಲಿ, ಮೀಟಿಂಗುಗಳಲ್ಲಿ, ವೇದಿಕೆಗಳಲ್ಲಿ, ರೇಡಿಯೊ, ಟಿವಿಗಳ ಟಾಕ್ ಶೋಗಳಲ್ಲಿ, ಮೆಗಾ ಫೈಟುಗಳೆಂಬ ಹರಟೆ ಕಟ್ಟೆಗಳಲ್ಲಿ ಇಡೀ ಜಗತ್ತೇ ಮಾತಾಡಿ ದಣಿದುಹೋಗುತ್ತಿರುವಾಗ ನಾನೊಬ್ಬಳು ಮಾತು ಕಡಿಮೆ ಮಾಡೋದರಿಂದ ಏನು ಪ್ರಯೋಜನವಿದೆ? ಅದರಿಂದೇನಾದರೂ ಮಾತಿನ ಮಾಲಿನ್ಯದಿಂದಾಗಿ ಬಿಸಿಯೆದ್ದು ಹೋಗುತ್ತಿರುವ ಪರಿಸರದಲ್ಲೇನಾದರೂ ಸುಧಾರಣೆಯಾಗುವುದೇ? ಮಾತಾಡಿ ಮರುಳು ಮಾಡುವವರು ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಹಾಗೆ ಮಾತಾಡದವರಿಗೂ ಏನಾದರೂ ಪುರಸ್ಕಾರ ನೀಡಲಾಗುತ್ತದೆಯೇ? ಅಥವಾ, ಮಾತಾಡುವರೆಲ್ಲ ನನ್ನಿಂದ ಸ್ಫೂರ್ತಿ ಪಡೆದು ಮೌನದ ಹಾದಿ ಹಿಡಿಯುತ್ತಾರಾ? ಇದಾವುದೂ ಆಗುವುದಿಲ್ಲವೆಂದು ನನಗೂ ಗೊತ್ತಿದೆ. ಆದರೂ ಆ ದಿಸೆಯಲ್ಲಿ ನಾನೊಂದು ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲವೆಂದುಕೊಳ್ಳುತ್ತೇನೆ.

ಮಾತು ಕಡಿಮೆ ಮಾಡುತ್ತಿದ್ದೇನೆ ಎಂದ ಕೂಡಲೆ, ನೀವೆಲ್ಲರೂ ನಾನು ಯಾರೋ ಭಾರಿ ಮಾತುಗಾತಿ ತಿನ್ನಿಸಿದ ‘ಬಜೆ-ಬೆಣ್ಣೆ’ ಸವಿದು ಬೆಳೆದಿರುವ ಹುಟ್ಟು ವಾಚಾಳಿಯೆಂದು ಭಾವಿಸಬೇಕಾಗಿಲ್ಲ. ಮಾತು ನನ್ನ ಹುಟ್ಟುಗುಣವಂತೂ ಅಲ್ಲವೇ ಅಲ್ಲ. ನನ್ನನ್ನು ಚಿಕ್ಕಂದಿನಿಂದಲೂ ಬಲ್ಲವರು ಈಗ ನನ್ನನ್ನು ನೋಡಿದರೆ ಅವರ ಬಾಯಿಂದ ಮೊದಲು ಹೊರಡುವ ಆಶ್ಚರ್ಯಕರ ಉದ್ಗಾರವೆಂದರೆ -‘ನೀನು ಮೊದಲು ಹೀಗಿರಲಿಲ್ಲ ಬಿಡು. ಆಗೆಲ್ಲಾ ಮಾತೇ ಆಡದೆ ಮುಷುಂಡಿಯಂತೆ ಇರುತ್ತಿದ್ದೆ. ಈಗ ತುಂಬಾ ಮಾತು ನಿನ್ನದು.’ ಆ ನುಡಿಗಳ ಹಿಂದೆ ನನ್ನಲ್ಲಾದ ಬದಲಾವಣೆಯನ್ನು ನಿಖರವಾಗಿ ಗುರುತಿಸಿಬಿಟ್ಟ ಹೆಮ್ಮೆಯೋ, ಮೌನದ ಬಂಗಾರವನ್ನು ತಿಪ್ಪೆಗೆ ಬಿಸಾಕಿ, ಮಾತಿನ ಬೆಳ್ಳಿಯನ್ನು ಅವುಚಿ ಹಿಡಿದುಕೊಂಡಿರುವ ನನ್ನ ಬಗ್ಗೆ ಮರುಕವಿರುತ್ತದೆಯೋ ನನಗಿನ್ನೂ ಗುರುತಿಸಲಾಗಿಲ್ಲ. ಅದೇನೇ ಇರಲಿ, ಆ ಮಾತುಗಳಂತೂ ನೂರಕ್ಕೆ ನೂರು ನಿಜ.

ನಾನು ರಜೆಯಲ್ಲಿ ಹೋಗಲು ಇಷ್ಟಪಡುತ್ತಿದ್ದ ಜಾಗವೆಂದರೆ ನನ್ನ ಅಕ್ಕನ ಮನೆಯೊಂದೇ. ಆ ಕಾಲದಲ್ಲಿ ಬೆಂಗಳೂರಿನ ಹೊರಗಿದೆ ಎನಿಸಿಕೊಂಡಿದ್ದ ಜೀವನಭೀಮಾ ನಗರದಲ್ಲಿ ಅವರು ನೆಲೆಸಿದ್ದೇ ಅದಕ್ಕೆ ಮುಖ್ಯ ಕಾರಣ. ಬಸವನಗುಡಿ, ಚಾಮರಾಜಪೇಟೆಗಳ ಸುತ್ತಮುತ್ತ ಬೆಲ್ಲಕ್ಕೆ ಮುತ್ತಿಕೊಂಡ ಇರುವೆಗಳಂತೆ ನೆಲೆಸಿದ್ದ ನಮ್ಮ ನೆಂಟರಿಷ್ಟರು ಆ ಕಾಲಕ್ಕೇ ತಮಿಳರ ಪಾಳ್ಯವಾಗಿಹೋಗಿದ್ದ ಅಲಸೂರು ಬಡಾವಣೆಯನ್ನು ದಾಟಿಕೊಂಡು ಇತ್ತ ಬರಲು ಅಷ್ಟೇನೂ ಇಷ್ಟಪಡುತ್ತಿರಲಿಲ್ಲ. ನಮ್ಮ ಅಜ್ಜಿಯದಂತೂ ಪ್ರತಿ ಬಾರಿ ಬಂದಾಗಲೂ ಅದೇ ರಾಗ ಅದೇ ಹಾಡು. ಆಟೋ ಇಳಿಯುತ್ತಲೇ, ‘ಅಲ್ಲವೇ ವಸಂತಿ, ಬಾಡಿಗೆಗೆ ಮನೆ ಹಿಡಿಯೋದಕ್ಕೆ ನಿಮಗೆ ಇದೇ ಬಡಾವಣೆಯೇ ಆಗಬೇಕಾಗಿತ್ತೇ? ಏನೋ ನಮ್ಮವರು ತಮ್ಮವರು ಅಂತ ಇದ್ದರೆ ಅವರೊಡನೆ ನಾಲ್ಕು ಮಾತಾಡಿಕೊಂಡಿದ್ದರೆ ಬೇಜಾರು ಕಳೆದಿರುತ್ತಿತ್ತು. ಹೋಗಿಹೋಗಿ ನಮ್ಮ ಭಾಷೆಯೇ ಬರದ ಈ ಕೊಂಗಾಟಿಗಳ ನಡುವೆ ಮನೆ ಮಾಡಿದ್ದೀರಲ್ಲೇ’ ಎಂದು ಮೊಮ್ಮಗಳು ಮತ್ತು ಸೊಸೆ ಎರಡೂ ಆಗಿದ್ದ ಅಕ್ಕನ ಮುಂದೆ ಹಲುಬದಿದ್ದ ದಿನವಿಲ್ಲ. ನಾನು ‘ಅಯ್ಯೊ, ಸಾಕು ಸುಮ್ಮನಿರಜ್ಜಿ. ನೀನು ಹೇಳೋ ಹಾಗೆ ನೆಂಟರಿಷ್ಟರ ಹತ್ತಿರ ಮಾತಾಡಿದರೆ ಮನಸ್ಸಿನ ಬೇಸರ ಕಳೆಯೋದಿರಲಿ, ಅವರ ಕೊಂಕು ಮಾತಿಗೆ ನಿನಗೆ ಇನ್ನೂ ಹೆಚ್ಚು ಬೇಜಾರಾಗತ್ತೆ ಅಷ್ಟೆ’ ಎಂದು ನನ್ನ ಸೀಮಿತ ಅನುಭವದ ಹಿನ್ನಲೆಯಲ್ಲೇ ನುಡಿದು, ‘ಚೋಟುದ್ದ ಇದೀಯ ಮುಂಡೆದೇ, ನಿನಗೇನು ತಿಳಿಯತ್ತೆ ಸುಮ್ಮನಿರು.’ ಎಂದು ಅಜ್ಜಿಯಿಂದ ಬೈಯಿಸಿಕೊಳ್ಳುತ್ತಿದ್ದೆ. ಅಜ್ಜಿಗೆ ತಮ್ಮ ಮಗನ ಮನೆ ಹಿಡಿಸದಿದ್ದರೂ ನನಗಂತೂ ಅಕ್ಕನ ಮನೆ ಅಚ್ಚುಮೆಚ್ಚಾಗಿತ್ತು. ಮನೆಗೆ ಜನ ಬಂದರೆ ವಿಧಿ ಇಲ್ಲದೆ ಅವರನ್ನು ಮಾತಾಡಿಸಬೇಕಾಗುವುದಲ್ಲ ಎಂಬ ನನ್ನ ಒಂಟಿ ಗೂಬೆ ಸ್ವಭಾವಕ್ಕೆ ಅಕ್ಕನ ಮನೆ ಪ್ರಿಯವೆನಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನಿಮಗೆ ಇನ್ನೂ ನಂಬಿಕೆ ಬರಲಿಲ್ಲವೆಂದರೆ, ನನ್ನ ಒಳಮುಚ್ಚುಗ ಸ್ವಭಾವವನ್ನು ಮನದಟ್ಟು ಮಾಡಿಸಲು ಇನ್ನೊಂದು ಪುರಾವೆ ಕೊಡುತ್ತೇನೆ. ಕಾಲೇಜಿನ ಕೊನೆಯ ದಿನಗಳಲ್ಲಿ ನಡೆಯುತಿದ್ದ ‘ಮೀನು-ಬುಟ್ಟಿ’ ಆಟದಲ್ಲಿ ನನಗೆ ಬಂದಿದ್ದ ಪ್ರಶ್ನೆಗಳೆಲ್ಲ ನನ್ನ ಮೌನ ಸ್ವಭಾವದ ಕುರಿತೇ ಆಗಿತ್ತು. ‘ಮೂಗನ ಕಾಡಿದರೇನು? ಸವಿ ಮಾತನು ಆಡುವನೇನು?’ ಎಂದು ನನ್ನನ್ನು ಒಂದು ಪ್ರಶ್ನೆಯಲ್ಲಿ ಗೇಲಿ ಮಾಡಲಾಗಿತ್ತು! ಸಹಪಾಠಿಗಳ ಕಿಡಿಗೇಡಿ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಟ್ಟು ಅವರ ಬಾಯಿ ಮುಚ್ಚಿಸುವುದು ಹೇಗೆಂದು ನನಗೆ ತಿಳಿದಿದ್ದರೂ, ಅದಕ್ಕೂ ಮತ್ತೆ ಅಷ್ಟೆಲ್ಲಾ ಮಾತು ಖರ್ಚುಮಾಡಬೇಕಾಗುತ್ತಲ್ಲ ಎಂದು ಹೆದರಿ, ಎಲ್ಲಾ ಟೀಕೆ-ಟಿಪ್ಪಣಿಗಳ ನಂಜನ್ನು ನೀಲಕಂಠನಂತೆ ನುಂಗಿಕೊಂಡು, ಬೆಲ್ಲ ಜಜ್ಜಿದ ಕಲ್ಲಿನಂತೆ ಸುಮ್ಮನೆ ಕುಳಿತುಬಿಟ್ಟಿದ್ದೆ. ಇಂತಿಪ್ಪ ಮೌನ ಮುನಿಯಂತಿದ್ದ ನಾನು ಬದುಕಿನ ಯಾವುದೋ ಒಂದು ಹಂತದಲ್ಲಿ ಮೌನ ಸಾಕೆಂದು ಬಿಸಾಕಿ ಮಾತಾಡಲು ಶುರುಮಾಡಿದ್ದೆ. ಹಿಂದೆ ಮಾತಾಡದೆ ಉಳಿಸಿದ್ದ ಬಾಕಿಯನ್ನೆಲ್ಲಾ ಬಡ್ಡಿ ಸಮೇತ ತೀರಿಸಿಕೊಳ್ಳುವಂತೆ!

