ನನ್ನ ಹಾಗೆಯೆ
ಸು ರಂ ಎಕ್ಕುಂಡಿ
ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ
ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ
“ಈತನಾರು ತಾತ ಇಲ್ಲಿ ನಿಂತು ನೋಡುತಿರುವನು
ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?”
“ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು!
ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು
ಹತ್ತುವವರ ಇಳಿಯುವವರ ನಿಂತು ನೋಡುತಿರುವನು
ನಿಲ್ಲುವವರ ನಡೆಯುವವರ ಲೆಕ್ಕ ಮಾಡುತಿರುವನು
ಬಳಲಿದವರಿಗೆಲ್ಲ ಇಲ್ಲಿ ಕೈಯ ನೀಡುತಿರುವನು”
“ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!
ಭಯವಾಗದೆ ಇವನಿಗಿಲ್ಲಿ ಯಾರು ಇಲ್ಲ ಹತ್ತಿರ”
“ಇವನಿಗೆಲ್ಲಿ ಭಯವು ಮಗು ಅಭಯಮೂರ್ತಿ ಈತನು
ಭರತ ಚಕ್ರವರ್ತಿ ಇವನ ಅಣ್ಣ ಒಮ್ಮೆ ಆತನು
ಹಮ್ಮಿನಲ್ಲಿ ಬಂದು ಸೆಣಸಿ ತಮ್ಮನಲ್ಲಿ ಸೋತನು
ಗೆದ್ದರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತು ಗೆದ್ದೆ ಅಣ್ಣ, ನಾನು ಗೆದ್ದು ಸೋತೆನು
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
ನಿಂತು ಹಾಗೆ ನಿಂತುಕೊಂಡು ಘೋರ ತಪವ ಮಾಡಲು
ಹುಟ್ಟು ಸಾವಿನಾಚೆಗಿರುವ ಹೊಳೆವ ಹಾದಿ ನೋಡಲು
ಬಿಸಿಲು ಬಂತು ನೆರಳು ಬಂತು ಗಾಳಿ ಬಿಚ್ಚಿ ಬೀಸಿತು
ಒಮ್ಮೆ ಹಸಿರು ಒಮ್ಮೆ ಹೊನ್ನು ಹಚ್ಚಡವನು ಹಾಸಿತು
ಸೂರ್ಯನೊಮ್ಮೆ ಚಂದ್ರನೊಮ್ಮೆ ಸುತ್ತು ಹಾಕಿ ನಡೆದರು
ದೀಪದಂತೆ ನಿಂತ ಇವಗೆ “ನಮೋ” ಎಂದು ನುಡಿದರು
“ಇಷ್ಟು ಜನರು ಇಲ್ಲಿಗಿಂದು ಏಕೆ ಬಂದು ನೆರೆದರು?
`ಬಾಹುಬಲಿ’, `ಬಾಹುಬಲಿ’ ಎಂದು ಕರೆಯುತಿರುವರು”
“ಮಗೂ, ಇಂದು ಇವನಿಗಿಲ್ಲಿ ಹಾಲಿನಲ್ಲಿ ಸ್ನಾನವು
ದಾರಿಯಲ್ಲಿ ದಣಿದ ಇವರಿಗೆ, ಇವನದೊಂದೆ ಧ್ಯಾನವು
ಮುದ್ದುಮುಖದಿ ಮುಗುಳ್ನಕ್ಕು ಸಿದ್ಧನಾಗಿ ನಿಂತಿಹ
ದುಗ್ಧ ಹಾಸದಲ್ಲಿ ನಲಿವ ಮುಗ್ಧ ಮಗುವಿನಂತಿಹ”
“ತಾತ,
ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ
ನಿಲ್ಲಿಸುವಳು. ಬಾಹುಬಲಿಯು ಕೂಡ ತನ್ನ ಹಾಗೆಯೆ
ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ”
ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ.