ಕಥೆಯ ಕೊನೆಯ ಭಾಗ!

ಐದು ವರ್ಷಗಳ ಬಳಿಕ…………………….
ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು.
“ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು ಸುಶಾಂತ ಅಮೇರಿಕಾದಿಂದ ಐದು ಗಂಟೆಗೆಲ್ಲಾ ಬಂದು ಬಿಡುತ್ತಾರೆ.”
“ಕವಿತಾ, ನೀನು ಸ್ಕೂಲಿನಿಂದ ಯಾವಾಗ ಬರುತ್ತಿ?”,ಭರತ ಕೇಳಿದ.
“ನಾನು New Plymouth ಏರ್ ಪೋರ್ಟಿಗೆ ಹೋಗಿ ಅವರನ್ನು ಕಾರಿನಲ್ಲಿ ಕರೆದುಕೊಂಡೇ ಬರ್ತೀನಿ. ನೀನು ಬರುವಾಗ Child Care Centreಗೆ ಹೋಗಿ ಕೇಶವನನ್ನೂ ಕರೆದುಕೊಂಡೇ ಬಾ”, ಕವಿತಾ ಹೇಳಿದಳು.
…………………………………………….
ಕವಿತಾಳ ಜೊತೆಗೆ ಅವಳ ಮನೆ “ಸರೋಜಾ ಸದನ” ತಲುಪಿದ ತಕ್ಷಣ, ಪ್ರವಲ್ಲಿಕಾ ಭರತನನ್ನು ಪ್ರೀತಿಯಿಂದ ಆಲಂಗಿಸಿ, “ಅಣ್ಣಾ, ನಿನಗೆ ಒಂದು ಉಡುಗೊರೆ; ಕಣ್ಣು ಮುಚ್ಚಿ, ಕೈ ಚಾಚು!” ಎಂದಳು.
ಭರತನ ಚಾಚಿದ ಕೈಗೆ, ಪ್ರವಲ್ಲಿಕಾ ಚಿನ್ನದ ಎಳೆಗಳ ಒಂದು ರಾಖೀ ಕಟ್ಟಿ,
“ಈಗ ಕಣ್ಣು ತೆರೆ” ಎಂದಳು.
“ಪ್ರವಲ್ಲಿಕಾ ಥ್ಯಾಂಕ್ಸ್; ಆದರೆ ನನಗೆ ಮುಂದಿನ ರಾಖೀ ಹಬ್ಬಕ್ಕೆ ಚಿನ್ನದ ರಾಖೀ ಬೇಡ;ಚಿನ್ನದಂತಹ ಸೊಸೆ ಬೇಕು…..ಗೊತ್ತಾಯ್ತೇನೋ, ಸೋಮಾರಿ ಸುಶಾಂತ್!”ಎಂದು ಭರತ ಸುಶಾಂತನನ್ನು ಗೇಲಿ ಮಾಡಿದ.
ಸುಶಾಂತ ನಗುತ್ತ,”ನಾನೂ ಅದನ್ನೇ ಹೇಳ್ತಾ ಇದ್ದೇನೆ. ಮೇಡಮ್ ನನ್ನ ಮಾತನ್ನೇ ಕೇಳೋದಿಲ್ಲ” ಎಂದು ಪ್ರವಲ್ಲಿಕಾಳನ್ನು ಛೇಡಿಸಿದ.
“ಸುಶಾಂತ, ನಿನ್ನ ಜವಾಬುದಾರಿ ಹಾರಿಸಿಕೊಳ್ಳಬೇಡ”,ಎಂದು ನಕ್ಕ ಪ್ರವಲ್ಲಿಕಾ, “OK, I promise to present your daughter-in-law for the next ಹಬ್ಬಾ!”,ಎಂದು ಕಣ್ಣರಳಿಸಿ ಕವಿತಾಳಿಗೆ ಹೇಳಿದಳು.
‘ಸರೋಜಾ ಸದನ’ ಹರುಷದ ನಗುವಿನಿಂದ ತುಂಬಿತು.

ಕಥೆ ಬಗ್ಗೆ ಇಲ್ಲಿ ಮಾತಾಡೋಣ.

ಕಥೆಯ ಬೆಳವಣಿಗೆಯನ್ನು ಚರ್ಚಿಸಲು ಇದ್ದ ಆ ದಾರ ಹನುಮನ ಬಾಲದಂತೆ ಉದ್ದವಾಗಿರುವುದರಿಂದ ಈ ಹೊಸ ಎಳೆಯ ಅವತಾರ. ಕಥೆ ಬಗ್ಗೆ ಮಾತಾಡುವುದಲ್ಲದೆ, ಕಥೆಗಾರರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಥ(ದ)ನ ಮುಂದುವರೆಯಲಿ.

ಭಾಗ – 23

ಮನೋಶಾಸ್ತ್ರ ಹಾಗು ಮಾನವಶಾಸ್ತ್ರ ಇವು ಕವಿತಾಳ ಮೆಚ್ಚಿನ ವಿಷಯಗಳು.ಅಲ್ಲದೆ ಅವಳು ಒಂದು ರೀತಿಯ ಸ್ತ್ರೀಸ್ವಾತಂತ್ರ್ಯವಾದಿ. ಕಾಲೇಜಿನಲ್ಲಿ ಜರುಗುವ ಚರ್ಚಾಕೂಟಗಳಲ್ಲಿ, ಮಾನವ ಸಮಾಜ ಪ್ರಾರಂಭವಾದ ಗಳಿಗೆಯಿಂದ ಯಾವ ಯಾವ ವಿಧಾನಗಳಲ್ಲಿ ಸ್ತ್ರೀಯ ಮೇಲೆ ಅನ್ಯಾಯ ನಡೆದಿದೆ ಎನ್ನುವದನ್ನು ಅವಳು ತರ್ಕಬದ್ಧವಾಗಿ ವಿವರಿಸುತ್ತಿದ್ದಳು. ಕೇವಲ ಸಮಾಜವಷ್ಟೇ ಅಲ್ಲ, ನಿಸರ್ಗವೂ ಸಹ ಮಹಿಳೆಗೆ ಅನ್ಯಾಯ ಮಾಡಿದೆ; ಶಿಶುವಿನ ಗರ್ಭಧಾರಣೆಯು ಸ್ತ್ರೀಯ ಜೈವಿಕ ಅವಶ್ಯಕತೆ ಹಾಗು ಅನಿವಾರ್ಯತೆ; ಮಾನವ ಸಂತಾನದ ಉಳಿವು ಅವಳ ಪಾಲಿನ ವಿಧಿ. ಇದರ ಪರಿಣಾಮವೆಂದರೆ ಪುರುಷನನ್ನು ಆಕರ್ಷಿಸುವ ಹಾಗು ಅವಲಂಬಿಸುವ ಅನಿವಾರ್ಯತೆ ಅವಳ ಸಾಮಾಜಿಕ ಹಣೆಬರಹ ಹಾಗು ವೈಯುಕ್ತಿಕ ದುರಂತ. ಸ್ತ್ರೀಸ್ವಾತಂತ್ರ್ಯವು ಪರಮಾವಧಿಯನ್ನು ತಲುಪಿರುವ ಪಾಶ್ಚಾತ್ಯ ದೇಶಗಳಲ್ಲೂ ಸಹ ಅಂಗಾಂಗ ಪ್ರದರ್ಶನ ಮಾಡುವದು ಹೆಣ್ಣಿಗೆ ಅನಿವಾರ್ಯವಾಗಿದೆ ಎನ್ನುವದು ಸ್ತ್ರೀಕುಲದ ಸಾಮೂಹಿಕ ದೌರ್ಬಲ್ಯದ ನಿದರ್ಶನ. ಇದನ್ನು ತಪ್ಪಿಸಬೇಕು ಎನ್ನುವದು ಕವಿತಾಳ ಆವೇಶಭರಿತ ಪ್ರತಿಪಾದನೆ. ಅವಳ ದೈನಂದಿನ ಉಡುಗೆ ತೊಡುಗೆ ಹಾಗು ಅವಳ ಆಚರಣೆ ಸಹ ಅವಳ ಈ ವಿಚಾರಗಳಿಗೆ ಅನುಗುಣವಾಗಿದ್ದವು. ಅವಳ ಚೆಲುವು ಹಾಗು ನಿಲುವಿಗೆ ಮರುಳಾದವರೆಷ್ಟೋ ಜನ. ಆದರೆ ಅವಳು ಯಾರಿಗೂ ‘ಕ್ಯಾರೆ’ ಎಂದವಳಲ್ಲ. ಅಂತಹ ಕವಿತಾ ಭರತನನ್ನು ಕದ್ದು ಕದ್ದು ನೋಡಿದಳು. ಪ್ರವಲ್ಲಿಕಾಳ ಬಗೆಗೆ ಗೊತ್ತಿದ್ದೂ, ಭರತನನ್ನು ಮನದಲ್ಲೆ ವರಿಸಿದಳು. ಇಂತಹದನ್ನೆಲ್ಲ ಸ್ವತಹ ಅನುಭವಿಸಿದ್ದರಿಂದಲೆ, ಭರ್ತೃಹರಿಯಂತಹ ಕವಿ “ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ!” ಎಂದು ಹಲುಬಿದ್ದು!
ಮಧ್ಯರಾತ್ರಿ ಎದ್ದೋಡುತ್ತಿರುವ ಭರತನನ್ನು ಕಂಡ ಕವಿತಾ ತನ್ನ ದಿಟ್ಟ ಸ್ವಭಾವಕ್ಕನುಗುಣವಾಗಿ ಅವನನ್ನು ಹಿಂಬಾಲಿಸಿ ಹೋದಳು, ಅವನಲ್ಲಿ ತನ್ನ ಮನಸ್ಸನ್ನು ತೋಡಿಕೊಂಡಳು. ಇದು ಅವಳ ಮೊದಲ ಪಲಾಯನವಾದ ಕಾರಣ ತುಸು ಹೆದರಿದ್ದಳು. ಭರತ ಅವಳನ್ನು ಬೆಂಗಳೂರಿಗೆ ಮರಳಿಸುವ ಮಾತನ್ನಾಡಿದಾಗ ಅವಳ ಸ್ವಭಾವ ಮತ್ತೆ ಜಾಗೃತವಾಯಿತು.
“ನೋ, ಭರತ್ ನೋ! ಕಾರನ್ನು ನೆಟ್ಟಗೆ ಮುಂಬಯಿ ಕಡೆಗೆ ಓಡಿಸು!” ಎಂದು ಭರತನಿಗೆ ಆಣತಿ ಇತ್ತಳು. ಭರತ ದಿಗ್ಭ್ರಾಂತನಾದ. ಜಿಂಕೆಯೆಂತಹ ಈ ಹುಡುಗಿಯ ಜೇನುದನಿಯಲ್ಲಿ ಇಷ್ಟು ಅಧಿಕಾರ, ಇಷ್ಟು ಕಾಠಿಣ್ಯ ಇರಬಹುದೆಂದು ಅವನು ಎಣಿಸಿರಲಿಲ್ಲ.

ಅಷ್ಟರಲ್ಲಿ ಕವಿತಾಳ ಮೊಬೈಲ್ ರಿಂಗಣಿಸಿತು. ಅತ್ತಲಿಂದ ಪ್ರವಲ್ಲಿಕಾಳ ಕಾತರದ ಧ್ವನಿಃ” ಕವಿತಾ, ಎಲ್ಲಿದ್ದೀ? ನಾವೆಲ್ಲರೂ ಗಾಬರಿಯಾಗಿದ್ದೇವೆ.”
“ಹೆದರಬೇಡ, ವಲ್ಲೀ. ನಾನು ಭರತನನ್ನು ಓಡಿಸಿಕೊಂಡು ಹೋಗುತ್ತಿದ್ದೇನೆ. ಎಲ್ಲಿ ಹೋಗುತ್ತಿದ್ದೇನೊ ಗೊತ್ತಿಲ್ಲ. ಮದುವೆ ಮುಗಿದ ನಂತರ ನಿನಗೆ ಖಂಡಿತವಾಗಿಯೂ ತಿಳಿಸುತ್ತೇನೆ!” ಇಷ್ಟು ಹೇಳಿದ ಕವಿತಾ ಫೋನ್ ಕಟ್ ಮಾಡಿದಳು. ಭರತನೆಡೆಗೆ ವಿಜಯದ ನಗೆ ಬೀರಿದಳು.
………………….
ಭರತ ಹಾಗು ಕವಿತಾ ಮುಂಬಯಿ ತಲುಪಿದಾಗ ಬೆಳಗಿನ ಹತ್ತು ಗಂಟೆ.

ಬೆಂಗಳೂರಿನಿಂದ ಚಿತ್ರದುರ್ಗದವರೆಗೆ, ಅಂದರೆ ಸುಮಾರು ೨೦೦ ಕಿಲೊಮೀಟರುಗಳವರೆಗೂ ವಾಹನ ಚಲಾಯಿಸಿದ ಭರತ, ಚಹಾಪಾನಿಗೆಂದು ಅಲ್ಲಿ ನಿಲ್ಲಿಸಿದಾಗ ಆಕಸ್ಮಿಕವಾಗಿ ಕವಿತಾಳನ್ನು ನೋಡಿದ. ಕವಿತಾ ಆತನ ಜೊತೆಗೇ ಸಾಗುವ ತನ್ನ ಉದ್ದೇಶ ಪ್ರಕಟಿಸಿದಾಗ ಅವನು ಹೈರಾಣಾದ. ದೈಹಿಕವಾಗಿ ಹಾಗು ಮಾನಸಿಕವಾಗಿ ಆತ ಆಯಾಸಗೊಂಡಿದ್ದನ್ನು ಗಮನಿಸಿದ ಕವಿತಾ ಅಲ್ಲಿಂದ ಮುಂದೆ ಕಾರಿನ ಚಕ್ರವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡಳು. ಭರತ ಅವಳ ಪಕ್ಕದಲ್ಲಿ ಕುಳಿತುಕೊಂಡ. ಚೆಲುವೆಯ ಕುತೂಹಲದ ಪ್ರಶ್ನೆಗಳಿಗೆ ಈ ರಸಿಕರಾಜ, ಕರಗುತ್ತಿರುವ ಹಿಮದ ಬಂಡೆಯಂತಾದ. ತನ್ನ ಪ್ರಯಾಣದ ಉದ್ದೇಶ, ಹಿನ್ನೆಲೆ ಎಲ್ಲವನ್ನೂ ತೋಡಿಕೊಂಡು ಬಿಟ್ಟ. ರಾಣಿಬೆನ್ನೂರು ತಲುಪುವಷ್ಟರಲ್ಲಿ ಅಂದರೆ ಒಂದು ನೂರು ಕಿಲೋಮೀಟರ ಕ್ರಮಿಸುವ ಒಂದು ತಾಸಿನ ಅವಧಿಯಲ್ಲಿ, ಭರತನ ಜಾತಕವೆಲ್ಲ ಕವಿತಾಳಿಗೆ ಕರತಲಾಮಲಕವಾಯಿತು. ಪ್ರವಲ್ಲಿಕಾ ಭರತನಿಗೆ ಸೋದರಿಯಾಗುವದರಿಂದ, ತನ್ನ ಪ್ರತಿದ್ವಂದಿಯಾಗಲು ಸಾಧ್ಯವಿಲ್ಲವೆನ್ನುವದು ಹೊಳೆದು ಕವಿತಾಳ ಮನಸ್ಸು ನಿಸೂರಾಯಿತು. ‘ಛೇ, ಸ್ವಾರ್ಥಿ ಮನಸ್ಸೆ!’ ಎಂದು ತನ್ನನ್ನೆ ಬೈದುಕೊಂಡಳು.

