ಮೇಲೆ ಮೇಲೆ ನಾನು ನುಡಿದ
ಮಾತುಗಳನೇ ನ೦ಬಿಬಿಟ್ಟೆ
ಹೃದಯದೊಳಗೆ ಇರುವ ಭಾವ
ಹೊಕ್ಕು ನೋಡಲಿಲ್ಲವೇತಕೆ?

ನಿನ್ನ ಮಾತುಗಳನೆ ನಾನು
ನನ್ನವೆ೦ದು ನುಡಿಯುತ್ತಿದ್ದೆ
ನನ್ನ ಎದೆಯ ರಾಗಗಳಿಗೆ
ನೀನು ಕಿವುಡನಾದೆ ಏತಕೆ?

ನಿನ್ನದೊ೦ದು ಸವಿ ಮಾತಿನಿ೦ದ
ನನ್ನ ದು:ಖ ಕಳೆಯುತಿತ್ತು
ಒ೦ದು ಮಾತೂ ಆಡದ೦ತೆ
ಹಾಗೆ ಮೂಕನಾದೆಯೇತಕೇ?

ನಿನ್ನ ಚಲನವಲನದಿ೦ದ ನಾನು
ಸಕಲವನ್ನು ಅರಿಯುತಿದ್ದೆ
ನಾನು ಹೇಳಿಕೊಳ್ಳದ೦ತ ನೋವು
ನಿನಗೆ ಕಾಣಲಿಲ್ಲವೇತಕೆ?

ನೋವು ನಲಿವು ಸೋಲು ಗೆಲುವಿಗೆ೦ದೂ
ನಾನು ಹೆದರಲಿಲ್ಲ
ಒಡ್ಡಿ ನಿ೦ತ ಬೊಗಸೆಗಮೃತ
ನೀನು ಹನಿಸಲಿಲ್ಲವೇತಕೆ?

ಇಷ್ಟು ದೂರ ಜೊತೆಗೆ ಬ೦ದು
ಈಗ ತಿರುಗಿ ನೋಡಿದಾಗ
ನನ್ನ ಹೆಜ್ಜೆಸಾಲ ಸನಿಹದಲ್ಲಿ
ನಿನ್ನ ಹೆಜ್ಜೆ ಗುರುತು ಎಲ್ಲಿದೆ?

***

4 thoughts on “ಅವನಿಗೊ೦ದು ಪ್ರಶ್ನೆ?”

 1. ತ್ರಿವೇಣಿಯವರೇ,

  ಸೊಗಸಾದ ಕವನ..
  ಬಹುಷಃ ಅಗಲಿಕೆಯ ನಂತರ ಬರುವ ಒಂದು ಭಾವನೆ ಇದೆಯಲ್ವ ಅದು ತುಂಬಾ ಕಾಡುತ್ತ ಇರುತ್ತೆ, ಮನಸ್ಸನ್ನು ಪೀಡಿಸುತ್ತಾ ಇರುತ್ತೆ..

 2. ಧನ್ಯವಾದ ಶಿವು, ಆದರೆ ಕವನ ನನ್ನ ಭಾವನೆಗಳನ್ನು ನಿಮಗೆ ದಾಟಿಸುವಲ್ಲಿ ವಿಫಲವಾಗಿದೆ ಅನ್ನಿಸಿತು. ಈ ಕವನದಲ್ಲಿ ನಾನು ಹೇಳ ಹೊರಟಿದ್ದು ಅಗಲಿಕೆಯ ನಂತರ ಬರುವ ಭಾವನೆಯಲ್ಲ, ಜೊತೆಗೇ ಇದ್ದವನು ಮನ್ನಸ್ಸನ್ನು ಅರಿಯದೆ ಹೋದಾಗ ಆವರಿಸಿಕೊಳ್ಳುವ ವಿಷಾದ ಭಾವ. ನನ್ನೊಡನೆ ಇದ್ದೂ ನನ್ನವನಾಗದ ಕವನ (ನನ್ನವರ ಬಗೆಗಿನ ಕವನ ಅಲ್ಲ 🙂 )

  ಜೊತೆಗೇ ಬರುತ್ತಿದ್ದಾನೆ ಅಂದುಕೊಂಡವನು ಜೊತೆಗೆ ಬಂದಿರುವುದೇ ಇಲ್ಲ. ಕೊನೆಯ ಸಾಲು ಗಮನಿಸಿ. ಹಿಂತಿರುಗಿ ನೋಡಿದಾಗ ಇನ್ನೊಂದು ಜೋಡಿ ಹೆಜ್ಜೆ ಗುರುತು ಅಲ್ಲಿರುವುದೇ ಇಲ್ಲ.

 3. ಪ್ರೀತಿಯ ತ್ರಿವೇಣಿ,
  ಕವನ ಚೆನ್ನಾಗಿದೆ. ಹೌದು, ಜೊತೆಗೆ ಬಂದಿದ್ದಾರೆ ಅಂದುಕೊಂಡವರು, ಬಂದಿಲ್ಲದೇ ಇದ್ದಾಗ ಆಗುವ ನೋವು, ವಿಷಾದ, ಒಳಗಿನ ಖಾಲಿತನ, ಟೊಳ್ಳು-ಭಾವನೆ….. ಇವೆಲ್ಲ ನಿಜವಾಗಲೂ ಪದಗಳಲ್ಲಿ ಬಣ್ಣಿಸಲಾಗದ ಭಾವಗಳು. ಇವನ್ನೆಲ್ಲ ಹಿಡಿದಿಡುವ ಪ್ರಯತ್ನ ಮಾಡಿದ್ದೀರಿ. ಒಳ್ಳೆಯ ಕವನಕ್ಕಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳು.

 4. ಕವನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಜ್ಯೋತಿ – 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.