ಕವಿ – ಪುತಿನ
ಗಾಯಕ – ಡಾ.ರಾಜ್‍ಕುಮಾರ್
ಸಂಗೀತ – ಸಿ.ಅಶ್ವಥ್

ಲಘುವಾಗೆಲೆ ಮನ ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು

ನನಗಂಟಲು ನೀನಾಗುವೆ ಕಷ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ
ಹರಿಯೊ ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು

ನೀಲದಾಗಸದ ಹರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಶಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ

ಹಾರಿ ಹರಿಯ ಮುಟ್ಟು
ಹಾರಿ ಹರಿಯ ಮುಟ್ಟು

ಬೆಳಕಿಗೊಲಿದು ಬಿರಿದಲರಿನಲರು ಬರೆ
ಹೋಗು ಸಂಗಡಲೆ ನೀ ಮನವೇ
ಮುಗ್ಧರುಲಿವ ನಗೆಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೇ

************

7 thoughts on “ಲಘುವಾಗೆಲೆ ಮನ – ಪುತಿನ”

  1. ಹಾಡು ಕೇಳಿ ಮನ ಲಘುವಾಯಿತು .. ನನಗೆ ಹಿಡಿಸಿದ ಸಾಲುಗಳೆಂದರೆ,

    “ನನಗಂಟಲು ನೀನಾಗುವೆ ಕಷ್ಮಲ
    ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ”

    ಅಂದ್ಹಾಗೆ, ಈ ಪದ್ಯ ಪುತಿನರವರ ಯಾವ ಕವನ ಸಂಕಲನದ್ದೆಂದು ನಿಮಗೆ ಗೊತ್ತೆ?

  2. ಈ ಸರ್ತಿ ನನಗೆ ಗೊಂದಲವಿಲ್ಲ 🙂

    ಸುಂದರವಾದ ಗೀತೆ. ಸೊಗಸಾದ ಸಂಗೀತ. ಇಂಪಾದ ಹಾಡುಗಾರಿಕೆ.
    ಇದನ್ನು ಇಲ್ಲಿ ಇರಿಸಿದಕ್ಕೆ ಧ.ವಾ.

    ಇಂತಿ
    ಭೂತಪ್ಪನವರ್ 🙂

  3. ಲಘುವಾಗೆಲೆ ಮನ — ಸರಿ, ಆಗ್ತಿನಿ.

    ಗೆಲವಾಗೆಲೆ ಮನ — ಆಯ್ತು, ನಿಮ್ಮ ಅಪ್ಪಣೆ. ಆಗ್ತಿನಿ.

    ಬೆಳಕಿಗೊಲಿದು ಬಿರಿದಲರಿನಲರು ಬರೆ
    ಹೋಗು ಸಂಗಡಲೆ ನೀ ಮನವೇ — ಹೋಗಲೇಬೇಕಾ? ಸರಿ, ಹೋಗ್ತಿನಿ ಬಿಡಿ.

    ಮುಗ್ಧರುಲಿವ ನಗೆಮಾತುಗಳಾಲಿಸಿ
    ನಂದಗೋಕುಲವ ನೆನೆ ಮನವೇ — ನೀವೆಲ್ಲಾ ಇಷ್ಟೋಂದು ಕೇಳ್ಕೋಬೇಕಾದ್ರೆ, ನೆನೆಯದಿದ್ದರೆ ಹೇಗೆ? ಖಂಡಿತಾ ನೆನೆಯುವೆ.

    ಸಾಹಿತ್ಯ ದಯಪಾಲಿಸಿದ್ದಕ್ಕೆ ಬಹಳ ಧನ್ಯವಾದಗಳು.

    🙂
    ಮನ (ಲಘುವಾದ, ಗೆಲುವಾದ, ನಂದಗೋಕುಲವ ನೆನೆಯುತ್ತಾ ಹೋದ ಮನ )

  4. ಶ್ರೀ ತ್ರೀ ಅವರೆ,
    ಇದು
    ಮನ ಅವರಿಗಾಗಿ
    ಪುತಿನ ಅವರು
    ಬರೆದ ಹಾಡು….
    ಆದರೆ ನೀವದನ್ನು ಇಲ್ಲಿ ಹಾಕಿ
    ಮನ ಅವರು ನಂದಗೋಕುಲ ನೆನೆಯುತ್ತಾ ಓಡಿ ಹೋಗುವಂತೆ ಮಾಡಿದ್ರಲ್ಲಾ…. (ಅವರೇ ಹೇಳುವಂತೆ).

