ನಾ.ಕಸ್ತೂರಿಯವರ ಅನರ್ಥ ಕೋಶ

ನಿನ್ನೆ, ನಾ.ಕಸ್ತೂರಿಯವರ ಅನರ್ಥಕೋಶ ಓದುತ್ತಿದ್ದೆ. ಓದುತ್ತಿರುವಾಗ ನನಗಂತೂ ತುಂಬಾ ನಗು. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ, ಬಿದ್ದು ಬಿದ್ದು ನಗುವಂತೆ ಮಾಡುವ ಹಾಸ್ಯ ಎನ್ನುವುದು ಇದ್ದರೆ ಅದು ಇದೇ ರೀತಿ ಇರುತ್ತದೇನೋ.  ಒಬ್ಬಳೇ ಓದಿಕೊಂಡು ನಗುವ ಬದಲು ನಿಮ್ಮೊಡನೆ ಹಂಚಿಕೊಂಡರೆ ಹೇಗೆ ಅನ್ನಿಸಿತು. ನನ್ನನ್ನು ತುಂಬಾ ನಗಿಸಿದ ಕೆಲವನ್ನು ಇಲ್ಲಿ ಬರೆಯುತ್ತಿದ್ದೇನೆ. ಇದನ್ನು ಓದಿ ನಿಮಗೆ ನಗುವೇ ಬರದಿದ್ದರೆ ನೀವು ಬಲು ಗಟ್ಟಿಗರು ಎಂದು ಅರ್ಥ. ಭಲೇ!

ಅಂದಹಾಗೆ, ನಗುವುದು ಅನ್ನುವುದಕ್ಕೆ ಕೆಲವರು ನಗಾಡುವುದು ಅನ್ನೋದನ್ನು ಕೇಳಿದ್ದೇನೆ. ಯಾವುದು ಸರಿ?

ನಿಮಗೆ ಬೇರೆ ಯಾವುದಾದರೂ ಪದಗಳು ಗೊತ್ತಿದ್ದರೆ ಹೇಳಿ, ನಗೋಣ.  🙂

*                      *                     *                        *     

ಚಿತ್ರ ಕೃಪೆ : ಕನ್ನಡ ವಿಕಿಪೀಡಿಯ                                

* ಅಮೋಘ ಪ್ರಾರಂಭ  – ಪ್ರಾರಂಭ
* ಅಕ್ರಮಾದಿತ್ಯ    – ಪ್ರಜಾಹಿತಕ್ಕೆ ವಿರೋಧವಾಗಿ ರಾಜ್ಯಭಾರ ನಡೆಸುವ ರಾಜರುಗಳಿಗೆ ಈ ಬಿರುದು ಸಲ್ಲುತ್ತಿತ್ತಂತೆ.
* ಅದ್ಭುತ ದಿಗ್ದರ್ಶನ  – ಹಾಲಿವುಡ್ ಚಿತ್ರದ ಅನುಕರಣ
* ಅವಿವಾಹಿತ    – ಹೆಂಗಸೊಬ್ಬಳ ಕಾಡಿಸುವ ಸದವಕಾಶವನ್ನು ಕಳೆದುಕೊಳ್ಳುವವ.
* ಅಂಧರ್ವರು  – ಕುರುಡು ಸಂಗೀತಗಾರರು
* ಅಕ್ರೂರ      – ರಿಟೈರಾದ ಉನ್ನಾತಾಧಿಕಾರಿ.
* ಅಗ್ನಿತೀರ್ಥ  – ವ್ಹಿಸ್ಕಿ
* ಅಗ್ನಿಮಿತ್ರ   – ಪೆಟ್ರೋಲ್
* ಅಗ್ನಿಹೋತ್ರ   – ಬಿಡುವಿಲ್ಲದೆ ಸಿಗರೇಟು ಸೇದುವವ.
* ಅಣುಕಂಪ    – ಒಂದು ಊರಲ್ಲಿ ಅಣುಬಾಂಬು ಸಿಡಿದಾಗ ನೆರೆಯೂರುಗಳಲ್ಲಾಗುವ ಸಹತಾಪ.
* ಆ          – ದಂತವೈದ್ಯರ ಮೂಲಮಂತ್ರ: ಇದನ್ನು ಜಪಿಸಿದ ಕೂಡಲೆ ನಾವು ಬಾಯಿಬಿಡುತ್ತೇವೆ. ಅವರು ನಮ್ಮ ಹಲ್ಲು ಕಿತ್ತುತ್ತಾರೆ.
* ಆರತಿ – ರತಿಯ ಪಕ್ಕದಲ್ಲಿ ಈತ ಆಕಳಿಸುವುದು

