ಇಲ್ಲಿ ಮೆದುವಾದ ಚಪಾತಿ ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೀನಿ ಅಂತ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ನಾನು ಮೆದುವಾದ ಚಪಾತಿ ಮಾಡುವುದು ಹೇಗೆ ಎಂದು ನಿಮ್ಮನ್ನೇ ಕೇಳ್ತಾ ಇದೀನಿ!

ದಕ್ಷಿಣ ಭಾರತೀಯರು ಅಕ್ಕಿಯನ್ನು ಉಪಯೋಗಿಸುವುದರಲ್ಲಿ ಎಲ್ಲರಿಗಿಂತಲೂ ಮುಂದು. ನಾವೂ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಎಂದು ನಂಬಿದವರು.  ಅನ್ನ ಕಡಿಮೆ ಮಾಡಿ ಎಂದು ಎಲ್ಲರೂ ಹೇಳೋದು ಕೇಳಿ, ಕೇಳಿ ಬೇಜಾರಾಗಿ , ನಾನೂ ಅನ್ನ ಕಡಿಮೆ ಮಾಡಿ ದಿನವೂ ಚಪಾತಿ ಮಾಡಲು ನಿರ್ಧರಿಸಿದೆ.  ಅನ್ನದಷ್ಟು ಸುಲಭವಲ್ಲ ಇದು. time ತೊಗೊಳ್ಳುವ ಕೆಲಸ.

ನಾನು ಮಾಡುವ ಚಪಾತಿ ಕಲ್ಲಿನಂತೆ ಗಟ್ಟಿಯಾಗೇನೂ ಇರದೆ ಚೆನ್ನಾಗಿಯೇ ಇರತ್ತೆ. ಆದರೂ ನನಗೇಕೋ ತೃಪ್ತಿಯಿಲ್ಲ.   ನಾನು ಬೆಂಗಳೂರಿನಲ್ಲಿ ನಮ್ಮ ಪರಿಚಯದವರೊಬ್ಬರ ಮನೆಯಲ್ಲಿ ನೋಡಿದ ( ಮತ್ತು ಸವಿದ) ಚಪಾತಿಯ ಗುಣಮಟ್ಟವನ್ನು ಸಾಧಿಸುವುದು ಇನ್ನೂ ನನ್ನಿಂದಾಗಿಲ್ಲ. ಆ ಚಪಾತಿಗಳು ರೇಶಿಮೆಯಷ್ಟೇ (ಹೊಸದಲ್ಲ) ಮೃದುವಾಗಿದ್ದವು. ಅವರು ಚಪಾತಿ ಹೇಗೆ ಮಾಡುತ್ತಾರೆಂದು ಅಗಲೇ ವಿಚಾರಿಸಿದೆ. ಅವರು ವಿವರಿಸಿದ್ದೇ ಅಲ್ಲದೆ, ಚಪಾತಿಗಳು ಸಾಕಷ್ಟಿದ್ದರೂ, ನನ್ನ ಸಮಾಧಾನಕ್ಕಾಗಿ ಮತ್ತೂ ಒಂದೆರಡು ಚಪಾತಿಗಳನ್ನು ಮಾಡಿ ತೋರಿಸಿದರು.  ಚಪಾತಿ ಮಾಡುವ ವಿಧಾನದಲ್ಲೇನೂ ಬದಲಾವಣೆ ಇರಲಿಲ್ಲ, ಹಿಟ್ಟು ಕೂಡ ಬೇರೆಯಲ್ಲ, ಆದರೂ ನಾನು ಮಾಡಿದ ಚಪಾತಿ ಮಾತ್ರ ಹಾಗಿರಲಿಲ್ಲ 🙁

ಇಲ್ಲಿ ಸುಮಾರಾಗಿ ಯಾರ ಮನೆಯಲ್ಲಿ ಹೋಗಿ ನೋಡಿದರೂ ಎಲ್ಲರ ಮನೆ ಚಪಾತಿಯೂ (ಎಲ್ಲರ ಮನೆ ದೋಸೆ ತರ 🙂 ) ಒಂದೇ ರೀತಿ ಇರುತ್ತದೆ. ಯಾಕೆಂದರೆ,ಎಲ್ಲರೂ ಗುಜರಾತಿಗಳು ಮಾಡಿ ಕೊಡುವ ತೆಳ್ಳಗಿನ ಚಪಾತಿಗಳನ್ನೇ ತಂದು ಇಟ್ಟಿರುತ್ತಾರೆ.  ಯಾರಾದರೂ ಮನೆಯಲ್ಲಿಯೇ ಚಪಾತಿಗಳನ್ನು ಮಾಡಿದ್ದರೆ, ನಾನು ಕೇಳುವ ಪ್ರಶ್ನೆ ಇದು – “ನೀವು ಚಪಾತಿ ಹೇಗೆ ಮಾಡುತ್ತೀರಿ?” ಅದೇ ಪ್ರಶ್ನೆ ಈಗ ನಿಮಗೆ – “ನಿಮ್ಮನೆ ಚಪಾತಿ ಮೆದುವಾಗಿದ್ದರೆ, ಅದನ್ನು ಹೇಗೆ ಮಾಡುತ್ತೀರಿ?”

ನಿಮಗೇನಾದರೂ ಹೊಸ ವಿಧಾನ ಗೊತ್ತಿದ್ದರೆ ತಿಳಿಸಿ. ಗೂಗಲ್ ಲಿಂಕ್ ಬೇಡ. ನಾನಾಗಲೇ ಪ್ರಯತ್ನಿಸಿದ್ದೇನೆ. 🙂 ಕೆಲವು ತಾಣಗಳಲ್ಲಿ ಬಿಸಿನೀರಿನಲ್ಲಿ ಹಿಟ್ಟು ಕಲಿಸಿದರೆ ಮೃದುತ್ವ ಬರುತ್ತದೆ ಎಂದಿತ್ತು, ಅದನ್ನು ಪ್ರಯತ್ನಿಸಿದೆ.  ಉದಯ ಟಿವಿಯಲ್ಲಿ ,ಗೋಧಿ ಹಿಟ್ಟಿನೊಡನೆ ಮೈದಾ ಬೆರೆಸಿದರೆ ಮೃದುವಾಗಿರತ್ತೆ ಎಂದು ಮಾಡಿ ತೋರಿಸಿದರು. ದಿನವೂ ಮೈದಾ ತಿಂದರೆ ಮೈಗೊಳ್ಳೆಯದಲ್ಲವಾದ್ದರಿಂದ ಆ ಸಲಹೆಯನ್ನು ಸಾರಾಸಗಟಾಗಿ ನಿರಾಕರಿಸಿದೆ.

ಪ್ರವೀಣ ಇಲ್ಲಿದ್ದಾಗ, ( ಈಗ ಬೆಂಗಳೂರು) ಹಾಲಿನಲ್ಲಿ ಹಿಟ್ಟು ಕಲೆಸಿದರೆ ಚಪಾತಿ ತುಂಬಾ ಮೆತ್ತಗಿರುತ್ತದೆ ಎಂದು ಹೇಳಿದ್ದ. ಅದನ್ನೂ ಮಾಡಿದೆ. ಹಾಲಿನ ಕ್ಯಾನುಗಳು ಬೇಗ ಬೇಗ ಖಾಲಿಯಾದವೇ ಹೊರತು ನನ್ನ “ಕನಸಿನ” ಚಪಾತಿಯ ಸಾಕ್ಷಾತ್ಕಾರವಾಗಲಿಲ್ಲ. ನಿಮ್ಮಲ್ಲೇನಾದರೂ ಒಳ್ಳೆಯ ಸಲಹೆಗಳಿದ್ದರೆ ಬರಲಿ.