ಈಗೀಗ ಘಂಟೆಗಟ್ಟಲೆ ದೂರವಾಣಿ ಮಾತುಕಥೆಗಳ ನಡುವೆ ಅಪರೂಪಕ್ಕೆಂಬಂತೆ ವಿರಾಮ ದೊರಕಿದಾಗ ನನ್ನಲ್ಲಿ ನಾನು ‘ನಾನೇಕೆ ಹೀಗಾದೆ?’ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಪ್ರಯತ್ನಿಸಿದ್ದುಂಟು. ಅದಕ್ಕೆ ಕೆಲವು ಕಾರಣಗಳನ್ನೂ ಊಹಿಸಿದ್ದೇನಾದರೂ ಯಾವುದೂ ಖಚಿತವಲ್ಲ. ‘ಅವನಿಗೆ ಸ್ವಲ್ಪವೂ ಗರ್ವವಿಲ್ಲ, ಎಷ್ಟು ಚೆನ್ನಾಗಿ ಅರಳು ಹುರಿದಂತೆ ಮಾತಾಡುತ್ತಾನೆ’, ‘ಇವಳಿಗೆ ಅದೇನು ಅಹಂಕಾರ? ಮಾತಾಡಿದರೆ ಮುತ್ತು ಸುರಿಯಿತು ಅನ್ನುವ ಹಾಗೆ ಆಡ್ತಾಳೆ’, ‘ಬಾಯಿದ್ದವನು ಬರದಲ್ಲೂ ಬದುಕಿಯಾನು’ ಎಂಬಂತಹ ಮಾತುಗಳು ನನ್ನ ಕಿವಿಯ ಮೇಲೆ ಸತತವಾಗಿ ಬಿದ್ದು, ನನಗೇ ಅರಿವಿಲ್ಲದಂತೆ ನನ್ನನ್ನು ಬದಲಿಸಿರಬಹುದೇ? ಬಹುಶಃ ಮಾತಾಡದವರಿಗೆ ಈ ಲೋಕದಲ್ಲಿ ಉಳಿಗಾಲವೇ ಇಲ್ಲ ಎನ್ನುವ ಅಭದ್ರ ಭಾವನೆಯೇ ನನ್ನನು ಮೌನದ ಕೋಟೆಯೊಡೆದು ಹೊರಬರುವಂತೆ ಮಾಡಿರಬಹುದೇ? ಎಂದು ನನ್ನೊಳಗೇ ನಾನು ಯೋಚಿಸಿದ್ದುಂಟು.

ನನ್ನ ಆಪ್ತ ಗೆಳತಿಯೊಬ್ಬಳಲ್ಲಿ ನನ್ನ ನೋವು ಹಂಚಿಕೊಂಡೆ – ‘ಈಚೆಗೆ ನನ್ನ ಮಾತು ತುಂಬಾ ಜಾಸ್ತಿಯಾಗಿದೆ ಅನಿಸುತ್ತಿದೆ ಕಣೆ. ಅಗತ್ಯಕ್ಕಿಂತಲೂ ಹೆಚ್ಚು ಮಾತಾಡುತ್ತಿದ್ದೇನೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಮಾತುಗಳನ್ನೆಲ್ಲ ಆಡಿ ಮುಗಿಸಿದ ನಂತರವಷ್ಟೇ ಅಡಿದ ಮಾತು ಹೆಚ್ಚಾಯಿತೇನೊ ಎನ್ನುವಂಥ ಹಳಹಳಿಕೆಯ ಭಾವ ಮೂಡುತ್ತದೆ. ಮಾತೇ ಆಡಬಾರದು ಎಂದು ನಿರ್ಧರಿಸಿದಾಗಲೂ ಮಾತುಗಳು ನನ್ನ ಅಂಕೆ ಮೀರಿ ಹೊರಬಂದಿರುತ್ತವೆ. ಅತಿಯೆನ್ನಿಸುವಷ್ಟು ಅಲ್ಲದಿದ್ದರೂ ಅಗತ್ಯವಿರುವಷ್ಟು ಮೌನವನ್ನು ಸಾಧಿಸಲು ನಿನ್ನಲ್ಲಿ ಏನಾದರೂ ಉಪಾಯವಿದೆಯೇ..?’ ಎಂದು ನನ್ನೆಲ್ಲಾ ಸಮಸ್ಯೆಗಳನ್ನೂ ಅವಳಿಗೆ ವಿವರಿಸತೊಡಗಿದೆ.