“ಭರತ, ರಾಷ್ಟ್ರವಿಭಜನೆಯ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ತನ್ನ ಮಗನನ್ನು ಕಳೆದುಕೊಂಡ ಒಬ್ಬ ಹಿಂದೂ ಗಾಂಧೀಜಿಯವರಲ್ಲಿ ತನ್ನ ಆಕ್ರೋಶವನ್ನು ತೋಡಿಕೊಂಡನಂತೆ. ಗಾಂಧೀಜಿ ಅವನಿಗೆ ಹೇಳಿದ ಪರಿಹಾರ ಏನು ಗೊತ್ತೆ? ‘ಒಬ್ಬ ಅನಾಥ ಮುಸ್ಲಿಮ್ ಹುಡುಗನನ್ನು ಸಾಕು, ಅವನನ್ನು ಉತ್ತಮ ಮುಸ್ಲಿಮ್ ನನ್ನಾಗಿ ಬೆಳೆಸು’ ಎಂದು. ನಿನ್ನ ಸಾಕು ತಂದೆ ಸಮೀಉಲ್ಲಾಖಾನ ರಾಷ್ಟ್ರೀಯವಾದಿ ಗಾಂಧೀಭಕ್ತ ಎಂದು ಹೇಳಿದೆಯೆಲ್ಲ. ನೀನು ಅನಾಥ ಹಿಂದೂ ಶಿಶುವೆಂದೇ ಅವರು ನಿನ್ನನ್ನು ಹಿಂದು ಬಾಲಕನಂತೆ ಬೆಳೆಸಿರಬೇಕು” ಎಂದು ಕವಿತಾ ವಿಶ್ಲೇಷಿಸಿದಳು. ಧಾರವಾಡವನ್ನು ತಲುಪಿದಾಗ, ಭರತ ಕಾರಿನ ಚಕ್ರವನ್ನು ತೆಗೆದುಕೊಂಡ. ಕವಿತಾ ತೂಕಡಿಸುತ್ತ ಅವನ ಭುಜಕ್ಕೊರಗಿದಳು. ಬೆಳಗಾವಿ ಹಾಗು ಕೊಲ್ಲಾಪುರ ಭರದಿಂದ ಹಿಂದೆ ಸರಿದವು. ಕೊಲ್ಲಾಪುರದಲ್ಲಿ ಕಾರಿನ ಚಕ್ರವನ್ನು ಹಿಡಿದ ಕವಿತಾ ಪುಣೆ ಸಮೀಪ ಬಂದಾಗ ಪೂರ್ವಾಕಾಶದಲ್ಲಿ ಬೆಳ್ಳಿ ಚುಕ್ಕೆ ಕಾಣಿಸುತ್ತಿತ್ತು. ಭರತ ಹಾಗು ಕವಿತಾಳಿಗೆ ಇದು ಅವರ ಆಗಾಮಿ ಬಾಳಿನ ಬೆಳ್ಳಿ ಚುಕ್ಕೆಯಂತೆ ಭಾಸವಾಯಿತು. “ಭರತ್ ನ್ಯೂಝೀಲ್ಯಾಂಡಿನಲ್ಲಿರುವ ಭಾರತೀಯ ಸಂಸ್ಥೆಯೊಂದು ತಾನು ನಡೆಯಿಸುತ್ತಿರುವ ಹೈಸ್ಕೂಲಿಗೆ ಶಿಕ್ಷಕಿಯರು ಬೇಕೆಂದು ಜಾಹೀರಾತು ಕೊಟ್ಟಿದ್ದರು. ನಾನು ಅಲ್ಲಿ apply ಮಾಡಿ ಈಗಾಗಲೇ ಒಂದು ತಿಂಗಳಾಗಿದೆ. ಇವತ್ತೊ ನಾಳೆಯೊ ನನಗೆ appointment order ಬರಬಹುದು. ನನ್ನ ಜೊತೆಗೆ ನೀನೂ ಬಂದು ಬಿಡು” ಎಂದು ಕವಿತಾ ತನ್ನ ಪ್ರಪ್ರಥಮ ಪ್ರಿಯಕರನಿಗೆ ಸಲಹೆ ಮಾಡಿದಳು. ಪ್ರಿಯತಮನಿಗೂ ಸಹ ಇದು ಪಟಾಯಿಸಿತು. ಭಾರತೀಯ ಸೈನ್ಯದವರಲ್ಲಿ ವಿನಂತಿಸಿದರೆ, ಅವರು ಕೆಲವು ಲಕ್ಷ ಡಾಲರು ಖರ್ಚು ಮಾಡಿ ತನ್ನನ್ನು ನ್ಯೂಝೀಲ್ಯಾಂಡಿನಲ್ಲಿ ನೆಲೆಗೊಳಿಸಿಯಾರು ಎಂದು ಅವನ ವಿಚಾರಧಾರೆ ಹರಿಯಿತು. ತನ್ನ ಹೆತ್ತಮ್ಮನನ್ನು ಒಂದು ಸಲ ಕಣ್ಣಾರೆ ಕಂಡು, ಮುಂದಿನ ಕ್ರಮ ಯೋಚಿಸೋಣ ಎಂದು ಅವನು ನಿರ್ಧರಿಸಿದ. ಆದರೆ ವಿಧಿಯ ಆಟವನ್ನು ಬಲ್ಲವರಾರು? ಹತ್ತು ಜನ ಆಟಗಾರರ ಕಾಲಿಗೆ ಸಿಕ್ಕ ಫುಟ್ ಬಾಲಿನಂತೆ ಅವನ ಜೀವನ ಎತ್ತೆತ್ತೆಲೊ ಸಾಗುತ್ತಿದೆ. ಅವನು ತನ್ನ ಗೋಲನ್ನು ತಲುಪಿಯಾನೇ ಅಥವಾ ಸ್ಟಾರ್ ಟಿ.ವಿ.ಯಲ್ಲಿ ಬರುತ್ತಿರುವ ಏಕತಾ ಕಪೂರಳ ಹಿಂದಿ ಧಾರಾವಾಹಿಗಳಂತೆ ಕೊನೆಯಿಲ್ಲದೆ ಓಡುವನೇ?

**********************************************************

ಭಾಗ – 22

ಅಮ್ಮನನ್ನು ನೋಡುವ ತವಕದಲ್ಲಿ ಹಳ್ಳಿ ಬಿಟ್ಟಾಗ ಭರತನ ಮನದ ತುಂಬಾ ಸರೋಜಮ್ಮನವರ ರೂಪವೇ ತುಂಬಿ ಹೋಗಿತ್ತು ಇಹದ ಅರಿವೇ ಇರಲಿಲ್ಲದವನಿಗೆ ಅವನ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರಿದ್ದಾರೆ ಎಂಬ ಗಮನ ಹೋಗುವುದು ಹೇಗೆ?

ಕೇಶವನ ಮನೆಯನ್ನು ಹಿಂಭಾಗದಿಂದ ಹೊಕ್ಕು ಕಿಟಕಿಂದಲೇ ಸರೋಜಮ್ಮನ ದರ್ಶನ ಮಾಡಿಕೊಂಡು ಭಾರವಾದ ಮನಸ್ಸಿನಿಂದ ಹೊರಬಂದು ಕಾರು ಓಡಿಸತೊಡಗಿದ ಭರತ ಖಾನ ಕಾರು ಬಾಂಬೆ ಕಡೇಗೆ ಶರವೇಗದಿಂದ ಓಡುತ್ತಿತ್ತು. ಭರತನ ಮನ ವ್ಯಗ್ರ ವಾಗಿತ್ತು ತನ್ನ ಮುಂದಿನ ದಾರಿ ಏನು ಎಂದು ಚಿಂತಿಸುತ್ತಿದ್ದ ಅವನು ಸುಸ್ತಾದರೂ ಲೆಕ್ಕಿಸದೇ ಮಧ್ಯಾನ್ಹ ದ ವರೆಗೂ ಒಂದೇ ಸಮನೆ ಕಾರು ಓಡಿಸಿದ ಹೊಟ್ಟೆಯಲ್ಲಿ ಹಸಿವು ಬಡಬಾಗ್ನಿಯಂತೆ ಮೇಲೆದ್ದಾಗ ಯಾವುದೋ ಢಾಬಾ ದ ಬಳಿ ಕಾರು ನಿಲ್ಲಿಸಿ ಹೊಟ್ತೆಗೆ ಹಾಕಿಕೊಂಡು ಮತ್ತೆ ಕಾರಿಗೆ ಬಂದಾಗ ಅವನಿಗೆ ಶಾಕ್! ಹಿಂದಿನ ಸೀಟಿನಲ್ಲಿ ಬೆಕ್ಕಿನ ಮರಿಯಂತೆ ಮುದುರಿ ಕೂತಿದ್ದಳು ಕವಿತಾ…

ಭರತನಿಗೆ ಅಚ್ಚರಿಯಾದರೂ ತೋರ್ಪಡಿಸಿ ಕೊಳ್ಳದೆ ಕವಿತಾಳನ್ನು ಕೆಳಗಿಳಿಯಲು ಸೂಚಿಸಿದ ಹಸಿವಿನಿಂದ ಕಂಗಾಲಾಗಿ ಹೋಗಿದ್ದಳು ಕವಿತಾ. ಕಾರಿನಿಂದ ಹೊರಗೆ ಹೆಜ್ಜೆ ಇಟ್ಟವಳೇ ಕಣ್ಣು ಕತ್ತಲಿಟ್ಟು ನೆಲಕ್ಕೆ ವಾಲುತ್ತಿದ್ದವಳನ್ನು ಭುಜ ಹಿಡಿದು ಕರೆದೊಯ್ಯದ ಭರತ .ಸ್ವಲ್ಪ ತಿಂಡಿ ತಿಂದ ಮೇಲೆ ಗೆಲುವಾದಳು ಕವಿತಾ. ಯಾಕೆ ನೀನು ನನ್ನ ಹಿಂದೆ ಬಂದಿದ್ದು…? ಭರತನ ಕೋಪ ತುಂಬಿದ ವಿಚಾರಣೆಗೆ ಕವಿತಾಳ ಮೌನವೇ ಉತ್ತರವಾಗಿತ್ತು.
`ನಡೆ ನಿನ್ನನ್ನು ವಾಪಸ್ಸು ಊರಿಗೆ ಕಳಿಸುವ ಏರ್ಪಾಡು ಮಾಡುತ್ತೇನೆ…’ ಭುಸುಗುಟ್ಟುತ್ತಾ ಎದ್ದು ಹೊರಟವನ ತೋಳು ಜಗ್ಗಿ ವಾಪಸ್ಸು ಕೂರಿಸಿ ಉಸುರಿದಳು`ನಾನು ನಿನ್ನೊಂದಿಗೇ ಬರುವವಳು…’
ಏನು ಹೇಳ್ತಿದೀಯಾ…ನನ್ನ ಪಾಸ್ಟ್ ನಿನಗೆ ಗೊತ್ತಾ…?
ಗೊತ್ತು…
ಗೊತ್ತಿದ್ದೇ ಬಂದೆಯಾ…?
ಹೌದು…
ಭರತ ನಿರುತ್ತರನಾದ
ಭರತನಿಗೆ ಕವಿತ ಮಾರು ಹೋದಂತೆ ಈ ಜೇನುದನಿಯ ಜಿಂಕೆ ಕಣ್ಣಿನ ಚೆಲುವೆಯೆಡೆಗೆ ಭರತನೂ ಸೆಳೆಯಲ್ಪಟ್ಟಿದ್ದ ಆದರೆ ತನ್ನ ಜೀವನ ಬೆಂಕಿಯೊಂದಿಗೆ ಸರಸ ಎಂದು ಅವನಿಗೆ ಗೊತ್ತಿತ್ತಾದ್ದರಿಂದ
ಯಾರನ್ನೂ ತನ್ನ ಜೀವನದಲ್ಲಿ ಒಳಗೊಳ್ಳಲು ಅವನಿಗೆ ಮನಸಾಗುತ್ತಿಲ್ಲ
ಕವಿತಾಳಿಗೂ ಈಮಾತನ್ನು ಸ್ಪಷ್ಟವಾಗಿ ಹೇಳಿದ`ಭಾರತ ಸರ್ಕಾರದ ಸೇವೆಯಲ್ಲಿ ನಾನು ಸೇರಿರುವುದಂತೂ ನಿಜ ಆದರೆ ಒಮ್ಮೆ ಪ್ಯಾನ್ ಇಸ್ಲಾಮಿಕ್ ಮೂಮೆಂಟಿನಲ್ಲಿ ಸಕ್ರಿಯನಾಗಿದ್ದ ನನ್ನನ್ನು
ಹೇಗಾದರೂ ಓಸಾಮಾನ ಭಂಟರು ಪತ್ತೆ ಹಚ್ಚುತ್ತಾರೆ ಒಸಾಮ ನನಗೇನೂ ಮಾಡಲಾರ ಆದರೆ ಮಿಕ್ಕವರು ನನ್ನನ್ನು ಉಳಿಸುವುದಿಲ್ಲ. ಅದಕ್ಕೆ ಇಲ್ಲಿಂದ ದೂರ ಓದಿ ಹೋಗೋಣವೆಂದಿದ್ದೇನೆ ಅಮೇರಿಕಾ ಅಥ್ವಾ ಯೂರೋಪ್ ನಲ್ಲಿ ನನಗೆ ವಿಶ್ವಾಸವಿಲ್ಲ. ಬಹುಷಃ ನ್ಯೂಝೀಲ್ಯಾಂಡ್ ಅಥ್ವಾ ಆಸ್ಟ್ರೇಲಿಯಾಕ್ಕೆ…ಅಥ್ವಾ ಕೆರೆಬಿಯನ್…?ನೀನು ನನ್ನೊಂದಿಗೆ ಬಂದರೆ ಇನ್ನು ಕೆಲವು ವರ್ಷ ಭಾರತಕ್ಕೆ ಬರಲಾಗದು.
ಬರುವುದು ಹಾಗಿರಲಿ ನಿಮ್ಮವರೊಂದಿಗೆ ಸಂಪರ್ಕ ಸಹ ಇಟ್ಟುಕೊಳ್ಳಲಾಗದು ಹೇಳು ಇದಕ್ಕೆಲ್ಲಾ ರೆಡಿ ಇದ್ದೀಯಾ…?ಅಷ್ಟಕ್ಕೂ ನೀನು ಇಷ್ಟೇಲ್ಲಾ ಕಷ್ಟ ಪಟ್ಟು ನನ್ನೊಂದಿಗೆ ಬರುವ ಅಗತ್ಯ ಇದೆಯಾ ಅಂತ
ಮೊದಲು ಯೋಚಿಸು…ಸುಮ್ಮನೆ ವಾಪಸು ಮನೆಗೆ ಹೋಗು.. ಮನೆಯವರು ತೋರಿಸುವ ಹುಡುಗನನ್ನು ಮದುವೆಯಾಗಿ ಸುಖವಾಗಿರು…ನನ್ನೊಂದಿಗೆ ಬಂದು ಮುಳ್ಳಿನ ಹಾದಿಯಲ್ಲಿ ನೀನು ಕಷ್ಟಪಡುವುದು ನಾ ನೋಡಲಾರೆ…

ಭಾಗ – 21

ಭರತ ಪತ್ರವನ್ನು ಓದಿ ಮುಗಿಸಿದ. ಅವನನ್ನು ಬಹುದಿನಗಳಿಂದ ಕಾಡುತ್ತಿದ್ದ “ನಾನಾರು?” ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಿತ್ತು. ಸಮೀಯುಲ್ಲಾ ತನ್ನ ಹೆತ್ತ ತಂದೆ ಇರಲಾರರು ಎಂಬ ಅನುಮಾನ ಅವನಿಗೆ ಮೊದಲೇ ಇತ್ತು. ಸಮೀಯುಲ್ಲಾರ ಸಾತ್ವಿಕ ಸ್ವಭಾವಕ್ಕೂ, ತನ್ನಲ್ಲಿದ್ದ ಉಗ್ರ ಗುಣಕ್ಕೂ ಹೋಲಿಕೆಯೇ ಇಲ್ಲದ್ದು ಅವನ ಗಮನಕ್ಕೂ ಎಷ್ಟೋ ಬಾರಿ ಬಂದಿತ್ತು. ಯಾರನ್ನೂ ನೋಯಿಸೆನೆನ್ನುವ ಸಮೀಯುಲ್ಲಾರನ್ನು ನೋಡಿದಾಗ – “ಇಂತಹ ತಂದೆಗೆ ಮುಟ್ಟಿದ್ದೆಲ್ಲ ಸುಟ್ಟುಹಾಕುವ ಭಸ್ಮಾಸುರ ಪ್ರವೃತ್ತಿಯ ತಾನು ಮಗನಾಗಿ ಹೇಗೆ ತಾನೇ ಹುಟ್ಟಿದೆ?” ಎಂದು ಅವನಿಗೆ ಎಷ್ಟೋ ಬಾರಿ ಅನ್ನಿಸಿತ್ತು. ತಂದೆ ಯಾರೆಂದೇ ತಿಳಿದಿರದ, ತಾಯಿಯಿದ್ದೂ ಅವಳಿಂದ ದೂರವಿದ್ದ, ಸಾಕು ತಂದೆಯನ್ನು ತನ್ನ ಕೈಯಾರೆ ಕೊಂದ ತನ್ನ ದುರದೃಷ್ಟಕರ ಬದುಕಿಗಾಗಿ ಮನಸಾರೆ ಅಳಬೇಕೆನ್ನಿಸಿತು.