ಜೋಶಿ, ಅನ್ವೇಷಿಗಳು ಕೊಡುವ ಬಣ್ಣಬಣ್ಣದ ಐಡಿಯಾಗಳಿಗೂ ಸ್ವಾಗತ 🙂

***  ***    ***    ***   ***   ***   ***   ***

62 thoughts on “ಮೆದುವಾದ ಚಪಾತಿ ಮಾಡುವುದು ಹೇಗೆ?”

 1. ಶ್ರೀತ್ರೀ ಅವರೇ,
  ಹೀಗೊಂದು ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು! ಏಕೆಂದರೆ ನಿಮ್ಮ ಪ್ರಶ್ನೆ ನನ್ನ ಪ್ರಶ್ನೆ ಸಹಾ….

  ನಾನು ಹೇಗೆ ಚಪಾತಿ ಮಾಡಿದರೂ ಅದು `ಮುಂಬೈನ ನನ್ನ ಸ್ನೇಹಿತರ ಮನೆಗಳಲ್ಲಿನ ಚಪಾತಿ ತರ ಇರುವುದಿಲ್ಲ’ ಎಂಬ ದೂರು ಕೇಳೀ ಕೇಳೀ ಸುಸ್ತಾಗಿ ಹೋಗಿದ್ದೇನೆ. ಮೃದು ಚಪಾತಿ ಮಾಡುವ ಕಲೆ ಇನ್ನೂ ನನಗೆ ಸಿದ್ದಿಸಿಲ್ಲ!
  ಆದರೆ ನಾನು ಗಮನಿಸಿದ ಪ್ರಕಾರ ಉತ್ತರದವರು ಚಪಾತಿ ಹಿಟ್ಟು ಕಲೆಸುವಾಗ ತುಂಬಾ ಹೊತ್ತು ಮುಷ್ಟಿಯಿಂದ ಗುದ್ದಿ ಗುದ್ದಿ ಕಲೆಸುತ್ತಾರೆ. ಮೃದು ಚಪಾತಿ ತಯಾರಾಗುವುದು ಏನನ್ನಾದರೂ ಬೆರಸಿ ಹಿಟ್ಟು ಕಲೆಸುವುದರಿಂದ ಅಲ್ಲ,ಬದಲಿಗೆ ಚಪಾತಿ ಲಟ್ಟಿಸುವ ವಿಧಾನದಿಂದ!  ಅವರುಗಳು ಒಮ್ಮೆ ಲಟ್ಟಿಸಲು ಶುರು ಮಾಡಿದ ಮೇಲೆ ಲಟ್ಟಣಿಗೆಯನ್ನು ಒಮ್ಮೆಯೂ ಪೂರ್ತಿ ಲಟ್ಟಿಸುವ ತನಕ ಮೇಲೆತ್ತುವುದಿಲ್ಲ  (ನಾವುಗಳು ಚಿಕ್ಕಂದಿನಲ್ಲಿ ಒಮ್ಮೆಯೂ ಕೈಮೇಲೆತ್ತದೇ ಒಂದೇ ಗೆರೆಯಲ್ಲಿ ಕೆಲವು ರಂಗೋಲಿ ಬರೆಯುತ್ತಿದ್ದೆವಲ್ಲಾ ಹಾಗೇ) ಹೀಗೆ ಲಟ್ಟಿಸುವುದು ಚಪಾತಿಗೆ ಸಮಾನವಾದ ಮೇಲ್ಮೈ ತಂದು ಕೊಡುವುದರಿಂದ ಚಪಾತಿ ಬೇಯುವಾಗ ಚಪಾತಿಯ ಎರಡು ಪದರಗಳ ಮಧ್ಯೆ ಹಗುರವಾಗಿ ಗಾಳಿ ತುಂಬಿಕೊಂಡು ಚಪಾತಿ ಮೃದುವಾಗುತ್ತದೆ.

  ನೀವು ಯಾವುದಾದರೂ ಉತ್ತರದ ಸ್ನೇಹಿತೆಯನ್ನು ಹಿಡಿದು ಅವರಿಂದ ಚಪಾತಿ ಲಟ್ಟಿಸುವ ವಿಧಾನ ಕಲಿಯಲು ಪ್ರಯತ್ನಿಸಿ. ಬಿಲೀವ್ ಮೀ…ಅದಷ್ಟು ಸುಲಭವಲ್ಲ, ಅವರುಗಳು ಚಿಕ್ಕಂದಿನಿಂದ ವರ್ಷಾನುಗಟ್ಟಲೆ ದಿನವೂ ನೂರಾರು ಚಪಾತಿ ಮಾಡೀ ಮಾಡೀ ಕರಗತ ಮಾಡಿಕೊಂಡಿರುವ ಇದನ್ನು ನನಗಂತೂ ಇನ್ನೂ ಕಲಿಯಲು ಸಾಧ್ಯವಾಗಿಲ್ಲ.

  ನೀವು ಪ್ರಯತ್ನಿಸಿ ಗುಡ್ ಲಕ್….

  ಮಾಲಾ

 2. ಮಾಲಾ, ಚಪಾತಿ ಮಾಡೋದು ಕಷ್ಟ ಅಂತ ಹೇಳಿ ಇನ್ನೂ ಹೆದರಿಸಿಬಿಟ್ಟಿದ್ದೀರಿ. ಚಪಾತಿ ಹಿಟ್ಟು ಕಲೆಸುವಾಗ ತುಂಬಾ ಹೊತ್ತು ಮುಷ್ಟಿಯಿಂದ ಗುದ್ದಿ ಗುದ್ದಿ ಕಲೆಸಬೇಕು – ಈ ಸಲಹೆ ಉಪಯುಕ್ತ ಅನಿಸಿತು. ಯಾರಿಗೆ ಅಂತಾನೂ ತಿಳಿಸಿದ್ದರೆ ಚೆನ್ನಾಗಿತ್ತು 🙂

  ಉತ್ತರ ಭಾರತದ ಸ್ನೇಹಿತೆ ನನಗಾರೂ ಇಲ್ಲ. ಗುಜರಾತಿ ಸ್ನೇಹಿತೆಯೊಬ್ಬಳ ಹತ್ತಿರ ಒಂದೆರಡು ಸಲ ಕಲಿಯಲು ಪ್ರಯತ್ನಿಸಿದ್ದೆ.

 3. nannadondhu small hint yenendare, chapathi hittu channagi kalesida nanthara ardha athava ondhu gante bittu chapathi lattisidare nimma problem solve aaguvudu, chapathi medhuvaagi ruchiyaagiruvudu.

 4. ವಿಚ್ಚು, ನಿಮ್ಮ ಸಲಹೆ ನನಗೆ ಮೆಚ್ಚು!

  ಅಂದ ಹಾಗೆ ನಿಮ್ಮ ಹೆಸರೇನು ಇರಬಹುದು ಅಂತ ಗೆಸ್ ಮಾಡಕ್ಕೂ ಆಗ್ತಾ ಇಲ್ಲ ನಂಗೆ. ಸರಿಯಾದ ಹೆಸರು ಹೇಳದಿದ್ರೆ ನಿಮಗೂ ನಮ್ಮ ಕಾಳಣ್ಣನ ತರ ಏನೋ ಒಂದು ಅಡ್ಡ ಹೆಸರು ಬಿದ್ದು ಹೋಗತ್ತೆ ನೋಡಿ. 🙂

 5. ತ್ರಿವೇಣಿಯವರಿಗೊಂದು ಪುಕ್ಕಟೆ ಸಲಹೆ (ಇನ್ನೂ ಕೆಲವಿವೆ, ನಿಧಾನಕ್ಕೆ ಸಲಹಿಸುತ್ತೇನೆ).

