ಪ್ರವಲ್ಲಿಕಾ ತನ್ನ ಸಾಹಸವನ್ನು ಗೆಳತಿಯ ಮುಂದೆ ಬಣ್ಣಿಸುತ್ತಿದ್ದಳು .ತನಗೆ ಊಟ ಕೊಡಲು ಬಂದವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಭಂದನದಿಂದ ತಪ್ಪಿಸಿಕೊಂಡು ಹೊರಗೋಡಿ ಬಂದಿದ್ದಳು ಪ್ರವಲ್ಲಿಕಾ.ಅವಳಿಗಿರುವ ಧೈರ್ಯಕ್ಕೆ ಅವಳು ಅಷ್ಟು ಮಾಡಿದ್ದೇ ಹೆಚ್ಚ್ಯು!ಅದು ಬೆಂಗಳೂರು ಹೊರವಲಯದಲ್ಲಿರುವ ಯಾವುದೋ ಪ್ರದೇಶ ಅದು.ಸಾಕಷ್ಟು ದೂರ ಓಡೋಡಿ ಬಂದ ಮೇಲೆ ಬಸ್ ಸ್ಟಾಪ್ ಒಂದು ಕಂಡಾಗ ಸ್ವಲ್ಪನಿರಾಳವೆನಿಸಿತ್ತು ಅವಳಿಗೆ…ರೆಡ್ ಬೋರ್ಡ್ ಬಸ್ ಬಂದಾಗ ಹತ್ತಿದ ಜನರಲ್ಲಿ ಒಂದಾಗಿ ಬಸ್ಸೊಳಗೆ ನುಸುಳಿದ್ದಳು. ಟಿಕೆಟ್ಟಿಗೆ ಕೈಯಲ್ಲಿ ಕಾಸಿಲ್ಲ(ಅಮ್ಮ ಬ್ಲೌಸಿನಲ್ಲಿ ಯಾಕೆ ದುಡ್ಡಿಟ್ಟುಕೊಳ್ಳುತ್ತಾರೆ ಅಂತ ಅವಳಿಗೆ ಆಗ ಹೊಳೆಯಿತು) ಕಂಡೆಕ್ಟರ್ ಕೇಳಿದಾಗ ಸರಾಗವಾಗಿ ಹಿಂದೆ ತೊಗೋತಾರೆ ಅಂತ ಉತ್ತರಿಸಿದವಳಿಗೆ ತನ್ನ ಮೇಲೆ ತನಗೇ ಬೆರಗು…!
ಪ್ರವಲ್ಲಿಕಾ ಹೀಗೆ ತಾನು ಓಡಿ ಬಂದ ಕತೆಯನ್ನು ಸಾದ್ಯಂತವಾಗಿ ಹೇಳಿ ಮುಗಿಸಿದಾಗ ಕಾಂತಿಯ ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು…ಅವಳು ತಂದ ಊಟ ತಟ್ಟೆಗಳಲ್ಲೇ ತಣ್ಣಗಾಗಿತ್ತು…
***
ಧಾರಿಣಿ ಪ್ರವಲ್ಲಿಕ ಅಕ್ಕ ತಂಗಿಯರಾದರೂ ಬಹಳಷ್ಟು ಸಾಮ್ಯವಿದೆ ಚೆನ್ನಾಗಿ ಪರಿಚಯವಿಲ್ಲದವರು ಇವರಿಬ್ಬರ ಶಾಲಾದಿನಗಳಲ್ಲೂ ಕಾಲೇಜು ದಿನಗಳಲ್ಲೂ ಅವಳನ್ನು ಇವಳು ಇವಳನ್ನು ಅವಳು ಅಂದುಕೊಂಡು ಬೇಸ್ತು ಬೀಳುವುದಿತ್ತು ಪ್ರವಲ್ಲಿಕ ಧಾರಿಣಿಗಿಂತಲೂ ಸ್ವಲ್ಪ ಕುಳ್ಳಿ.