* ಇಂಜಕ್ಷನ್     – ನುಂಗಲಾರದ ತುತ್ತು
* ಇಗ್ನೇಶ್ವರ    – ತನ್ನ ಹೆಸರಿನ ಉಚ್ಚಾರಣೆಗೆ ಒದಗುವ ವಿಘ್ನಗಳನ್ನು ನಿವಾರಿಸಲಾಗದ ಒಂದು ದೇವತೆ.
* ಈಚಮನ     – ಈಚಲುಮರದಡಿಯಲ್ಲಿ ಕುಳಿತು ಕುಡಿಯುವುದು
* ಉಗುಳುನಗೆ    – ಮಾತನಾಡಿದಾಗ ಮಂತ್ರಪುಷ್ಪದಂತೆ ನಗೆಯಾಡಿದಾಗಲೂ ಉಗುಳು ಪುಷ್ಪ.
* ಉತ್ತರಕ್ರಿಯೆ – ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಕೆಲಸ.
* ಉತ್ತರಾಯಣ – ಪರೀಕ್ಷೆಯ ಋತು, ಮಾರ್ಚ್ ತಿಂಗಳಿಂದ ಜೂನ್
* ಉಳಿತಾಯ – ನಮಗೆ ಸಾಲ ಕೊಡಬೇಕಾದವರು ಮಾಡಬೇಕಾದ ಕರ್ತವ್ಯ
* ಋಣ ಹದ್ದು   – ಸಾಲ ವಸೂಲು ಮಾಡುವುದಕ್ಕಾಗಿ ನಮ್ಮ ಬಾಗಿಲಿಗೆ ಬರುವವ.
* ಐಕ್ಯಮದ್ಯ   – ಹೆಂಡಕುಡುಕರ ಗೆಳೆತನ

* ಕಣ್ವಂತರಿ – ನೇತ್ರವೈದ್ಯ
* ಕಂಠಾಘೋಷ – ಬರಿಯ ಕೂಗು
* ಕುಂಠಾಘೋಷ – ಗೆಲ್ಲುತ್ತೇವೆ ಎಂಬ ಧೈರ್ಯವಿಲ್ಲದ ಪಕ್ಷದವರು ಮಾಡುವ ಪ್ರಚಾರ
* ಕಂತುವರಾಳಿ  – ಕಂತುಕಂತಾಗಿ ಸಾಲ ತೀರಿಸಬೇಕಾಗಿ ಬಂದಾಗ ನಾವು ಎಳೆಯುವ ರಾಗ
* ಕವಿವೇಕಿ      – ಅವಿವೇಕಿಯಾದ ಕವಿ
* ಕಹಿಷ್ಕರಿಸು  – ಕಹಿಯಾಗಿ ತೋರಿದ್ದರಿಂದ ದೂರವಿರಿಸು.
* ಕಾಕತಾಳಿನ್ಯಾಯ – ಕಾಗೆ ಕೂತಿದ್ದು, ತಾಳಿ ಕಟ್ಟಿದ್ದು.
* ಕಾಕತಾಳೀಯ – ಕಾಗೆಗೆ ತಾಳಿ ಕಟ್ಟಲು ಹೊರಡುವ ಸಾಹಸಿಯಂತೆ.
* ಕಾರಾಗೃಹಸ್ಥ  – ಹೊಸದಾಗಿ ಮದುವೆಯಾದವ.
* ಕಾಪ್ಯಾಯಮಾನ   – ಕಾಫಿ ಕುಡಿದ ಮೇಲೆ ಉಂಟಾಗುವ ಆಪ್ಯಾಯಮಾನ ಪರಿಸ್ಥಿತಿ.
* ಕಾಶಿ      – ಸತ್ತು ಸುಣ್ಣವಾಗುವುದಕ್ಕೆ ಪ್ರಶಸ್ತವಾದ ಊರು.
* ಕಿವುಡ      – ವಾಕ್ಚಿತ್ರಗಳನ್ನು ಮೂಕಚಿತ್ರಗಳಂತೆ ನೋಡುವ ಪುಣ್ಯವಂತ
* ಕೆಮ್ಮು      – ಒಂದು ರೀತಿಯ ಗುಪ್ತಭಾಷೆ
* ಕುಗ್ರಾಮ   – ಎರಡು ಮೈಲಿ ಸುತ್ತ ಯಾವ ಸಿನಿಮ ಮಂದಿರವೂ ಇಲ್ಲದ ಹಳ್ಳಿ.

