‘ಮಿಥಿಲೆ’
ಕವಿ : ಸುಬ್ಬಣ್ಣ.ರಂಗನಾಥ.ಎಕ್ಕುಂಡಿ
ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು
ಅಲ್ಲಿಹವು ಎತ್ತರದ ಮನೆಗಳು ಮಂದಿರವು
ಅಲ್ಲಿ ಬೇಕಾದಷ್ಟು ತುಳಸಿ ಹೂವು
ಹೆಜ್ಜೆ ಹೆಜ್ಜೆಗೆ ಅಲ್ಲಿ ಸಂಪಿಗೆಯ ಮರಗಳಿವೆ
ಗಿಳಿಗಳಿವೆ. ಇಲ್ಲ ಪಂಜರದ ನೋವು
ಅಲ್ಲಿ ಪುಷ್ಕರಿಣಿಗಳ ತುಂಬ ತಾವರೆಯಿಹವು
ಅಲ್ಲಿ ಬೀಸುವ ಗಾಳಿ ಚೈತ್ರಗಂಧ
ಅಲ್ಲಿ ಹಾರುವ ಹಂಸ, ಮೈಥಿಲಿಯ ಕನಸಿನೊಲು
ಬೆಡಗಿನಲಿ, ಗರಿಯೊಡೆದ ಹಿಗ್ಗಿನಿಂದ
ಅಲ್ಲಿ ವಿಶ್ವಾಮಿತ್ರ ಕುಳಿತಂಥ ಕಲ್ಲು ಇದೆ
ರಾಮಭದ್ರನು ನಿಂತ ಮರದ ನೆರಳು
ಇಂದಿಗೂ ನೆನೆಸುತಿದೆ ಮಣ್ಣು ಕಣಕಣ ಕೂಡ
ಶಿವನ ಬಿಲ್ಲಿನ ಹಗ್ಗವೆಳೆದ ಬೆರಳು
ಅಲ್ಲಿ ಮಣ್ಣೇ ಹಾಗೆ ಎಲ್ಲೆತ್ತಿಕೊಂಡರೂ
ರಾಮಭದ್ರನ ಕರುಣೆ ಸ್ಪಂದಿಸುವುದು
ಎಲ್ಲಿ ಹೊಲ ಉತ್ತರೂ ದೊರೆಯುವುದು ಹೆಣ್ಣು ಮಗು
ಜನಕರಾಜನ ಭಾಗ್ಯನಿಧಿ ತೆರೆದು
ಬಿಲ್ಲನೆತ್ತುವ ದಿವಸ ದೇಶವೇ ನೆರೆದಿತ್ತು
ರಾಮಭದ್ರನು ತಮ್ಮನೊಡನೆ ಬರಲು
ದಾರಿಯುದ್ದಕ್ಕೂ ಹೂವ ಸುರಿಸಿದವು ಹೆಮ್ಮರವು
ದಿವ್ಯ ಮಂಗಲವಾದ್ಯ ಮೊಳಗುತಿರಲು
ಹೃದಯತಟ್ಟೆಗಳಲ್ಲಿ ಕಣ್ಣಿನಾರತಿ ಎತ್ತಿ
ಮಿಥಿಲೆ ಸಂಭ್ರಮದಿಂದ ಎದುರುಗೊಂಡು
ವೈದೇಹಿಯನು ಬಯಸಿ ಬಂದ ರಾಜರ ಆಸೆ
ಶಿವನ ಬಿಲ್ಲಿನ ಜೊತೆಗೆ ತುಂಡು ತುಂಡು
ಸುರಿದ ಮಂತ್ರಾಕ್ಷತೆಯು ಸುತ್ತ ಜಯಜಯಕಾರ
ರಾಮಭದ್ರಗೆ ಕಮಲಮಾಲೆ ಹಾಕಿ
ಬದಿಗೆ ನಿಂತಳು ಸೀತೆ, ಜನಕರಾಜನ ಭಾಗ್ಯ
ಲೋಕಗಳ ಹರ್ಷವೇ ಹರಿಯುತುಕ್ಕಿ
ಮಗಳ ಮನೆತುಂಬಿಸುತ ಬೀಳ್ಕೊಡಲು ಜನಕನು
ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು
‘‘ ಮಗಳೆ ಮಂಗಲವಿರಲಿ’’ ಎಂದು ಉಡುಗೊರೆಯಿತ್ತ
ಬಂಗಾರದ ಕರಡಿಗೆ ತುಂಬ ಹೊಲದ ಮಣ್ಣು
ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ
ಹೃದಯಸ್ಪರ್ಷಿ ಕವನವನ್ನು ಹೆಕ್ಕಿ ನೀಡಿದ್ದಕ್ಕಾಗಿ ಧನ್ಯವಾದಗಳು. ಶ್ರೀರಾಮನವಮಿಯ ಶುಭಾಶಯಗಳು.
ಕಾಕಾ, ನಿಮಗೂ ಶುಭಾಶಯಗಳು.
ಸುಂದರವಾದ ಕವನ… ಅಯೋಧ್ಯೆಯ ಬದಲು ಮಿಥಿಲೆಗೆ ಹೋಗುವ ವಿಭಿನ್ನ ಆಸೆ…
ಸುಂದರವಾದ ಕವನ ಈ ವಷ೯ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಕಾಂ ಪದವಿಗೆ ಈ ಕವನವಿದೆ.ಈ ದೃಶ್ಯ ವಿದ್ಯಾಥಿ೯ಗಳ ಮನಸ್ಸಿಗೆ ತುಂಬಾ ಮುದ ನೀಡಿತು.ಪದ್ಯ ಕೇಳುತ್ತ ್ದರಲ್ಲಿ ಲೀನವಾದರು. ತುಂಬಾ ಧನ್ಯವಾದಗಳು
ಆಶಾಲತ ಅವರಿಗೆ ನಮಸ್ಕಾರಗಳು. ನಿಮ್ಮ ವಿದ್ಯಾರ್ಥಿಗಳು ಈ ಸುಂದರ ಕವನವನ್ನು ಅರ್ಥ ಮಾಡಿಕೊಂಡು, ಆನಂದಿಸಿದ ವಿಷಯ ತಿಳಿದು ಬಹಳ ಸಂತೋಷವಾಯಿತು. ಅದನ್ನು ಇಲ್ಲಿ ಹಂಚಿಕೊಂಡಿದ್ದಕ್ಕಾಗಿ ನಿಮಗೂ ಧನ್ಯವಾದಗಳು. 🙂