ಭರತನಿಗೆ ಪ್ರವಲ್ಲಿಕಾ ಸಂಬಂಧದಲ್ಲಿ ತಂಗಿಯಾಗುವುದರಿಂದ ಅವಳೊಡನೆ ಮದುವೆಯಾಗುವ ಯೋಚನೆಯನ್ನು ಕೈಬಿಡುವಂತೆ ಸರೋಜಮ್ಮ ತಿಳಿಸಿದ್ದರು. ಈ ವಿಷಯವನ್ನು ಪ್ರವಲ್ಲಿಕಾಳಿಗಾಗಲೀ, ಧಾರಿಣಿಗಾಗಲೀ ಹೇಳುವುದು ಸಾಧ್ಯವಿರಲಿಲ್ಲ. ಅವರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುವುದು ತನ್ನಿಂದಾಗದು ಎಂಬ ಅಳುಕು ಮೂಡಿತು. ಯಾರಿಗೂ ಹೇಳದೆ, ಕೇಳದೆ ಈ ಜಾಗದಿಂದ ಮರೆಯಾಗಿ ಹೋಗುವುದೇ ತನಗಿರುವ ಕೊನೆಯ ದಾರಿ ಎಂದು ನಿರ್ಧರಿಸಿದ. ಮಧ್ಯರಾತ್ರಿ ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿ ಮುಳುಗಿದ್ದಾಗ ಮನೆಯಿಂದ ಹೊರಬಿದ್ದ. ಕಾರು ಸ್ಟಾರ್ಟ್ ಆದ ಸದ್ದಿಗೆ ಮನೆಯವರಿಗೆ ಎಚ್ಚರವಾದೀತೇನೋ ಎಂದು ಹೆದರಿದ. ಹಾಗೇನೂ ಆಗಲಿಲ್ಲ. ಕತ್ತಲೆಯಲ್ಲಿ ಮುಳುಗಿದ್ದ ಮನೆ ಹಿಂದೆ ಉಳಿಯಿತು. ಯಾರೊಬ್ಬರಿಗೂ ಬೇಕಾಗದೆ ಈ ಲೋಕಕ್ಕೆ ಬಂದಿಳಿದ ಈ ಭರತಖಾನನೆಂಬ ಜೀವಿಯನ್ನು ಗಮನಿಸುವವರಾದರೂ ಯಾರು? ತಾನು ಎಲ್ಲಿಗೆ ಹೋದರೂ ಯಾರಿಗೆ ಏನಾಗಬೇಕು ಎಂಬ ನಿರಾಸೆಯ ನಗು ಅವನ ಮುಖದಲ್ಲಿ ಹರಡಿಕೊಂಡಿತು.

ಸರೋಜಮ್ಮನವರನ್ನು ಕೆಲವು ದಿನಗಳಿಂದ ನೋಡಿದ್ದರೂ, ಈಗ ಅವರೇ ತಾಯಿಯೆಂದು ತಿಳಿದ ಮೇಲೆ ತನ್ನ ಪಾಪಗಳನ್ನೆಲ್ಲಾ ಅವರಲ್ಲಿ ನಿವೇದಿಸಬೇಕೆಂಬ ಬಯಕೆ ಮೂಡಿತು. ಆದರೆ ಸರೋಜಮ್ಮ ಭರತ ತಮ್ಮನ್ನೆಂದೂ ನೋಡುವ ಪ್ರಯತ್ನ ಮಾಡಬಾರದೆಂದು ಪತ್ರದಲ್ಲಿ ಕಟ್ಟುನಿಟ್ಟಾಗಿ ತಿಳಿಸಿದ್ದರು. ಇಷ್ಟು ದಿನ ಬಚ್ಚಿಟ್ಟಿದ್ದ ಗುಟ್ಟು ಹೊರಗೆ ಬಂದರೆ ಅದರ ಪರಿಣಾಮ ಏನಾಗಬಹುದೆಂಬ ಅರಿವು ಭರತನಿಗೂ ಇತ್ತು. ಆದರೂ ತನ್ನ ತಾಯಿಯಾದ ಆಕೆಯನ್ನು ಒಂದೇ ಒಂದು ಬಾರಿ ನೋಡಲೇಬೇಕೆನ್ನಿಸಿತು. ಹುಟ್ಟಿದಾಗಲೇ ತನ್ನನ್ನು ತೊರೆದು ಹೋಗಿದ್ದರೂ ಆ ತಾಯಿಯ ಬಗ್ಗೆ ಅವನ ಹೃದಯದಲ್ಲಿ ಪ್ರೀತಿ ತುಂಬಿಕೊಂಡಿತು. ಒಂದೇ ಬಾರಿ ಅಮ್ಮನನ್ನು ನೋಡುತ್ತೇನೆ. ಅವಳಿಗೆ ಯಾವ ಕೇಡನ್ನೂ ಬಯಸಲಾರೆ. ದೂರದಿಂದಲಾದರೂ ಅವಳನ್ನು ಒಮ್ಮೆ ನೋಡಿ ಎಲ್ಲರಿಂದಲೂ ದೂರ.. ಬಹುದೂರ …ಹೋಗಿಬಿಡುತ್ತೇನೆ ಎಂದುಕೊಂಡ.

ಭರತನ ಮನಸ್ಸಿನ ಆಲೋಚನೆಗಳಂತೆಯೇ ಅವನ ಕಾರು ಶರವೇಗದಿಂದ ಬೆಂಗಳೂರಿನ ಕಡೆಗೋಡುತ್ತಿತ್ತು. ಆ ಕ್ಷಣ ಅವನ ಮನದಲ್ಲಿ ತಾಯಿಯ ಮಮತಾಮಯ ರೂಪವನ್ನು ಕಣ್ತುಂಬ ಕಾಣುವ ಹಂಬಲ ತುಂಬಿಹೋಗಿತ್ತು. ಅವ್ಯಕ್ತ ಖುಷಿ ಅವನ ನರನಾಡಿಗಳಲ್ಲಿ ಹರಿಯುತ್ತಿತ್ತು. ಕಾರಿನಲ್ಲಿದ್ದ ಸ್ಪೀಕರಿಗೆ ಚಾಲನೆ ಕೊಟ್ಟ. ಎದೆಯಲ್ಲಿರುವ ದೇಶಭಕ್ತಿಯನ್ನೆಲ್ಲಾ ಕಂಠಕ್ಕಿಳಿಸಿ ಹಾಡುತ್ತಿದ್ದ ರೆಹಮಾನ್ ಭರತನಲ್ಲಿ ತುಡಿಯುತ್ತಿದ್ದ ಆವೇಗಕ್ಕೆ ದನಿಯಾಗಿದ್ದ.

“ತೇರೆ ಪಾಸ್ ಹಿ ಮೈ ಆ ರಹಾ ಹೂ
ಅಪ್ನಿ ಬಾಹೇ ಖೋಲ್ ದೆ
ಜೋರ್ ಸೆ ಮುಜಕೊ ಗಲೆ ಲಗಾ ಲೊ
ಮುಜಕೊ ಫಿರ್ ವೊ ಪ್ಯಾರ್ ದೇ
ತು ಹಿ ಜಿಂದಗಿ ಹೈ, ತು ಹಿ ಮೇರಿ ಮೊಹಬ್ಬತ್ ಹೈ
ತೇರೆ ಹಿ ಪೈರೋ ಮೇ ಜನ್ನತ್ ಹೈ
ತು ಹಿ ದಿಲ್, ತು ಜಾನ್, ಅಮ್ಮಾ
ಮಾ ತುಝೆ ಸಲಾಮ್, ಮಾ ತುಝೆ ಸಲಾಮ್
ಅಮ್ಮ ತುಝೆ ಸಲಾಮ್, ಮಾ ತುಝೆ ಸಲಾಮ್!”
**** ************ *** *********************

on November 14th, 2007 at 7:16 pm | EDIT

ಮೂರುದಿನಗಳಿಂದ ಆಕಾಶ್, ರಾಜೀವ, ಮತ್ತು ಭರತಖಾನ್ ಒಂದೇ ಬಟ್ಟೆ ತೊಟ್ಟು ಓಡಾಡುತ್ತಿರುವುದು ಸೂಕ್ಷ್ಮಮತಿಯಾದ ಕವಿತಾ ಗಮನಿಸಿದರೂ ಯಾವುದೋ ಸಂಕೋಚ ಅವರಿಗೆ ಬಟ್ಟೆಬದಲಾಯಿಸುವ ಸಲಹೆ ನೀಡಲು ಅವಳನ್ನು ಹಿಂದೆಳೆದಿತ್ತು. ಆಕಾಶ್ ಮತ್ತು ರಾಜೀವ ಮನೆಯಲ್ಲೇ ಇದ್ದು ಅಂಟಿಕೊಂಡ ಎರಡುದಿನಗಳ ತಮ್ಮ ಬೇಸರವನ್ನು ಕಳೆಯಲು ನೀಲಿಕೆರೆಯಲ್ಲಿ ಈಜುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ತಕ್ಷಣವೇ ಹೊರಡುವ ಯೋಚನೆ ಬಂದು, ಧರಿಸಿದ ಫಾರ್ಮಲ್ ಶರ್ಟ್ ಗಳನ್ನು ಕಳಚಿಟ್ಟು,ಟೀಶರ್ಟ್ ಹಾಗೂ ಬರ್ಮುಡ ತೊಟ್ಟು ನೀಲಿಕೆರೆಯೆಡೆ ವ್ಯಾವಹಾರಿಕ ಮಾತುಗಳನ್ನು ಹಂಚಿಕೊಳ್ಳುತ್ತ ನಡೆದಿದ್ದರು. ಆಕಾಶ್ ಮತ್ತು ರಾಜೀವರಿಗೆ ನಗರದ ಈಜುಕೊಳಗಳಲ್ಲದೇ ನಿಸರ್ಗದ ಮಡಿಲೊಳಗೆ ಮತ್ತೊಂದು ಮಡಿಲಿನಂತೆ ಕಾಣುವ ಕೆರೆಗಳಲ್ಲಿಯೂ ಈಜಿ ದಡ ಸೇರುವ ಚಾತುರ್ಯ ಬಾಲ್ಯದ ಆಟಗಳಲ್ಲಿ ಒಂದಾಗಿತ್ತು. ಇವೆಲ್ಲ ಅರಿಯದ ಭರತನನ್ನು‘ನಾವಿದ್ದೇವೆ, ನಿನ್ನನ್ನು ಮುಳುಗಲು ಬಿಡ್ತೀವಾ? ಬಾ ಹೋಗೋಣ’ ಎಂದು ಆಕಾಶ್ ನೀಡಿದ ಭರವಸೆ ತನ್ನ ಮತ್ತು ಆಕಾಶ್ ಗಿರುವ ಸಂಬಂಧವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತ್ತು. ಈ ಸಜ್ಜನರ ನಡುವೆ ತಾನಿರಲು ಪಡೆದಿರದ ಅದೃಷ್ಟದ ಬಗ್ಗೆ ತನ್ನ ಬಗ್ಗೆ ತಾನೇ ಮರುಕಪಡಬೇಕಾಗಿ ಬಂದ ತನ್ನಸ್ಥಿತಿಯ ಬಗ್ಗೆ ಮರುಕಪಡಲು ತನ್ನೊಬ್ಬನನ್ನು ಬಿಟ್ಟರೆ ಯಾರಿಲ್ಲವಲ್ಲವೆನಿಸಿ ಮೊದಲಬಾರಿಗೆ ಅನಾಥಪ್ರಜ್ನೆ ಕಾಡತೊಡಗಿತ್ತು. ತಾಯಿಯ ಪತ್ರವನ್ನು ಓದಿದ್ದ ಮನಸ್ಸು ನೂರು ಧ್ವನಿಗಳನ್ನು ಆಲಿಸುತ್ತಿರುವ ಎರಡು ಕಿವಿಗಳ ಪಾಡಾಗಿ ಗೊಂದಲದಲ್ಲಿ ಸಿಲುಕಿತ್ತು. ತಾನೆಲ್ಲಿ ಹೋಗುತ್ತಿದ್ದೇನೆ ಎಂಬ ಅರಿವಿಲ್ಲದೆಯೇ ಆಕಾಶ್ ಮತ್ತು ರಾಜೀವರೊಡನೆ ಹೆಜ್ಜೆಗಳನ್ನು ಕೂಡಿಸಿಕೊಂಡಿದ್ದ.