* ಖಾರಾಗೃಹ   – ಖಾರವನ್ನು ಹೆಚ್ಚು ಬಳಸುವ ಹೋಟಲು
* ಖರ್ಚು    – ವರಮಾನಕ್ಕೆ ಸರಿಸಮಾನವಿಲ್ಲದ್ದು.
* ಖಂಡಿತವಾದಿ –  ಲೋಕವಿರೋಧಿ. ನಮ್ಮ ಮಿತ್ರನಲ್ಲದಿದ್ದರೆ, ಈತನಿಗೆ ಮೂರ್ಖ ಎಂದು ಹೆಸರು.
* ಖುದಾಸೀನ  – ದೇವರಿದ್ದಾನೆ ಎಂದು ಉದಾಸೀನನಾಗಿ ಕುಳಿತಿರುವುದು
* ಖಾಲಿ – ಸಾಮಾನ್ಯವಾಗಿ ಎಲ್ಲ ಬುರುಡೆಗಳಿಗೂ ಇದೇ ಸ್ಥಿತಿ
* ಖರಪತ್ರ – ಕತ್ತೆ ತಿಂಬ ಕಾಗದ
* ಖುಷಿಕೇಶ – ಮೊದಲನೆಯ ಮಗು ಗಂಡಾಗುವ ಭ್ರಮೆಯಿಂದ ಬಿಡುವ ಗಡ್ದ

* ಗಲ್ಲೆದೆ    – ಆಪಾದಿತನ ಗಲ್ಲು ಮಹೋತ್ಸವವನ್ನು ನೆರವೇರಿಸಿ ಕೃತಕೃತ್ಯರಾಗುವ ಮಂದಿ
* ಗುಠ್ಠಾಳ  – ಗುಟ್ಟನ್ನು ರಟ್ಟುಮಾಡಿ ಕೆಲಸವನ್ನು ಹಾಳು ಮಾಡುವವನು.
* ಗುರುಬತ್ತಿ   – ಹಲವು ಶಿಷ್ಯರ ಪೀಡಾಕ್ರಮ
* ಚೀರ್ತನೆ    – ಕೆಟ್ಟ ಶಾರೀರದವರು ಮಾಡುವ ಕೀರ್ತನೆ
* ಜಗಲಿ      – ಜಗಳಗಳ ಉಗಮಸ್ಥಾನ
* ಜಾಬವಂತ  – ನೌಕರಿಯನ್ನು ದೊರಕಿಸಿಕೊಡುವ ಜಾಣ
* ತ್ರಿಶಂಕೆ ಸ್ವರ್ಗ – ಮೂರು ವಿಕೆಟ್ಟುಗಳನ್ನು ಪಡೆದವ ಅನುಭವಿಸುವ ಆನಂದ