ಬಹಳಷ್ಟು ಓದಿಕೊಂಡಿದ್ದು, ಲೋಕಾನುಭವಿಯೂ ಆಗಿದ್ದ ಅವಳಿಂದ ಏನಾದರೂ ಪರಿಹಾರ ಸಿಕ್ಕಿರುತ್ತಿತ್ತೋ ಏನೊ. ಆದರೆ, ನನ್ನ ಮಾತಿನ್ನೂ ಮುಗಿದಿತ್ತೋ ಇಲ್ಲವೋ, ನನ್ನ ಮಾತನ್ನು ಅವಳು ಪೂರ್ತಿಯಾಗಿ ಕೇಳಿಸಿಕೊಂಡಳೋ ಇಲ್ಲವೋ ಎಂದು ನನಗೇ ಅನುಮಾನ ಬರುವಂತೆ ಅವಳು ಬೇರೇನೋ ಮಾತು ಪ್ರಾರಂಭಿಸಿಬಿಟ್ಟಿದ್ದಳು! ಇದು ಕೇವಲ ನನ್ನೊಬ್ಬಳ ಸಮಸ್ಯೆ ಅಲ್ಲವೆಂದು ನನಗೆ ಮನವರಿಕೆಯಾಗಿದ್ದೇ ಆಗ. ಎಲ್ಲರೂ ಮಾತಾಡುತ್ತಾರೆ. ಒಬ್ಬರ ಮಾತು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಇನ್ನೊಬ್ಬರು ಮಾತಿಗಿಳಿದಿರುತ್ತಾರೆ. ಫೋನಿನಲ್ಲಿ ಅತ್ತಲಿಂದ ಒಬ್ಬರು ಮಾತಾಡುತ್ತಿದ್ದಾಗಲೇ ಅವರಿಗೆ ಪೈಪೋಟಿ ನೀಡುವಂತೆ ಇತ್ತಲಿಂದ ಇವರೂ ಮಾತಾಡುತ್ತಾ ಸಾಥ್ ನೀಡುತ್ತಾರೆ. ಟಿವಿಯಲ್ಲಿ ಸಂದರ್ಶನಕ್ಕೆಂದು ಕರೆಸಿದ ಅತಿಥಿಯ ಮಾತನ್ನು ಅರ್ಧದಲ್ಲಿಯೇ ತಡೆದು ಸಂದರ್ಶಕನೇ ಮಾತಾಡತೊಡಗುತ್ತಾನೆ. ಮೌನದ ಮಹತ್ವವನ್ನು ಅರಿತುಕೊಳ್ಳಲು ಕಾಸು ಕೊಟ್ಟು ಕಮ್ಮಟಗಳಲ್ಲಿ ಭಾಗವಹಿಸುವ ಭಕ್ತರು ಕೂಡ ಗುರುಗಳ ಮಾತಿನ ಹೊಳೆಯಲ್ಲಿ ಮಿಂದೆದ್ದು ಹೊರಬರುತ್ತಾರೆ. ಹೀಗಿರುವಾಗ ನಾನೊಬ್ಬಳು ಮಾತಾಡಿದರೆ ತಾನೇ ಏನಂತೆ? ಎಂದು ನನ್ನ ಮನವನ್ನು ನಾನೇ ಸಂತೈಸಿಕೊಂಡೆ.

ಮಾತುಗಾರರನ್ನು ನಮ್ಮ ಸಮಾಜ ಎಂದೂ ಪ್ರೀತಿಯಿಂದ ಸ್ವಾಗತಿಸುತ್ತಲೇ ಬಂದಿದೆ. ಅರಳು ಹುರಿದಂತೆ ಮಾತಾಡುವ ರಾಜಕಾರಣಿಯ ಬುಟ್ಟಿಗೇ ಹೆಚ್ಚು ಮತದಾರರರು ಬೀಳುತ್ತಾರೆ. ಆಕರ್ಷಕ ಮಾತಿನ ಶಿಕ್ಷಕ ವಿದ್ಯಾರ್ಥಿ ವೃಂದದಲ್ಲಿ ಜನಪ್ರಿಯನಾಗಿರುತ್ತಾನೆ. ಮಾತಿನವನಿಗಿಂತ ಮಾತಾಡದವನ ಸುತ್ತಲೇ ಅನುಮಾನಗಳ ಹುತ್ತ ಏಳುವುದು ಜಾಸ್ತಿ. ಜೊತೆಗೆ ‘ಗುಮ್ಮನಗುಸಕ’ ಎಂಬ ಉಚಿತ ಬಿರುದು ಬೇರೆ. ವಟವಟ ಎಂದು ಮಾತಾಡುವವರ ಹೃದಯದಲ್ಲಿ ಕಲ್ಮಷಗಳೊಂದು ಉಳಿಯದೆ, ಎಲ್ಲವೂ ಮಾತಿನ ಮೂಲಕ ತೊಳೆದುಹೋಗಿರುತ್ತದೆ ಎಂಬ ಏನೇನೂ ಆಧಾರಗಳಿಲ್ಲದ ನಂಬಿಕೆಯೂ ಇದೆ. ಸಂಖ್ಯಾವಾರು ದೃಷ್ಟಿಯಿಂದ ನೋಡಿದರೂ ಮಾತಾಡುವವರೇ ಬಹುಸಂಖ್ಯಾತರು! ಅಷ್ಟಕ್ಕೂ ಮಾತಾಡಬೇಡ ಎಂದು ನಮಗೆ ಹೇಳಿದವರಾದರೂ ಯಾರು? ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದ ಬಸವಣ್ಣನವರು, ನಾವಾಡುವ ನುಡಿಯ ಅಂದ ಹೆಚ್ಚಿಸಿಕೊಳ್ಳಲು ಹೇಳಿದ್ದಾರೆಯೇ ಹೊರತು ಮಾತಾಡಲೇಬಾರದೆಂದಲ್ಲವಲ್ಲ? ಡಿವಿಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಗದರಿದ್ದಾರಾದರೂ, ಆ ಸಂದರ್ಭವೇ ಬೇರೆ ಇರುವುದರಿಂದ ಅವರು ಬೈದಿದ್ದು ನಮಗಲ್ಲ ಎಂದುಕೊಂಡು ಧೈರ್ಯವಾಗಿ ಮಾತಾಡಬಹುದು. ಆದರೂ ಮಾತು ಕಡಿಮೆ ಮಾಡಿಕೊಳ್ಳುವ ಹುಚ್ಚು ನನಗೇಕೊ!

