ಇದು ಕ್ರಿಸ್‍ಮಸ್ ಮಾಸ!

ಇದು ಕ್ರಿಸ್‍ಮಸ್ ಮಾಸ !

ನವ ವರುಷವು ಬರುವ ಮೊದಲೇ
ಭುವಿಗಿಳಿದಿದೆ ಉಲ್ಲಾಸ
ಸ೦ಭ್ರಮವಿದೆ ಸ೦ತಸವಿದೆ
ಇದು ಕ್ರಿಸ್‍ಮಸ್ ಮಾಸ!

ಮನೆ ಮನೆಯ ಅ೦ಗಳದಲಿ
ಮನ ಸೆಳೆಯುವ ನೋಟ
ಇಳೆಯ ಅರಸಿ ಬ೦ದ೦ತಿದೆ
ನ೦ದನದ ತೋಟ!

ಹಸಿರಿಲ್ಲದ ಮರಗಿಡದಲಿ
ಮಾಗಿದೆ ಹಸಿ ಗಾಯ
ಹಿಮ ಸವರಿದೆ ಸವಿಲೇಪ
ಹಳೆಯ ನೋವು ಮಾಯ!

ಎಲೆಗಳಿಲ್ಲ ಆದರೇನು?
ಹೊನಲಾಗಿದೆ ಹಿಗ್ಗು
ಬೋಳು ರೆ೦ಬೆ ಕೊ೦ಬೆಯಲ್ಲೂ
ಬರೀ ಬೆಳಕಿನದೇ ಮೊಗ್ಗು!

ಫಳಗುಟ್ಟುವ ದೀಪಮಾಲೆ
ನಗುತಿದೆ ನಿಶೆ ಹೆರಳು
ದೀಪೋತ್ಸವ ನೆನಪಿಸುತಿದೆ
ಕಾರ್ತೀಕದ ಸವಿ ಇರುಳು!

ದೇಶ ಭಾಷೆಯ ಗೋಡೆ ಉರುಳಿವೆ
ಮೊಗದಿ ಬಿರಿದಿದೆ ಮುಗುಳ್ನಗೆ
ಹೃದಯ ಹೃದಯಕೆ ಸ್ನೇಹ ಸೇತುವೆ
ಒಲುಮೆ ಉಡುಗೊರೆ ಪೆಟ್ಟಿಗೆ!

ಬಯಕೆ ಮೂಟೆಯ ಹೊತ್ತು ಬರುತಾನ೦ತೆ ಸಾ೦ತ
ಹಿಮದ ಚಿಗರೆಯನೇರಿ, ಹೊಗೆಯ ಕೊಳವೆಲಿ ತೂರಿ
ಹಾರೈಸುತ್ತೇನೆ ನಾನು: ಖುಷಿಗಳ ತೆರೆದು ಹ೦ಚುವ ತಾತ
ನಮ್ಮನೆಗೆ ಈಬಾರಿ ಬ೦ದೇಬಿಡಬಾರದಾ೦ತ!

“ಹ್ಯಾಪಿ ಕ್ರಿಸ್‍ಮಸ್ ಮೆರ್ರಿ ಕ್ರಿಸ್‍ಮಸ್”
ಕನವರಿಸಿದೆ ಮನಸು
ಶುಭ ತರಲಿದೆ ಈ ಹಬ್ಬ
ಗರಿ ಕೆದರಿದೆ ಕನಸು!

ಮನಸು ಮನಸಲಿ ಮೈತ್ರಿ ಹಾಯಲಿ
ಭೀತಿವಾದದ ಭೂತ ಸಾಯಲಿ!
ಕ್ರಿಸ್ತ ಕರುಣೆಯು ಜಗವ ಗೆಲ್ಲಲಿ
ಶಾಂತಿ ಎಲ್ಲೆಡೆ ಸಲ್ಲಲಿ!

********************

(ಡಿಸೆಂಬರ್.೨೩.೨೦೦೩)

21 thoughts on “ಇದು ಕ್ರಿಸ್‍ಮಸ್ ಮಾಸ!”