ಧಾರಿಣಿ ಪ್ರವಲ್ಲಿಕಾಳಷ್ಟು ಬಿಳುಪಿಲ್ಲ.ಅಷ್ಟೇ ಅವರಿಬ್ಬರಲ್ಲಿ ಎದ್ದು ತೋರುವ ವ್ಯತ್ಯಾಸ.ಆದರೆ ಸ್ವಭಾವದಲ್ಲಿ ಅಜಗಜಾಂತರವಿದೆ.ಧಾರಿಣಿ ಬುದ್ದಿವಂತೆ,ಚಾಲೂಕು ಧೈರ್ಯಸ್ತೆ.ಪ್ರವಲ್ಲಿಕ ಪುಕ್ಕಲಿ ಜಿರಳೆ ಕಂಡರೂ ಗಡಗಡ ನಡುಗಿ ಬಿಡುತ್ತಾಳೆ. ಧಾರಿಣಿಯದೂ ಅವಳಣ್ಣ ಪ್ರತಾಪನಂತೆ ಅಸಾಧಾರಣ ಬುದ್ದಿಮತ್ತೆ.ಭಾರತದಲ್ಲಿದ್ದಾಗ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು ಮದುವೆಯಾಗಿ ನ್ಯೂಯಾರ್ಕ್ ಗೆ ಬಂದ ಮೇಲೆ H-4 ವೀಸಾ ಸ್ಟೇಟಸ್ ನಿಂದಾಗಿ ಕೆಲವು ದಿನ ಮನೆಯಲ್ಲಿ ಕೂರಬೇಕಾಯ್ತು. ನಂತರ ತನ್ನ ಬುದ್ದಿಬಲದಿಂದ ಒಂದು ಸ್ಟಾರ್ಟ್ ಅಪ್ ಕಂಪನಿಯೊಂದರಲ್ಲಿ ಕೆಲಸ ಸಂಪಾದಿಸಿದಳು ಈಗ ರಾಜೀವವನಿಗಿಂಥಾ ಮೊದಲೇ ಅವಳ ಗ್ರೀನ್ ಕಾರ್ಡ್ ಬಂದಿದೆ.ಅವಳ ಬುದ್ದಿವಂತಿಕೆಯೇ ಅವಳಿಗೆ ಆಪಾಯ ತರುವಂಥಾ ಪರಿಸ್ಥಿತಿ ತಂದಿದೆ ಈಗ. ಧಾರಿಣಿಯ ತಲೆಯಲ್ಲಿರುವ ಹೊಸ ಆವಿಷ್ಕಾರದ ಐಡಿಯಾಗೆ ಪೇಟೆಂಟ್ ಮಾಡಿಸಿಕೊಳ್ಳಲು ಅವಳ ಕಂಪನಿ ಸೂಚಿಸಿದೆ ಆದರೆ ಈ ಚಿಕ್ಕ ಕಂಪನಿ ಅಂಥಾ ಒಂದು ಪೇಟೇಂಟ್ ಪಡೆದು ಬಿಟ್ಟರೆ ಅದರ ಎದುರಾಳಿ ದೈತ್ಯ ಕಂಫನಿಗೆ ಆಗುವ ನಷ್ಟ ಅಗಾಧ ಈ ಎದುರಾಳಿ ದೈತ್ಯ ಕಂಫನಿ ಧಾರಿಣಿಯನ್ನು ಖರೀದಿಸಲು ಪ್ರಯತ್ನಿಸಿತು… ಧಾರಿಣಿ ಸೊಪ್ಪು ಹಾಕಲಿಲ್ಲಾ…ಸಾಮದಾನಗಳಾದ ನಂತರ ದಂಡವೆಂಬ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.