  ಒಂದು ಗೆರೆಯನ್ನು ಅಳಿಸದೆ ಗಿಡ್ಡ/ಚಿಕ್ಕ ಮಾಡುವುದು ಹೇಗೆ ಹೇಳಿ? ಅದರ ಪಕ್ಕದಲ್ಲೇ ಇನ್ನೊಂದು ಉದ್ದದ ಗೆರೆ ಎಳೆದರೆ ಮೊದಲನೆಯದು ಗಿಡ್ಡ ಆಗುತ್ತದೆ ಅಲ್ಲವೇ?

  ಇದೇ ತತ್ವವನ್ನು ಉಪಯೋಗಿಸಿ, ಚಪಾತಿ ಮೆದುವಾಗಲು ಒಪ್ಪಲಿಲ್ಲವಾದರೆ ನಿಮ್ಮ ಹಲ್ಲುಗಳನ್ನೇ ಇನ್ನಷ್ಟು ಗಟ್ಟಿ ಮಾಡಿ. ಸಾಪೇಕ್ಷಸಿದ್ಧಾಂತ (theory of relativity)ದ ಪ್ರಕಾರ ಚಪಾತಿ ಮೆದುವಾಗುತ್ತದೆ! ಅದನ್ನು ತಿನ್ನುವ relatives ಪಾಡು ಏನಾದರೂ ಆಗಲಿ, ಬಿಡಿ.

  ಚಪಾತಿಮೃದುತ್ವಸಾಪೇಕ್ಷಸಿದ್ದಾಂತಕ್ಕೆ ನಿಮಗೆ ಬೇಕಿದ್ದರೆ ನೊಬೆಲ್ ಬಹುಮಾನವನ್ನೂ ಕೊಡಿಸೋಣವಂತೆ!

 6. ಪುಕ್ಕಟೆ ಸಲಹೆ-2

  ಕಳೆದ ವಾರದ ವಿಚಿತ್ರಾನ್ನದಲ್ಲಿ ದುರ್ಯೋಧನನ ವೆರಿ ಫೇಮಸ್ ‘ನೀರೊಳಗಿದ್ದೂ ಬೆಮರ್ದಂ…’ ಬಗ್ಗೆ ಉಲ್ಲೇಖಿಸಿದ್ದೆನಷ್ಟೆ?

  ನೀರೊಳಗೆ ಕುಳಿತು ಚಪಾತಿ ಲಟ್ಟಿಸಿ ಸುಟ್ಟರೆ ಅದು ಮೃದುವಾಗುತ್ತದೆ. ಒಮ್ಮೆ ಟ್ರೈಯಿಸಿ.

  (ಸಲಹೆ ಎಂದ ಮಾತ್ರಕ್ಕೆ ನಾನು ‘ಹಾಗೆಮಾಡಿಅನುಭವವಿರುವವ’ ಆಗಿರಬೇಕೆಂದೇನಿಲ್ಲವಷ್ಟೆ?)

 7. Chapati Mruduvagabekadare adu ella kade onde ritiya dappa irabeku. chapati beyisuvaga tumba sala tiruvi hakuvudu beda. ondu chapatigaguvastu hittannu tegedukondu puriya tara lattisikondu adara mele swalpa enne mattu ona hittannu savari madachi matte chapati madidare chapati obbuvudallade tinnalu ruchiyagiruttade.

 8. Very comforting topic & great interaction between brilliant Ameri kannadadiga’s & Ameri kannadathi’s balancing hectic carrers along with house work!!

 9. Too much of cooking & too much of eating, too less of schooling, so the typo that got pointed out by my 10 year old..

  Not carrers but ‘career’

 10. ಜೋಶಿಯವರೆ, ಸದ್ಯಕ್ಕಂತೂ “ಚಪಾತಿ ಮೃದುತ್ವ ಸಾಪೇಕ್ಷ ಸಿದ್ದಾಂತ”ದಿಂದ ನೋಬಲ್ ಬಹುಮಾನ ಪಡೆಯುವ ಅಪೇಕ್ಷೆ ನನಗಿಲ್ಲ. ಮುಂದೆ ಯಾರಾದರೂ ಈ ಪ್ರಯೋಗಕ್ಕೆ ಬಲಿಪಶುವಾಗಲು ಒಪ್ಪಿದರೆ, ಪ್ರಯೋಗವನ್ನು ಮುಂದುವರೆಸಬಹುದು. 🙂

 11. ಲೇಖನದ ಕೊನೆಯ ಸಾಲು ಮಜವಾಗಿದೆ.
  “ಬಣ್ಣಬಣ್ಣದ” ಸಲಹೆಗಳನ್ನು ಕೇಳಿ “ಬಣ್ಣಬಣ್ಣ”ದ ಚಪಾತಿಗಳನ್ನು ತಯಾರಿಸುವ ಯೋಜನೆಯೆ?
  ಈಸ್ಟರ್ ಹಬ್ಬಕ್ಕೆ ಬಣ್ಣಬಣ್ಣದ ಮೊಟ್ಟೆಗಳು, ಕ್ರಿಸ್‍ಮಸ್ ಹಬ್ಬಕ್ಕೆ ಬಣ್ಣಬಣ್ಣದ ಚಪಾತಿಗಳು.
  ಜೊತೆಗೆ ‘ಬಂಧನ’ ಚಿತ್ರದ ಬಣ್ಣಬಣ್ಣದ ಹಾಡು ಹಿನ್ನೆಲೆಯಲ್ಲಿ….. ಎಂಜಾಯ್!!
  ಒಳ್ಳೆ ಐಡಿಯಾ.

 12. ಪುಷ್ಪಾ ಅವರಿಗೆ ತುಳಸಿವನಕ್ಕೆ ಸ್ವಾಗತ ಮತ್ತು ಸಲಹೆಗೆ ಧನ್ಯವಾದಗಳು.

  Super Brilliant Kannadamma, ನಾವೆಲ್ಲ ನಿನ್ನ ಮಕ್ಕಳಮ್ಮಾ!!  ನಿನ್ನ ನಿಜವಾದ ಹೆಸರು ಹೇಳದಿದ್ದರೆ ಉತ್ತರಿಸಲು ನನಗೆ ಭಯವಮ್ಮಾ! 🙂

 13. ‘Imprisonment’ ಚಿತ್ರದ ‘color my favorite color…’ ಹಾಡನ್ನು ನೆನಪಿಸಿದ Jyothi M ಗಮನಕ್ಕೆ:

  ಆ ಹಾಡಿನಲ್ಲಿ “ಕಾಲದಲ್ಲಿ ಮಾಸದಂಥ ಗಟ್ಟಿ ಬಣ್ಣವು…” ಅಂತಿದೆ. ಮೊದಲೇ ತ್ರಿವೇಣಿಯವರು ತಾವು ಮಾಡುವ ಚಪಾತಿ ಗಟ್ಟಿಯಾಗುತ್ತದೆ ಎಂದು ಪರಿತಪಿಸುತ್ತಿದ್ದಾರೆ, ಅದರ ಮೇಲೆ ‘ಗಟ್ಟಿ’ ಬಣ್ಣಗಳ ಹಾಡೂ ಕೇಳಿಸಿದರೆ!!

