ಕವನ – ನಿಮ್ಮೊಡನಿದ್ದೂ ನಿಮ್ಮಂತಾಗದೆ
ಕವಿ – ಕೆ. ಎಸ್. ನಿಸಾರ್ ಅಹಮದ್
ನಿಮ್ಮೊಡನ್ದಿದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದ್ದಿದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ಒಳಗೊಳಗೇ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತ್ಲಿಲದಂತೆ ನಟಿಸಿ
ಚಕಾರವೆತ್ತದ ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬ್ದಿದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.
* * *
(ಸಂಜೆ ಐದರ ಮಳೆ ಸಂಕಲನದಿಂದ – ೧೯೭೦)
* * *
ಧನ್ಯವಾದಗಳು, ವೇಣಿ. ಮಾರ್ಮಿಕವಾದ ಕವನ. ಎಂದೋ ಒಮ್ಮೆ ಓದಿದ್ದೆ, ಇಂದು ಮತ್ತೊಮ್ಮೆ ಓದುವ ಅವಕಾಶ ಸಿಕ್ಕಿತು. ಸಮಾಜದ ಕೊರೆಗಳನ್ನು ಬಹಳ ನಯವಾಗಿ ಹೇಳಿರುವ ನಿಸಾರ್ ಅಹಮದರ ರೀತಿ ಅವರ ವೈಶಿಷ್ಠ್ಯ.
ಮತ್ತೊಮ್ಮೆ ಧನ್ಯವಾದಗಳು.
ತ್ರಿವೇಣಿಯವರೇ,
ನಿಸಾರ್‍ರು ಹೇಳುತ್ತಿರುವುದು ಅನಿವಾಸಿ ಭಾರತೀಯರ ಬಗ್ಗೆಯೇ??
>ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ
ಆ ಕ್ಷಣ ನಿಜಕ್ಕೂ ಕಷ್ಟ ಅನಿಸುತ್ತೆ..
ಇಂತ ಕವನವನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು
ತುಳಸಿವನಕ್ಕೆ ಆಗಾಗ ಭೇಟಿ ನೀಡಿ ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು ಜ್ಯೋತಿ 🙂
ಶಿವು, ಈ ಕವನ ಅನಿವಾಸಿ ಭಾರತೀಯರನ್ನು ಕುರಿತು ಬರೆದಿದ್ದಲ್ಲ. ನಿಸಾರರು ಒಬ್ಬ ಮುಸ್ಲಿಮನಾಗಿ, ಸಮಾಜದಿಂದ ಎದುರಿಸಿರಬಹುದಾದ ಅನುಮಾನಅವಮಾನಗಳನ್ನು ಕುರಿತು ಬರೆದಿರಬಹುದೆಂದು ನನ್ನ ಭಾವನೆ.
ಆದರೆ ಕವನ ಓದುತ್ತಿರುವವರ ಮನಸ್ಥಿತಿಯನ್ನು ಅವಲಂಬಿಸಿ, ಪರಕೀಯ ಭಾವನೆ ಅನುಭವಿಸುತ್ತಿರುವ ಪ್ರತಿಯೊಬ್ಬರಿಗೂ ಈ ಕವನ ಅನ್ವಯವಾಗುತ್ತದೆ.
ವೇಣಿ, ಪರಕೀಯ ಭಾವನೆ “ಪರಕೀಯ”ರಾದರೆ ಮಾತ್ರ ಬರಬೇಕಿಲ್ಲ, ಸ್ವಜನ-ಬಂಧು-ಬಾಂಧವರ ನಡುವೆಯೂ ಬರಬಹುದು…. ಸಾಮಾಜಿಕ ಸ್ಥಿತಿ-ಗತಿಯಲ್ಲಿ ವ್ಯತ್ಯಾಸಗಳಿದ್ದಾಗ, ಬಡತನ-ಸೌಂದರ್ಯಗಳ ವ್ಯತ್ಯಾಸಗಳಿದ್ದಾಗ, ರಾಜಕೀಯ ವ್ಯತ್ಯಾಸಗಳಿದ್ದಾಗ…. “ನಮ್ಮವರ” ನಡುವೆಯೂ ನಾವು ಪರಕೀಯರಾಗಬಹುದು….. ಅಲ್ಲವೆ?
ತುಂಬಾ ಚೆನ್ನಾಗಿರುವ ಕವನ.
ಬೆಕ್ಕಿನ ಮೆಟಫರ್ ಅಂತೂ ಕಣ್ಣಿಗೆ ಕಟ್ಟುವಂತಿದೆ.ಪ್ರತಿಯೊಬ್ಬರೂ ಜೀವನದ ಯಾವುದೋ ಒಂದು ನೆನಪು ಮಾಡಿಕೊಳ್ಳಲಿಚ್ಛಿಸದ ತಿರುವಿನಲ್ಲಿ “ಈ ಪಂಜದ ಏಟು” ತಿಂದೇ ಇರುತ್ತಾರಾದ್ದರಿಂದ ಈ ಕವನ ಎಲ್ಲಾ ಓದುಗರಿಗೂ ದಕ್ಕುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದೇನೋ…
dhayvaadagaLU for this kavana
“ಒಳಗೊಳಗೇ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತ್ಲಿಲದಂತೆ ನಟಿಸಿ
ಚಕಾರವೆತ್ತದ ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.”
