ಹರಿಕಥಾಮೃತಸಾರ – 02 – ಕರುಣಾ ಸಂಧಿ

ಹರಿಕಥಾಮೃತಸಾರ – ಕರುಣಾ ಸಂಧಿ
ರಚನೆ : ಶ್ರೀ ಜಗನ್ನಾಥ ದಾಸರು

ಹರಿಕಥಾಮೃತಸಾರ ಗುರುಗಳ|
ಕರುಣದಿಂದಾಪನಿತು ಪೇಳುವೆ|
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರವಣ ಮನಕಾನಂದವೀವುದು |
ಭವಜನಿತ ದುಃಖಗಳ ಕಳೆವುದು |
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ||
ಭುವನ ಪಾವನನೆನಿಪ ಲಕ್ಷ್ಮೀ |
ಧವನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||

ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿವು ಬಾಂ |
ಬೊಳೆಯ ಪೆತ್ತನ ಪಾದಮಹಿಮಾ |
ಜಲಧಿ ಪುಕ್ಕುದರಿಂದೆ ಮಾಣ್ದಪರೇ ಮಹೀಸುರರು || ೨ ||

ಶ್ರುತಿತತಿಗಳಭಿಮಾನಿ ಲಕುಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಳಸದ್ಗುಣಗಣಾಂಬೋಧಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡಿತಿಹ ಸಂ
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||

ಮನವಚನಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನ ಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನ ಚರ ವಾಹನ
ದಿವೌಕಸರೊಡನೆ ಚರಿಸುವ ಮನ ಮನೆಗಳಲ್ಲಿ || ೪ ||

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರೆ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಮನದೊಳಗೆ ತಾನಿದ್ದು ಮನವೆಂ |
ದೆನಿಸಿಕೊಂಬನು ಮನದ ವೃತ್ತಿಗ |
ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ ||
ಮನವನಿತ್ತರೆ ತನ್ನನೀವನು |
ತನುವ ದಂಡಿಸಿ ದಿನದಿನದಿ ಸಾ |
ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||

ಪರಮ ಸತ್ಪುರುಷಾರ್ಥ ರೂಪನು |
ಹರಿಯೆ ಲೋಕಕೆ ಎಂದು ಪರಮಾ |
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ ||
ಮರೆದು ಧರ್ಮಾರ್ಥಗಳ ಕಾಮಿಸು |
ವರಿಗೆ ನಗುತತಿ ಶೀಘ್ರದಿಂದಲಿ |
ಸುರಪತನಯ ಸುಯೋಧನಿರಿಗಿತ್ತಂತೆ ಕೊಡುತಿಪ್ಪ || ೭ ||

ಜಗವನೆಲ್ಲವ ನಿರ್ಮಿಸುವ ನಾ |
ಲ್ಮೊಗನೊಳಗೆ ತಾನಿದ್ದು ಸಲಹುವ |
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||
ಸ್ವಗತಭೇದವಿವರ್ಜಿತನು ಸ |
ರ್ವಗ ಸದಾನಂದೈಕದೇಹನು |
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ || ೮ ||

ಒಬ್ಬನಲಿ ನಿಂತಾಡುವನು ಮ |
ತ್ತೊಬ್ಬನಲಿ ನೋಡುವನು ಬೇಡುವ |
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ ||
ಅಬ್ಬರದ ಹೆದ್ದೈವನಿವ ಮ
ತ್ತೊಬ್ಬರನು ಲೆಕ್ಕಿಸನು ಲೋಕದೊ |
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||

ಶರಣಜನಮಂದಾರ ಶಾಶ್ವತ |
ಕರುಣಿ ಕಮಲಾಕಾಂತ ಕಾಮದ |
ಪರಮಪಾವನತರ ಸುಮಂಗಳಚರಿತ ಪಾರ್ಥಸಖ ||
ನಿರುಪಮಾನಂದಾತ್ಮನಿರ್ಗತ |
ದುರಿತ ದೇವವರೇಣ್ಯನೆಂದಾ |
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ೧೦ ||