‘ಮಾತಾಡೋದೇ ತಪ್ಪಾ?’ – ಎಂದು ನಾನು ಯಾರಲ್ಲೂ ಕೇಳಿಲ್ಲವಾದರೂ, ನನ್ನನ್ನೇ ನಾನು ಆಗಾಗ ಈ ಪ್ರಶ್ನೆ ಕೇಳಿಕೊಳ್ಳುವುದುಂಟು. ತಪ್ಪಾ? ಮಾತಾಡೋದು ತಪ್ಪಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಅದೇನೇ ಇರಲಿ, ಸೀರಿಯಸ್ ಆಗಿ ಹೇಳ್ತಾ ಇದ್ದೀನಿ. ನಾನು ಮಾತು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದೀನಿ. ನೀವೇನಾದರೂ ನನ್ನಲ್ಲಿ ಮಾತಾಡೋದಿದ್ದರೆ ಈಗಲೇ ಆಡಿಬಿಡಿ.

***

(ವಿಜಯ ಕರ್ನಾಟಕ ‘ದೀಪಾವಳಿ’ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಬರಹ.)

ಅಪ್ಪಾ! ಅಪ್ಪಾ! ನಂಗೆ ನೀನು ಬೇಕಪ್ಪಾ!

ನಾನು ನಮ್ಮ ತಂದೆಯನ್ನು ‘ಅಣ್ಣ’ ಎನ್ನುತ್ತಿದ್ದೆ. ನಾನೇನು, ನಮ್ಮ ಶಾಲೆಯಲ್ಲಿ ಓದುತ್ತಿದ್ದ ಮುಕ್ಕಾಲು ಪಾಲು ಹುಡುಗಿಯರೆಲ್ಲಾ ತಮ್ಮ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ಒಬ್ಬಿಬ್ಬರು, ‘ಅಪ್ಪಾಜಿ’ ಅನ್ನುತ್ತಿದ್ದರು. ನನ್ನೊಂದಿಗೆ ಓದುತ್ತಿದ್ದ ಕೆಲವು ಮಾರವಾಡಿ ಮನೆಯ ಹುಡುಗಿಯರು ಮಾತ್ರ ‘ದಾದಾಜಿ’, ‘ಬಾಬೂಜಿ’ ಇತ್ಯಾದಿ ನಾವು ಕೇಳೇ ಇಲ್ಲದ ರೀತಿಯಲ್ಲಿ ತಮ್ಮ ತಂದೆಯರನ್ನು ಸಂಬೋಧಿಸುತ್ತಿದ್ದರು. ಇವರೆಲ್ಲರೂ, ವ್ಯಾಪಾರಕ್ಕೆಂದು ಉತ್ತರಭಾರತದ ಯಾವುದೋ ಊರಿನಿಂದ ನಮ್ಮೂರಿಗೆ ಬಂದಿಳಿದವರು. ಇವರನ್ನು ‘ಸೇಟುಗಳು’ ಎನ್ನುತ್ತಿದ್ದರು. ಒಬ್ಬಳಂತೂ, ತನ್ನ ತಂದೆಯ ಮೇಲೆ ಅಕ್ಕರೆ ಉಕ್ಕಿದಾಗ ‘ನೇತಾಜಿ’ ಅನ್ನುತ್ತಿದ್ದಳು. ‘ನೇತಾಜಿ’ ಎಂದರೆ, ಸುಭಾಷ್ ಚಂದ್ರ ಭೋಸ್ ಮಾತ್ರ ಎಂದು ತಿಳಿದಿದ್ದ ನಮಗೆ ಅವಳು ಹೀಗೆ ಕರೆದಾಗೆಲ್ಲಾ ತುಂಬು ನಗು! ಒಬ್ಬಿಬ್ಬರು ತಮ್ಮ ತಾಯಿ-ತಂದೆಯನ್ನು ‘ಅಕ್ಕ-ಬಾವ’ ಎಂದೂ ಕರೆಯುತ್ತಿದ್ದರು. ‘ಡ್ಯಾಡಿ, ಮಮ್ಮಿ’ ಎಂಬ ಪದ ನಮ್ಮ ಸರಹದ್ದಿನಲ್ಲೂ ಸುಳಿದಿರಲಿಲ್ಲ. ಆ ಪದವನ್ನು ನಾವು ಮೊದಲು ಕೇಳಿದ್ದು, ಸಿನಿಮಾದಲ್ಲೇ! ತಂದೆಯ ಅತಿ ಮುದ್ದಿನಿಂದ ಹಾಳಾಗಿ ಹೋಗಿ, ಎಲ್ಲರ ಮೇಲೂ ದರಬಾರು ಮಾಡುವ ಜಂಭದ ಕೋಳಿ, ಸಿರಿವಂತ ಹುಡುಗಿಯರು ಮಾತ್ರ ಹಾಗೆ ಕರೆಯುತ್ತಾರೆಂದು ನಮ್ಮ ಆಗಿನ ತಿಳುವಳಿಕೆ!