* ಧನಸ್ತಾಪ      – ಹಣಕ್ಕಾಗಿ ಇಬ್ಬರಿಗಿಂತ ಮೂವರು ಪ್ರೀತಿಯಿಂದ ಮಾಡುವ ಜಗಳ
* ಧನದನ್ನೆ – ವರದಕ್ಷಿಗೆಗಾಗಿ ಕೈಹಿಡಿದ ಸತಿ
* ನರಿಷಡ್ವರ್ಗ    – ಕುಹಕ,ಕುತಂತ್ರ
* ನುಡಿಮದ್ದು        – ಜನರನ್ನು ಉದ್ರೇಕಗೊಳಿಸುವ ಭಾಷಣ
* ನೇಯ್ಗೆಯವರು      – ಸಾಹಿತಿಗಳು
* ಪಕ್ಕಸಾಲಿಗ     – ಪಕ್ಕದಲ್ಲೇ ಮನೆ ಮಾಡಿಕೊಂಡು ಸಾಲ ಕೇಳುವವ
* ಪತಿ             – ಮನೆ ಮೂಲೆಯಲ್ಲಿ ಕೂತಿರುವ ದೇವರು
* ಪದ್ಯೋಗಿ          – ಸಿಕ್ಕಿದವರ ಕಿವಿಯಲ್ಲಿ ಪದ್ಯದ ಘಂಟಾನಾದ ಮೊಳಗಿಸುವವ.

* ಭಾವಜೀವಿ       – ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.
* ಭಾವಾಡಿಗ      – ಕವಿ
* ಭೀಮಾರಿ         – ನಮ್ಮ ದೇಶದ ಸಾಮಾನ್ಯ ಜನರು ಹೆಚ್ಚು ಪೂಜಿಸಬೇಕಾದ ದೇವತೆ.
* ಮದ್ಯವಯಸ್ಸು     – ಹೆಂಡದಾಸೆ ಪಡುವ ವಯಸ್ಸು
* ಮನಸ್ಸಾಕ್ಷಿ     – ನಮ್ಮನ್ನು ಇನ್ನೂ ಸಣ್ಣ ಮಾಡುವ ಒಳದನಿ
* ಮನಮೋಸಕ       – ಮನ ಮುದಗೊಂಡಾಗ ಹೋಗುವ ಮೋಸ.

* ಲೋಲನೆ ಪಾಲನೆ   – ಪರಸ್ತ್ರೀಯನ್ನು ಬಯಸಿದ ಗಂಡನನ್ನೂ ಮಗುವಿನಂತೆ ಲಾಲನೆಪಾಲನೆ ಮಾಡುವವಳು
* ವಧು       – ನಾವು ಮಾವನಿಂದ ಪಡೆದ ಮೊದಲನೆಯ ವಸ್ತು
* ವಯಸ್ಸು     – ಲೆಕ್ಕ ಹಾಕ್ತಾ ಹಾಕ್ತಾ ದು:ಖ ಜಾಸ್ತಿ. ಇದರ ಬೆಳವಣಿಗೆಯ ನಾಲ್ಕು ಹಂತಗಳು: ಹುಡುಗು, ಪಿಡುಗು, ಗುಡುಗು, ನಡುಗು.
* ವಸಂತ     – ಕವಿಗಳಿಗೆ ಹುಚ್ಚು ಬರುವ ಕಾಲ.