ಇಟ್ಟಿಕಲ್ಲನು ಭಕುತಿಯಿಂದಲಿ |
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ |
ಕೊಟ್ಟ ಬಡಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ ||
ಕೆಟ್ಟ ಮಾತುಗಳೆಂದ ಚೈದ್ಯನ |
ಪೊಟ್ಟೆಯೊಳಗಿಂಬಿಟ್ಟು ಬಾಣದ |
ಲಿಟ್ಟ ಭೀಷ್ಮನವಗುಣಗಳೆಣಿಸಿದನೆ ಕರುಣಾಳು || ೧೧ ||

ಧನವ ಸಂರಕ್ಷಿಸುವ ಫಣಿ ತಾ |
ನುಣದೆ ಮತ್ತೊಬ್ಬರಿಗೆ ಕೊಡದನು |
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ||
ಪ್ರಣತರನು ಕಾಯ್ದಿಹನು ನಿಷ್ಕಾ |
ಮನದಿ ನಿತ್ಯಾನಂದಮಯ ದು |
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ || ೧೨ ||

ಜನನಿಯನು ಕಾಣದಿಹ ಬಾಲಕ |
ನೆನೆನೆನೆದು ಹಲುಬುತಿರೆ ಕತ್ತಲೆ |
ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ||
ತನಯನಂ ಬಿಗಿದಪ್ಪಿ ರಂಬಿಸಿ |
ಕನಲಿಕೆಯ ಕಳೆವಂತೆ ಮಧುಸೂ |
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೩ ||

ಬಾಲಕನ ಕಲಭಾಷೆ ಜನನಿ |
ಕೇಳಿ ಸುಖಪಡುವಂತೆ ಲಕ್ಷ್ಮೀ |
ಲೋಲ ಭಕುತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು ||
ತಾಳ ತನ್ನವರಲ್ಲಿ ಮಾಡುವ |
ಹೇಳನವ ಹೆದ್ದೈವ ವಿದುರನ |
ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ || ೧೪ ||

ಸ್ಮರಿಸುವರ ಅಪರಾಧಗಳ ತಾ |
ಸ್ಮರಿಸ ಸಕಲೇಷ್ಟಪ್ರದಾಯಕ |
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿಮಾಡಿ ||
ಪರಿಪರಿಯಲುಂಡುಣಿಸಿ ಸುಖ ಸಾ |
ಗರದಿ ಲೋಲಾಡಿಸುವ ಮಂಗಳ |
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ || ೧೫ ||

ಏನು ಕರುಣಾನಿಧಿಯೋ ಹರಿ ಮ|
ತ್ತೇನು ಭಕ್ತಾಧೀನನೋ ಇ|
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ||
ತಾನೆ ಸೃಜಿಸುವ ಪಾಲಿಸುವ ನಿ|
ರ್ವಾಣ ಮೊದಲಾದಖಿಳ ಲೋಕ|
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು || ೧೬ ||

ಜನಪ ಮೆಚ್ಚಿದರೀವ ಧನವಾ|
ಹನ ವಿಭೂಷಣವಸನ ಭೂಮಿಯ|
ತನು ಮನಗಳಿತ್ತಾದರಿಪರುಂಟೇನೋ ಲೋಕದೊಳು ||
ಅನವರತ ನೆನೆವವರನಂತಾ|
ಸನವೆ ಮೊದಲಾದಾಲಯದೊಳಿ|
ಟ್ಟುಣುಗನಂದದಲವರ ವಶನಾಗುವ ಮಹಾಮಹಿಮ || ೧೭ ||

ಭುವನ ಪಾವನ ಛರಿತ ಪುಣ್ಯ|
ಶ್ರವಣ ಕೀರ್ತನ ಪಾಪನಾಶನ|
ಕವಿಭಿರೀಡಿತ ಕೈರವದಳ ಶ್ಯಾಮ ನಿಸ್ಸೀಮ ||
ಯುವತಿ ವೇಷದಿ ಹಿಂದೆ ಗೌರೀ|
ಧವನ ಮೋಹಿಸಿ ಕೆಡಿಸಿ ಉಳಿಸಿದ|
ಇವನ ಮಾಯವ ಗೆಲುವನಾವನು ಈ ಜಗತ್ರಯದಿ || ೧೮ ||