ನಮ್ಮೂರು ತಾಲೂಕು ಕೇಂದ್ರವಾದ್ದರಿಂದ, ಸುತ್ತಮುತ್ತಲಿನ ಹಳ್ಳಿಯ ಮಕ್ಕಳೆಲ್ಲಾ ನಮ್ಮ ಶಾಲೆಗೇ ಓದಲು ಬರಬೇಕಿತ್ತು. ಅವರೆಲ್ಲರೂ ತಮ್ಮ ತಂದೆಯನ್ನು, ಬಹಳ ಮುದ್ದಾಗಿ ‘ಅಯ್ಯ’ ಅನ್ನುತ್ತಿದ್ದರು. ‘ನೋಡ್ರೆ, ಇದನ್ನು ಸೋಮವಾರ ಸಂತೆಯಿಂದ ನಮ್ಮಯ್ಯ ತಂದು ಕೊಡ್ತು.’ ಎಂದು ಬಣ್ಣ ಬಣ್ಣದ ಬಳೆ, ಟೇಪು, ಸರಗಳನ್ನು ನಮಗೆಲ್ಲಾ ತೋರಿಸುತ್ತಿದ್ದರು. ‘ಅಯ್ಯ ಬಂತು, ಅಯ್ಯ ಹೋಯ್ತು, ಅಯ್ಯ ಹೇಳ್ತು, ಅಯ್ಯ ಬೈತು’ – ಅವರ ಮಾತಿನಲ್ಲಿ ‘ಅಯ್ಯ’ ಸುಳಿಯುತ್ತಿದ್ದುದೇ ಹೀಗೆ. ಆ ಅಯ್ಯನಿಗೆಂದೂ ಬಹುವಚನ ಪ್ರಯೋಗವಾಗಿದ್ದು ನಾ ಕೇಳೆ! ಕಾಣೆ! ಆ ಅಯ್ಯಂದಿರೋ ಮಹಾ ಸಂಕೋಚದ ಮುದ್ದೆಗಳು. ಎಂದಾದರೂ, ಅಪರೂಪಕ್ಕೆ ತಮ್ಮ ಮಕ್ಕಳನ್ನು, ನೋಡಲು ಶಾಲೆಗೆ ಬಂದಾಗ, ಎಂದೂ ಶಾಲೆಯೊಳಗೆ ಬರುತ್ತಿರಲಿಲ್ಲ. ಶಾಲೆಯ ಗೇಟಿನಿಂದ ನಾವೆಲ್ಲರೂ ಒಳಬಂದೊಡನೆ ಕಾಣುವಂತಿದ್ದ ತೆಂಗಿನ ಮರದಡಿ ಅಡಗಿದಂತೆ ನಿಂತಿರುತ್ತಿದ್ದರು. ನಮ್ಮ ಮುಖ ಕಣ್ಣಿಗೆ ಬಿದ್ದ ಕೂಡಲೇ, ‘ಅವ್ವಾ, ನಮ್ ಕಮಲಿನೂ ನಿಮ್ಮ ಕ್ಲಾಸೇ ಅಲ್ವೇನವಾ? ವಸಿ ಬರಾಕ್ ಹೇಳ್ತ್ಯಾ ಅವಳನ್ನ? ಏನೂ ತಿನ್ದೆ ಬಂದುಬಿಟ್ಟವಳೆ ಇವತ್ತು…’. ಎಂದು ಮೆಲುದನಿಯಲ್ಲಿ ವಿನಂತಿಸುತ್ತಿದ್ದರು. ಬಹುಶಃ ಅವರು, ಉಪವಾಸ ಬಂದಿರುವ ಮಗಳಿಗೆ ಕೊಟ್ಟುಹೋಗಲು ಏನೋ ತಿಂಡಿ-ತಿನಿಸು ತಂದಿರುತ್ತಿದ್ದರು. ನಾವು ಯಾರಾದರೂ ಕಮಲಿಯ ಕಿವಿಯಲ್ಲಿ, ಈ ವಿಷಯ ಅರುಹಿದ ನಂತರ, ಅವಳು ಶಿಕ್ಷರ ಅನುಮತಿ ಪಡೆದು, ಅಯ್ಯನನ್ನು ಭೇಟಿಯಾಗಿ, ಪುಟ್ಟ ಗಂಟು ಹಿಡಿದು ಒಳಬರುತ್ತಿದ್ದಳು.