 14. ತ್ರಿವೇಣಕ್ಕಾ,
  ಸುಮ್ನೆ ಯಾಕೆ ಮೆದು ಚಪಾತಿ ಮಾಡೋಕೆ ಪ್ರಯತ್ನಿಸ್ತೀರಿ? ಅದು ಮೆದು ಆದಷ್ಟೂ ನಿಮಗೆ ಅದನ್ನ ಮತ್ತೂ ಮತ್ತೂ ಮೆದು ಮಾಡುವ ಹಂಬಲ ಉಂಟಾಗುತ್ತದೆ! ಆಸೆಯೇ ದು:ಖಕ್ಕೆ ಮೂಲ! 🙂 ಅಷ್ಟಕ್ಕೂ ನೀವಿರೋ ವಾತಾವರಣದಲ್ಲಿ ಚಪಾತಿ ಮೆತ್ತಗಾಗಲ್ಲ ಅನ್ನಿಸುತ್ತದೆ! 🙂
  “ಉದಯ ಟಿವಿಯಲ್ಲಿ ,ಗೋಧಿ ಹಿಟ್ಟಿನೊಡನೆ ಮೈದಾ ಬೆರೆಸಿದರೆ ಮೃದುವಾಗಿರತ್ತೆ ಎಂದು ಮಾಡಿ ತೋರಿಸಿದರು. ದಿನವೂ ಮೈದಾ ತಿಂದರೆ ಮೈಗೊಳ್ಳೆಯದಲ್ಲವಾದ್ದರಿಂದ ಆ ಸಲಹೆಯನ್ನು ಸಾರಾಸಗಟಾಗಿ ನಿರಾಕರಿಸಿದೆ”.. ಅಂತ ಅಂದ್ರಿ, ಹೀಗಂದ್ರೆ ಹ್ಯಾಗೆ? ಕುಚ್ ಪಾನೇ ಕೇಲಿಯೇ ಕುಚ್ ಖೋನಾ ಪಡ್ತಾ ಹೈ! ಚಪಾತಿ ಮೆದು ಆಗಿರಬೇಕು ಅಂದ್ರೆ ಮೈದಾ ಹಾಕಿ, ಆರೋಗ್ಯದ ಬಗ್ಗೆ ತಲೆ ಕೆಡಿಸಿಕೋಬೇಡಿ!! 🙂

  ಸಹಲೆ ಕೊಡದೇ ಏನೇನೋ ಮಾತಾಡ್ತಾ ಇದಾನಲ್ಲ ಇವ್ನು ಅಂತ ಸಿಟ್ ಮಾಡ್ಕೋಬೇಡಿ,
  ನನ್ನ ಭಾವ ಒಬ್ಬ ಅಡುಗೆ ಪಂಡಿತ ಇದಾನೆ, ಅವನು ಒಂದು ದಿನ ನಮಗೆಲ್ಲಾ “ಮೆತ್ತ ಮೆತ್ತನೆ ಚಪಾತಿ” ಮಾಡಿ ಹಾಕಿದ್ದ, ಅವನ ಹತ್ರ ಕೇಳ್ಕೊಂಡು ಬಂದು ಹೇಳ್ತೀನಿ ಬಿಡಿ!

 15. ಒಳ್ಳೇ ಟಾಪಿಕ್!:))

  ನನ್ನ ಅಲ್ಪಜ್ಞಾನದ ಪರಿಮಿತಿಯಲ್ಲಿ ಒಂದು ಬಿಟ್ಟಿ ಟಿಪ್: ಈಗಾಗ್ಲೇ ಎಲ್ಲರೂ ಕೊಟ್ಟಿರೋ ಟಿಪ್ಸ್ – ಅಂದ್ರೆ ಹಿಟ್ಟನ್ನ ನೆನಿಯೋಕೆ ಬಿಡೋದು, ಸಮನಾಗಿ ಲಟ್ಟಿಸೋದು – ಇವುಗಳ್ ಜೊತೆಗೆ ಚಪಾತಿ ಕಾವಲಿ ಮೇಲೆ ಹಾಕಿದಮೇಲೆ ಇಪ್ಪತ್ಸಲ ಆಗಿದ್ಯ ಆಗಿದ್ಯಾ ಅಂತ ಮಗುಚ್ತಾ ಇರೋದನ್ನ್ ಬಿಟ್ಟ್ರೆ(ಇದು ನನ್ನ ಚಪಾತಿಗಳು ಗಟ್ಟಿಯಾಗೋದಕ್ಕೆ ಕಾರಣ ಅಂತ ನಮ್ಮಮ್ಮನ ಡಿಸ್ಕವರಿ!:P) ಚಪಾತಿ ಸ್ವಲ್ಪ ಸುಧಾರ್ಸುತ್ತೆ:)
  statuatory warning: ಇದು ವರ್ಷಕ್ಕೆ ಒಂದು ನಾಕ್ ಸಲ ಚಪಾತಿ ಮಾಡೋ ಮಹಾನ್ ಅನುಭವದಿಂದ ಬಂದಿರೋ ಮಾತುಗಳು!:))

 16. :ಓ,

  ಚಪಾತಿ ಚರಿತ್ರೆ. ನಮ್ಮ ಭೂತಗಳಿಗಿಂತಲು ಹಗುರವಾದ, ರೇಷ್ಮೆ(ಹುಳು ಅಲ್ಲ) ಗಿಂತಲು ಮೃದುವಾದ ಚಪಾತಿ, ನನ್ಗೆ ತಿಳಿದಿಲ್ಲ 🙂

  ನಮ್ ಅತ್ತೆ, ಮೃದುವಾಗಿ ಮಾಡ್ತ ಇದ್ರು. ಕನಿಷ್ಟ ಪಕ್ಷ ಎರಡು ಬಾರಿ ಯಾದರು ಸಾಟಿ ಹಾಕ್ತ ಇದ್ರು 🙂
  ಇಂತಿ
  ಭೂತ

 17. naanu chapati maadbEkaadre belagge kalasi sanje chapati maadOdu..( nammammana taraa.) chennaagiyE irutte. ( adu nanna bhramenoo irbOdu!!!) . innu banna bannada chapati maadbEkidre palak/beetroot/arisina/carrot beyisi ardu haakidre aaythu… makkalige ishta aagutte.

 18. ನುಡಿ: ನನ್ನ “ಕನಸಿನ” ಚಪಾತಿಯ ಸಾಕ್ಷಾತ್ಕಾರವಾಗಲಿಲ್ಲ. …

  ಕಿಡಿ:

  ಕನಸಲ್ಲಾದರೂ ಚಪಾತಿ ಮೆದುವಾಗಿಸುವೆನೆಂದು
  ಮನದಲ್ಲೇ ಛಲಹುಟ್ಟಿತು ತ್ರಿವೇಣಿಗೆ
  ಏನಾದರಾಗಲೆಂದು ನಿರ್ಧರಿಸಿ ಮಲಗಿದರು
  ಸನಿಹದಲ್ಲಿಟ್ಟುಕೊಂಡೇ ಲಟ್ಟಣಿಗೆ ||

  ಬಿದ್ದೇ ಬಿಡ್ತು ಕನಸು ಯಾರೋ ಹೇಳಿಕೊಟ್ಟಂತೆ
  ಗುದ್ದಿ ಗುದ್ದಿ ಗುದ್ದಿದರು ಗೋಧಿಹಿಟ್ಟು
  ಎದ್ದು ನೋಡಿದರೆ ಗೊತ್ತಾಯ್ತು ನಿಜ ಸಂಗ್ತಿ
  ಮುದ್ದಾದ ರಾಯರ ತಲೆಗೆ ಲಟ್ಟಣಿಗೆ hitಉ ||

 19. ಶ್ರೀನಿಧಿ, ನಿಮ್ಮ ಅಡಿಗೆ ಪಂಡಿತ ಭಾವ ಏನು ಹೇಳ್ತಾರೆ ಕೇಳಿಕೊಂಡು ಬನ್ನಿ. ಅಲ್ಲಿಯವರೆಗೆ ನೀವು ಕೊಟ್ಟಿರುವ ಸಲಹೆಯನ್ನು ಉಪಯೋಗಿಸಿಕೊಳ್ಳುತ್ತಿರುತ್ತೇನೆ.