ಪಾಪಕರ್ಮವ ಸಹಿಸುವೆಡೆ ಲ|
ಕ್ಷ್ಮೀಪತಿಗೆ ಸಮರಾದ ದಿವಿಜರ|
ನೀ ಪಯೋಜ ಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ||
ಚಾಪ ಮೊದಲಾದವರು ಮಾಡಿದ ಮ|
ಹಾಪರಾಧಗಳೆಣಿಸಿದನೆ ಕರುಣಾ ಸಮುದ್ರ ಹರಿ || ೧೯ ||

ಅಂಗುಟಾಗ್ರದಿ ಜನಿಸಿದಮರ ತ|
ರಂಗಿಣಿಯು ಲೋಕತ್ರಯಗಳಘ|
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ ||
ಇಂಗಡಲ ಮಗಳೊಡೆಯನಂಗೋ|
ಪಾಂಗಗಳಲಿಪ್ಪಮಲನಂತ ಸು|
ಮಂಗಳಪ್ರದನಾಮ ಪಾವನ ಮಾಳ್ಪುದೇನರಿದು || ೨೦ ||

ಕಾಮಧೇನು ಸುಕಲ್ಪತರು ಚಿಂ|
ತಾಮಣಿಗಳಮರೇಂದ್ರ ಲೋಕದಿ|
ಕಾಮಿತರ್ಥಗಳೀವುವಲ್ಲದೆ ಸೇವೆಮಾಳ್ವರಿಗೆ ||
ಶ್ರೀ ಮುಕುಂದನ ಪರಮ ಮಂಗಳ|
ನಾಮ ನರಕಸ್ಥರನು ಸಲಹಿತು|
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು || ೨೧ ||

ಮನದೊಳಗೆ ಸುಂದರ ಪದಾರ್ಥವ|
ನೆನೆದುಕೊಡೆ ಕೈಗೊಂಡು ಬಲು ನೂ|
ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ|
ರನು ಸದಾ ಸಂತಯಿಸುವನು ಸ|
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ|| ೨೨ ||

ಚೇತನಾಚೇತನ ವಿಲಕ್ಷಣ|
ನೂತನ ಪದಾರ್ಥಗಳೊಳಗೆ ಬಲು|
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರ ಭವಾದ್ಯರೊ|
ಳಾತತೆ ಪ್ರತಿಮ ಪ್ರಭಾವ ಧ|
ರಾತಳ ದೊಳೆಮ್ಮೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||

ತಂದೆ ತಾಯ್ಗಳು ತಮ್ಮ ಶಿಶುವಿಗೆ|
ಬಂದ ಭಯಗಳ ಪರಿಹರಿಸಿ ನಿಜ|
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ||
ಹಿಂದೆ ಮುಂದೆಡಬಲದಿ ಒಳ ಹೊರ|
ಗಿಂದಿರೇಶನು ತನ್ನವರ ನೆಂ|
ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||

ಒಡಲ ನೆಳಲಂದದಲಿ ಹರಿ ನ|
ಮ್ಮೊಡನೆ ತಿರುಗುವನೊಂದರೆ ಕ್ಷಣ|
ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ ||
ತಡೆವ ದುರಿತೌಘಗಳ ಕಾಮದ|
ಕೊಡುವ ಸಕಲೇಷ್ಟಗಳ ಸಂತತ|
ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ || ೨೫ ||

ಬಿಟ್ಟವರ ಭವ ಪಾಶದಿಂದಲಿ|
ಕಟ್ಟುವನು ಬಹು ಕಠಿಣನಿವ ಶಿ|
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ ||
ಕಟ್ಟುವರ ಭವ ಕಟ್ಟು ಬಿಡಿಸುವ|
ಸಿಟ್ಟಿನವನಿವನಲ್ಲ ಕಾಮದ|
ಕೊಟ್ಟು ಕಾವನು ಸಕಲ ಸೌಖ್ಯಗಳಿಹಪರಂಗಳಲಿ || ೨೬ ||

