೧
‘-ಹಿಂದೆ ಎಂದೋ ಒಮ್ಮೆ ಇಂದಿನೀ ರಾತ್ರಿ
ಕೃಷ್ಣ ಹುಟ್ಟಿದನಂತೆ – ಕೃಷ್ಣ ಹುಟ್ಟಿದನು.
ಮುಂದೆ ಎಂದೋ ಒಮ್ಮೆ ತಾ ಬರುವ ಖಾತ್ರಿ
ಕೃಷ್ಣ ಹೇಳಿದನಂತೆ ; ಪಾರ್ಥ ಕೇಳಿದನು :
೨
“ಬಾಡಿರಲು ಬತ್ತಿರಲು ಧರ್ಮವು ; ಅಧರ್ಮ
ಮೊಳೆತಿರಲು ಚಿಗಿತಿರಲು ನಾ ಬರುವೆನೆಂ”ದು.
ಆಡಿದನು ಮಾಡಿಲ್ಲ. ಯಾರದೀ ಕರ್ಮ?
ಇನ್ನಾದರೂ ಅವನು ಬರುವುದೆಂದು?
೩
ಭಾರತಕ್ಕಿಂತ ರಾಮಾಯಣಕ್ಕಿಂತ
ನನ್ನ ಕಾಲವೆ ಕಾಲು ಪಾಲು ಮೇಲು.
ಕೆಟ್ಟಿಲ್ಲ ಧರ್ಮ, ಹುಟ್ಟಿಲ್ಲಧರ್ಮಂತs
ಬಂದಿಲ್ಲ ದೇವರೂ ; ಇರಲಿ ಬುಡಮೇಲು !
೪
ಹುಟ್ಟಿ ಬರುವುದು ಬೇಡ, ಕೆಡುವುದೂ ಬೇಡ.
ದೇವನೂ ಧರ್ಮವೂ ಇವು ಎರಡು ಜೋಡಿ.
‘ಕೆಟ್ಟ ಬುದ್ಧಿಯೆ ! ಬಾಯಿ ಮುಚ್ಚು ಕೆಡಬೇಡ.
ಮಂಗಮನವೇ ! ವಾದ ಸಾಕು ಖೋಡೀ.’