೯/೧೧ – ದುರಂತಕ್ಕೆ ಇಂದಿಗೆ ಐದು ವರ್ಷವಾದರೂ, ಅಂದಿನ ಆಘಾತ ಮಾತ್ರ ಈಗಲೂ ನಿನ್ನೆ ನಡೆದ ಘಟನೆಯಂತೆಯೇ ನೆನಪಿದೆ. ಆಗ ನಾವಿದ್ದಿದ್ದು ನ್ಯೂಜೆರ್ಸಿಯಲ್ಲಿ. ಶ್ರೀನಿಯ ಕೆಲಸವಿದ್ದಿದ್ದು ನ್ಯೂಯಾರ್ಕಿನಲ್ಲಿ. ವಿಶ್ವವಾಣಿಜ್ಯಕೇಂದ್ರದ ಸಮೀಪದ ಕಟ್ಟಡವೊಂದರಲ್ಲಿ. ಆದಿನ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಿದ್ದಾಗಲೇ ಟೀವಿಯಲ್ಲಿ ಈ ದುರಂತ ವಾರ್ತೆ ಪ್ರಸಾರವಾಗತೊಡಗಿತ್ತು. ಬೆಳಗಿನ ರೈಲಿನಲ್ಲಿ ಹೊರಟವರೆಲ್ಲ ನ್ಯೂಯಾರ್ಕ್ ನಗರವನ್ನು ಸೇರಿ, ಒಬ್ಬೊಬ್ಬರೂ ಬೂದಿ ಮೆತ್ತಿಕೊಂಡ ವಿಗ್ರಹಗಳಂತೆ ಹಿಂತಿರುಗಿ ಬರತೊಡಗಿದ್ದರು. ಈ ಘಟನೆಯ ನಂತರವೂ ಎಷ್ಟೋ ದಿನ ಶ್ರೀನಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಯಾಕೆಂದರೆ ಮಣ್ಣು,ಧೂಳು ತುಂಬಿಕೊಂಡಿದ್ದ ಆ ಕಟ್ಟಡವನ್ನು ದುರಸ್ತಿಗಾಗಿ ಮುಚ್ಚಲಾಗಿತ್ತು!
ಆ ಸಮಯದಲ್ಲಿ ನನ್ನಲ್ಲಿ ಉಂಟಾದ ಭಾವನೆಗಳನ್ನು ವ್ಯಕ್ತಪಡಿಸಿ ಬರೆದ ಕವನವೇ ಒಸಾಮಾ! ನಾಗರಿಕ ಬದುಕನ್ನು ಕದಡಿ ಬಗ್ಗಡವೆಬ್ಬಿಸುವ ಜಗತ್ತಿನ ಎಲ್ಲಾ ಭಯೋತ್ಪಾದಕರಿಗೂ ಧಿಕ್ಕಾರ ಹಾಕುತ್ತಾ, ಈ ಕವನವನ್ನು ಮತ್ತೊಮ್ಮೆ ಓದಿಕೊಂಡೆ. ಯಾವ ಸಾಹಿತ್ಯಿಕ ಗುಣವೂ ಇಲ್ಲದ, ಆಗ ನನ್ನ ಮನಸ್ಸಿನಲ್ಲಿದ್ದ ಸಿಟ್ಟು, ಬೇಸರ , ಅಸಹಾಯಕತೆಗಳನ್ನು ಹಸಿಹಸಿಯಾಗಿ ತೆಗೆದಿಟ್ಟಂತೆ ಕಾಣುವ ಕವನ.
ದಟ್ಸ್ ಕನ್ನಡದಲ್ಲಿ ಪ್ರಕಟವಾದ ನನ್ನ ಮೊದಲ ಬರವಣಿಗೆಯೂ ಇದೇ. ಅಂದು ಈ ಪತ್ರಿಕೆಯೊಂದಿಗೆ ಪ್ರಾರಂಭವಾದ ಮಧುರ ಬಾಂಧವ್ಯ ಇಂದಿಗೂ ಮುಂದುವರೆದುಕೊಂಡು ಬಂದಿದೆ.
* * *
ಒಸಾಮಾ! ಒಸಾಮಾ!!
ಎಲ್ಲೆಡೆ ಇದೇ ಹೆಸರು ಒಸಾಮಾ ಒಸಾಮಾ
ಕ್ರೌರ್ಯದಲಿ ನೀನು ನಿಜಕ್ಕೂ ನಿಸ್ಸೀಮ
ಮುಗಿಸಿ ನಗುತಿಹೆ ಮಾರಣಹೋಮ
ನಿನ್ನ ಸೋದರನೇನೋ ಆ ಕಾಲ ಯಮ
ಬೆಟ್ಟಗುಡ್ಡಗಳಲ್ಲಿ ತರಬೇತಿ ಶಿಬಿರ
ಸಾವಿನ ಬಾಯೊಳು ನುಗ್ಗಲು ಸಮರ
ಕೇಳದೆ ಜನರ ಚೀರಾಟ ಹಾಹಾಕಾರ
ಮುಟ್ಟಿದ್ದೆಲ್ಲ ಬೂದಿಯಾಗಿಸುವ ಭಸ್ಮಾಸುರ
ಜನರ ಕೊಲ್ಲಲು ವಿಧ ವಿವಿಧ ಪ್ರಯೋಗ
ಹೊಸಹೊಸ ರೂಪದಿ ನೂರಾರು ರೋಗ
ಮಾನವತೆ ಮಮಕಾರಕ್ಕೆ ಇನ್ನೆಲ್ಲಿದೆ ಜಾಗ ?