ಇತ್ತ ಅವರೆಲ್ಲ ಮನೆಯ ಆವರಣ ದಾಟಿ ದೂರವಾಗಿದ್ದನ್ನು ಕಂಡ ಕವಿತಾ ಅವರೆಲ್ಲರ ಬಟ್ಟೆಗೆ ಈ ಮನೆಯ ನೀರಲ್ಲಿ ಸ್ನಾನ ಕಾಣಿಸುವ ತವಕದಿಂದ ಎಲ್ಲರ ಶರ್ಟ್ಸ್ ಮತ್ತು ಪ್ಯಾಂಟ್ಸಿನ ಕಿಸೆಗಳನ್ನು ಖಾಲಿ ಮಾಡಿ ಆ ವಸ್ತುಗಳನ್ನು ಪಕ್ಕದಲ್ಲಿದ್ದ ಮೇಜಿನ ಮೇಲಿಡುವ ಸನ್ನಾಹದಲ್ಲಿರುವಾಗ ಭರತನ ಅಂಗಿಕಿಸೆಯಲ್ಲಿನ “PRIVATE: To Bharata Kaan” ಎಂಬ ಹಣೆಪಟ್ಟಿಯೊಂದಿಗೆ ಮಡಚಿದ್ದ ಕಾಗದ ಕುತೂಹಲ ಹುಟ್ಟಿಸಿತು. ಹೀಗೆ ಬೇರೆಯವರ ಕಾಗದ ಓದುವುದು ಗುಣವಲ್ಲ ಎಂದು ಮನಸ್ಸು ಒಮ್ಮೆ ನುಡಿದರೂ, ಪ್ರಥಮಬಾರಿಗೆ ಪ್ರೀತಿ ಅಂಕುರಿಸಿದ ಪುರುಷನ ಮೇಲಿನ ಆಸಕ್ತಿ ಈ ಲೆಟರ್ ಒಳಗಿನ ಬರಹವನ್ನು ಓದಲು ಅವಳನ್ನು ಪ್ರೇರೇಪಿಸಿತ್ತು. ಮನೆಯಲ್ಲಿ ಮತ್ತೊಬ್ಬರ ಕಣ್ಣಿಗೆ ಬೀಳುವ ಮುನ್ನ ಸರಸರನೇ ಲೆಟರನ್ನು ಭರತನ ಶರ್ಟ್ ಪಾಕಿಟಿನೊಳಗಿಟ್ಟು, ಸ್ನಾನದ ನೆಪದಿಂದ ಶರ್ಟ್ ಸಮೇತ ಬಾತ್ ರೂಂ ಸೇರಿ ಬಾಗಿಲು ಭದ್ರಪಡಿಸಿಕೊಂಡಳು. ನಿರಾಳವಾಗಿ ಲೆಟರ್ ತೆಗೆಯುವ
ಸಲುವಾಗಿ ಶರ್ಟ್ ಕಿಸೆಯೊಳಗೆ ಕೈ ತೂರಿ ತೆಗೆದರೆ ಅವಳಿ ಕಾಗದಗಳು ಕೈಗೆ ಬಂದವು! ಒಂದರ ಮೇಲೆ PRIVATE:To Bharata Kaan ಎಂದಿದ್ದರೆ, ಇನ್ನೊಂದು ಹಣೆಬರೆಹವಿಲ್ಲದ್ದು!(ಹಣೆಬರಹ ಇಲ್ಲದವನು ಬರೆದದ್ದು ಎಂದರೂ ಸರಿಯೆ.)
ಮೊದಲು ಸಿಕ್ಕ ಲೆಟರ್ ಮಾತ್ರ ಪ್ರವಲ್ಲಿಕಾಳದೇ ಇರಬಹುದು! ಇನ್ನೊಂದು ! ಭರತ್ ಪ್ರವಲ್ಲಿಕಾಳಿಗೆ ಬರೆದ ರಿಪ್ಲಾಯ್ ಇರಬಹುದು ಎಂಬ ಸವತಿಮತ್ಸರದ ಗುಮಾನಿಯ ಜೊತೆ ಆಸಕ್ತಿ ಜಾಸ್ತಿಯಾದುದರಿಂದ To Bharata Kaan ಎಂದಿದ್ದ ಲೆಟರನ್ನು ಓದಲು ಮೊದಲಿಗೆ ಅನುವಾದಳು. ಕಾಗದ ಓದಿ ಮುಗಿದಾಗ ಭರತನ ಗತ ಜೀವನದ ನೂರರಲ್ಲಿ ನಲವತ್ತರಷ್ಟು ಭಾಗ ತನ್ನ ವಶಕ್ಕೊಳಗಾದ ಅನುಭವ ಭೀತಿ ಹುಟ್ಟಿಸಿತಾದರೂ, ಅವನ ಮೇಲಿನ ಆಕರ್ಷಣೆ ಅನುಕಂಪವಾಗಿ ಅವಳೊಳಗೆ ಅಡಗಿ ಮೊಳಕೆಯೊಡೆಯುತ್ತಿದ್ದ ಪ್ರೀತಿಗೆ ಸತ್ವ ಉಣಿಸಿತ್ತು. ಡವಢವನೆ ಹೊಡೆದುಕೊಳ್ಳುತ್ತಿದ್ದ ಹೃದಯವು ಎರಡನೆಯ ಕಾಗದವನ್ನು ಓಪನ್ ಮಾಡುವಾಗ ಕೈಗಳನ್ನು ನಡುಗಿಸಿ ಕೈಯಲ್ಲಿನ ಕಾಗದ ಬಾತ್ ರೂಂ ನೆಲಕಂಟಿ ಮಲಗಿದ್ದ ಹಾಸುಗಲ್ಲನ್ನು ಸ್ಪರ್ಷಿಸುವ ತವಕದಲ್ಲಿದ್ದಾಗಲೇ ಎತ್ತಿಕೊಂಡು ಮೈಮೇಲಿನ ತೊಟ್ಟಬಟ್ಟೆಗೆ ನವುರಾಗಿ ಉಜ್ಜಿದಳು. ಕಾಗದ ಲವಲೇಶವೂ ತೇವವಾಗಿರಲಿಲ್ಲ. ಬಿಡಿಸಿ ಓದಿದರೆ,
ಡೀಯರ್ ಮಾಮ್..ಎಂಬ ಕಂಠದಾಳದ ಕರೆಯೆಂಬಂತೆ ಆರಂಭಗೊಂಡ ಸಾಲು ತಾನು ಪ್ರವಲ್ಲಿಕಾಳನ್ನು ಈ ಕ್ಷಣದಲ್ಲಿಯೇ ಮದುವೆಯಾಗುವ ವಿಚಾರವನ್ನು ಕೈಬಿಟ್ಟು, ಅವಳನ್ನು ಸಹೋದರಿಯಾಗಿ ಸ್ವೀಕರಿಸಿದ್ದಲ್ಲದೇ, ಇಂದು ರಾತ್ರಿ ಎಲ್ಲರ ಕಣ್ಣಿಂದ ದೂರವಾಗಿ ಮನೆಯಿಂದ ಹೊರಡುತ್ತಿರುವ ತನ್ನ ಪಯಣದ ವಿವರಗಳಾದಿಯಾಗಿ ಎಲ್ಲ ಸಾಲುಗಳನ್ನು ಭರಿಸಿದ್ದಲ್ಲದೆ
ಫಾರ್ ಎವರ್ ಎನ್ ಎವರ್
ಯುವರ್ ಸನ್
ಭರತಖಾನ್. ಎಂಬ ಭರವಸೆಯ ನುಡಿಯೊಂದಿಗೆ ಅಂತ್ಯ ಕಂಡಿತ್ತು. ಅಂತಿಮವಾಗಿ ತಾಯಿಯ ಮುಖದರ್ಶನ ಮಾಡಿ ಈ ಕಾಗದ ತಲುಪಿಸಿ ಕಣ್ಮರೆಯಾಗುವ ಉದ್ದೇಶದಿಂದ ಭರತಕಾನ್ ತನ್ನಮ್ಮನಿಗೆ ಬರೆದಿಟ್ಟ ಕಾಗದ ಅದಾಗಿತ್ತು.

ಈ ಎಲ್ಲವ ಓದಿಮುಗಿಸಿ ತುಂಬಿಕೊಂಡ ಕಣ್ಣಾಲೆಗಳನ್ನು ಒರೆಸಿಕೊಂಡ ಕವಿತಾ ಕಾಗದದೊಂದಿಗೆ ಎಲ್ಲ ಬಟ್ಟೆಗಳನ್ನು ಮೇಜಿನ ಮೇಲಿನ ಪರ್ಸ್,ಪೆನ್ ಗಳೊಂದಿಗೆ ಆಯಾ ಜಾಗಗಳಲ್ಲಿ ಮೊದಲಿಟ್ಟಂತೆ ಅಣಿಗೊಳಿಸಿ ನಿಟ್ಟುಸಿರುಬಿಟ್ಟು ಮನೆಯಲ್ಲಿ ಸ್ವಕಾರ್ಯಗಳಲ್ಲಿ ಮಗ್ನರಾದ ಎಲ್ಲರ ಗಮನಕ್ಕೆ ಇವು ಯಾವುವೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಖಿನ್ನ ಮನಸ್ಕಳಾಗಿ ಹೊರಜಗಲಿಯಲ್ಲಿ ಕುಳಿತು ಯೋಚಿಸತೊಡಗಿದಳು. ಥಟ್ಟನೆ ಯೋಚನೆಯೊಂದು ಹೊಳೆದು ಅದು ನಿರ್ಧಾರವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಅವಳೀಗ ತೆಗೆದುಕೊಂಡ ನಿರ್ಧಾರದಲ್ಲಿ ತಪ್ಪು-ಸರಿಗಳು ತಮ್ಮ ಅರ್ಥದ ಸ್ಥಾನವನ್ನು ಅದಲುಬದಲಾಯಿಸಿಕೊಂಡಿದ್ದು ಎಷ್ಟು ಸರಿ ಎಂಬುದನ್ನು ವಿವೇಚಿಸುವಷ್ಟು ಸಮಯ-ಸಂಯಮಗಳೆರಡೂ ಅವಳಲ್ಲಿ ಇರಲಿಲ್ಲ. ಆ ಕ್ಷಣದ ಸಮಸ್ಯೆಗೆ ಸರಿಯಾದ ಪರಿಹಾರ ಅವಳಿಂದ ಆಗಲಿದ್ದ ಆ ತಪ್ಪೊಂದೇ ಆಗಿತ್ತು!

ನೀಲಿಕೆರೆಯಲ್ಲಿ ಈಜಿ ಸುಸ್ತಾಗಿ ಮನೆಗೆ ಬಂದ ಆಕಾಶ್ ಮತ್ತು ರಾಜೀವ ಕುಳಿತು ನೀರಲ್ಲಿಳಿದ ಪ್ರಸಂಗಗಳನ್ನು ಬಣ್ಣಬಣ್ಣವಾಗಿ ಎಲ್ಲರಿಗೂ ವಿವರಿಸುತ್ತಿದ್ದರೆ ಭರತ್ ಮನದೊಳಗೆ ಹಲವು ಬಣ್ಣಗಳು ಕಲೆತು ಮೇಲೋಗರವಾಗಿ ಮುಖ ಸೌಂದರ್ಯಕಳೆದುಕೊಂಡಿತ್ತು. ಅವನ ಸಪ್ಪೆ ಮುಖ ಎಲ್ಲರಿಗೆ ನೀರಲ್ಲಿಳಿದ ಸುಸ್ತಾಗಿ ಕಂಡರೆ ಕವಿತಾಳಿಗೆ ಅದೇ ಮುಖ ಮನದಾಳದ ಕತೆಯನ್ನು ಹೇಳುತ್ತಿರುವಂತೆ ಕಂಡಿತ್ತು.

ಸಂಜೆ ಕಳೆದು ರಾತ್ರಿ ಊಟವಾದ ಮೇಲೆ ‘ಇಲ್ಲೇ ಮುಂದಿನ ತೋಟದ ಬೆಳದಿಂಗಳ ಅಂಗಳದಲ್ಲಿ ಸ್ವಲ್ಪ ವಿಹರಿಸುತ್ತೇನೆ’ ಎಂದು ಹೊರಟವಳಿಗೆ ಯಾರ ಆಡ್ಡಿಯೂ ಬಾರದಿದ್ದುದಕ್ಕೆ ಕಾರಣ ‘ಬೆಳದಿಂಗಳ ಅಂಗಳದ ವಿಹಾರ’ ಅವಳ ಆಗಾಗಿನ ಅಭ್ಯಾಸವಾದ್ದರಿಂದ. ಆದರೆ ಅವಳು ಕುಳಿತಿದ್ದು ಮೊದಲೆ ತಾನು ಅನ್ಲಾಕ್ ಮಾಡಿಟ್ಟುಕೊಂಡಿದ್ದ ಭರತಖಾನನ ಕಾರಿನ ಹಿಂಬದಿಯ ಸೀಟಿನ ಕತ್ತಲ ಭಾಗದಲ್ಲಿ. ಹಿಂದೆ ಟ್ರಂಕಿನಲ್ಲಿ ಬೆಳಿಗ್ಗೆ ತಂದಿಟ್ಟ ಬಟ್ಟೆಬರೆಗಳನ್ನು ಬಿಟ್ಟು ಉಳಿದೆಲ್ಲ ತನ್ನದು ತನ್ನವರನ್ನು ಕವಿತಾ ತೊರೆಯಲು ಮನಸ್ಸನ್ನು ಶೀಘ್ರವಾಗಿ ಅಣಿಗೊಳಿಸಿಕೊಂಡಿದ್ದಳು!

ಎಲ್ಲರೂ ಮಲಗಿದಾಗ ಶಾರದಮ್ಮ ಅವಳನ್ನು ಒಳಬರುವಂತೆ ಹೇಳಿ ಉತ್ತರಕ್ಕೆ ನಿಲ್ಲದೆ ಅವಳಿಗೋಸ್ಕರ ಬಾಗಿಲು ಮುಚ್ಚದೇ ಮಲಗಿಬಿಟ್ಟಿದ್ದರು. ತೆರೆದಿಟ್ಟ ಬಾಗಿಲು ಕವಿತಾಳನ್ನು ಬರಮಾಡಿಕೊಳ್ಳದೇ ನಡುರಾತ್ರಿಯಲ್ಲಿ ನಡೆದ ಭರತಖಾನನಿಗೆ ಸಹಾಯಹಸ್ತ ಬೀಸಿ ಬೀಳ್ಕೊಟ್ಟಿತ್ತು.
ಬಾಗಿಲು ತೆರೆದೇ ಇದ್ದುದ್ದು ಏಕೆಂಬುದನ್ನೂ ಕೂಡ ವಿವೇಚಿಸಲಾಗದಂತಿದ್ದ ಭರತಖಾನ ಭೂತ ಬಡಿದವನಂತೆ ಭರಭರನೇ ಹೊರಗಡೆ ಬಂದು ಕಾರಲ್ಲಿ ಕೂತಿದ್ದ. ಭರತನಿಂದ ಚಾಲನೆ ಪಡೆದ ಕಾರು ಶರವೇಗದಿಂದ ಬೆಂಗಳೂರಿನ ಕಡೆ ಓಡುತ್ತಿತ್ತು.

**********************************************************

ಭಾಗ – 20

ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ ತಂದಿತ್ತು. ಧಾರಿಣಿ ಮತ್ತು ಪ್ರವಲ್ಲಿಕಾ ಆಕೆಯನ್ನು ಅತ್ತಿಗೆ ಎಂದು ಪೂರ್ಣವಾಗಿ ಒಪ್ಪಿಕೊಂಡಿಲ್ಲದಿದ್ದರೂ, ಆದರದಿಂದ ನಡೆಸಿಕೊಳ್ಳುತ್ತಿದ್ದರು. ಆಕಾಶ್ ಯಾಕೋ ಭರತನ ಕಡೆ ಆಕರ್ಷಿತನಾಗುತ್ತಿದ್ದ, ಇದನ್ನೆಲ್ಲ ಸರೋಜಮ್ಮ ಗಮನಿಸಿದ್ದರು. ತಮ್ಮ ಹೃದಯದೊಳಗೆ ಹತ್ತಿಕೊಂಡಿದ್ದ ಜ್ವಾಲಾಮುಖಿಯನ್ನು ಹತ್ತಿಕ್ಕಲು ಹಗಲಿಡೀ ಪ್ರಯತ್ನಿಸಿ, ರಾತ್ರೆಗೆ ಅದನ್ನು ತನ್ನ ಪಾಡಿಗೆ ಹರಿಯಬಿಟ್ಟಿದ್ದರು. ಉರಿಯುವ ಭಾವಲಾವಾ ತನ್ನೊಡನೆ ಹಳೆಯ ನೆನಪುಗಳ ಮೆರವಣಿಗೆ ಹೊತ್ತು ಸೂರಿನತ್ತ ಹಾರುತ್ತಿತ್ತು…

ಕಾಲೇಜ್ ಇರದ ಸಣ್ಣ ಊರಿನ ಮಧ್ಯಮ ವರ್ಗದ ಜಾಣೆ ಸರೋಜ. ಅಪ್ಪ-ಅಮ್ಮನ ಜೊತೆ ಹಠ ಮಾಡಿ, ತನಗಾಗಿ ದೊಡ್ಡೂರಿನ ಕಾಲೇಜಿನಲ್ಲಿ ಸೀಟ್ ಪಡೆದು, ಹಾಸ್ಟೆಲ್ಲಿನಲ್ಲಿ ಸೇರಿಕೊಂಡಿದ್ದಳು. ಪ್ರೊಫೆಸರ್ ಸಮೀಯುಲ್ಲಾ ಅವಳಿಗೆ ಅಚ್ಚುಮೆಚ್ಚು. ಅವರಿಗೂ ಚುರುಕು ಬುದ್ಧಿಯ ಸರೋಜಳ ಮೇಲೆ ವಿಶೇಷ ದೃಷ್ಟಿ. ಎಲ್ಲ ಪಾಠಗಳಲ್ಲೂ ಮುಂದಿದ್ದ ಸರೋಜ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬಿದ್ದವಳಲ್ಲ. ಕಾಲೇಜಿನ ಕೊನೆಯ ವರ್ಷ… ಇದೊಂದು ಮುಗಿದರೆ ತಾನು ಪದವೀಧರೆ… ಸಂಸಾರದಲ್ಲೆಲ್ಲ ಯಾರೂ ದಾಟಿರದ ಗಡಿ ದಾಟಿದವಳು… ಸರೋಜಳ ಕನಸುಗಳಿಗೆ ಕಡಿವಾಣ ಅವಳಲ್ಲಿರಲಿಲ್ಲ. ಆದರೆ, ವಿಧಿ ಕಡಿವಾಣ ಹಿಡಿದಿತ್ತು…