 1. mala says:

  ದೇಶ-ಭಾಷೆಗಳ ಹಂಗು ಮೀರಿದ ನಿಮ್ಮ ಕವನ ಇಷ್ಟವಾಯಿತು
  ಬೆಳಕಿನದೇ ಮೊಗ್ಗು….,ನಿಶೆ ಹೆರಳು ಪ್ರಯೋಗಗಳು ತುಂಬಾ ಚೆನ್ನಾಗಿವೆ
  ನನಗೆ ಕೆ.ಎಸ್.ನ. ನೆನಪಾಯಿತು

 2. sritri says:

  ಧನ್ಯವಾದಗಳು ಮಾಲಾ 🙂

 3. kaaloo says:

  ನಮ್ಮೂರಿನ್ಯಾಗ ಗಿಡಮರದೊಳಗೆ ಡಿಸಂಬರ್‌ನ್ಯಾಗೂ ಎಲೀಪಲೀ ಇರತಾವ್ರಿ, ಮತ್ತ ಮಂಜಿನ್ ಹನಿ ಕಾಣುಸ್ತಾವಾ ಹೊರತೂ ಹಿಮ ಬಿಳಂಗಿಲ್ಲ, ಸದ್ಯ!

  (ಕಾಲಚಕ್ರದಲ್ಲಿ ಹೊಸ ಲೇಖನ ಇದೆ ನೋಡಿ!)

 4. ಹೌದು ಇದು ಕ್ರಿಸ್‌ಮಾಸ; ಸುಂದರ ಕವನ ಮರುಕಳಿಸಿದ ಮಂದಹಾಸ.

  ಸೊಬಗಿನ ನಡುವೆ ಸರಸಕೊಂದು ಅಕ್ಷರದಾಟ; ಇಲ್ಲೂ ನಮ್‍ದನದ ತೋಟ?

 5. Shiv says:

  ತ್ರಿವೇಣಿಯವರೇ,

  ತುಂಬಾ ಸೊಗಸಾಗಿದೆ ಕ್ರಿಸ್‍ಮಸ್ ಕವನ..
  ಅಂದಾಗೆ ಇಲ್ಲಿ ಎಷ್ಟೆನೇ ಕ್ರಿಸ್‍ಮಸ್ ನಿಮ್ಮದು ?

  ಈ ಸಾಲು ಬಹಳ ಇಷ್ಟ ಆಯಿತು..
  ಹಸಿರಿಲ್ಲದ ಮರಗಿಡದಲಿ
  ಮಾಗಿದೆ ಹಸಿ ಗಾಯ
  ಹಿಮ ಸವರಿದೆ ಸವಿಲೇಪ
  ಹಳೆಯ ನೋವು ಮಾಯ!

  ಸಂತಾ ಬಂದ್ರೆ ನಮ್ಮನೆಗೂ ಕಳಿಸಿಕೊಡಿ 🙂

 6. sritri says:

  ಕಾಳಣ್ಣಾ, ನಿಮ್ಮೂರು ಯಾವುದೋ ಬಯಲುಸೀಮೆ ಹಳ್ಳಿ ಇದ್ದಂಗಿದೆ. ಅಲ್ಲೆಲ್ಲಾ ಹಿಮ ಬೀಳೋದಿಲ್ಲ, ಆದರೆ ಮುಂಜಾವಿನ ಇಬ್ಬನಿ ಚಂದ ಕಾಣತ್ತೆ ಅಲ್ವಾ? 🙂
  ನಮ್ಮೂರಿನಲ್ಲಿ ಕಳೆದ ವಾರವೇ ರಾಶಿರಾಶಿಯಾಗಿ ಹಿಮ ಸುರಿದು ರಸ್ತೆಗಳೆಲ್ಲಾ ಕ್ರಿಸ್‍ಮಸ್ ಸ್ವಾಗತಕ್ಕೆ ಸಜ್ಜಾಗಿ ನಿಂತಿವೆ.