* ಶಸ್ತ್ರಕ್ರಿಯೆ – ಹಣದ ಗಂಟನ್ನು ವೈದ್ಯರು ಹೊರತೆಗೆಯುವ ರೀತಿ.
* ಷೆಡ್ದಕ     – ಮೋಟಾರ್ ಷೆಡ್ಡನ್ನೇ ಬಾಡಿಗೆಗೆ ತೆಗೆದು ಸಂಸಾರ ನಡೆಸುವವ.
* ಸಮಾರಂಪ    – ಸಾಮಾನ್ಯವಾಗಿ ಸಮಾರಂಭಗಳಲ್ಲಿ ಹೀಗಾಗುವುದೇ ಹೆಚ್ಚು.
* ಸರಸ ಸಂಭಾಷಣೆ  – ಚಿತ್ರಮಂದಿರಗಳಲ್ಲಿ ಪ್ರೇಕ್ಷಕಿಯರು ಮಾಡುವ ಟೀಕೆ
* ಸಾಲಗ್ರಾಮ        – ಸಾಲದಿಂದ ಕಟ್ಟಿರುವ ಮನೆಗಳ ಸಾಲು
* ಸೊಟ್ಟಹಾಸ        – ಮುಖ ಸೊಟ್ಟಗೆ ತಿರುಗಿಸು ಮಂದಹಾಸ ಬೀರುವುದು

* ಹಲ್ಲೋಲ           – ಸುಂದರವಾದ ದಂತಪಂಕ್ತಿ ಇರುವ ಹೆಮ್ಮೆ.
* ಹವ್ಯಾಸಂಗ       – ಹಲವು ಹವ್ಯಾಸಗಳ ನಡುವೆ ಮಾಡುವ ವ್ಯಾಸಂಗ.
* ಹಿಂಸತೂಲಿಕಾತಲ್ಪ  – ಚುಚ್ಚುವ ಹಾಸಿಗೆ
* ಹೊಟ್ಟೆನೋವು          – ತುಂಬಿದ ಹೊಟ್ಟೆಯ ಪಶ್ಚಾತ್ತಾಪ
* ಹುಚ್ಚುಮೆಚ್ಚಿನ     – ಹುಚ್ಚನ್ನೇ ಮೆಚ್ಚಿಕೊಳ್ಳುವ ಪರಮಾವಧಿ ಸ್ಥಿತಿ.

 

*              *                *                  *          *

ನಾ.ಕಸ್ತೂರಿ – ನವೀನ ಗಾದೆಗಳು

ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂

“ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ.

ನವೀನ ಗಾದೆಗಳು

* ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ.

* ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು.

* ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು.

* ಬಂದದ್ದೆಲ್ಲ ಬರಲಿ, ಅಟಾಮಿಕ್ ಭಯ ಇರಲಿ.

* ಸಂಕಟ ಬಂದಾಗ ವೆಂಕಾಟಾ! ಅಣೂ ತೆಗಿ.

* ಹೋದರೊಂದು ಅಣು! ಆದರೊಂದು ಜಯ!

* ಅಣುಸಿಡಿಸೋ ವಿಜ್ಞಾನಕ್ಕಿಂತ ಅರಿತು ನುಡಿಯೋ ಅಜ್ಞಾನವೇ ಲೇಸು

* ಕುಂಬಳಕಾಯಿ ಕಳ್ಳ ಅಂದರೆ, ಅಣು ಬುಟ್ಟಿ ತಗೊಂಡು ಬಂದ.

* ನಾಗ ಸಾಕಿ ನಾಶ ಮಾಡೋದೆ.

* ಪರಪಂಚ ಗೆದ್ದವರನ್ನ ಪರಮಾಣುವಿನಲ್ಲಿ ಹೊಡೆದರು.

* ಕೊಂಕಳಲ್ಲಿ ಪರಮಾಣು ! ಕೈಯಲ್ಲಿ ಶರಣಾಗತಿ ಷರತ್ತು.

* ಮೇಲಿನೋರಿಗೆ ಚೆಲ್ಲಾಟಂ ; ಕೆಳಗಿರೋರಿಗೆ ಕೊಲ್ಲಾಟಂ.