ಕಣ್ಣಿಗೆವೆಯಂದದಲಿ ಕೈ ಮೈ|
ತಿಣ್ಣಿಗೊದಗುವ ತೆರದಿ ಪಲ್ಗಳು|
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ||
ಪುಣ್ಯ ಫಲಗಳನೀವುದಕೆ ನುಡಿ|
ವೆಣ್ಣಿನಾಣ್ಮಾಂಡದೊಳು ಲಕ್ಷ್ಮಣ|
ನಣ್ಣನೊದಗುವ ಭಕ್ತರವಸರಕಮರಗಣಸಹಿತ || ೨೭ ||

ಕೊಟ್ಟುದನು ಕೈಗೊಂಬರೆಕ್ಷಣ|
ಬಿಟ್ಟಗಲ ತನ್ನವರ ದುರಿತಗ|
ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು ||
ಬೆಟ್ಟ ಬೆನ್ನಲಿ ಹೊರಿಸಿದವರೊಳು|
ಸಿಟ್ಟು ಮಾಡಿದನೇನೋ ಹರಿ ಕಂ|
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು || ೨೮ ||

ಖೇದ ಮೋದ ಜಯಾಪಜಯ ಮೊದ|
ಲಾದ ದೋಷಗಳಿಲ್ಲ ಚಿನ್ಮಯ|
ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ ||
ಕಾದುಕೊಂಡಿಹ ಪರಮ ಕರುಣ ಮ|
ಹೋದಧಿಯು ತನ್ನವರು ಮಾಳ್ದಪ|
ರಾಧಗಳ ನೋಡದಲೆ ಸಲಹುವ ಸರ್ವಕಾಮದನು || ೨೯ ||

ಮೀನ ಕೂರ್ಮ ವರಾಹ ನರ ಪಂ|
ಚಾನನಾತುಳ ಶೌರ್ಯ ವಾಮನ|
ರೇಣುಕಾತ್ಮಜ ರಾವಣಾರಿ ನಿಶಾಚರ ಧ್ವಂಸಿ ||
ಧೇನುಕಾಸುರ ಮಥನ ತ್ರಿಪುರವ|
ಹಾನಿಗೈಸಿದ ನಿಪುಣ ಕಲಿಮುಖ|
ದಾನವರ ಸಂಹರಿಸಿ ಕಾಯ್ದ ಸುಜನರನು || ೩೦ ||

ಶ್ರೀ ಮನೋರಮ ಶಮಲವರ್ಜಿತ|
ಕಾಮಿತ ಪ್ರದ ಕೈರವದಳ|
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ ||
ಸಾಮಸನ್ನುತ ಸಕಲ ಗುಣಗಣ|
ಧಾಮ ಶ್ರೀ ಜಗನ್ನಾಥ ವಿಠ್ಠಲ|
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||

2 thoughts on “ಹರಿಕಥಾಮೃತಸಾರ – 02 – ಕರುಣಾ ಸಂಧಿ”

    1. sritri says:

      ಖಂಡಿತವಾಗಿ! ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಆನಂದ ಆನಂದ ಮತ್ತೆ ಪರಮಾನಂದಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ

ಒಲ್ಲನೋ ಹರಿ ಕೊಳ್ಳನೋಒಲ್ಲನೋ ಹರಿ ಕೊಳ್ಳನೋ

ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅನು|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ ವಸ್ತ್ರವಿದ್ದು || ಚಂದುಳ್ಳ ಆಭರಣ ಧೂಪ ದೀಪಗಳಿದ್ದು | ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧|| ದಧಿಕ್ಷೀರ

ಇನ್ನೇನಿನ್ನೇನು?ಇನ್ನೇನಿನ್ನೇನು?

ರಾಗ: ಸೌರಾಷ್ಟ್ರ ತಾಳ: ಝಂಪೆ ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ|| ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ|| ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧|| ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು ಜತ್ತಾದ