ಚಿತ್ರಲೋಕದಲ್ಲಿ ಪ್ರತಿವಾರ ಧಾರಾವಾಹಿಯಾಗಿ ಬರುತ್ತಿದ್ದ ಪಾರ್ವತಮ್ಮನವರ ಅಂಕಣವನ್ನು ತಪ್ಪದೆ ಓದುತ್ತಿದ್ದವರಲ್ಲಿ ನಾನೊಬ್ಬಳು. ಚಿತ್ರರಂಗದ ಕುರಿತು ಅವರು ನೀಡುತ್ತಿದ ಒಳವಿವರಗಳು ಓದಲು ತುಂಬಾ ಚೆನ್ನಾಗಿರುತ್ತಿತ್ತು. ನಿರ್ಮಾಪಕಿಯಾಗಿ, ವಿತರಕಿಯಾಗಿ, ನಟನ ಪತ್ನಿಯಾಗಿ,ತಾಯಿಯಾಗಿ ಅವರ ಅನುಭವ ಬಹಳ ದೊಡ್ಡದು. ಪ್ರಸಿದ್ಧ ಪುರುಷರ ಪತ್ನಿಯರು ತಮ್ಮ ಪತಿಯ ಪ್ರಭಾವಳಿಯಲ್ಲಿ ಲಯವಾಗಿ ಹೋಗುವುದೇ ಹೆಚ್ಚು. ಆದರೆ ಪಾರ್ವತಮ್ಮ ರಾಜ್‍ರಂತಹ ಮೇರು ವ್ಯಕ್ತಿತ್ವದ ಜೊತೆಯಲ್ಲಿದ್ದುಕೊಂಡೇ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡವರು. ಇಂತಹ ಪಾರ್ವತಮ್ಮನಂತಹ ಪಾರ್ವತಮ್ಮನೇ ರಾಜ್ ಮೃತದೇಹದ ಮೇಲೆ ತಲೆ ಇಟ್ಟು ದು:ಖಿಸುತ್ತಿದ್ದಾಗ ಅದೆಷ್ಟು ಜನರ ಕಣ್ತುಂಬಿ ಬಂದಿತೋ?
ರಾಜ್ ಕುರಿತು ಈಗಾಗಲೇ ಅದೆಷ್ಟೋ ಜನ ಬರೆದಿರಬಹುದಾದಾರೂ, ರಾಜ್ ಅವರನ್ನು ಅತಿ ಹತ್ತಿರದಿಂದ ಕಂಡಿರುವ ಪತ್ನಿಯೋ, ಮಕ್ಕಳೋ ಅವರ ಬಗ್ಗೆ ಬರೆದಾಗ ಅದರಲ್ಲಿ ಮತ್ತಷ್ಟು ಆತ್ಮೀಯವೆನಿಸುವ ವಿವರಗಳಿರುತ್ತವೆ. ಈ ಕಾರಣದಿಂದಲೇ ಆತ್ಮಚರಿತ್ರೆಗಳನ್ನು ಓದುವುದು ಕೂಡ ನನಗೆ ಬಹಳ ಇಷ್ಟ. ಎಲ್ಲವನ್ನೂ ಅಲ್ಲ. ಕೆಲವರು ತಮ್ಮ ಆತ್ಮಚರಿತ್ರೆಯನ್ನು ತಮಗಾಗದವರ ಮಾನಾಪಹರಣಕ್ಕೆ ಬಳಸಿಕೊಂಡಿದ್ದೂ ಇದೆ.
ಬೀಚಿಯವರು ತಮ್ಮ ಭಯಾಗ್ರಫಿಯಲ್ಲಿ ಅನಕೃ ಕುರಿತು ಬರೆದಿರುವ ಅಭಿಮಾನದ ಮಾತುಗಳು ನಮ್ಮ ಕಣ್ಣ ಮುಂದೆ ಈಗಾಗಲೇ ನೆಲೆಯಾಗಿರುವ ಅನಕೃ ಅವರ ಧೀಮಂತ ವ್ಯಕ್ತಿತ್ವದ ಜೊತೆಗೆ , ತಮಾಷೆ,ತುಂಟತನದ ಅವರ ಇನ್ನೊಂದು ಮುಖವನ್ನು ತೆರೆದಿಡುತ್ತ್ತವೆ. ಯಾರೋ ಎದುರಿಗೆ ಕುಳಿತು ಕಥೆ ಹೇಳಿದಂತೆ ಅನ್ನಿಸುವ ಇಂತಹ ಆಪ್ತ ಬರಹಗಳಲ್ಲಿ ಕೆಲವು ಅಪರೂಪದ ಮಾಹಿತಿಗಳಿರುತ್ತವೆ. ಅವು ಎಲ್ಲೂ ಅಚ್ಚಾಗಿರದ ಹೊಚ್ಚ ಹೊಸ ವಿಷಯಗಳು.