    ಅಂತೂ ಭೂತಪ್ಪನವರು ಕೂಡ ಬೆಚ್ಚಿದರು…. ಅರ್…. ಮೆಚ್ಚಿದರು… 🙂

  5. ನನಗೆ ತುಂಬಾ ಇಷ್ಟವಾದ ಈ ಹಾಡು ನಿಮಗೆಲ್ಲರಿಗೂ ಇಷ್ಟ ಆಗಿದ್ದು ನೋಡಿ ಸಂತೋಷವಾಯಿತು. 🙂 ಇದೇ ಹಾಡನ್ನು ಬಹಳ ಹಿಂದೆ ಡಾ.ಬಾಲಮುರಳಿ ಕೃಷ್ಣ ಹಾಡಿದ್ದಾರೆ (ಆಕಾಶವಾಣಿಯ ಕೇಳುಗರಿಗೆ ಗೊತ್ತಿರಬೇಕು) ಆದರೆ ರಾಜ್ ದನಿಯಲ್ಲಿ ಈ ಹಾಡು ನನಗೆ ತುಂಬಾ ಆಪ್ತವೆನ್ನಿಸಿತು. ನಿನ್ನೆಯಿಂದ ನನಗೆ ಈ ಹಾಡಿನ ಗುಂಗು ಹಿಡಿದಿದೆ. 🙂

  6. ಪ್ರದೀಪ್, ನನಗಂತೂ ಗೊತ್ತಿಲ್ಲ.

    ಈಗಾಗಲೇ ಹಲ್ಮಿಡಿ ಶಾಸನದಷ್ಟೇ ಅಲಭ್ಯ, ಅಪರೂಪವಾಗಿರುವ ಇಂತಹ ಕೃತಿಗಳನ್ನು ಹೊಂದಿರುವವರು ಈಗ ಬಹಳ ಜನ ಇರಲಾರರು. ಆದರೂ ಅಂತರ್ಜಾಲದ ಆಗಸದಲ್ಲಿ ಹಾರಾಟ ನಡೆಸುವ ಪುತಿನ ಪುತ್ರಿ ಅಲಮೇಲು ಅವರಿಂದ ಈ “ಹಾರು ನನ್ನ ಬಿಟ್ಟು” ಕವಿತೆಯ ಮಾಹಿತಿ ದೊರಕುವ ಸಾಧ್ಯತೆಗಳೂ ಇಲ್ಲದಿಲ್ಲ!! 🙂

  7. ನಂದಗೋಕುಲವ ನೆನೆಯುತ್ತಾ ಹೋದ ನಲಿವ ಮನಾ….,

    ಲಘುವಾಗೆಲೆ ಮನ ಅಂದರೆ ಡಯಟ್ ಮಾಡಿ ದೇಹವನ್ನು ಹಗುರಮಾಡಿಕೊಳ್ಳಬೇಕು ಅಂತ ಅಪಾ(ರ)ರ್ಥ ಮಾಡಿಕೊಂಡಿಲ್ಲ ತಾನೇ? 🙂

    ಗೊಂದಲವಿಲ್ಲದ ಭೂತಕ್ಕೆ ಧನ್ಯವಾದಗಳು. ಮುಂದೆಯೂ ಇಲ್ಲಿಯ ಕವನ, ಹಾಡಿನಲ್ಲಿ ನುಸುಳುವ ತಪ್ಪುಗಳನ್ನು (ತಪ್ಪು ನನ್ನದು, ಕವಿಗಳದಲ್ಲ) ತಿದ್ದಿ ಸರಿಪಡಿಸಿಕೊಡಬೇಕೆಂದು ಭೂತಕ್ಕೊಂದು ಅಭೂತಪೂರ್ವ ಮನವಿ 🙂

    ಅನ್ವೇಷಿಗಳೇ ಭೂತಪ್ಪನವರು ಬೆಚ್ಚಿದ್ದು ನಿಮಗೆ ಹೇಗೆ ತಿಳಿಯಿತು? ನಿಮ್ಮ ಅನ್ವೇಷಣೆ ಈಗ ಭೂತಲೋಕದಲ್ಲಿ, ಭೂತಕಾಲದಲ್ಲಿ ನಡೆಯುತ್ತಿದೆಯೇ?

Leave a Reply to Anveshi Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.