ಕ್ಷಣ ಕ್ಷಣಕೂ ಕ್ಷೀಣಿಸುತ್ತಿದೆ ವಿಶ್ವಶಾಂತಿಯ ರಾಗ
ನೀನರಿವ ಭಾಷೆಯೊಂದೇ ಗನ್ನು ಚೂರಿ ಚಾಕು
ಆಡುವ ಕೂಸುಗಳ ಕೈಗೆ ಕೊಟ್ಟೆ ಬಂದೂಕು
ನೆರೆಹೊರೆಯ ಸಂಬಂಧ ಆಗಿದೆ ಸಿಕ್ಕು ಸಿಕ್ಕು
ನಿಲ್ಲಿಸು ಅಟ್ಟಹಾಸ ಇನ್ನು ಸಾಕು ಸಾಕು
ಬಯಸಿಹೆ ಇಂಗ್ಲೆಂಡ್ ಅಮೆರಿಕವ ಮಾಡಲು ಹಣ್ಣಣ್ಣು
ತಣ್ಣಗಿಹ ಭಾರತಕ್ಕೂ ನಿನ್ನ ಕೆಂಗಣ್ಣು
ಸಾಮ ದಾನ ಭೇದಕೂ ತೆರೆಯದೆ ನಿನ್ನ ಕಣ್ಣು
ಈಗ ದಂಡನೆಯ ಫಲವ ನೀನೇ ಉಣ್ಣು
ಇದ್ದರೆ ಇರಲಿ ಬಿಡಿ ದೇಶದೇಶದ ನಡುವೆ
ಗಡಿ ನಿಯಂತ್ರಣ ರೇಖೆ
ಮನಸು ಮನಸಿನ ನಡುವೆ ಹೃದಯ ಹೃದಯದ ನಡುವೆ
ಧರ್ಮ, ಮತ, ಭಾಷೆಗಳ ನಿರ್ಬಂಧವೇಕೆ ?
ಸರ್ವಧರ್ಮದ ತಿರುಳು ಶ್ವೇತ ಶಾಂತಿಯ ಹೂವು
ಯಾವ ದೈವಕು ಸಮ್ಮತವಲ್ಲ ಸಾವು ನೋವು
ಇಸ್ಲಾಮಿನ ನೆಪದಿ ಉಗ್ರತೆಯ ಹಾವು
ಶಿಕ್ಷಿಸದೆ ಸಲಹುವನಾ ನಿನ್ನ ಅಲ್ಲಾಹು ?
(೯/೧೧/೦೧)
* * *
ಇಂಥಾ ಒಳ್ಳೇ ರಾಜ್ಯಾ ಬಿಟ್ಟು ಅದ್ಯಾವುದೋ ಗಾಳೀ ಸೀಮೆಗೆ ಹೋಗಿದ್ದೀರಲ್ಲಾ ನಿಮಗೇನಣ್ಣೋನ?
ಮತ್ತೆ ಈ ಕಡೆ ಬನ್ನಿ, ಏನಿದ್ರೂ ನಮಗೆ ನಮ್ ರಾಜ್ಯಾನೇ ಚೆಂದ!
ಸದ್ಯ, ಉಸಾಮನ ‘ದೂರ’ ದೃಷ್ಟಿ ಸೀಯರ್ಸ್ ಟವರ್ಗೆ ತಗಲದಿದ್ದರೆ ಸಾಕು!
ಅಂಥಾ ಒಳ್ಳೇ ದೇಶಾನೆ ಬಿಟ್ಟು ಬಂದಿರೋ ನಮಗೆ ಈ ರೀತಿ ಅಲೆಮಾರಿಗಳ ತರಹ ಅಲೆಯೋ ಶಿಕ್ಷೆ ಆಗಬೇಕಾದ್ದೇ ಬಿಡಿ 🙂
ಪ್ರೀತಿಯ ವೇಣಿ,
ನಿನ್ನೆ-ಮೊನ್ನೆ ಅನ್ನಿಸುವ ಭಾವಗಳಿಗೆ ತೆರೆ ಎಳೆಯಲಾಗದು. ನಿನ್ನ ಲೇಖನ, ಕವನಕ್ಕೆ ನನ್ನದಿದೋ ಹೊಸ ಕವನ ಕಾಣಿಕೆ. ಇಂದೇ ಸಂಜೆ ಬರೆದಿದ್ದು. – ದೈತ್ಯ ನರ್ತನ