* ಬೆಂಗಳೂರಿಗೆ ಬಂದರೆ ತಂಗಳೇ ಗತಿ

* ತೀರ್ಥ ಕೊಟ್ಟರೆ ಥೈರಾಯಿಡ್, ಮಂಗಳಾರತಿ ಹಿಡಿದರೆ ಮೆನಿಂಜೈಟಿಸ್.

* ಉದರ ನಿಮಿತ್ತಂ ಬಹುಕೃತ ಮೋಸಂ.

* ಕ್ಯೂ ನಿಲ್ಲಿಸೋಕೆ ಕೂಸೇ ಇಲ್ಲ, ಕುಲಾವಿಗೆ ಪಂಜಾಬಿನ ಉಲ್ಲು ಕೊಡಿ ಅಂದಳಂತೆ.

* ತಲ್ಲಣಿಸದಿರು ಕಂಡ್ಯ ತಾಳಿ ಕಟ್ಟಿದವನ ಕಂಡು.

* ಬೆರಳು ತೋರಿಸು ಅಂದರೆ ಕೊರಳನ್ನೇ ಕೊಡುತ್ತಾನೆ.

* ತಾಳಿದವನಿಗೆ ತಾಳಿಯೇ ನಾಸ್ತಿ.

* ಹತ್ತು ಮಕ್ಕಳ ಜನಕ, ಇನ್ನೆಲ್ಲಿಯ ನರಕ?

* ‘ಪಿಲ್’ ನುಂಗಿ ಸಾಯದವ, ‘ಬಿಲ್’ ನುಂಗಿ ಸತ್ತಾನೇ?

* ಪಾಲಿಗೆ ಬಂದವನೇ ಪುರುಷಾಮೃಗ.

* ಗುರುವಿಗೆ ಬೇಕಾದ್ದು ಉರು ಮಂತ್ರ.

* ಸೀರೆ ನೋಡಿ ಸೀಟ್ ಹಾಕಿ. ವಾಲೆ ನೋಡಿ ಮಾಲೆ ಹಾಕಿ.

* ಥಾನುಂಟೋ, ಮೂರು ಮೊಳವುಂಟೋ.

* ಪಾಪಿ ಬಸ್ಸಿಗೆ ಹೋದರೆ, ಮೊಣಕಾಲು ಮಡಿಸಲೂ ಜಾಗವಿಲ್ಲ.

* ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ.

* ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ.

* ತುಂಗೆ ನೀರಾದರೇನು? ಗಂಗೆ ನೀರಾದರೇನು? ಇಂಗು ಹಾಕಿದರೆ ಸಾರು ಚೆನ್ನ.

* ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು.

* ಹೊಳೆ ದಾಟಿದ ಮೇಲೆ ಅಂಬಿಗ ಬಿಲ್ ಕಳಿಸಿದ.

* ಲೇ ಅಂತ ಅವಳನ್ನು ಕರೆಯುವುದಕ್ಕೆ ಮೊದಲೇ, ಲೋ ಅಂತ ಅವಳೇ ಪ್ರಾರಂಭಿಸಿಬಿಟ್ಟಳು.

* ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.

* ಇಲ್ಲದ ಗಣೇಶನಿಗೆ ಬೆಲ್ಲದ ನೈವೇದ್ಯ
  ಇರೋ ಗಣೇಶನಿಗೆ ಇರೋದರಲ್ಲೇ ನೈವೇದ್ಯ.

*  ಮೂರು ಕೋರ್ಟ್ ಹತ್ತಿ ಮೂರು ನಾಮ ಮೆತ್ತಿಸಿಕೊಂಡ.

*       *      *      *       *    *     *       *

ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?