ಚಿತ್ರಲೋಕದಲ್ಲಿ ಇಂಗ್ಲೀಷಿನಲ್ಲಿ ಪ್ರಕಟವಾಗುತ್ತಿದ್ದ ಪಾರ್ವತಮ್ಮ ಅಂಕಣ ಕನ್ನಡಪ್ರಭದಲ್ಲಿ ಪ್ರತಿ ಮಂಗಳವಾರ ಪ್ರಕಟವಾಗ ತೊಡಗಿದ ಮೇಲೆ ಪ್ರತಿವಾರ ಅದಕ್ಕಾಗಿ ಕಾಯುವಂತಾಗುತ್ತಿತ್ತು. ಈಚೆಗೆ ಕೆಲವು ವಾರಗಳಿಂದ ಯಾಕೋ ಪಾರ್ವತಮ್ಮ ಅಂಕಣ ಪ್ರಕಟವಾದಂತಿಲ್ಲ. ಇಳಿ ವಯಸ್ಸು, ಪತಿಯ ಮರಣದ ವ್ಯಥೆ, ಚಿತ್ರರಂಗದ ಜವಾಬ್ಧಾರಿಗಳು ಗಟ್ಟಿ ವ್ಯಕ್ತಿತ್ವದ “ವಜ್ರೇಶ್ವರಿ”ಯನ್ನೂ ಮೆತ್ತಗಾಗಿಸಿದೆಯೋ ಏನೋ.
ಈ ಅಂಕಣ ಇಲ್ಲಿಗೇ ನಿಲ್ಲದೆ ಮತ್ತೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಇದನ್ನು ಸಾಧ್ಯವಾಗಿಸುವಂತೆ ಚಿತ್ರಲೋಕದ ವೀರೇಶ್ ಅವರಲ್ಲಿ ನನ್ನ ಸವಿನಯ ಮನವಿ. 🙂
***
ಪಾರ್ವತಮ್ಮನವರು ಡಾ.ರಾಜ್ ಅಗಲಿಕೆಯ ನೂರನೆ ದಿನದ ನೆನಪಿಗಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಜಯ ಕರ್ನಾಟಕದಲ್ಲಿ ಭಾವಚಿತ್ರದೊಂದಿಗೆ ವರದಿಯಾಗಿದೆ.
ಸಭೆಯಲ್ಲಿಯೇ ತನ್ನ ಆರಾಧ್ಯದೈವವನ್ನು ನೆನೆದು ಕಣ್ಣೀರು ಹಾಕುತ್ತಿರುವ ಪಾರ್ವತಮ್ಮನವರನ್ನು ಜಯಂತಿಯವರು ಸಮಾಧಾನ ಪಡಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಪಾರ್ವತಮ್ಮನವರಿಗೆ ಆಗಿರುವ ಮಾನಸಿಕ ಆಘಾತವನ್ನು ಅಣ್ಣಾವ್ರ ಸವಿನೆನಪುಗಳೇ ಸರಿದೂಗಿಸಬೇಕಿದೆ. ಪಾರ್ವತಮ್ಮನವರು ಎಂದಿನಂತೆಯೇ ಚೈತನ್ಯದ ಚಿಲುಮೆಯಾಗಲಿ ಎಂದು ಹಾರೈಸೋಣ.
ಮನ, ನಿಮ್ಮ ಹಾರೈಕೆ ನನ್ನದೂ ಕೂಡ 🙂
ನೀವು ಹೇಳಿದ ವಿಜಯ ಕರ್ನಾಟಕದ ಲೇಖನ ಸಿಗಲಿಲ್ಲ ನನಗೆ.
ಪಾರ್ವತಮ್ಮನವರು ದು:ಖದ ಮಡುವಿನಲ್ಲಿ ಇರಬೇಕು. ಅದಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ತಿಲ್ಲ. ಅವರ ದು:ಖ ಶಮನವಾಗಿ, ಮತ್ತೆ ಲವಲವಿಕೆಯಿಂದಿರಲು ಆ ಸರ್ವಶಕ್ತನು ಶಕ್ತಿಯನ್ನೀಯಲಿ.
ನಮ್‌ದೂಕೆ ಗೊತ್ತಿಲ್ಲ ಮೆಡಮ್.
ಯಾರ್‌ದಾರೂ ಅಗಲಿಕೆ ಅನ್ನೋದ್ ನೂರ್ ದಿನದ ಸಮಾರಂಭ ಆಗ್ ಹೋಗೋದಕ್ಕೆ ಅದೇನ್ ಕನ್ನಡಾ ಸಿನಿಮಾ ಕೆಟ್ಟೋಯ್ತೇ?
ನೀವು ಹೇಳಿದ ವಿಜಯ ಕರ್ನಾಟಕದ ಲೇಖನ ಸಿಗಲಿಲ್ಲ ನನಗೆ
ಅಣ್ಣಾವ್ರು ಹೋಗಿದ್ದು, ಏಪ್ರಿಲ್ ೧೨. ಅಲ್ಲಿಂದ ನೂರನೆ ದಿನ ಅಂದ್ರೆ ಜುಲೈ ೨೦.
ವಿಜಯ ಕರ್ನಾಟಕ ದಿನಪತ್ರಿಕೆ, ಜುಲೈ ೨೧ ಅಥವಾ ಜುಲೈ ೨೨ರ ಸಂಚಿಕೆ ನೋಡಿದರೆ, ವಿವರಗಳು ಸಿಗುತ್ತದೆ. ನಾನು, ಆ ಪತ್ರಿಕೆಯಲ್ಲಿಯೇ ಕಣ್ಣಾರೆ ನೋಡಿದ್ದು, ಓದಿದ್ದು.
– ಮನ