ನಮ್ಮದಂತೂ, ಮೂವತ್ತಕ್ಕೂ ಹೆಚ್ಚು ಜನರಿದ್ದ ಅವಿಭಕ್ತ ಕುಟುಂಬ. ನನ್ನ ಅಕ್ಕ, ಅಣ್ಣಂದಿರಿಂದ ಹಿಡಿದು, ದೊಡ್ಡಪ್ಪ-ಚಿಕ್ಕಪ್ಪಂದಿರ ಮಕ್ಕಳೆಲ್ಲಾ ಅವರ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರಿಂದ ನನಗೂ ‘ಅಣ್ಣಾ’ ಎಂಬ ಪದವೇ ಅಭ್ಯಾಸವಾಗಿರಬೇಕು. ಹಾಗಿದ್ದೂ, ನನಗೆ ‘ಅಪ್ಪ’ ಅನ್ನುವ ಪದದ ಮೇಲೆ ಅದೇನೋ ವ್ಯಾಮೋಹ! ಆ ಪದವನ್ನು ಮಮತೆಯಲ್ಲಿ ಅದ್ದಿ ತೆಗೆದಂತಿರುವಂತಹ ಹಿತವಾದ ಭಾವ! ಒಂದು ಸಮಾಧಾನವೆಂದರೆ ನನ್ನನ್ನು, ಅಣ್ಣನನ್ನು ತುಂಬಾ ಹಚ್ಚಿಕೊಂಡಿದ್ದ ನಮ್ಮ ದೊಡ್ಡಪ್ಪನನ್ನು ನಾವು ‘ಅಪ್ಪಾ…’ ಎಂದು ಕರೆಯುತ್ತಿದ್ದೆವು. ನಾವು ದೊಡ್ಡಪ್ಪ ಎಂದರೆ ಅವರು ಇಷ್ತಪಡುತ್ತಿರಲಿಲ್ಲ. ಮದುವೆಯಾದ ಮೇಲೆ, ನನ್ನ ಗಂಡ, ಮೈದುನ ಕೂಡ ನಮ್ಮ ಮಾವನವರನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ನನ್ನ ಮಕ್ಕಳ ಮೇಲೂ ‘ಅಣ್ಣ’ ಪದದ ಪ್ರಭಾವವಾಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು. ಮಕ್ಕಳು ಮಾತು ಕಲಿಯಲು ಶುರುಮಾಡಿ, ‘ಅಮ್ಮಾ, ತಾತ, ಅಜ್ಜಿ… ಇತ್ಯಾದಿ ಪದಗಳನ್ನು ಕಲಿತು, ಇನ್ನೇನು ‘ಅಣ್ಣಾ’ ಎನ್ನುವ ಸ್ವರ ಹೊರಡುವ ಮೊದಲೇ, ಅವರ ಪುಟ್ಟ ನಾಲಿಗೆಯಲ್ಲಿ ಒತ್ತಾಯಪೂರ್ವಕವಾಗಿ ನಾನಿಟ್ಟ ಈ ಅಕ್ಕರೆಯ ಪದವೇ… ‘ಅಪ್ಪಾ!’

ನಮ್ಮೆಲ್ಲರನ್ನು ಹೊತ್ತು ಮುನ್ನಡೆಯುತ್ತಿರುವ, ಮುನ್ನಡೆಸುತ್ತಿರುವ ‘ಅಪ್ಪ’ ಎಂಬ ಮಮತೆಯ ಹಡಗಿಗೆ, ಪ್ರೀತಿಯ ಕಡಲಿಗೆ ಒಲುಮೆಪೂರ್ವಕ ಶುಭಾಶಯಗಳು!

ಎಲ್ಲರ ಮನೆಯಲ್ಲಿರುವ, ಅಪ್ಪಂದಿರಿಗೂ ‘ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು!’

ತುಂಬಾ ಹಿಂದೆ ಅಪ್ಪಂದಿರ ದಿನಕ್ಕೆಂದು ಬರೆದಿದ್ದ ಲೇಖನ:-

http://kannada.oneindia.in/column/triveni/2005/220605appa.html

ಆದರ್ಶ ದಂಪತಿ

ಆ ಆಂಟಿ-ಅಂಕಲ್‍ಗೆ ಆದರ್ಶ ದಂಪತಿಗಳು ಅಂತಾನೇ ಅನ್ನೋದು ಎಲ್ಲಾರೂ. ಅಷ್ಟು ಹೊಂದಾಣಿಕೆ ಇಬ್ಬರಲ್ಲಿ. ಅವರ ಮುಖದಲ್ಲಿ ಸದಾ ನಗುವೇ. ಒಬ್ಬರ ಮೇಲೊಬ್ಬರು ಕೋಪಿಸಿಕೊಂಡಿದ್ದಾಗಲೀ, ಒಬ್ಬರನ್ನೊಬ್ಬರು ರೇಗಿಕೊಂಡಿದ್ದನ್ನಾಗಲೀ, ನೀನು-ತಾನು ಎಂದು ಜಗಳಾಡಿದ್ದನ್ನಾಗಲೀ ಕಂಡವರು ಇಲ್ಲವೇ ಇಲ್ಲ. ಆದರೂ ಇವಳಿಗೇಕೋ ಆ ಆದರ್ಶ ದಂಪತಿಗಳ ನಿಜ ತಿಳಿಯುವ ದುರ್ಬುದ್ಧಿ. ಇದು ದುಷ್ಟತನವೆಂದು ಗೊತ್ತಿದ್ದರೂ, ಆಂಟಿ ಮನೆ ಹೊಕ್ಕೇಬಿಟ್ಟಳು. ಆಂಟಿ ಬಿಡುವಾಗಿದ್ದರು. ಅಚ್ಚುಕಟ್ಟಾಗಿಯೇ ಇದ್ದ, ತಮ್ಮ ಸೀರೆಗಳಿಂದ ತುಂಬಿದ್ದ ಕಪಾಟನ್ನು ಸರಿಪಡಿಸುತ್ತಿದ್ದರು. ಆಂಟಿ ಸುಂದರಿ. ತಮ್ಮ ಕಾಲೇಜಿನ ದಿನಗಳಲ್ಲಿ ನಟಿಯೊಬ್ಬಳ ಗಾಢ ಅಭಿಮಾನಿಯಾಗಿದ್ದು, ಈಗ ಆ ನಟಿ ದಿವಂಗತೆಯಾಗಿದ್ದರೂ ಇವರು ಮಾತ್ರ ನಡೆ-ನುಡಿಯಲ್ಲಿ ಆಕೆಯನ್ನೇ ಅನುಕರಿಸುತ್ತಿದ್ದರು. ಈಗಲೂ ಆ ನಟಿಯ ಭಂಗಿಯಲ್ಲಿಯೇ ನಿಂತು, ನಗುತ್ತಾ ಇವಳನ್ನು ಸ್ವಾಗತಿಸಿದರು. ಅವರು ಉಟ್ಟ ಸೀರೆಯ ಗರಿಮುರಿ ನಿರಿಗೆಗಳನ್ನೇ ದಿಟ್ಟಿಸುತ್ತಾ ಆಂಟಿಯನ್ನು ಮಾತಿಗೆಳೆದಳು.