  ಶ್ರೀ, ಚಪಾತಿ ಕಾವಲಿ ಮೇಲೆ ಹಾಕಿದಮೇಲೆ ತುಂಬ ಸಲ ಮಗುಚಿ ಹಾಕುವುದರಿಂದ ಚಪಾತಿ ಗಟ್ಟಿಯಾಗುತ್ತದೆ ಎಂಬುದು ವಿಷಯ ನನ್ನ ಅನುಭವಕ್ಕೂ ಬಂದಿತ್ತು. ಈಗ, ವರ್ಷಕ್ಕೆ ನಾಕು ಸಲ ಚಪಾತಿ ಮಾಡೋ ಮಹಾನ್ ಅನುಭವಿಗಳಾದ ನಿಮ್ಮಿಂದ ಈ ವಿಷಯ ಇನ್ನೂ ಧೃಡ ಪಟ್ಟಿತು 🙂

  ರಮ್ಯಾ, ತುಳಸಿನವನದ ಹೊಸ ಅತಿಥಿ ನೀವು. ಸುಸ್ವಾಗತ. ಬಣ್ಣದ ಚಪಾತಿ ಮಾಡುವ ನಿಮ್ಮ ಸಲಹೆಗೆ ಧನ್ಯವಾದಗಳು.

 20. ಭೂತಪ್ಪ, ನಿಮ್ಮ ಅತ್ತೆ ಎರಡು ಬಾರಿ ಸಾಟಿ ಹಾಕಿ ಮಾಡ್ತಾ ಇದ್ದಿದ್ದು ಹೋಳಿಗೆನಾ? ಚಪಾತಿನಾ? ತಲೆಕೆಳಗಾಗಿ ನೇತಾಡ್ತಾ ನೋಡ್ತಿದ್ದ ನಿನಗೆ ಸರಿಯಾಗಿ ಗೊತ್ತಾಗಿಲ್ಲ ಅಂತ ಡೌಟು 🙂

  ಜ್ಯೋತಿ,ಬಣ್ಣಾ…. ಹಾಡಿನ ಹಿನ್ನಲೆಯಲ್ಲಿ ಬಣ್ಣ ಬಣ್ಣದ ಚಪಾತಿ ತಯಾರಿಸುವ ನಿನ್ನ ಯೋಜನೆ ಅದ್ಭುತವಾಗಿದೆ. ಬಣ್ಣ ಬಣ್ಣದ ಸಾಲು.. ಬಣ್ಣಿಸಲು ಸಾಲದು…

  ಜೋಶಿಯವರೇ, ನಿಮ್ಮ ಬಣ್ಣಬಣ್ಣದ ಸಲಹೆಗಳು ಮನಸ್ಸನ್ನು ಮುದಗೊಳಿಸಿತು. 🙂
  “ನಿಮಗೆ ನಗು ಹಂಚುವುದು ನಿತ್ಯದ ಕಾಯಕ, ಬಿಗುಮಾನವಿಲ್ಲದೆ ಉಣಬಲ್ಲವರಿಗುಂಟು ಹಾಸ್ಯದ ನಿತ್ಯ ದಾಸೋಹ!”

 21. ಅಷ್ಟೊಂದೆಲ್ಲ ಯಾಕೆ ಕಷ್ಟ, ಹಿಟ್ಟು ಗುದ್ದೋದು, ಬಿಸಿ ನೀರಲ್ಲಿ ನೆನೆಸೋದು, ಎರೆಡೆರಡು ಸಲ ತಿರುವಿ ಹಾಕೋದು ಅಂತ, ಲಟ್ಟಿಸಿದ ತಕ್ಷಣ ತಿಂದ್ರಾಯ್ತಪ್ಪ, ಅದಕ್ಕಿಂತ ಮೆದು ಚಪಾತಿ ಬೇಕಾ?

  ಜೋಷಿಯವರ ಕವನ ಅಂತು ಸಕ್ಕತ್, ನಂಗಂತೂ ಶ್ರೀನಿ ನೆಗ್ಗೋಗಿರೋ ತಲೆ ಹೇಗಿರಬಹುದು ಅಂತ ನೆನೆಸಿಕೊಂಡು ನಕ್ಕೂ ನಕ್ಕೂ ಸಾಕಾಯ್ತು. ಜೋಶಿಯವರೇ, ವೇಣಿಗೆ ಮೆದು ಚಪಾತಿ ಮಾಡಕ್ಕೆ ಬಂತೋ ಇಲ್ವೋ ಗೊತ್ತಿಲ್ಲ ಆದ್ರೆ ನಿಮ್ಮ ಕವನ ಅನ್ನೋ ನಗೆ ಟಾನಿಕ್ ಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.(ವೇಣಿ ನಿದ್ದೆಯಲ್ಲಿ ಚಪಾತಿ ಹಿಟ್ಟು ಅಂತ ಶ್ರೀನಿ ತಲೆನ ಗುದ್ದೋದನ್ನ ನೆನೆಸಿ ಕೊಂಡ್ರೆ ನಂಗೆ ಕಣ್ಣಲ್ಲೇಲ್ಲಾ ನೀರು ಬರೋಷ್ಟು ನಗು ಬರ್ತಿದೆ)

 22. ಶ್ರೀತ್ರೀ ಅವರೆ,
  ನಮಗೆ ನಿಮ್ಮ ಚಪಾತಿ ಎಂಬ ಶಬ್ದ ಮಾತ್ರ ಕೇಳಿದ್ದು. ಈಗ ಬಾಯಿಗೆ ಬೀಳುತ್ತೆ ಅಂತ ಕಾಯ್ತಾ ಕೂತಿದ್ದೆ. ಹಾಗಾಗಿ ಬರೋದು ಲೇಟಾಗಿದ್ದೇ… ಅಬ್ಬಬ್ಬಾ ಎಷ್ಟೊಂದು ಚಪಾತಿಗಳು!!!

  ಆದರೆ ಯಾರಿಗೂ ಗೊತ್ತಿಲ್ಲದ ವಿಷಯವನ್ನು ಹೇಳುತ್ತೇನೆ ಕೇಳಿ.

  ಚಪಾತಿ ಮೆದುವಾಗಬೇಕಿದ್ದರೆ
  ಏನು ಮಾಡಬೇಕು
  ಅಂದರೆ
  ಮೆದುವಾಗಿರೋ ಚಪಾತಿಯನ್ನೇ ಮಾಡಿದರಾಯ್ತು ! 🙂

  ಮತ್ತೂ ಮೆದುವಾಗಬೇಕಿದ್ದರೆ, ಅದನ್ನು ಕಾವಲಿ ಮೇಲೆ ಹಾಕಲೇಬಾರದು. ನೇರವಾಗಿ ಬಾಯಿಗಿಟ್ಟರಾಯಿತು.

  ಇನ್ನೊಂದು ಸರಳ ವಿಧಾನವೆಂದರೆ ಚಪಾತಿ ಮಾಡಲು ಲಟ್ಟಣಿಗೆಯನ್ನೇ ಬಳಸಬಾರದು. ಕೈಯಲ್ಲೇ ದಪ್ಪ ದಪ್ಪ ತಟ್ಟಿದರೆ ಚಪಾತಿ ಮೆದು ಆಗೋದು ಗ್ಯಾರಂಟಿ.

  ನಮಗೆ ಹಿಡಿಸದ ಸತ್ಯ : ಚಪಾತಿ ತಯಾರಿಸಿ ಒಂದೆರಡು ಸುತ್ತು ಕಾವಲಿಯಲ್ಲಿ ಇಟ್ಟು, ಬಳಿಕ ನೇರವಾಗಿ ಸ್ಟವ್ flame ಮೇಲೆ ಚಪಾತಿ ಹಾಕಿ ಬೇಗ ಬೇಗನೆ ತಿರುವಿ ಹಾಕಿದ್ರೆ…. ಬಲೂನಿನಂತೆ ಉಬ್ಬುವ ಪುಲ್ಕಾ ರೆಡಿ.