ಎಷ್ಟೊಂದು ಮಾರ್ಮಿಕವಾಗಿದೆ…
ಇದಂತೂ ನಮ್ಮ ರಾಜಕಾರಣಿಗಳಿಗೆ ಹೋಲಿಸಿ ಬರೆದದ್ದಿರಬಹುದೇ?
ಶ್ರೀ ತ್ರಿ ಅವರೆ
ರೇಖೆಯಲ್ಲೇ ದೊಂಬರಾಟ ನಡೆಸುವ ಬಗ್ಗೆ ಒಂದಿಷ್ಟು ಅನ್ವೇಷಣೆ ಆಗಬೇಕಿದೆ
🙂
ಅತ್ಯುತ್ತಮ ಕವನವನ್ನು ನಮ್ಮೆಲ್ಲರಿಗಾಗಿ ಬರೆದುಕೊಟ್ಟಿರುವ ಕವಿ ನಿಸಾರ್ ಅಹಮದ್‍ರಿಗೂ, ಓದಿ ಅನಿಸಿಕೆಗಳನ್ನು ಹಂಚಿಕೊಂಡಿರುವ ಸಹೃದಯಿ ಓದುಗರಿಗೆಲ್ಲ ಧನ್ಯವಾದಗಳು!
ತುಳಸಿವನದ ಹೊಸ ಅತಿಥಿ ಮಾಲಾರಾವ್ ಅವರಿಗೆ ಹಾರ್ದಿಕ ಸುಸ್ವಾಗತ ! 🙂 ನನ್ನ “ಮಗಳಿಗೊಂದು” ಲಾಲಿ ಹಾಡು ಬರೆದುಕೊಟ್ಟವರು ನೀವೇನಾ?
ಅಸತ್ಯಾನ್ವೇಷಿಗಳೇ, ರೇಖೆಯಲ್ಲೇ ದೊಂಬರಾಟ ನಡೆಸುವ ಬಗ್ಗೆ ಹೊಸದಾಗಿ ಅನ್ವೇಷಣೆ ಮಾಡುವುದೇನಿದೆ? ನಾವೆಲ್ಲ ಮಾಡುತ್ತಿರುವುದು ಅದೇ ಅಲ್ಲವೇ 🙂
ಅವಿನಾಶ್, ನಿಮ್ಮ ಮಾತು ನಿಜ. ಅಲ್ಪಸಂಖ್ಯಾತರ ಓಟು ಪಡೆಯಲು ನಾನಾರೀತಿಯ ನಾಟಕಗಳಾಡುವ ರಾಜಕಾರಣಿಗಳನ್ನೇ ಕುರಿತು ಬರೆದಂತಿದೆ 🙂
ಹೌದು. ಮಗಳಿಗೊಂದು ಲಾಲಿ ಹಾಡು ನಾನು ಬರೆದ ಕತೆ.ನೆನಪಿಟ್ಟುಕೊಂಡು ಲಿಂಕ್ ಕೊಟ್ಟಿದ್ದಕ್ಕೆ
ಧನ್ಯವಾದಗಳು.
ನನ್ನ ಬ್ಲಾಗ್ ಗೆ ಬಿಡುವಾದಾಗ ಒಮ್ಮೆ ಭೇಟಿ ಕೊಡಿ
http://www.chitra-durga.blogspot.com/
ಈ ಕವಿತೆ ಮುಖ್ಯವಾಗಿ ಅಸ್ತಿತ್ವದ ಪ್ರಶ್ನೆ ಯನ್ನು ಎತ್ತಿ ಕೊಳ್ಳುತ್ತದೆ. ಮತ್ತು ಸಾಹಿತ್ಯ ಲೋಕದಲ್ಲಿ ಪ್ರಶಸ್ತಿ ಪುರಸ್ಕೃರಗಳಿಗಾಗಿ ನಡೆಯುವ ರಾಜಕೀಯ ಮತ್ತು ಬೌದಿಕ ಜಗತ್ತಿನಲ್ಲಿ ನಡೆಯುವ ಒಳಸಂಚು ,ಜಗಳ,ತರತಾಮ್ಯ , ಸಂಘರ್ಷ, ಭ್ರಷ್ಟಾಚಾರ, ಮುಂತಾದ ಅನೇಕ ಸಂಗತಿಗಳನ್ನು ಕುರಿತು ಹೇಳಿದಂತೆ ಇದೆ