ಅದೊಂದು ಸಂಜೆ, ಕಾಲೇಜಿನ ಪಕ್ಕದ ಮೈದಾನದಿಂದ ಓಟದ ತರಬೇತಿ ಮುಗಿಸಿಕೊಂಡು, ಹಾಸ್ಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದಳು. ತಡವಾದರೆ ಊಟ ಸಿಗಲಾರದು ಅನ್ನುವುದು ಒಂದು ಕಾರಣ, ಕಾಲೇಜ್ ಹಿಂದಿನ ಕಾಂಪೌಂಡ್ ಗೋಡೆಯ ಮೇಲೆ ಯಾವಾಗಲೂ ಕೂತಿರುತ್ತಿದ್ದ ಪುಂಡರ ಗುಂಪು ಇನ್ನೊಂದು ಕಾರಣ; ಅವಳ ಪಾದಗಳು ಒಂದರೊಡನೊಂದು ಪೈಪೋಟಿಯಲ್ಲಿದ್ದವು. “ಏನಮ್ಮಣ್ಣೀ, ಏನವಸರ…?” ನಿರೀಕ್ಷಿತ ಅನಿರೀಕ್ಷಿತ ದನಿ ಅವಳನ್ನು ತಟ್ಟಿತ್ತು. ಉತ್ತರಿಸದೆ, ನೋಡದೆ ಮುಂದೆ ದಾಟಿದ ಅವಳ ಮುಂದೆ ಆತ ಅಡ್ಡ ಬಂದ. ಹಿಂದೆ ಎಷ್ಟೋ ಬಾರಿ ನೋಡಿದ ಮುಖ, ಈಗ ಮತ್ತಷ್ಟು ಜಿಗುಪ್ಸೆ ತಂದಿತು. ಯಾವ ಭಾವವನ್ನೂ ತೋರಿಸದೆ, ದಾಟಿಕೊಂಡು ಸಾಗಲು ಪ್ರಯತ್ನಿಸಿದವಳನ್ನು ಅನಾಮತ್ತಾಗಿ ಎತ್ತಿಕೊಂಡೇ ಸಾಗಿದ ಕೀಚಕ. ಕೂಗಾಡಲು ಸರೋಜಳ ದನಿ ಏಳಲಿಲ್ಲ. ಅವಳ ಬುದ್ಧಿಗೆ ಮಂಕು ಬಡಿದಿತ್ತು. ಕಾಂಪೌಂಡಿನ ಆ ಕಡೆಯಲ್ಲಿ ನಡೆದಿದ್ದಕ್ಕೆ ಸಾಕ್ಷಿ ಯಾರೂ ಇರಲಿಲ್ಲ. ಸೂರ್ಯ ಕಣ್ಮರೆಯಾಗಿದ್ದ; ಚಂದ್ರ ಬಂದೇ ಇರಲಿಲ್ಲ. ಚುಕ್ಕಿಗಳಿಗೆ ದೃಷ್ಟಿ ಮಂದ; ಗಾಳಿಗೆ ಉಸಿರಿರಲಿಲ್ಲ. ಭುಮಿಗೆ ದನಿಯಿರಲಿಲ್ಲ. ಯಾರೂ ಇಲ್ಲದಲ್ಲಿ ಅನಾಥಭಾವದಿಂದ ಒಂಟಿಯಾಗಿ ಬಿದ್ದುಕೊಂಡಿದ್ದ ಸರೋಜಳಿಗೆ ಹೊತ್ತಿನ ಪರಿವೆಯಿರಲಿಲ್ಲ. ತನ್ನ ಆಷಾಢಭೂತಿತನಕ್ಕೆ ತಾನೇ ಬೆಳಕು ಹಿಡಿವಂತೆ ಸೂರ್ಯ ಮತ್ತೆ ಬೆಳಕು ತೂರಿದಾಗ ಸರೋಜಳ ಮಂಕುತನ ಬೆಚ್ಚಿತು. ತನ್ನತ್ತ ಬರುತ್ತಿದ್ದ ಆಕೃತಿಯನ್ನು ಕಂಡು ಕಣ್ಣುಮುಚ್ಚಿದಳು. ಬೆಚ್ಚನೆಯ ಕೈ ಹಣೆ ಮುಟ್ಟಿದಾಗ, “ಸರೋಜ, ಇಲ್ಲಿ ಯಾಕಿದ್ದೀ? ಏನಾಯ್ತು?” ಆರ್ದ್ರ ದನಿ ವಿಚಾರಿಸಿದಾಗ ಅವಳ ದನಿಗೆ ದಾರಿ ಸಿಕ್ಕಿತ್ತು….

“ಸರ್… ನಾನು ಕೆಟ್ಟೆ, ನನಗಿನ್ನು ಬದುಕಿಲ್ಲ… ಆ ದುರುಳ ನನ್ನ ಬಾಳು ಹಾಳು ಮಾಡಿದ…. ನನಗಿನ್ನು ಬದುಕಿಲ್ಲ…” ಪಿಸುನುಡಿಗೂ ಭಯ. ಪ್ರೊಫೆಸರ್ ಸಮೀಯುಲ್ಲಾ ಖಾನ್ ಮುಖ ಜಾಗೃತವಾಯ್ತು. ಅವಳನ್ನು ಹೇಗೋ ನಡೆಸಿಕೊಂಡು ತನ್ನ ಮನೆಗೆ ಕರೆತಂದರು. ಅವರ ಮಡದಿಯ ಮಮತೆಯಲ್ಲಿ ಸರೋಜಳ ದೇಹ ಒಂದಿಷ್ಟು ಚೇತನ ಪಡೆದರೂ ಮನಸ್ಸು ಏಳಲಿಲ್ಲ. ಸರೋಜ ಗೆಳತಿಯೊಬ್ಬಳ ಮದುವೆಗಾಗಿ ಬೇರೊಂದು ಊರಿಗೆ ಹೋಗಿದ್ದಾಳೆಂದು ಸುದ್ದಿ ಹಬ್ಬಿತು. ಸಮೀಯುಲ್ಲರ ಮನೆಯೊಳಗೆ ಜೀವನ ಬೇಡವೆನ್ನುವ ಸೆಣಸಾಟದಲ್ಲಿ ಸರೋಜ ಗೆಲ್ಲಲಿಲ್ಲ. ಸಮೀಯುಲ್ಲಾ ಮತ್ತವರ ಪತ್ನಿ ತಮ್ಮ ಮಗಳಂತೆ ಸರೋಜಳನ್ನು ಕಾಪಾಡಿದರು. ಸೂಕ್ತ ಸಮಯ ಸಿಕ್ಕಾಗ ಅವಳನ್ನು ತಮ್ಮ ಊರಿಗೆ ಕರೆದೊಯ್ದರು. ಹೊಸ ಪರಿಸರ ಸರೋಜಳ ಭೀತಿಯನ್ನು ಹೊರದಬ್ಬುವಷ್ಟರಲ್ಲಿ ಹೊಸ ಜೀವ ಮೊಳೆತ ಹೊಸ ಭೀತಿ ಅವಳನ್ನು ಸೇರಿತು. ಚುರುಕಿನ ಹುಡುಗಿ ಬರೀ ಗೊಂಬೆಯಂತಾದಳು. ಕಳೆದುಕೊಳ್ಳುವದಕ್ಕೂ ಧೈರ್ಯವಿರದೆ ಪೂರ್ತಿ ದಾರಿ ಸಾಗಿದಳು. ಕಾಲೇಜ್ ಮುಗಿಯುವ ಸಮಯಕ್ಕೆ ಈಕೆ ಸಮೀಯುಲ್ಲಾರ ಕೈಗೆ ತನ್ನ ಮಗನನ್ನು ಕೊಟ್ಟಳು. ಭರತ ಎನ್ನುವ ಹೆಸರಿನಿಂದ ಕರೆಸಿಕೊಂಡ ಮಗು ಹಿಂದೂ ಅಮ್ಮನಿಂದಲೇ ಖಾನ್ ಎನ್ನುವ ಹೆಸರನ್ನೂ ಅಂಟಿಸಿಕೊಂಡ. “ಅವನು ನಿಮ್ಮ ಮಗನಾಗಿಯೇ ಇರಲಿ. ನನ್ನ ಜೀವನ ಏನಾಗುತ್ತೋ ಹೇಳಲಾರೆ. ಅವನಾದರೂ ನೆಮ್ಮದಿಯಾಗಿರಲಿ…” ಅಮ್ಮನ ಹೃದಯ ಅವಳಲ್ಲಿ ಎಚ್ಚತ್ತಿತ್ತು. ಮತ್ತೊಂದಿಷ್ಟು ಚೇತರಿಸಿಕೊಂಡು, ಸಮೀಯುಲ್ಲಾ ಮತ್ತವರ ಪತ್ನಿಯ ಆದೇಶ, ಒತ್ತಾಸೆಗಳ ಮೇರೆಗೆ ತನ್ನೂರಿಗೆ ಮರಳಿದಳು. “ಕಾಲೇಜಿನಲ್ಲಿ ಪುಂಡನೊಬ್ಬನ ಭಯದಿಂದ ಸರಿಯಾಗಿ ಓದಲಾಗದೆ, ಯಾವುದೇ ಪರೀಕ್ಷೆ ಬರೆದಿಲ್ಲ” ಎನ್ನುವ ಅರ್ಧ ಸತ್ಯ ಅವಳ ತಂದೆ-ತಾಯಿಗೆ ಒಗಟಾದರೂ ಮಗಳ ಮಂಕುತನವನ್ನು ಕೆದಕಲು ಅವರಿಗೆ ಮನಸ್ಸಾಗಿರಲಿಲ್ಲ. ಮತ್ತೊಂದು ವರ್ಷದೊಳಗೆ ಸರೋಜ ಒತ್ತಾಯದಿಂದ ಕೇಳಿಕೊಂಡು ಬಂದ ಕೇಶವನ ಮಡದಿಯಾಗಿ, ತೀರಾ ಸಾಮಾನ್ಯ ಗೃಹಿಣಿಯಾಗಿ ಬೆಂಗಳೂರು ಸೇರಿದ್ದರು.

ಆ ಹೊಸದರಲ್ಲಿ ಕೇಶವ ಹೇಳಿದ್ದ “ನನ್ನಿಂದಾಗಿ ನೀನು ಕಾಲೇಜು ಪದವಿ ಪಡೆಯಲಾಗಿಲ್ಲ. ಪಶ್ಚಾತ್ತಾಪದ ನೋವಿನಲ್ಲಿ ಎರಡು ವರ್ಷ ಬೆಂದು, ನಿನ್ನನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದೆ” ಅನ್ನುವ ಮಾತು ಸರೋಜಳಿಗೆ ಯಾವ ಅರ್ಥವನ್ನೂ ಹೊಳೆಯಿಸಿರಲಿಲ್ಲ, ಈಗ ಹಿನ್ನೋಟದಲ್ಲಿ ಮತ್ತೆ ಕೇಳಿಸಿಕೊಂಡಾಗ ಅದರ ಆಳದ ಅರಿವಾಯಿತು, ಆದರೆ ಸಮಯ ಮೀರಿ ಹೋಗಿತ್ತು.

ಭರತ ತನ್ನ ತಂದೆ ಸಮೀಯುಲ್ಲಾ ಖಾನ್, ಆತ ಕಾಲೇಜ್ ಪ್ರೊಫೆಸರ್ ಆಗಿದ್ದರು, ಅಂತೆಲ್ಲ ರಾಜೀವನೊಡನೆ ಅಂದಾಗ ಸರೋಜಮ್ಮನ ಮಾತೃಹೃದಯ ಜಾಗೃತಗೊಂಡಿತ್ತು. ಹೇಳಲಾರದೆ, ಸುಮ್ಮನಿರಲಾರದೆ ಸಂಕಟಪಟ್ಟುಕೊಂಡಿದ್ದರು. ಭರತನೊಡನೆ ತನ್ನ ಸಂಬಂಧ ಹೇಳಿಕೊಂಡರೆ ಪ್ರವಲ್ಲಿಕಾ-ಭರತ ಸಂಬಂಧ ಏನಾಗಬಹುದು? ಶಾರದಮ್ಮ, ಕೇಶವ, ಆಕಾಶ್, ಎನನ್ನಬಹುದು? ತನ್ನ ಮುಂದಿನ ಜೀವನ ಏನಾಗಬಹುದು? ಕಳೆದುಕೊಂಡದ್ದನ್ನು, ಇಲ್ಲದ್ದನ್ನು ಪಡೆಯುವುದು ಮುಖ್ಯವೋ? ಇದ್ದದ್ದನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವುದು ಸಹ್ಯವೋ? ಈಗ ತನಗೆ ಬೇಕಾಗಿರುವುದೇನು? ತುಂಬಿದ ಈ ಮನೆಯಲ್ಲಿ ಭರತನೊಡನೆ ಮುಕ್ತವಾಗಿ ಮಾತಾಡಲು ಅವಕಾಶ ದೊರೆಯುವುದು ಕಷ್ಟ. ಏನೇನೋ ಲೆಕ್ಕಾಚಾರಗಳ ಬಳಿಕ ಯಾವುದೋ ಒಂದು ನಿರ್ಧಾರಕ್ಕೆ ಬಂದ ಅವರ ಮನಸ್ಸು ನಿರಾಳವಾಗಿ ಉಸಿರಾಡಿತು. ಬೆಳಗ್ಗೆ ಎಲ್ಲರಿಗೂ ಮೊದಲು ಎದ್ದ ಸರೋಜಮ್ಮ, ಜಗಲಿಯಲ್ಲಿ ತೂಗುಹಾಕಿದ್ದ ಭರತನ ಅಂಗಿಯ ಜೇಬಿಗೆ, “PRIVATE: To Barat Kaan” ಹೆಸರಿದ್ದ ಲಕೋಟೆಯೊಂದನ್ನು ತೂರಿಸಿಟ್ಟು ಅದೇ ಮಧ್ಯಾಹ್ನ ಬೆಂಗಳೂರಿಗೆ ಹೊರಟುಹೋದರು.

ಭಾಗ – 19

ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ.

ಹಳ್ಳಿಯ ಪಂಡಿತರು ಕೊಡುತ್ತಿರುವ ಹಸಿರು ಔಷಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ. ಜೆನಿಗೆ ಮಡಿ ಹುಡಿ ಗೊತ್ತಿಲ್ಲ, ಶಾರದಮ್ಮನವರಿಗೆ ಇಂಗ್ಲಿಷ್ ಬರುವುದಿಲ್ಲ. ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ. ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ.

***

ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ…

ಭಾಗ – 18

ಸುದ್ದಿ ತಿಳಿದು ಬೆಂಗಳೂರಿಂದ ರಾಜೀವ, ಆಕಾಶ, ಜೆನ್ನಿ, ಹ್ಯಾರಿ, ಕೇಶವ ಮತ್ತವನ ಸಂಸಾರ, ಎಲ್ಲರೂ ಹಳ್ಳಿಗೆ ಬಂದಿಳಿದರು. ಬಹಳಷ್ಟು ಚರ್ಚೆಗಳ ಬಳಿಕ ಹ್ಯಾರಿ ತಾತನ ಸಂಸ್ಕಾರ ಮಾಡುವುದೆ ಸೂಕ್ತವೆಂದು ಎಲ್ಲರಿಗೂ ತೋಚಿತು, ಆದರೆ ಆತನಿಗೆ ಉಪನಯನವಾಗಿಲ್ಲ ಎನ್ನುವುದನ್ನು ಶಾರದಮ್ಮ ಸೂಚಿಸಿದಾಗ ರಾಜೀವ ತಾನು ಮಾಡುವುದಾಗಿ ಮುಂದೆ ನಿಂತ. ಎಲ್ಲರ ಸಮ್ಮತಿಯಿತ್ತು, ಧಾರಿಣಿಯ ಗೈರುಹಾಜರಿಯ ನೋವಿನ ಜೊತೆಗೆ.