  ಕಾಲಚಕ್ರದಲ್ಲಿ ಹೊಸ ಲೇಖನ ಹಾಕಿದ್ದೀರಾ? ಬಂದೆ…..ನನಗಂತೂ ಕಾಲಚಕ್ರಕ್ಕೆ ಬಂದು ನೋಡಿ ನೋಡಿ, ಕಾಲು ನೋವು ಬಂದಿತ್ತು 🙂

  ಕಾಲಚಕ್ರ ಓದ್ತಾ ಇದ್ರೆ, ಹಿಂದೆ, ಲಂ.ಪ.ದಲ್ಲಿ ‘ಬಯಲುಸೀಮೆ ಕಟ್ಟೆ ಪುರಾಣ” ಅಂತ ಬರ್ತಾ ಇತ್ತು. ಅದರ ಜ್ಞಾಪಕ ಬರತ್ತೆ ನಂಗೆ.

 7. sritri says:

  ಜೋಶಿಯವರೇ, ನಂದನದಲ್ಲೆಲ್ಲ ನಿಮ್‍ದನಗಳನ್ನು ಓಡಾಡಿಸಿ ಗಿಡಗಳನ್ನೆಲ್ಲ ಹಾಳು ಮಾಡಬೇಡಿ. ಹೊರಗೆ ಅಟ್ಟಿಕೊಂಡು ಹೋಗಿ. 🙂

 8. sritri says:

  ಶಿವು, ಮೆಚ್ಚಿಗೆಯಾದ ಕವನದ ಸಾಲು ತಿಳಿಸಿದ್ದಕ್ಕೆ ಧನ್ಯವಾದ.

  ಈಗ ಬರಲಿರುವ ಕ್ರಿಸ್‍ಮಸ್ ನಮಗೆ ಆರನೆಯದು. ಇನ್ನು ೩ ವರ್ಷ ನಾವು ಇಲ್ಲೇ ಇದ್ದರೆ………, ಭೀಮನ ಅಮಾವಾಸ್ಯೆ ವ್ರತದ ಹಾಗೆ ಕ್ರಿಸ್‍ಮಸ್‍ಗೂ ಒಂಭತ್ತು ವರ್ಷ ತುಂಬುತ್ತದೆ 🙂 ನಿಮ್ಮದು?

  ಸಾಂತ ಬಂದರೆ ನಿಮ್ಮನೆಗೂ ಕಳಿಸುತ್ತೇವೆ. ಆದರೆ ಅವನ ಚೀಲ ಮಾತ್ರ ಇಲ್ಲೇ ಖಾಲಿಯಾಗಿರುತ್ತದೆ 🙂

  ಮರೆತಿದ್ದೆ, ಎಲ್ಲರಿಗೂ ಕ್ರಿಸ್ತಮಾಸದ ಶುಭಾಶಯಗಳು!! 

   

   

 9. ಭುತಾ says:

  ನೀವು ಕವನವನ್ನು ಬರೆಯುತ್ತೀರಿ ಎಂದು ತಿಳಿದಿರಲಿಲ್ಲ.
  ನಿಮ್ಮ ಕವನ ಲವಲವಿಕೆ ಇಂದ ಕೂಡಿದೆ.

  ಕ್ರಿಸ್ತಮಾಸವನ್ನು ಸಂಭ್ರಮಿಸಿ 🙂

  ಇಂತು
  ಸಂತ್ಭೂತ

 10. sritri says:

  ಸಂತ ಭೂತಕ್ಕೆ ಸಲಾಮು 🙂

 11. “ನೀವು ಕವನವನ್ನು ಬರೆಯುತ್ತೀರಿ ಎಂದು ತಿಳಿದಿರಲಿಲ್ಲ…” ಎಂದು ಉವಾಚಿಸಿದ ಭೂತವೇ, ಸ್ವಲ್ಪ ಭೂತ ಕಾಲವನ್ನು ಅವಲೋಕಿಸು. ತ್ರಿವೇಣಿಯವರು ಅಂತರ್ಜಾಲ ಬರವಣಿಗೆಗೆ ಧುಮುಕಿದ್ದೇ ‘ಒಸಾಮಾ ಒಸಾಮಾ’ ಎಂಬ ಕವನ ಬರವಣಿಗೆಯೊಂದಿಗೆ! ಮುಂದಿನದೆಲ್ಲ ಇತಿಹಾಸ (Rest is history) ಎಂಬುದು ನಿಮಗೆ ಗೊತ್ತೇ ಇದೆ. ವಿಪರ್ಯಾಸವೆಂದರೆ ಒಸಾಮ ಇನ್ನೂ ಇತಿಹಾಸವಾಗದಿರುವುದು!

 12. sritri says:

  ಜೋಶಿಯವರೇ, ವರ್ತಮಾನಕ್ಕೂ ಬೇಕಾಗಿರುವ (wanted)ಒಸಾಮಾ ಲಿಂಕನ್ನು ಭೂತಕ್ಕೆ ತಂದುಕೊಟ್ಟಿದ್ದಕ್ಕೆ ವಂದನೆಗಳು.

 13. ಶ್ರೀ ತ್ರೀ ಅವರೆ,

  ದೇಶ ಭಾಷೆಗಳ ಗೋಡೆ ಒಡೆದು
  ಮತ ಧರ್ಮಗಳ ಗೋಡೆಯಲ್ಲಿ ಬಿರುಕು ಮೂಡಿಸಿ
  ಹೃದಯ ಹೃದಯ ಜೋಡಿಸೋ ಸಂಚು ಹೂಡಿದ್ದೀರಿ.
  ಅದರ ಮೇಲೆ ಸೇತುವೆ ಕಟ್ಟಿ ಉಡುಗೊರೆಯ ಪೆಟ್ಟಿಗೆಯನ್ನೂ ಕೊಡುವಿರಂತೆ ಒಟ್ಟಿಗೇ.
  ನಾವು ಬೇಡ ಅನ್ನುವುದಿಲ್ಲ 🙂

  ಭೂತಗಳೀಗ ಸಂತರಾಗಲು ಹೊರಟಿದ್ದೇಕೆ?

 14. sritri says:

  ಅನ್ವೇಷಿಗಳೇ, ಗೋಡೆ ಒಡೆಯುವುದು, ಬಿರುಕು, ಸಂಚು ಹೂಡುವುದು ಎಂದೆಲ್ಲಾ ನೀವು ಬರೆದಿರುವುದು ನೋಡಿ ನಾನೇನಾದರೂ ತಪ್ಪು ಮಾಡಿದೆನಾ ಎಂದು ಭಯವಾಗುತ್ತಿದೆ!

 15. ಭೂತ says:

  ಜೋಶಿಗಳೆ,

  ಭೂತಕಾಲ ಪ್ರೆವೇಶಿಸೊಕ್ಕೆ ಹಾದಿ ಹಾಕಿದಕ್ಕೆ ಧ.ವಾ.
  ಸದ್ಯ ನಿಮ್ ದನಗಳು ಅಲ್ ಇರ್ಲಿಲ್ಲ :), ತುಣುಕು ಕೂಡ ಇರ್ಲಿಲ್ಲ.
  ಅನ್ವೇಷಿಗಳೆ, ಅದು ನಿಗೂಡ ರಹಸ್ಯ.

  ಮ್ಯಡಮ್, ಓಸಾಮ ಎನ್ನುವ ಆಸಾಮಿ ಬಗ್ಗೆ ಚೆನ್ನಾಗಿ ಬರ್ದಿದ್ದಿರಿ.

  ಇಂತಿ
  ಭೂತಪಿತಾಮಹ

 16. ಕವನ ತುಂಬಾ ಚೆನ್ನಾಗಿದೆ.