***
ಧಾರಿಣಿ ತನ್ನ ಸುರಕ್ಷತೆಗಾಗಿ ಸ್ವಲ್ಪ ದಿನ ಎಲ್ಲಾದರೂ ಹೋಗುವುದೇ ಲೇಸೆಂದು ಅವಳ ಕಂಪನಿಯ ಮುಖ್ಯಸ್ಥರು ಸೂಚಿಸಿದರು. ರಾಜೀವನೂ ಅನುಮೋದಿಸಿದ. ಧಾರಿಣಿ ನಾನು ಹೇಡಿಯಂತೆ ಯುದ್ಧರಂಗ ಬಿಟ್ಟು ಓಡಿ ಹೋಗುವುದಿಲ್ಲವೆಂದು ವಾದಿಸಿದಳು. ಅದು ಹೇಡಿತನ ಅಲ್ಲವೆಂದು ಹುಷಾರಿಯಿಂದು ಅವಳನ್ನು ಒಪ್ಪಿಸಿದ ರಾಜೀವ.ಅದರಂತೆ ಧಾರಿಣಿ ಭಾರತಕ್ಕೆ,ಬೆಂಗಳೂರಿಗೆ ಹೊರಟು ನಿಂತಿದ್ದಾಳೆ.ಅಲ್ಲಿ ಜಾವ ಪ್ರೋಗ್ರ್ಯಾಂ ಕಲಿಯುವವಳಂತೆ ನಟಿಸಿ ಪ್ರವಲ್ಲಿಕಾ ಹಾಸ್ಟೆಲ್ನಲ್ಲಿ `ಗೆಸ್ಟ್’ ಅಂತ ಇರುವುದೆಂದು ಅವಳ ಪ್ಲ್ಯಾನ್. ಹಳ್ಳಿಯಲ್ಲಿನ ಅಪ್ಪ ಅಮ್ಮನಿಗೂ ಸದ್ಯಕ್ಕೆ ಪ್ರವಲ್ಲಿಕಾಗೂ ಜಾವ ಕಲಿಯಲು ಬರುತ್ತಿದ್ದೇನೆ ಅಂತಲೇ ಹೇಳಿದ್ದಾಳೆ. ಕೇಶವನ ಮನೆಯಲ್ಲಿರಮ್ಮಾ ಅಂತ ಶಾಸ್ತ್ರಿಗಳು ಹೇಳಿದಾಗ ಇಲ್ಲಪ್ಪಾ ಅವರ ಮನೆಯಲ್ಲಿ ಮಡಿ ಜಾಸ್ತಿ ಅಲ್ಲದೇ ಅವರ ಮನೆ ಮತ್ತಿಘಟ್ಟದಲ್ಲಿರುವುದರಿಂದ ಓಡಾಟ ಕಷ್ಟ ಅಂತ ನಿರಾಕರಿಸಿ ಬಿಟ್ಟಿದ್ದಾಳೆ.ಜೊತೆಗೆ ಪ್ರವಲ್ಲಿಕಾ ಜೊತೆ ಇರಲು ಇನ್ಯಾವಾಗ ಸಮಯ ಸಿಗುತ್ತದೆ ಎಂದು ಹೇಳಿದ್ದಾಳೆ. ಅವಳಿಗೆ ತಿಳಿಯದ ವಿಷಯವೆಂದರೆ ಅವಳು ಭಾರತಕ್ಕೆ ಹೊರಡುವ ಈ ಸಂಗತಿ ಆ ಎದುರಾಳಿ ದೈತ್ಯಕಂಪನಿ ಈಗಾಗಲೇ ಗೊತ್ತಿದೆ ಮತ್ತು ಅವರುಗಳು ಅವಳನ್ನು ಬೆಂಗಳೂರಿಗೂ ಹಿಂಬಾಲಿಸುತ್ತಿದ್ದಾರೆ ಎಂಬುದು. ವಿಪರ್ಯಾಸವೆಂದರೆ ಅವಳ ಬಾಸ್ ಆದ ವ್ಯಕ್ತಿಯೇ ಆ ದೈತ್ಯನಿಂದ ಖರೀದಿಸಲ್ಪಟ್ಟು ಈ ವಿಷಯ ತಿಳಿಸಿರುವುದು!! ಅಮೆರಿಕಾದಂಥ ದೇಶದಲ್ಲಿ ಬೌದ್ದಿಕ ಹಕ್ಕುಗಳ ಮೇಲಿನ ಧಾಳಿಗಳನ್ನು ಬಹಳ ತೀವ್ರವಾಗಿ ಪರಿಗಣಿಸುತ್ತಾರೆ. ಆದರೆ ಭಾರತದಲ್ಲಿ ಹಾಗಿಲ್ಲ. ಧಾರಿಣಿಯನ್ನು ವಶಪಡಿಸಿಕೊಳ್ಳುವುದು ಸುಲಭ ಎಂದು ಅವಳ ಬಾಸ್ ಆದ ವ್ಯಕ್ತಿಯೇ ಆದೈತ್ಯ ಕಂಪನಿಗೆ ತಿಳಿಸಿದ್ದಾನೆ.