ದುಃಖದಿಂದ ತತ್ತರಿಸುತ್ತಿದ್ದ ಶಾರದಮ್ಮನವರಿಗೆ ಬಲವಂತದಿಂದ ಸ್ವಲ್ಪ ಹಾಲು ಕುಡಿಸಿ ಮಲಗಿಸಿ ಹೊರ ಬಂದ ಸರೋಜ ಹಾಲಿನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯನ್ನು ನೋಡಿ ಸ್ಥಂಭೀಭೂತರಾಗಿ ನಿಂತುಬಿಟ್ಟರು.
`ನನ್ನ ಮಗ ಭರತ…!’ ಮನಸ್ಸು ಗುಣು ಗುಣಿಸಿತು ತುಟಿ ಒಡೆದು ಆಡಲಿಲ್ಲ. `ಏನಾಯ್ತೇ ಸರೋಜಾ…’ ಕೇಶವಚಿಕ್ಕಪ್ಪ ತಲೆ ಸುತ್ತಿ ನೆಲಕ್ಕೆ ಬೀಳುತ್ತಿದ್ದ ತಮ್ಮ ಪತ್ನಿಯನ್ನು ಹಿಡಿದುಕೊಳ್ಳುತ್ತಾ ನುಡಿದರು.

ಹೊಸರೂಪಿನ ಭರತ ಖಾನನನ್ನು ನೋಡಿದೊಡನೆ ಶಾರದಮ್ಮ ವ್ಯಗ್ರರಾದರು. “ನೀನೇ ನನ್ನ ಕುಂಕುಮ ಅಳಿಸಿದ ನೀಚ, ರಾಕ್ಷಸ… ಬರಬೇಡ ಇಲ್ಲಿಗೆ… ಹೋಗು… ದೂರ ಹೋಗು…” ಎಂದೆಲ್ಲ ಅರಚಾಡಿ ನೊಂದುಕೊಂಡರು. ಅವರನ್ನು ಸಮಾಧಾನಿಸಲು ಸಾಕುಬೇಕಾಯಿತು. ಎಲ್ಲರೂ ಸ್ವಲ್ಪ ಶಾಂತರಾದಾಗ ಭರತ ಖಾನ ತನ್ನ ಹೊಸ ರೂಪದ ಹಿಂದಿನ ರಹಸ್ಯ, ತನಗೆ ಭಾರತ ಸರಕಾರ ಕೊಟ್ಟಿರುವ ಹೊಸ ಜವಾಬ್ದಾರಿಯ ಹುದ್ದೆ ಮತ್ತು ತಾನದನ್ನು ಭಾರತೀಯನಾಗಿ ಸ್ವೀಕರಿಸಿ, ಭಾರತೀಯನಾಗಿ ನಿಭಾಯಿಸುವ ನಿರ್ಧಾರಗಳನ್ನು ತಿಳಿಸಿದಾಗ ರಾಜೀವ, ಆಕಾಶ್, ಪ್ರವಲ್ಲಿಕಾ ತುಸು ನಿರಾಳಗೊಂಡರು.

ಇತ್ತ ಧಾರಿಣಿಯನ್ನು ಕಾಯುತ್ತಿರುವ ಟಿಮ್ ಮತ್ತವನ ಕೂಟಕ್ಕೆ ಅತ್ತ ಕಡೆ ಜೋಯಿಯಿಂದ ಒತ್ತಡ ಹೆಚ್ಚುತ್ತಿತ್ತು. ಇತ್ತ ಕಡೆ ಯಾವುದೇ ರೀತಿಯ ಮುನ್ನಡೆ ಸಾಧಿಸಲಾಗದೆ ಟಿಮ್ ಒದ್ದಾಡುತ್ತಿದ್ದ. ಅದೇ ಸಮಯಕ್ಕೆ `ಶಶ್’ ಶಾರದಮ್ಮನ ದೇಹಾಂತದ ಸುದ್ದಿಯನ್ನು ತಂದೊಪ್ಪಿಸಿದ, ಟಿಮ್ ಮುಂದೆ ಧಾರಿಣಿಗೆ. ಧಾರಿಣಿಯನ್ನು ಈ ನೆಪದಲ್ಲಾದರೂ ಬಿಡಿಸಬಹುದು ಅನ್ನುವುದು ಆತನ ಹಂಚಿಕೆ. ಆತ ಅಂದುಕೊಂಡಂತೆಯೇ ಧಾರಿಣಿ ಅಧೀರಳಾಗಿ, ಮೂರ್ಛೆತಪ್ಪಿ ಬಿದ್ದು, ಮತ್ತೆ ಎದ್ದು ಗೋಳಾಡತೊಡಗಿದಳು. ಟಿಮ್ ಗೊಂದಲಗೊಂಡ. ಏನು ಮಾಡುವುದೆಂದು ತಿಳಿಯದೆ, ಕೂಡಲೇ ಜೋಯಿಗೆ ಕರೆಮಾಡಿದ.
***** ***** *****
ಮೊದಲಿಗೆ ಕಿರುಚಾಡಿದ ಜೋಯಿ, ನಂತರ ಯಾರಾದರೂ ನಂಬಿಕಸ್ತರ ಜೊತೆ ಧಾರಿಣಿಯನ್ನು ಹಳ್ಳಿಗೆ ಕಳಿಸಿ ಕ್ರಿಮೇಷನ್ ಮುಗಿದೊಡನೆ ಮತ್ತೆ ಬೆಂಗಳೂರಿಗೆ ಕರೆಸುವ ಏರ್ಪಾಡು ಮಾಡಲು ಆಜ್ಞೆ ಮಾಡಿದ. ಟಿಮ್’ಗೆ ಈ ಕೆಲಸಕ್ಕೆ ಶಶ್’ಗಿಂತ ಉತ್ತಮ ವ್ಯಕ್ತಿ ಇಲ್ಲವೆನಿಸಿತು. ಆತನ ಜೊತೆಗೆ ಧಾರಿಣಿಯನ್ನು ಕಳಿಸಲು ಮುಂದಾದ. ಅತ್ತೂ ಅತ್ತೂ ಸುಸ್ತಾಗಿದ್ದ ಧಾರಿಣಿಗೆ ಯಾವುದೇ ಪ್ರತಿಕ್ರಿಯೆ ತೋರಿಸುವ ಹುಮ್ಮಸ್ಸೂ ಇಲ್ಲವಾಗಿತ್ತು. ನಿರ್ಜೀವ ದೇಹದಂತೆ ಶಶ್ ಜೊತೆ ಅವನೇ ತಂದ ಟ್ಯಾಕ್ಸಿಯಲ್ಲಿ ಹಳ್ಳಿ ಕಡೆ ಹೊರಟಳು.

ಹಳ್ಳಿಗೆ ಇನ್ನೂ ಸ್ವಲ್ಪ ದೂರ ಇದೆ ಅನ್ನುವಾಗಲೇ ಶಶಾಂಕ ಟ್ಯಾಕ್ಸಿ ಬಿಟ್ಟ. ರಸ್ತೆ ಬದಿಯ ಮರದ ನೆರಳಲ್ಲಿ ಒಂದಿಷ್ಟು ಕೂತು, ಧಾರಿಣಿಗೆ ತನ್ನ ನಾಟಕದ ಕಥೆಯನ್ನು ವಿವರಿಸಿದ. ಅಮ್ಮನಿಗೆ ಏನೂ ಆಗಿಲ್ಲವೆಂದೂ ಇವಳನ್ನು ಬಿಡಿಸಲು ತನ್ನ ನಾಟಕವೆಂದೂ ತಿಳಿಸಿದ. ಇಷ್ಟು ದಿನ ಬಂಧಿಯಾಗಿದ್ದ ಧಾರಿಣಿ ಇದನ್ನು ನಂಬಲು ಕೆಲ ಕ್ಷಣಗಳೇ ಹಿಡಿದವು. ಆದರೂ ಮನಸ್ಸನ್ನು ಯಾವುದೋ ಬಾಧೆ ಹಿಂಡುತ್ತಿತ್ತು. “ಥ್ಯಾಂಕ್ಸ್” ಎಂದಷ್ಟೇ ಅಂದಳು. ಹಳ್ಳಿಗೆ ಹೋಗುವ ಬಸ್ಸು ಬಂದಾಗ, ಕೈತೋರಿಸಿ ಇಬ್ಬರೂ ಬಸ್ಸೇರಿ ಮೌನವಾಗಿ ಮನೆ ಸೇರಿದರು.

ಚಾವಡಿಯಲ್ಲಿ ಯಾವುದೋ ಚರ್ಚೆಯಲ್ಲಿ ಮುಳುಗಿದ್ದ ರಾಜೀವ, ಆಕಾಶ, ಭರತರನ್ನು ಕಂಡ ಧಾರಿಣಿಗೆ ಏನೋ ನಡೆದಿದೆ ಅನ್ನುವ ಅರಿವು ಮೂಡಿತು. “ಅಕ್ಕಾ” ಅನ್ನುತ್ತಾ ಪ್ರವಲ್ಲಿಕಾ ಓಡಿ ಬಂದಾಗಲೇ ಉಳಿದವರೆಲ್ಲರೂ ಇವರಿಬ್ಬರತ್ತ ಗಮನ ಹರಿಸಿದರು. ತಂಗಿಯ ಹಿಂದೆಯೇ ಓಡಿ ಬಂದ ಬರಿಹಣೆಯ ಅಮ್ಮನನ್ನು ಕಂಡಾಗ ಧಾರಿಣಿಯ ಹೃದಯ ಕುಸಿದು ಬಿತ್ತು. “ಅಪ್ಪಾ..” ಎಂದದ್ದಷ್ಟೇ, ಅವಳ ಸ್ವರ ಅಡಗಿಕೂತಿತು. ಇಬ್ಬರನ್ನು ಸಮಾಧಾನ ಮಾಡುವ ಸರದಿ ಪ್ರವಲ್ಲಿಕಾ ಸರೋಜಮ್ಮನವರಿಗೆ. ಇವೆಲ್ಲದರ ನಡುವೆಯೇ ಶಶಾಂಕ ಟಿಮ್ ಮತ್ತವನ ಕಾರ್ಯಾಚರಣೆಯ ವಿವರ ನೀಡಿದ್ದು ರಾಜೀವ ಮತ್ತು ಆಕಾಶ್ ಇಬ್ಬರಿಗೂ ಪರಿಸ್ಥಿತಿಯ ಹಿನ್ನೆಲೆ ಒದಗಿಸಿತು. ಭರತ ಇದನ್ನು ತಾನು ಸಂಭಾಳಿಸುವುದಾಗಿ ಭರವಸೆ ನೀಡಿದ. ಭರತನ ಪ್ರತಿಯೊಂದು ಚರ್ಯೆಯನ್ನೂ ಗಮನಿಸುತ್ತಿದ್ದರು ಸರೋಜಮ್ಮ. ಆದರೆ ಅದು ಬೇರೆ ಯಾರ ದೃಷ್ಟಿಗೂ ಬಿದ್ದಿರಲಿಲ್ಲ.

ಶಾಸ್ತ್ರಿಗಳ ಸಂಸ್ಕಾರಗಳೆಲ್ಲ ಮುಗಿದವು. ಮುಂದೇನು ಎನ್ನುವ ಪ್ರಶ್ನೆ ಎಲ್ಲರೆದುರು ಮತ್ತೊಮ್ಮೆ ಎದ್ದು ನಿಂತಿತು.

***** ***** *****

ಭಾಗ – 17

ರಾತ್ರಿ ಎಂಟರ ಸಮಯ. ಹುಡುಗಿಯರ ಹಾಸ್ಟೆಲ್ಲಿನಲ್ಲಿ, ಮಾಲಾ ಟಿ.ವಿ. ನೋಡುತ್ತ ಕುಳಿತಿದ್ದಳು. ಸಮಾಚಾರ ಪ್ರಾರಂಭವಾಯಿತು. “ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಎನ್ ಕೌಂಟರ್ ದಲ್ಲಿ ಭರತಖಾನ ಎನ್ನುವ ಕುಖ್ಯಾತ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ.” ಎಂದು ಸುದ್ದಿ ವಾಚಕರು ಹೇಳುತ್ತಿದ್ದರು. ಮಾಲಾ ಒಮ್ಮೆಲೆ ಎಲ್ಲ ಹುಡುಗಿಯರನ್ನು ಕೂಗಿ ಕರೆದಳು. ಪ್ರವಲ್ಲಿಕಾ, ತ್ರಿವೇಣಿ, ಜ್ಯೋತಿ, ಮೀರಾ ಎಲ್ಲರೂ ಓಡಿ ಬಂದರು.
“ಪ್ರವಲ್ಲಿಕಾಳನ್ನು ಅಪಹರಿಸಿದ್ದ ಭರತಖಾನನನ್ನು ನಮ್ಮ ಸೈನಿಕರು ಗುಂಡು ಹೊಡೆದು ಕೊಂದಿದ್ದಾರೆ”, ಮಾಲಾ ಆವೇಶದಿಂದ ಹೇಳಿದಳು.
“ಸರಿಯಾದ ಶಾಸ್ತಿ ಆಯಿತು ಆ ಕೀಚಕನಿಗೆ”, ಜ್ಯೋತಿ ಆಕ್ರೋಶದಿಂದ ನುಡಿದಳು. ಯಾಕೊ ಪ್ರವಲ್ಲಿಕಾಳ ಕಣ್ಣಾಲಿ ತುಂಬಿದವು. ಹೊರಳಿ ನಿಂತು ಗೆಳೆತಿಯಿಯರಿಗೆ ಕಾಣದಂತೆ ಕಣ್ಣೊರೆಸಿಕೊಂಡಳು.
ಆ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ. ಕಣ್ಣೆದುರಿಗೆ ಭರತಖಾನನೆ ಬರುತ್ತಿದ್ದ. ಎತ್ತರದ ನಿಲುವಿನ, ಚೂಪುಗಲ್ಲದ, ದಟ್ಟ ಕೂದಲಿನ ಸುಂದರಾಂಗ. ತನ್ನ ನೆಚ್ಚಿನ ಹೀರೊ ಸುದೀಪನನ್ನೆ ಹೋಲುತ್ತಿದ್ದ. ಮೂಗು ಮಾತ್ರ ‘ಅಣ್ಣಾವ್ರ’ ಮೂಗಿನಂತೇ ನಿಡಿದಾಗಿತ್ತು. ‘ಫನಾ’ದಲ್ಲಿಯ ಆಮೀರಖಾನನಂತೆ ಹೋತದ ಗಡ್ಡ ಬೇರೆ.