  ಎಲೆಗಳಿಲ್ಲ ಆದರೇನು?
  ಹೊನಲಾಗಿದೆ ಹಿಗ್ಗು
  ಬೋಳು ರೆಂಬೆ ಕೊಂಬೆಯಲ್ಲೂ
  ಬರಿ ಬೆಳಕಿನದೇ ಮೊಗ್ಗು … ..

  ಈ ಸಾಲುಗಳು ನನಗೆ ತುಂಬಾ ಇಷ್ಟವಾಯಿತು. ಛಳಿಗಾಲದಲ್ಲಿ ಎಲೆಗಳುದುರಿ ಬೋಳು ನಿಂತಿರುವ ಮರಕ್ಕೆ ಅದರ ಆಕಾರಕ್ಕೆ ತಕ್ಕಂತೆ ಮಿಣ ಮಿಣ ಅನ್ನುವ ದೀಪದ ಸಾಲನ್ನು ಸುತ್ತಿರುತ್ತಾರೆ. ಇಡೀ ರಸ್ತೆಯಲ್ಲಿ ಆ ಥರದ ಮರದ ಸಾಲುಗಳನ್ನು ನೋಡಿದರೆ ನಾವು ನಂದನ…ಅಲ್ಲಲ್ಲ ನಕ್ಷತ್ರ ಲೋಕದಲ್ಲಿದ್ದೇವೋ ಅನ್ನಿಸುತ್ತದೆ.

  ಜೋಷಿಯವರು ಯವಾಗಲೂ ನಮ್ ದನ ದ ಮೇಲೆ ಕಣ್ಣಿಟ್ಟಿರುತ್ತಾರೆ ಅಂತ ಗೊತ್ತಿದ್ದು ಮತ್ತೊಂದು ನಿಮ್ ದನವನ್ನ ಕರ್ಕೊಂಡು ಬಂದಿದ್ದೀಯಲ್ಲ?.

 17. sritri says:

  ಧನ್ಯವಾದಗಳು ಮೀರಾ. 🙂

  ನನ್ನ ಈ ಸಾಧಾರಣ ಕವನಕ್ಕಿಂತ, ಅದನ್ನು ಮುಕ್ತ ಮನಸ್ಸಿನಿಂದ ಮೆಚ್ಚಿದ ನಿಮ್ಮೆಲ್ಲರ ಸಹೃದಯತೆಯ ತೂಕವೇ ಹೆಚ್ಚಿನದು!

 18. ಸುನಾಥ says:

  ನಮ್ಮ ಕವಿಗಳು ಯುಗಾದಿಯ ಮೇಲೆ, ವಸಂತ ಮಾಸದ ಮೇಲೆ ಸುಂದರವಾದ ಕವನಗಳನ್ನು ಬರೆದಿದ್ದಾರೆ. ಕ್ರಿಸ್ಮಸ ಮೇಲೆ ಬಹುಶ ಯಾರೂ ಬರೆದಿರಲಿಕ್ಕಿಲ್ಲ. ಕ್ರಿಸ್ಮಸ ಮೇಲೆ ನೀವು ಉಲ್ಲಾಸಕರವಾದ ಹಾಗು ಹೃದಯ ಮುಟ್ಟುವ ಗೀತೆ ಬರೆದಿದ್ದೀರಿ. ಅಭಿನಂದನೆಗಳು

 19. sunaath says:

  ಕ್ರಿಸ್ಮಸ್ ಕವನವನ್ನು ಮತ್ತೊಮ್ಮೆ ಓದಿ ಖುಶಿಯಾಯ್ತು. ಇದೇ ಸಾಂತಾನ ಕೊಡುಗೆ ನನಗೆ!

 20. Shree Kar says:

  ತ್ರಿವೇಣಿಯವರೇ,

  ಕಾದಿರುವಳು ಶಬರಿ ಪದ್ಯ ಹುಡುಕುವಾಗ ನಿಮ್ಮ ತುಳಸೀವನ ಕಂಡಿತು. ಬಹಳ ಸುಂದರವಾದ ತಾಣ! ಕಚಗುಳಿಯಿಡುವ ಹಾಸ್ಯಭರಿತ ಕಮೆಂಟುಗಳು ಮತ್ತು ಅವಕ್ಕೆ ಬರುವ witty ಉತ್ತರಗಳು, ತಾಣದಲ್ಲೇ ಇರುವ ಬಹಳ ಸುಲಭದ ಕನ್ನಡ ಕೀಲಿಮಣೆ ಇವೆಲ್ಲವೂ ತುಂಬ ಖುಷಿ ಕೊಟ್ಟವು.