  ಇಲ್ಲಿ ಸದ್ಯ ನಾನಿರೋ ಊರಲ್ಲಿ, ಮೆಷ್ ಥರಾ ಇರೋ ಕಾವಲಿಯನ್ನು ಸ್ಟವ್ ಮೇಲಿರಿಸಿ ಚಪಾತಿ ಉಬ್ಬಿಸಿ ನಮ್ಮ ಮನಸ್ಸನ್ನೂ ಉಬ್ಬಿಸಿಬಿಡುತ್ತಿದ್ದಾರೆ. 🙂

 23. “ಚಪಾತಿ ಮೆದುವಾಗಬೇಕಿದ್ದರೆ
  ಏನು ಮಾಡಬೇಕು
  ಅಂದರೆ
  ಮೆದುವಾಗಿರೋ ಚಪಾತಿಯನ್ನೇ ಮಾಡಿದರಾಯ್ತು ! ” –

  ಅನ್ವೇಷಿಗಳೇ, ನಿಮ್ಮ ಈ ಉತ್ತರವನ್ನು Best Answer ಎಂದು ಆಯ್ಕೆ ಮಾಡಲಾಗಿದೆ. ಬಹುಮಾನ ಸ್ವೀಕಾರಕ್ಕೆ ಯಾವಾಗ ಬರುತ್ತೀರಿ ಎಂದು ತಿಳಿಸಿದರೆ ಅದಕ್ಕೆ “ತಕ್ಕ” ಏರ್ಪಾಟು ಮಾಡಿಕೊಳ್ಳಲಾಗುವುದು.

  ನೀವಿರುವ ಊರಿನಲ್ಲಿ ಉಬ್ಬಿದ ಚಪಾತಿ ಸಿಗುತ್ತದೆಂದು ಸಿಕ್ಕಾಪಟ್ಟೆ ತಿಂದು ತೀರಾ ಉಬ್ಬಿ ಹೋಗಬೇಡಿ. ಬೊಗಳೆ ವರದಿಯಲ್ಲಿ ಎಡವಟ್ಟುಗಳಾದಾಗ ನುಣುಚಿಕೊಳ್ಳಲು ಕಷ್ಟವಾದೀತು!

  ಮೀರಾ, ಜೋಶಿಯವರ ನಗೆ ಟಾನಿಕನ್ನು ಅತಿಯಾಗಿ ಸೇವಿಸಬಾರದೆಂದು ಶಾಸನ ವಿಧಿಸಿದ ಎಚ್ಚರಿಕೆ ಇದೆ. ನಿನ್ನ ಗಮನದಲ್ಲಿರಲಿ. 🙂

 24. 1) “ಲಟ್ಟಿಸಿದ ತಕ್ಷಣ ತಿಂದ್ರಾಯ್ತಪ್ಪ, ಅದಕ್ಕಿಂತ ಮೆದು ಚಪಾತಿ ಬೇಕಾ?…” ಎಂಬ ಮೀರಾ ಸಲಹೆ ಮತ್ತು
  2) “ಮತ್ತೂ ಮೆದುವಾಗಬೇಕಿದ್ದರೆ, ಅದನ್ನು ಕಾವಲಿ ಮೇಲೆ ಹಾಕಲೇಬಾರದು. ನೇರವಾಗಿ ಬಾಯಿಗಿಟ್ಟರಾಯಿತು.” ಎಂಬ ಅನ್ವೇಷಿ ಉವಾಚ

  ಇವೆರಡೂ ವನ್ ಏಂಡ್ ದ ಸೇಮ್! ಬಹುಮತ ಪಡೆದ ಈ ಸಲಹೆಯನ್ನೇ ಈ ಚರ್ಚೆಯ ಒಟ್ಟಾರೆ ಫಲಿತಾಂಶ ಎಂದುಕೊಳ್ಳಬಹುದೇ?

 25. “ಬಹುಮತ ಪಡೆದ ಈ ಸಲಹೆಯನ್ನೇ ಈ ಚರ್ಚೆಯ ಒಟ್ಟಾರೆ ಫಲಿತಾಂಶ ಎಂದುಕೊಳ್ಳಬಹುದೇ?” –

  ಖಂಡಿತ. ಬಹುಮತ ತೀರ್ಮಾನಕ್ಕೆ ನನ್ನ ಬೆಂಬಲವಂತೂ ಇದೆ.

  “ಮೆದುವಾದ ಚಪಾತಿ ಮಾಡುವುದು ಹೇಗೆ?” – ಈ ವಿಷಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಪ್ರಮುಖರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು !

 26. ಬಹುಮಾನ ಸ್ವೀಕಾರಕ್ಕೆ ಯಾವಾಗ ಬರುತ್ತೀರಿ ಎಂದು ತಿಳಿಸಿದರೆ ಅದಕ್ಕೆ “ತಕ್ಕ” ಏರ್ಪಾಟು ಮಾಡಿಕೊಳ್ಳಲಾಗುವುದು.

  ಶ್ರೀ ತ್ರೀ ಅವರೆ, ನಾನು ಮೊದಲೇ ಹೇಳಿದ್ದೇನೆ. ಚಪಾತಿಯನ್ನು ಲಟ್ಟಣಿಗೆಯಲ್ಲಿ ತಟ್ಟಬಾರದು ಅಂತ. ಹಾಗಾಗಿ ಲಟ್ಟಣಿಗೆ ನಿಮ್ಮ ಮನೆಯಿಂದ ಹೊರಗೆ ಬಿಸಾಕಿದ್ದೀರಿ ಎಂದು ಖಚಿತವಾದ ತಕ್ಷಣವೇ ಬಹುನಾಮ ಹಾಕಿಸಿಕೊಳ್ಳಲು ಬರುತ್ತೇವೆ.

  ತ್ರಿವೇಣಿಯವರೆ, ಈ ಅಂತಾರಾಷ್ಟ್ರೀಯ ಮಟ್ಟದ ಚಪಾತಿ ಗೋಷ್ಠಿಯಲ್ಲಿ ಅಮೂಲಾಗ್ರವಾಗಿ ಭಾಗವಹಿಸಿದ ಹಾಗೂ ಲಟ್ಟಣಿಗಾಸ್ತ್ರಕ್ಕೆ ಕೆಲಸ ಕೊಡಿಸಿದ ಮತ್ತು ನಮ್ಮನ್ನು ಕೂಡ ಆಯ್ಕೆ ಮಾಡಿದ ವಿಚಿತ್ರಾನ್ನ ಜೋಷಿಯವರಿಗೆ ನೀವು ವೀಕೆಂಡಿನಲ್ಲಿ ಮಾಡಿದ ಚಪಾತಿಯನ್ನೇ ರವಾನಿಸಿ ರುಚಿ ನೋಡುವ ಶಿಕ್ಷೆ ವಿಧಿಸಿದರೆ ಹೇಗೆ? 🙂

 27. ಅನ್ವೇಷಿಗಳೇ, ವೀಕೆಂಡಿನಲ್ಲೂ ಅಡುಗೆ ಮಾಡಿ, ಅದರಲ್ಲೂ ಚಪಾತಿ ಮಾಡಿ ಎಂದು ಪರೋಕ್ಷವಾಗಿ ಹೇಳುತ್ತಿರುವ ನೀವು ಶಿಕ್ಷೆ ವಿಧಿಸುತ್ತಿರುವುದು ಜೋಶಿಯವರಿಗೋ ಅಥವಾ ನನಗೋ ಎಂದು ಅನುಮಾನವಾಗಿದೆ!!

