“ಹಳೆಯ ಹಾಡು ಹಾಡು ಮತ್ತೆ
ಅದನೇ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ”

ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ನನಗೀಗ ಮತ್ತಷ್ಟು ಅರ್ಥಪೂರ್ಣ ಅನ್ನಿಸುತ್ತಿದೆ. ಯಾಕೆ ಗೊತ್ತಾ? ನನಗೆ ಹಳೆಯ ಹಾಡುಗಳ ಭಂಡಾರ ಸಿಕ್ಕಿದೆ.  ಕೆಲವು ದಿನಗಳ ಹಿಂದೆ  ನಮ್ಮ ಮಿತ್ರರೊಬ್ಬರ ಮನೆಗೆ ಹೋಗಿದ್ದಾಗ ಆ ಮಾತು-ಈ ಮಾತು ಆಡುತ್ತಿದ್ದಾಗ ಪಿ.ಕಾಳಿಂಗರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಹಾಡಿನ ಬಗ್ಗೆ ಮಾತು ಬಂದಿತು.ನಾನು ಈಚೆಗೆ ಈ ಹಾಡನ್ನು ಕೇಳೇ ಇಲ್ಲ, ತುಂಬಾ ದಿನಗಳಾಯಿತು” ಎಂದೆ. ಅವರು – “ಆ ಹಾಡು ನನ್ನಲ್ಲಿದೆ, ಬೇಕಾದರೆ ತೆಗೆದುಕೊಂಡುಹೋಗಿ” – ಎಂದು ತಮ್ಮಲ್ಲಿದ್ದ ಹಾಡುಗಳ ಸಂಗ್ರಹವನ್ನು ತೋರಿಸಿದರು.

ಅಲ್ಲಿದ್ದದ್ದು ತುಂಬಾ ಹಳೆಯ ಚಿತ್ರಗಳ ಕ್ಯಾಸೆಟ್‍ಗಳು.   ಅವುಗಳನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ.   ಈಗ ಆಸ್ಪತ್ರೆಯಲ್ಲಿ ಕೊನೆಯ ಗಳಿಗೆಗಳನ್ನು ಎಣಿಸುತ್ತಿರುವ ಎಸ್.ಕೆ. ಕರೀಂಖಾನರ ಸ್ವರ್ಣಗೌರಿ, ಘಂಟಸಾಲರ ಶಿವಶಂಕರಿ….ಹಾಡಿರುವ ಜಗದೇಕವೀರನ ಕಥೆ, ಸೋರಟ್ ಅಶ್ವತ್ಥ್ ಸಾಹಿತ್ಯ ನೀಡಿರುವ ಕೆಲವು ಚಿತ್ರಗಳು, ಪಿ.ಬಿ. ಶ್ರೀನಿವಾಸ್ ಹಾಡಿರುವ ತುಂಬಾ ಹಳೆಯ ಚಿತ್ರಗೀತೆಗಳು….ಎಲ್ಲಿ ಹುಡುಕಿದರೂ ಸಿಗದ ಅಪರೂಪದ ಗೀತೆಗಳು ಅಲ್ಲಿದ್ದವು. 

ಆದರೆ ಎಲ್ಲವೂ ಕ್ಯಾಸೆಟ್‍ಗಳು. ಈಗಿನ ಹೊಸ ಕಾರುಗಳಲ್ಲಿ ಹಾಕಿಕೊಂಡು ಕೇಳಲು ಸಾದ್ಯವಿಲ್ಲದವು. ಆ ಮಿತ್ರರ ಹಳೆಯ ಹಾಡುಗಳ ಅಭಿಮಾನ ಅದೆಷ್ಟಿದೆಯೆಂದರೆ ಕಾರಿನಲ್ಲಿ ಈ ಹಾಡುಗಳನ್ನು ಕೇಳಲೆಂದೇ ಒಂದು ಟೇಪ್ ರೆಕಾರ್ಡರ್ ಇಟ್ಟುಕೊಂಡಿದ್ದಾರಂತೆ!

ಒಂದು ಇನ್ನೊಂದು ಎನ್ನುತ್ತಾ ಸುಮಾರು ಹತ್ತಿಪ್ಪತು ಕ್ಯಾಸೆಟ್ಟುಗಳನ್ನು ಆರಿಸಿಕೊಂಡೆ.  ಮನೆಗೆ ಬಂದು ಮೂಲೆಗೆ ಬಿಸಾಕಿದ್ದ ಕ್ಯಾಸೆಟ್ ಪ್ಲೇಯರಿನಲ್ಲಿ ಆ ಹಾಡುಗಳನ್ನೆಲ್ಲ ಕೇಳಿದೆ. ಒಂದಕ್ಕಿಂತ ಒಂದು ಸುಂದರ.  ಎಷ್ಟೊಂದು ಚೆಲುವಾಗಿ ಹೆಣೆಯಲ್ಪಟ್ಟ ಗೀತೆಗಳು!   ಈಗಿನ ಹಾಡುಗಳಿಗೆ ಬಳಸುವ ವಿವಿಧ ಬಗೆಯ ಆಧುನಿಕ ವಾದ್ಯಗಳಿಲ್ಲದೆಯೂ ಕಿವಿಗಿಂಪೆನಿಸುವ ತಣ್ಣನೆಯ ಸಂಗೀತ ಅದು.  ಸೀಮಿತ ವಾದ್ಯಗಳನ್ನು ಬಳಸಿದ ಕೆಲವು ಹಾಡುಗಳು, ಇಂದಿನ ಅಬ್ಬರದ, ಆಡಂಬರದ ಸಂಗೀತದ ಮುಂದೆ ಬಡಕಲು ಅನ್ನಿಸುತ್ತದೆ ಕೂಡ.  ಹಳೆಯ ಹಾಡುಗಳನ್ನೇ ರೀಮಿಕ್ಸಿನ ಗಾಣದಲ್ಲಿ ಅರೆದು, ಹಣ ದೋಚುತ್ತಿರುವ ಈ ಹೊತ್ತಿನಲ್ಲಿ,  ಹಳೆಯ ಹಾಡುಗಳದು ಹುಡುಕಿದರೂ ಸಿಗದ ದುರ್ಗತಿ!