ದ್ವೇಷ ಮತ್ತು ಪ್ರೀತಿ ಇವುಗಳನ್ನು ಪ್ರಚೋದಿಸುವ ಕೇಂದ್ರಗಳು ಮಿದುಳಿನಲ್ಲಿ ಒಂದೇ ಕಡೆಗೆ ಇರುತ್ತವೆ ಎಂದು ನರಶಾಸ್ತ್ರಪಂಡಿತರು ಹೇಳುತ್ತಾರೆ. ಪಾಕಿಸ್ತಾನದಿಂದ ಬೆಂಗಳೂರಿಗೆ ಕರೆತರುವಾಗ ಭರತಖಾನ ತನ್ನನ್ನು ಪ್ರೀತಿ ಹಾಗು ಗೌರವದಿಂದ ನೋಡಿಕೊಂಡ ರೀತಿಯಿಂದ ಪ್ರವಲ್ಲಿಕಾಳಿಗೆ ಅವನ ಬಗೆಗಿನ ದ್ವೇಷ ಮಾಯವಾಗಿ ಅಲ್ಲಿ ಪ್ರೀತಿ ಚಿಗುರಿತ್ತು.
………………………………..
ಸಮಾಚಾರ ತಿಳಿಯುತ್ತಿದ್ದಂತೆ ಓಸಾಮಾ ಶೋಕತಪ್ತನಾದ. “ಭರತಖಾನನಿಂದ ತಿಳಿಯಬೇಕಾದ್ದನ್ನೆಲ್ಲ ತಿಳಿದುಕೊಂಡು ಆ ಬಳಿಕ ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಈ ನೀಚ ಇಂಡಿಯನ್ನರು. ಈಗ ಎನ್ ಕೌಂಟರ್ ದ ನಾಟಕ ಆಡುತ್ತಿದ್ದಾರೆ” ಎಂದುಕೊಂಡ. ಅವನಿಗೆ ಮತ್ತೊಂದು ಯೋಚನೆಯೂ ಹೊಳೆಯಿತು. ಶರಣು ಬಂದ ವೈರಿಯನ್ನು ಕೊಂದಂತೆ ನಾಟಕವಾಡಿ, ಅದಕ್ಕೆ ಪ್ರಚಾರ ಕೊಟ್ಟು, ಆ ಬಳಿಕ ಪ್ಲ್ಯಾಸ್ಟಿಕ್ ಸರ್ಜರಿಯ ಮೂಲಕ ಆ ವ್ಯಕ್ತಿಯ ರೂಪಾಂತರ ಮಾಡಿ ಗುಪ್ತಚಾರನಂತೆ ಉಪಯೋಗಿಸುವದು ಎರಡನೆಯ ಜಾಗತಿಕ ಯುದ್ಧಕಾಲದಿಂದಲೂ ಉಪಯೋಗದಲ್ಲಿರುವ ಒಂದು ತಂತ್ರ. ಭರತಖಾನನಿಗೂ ಹಾಗೆಯೇ ಆಗಿರಬಹುದೆ? “ಆಯಿತು, ಎಲ್ಲಾದರೂ ಸುಖವಾಗಿರಲಿ ಹಾಳಾದವನು” ಎಂದುಕೊಂಡ ಓಸಾಮಾ ಮಂಡಿಯೂರಿ ಅಲ್ಲಾನಿಗೆ ಪ್ರಾರ್ಥನೆ ಮಾಡಿದ.
……………………………………………….
ಬೆಂಗಳೂರಿನ ಹವ್ಯಾಸಿ ನಾಟ್ಯಸಂಘದವರು ‘ಯವನಿಕಾ’ದಲ್ಲಿ Parting Shot’ ಅನ್ನುವ ಇಂಗ್ಲಿಶ್ ನಾಟಕವಾಡುತ್ತಿದ್ದಾರೆ. ಪ್ರವಲ್ಲಿಕಾಳೆ ಹೀರೋಯಿನ್ ನಾಟಕದ ಕೊನೆಗೆ ಪ್ರಚಂಡ ಕರತಾಡನ.
ಪ್ರೇಕ್ಷಾಗೃಹ ಖಾಲಿಯಾದ ನಂತರ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಯೊಬ್ಬ ರಂಗದ ಮೇಲೆ ಬಂದ. ಅಚ್ಚುಕಟ್ಟಾಗಿ ಶೇವ್ ಮಾಡಿದ ದುಂಡು ಮುಖ, ಮಂಡ ಮೂಗು, ಕ್ಲೋಜ್ ಕಟ್ ಕ್ರಾಪು. ನೀಲಿ ಸಫಾರಿ ಧರಿಸಿದ್ದಾನೆ.
ಆತ ಪ್ರವಲ್ಲಿಕಾಳಿಗೆ ನಮಸ್ಕಾರ ಮಾಡಿ “ತುಂಬಾ ಚೆನ್ನಾಗಿ ಅಭಿನಯಿಸುತ್ತೀರಿ” ಎಂದು ಹೇಳಿ ತಿರುಗಿ ನಡೆದ.
ಆತ ಎರಡು ಹೆಜ್ಜೆ ಇಟ್ಟಿರಲಿಲ್ಲ, ಪ್ರವಲ್ಲಿಕಾ ಕೂಗಿದಳುಃ “ಭರತಖಾನ್!”
ಆತ ಆಶ್ಚರ್ಯದಿಂದ ಹೊರಳಿ, ಹೇಳಿದಃ ” ನೀವು ತಪ್ಪು ತಿಳಿದಿರಬೇಕು; ನನ್ನ ಹೆಸರು ಹರಿದಾಸ.”
ಪ್ರವಲ್ಲಿಕಾ ನಕ್ಕಳು. “ಭರತಖಾನ, ನೀನು ಯಾರನ್ನಾದರೂ ಮೋಸಗೊಳಿಸಬಹುದು. ಆದರೆ ನಿನ್ನ ಪ್ರಿಯತಮೆಯನ್ನು ಮೋಸಗೊಳಿಸಲಾರೆ.”
ಆತ ಗಲಿಬಿಲಿಗೊಂಡು ಅವಳ ನಗುತ್ತಿರುವ ಕಣ್ಣುಗಳನ್ನೇ ನೋಡತೊಡಗಿದ.
ಪ್ರವಲ್ಲಿಕಾ ತನ್ನೆರಡೂ ತೋಳುಗಳನ್ನು ಚಾಚಿ, “ನಮ್ಮ ನಿಕಾ ಎಲ್ಲಿ? ದುಬೈ ಅಥವಾ ಅಫಘಾನಿಸ್ತಾನ?” ಎಂದು ನಕ್ಕಳು.
ಆತ ಸರ್ರನೆ ಅವಳ ತೋಳುಗಳಲ್ಲಿ ಸೇರಿಕೊಂಡ.
“ಇಲ್ಲಿಯೇ, ಈ ರಂಗದ ಮೇಲೆ” ಎನ್ನುತ್ತ ಆತ ತನ್ನ ಬಿಳಿ ಪಾರಿವಾಳಕ್ಕೆ ಮುತ್ತು ಕೊಟ್ಟ.

***********
ಶಾಸ್ತ್ರಿಗಳಿಗೆ ಭರತಖಾನನಾಡಿದ ಕಪಟನಾಟಕ ಗೊತ್ತಾಗಿತ್ತು. ಹರಿದಾಸನ ವೇಷ ಹಾಕಿಕೊಂಡು ಬಂದು ತಮ್ಮನ್ನೆಲ್ಲಾ ಮರುಳುಗೊಳಿಸಿದವನು ಭಯೋತ್ಪಾದಕ ಭರತಖಾನನೇ ಎಂದು ತಿಳಿದು ನೊಂದುಹೋಗಿದ್ದರು. ಮೇಲಿಂದ ಮೇಲೆ ಬಂದೆರಗಿದ ಆಘಾತಗಳು ಅವರ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸಿದ್ದವು. ಮನೆತನದ ಶಾಸ್ತ್ರ, ಸಂಪ್ರದಾಯಗಳನ್ನೆಲ್ಲಾ ಗಾಳಿಗೆ ತೂರಿ ವಿದೇಶೀಯಳೊಬ್ಬಳನ್ನು ಸಂಗಾತಿಯಾಗಿ ಸ್ವೀಕರಿಸಿ, ಈಗ ಕಣ್ಮರೆಯಾಗಿಹೋಗಿರುವ ಮಗ, ಅದೆಷ್ಟೋ ಅಮಾಯಕರ ಬದುಕನ್ನು ಬಲಿ ತೆಗೆದುಕೊಂಡಿರುವ ನರರಾಕ್ಷಸ ಭರತಖಾನನನ್ನು ಮದುವೆಯಾಗುತ್ತೇನೆಂದು ಹಟ ಹಿಡಿದಿರುವ ಮಗಳು ಪ್ರವಲ್ಲಿಕಾ, ಅಪಾಯವೆಂದು ತಿಳಿದಿದ್ದೂ ಬಿಸಿಲುಗುದುರೆಯ ಬೆನ್ನುಹತ್ತಿರುವ ಹಿರಿಯ ಮಗಳು ಧಾರಿಣಿ… ಎತ್ತ ನೋಡಿದರೂ ಅವರಿಗೆ ನಿರಾಸೆಯೇ ಕಾದಿತ್ತು. ಬದುಕು ಸಾಕುಸಾಕೆನ್ನಿಸಿತ್ತು.

ಶಾರದಮ್ಮ ಪ್ರವಲ್ಲಿಕಾಳಿಗೆ ಎಷ್ಟೆಷ್ಟೋ ತಿಳುವಳಿಕೆ ಹೇಳಿನೋಡಿದರು. ಅವಳು ತನ್ನ ನಿರ್ಧಾರವನ್ನು ಬದಲಿಸಲು ತಯಾರಿರಲಿಲ್ಲ. ತಾಯಿ-ಮಗಳ ಮಾತುಕತೆಯನ್ನು ನಿರ್ವಿಕಾರ ಚಿತ್ತದಿಂದ ಕೇಳುತ್ತಿದ್ದ ಶಾಸ್ತ್ರಿಗಳು ಸರಸರನೆ ಎದ್ದು ಮನೆಯಿಂದ ಹೊರನಡೆದರು. ಪ್ರವಲ್ಲಿಕಾ ಮತ್ತು ಶಾರದಮ್ಮನವರೂ ಭಯದಿಂದ ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಯಾವುದೋ ಕರೆಯನ್ನು ಹಿಂಬಾಲಿಸಿದವರಂತೆ ದೊಡ್ದದೊಡ್ದ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ಪ್ರವಲ್ಲಿಕಾ, ಶಾರದಮ್ಮ ಅವರ ಹಿಂದೆ ಓಡು ನಡಿಗೆಯಲ್ಲಿ ಅವರನ್ನು ಕೂಗಿ ಕರೆಯುತ್ತಾ ಹಿಂದೆ ಓಡಿದರು. ಶಾಸ್ತ್ರಿಗಳು ಊರ ಮುಂದಿನ ದೇವಾಲಯ ತಲುಪಿದವರೇ ಮುಖ್ಯ ದ್ವಾರದ ಮುಂದೆ ಕುಸಿದುಬಿದ್ದರು. “ಲಕ್ಷ್ಮೀ ನರಸಿಂಹಾ… ನಿನ್ನ ಪರೀಕ್ಷೆ ಸಾಕಾಯಿತಪ್ಪಾ, ನನ್ನ ಕಣ್ಣ ಮುಂದೆ ನಡೆಯುತ್ತಿರುವ ಈ ಅನಾಚಾರಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಮುಂದೆ ನಡೆಯಲಿರುವ ಅನರ್ಥಗಳಿಗೆ ಸಾಕ್ಷಿಯಾಗಿ ನನ್ನನ್ನು ಇಲ್ಲಿ ಉಳಿಸಬೇಡ. ಇನ್ನು ನಿನ್ನ ಪಾದಕ್ಕೆ ಸೇರಿಸಿಕೋ.” ಎಂದು ಕೊನೆಯ ಬಾರಿಗೆ ಕೈಮುಗಿದು ಬೇಡಿದರು.

ಪ್ರವಲ್ಲಿಕಾ ನೆಲದ ಮೇಲೆ ಬಿದ್ದಿದ್ದ ಶಾಸ್ತ್ರಿಗಳನ್ನು ಅಲುಗಾಡಿಸಿದಳು. ಆದರೆ ಶಾಸ್ತ್ರಿಗಳ ಜೀವದ ಹಕ್ಕಿ ಅವರ ಇಷ್ಟ ದೈವ ನರಸಿಂಹನ ಸನ್ನಿಧಿಯನ್ನು ಸೇರಿ ಕೆಲವು ಕ್ಷಣಗಳೇ ಕಳೆದಿದ್ದವು.

ಭಾಗ – 16

ಮೋಶೆ ಕೋಹೆನ್ ಪ್ರತಿ ವರ್ಷವೂ ತನ್ನ ಹೆಂಡತಿ ಸಾರಾ ಹಾಗು ಮಗಳು ಗೋಲ್ಡಾ ಜೊತೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗುತ್ತಾನೆ. ಸಾರಾಗೆ ಪೇಂಟಿಂಗ್ಸ್ ಗಳ ಹುಚ್ಚು. ಪ್ಯಾರಿಸ್ ಹಾಗು ವರ್ಸಲೇಸ್ ಗಳ ಮ್ಯೂಜಿಯಮ್ ಗಳಿಗೆ ಅವಳು ಭೇಟಿ ಕೊಡುವದನ್ನು ತಪ್ಪಿಸುವದಿಲ್ಲ. ಮೋಶೆಗೆ ಲಲಿತ ಕಲೆಗಳೆಂದರೆ ತಾತ್ಸಾರ. MOSSADದ ಎರಡನೆಯ ಮುಖ್ಯಸ್ಥನಾದ ಅವನಿಗೆ ಲಲಿತ ಕಲೆಗಳು ಲಲಿತೆಯರ ವಿಭಾಗವೆನ್ನುವ ಮನೋಭಾವ. ಹೆಂಡತಿ ಮ್ಯೂಜಿಯಮ್ ಗೆ ಹೋದ ತಕ್ಷಣ ಮೋಶೆ ಕ್ಯಾಬರೆಗೆ ಓಡುತ್ತಾನೆ.
ಫ್ರೆಂಚ ಕ್ಯಾಬರೆ ಎಂದರೆ ಅವನಿಗೆ ಇನ್ನಿಲ್ಲದ ಮೋಹ. ಕೇವಲ ಹತ್ತು ವರ್ಷದ ಗೋಲ್ಡಾ ತಾಯಿಯನ್ನು ಹಿಂಬಾಲಿಸುತ್ತಾಳೆ.

ಮೋಶೆ ನಗ್ನ ಫ್ರೆಂಚ್ ಸುಂದರಿಯರ ಸೌಂದರ್ಯವನ್ನು ಕಣ್ಣುಗಳಿಂದ ಹೀರುತ್ತ, ಶಾಂಪೇನ್ ಆಸ್ವಾದಿಸುತ್ತಿದ್ದಾನೆ. ಅವನ ಸೆಲ್ ಫೋನ್ ಧ್ವನಿ ಮಾಡಿತು. ಮೊನಿಟರ್ ದಲ್ಲಿ ಸಾರಾಳ ಹೆಸರು ಕಂಡಿತು.
“ಥತ್ತೇರಿ,…….ಸೂಪಿನಲ್ಲಿ ನೊಣ!”, ಎಂದು ಗೊಣಗುತ್ತ ಮೋಶೆ ಸೆಲ್ಲಿನಲ್ಲಿ ವ್ಹಿಸ್ಪರಿಸಿದಃ “ಪ್ರಿಯೆ, ನಾನೀಗ ಫ್ರೆಂಚ್ ಗುಪ್ತಚಾರ ಇಲಾಖೆಯ ಮುಖ್ಯಸ್ಥನೊಂದಿಗೆ ಮಹತ್ವದ ಮಾತುಕತೆಯಲ್ಲಿದ್ದೇನೆ. ಇನ್ನೊಂದು ಗಂಟೆಯ ಬಳಿಕ ಹೊಟೆಲ್ಲಿಗೇ ಬರುವೆ.”
“ಈಡಿಯಟ್! ಗೋಲ್ಡಾ ಕಾಣೆಯಾಗಿದ್ದಾಳೆ. ತಕ್ಷಣವೇ ಮ್ಯೂಜಿಯಮ್ಮಿಗೆ ಬಾ.”
ಸೆಲ್ ಫೋನ್ ಬಂದಾಯಿತು. ಮೋಶೆಯ ಮುಖದಲ್ಲಿ ಬೆವರಿಳಿಯಿತು. ಹೊರಗೋಡಿ ಬಂದವನೇ, ಟ್ಯಾಕ್ಸಿಯನ್ನು ಮ್ಯೂಜಿಯಮ್ ಕಡೆಗೆ ಧಾವಿಸಲು ಹೇಳಿದ. ಮ್ಯೂಜಿಯಮ್ ಗೇಟಿನಲ್ಲಿ ಅಳುತ್ತಿದ್ದ ಸಾರಾ ನಿಂತಿಕೊಂಡಿದ್ದಳು. ಮೋಶೆ ಸಾರಾಳ ಹತ್ತಿರ ಬರುತ್ತಿದ್ದಂತೆಯೆ, ಅವನ ಸೆಲ್ ಫೋನ್ ಮತ್ತೆ ಗುಣಗುಣಿಸಿತು.” ಗಾಬರಿಯಾಗಬೇಡ, ಮಿಸ್ಟರ್ ಮೋಶೆ! ಗೋಲ್ಡಾ ನಮ್ಮ ಬಳಿ ಸುರಕ್ಷಿತವಾಗಿದ್ದಾಳೆ. ನೀನು ಫ್ರೆಂಚ್ ಪೋಲೀಸರನ್ನಾಗಲಿ ಅಥವಾ ಗುಪ್ತಚಾರ ಇಲಾಖೆಯನ್ನಾಗಲಿ ಸಂಪರ್ಕಿಸುವ ಮೂರ್ಖತನ ಮಾಡಬೇಡ. ನಿನ್ನ ಹೊಟೆಲ್ಲಿಗೆ ಮರಳು. ಅಲ್ಲಿ ನಿನಗೆ ಹೆಚ್ಚಿನ ವಿವರಗಳು ದೊರೆಯುವವು.”