ಭಾರತದ ಮುಖ್ಯ ಭೂಮಿ ದೂರಾಗತೊಡಗಿತು. ಸರಿಯುತ್ತಿದ್ದ ಭಾರತವನ್ನು ಸುಮಾರು ಹೊತ್ತು ಸುಮಾರು ಹೊತ್ತು ವೀಕ್ಷಿಸಿದ ಚಂದ್ರು ನನ್ನತ್ತ ತಿರುಗಿ ನನ್ನ ಕೈಕುಲುಕಿದರು. ನಾನು ಅವರತ್ತ ತಿರುಗಿ ಏಕೆನ್ನುವಂತೆ ನೋಡಿದೆ.

“ಈ ದೇಶವನ್ನು ಒಂದು ಸಾರಿಯಾದರೂ ನಮ್ಮ ಜೀವಿತದಲ್ಲಿ ಬಿಟ್ಟು ಹೋಗುತ್ತಿದ್ದೆವಲ್ಲ” ಎಂದರು.

ನನಗೆ ಭಾರತದ ಭಯಾಜನಕ ಸ್ವರೂಪ ಒಮ್ಮೆಲೆ ಕಣ್ಣಿಗೆ ಕಟ್ಟಿತು. “ದರಿದ್ರ ದೇಶ. ನೋಡಿ ಹೇಗಿದೆ ಆ ಬಡತನ, ಆ ರಾಜಕಾರಣಿಗಳು. ಆ ಭ್ರಷ್ಟಾಚಾರ, ಆ ಜನಸಂಖ್ಯೆ, ಆ ಪರಿಸರ ನಾಶ ಸಾಕಪ್ಪ! ಈ ಶನಿಯನ್ನು ಬಿಟ್ಟು ದೂರ ಹೋಗುತ್ತಿರುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ” ಎಂದೆ.

ಇಬ್ಬರೂ ಸೇರಿಕೊಂಡು ಭಾರತವನ್ನು ಮನಸ್ಸು ತೃಪ್ತಿಯಾಗುವರೆಗೂ ಬಯ್ದೆವು. ನಾವು ಇಷ್ಟೊಂದು ದೇಶಪ್ರೇಮವೇ ಇಲ್ಲದವರೆಂದು ಗೊತ್ತಾದುದು ಆಗಲೇ………..”

ಈ ಪುಸ್ತಕವನ್ನು ಈಗಾಗಲೇ ಬಹಳಷ್ಟು ಜನ ಓದಿ ಹಳೆಯದಾಗಿರಬೇಕು. ನನಗೆ ಈಗ ಸಿಕ್ಕಿತು. ಇದರಲ್ಲಿ ಬರುವ ಕೆಲವು ವಾಕ್ಯ, ಸಂಭಾಷಣೆಗಳನ್ನು ಗುಂಪಿನಲ್ಲಿ ಕುಳಿತು ಗಟ್ಟಿಯಾಗಿ ಓದಿ ನಗಬೇಕೆನ್ನಿಸುತ್ತದೆ. ಈ ಪುಸ್ತಕ ಓದುವಾಗ ಆಗಾಗ ನಗಲು ನನಗೆ ಕನಿಷ್ಟ ಒಂದೆರಡು ನಿಮಿಷಗಳು ಬೇಕಾಗುವುದರಿಂದ ಮುಗಿಸುವುದು ಬಹಳ ನಿಧಾನವಾಗಬಹುದು. ಅಷ್ಟರಲ್ಲಿ ಈ ಪುಸ್ತಕ ಯಾವುದಿರಬಹುದೆಂದು ಊಹಿಸುತ್ತೀರಾ? ಒಂದು ಸುಳಿವು – ಇದು ತಿಳಿಹಾಸ್ಯದ ಶೈಲಿಯಲ್ಲಿರುವ ಒಂದು ಪ್ರವಾಸ ಕಥನ.

ಉತ್ತರಿಸುವವರೂ ಉತ್ತರಿಸದವರೂ ಇಲ್ಲಿ ಸರಿ ಸಮಾನರು. ಯಾಕೆಂದರೆ ಯಾರಿಗೂ ಬಹುಮಾನವಿಲ್ಲ! 🙂