ಈಗ,  ಕ್ಯಾಸೆಟ್‍ನಲ್ಲಿ ತುಂಬಿರುವ ಗಾನಸುಧೆಯನ್ನು mp3ಗೆ ಪರಿವರ್ತಿಸಿ, ಸಿಡಿಗಳಿಗೆ ತುಂಬಿಸಬೇಕಾಗಿದೆ. ಕ್ಯಾಸೆಟ್‍ನ್ನು ಹಿಂತಿರುಗಿಸುವಾಗ ನಿಮಗೂ ಒಂದು ಸಿಡಿ ತಲುಪಿಸುತ್ತೇನೆ ಎಂದು ನಮ್ಮ ಸ್ನೇಹಿತರಿಗೆ ನೀಡಿದ ಆಶ್ವಾಸನೆಯನ್ನು ನಿಜ ಮಾಡಬೇಕಾಗಿದೆ. ನಂಬಿಕೆ ಉಳಿಸಿಕೊಳ್ಳಬೇಕಾಗಿದೆ. 🙂

8 thoughts on “ಹಾಡು ಹಳೆಯದಾದರೇನು?”

 1. ‘ಹಾಡು ಹಳೆಯದಾದರೇನು ಭಾವ ನವನವೀನ’ ಎಷ್ಟು ಸುಂದರ ಮತ್ತು ಅರ್ಥಗರ್ಭಿತವಾಗಿದೆ ಈ ಹಾಡು, ನನ್ನ ಎಷ್ಟೋ ಸ್ನೇಹಿತರು ಕೇಳಿದ್ದಾರೆ ಕೇಳಿದ್ದೇ ಹಾಡನ್ನ ಎಷ್ಟು ಸರ್ತಿ ಕೇಳ್ತೀರ ಬೇಜಾರಾಗಲ್ವ ಅಂತ, ಬಹುಷ ಅಂತವರಿಗೇ ಬರೆದಂತ ಸಾಲು ಇದು. ಹೌದು ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುತ್ತದೆ ಮನಸ್ಸು, ಪ್ರತಿಸಲಿ ಕೇಳಿದಾಗಲೂ ಹೊಸ ಹೊಸ ಆಲೋಚನೆಗಳನ್ನ , ಹೊಸ ಹೊಸ ಭಾವನೆಗಳನ್ನ, ಹೊಸಾ ಕನಸುಗಳನ್ನ ನನ್ನೊಳಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ ಇಂಥಹ ಸುಂದರ ಹಾಡುಗಳ ಸಾಲುಗಳು. ಅದರಲ್ಲೂ ಕೆಲವು ಚಲನಚಿತ್ರ ಗೀತೆಗಳಿಗೆ ಅಳವಡಿಸಿರುವ ಭಾವಗೀತೆಗಳಂತೂ ಮನಸ್ಸನ್ನ ತಣಿಸಿಬಿಡುತ್ತವೆ. ಎಷ್ಟೋ ಬಾರಿ ಬದುಕಿನ ಏಕಾಂಗಿತನಕ್ಕೆ ಜೊತೆಕೊಡುವ ಈ ಸುಂದರ ಗೀತೆಗಳು ಮರೆಯಾಗದಿರಲಿ ಹಾಡು ಪ್ರಿಯರ ಮನಸ್ಸಿಗೆ ಸಂತೋಷದ ಸುಗಂಧ ಬೀರುತ್ತಿರಲಿ.
  ವೇಣಿ, ನನಗೊಂದು CD ಕೊಡಲು ಮರೆಯದಿರು.

 2. ಹಳೆಯ ಹಾಡುಗಳ ಗಮ್ಮತ್ತೆ ಅಂತದ್ದು..
  ಕೇಳಿದಾಗ ನಿಜಕ್ಕೂ ಮನಕ್ಕೆ ಒಂದು ಉಲ್ಲಾಸ ನೀಡುತ್ತವೆ..
  ಕ್ಯಾಸಟ್‍ ಕೇಳುವ ಆ ಮೋಜು ಈಗಿನ ಸಿಡಿ-ಎಂಪಿತ್ರಿಯಲ್ಲಿ ಎಲ್ಲಿ ಇದೆ !

