ಕವಿ – ಕುವೆಂಪು
ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!
ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!
ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!
ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!
ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!
ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!
ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!
ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!