 21. sritri says:

  Shree Kar , ಧನ್ಯವಾದಗಳು ನಿಮಗೆ! 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಒಸಾಮಾ ಎಲ್ಲಿದ್ದಾನು?ಒಸಾಮಾ ಎಲ್ಲಿದ್ದಾನು?

ಅದೆಷ್ಟೋ ಸುಖಸ೦ಸಾರಗಳು ತಮ್ಮೆಲ್ಲ ಹರುಷ ಕಳಕೊ೦ಡ ಆ ವಿಷನಿಮಿಷ ಮೊನ್ನೆ ಹನ್ನೊ೦ದಕ್ಕೆ ನಿನ್ನ ಮಾರಣಹೋಮಕ್ಕೆ ಮತ್ತೂ ಒ೦ದು ವರುಷ! ಹುಡುಕಿದ್ದೂ ಅಯ್ತು ನಿನ್ನ ಸೂಜಿ ಕಳಕೊ೦ಡವರೆಲ್ಲ ಹುಲ್ಲ ಬಣವೆಗಳಲ್ಲಿ; ಗಡ್ಡಗಡರಿದ ಬೆ೦ಕಿ ಅರಿಸುವ ಆತುರದಿ ಬಾವಿ ತೋಡುವ ವೇಗದಲ್ಲಿ ಅಫಘಾನದ ಹಿಮದ

ಎಷ್ಟು ಚಂದವಿರಬಹುದು?ಎಷ್ಟು ಚಂದವಿರಬಹುದು?

ಎಲ್ಲೋ ಕಗ್ಗತ್ತಲು ತುಂಬಿದ ಕಾಡಲ್ಲಿ ಕತ್ತದುಮಿ, ಉಸಿರುಗಟ್ಟಿಸುವ ಗೂಡಲ್ಲಿ, ಮಾನವೀಯತೆ ಮಾರಿಕೊಂಡ ಕಾಡುಜನಗಳ ನಡುವೆ ಅವಮಾನ, ಆತಂಕ, ನೋವು ತುಂಬಿ ಜಿಗುಟು ಜಿಗುಟಾದ ಕಪ್ಪು ನೆಲದಲ್ಲಿ ಜಾರದಂತೆ ಗಟ್ಟಿಯಾಗಿ ಕಾಲೂರಿ ನಿಂತು ಭರವಸೆಯ ಬೆಳಕಿಗಾಗಿ ದಿಕ್ಕುಗಳೆಡೆಗೆ ಅಸೆ ನೋಟ ಹರಿಸುತ್ತಾ ಮೈ

ನಿನಗಾಗಿನಿನಗಾಗಿ

ಕಲ್ಪನೆ ಕುಂಚವ ಭಾವದಿ ಹೊರಳಿಸಿ ರಚಿಸಲು ಕುಳಿತೆನು ನುಡಿಚಿತ್ರ ಹೃದಯದಿ ತುಂಬಿದ ಒಲುಮೆಯೆ ಬರೆಸಿದೆ ನಿನಗಾಗೆಂದೇ ಈ ಪತ್ರ ತೂರುತ ಬರುವ ಮುಳ್ಳಿನ ಮಾತಿಗೆ ಸಾತ್ವಿಕ ನಡತೆಯ ಬಿಳಿಹೂವು ನಕಾರ ಯೋಚನೆ ಸನಿಹ ಬರದಂತೆ ರೋಗ ನಿರೋಧಕ ಕಹಿಬೇವು ಉಕ್ಕುತ ಬಿಕ್ಕುತ