ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು
ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ
ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ!
ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು
ನೆತ್ತರರಲಿ ಬರೆದುದಕೆ ಲೆಕ್ಕವಿಲ್ಲ
ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು
ನಕ್ಷತ್ರ ಮರೆತು ಓದುತಿವೆ ಮರೆತು ಸೊಲ್ಲ
ಏನಿಹುದೋ ಎಂತಿಹುದೋ ಸಂಸಾರ ಸಾರ
ಕಂಡವರು ಯಾರು ಅದರ ಅಂತಃಪಾರ
ಹೃದಯ ಸಂಪುಟದಲ್ಲಿ ಒಲವ ಲೆಕ್ಕಣಿಕೆ
ಮಾಡಿ ಬರೆಯಲೋ ಹುಡುಗ ನಿನ್ನ ಒಕ್ಕಣಿಕೆ