 28. ಮನಸ್ವಿನಿ, ಚಪಾತಿಯೇನೋ ಸಿದ್ಧವಿದೆ. ಆದರೆ ಕಾವಲಿ ಮೇಲೆ ಹಾಕಲೇಬಾರದು ಎಂದು ಸರ್ವಾನುಮತದಿಂದ ತೀರ್ಮಾನವಾಗಿರುವುದರಿಂದ ಬಿಸಿ ಸ್ವಲ್ಪ ಕಡಿಮೆ ಇದೆ ಅಷ್ಟೆ.

  ತುಳಸಿವನವೆಂಬ ಈ ಸ್ನೇಹಲೋಕ ಮತ್ತೊಬ್ಬ ಹೊಸ ಗೆಳತಿಯನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಿದೆ. 🙂

 29. ತ್ರಿವೇಣಿಯವರೇ,

  ಮೆದುವಾದ ಚಪಾತಿ ಅನ್ನೋದು ಒಂದು ಮಾಯೆ..
  ಮೆದು…ಒರಟು..ಇದೆಲ್ಲಾ ಮನಸಿನ ಒಂದು ಭಾವನೆ..
  ನೀವು ಅದೇ ಚಪಾತಿಯನ್ನು ಪ್ರೀತಿಯಿಂದ ನೋಡಿ ತಿಂದರೆ ಅದು ಮೆದುವೆನಿಸುತ್ತೆ !!

 30. ಶಿವು, ನಿಜ. ಚಪಾತಿ ಮೆದುವಾಗಿಸುವುದು ಕಷ್ಟ. ಮನಸ್ಸನ್ನೇ ಮೃದುವಾಗಿಸಿಕೊಳ್ಳೋದು ಸುಲಭ. ಸುಖ ಸಂಸಾರದ ಈ ಸುವರ್ಣ ಸೂತ್ರವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ.  ಮುಂದೆ ನಿಮಗೆ ಉಪಯೋಗಕ್ಕೆ ಬರಲಿದೆ. 🙂

 31. ನನ್ನ ಹೆಂಡತಿ ಚಪಾತಿ ಕೊಟ್ಟಾಗೆಲ್ಲ ಇದು ಮೃದುವಾದ ಚಪಾತಿ ಎಂದು auto suggestion ಮಾಡಿಕೊಳ್ಳುತ್ತ ತಿನ್ನುತ್ತೇನೆ. ಇದರಿಂದ ನನ್ನ ಹಲ್ಲಿಗೆ ಕಲ್ಲನ್ನೂ ತುಂಡರಿಸುವ ಬಲ ಬಂದು ಬಿಡುತ್ತದೆ.(ಈಗ ಒಂದೂ ಹಲ್ಲು ಉಳಿದಿಲ್ಲ). ಇದು ಅದ್ಭುತವಾದ ಪ್ರಯೋಗ.ನೀವೂ ಪ್ರಯೋಗಿಸಿ ನೋಡಿ. ನಾನು late visitor. ಆದುದರಿಂದ ಸಲಹೆ ಕೊಡೋಕೆ late ಆಗಿದೆ.

 32. ಚಪಾತಿ ಹಿಟ್ಟನ್ನು ಕಲೆಸಿ ೧೫ ನಿಮಿಷ ಹಾಗೇ ನೆನೆಸಲು ಬಿಡಬೇಕು. ಆಮೇಲೆ ಚಪಾತಿ ಮಾಡುವ ಮೊದಲು ಸ್ವಲ್ಪ ಕಲೆಸಿದ ಹಿಟ್ಟಿಗೆ ಎಣ್ಣೆ ಸವರಬೇಕು.ಆಮೇಲೆ ಚಪಾತಿ ತೆಳ್ಳಗೆ ಲಟ್ಟಿಸಿಕೋಳ್ಳಬೇಕು. ಚಪಾತಿ ಮಾಡಿದ ನ೦ತರ ಚಪಾತಿಯನ್ನು ೧ ಡಬ್ಬದಲ್ಲಿ ಮುಚ್ಚಿ ಇಡಬೇಕು. ಹೀಗೇ ಮಾಡಿದ ಚಪಾತಿ ತು೦ಬ ಹೊತ್ತಿನವರೆಗೆ ಮೃದುವಾಗಿ ಇರುತ್ತವೆ.

 33. ಸುನಾಥರೇ, ನಾನು ನಿಜವನ್ನೇ ಹೇಳುತ್ತಿದೀನಿ. ನನ್ನ ಮಾತು ನಂಬಿ. ನಾನು ಮಾಡುವ ಚಪಾತಿ ನಿಮ್ಮ ಮನೆಯ ಚಪಾತಿಯಷ್ಟು ಖಂಡಿತ ಗಟ್ಟಿಯಾಗಿರಲ್ಲ – ಅಂದರೆ ಹಲ್ಲುಗಳು ಮುರಿದು ಹೋಗುವಷ್ಟು!! 🙂

 34. ಅಶ್ವಿನಿಯವರೇ, ನೀವು ಹೇಳಿದಂತೆ ಡಬ್ಬದಲ್ಲಿ ಮುಚ್ಚಿಡಬಹುದು. ಆದರೆ ಹಬೆಗೆ ಚಪಾತಿಗಳು ಒದ್ದೆಯಾಗುತ್ತವೆ (ಹೌದು,ಮೆತ್ತಗೂ ಆಗುತ್ತದೆ). ಅದರ ಬದಲು hot box ಉಪಯೋಗಿಸಿದರೆ ಮೆತ್ತಗೆ, ಬಿಸಿಯಾಗಿಯೂ ಇರುತ್ತವೆ.

 35. Hot Box ಒಳಗೂ ಹಬೆ ಸೇರಿಕೊಳ್ಳುತ್ತದೆ. ಅದಕ್ಕೆ ಉತ್ತರ ಭಾರತೀಯರು (ತುಂಬಾ ಹೆಚ್ಚಾಗಿ ಚಪಾತಿ ಮಾಡುವವರು ಅವರೇ ತಾನೇ) ಚಪಾತಿಯನ್ನು ಇಡುವ ಡಬ್ಬದೊಳಗೆ ಒಂದು ಸಣ್ಣ ಬಟ್ಟೆಯ ಚೌಕ (ಅಥವಾ paper napkin) ಇಟ್ಟಿರುತ್ತಾರೆ, ಅದು ಹಬೆಯನ್ನು ಹೀರಿಕೊಳ್ಳುತ್ತದೆ ಅಂತ. ಹೀಗೆ ಮಾಡಿದರೂ ಎಲ್ಲದಕ್ಕಿಂತ ಕೊನೆಯಲ್ಲಿದ್ದ ಚಪಾತಿ ನೀರಿನಂಶ ಸ್ವಲ್ಪ ಹೆಚ್ಚೇ ಕಳೆದುಕೊಂಡು ಒಂದಿಷ್ಟು ಗಟ್ಟಿಯಾಗುತ್ತದೆ.