ಹೊಟೆಲ್ಲಿಗೆ ಮರಳಿದ ಮೋಶೆಗೆ ರಿಸೆಪ್ಶನ್ನಿನಲ್ಲಿ ಒಂದು ಸಂದೇಶ ಕಾದಿತ್ತುಃ
“ಮೋಶೆ, ನಿನ್ನ ಮೂರ್ಖ ಗುಪ್ತಚಾರ ಪಡೆ, ದುಬೈದಿಂದ ‘ಪ್ರವಲ್ಲಿಕಾ’ ಎನ್ನುವ ಹೆಸರಿನ ಒಬ್ಬ ಇಂಡಿಯನ್ ಹುಡುಗಿಯನ್ನು ವಿನಾಕಾರಣವಾಗಿ ಅಪಹರಿಸಿದ್ದಾರೆ. ಅವಳನ್ನು ತಕ್ಷಣವೇ ಪೇಶಾವರಕ್ಕೆ ಕರೆ ತಂದು ಪಾಕಿಸ್ತಾನದ ISI HQSಗೆ ಒಪ್ಪಿಸಬೇಕು. ಈ ದಿನ ರಾತ್ರಿ ಹತ್ತು ಗಂಟೆಯವರೆಗೆ ಇಂಡಿಯನ್ ಹುಡುಗಿ ಪೇಶಾವರದಲ್ಲಿ ಕಾಣದಿದ್ದರೆ, ನಿನ್ನ ಮುದ್ದು ಮಗಳ ಮೇಲೆ ಹಿಂಸೆ ಪ್ರಾರಂಭವಾಗುವದು. ನೀನು ಜಾಣನಾದರೆ ನಿನಗೆ ನಿನ್ನ ಮಗಳು ಮರಳಿ ದೊರೆಯುವಳು. ಖುದಾ ಹಾಫೀಜ್!
………………………………………….
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದ ಶಾಸ್ತ್ರಿಗಳಿಗೆ ಹರಿದಾಸರು ಕಾಣಲಿಲ್ಲ. ಶೌಚಕ್ಕೆ ಹೋಗಿರಬಹುದು ಎಂದುಕೊಂಡರು. ಸಂಜೆಯಾದರೂ ಅವರ ಸುಳಿವಿಲ್ಲ. ತಂಬೂರಿಯೇನೋ ಅಲ್ಲಿಯೇ ಇದೆ. ಅದರ ಬುರುಡೆಯ ಬಿರಟೆಯೊಂದು ಬಿಚ್ಚಿದ್ದು ಕಂಡಿತು. ಅದನ್ನು ಸರಿಪಡಿಸಿ ತಂತಿಗಳ ಮೇಲೆ ಕೈ ಎಳೆದರು. ಸುಶ್ರಾವ್ಯ ಆಲಾಪವಾಯಿತು. ಹರಿದಾಸರು ನಾರದ ಮುನಿಗಳೇ ಎನ್ನುವದರಲ್ಲಿ ಶಾಸ್ತ್ರಿಗಳಿಗೆ ಏನೂ ಸಂಶಯ ಉಳಿಯಲಿಲ್ಲ. ಎಲ್ಲಿಂದಲೋ ಪ್ರತ್ಯಕ್ಷತರಾಗಿ, ಈಗ ಎಲ್ಲಿಯೋ ಮಾಯವಾಗಬೇಕಾದರೆ, ಇದು ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳಿಗೆ ಮಾತ್ರ ಸಾಧ್ಯ. ತಮ್ಮ ನೆನಪಿಗಾಗಿ ಈ ತಂಬೂರಿಯನ್ನು ಬಿಟ್ಟು ಹೋಗಿರಬೇಕು! ಶಾಸ್ತ್ರಿಗಳು ತಂಬೂರಿಗೆ ಸಾಷ್ಟಾಂಗ ಪ್ರಣಾಮ ಹಾಕಿದರು.
……………………………………………..
ಪೇಶಾವರದಲ್ಲಿ ಇಳಿದ ಭರತಖಾನ ಅಲ್ಲಿಯ ISI HQSಗೆ ತೆರಳಿದ. ಅವನ ಬಿಳಿಯ ಪಾರಿವಾಳ ಅಲ್ಲಿಯೇ ಮುದುಡಿಕೊಂಡು ನಿಂತಿತ್ತು. HQSದ ಅಧಿಕಾರಿ, “ನಿಮಗಾಗಿ ಹೆಲಿಕಾಪ್ಟರ್ ಸಿದ್ಧವಿದೆ. ಓಸಾಮಾ ಅಫಘಾನದ ಗವಿಯಲ್ಲಿ ತಮಗಾಗಿ ಕಾಯುತ್ತಿದ್ದಾರೆ” ಏಂದು ಹೇಳಿದ. ಪ್ರವಲ್ಲಿಕಾಳಿಗೆ ಬಲವಂತವಾಗಿ ಹಿಮದುಡುಗೆ ತೊಡಿಸಿ, ಹೆಲಿಕಾಪ್ಟರನಲ್ಲಿ ಹತ್ತಿಸಿದ ಭರತಖಾನ ಅಫಘಾನದ ಕಡೆಗೆ ಹಾರಿದ.

ಒಂದರ್ಧ ಗಂಟೆಯಲ್ಲಿಯೇ ಅಕಾಲಿಕ ಹಿಮವರ್ಷ ಹಾಗು ಭೀಕರ ಬಿರುಗಾಳಿ ಪ್ರಾರಂಭವಾಯಿತು. ಈ ಋತುವಿನಲ್ಲಿ ಹೀಗಾಗಬಾರದು. ಭರತಖಾನನಿಗೆ ಹೆಲಿಕಾಪ್ಟರ್ ನಿಯಂತ್ರಣ ಬಹಳ ಕಷ್ಟವಾಯಿತು. ತಾನು ಎಲ್ಲಿ ಹೋಗುತ್ತಿದ್ದೇನೆ ಎನ್ನುವದೇ ಅವನಿಗೆ ತಿಳಿಯದಾಯಿತು. ಕೊನೆಗೊಮ್ಮೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಹಿಮಬಂಡೆಯೊಂದಕ್ಕೆ ಅಪ್ಪಳಿಸಿತು. ಭರತಖಾನನಿಗೆ ತನ್ನ ಕೈಕಾಲುಗಳನ್ನು ಚಲಿಸಲೂ ಆಗಲಿಲ್ಲ. ಭೂಮಿ ಹಾಗು ಆಕಾಶ ತುಂಬಿದ ಬಿಳಿ ಹಿಮ ಬಿಟ್ಟು ಮತ್ತೇನೂ ಕಾಣದು. ಈ ಹಿಮದ ಮಧ್ಯೆ ಓರ್ವ ದೇವತೆ ಪ್ರತ್ಯಕ್ಷಳಾದಂತೆ ಅವನಿಗೆ ತೋರಿತು. ತನ್ನ ಮರಗಟ್ಟಿದ ದೇಹವನ್ನು ಅವಳೇ ಎಳೆಯುತ್ತ ಸಾಗಿಸುತ್ತಿರುವಂತೆ ಅವನಿಗೆ ಭಾಸವಾಯಿತು. ತಾನು ಚಿಕ್ಕವನಿದ್ದಾಗ ತನ್ನ ತಂದೆ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳು ಅವ ಮನಸ್ಸಿನಲ್ಲಿ ಕೇಳತೊಡಗಿದವುಃ “ಯಾ ದೇವಿ ಸರ್ವಭೂತೇಷು ಚೈತನ್ಯರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
…………………………………………………
ಹೀಗೆ ಎಷ್ಟು ಹೊತ್ತು ಕಳೆಯಿತೊ ಅವನಿಗೆ ತಿಳಿಯದು. ಎಚ್ಚರವಾದಾಗ, ಎಣ್ಣೆ ದೀಪದ ಮಂದ ಬೆಳಕಿನಲ್ಲಿ ಶಾಂತ ಮುಖದ ವೃದ್ಧರೊಬ್ಬರು ಕಂಡರು. ಅವರ ಪಕ್ಕದಲ್ಲಿ ಪ್ರವಲ್ಲಿಕಾ.
“ಎಚ್ಚರವಾಯಿತೆ ಮಗೂ? ಸ್ವಲ್ಪ ಬಿಸಿ ಗಂಜಿ ಕುಡಿ”, ವೃದ್ಧರು ಮೃದುವಾಗಿ ನುಡಿದರು.
“ನೀವಾರು? ಇದು ಯಾವ ಜಾಗ?”,ಭರತಖಾನ ಕೇಳಿದ.
“ಮಗು, ನೀನು ಪಾಕಿಸ್ತಾನದ ಹಿಂಗ್ಲಾಜ ಹಳ್ಳಿಯಲ್ಲಿರುವ ಮಾತಾ ಹಿಂಗ್ಲಜಾ ದೇವಿಯ ಗುಡಿಯಲ್ಲಿರುವೆ. ನೀನು ಎಚ್ಚರ ತಪ್ಪಿ ಬಿದ್ದಾಗ, ಈ ಹುಡುಗಿ ನಿನ್ನನ್ನು ನಾಲ್ಕು ಕಿಲೋಮೀಟರ್ ದೂರದವರೆಗೆ ಎಳೆಯುತ್ತ, ಇಲ್ಲಿಗೆ ತಂದಿದ್ದಾಳೆ. ನಿನಗೆ ಎರಡು ದಿನಗಳವರೆಗೆ ಎಚ್ಚರವಿರಲಿಲ್ಲ.”,ವೃದ್ಧರು ನುಡಿದರು.
“ಹಾಗಾದರೆ ತಾನು ಕನಸಿನಲ್ಲಿ ಕಂಡ ದೇವಿ ಪ್ರವಲ್ಲಿಕಾಳೆ? ನನ್ನನ್ನು ಬಿಟ್ಟು ಓಡಿ ಹೋಗದೆ, ನನಗೆ ಆರೈಕೆ ಮಾಡಿದವಳು ಪ್ರವಲ್ಲಿಕಾಳೆ?”, ಭರತಖಾನ ಅಚಚರಿಪಟ್ಟ. ತಂದೆ ತನ್ನೆದುರು ನುಡಿಯುತ್ತಿದ್ದ ಶ್ಲೋಕಗಳು ನೆನಪಾದವುಃ “ಯಾ ದೇವಿ ಸರ್ವಭೂತೇಷು ಕ್ಷಮಾರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
ಭರತಖಾನ ಎದ್ದು ನಿಂತ. ವೃದ್ಧರ ಕಾಲಿಗೆರಗಿ, “ನನ್ನನ್ನು ಕ್ಷಮಿಸಿರಿ; ನಾನೊಬ್ಬ ಭಯೋತ್ಪಾದಕ”, ಎಂದು ನುಡಿದ.
“ಕ್ಷಮಿಸಲು ನಾನಾರಪ್ಪ, ಪ್ರವಲ್ಲಿಕಾಳೆ ನಿನ್ನನ್ನು ಕ್ಷಮಿಸಿದ್ದಾಳಲ್ಲ!”, ಎಂದರು ವೃದ್ಧರು.
“ಪ್ರವಲ್ಲಿಕಾ, ಮೊದಲು ನಿನ್ನನ್ನು ಸುರಕ್ಷಿತವಾಗಿ ನಿಮ್ಮೂರಿಗೆ ಮುಟ್ಟಿಸುವೆ. ಆ ಬಳಿಕ ನಾನು ಅಫಘಾನಿಸ್ತಾನಕ್ಕೆ ಹೋಗುವೆ”, ಭರತಖಾನ ಹೇಳಿದ.
………………………………..
ಓಸಾಮಾ ಬಿನ್ ಲಾಡೆನ್ ಅಚ್ಚರಿಯಿಂದ ನೋಡುತ್ತಿದ್ದಾನೆ. ಭರತಖಾನ ತನ್ನ ಪಿಸ್ತೂಲನ್ನು ಓಸಾಮಾನ ಎದುರಿಗೆ ಇಟ್ಟು, “ವಲೀಸಾಬ್, ನನ್ನ ಮನಸ್ಸು ಬದಲಾಗಿದೆ. ನಾನು ಭಯೋತ್ಪಾದನೆಯನ್ನು ಬಿಟ್ಟು ಬಿಡುತ್ತಿದ್ದೇನೆ”, ಎಂದು ಹೇಳುತ್ತಿದ್ದಾನೆ.
“ಎಲ್ಲಿ ಹೋಗುತ್ತಿ?”, ಓಸಾಮಾ ಕೇಳಿದ.
“ಇಂಡಿಯನ್ ಆರ್ಮಿಗೆ ಸರೆಂಡರ್ ಆಗುತ್ತೇನೆ.”, ಭರತಖಾನ ದೃಢವಾದ ದನಿಯಲ್ಲಿ ಉತ್ತರಿಸಿದ.
ಓಸಾಮಾ ನಿಬ್ಬೆರಗಾದ, ಸಿಂಹದ ಗವಿಯಲ್ಲಿ ನಿಂತುಕೊಂಡೆ, ಸಿಂಹದ ಹಲ್ಲೆಣಿಸುವ ಧೈರ್ಯಕ್ಕೆ! ಅದಕ್ಕೆ ಅಲ್ಲವೆ ಈ ಬಚ್ಚಾ ತನಗೆ ಅಷ್ಟು ಪ್ರೀತಿಯವನಾದದ್ದು, ತನ್ನ ಮಾನಸಪುತ್ರನಾದದ್ದು. ಆದರೆ ಈಗ ತನಗೇ ದ್ರೋಹ ಬಗೆಯುತ್ತಿದ್ದಾನೆ. ಅಪ್ಪನನ್ನೇ ಬಾಂಬು ಹಾಕಿ ಉಡಾಯಿಸಿದವನಿಗೆ ಚಿಕ್ಕಪ್ಪನ ಮೇಲೆಂತಹ ಪ್ರೀತಿ?
ಓಸಾಮಾ ವ್ಯಗ್ರನಾದ. ಅವನ ಬೆರಳು ಪಿಸ್ತೂಲಿನ ಸೇಫ್ಟಿ ಕ್ಯಾಚನ್ನು ಹಿಂದೆ ಸರಿಸಿತು. ಒಡೆಯನ ಅಪ್ಪಣೆಯಾದರೆ ಭರತಖಾನನನ್ನು ಕೊಚ್ಚಿಹಾಕಲು, ಓಸಾಮಾನ ಅನುಯಾಯಿಗಳು ಸಿದ್ಧರಾಗಿ ನಿಂತಿದ್ದರು.
ಭರತಖಾನನ ಕಡೆಗೆ ಬೆನ್ನು ಮಾಡಿದ ಓಸಾಮಾ ತನ್ನ ಅನುಚರರಿಗೆ ಅಪ್ಪಣೆ ಮಾಡಿದಃ”ಇವನನ್ನು ಭಾರತದ ಗಡಿಯಲ್ಲಿ ಸುರಕ್ಷಿತವಾಗಿ ಇಳಿಸಿ ಬನ್ನಿರಿ”.
ಅವನ ಜೀವನದಲ್ಲಿಯೆ ಮೊದಲ ಬಾರಿಗೆ ಒಂದು ಹನಿ ನೀರು ಓಸಾಮಾನ ಕಣ್ಣಿನಿಂದ ಜಾರಿತು.