ಕವಿ –   ಡಾ. ವಿ. ಸೀತಾರಾಮಯ್ಯ( ‘ವಿ.ಸೀ’)
ಚಿತ್ರ – ಮಹಾತ್ಯಾಗ
ಗಾಯಕಿ – ಪಿ. ಸುಶೀಲ

ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು
ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು
ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ
ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 ||

ದಿಕ್ಕುದಿಕ್ಕಿಗು ಹರಡಿ ಹಬ್ಬಿತು ಹಸುರು ಹುಚ್ಚನ್ನೆರಚಿತು
ಚಿಗುರು ಚಿಗುರಿಗೆ ಚೆಲುವ ತುಂಬಿಸಿ ಹೂವು ತೋರಣ ಕಟ್ಟಿತು
ಒಳಗು ಹೊರಗೂ ಬೆಳಗು ಸಂಜೆಯು ನಿನ್ನ ಮೊಗವೇ ತೇಲಿತು
ಎಂಟು ದಿಕ್ಕಿನ ಗಾಳಿಯಲ್ಲೂ ನಿನ್ನ ದನಿಯೇ ಕೇಳಿತು || 2 ||

ಇಂದು ಮಾಗಿಯು ಮುಗಿವ ಮುನ್ನವೆ ನಗುವ ಬೇಸಗೆ ಬಂದಿದೆ
ಕಾಮನಂಬಿನ ಕೆಳೆಯ ರಂಗುಗಳೆಲ್ಲವನ್ನೂ ತಂದಿದೆ
ಬಾಳ ದಾರಿಯ ಎರಡು ಕಡೆಯಲು ಕಣ್ಗೆ ಹಬ್ಬವು ಹರಡಿದೆ
ಮಾವು ಹೊಂಗೆಗಳಂತೆ ಮನವಿದು ಹೊಸತು ಚಿಗುರನು ಉಟ್ಟಿದೆ || 3 ||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.