ಇವಳೋ ಮಾತಿನಲ್ಲಿ ಮಹಾಜಾಣೆ. ಯಾರನ್ನು ಹೇಗೆ ಮಾತಿನಲ್ಲಿ ಸೆರೆಹಿಡಿಯಬಹುದೆಂದು ಚೆನ್ನಾಗಿ ಬಲ್ಲವಳು. ಆಂಟಿಯನ್ನು ‘ಆಂಟಿ’ ಎಂಬ ಕೃತಕ ಪದದಿಂದ ಕರೆಯದೆ ‘ಅಮ್ಮಾ, ನಿಮ್ಮನ್ನೊಂದು ಮಾತು ಕೇಳಲೇ?’ ಎಂದು ಮಾತಿಗೆಳೆದಳು. ಆಂಟಿಗೆ ವಿದೇಶಗಳಲ್ಲಿ ಹಂಚಿಹೋಗಿರುವ ಮಕ್ಕಳ ನೆನಪು. ಆಂಟಿ ಮೃದುವಾಗಿ, ಅದೇ ಆಕರ್ಷಕ ನಗೆ ನಗುತ್ತಾ- ‘ಕೇಳು ಮಗಳೇ’ ಎಂದರು. ಇವಳು ಕೇಳಿಯೇಬಿಟ್ಟಳು- ‘ಅಮ್ಮಾ, ನಟನೆ ಬೇಡ, ನಿಜ ಹೇಳಮ್ಮಾ, ನಿಮ್ಮ ಆದರ್ಶ ದಾಂಪತ್ಯಕ್ಕೆ ನೀವು ಕೊಟ್ಟ ಬೆಲೆಯೇನು?’ ಆಂಟಿಯ ಮುಖದಲ್ಲಿ ಅರ್ಥವಾಗದ ಗಲಿಬಿಲಿ. ಹೊಳೆಯುತ್ತಿದ್ದ ಮುಖ ಕರೆಂಟು ಹೋದಂತೆ ಮಂಕಾಯಿತು. ‘ಏನು ಹಾಗೆಂದರೆ?’ ಮಾತಿಗೆ ತಡವರಿಸಿದರು. ಇವಳ ಮುಖದಲ್ಲಿ ಗುಟ್ಟು ಹೊರಗೆಳೆದ ತುಂಟ ನಗು.

‘ಅಯ್ಯೋ, ಹಾಗೇನಿಲ್ಲಮ್ಮಾ… ನನಗೆ ನಿಮ್ಮ ಮೇಲೇನೂ ಅನುಮಾನವಿಲ್ಲ. ನಿಮ್ಮ ಆದರ್ಶ ದಾಂಪತ್ಯ ಹೇಗೆ ಸಾಧಿಸಿದಿರಿ ಅಂತ ನನಗೂ ಹೇಳಿದರೆ, ನಾನೂ ಕಲಿಯಬಹುದಲ್ಲವೇ?’ ಎಂದಳು ಮಳ್ಳಿಯಂತೆ. ಆಂಟಿ ನಿರಾಳವಾದರು.

‘ಅದಾ… ಕಷ್ಟವೇನಿಲ್ಲ. ಒಂದಿಷ್ಟು ತ್ಯಾಗ, ಒಂದಿಷ್ಟು ಹೊಂದಾಣಿಕೆ, ಸ್ವಲ್ಪ ತಾಳ್ಮೆ…. ಅಷ್ಟೆ… ಇಷ್ಟಿದ್ದರೆ ಸಾಕೇ ಸಾಕು.’ ಎಂದರು ; ಗಿಣಿಮೂತಿ ಮಾವಿನಕಾಯಿ ಹಸಿ ಗೊಜ್ಜಿಗೆ ಎಂಟು ಬ್ಯಾಡಗಿ, ಕಾಲು ಚಮಚ ಮೆಂತ್ಯ, ಸಾಸುವೆ, ರುಚಿಗೆ ತಕ್ಕಷ್ಟು ಉಪ್ಪು, ಸಿಹಿ, ಚಿಟಿಕೆ ಇಂಗು… ಎಂದು ರೆಸಿಪಿ ಕೊಡುವಷ್ಟೇ ಸುಲಭವಾಗಿ.

ಅಲ್ಲಿಗೇ ಸುಮ್ಮನಿದ್ದರಾಗಿತ್ತು. ಇವಳೋ ಕುತೂಹಲದ ಶನಿ, ಬಿಡಬೇಕಲ್ಲ – ‘ಅದೇ ಆಂಟಿ, ಎಷ್ಟು ತ್ಯಾಗ, ಎಷ್ಟು ಹೊಂದಾಣಿಕೆ… ಅಂತಾನು ಸರಿಯಾಗಿ ಹೇಳಿ ಮತ್ತೆ. ಆಮೇಲೆ ಪಾಕ ಕೆಡಬಾರದು ನೋಡಿ. ಒಂದಿನ? ಒಂದು ವಾರ? ಒಂದು ವರ್ಷ? ಘಟ್ಟಿಸಿ ಕೇಳಿದಳು. ಆಂಟಿ ಇವಳ ಮಾತನ್ನು ಕೊಡವಿಹಾಕುವಂತೆ ಎದ್ದು ನಿಂತು ನಗುತ್ತಾ ಇವಳತ್ತ ನೋಡಿದರು. ಆ ಮುಖದಲ್ಲಿ ಅದೆಂತಹ ಸುಂದರ ನಗು ಹರಡಿತೆಂದರೆ, ಕೆಲವೇ ಕ್ಷಣಗಳ ಹಿಂದೆ ಅದೇ ಮುಖದ ಮೇಲಿದ್ದ ವಿಷಾದದ ಗೆರೆಗಳು ಇವಳ ನೆನಪಿನಿಂದ ಅಳಿಸೇಹೋದವು.