  ಹ್ಯಾಪಿ ಕೇಳುವಿಕೆ!

 3. ಮೀರಾ ಮತ್ತು ಅಸತ್ಯಾನ್ವೇಷಿಗಳೇ,

  ನೀವಿಬ್ಬರು ಹೀಗೆ ಓಪನ್ ಆಗಿ ಸಿಡಿ ಕೊಡಿ ಅಂತಾ ಕೇಳಿದ್ರೆ, ನೋಡಿದ ಜನ, ನಾನು CD ನಕಲು (piracy) ಮಾಡ್ತಾ ಇದೀನಿ ಅಂತ ತಪ್ಪು ತಿಳಿದುಕೊಳ್ಳೊದಿಲ್ವಾ??:P

 4. ಶಿವು, ನೀವು ಹೇಳಿದ ಹಾಗೆ ಕ್ಯಾಸೆಟ್ ಕೇಳುವ ಮೋಜು ಸಿಡಿಗಳಲ್ಲಿಲ್ಲ. ಆದರೆ mp3 CDgಗಳಲ್ಲಿ ಒಟ್ಟಿಗೆ ನೂರಾರು ಹಾಡುಗಳನ್ನು ತುಂಬಬಹುದಾದ್ದರಿಂದ , ಹಾಡುಗಳನ್ನು ಸಂಗ್ರಹಿಸುವುದು ಸುಲಭ. ನನಗೆ ಈಗ ಕ್ಯಾಸೆಟ್ ಹಾಕಿಕೊಂಡು ಕೇಳೋದು ಕಿರಿಕಿರಿ ಅನ್ನಿಸತ್ತೆ 🙂

 5. “ನನಗೆ ಈಗ ಕ್ಯಾಸೆಟ್ ಹಾಕಿಕೊಂಡು ಕೇಳೋದು ಕಿರಿಕಿರಿ ಅನ್ನಿಸತ್ತೆ …”

  ಅಟ್ಟ ಹತ್ತಿದ ಮೇಲೆ ಏಣಿಯನ್ನು ಜರೆದಂತಾಯ್ತಲ್ಲ ಇದು 🙁

 6. ಜೋಶಿಯವರೇ ನನ್ನ ಮಾತಿನ ಅರ್ಥ ಅದಲ್ಲ .  ಬರೀ ಅನುಕೂಲತೆಯ ದೃಷ್ಟಿಯಿಂದ ಆ ಮಾತು ಹೇಳಿದ್ದು ನಾನು 🙂
  ಏಣಿಯ ಮೇಲೆ ಅಪಾರ ಗೌರವವಿಟ್ಟುಕೊಂಡೇ ಲಿಪ್ಟ್ ಅಥವಾ ಎಲಿವೇಟರ್ ಉಪಯೋಗಿಸ ಬಯಸುತ್ತೇನೆ 🙂

 7. “ಬಲ್ಲವನೇ ಬಲ್ಲ ಬೆಲ್ಲದ ರುಚಿಯ” – ಇದು ಹಳೆಯ ಸುಮಧುರ ಗೀತೆಗಳಿಗೆ ಅನ್ವಯಿಸುವ ವೇದವಾಕ್ಯ. ಆಧುನಿಕ ಸಲಕರಣೆಗಳಲ್ಲಿದೆಯೇ ಮಾಧುರ್ಯತೆಯನ್ನು ತುಂಬಿ ತುಳುಕಿಸುತ್ತಿದ್ದ ನೂರಾರು ಹಾಡುಗಳು, ಜನಮನದಲ್ಲಿ ಹಾಸುಹೊಕ್ಕಿವೆ. ಇನ್ನೂ ಮುಂದಿನ ತಲೆಮಾರುಗಳಿಗೆ ಅವು ತಲುಪುತ್ತಲೇ ಇರುತ್ತವೆ. ಅದನ್ನೇ ಅಲ್ಲವೇ “ಎವರ್ ಗ್ರೀನ್” ಅನ್ನೋದು.

  ಅಂದಹಾಗೆ, ಶ್ರೀವತ್ಸ ಜೋಶಿಯವರ ಮಾತನ್ನು ನಾನೂ ಕೂಡ ಅನುಮೋದಿಸುತ್ತೇನೆ.
  “ಕಿರಿಕಿರಿ ಅನಿಸತ್ತೆ” ಅನ್ನುವುದರಲ್ಲಿ ಯಾವುದೇ “ಅಪಾರ ಗೌರವ” ಕಾಣಿಸುತ್ತಿಲ್ಲ ತ್ರಿ ಅವರೆ. ಹೀಯಾಳಿಕೆ ಮಾತ್ರ ಎದ್ದು ಕಾಣಿಸ್ತಿದೆ. 🙂

  OT:
  ಜೋಶಿಗಳು ಗೂಗಲ್ ಸಂಪರ್ಕ ಹಾಕಿಕೊಂಡಿರುವ ಹಿನ್ನೆಲೆಯೇನು? 😉

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.