 36. ನಮ್ಮಮ್ಮ ಚಪಾತಿ ಹಾಕುವ ಡಬ್ಬ/ಪಾತ್ರೆಯ ಕೆಳಗೇ ಒಂದು ಪೇಪರ ಹಾಕ್ತಾರೆ, ಹಬೆ ಹೀರಿಕೊಳ್ಳಲಿ ಅಂತ. ಚಪಾತಿ ಮೃದುವಾಗಿರುತ್ತದೆ – ಅಮ್ಮನ ಮನಸಿನ ಹಾಗೆ 😉

 37. ತ್ರಿವೇಣಿಯವರೇ,
  ಚಪಾತಿ ಬಿಸಿಯಿರುವಾಗಲೇ ಇನ್ನಷ್ಟು ರುಚಿ. ಮತ್ತೆ ಮೆತ್ತಗೆ ಕೂಡ ಇರುತ್ತವೆ.ಆದ್ದರಿ೦ದ ಮದ್ಯಾನ್ಹ & ರಾತ್ರಿ ಊಟದ ಸಮಯಕ್ಕೇ ಮಾಡಿಕೊ೦ಡರಾಯಿತು. ಒ೦ದು ವೇಳೆ ನಿಮಗೆ ಬೆಳಿಗ್ಗೆಯೇ ಮಾಡಬೇಕೆ೦ದರೆ, ಸ್ವಲ್ಪ ದಪ್ಪನಾಗಿ ಲಟ್ಟಿಸಿಕೊ೦ಡು ಹೆ೦ಚಿನ ಮೇಲೆ ಉಬ್ಬುವ೦ತೆ ಬೇಯಿಸಿದರಾಯಿತು.

  ಜೋಶಿಯವರ ಕವಿತೆ ತುಂಬ ನಗು ತರಿಸಿತು. ನಿಮ್ಮ dream chappati ಯನ್ನು ನಿಮ್ಮ ಮನೆಯವರೆಲ್ಲರೂ ಆದಷ್ಟು ಬೇಗ ಸವಿಯುವ೦ತಾಗಲಿ. ಈ ಮೂಲಕ ನಮಗೆಲ್ಲ ತಿಳಿಯುವ೦ತಾಗಲಿ.

 38. ವಿಜಯಾ ಅವರೇ, ತುಳಸಿವನಕ್ಕೆ ಸ್ವಾಗತ. ಚಪಾತಿ ಸಲಹೆಗೆ ಧನ್ಯವಾದಗಳು. ಮೆದು ಚಪಾತಿಗಿಂತಲೂ ಇಲ್ಲಿ ನಡೆಯುತ್ತಿರುವ ಚರ್ಚೆಯೇ ಹೆಚ್ಚು ರುಚಿಯಾಗಿರುವಂತಿದೆ! 🙂

  ಓಹೋ! ಖಂಡಿತ. ನನ್ನ dream chappati ಪ್ರತ್ಯಕ್ಷವಾದ ಸಂತೋಷವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳದಿರುವೆನೇ?

 39. ಗಿರಿಯವರೆ, ತುಳಸಿವನಕ್ಕೆ ಸ್ವಾಗತ. ನಕ್ಕು ನಕ್ಕು ಸಾಕಾದರೆ, ಅಲ್ಲೇ ಇರುವ ಮೆದು ಚಪಾತಿ ತಿಂದು ಸುಧಾರಿಸಿಕೊಳ್ಳಿ 🙂

 40. ನಮಸ್ತೇ ಸ್ನೇಹಿತೇಯರೇ,

  ನಾನು ಚಪಾತಿ ಮೃದುವಾಗಿ ಮಾಡೋದು ಹೇಗೆ ಅಂತ ಸಲಹೆ ಕೋಡಬಯಸುತ್ತೇನೆ.

  ೧. ಹಿಂದಿನ ದಿನಾನೇ ಚಪಾತಿ ಕಲಸಿಡಿ. ಗೋದಿಹಿಟ್ಟಿಗೆ ಸ್ವಲ್ಪ ತುಪ್ಪ, ಬೇಕಾದರೆ ೧ ಬಾಳೇಹಣ್ಣು, ಚಿಟಿಕೆ ಉಪ್ಪು ಹಾಕಿ ಮೃದುವಾಗಿ ಕಲಸಿಡಿ. ೨ ಗಂಟೆ ಆದ ನಂತರ ಫ್ರಿಜ ನಲ್ಲಿ ರಾತ್ರಿನೇ ಇಡಿ.

  ೨. ಮಾರನೇ ದಿನ ಬೆಳಗ್ಗೆ ಫ್ರಿಜ ನಿಂದ ತೆಗೆದು ಚೆನ್ನಾಗಿ ನಾದಿ, (ಗ್ರೈಂಡರ್ ಇದ್ದರೆ ಅದರಲ್ಲಿ ೧೦ ನಿಮಿಶ ಹಾಕಿ ಅದು ಚೆನ್ನಾಗಿ ನಾದುತ್ತದೆ.
  ೩. ಈಗ ಚಪಾತಿ ಮಾಡೋದುಃ- ಪೂರಿ ಅಳತೆಗೆ ಲಟ್ಟಿಸಿ ಸ್ವಲ್ಪ ಎಣ್ಣೇ ಸವರಿ ಟ್ರಿಯಾಂಗಲನಲ್ಲಿ ಮಡಿಸಿ. ಗೋದಿ ಹಿಟ್ಟಿನಲ್ಲೇ ಲಟ್ಟಿಸಿ. ತವ ಮೀಡಿಯಮ್ ಸಿಮ ನಲ್ಲಿರಲಿ, ತವದ ಮೇಲೆ ಹಾಕಿದ ತಕ್ಷಣ ಎಣ್ಣೇ ಹಾಕಬೇಡಿ ತಿರುವಿ ಹಾಕಿ ನಂತರ ಎಣ್ಣೆ ಹಾಕಿ ಬೈಸಿ. ಸಾಫ್ಟ ಚಪಾತಿ ರೆಡಿ

 41. ಚೇತು, ನೀವು ನೀಡಿರುವ ಸಲಹೆಗೆ ಧನ್ಯವಾದಗಳು. ಆದರೆ ಗೋಧಿಹಿಟ್ಟಿಗೆ ಬಾಳೆಹಣ್ಣು ಸೇರಿಸುವುದರಿಂದ ಚಪಾತಿಗೆ ಸಿಹಿರುಚಿ ಬರುತ್ತದೆನೊ ಅಲ್ಲವಾ?

 42. Knead the dough softly. Roll a small chapaati first and then smear oil, fold like triangle. roll it slightly thick and cook on high flame adding oil generously.

  If you’re diet concious, roll the dough evenly and small (slightly bigger than a poori). Heat it on the tava for 30 seconds, turn to other side heat it for another 30 seconds and then put directly on flame. Oil free soft pulkas will be ready.

 43. ರಾಧಿಕಾ, ಚಪಾತಿ ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು.

  ಮಾಲಾ, ಹೌದು. ಮೆದುವಾಗದ ಮೆದು ಚಪಾತಿ, ಮಾಡಿ ಬಹಳ ದಿನಗಳಾಗಿದ್ದರೂ ಇನ್ನೂ ಬಿಸಿಯಾಗಿಯೇ ಇದೆ 🙂

 44. Topic mathra mast ede discussion ge…Chetu avr kottiro suggestion tumba chenag ede…ang madidre meduvada chapati baratte ansatte…

 45. ಛೀ, ನೀವೇಲ್ಲ ಮೈಗಳ್ಳರು ಕನ್ರಿ, ಮನಸು ಕೊಟ್ಟು ಚಪಾತಿ ಮಾಡಬೇಕಪ್ಪ ತಾವೇ ಮೃದುವಾಗುತ್ತವೆ.

 46. ಪುಷ್ಪ, ‘ನೀವೆಲ್ಲಾ ಮೈಗಳ್ಳರು’ ಎಂದು ಸಾರಾಸಗಟಾಗಿ, ನಮ್ಮನ್ನೆಲ್ಲಾ ಮೈಗಳ್ಳರ ಸಂಘದ ಸದಸ್ಯರಾಗಿಸಿದ್ದಕ್ಕೆ ಥ್ಯಾಂಕ್ಸ್ 🙂

 47. ಹ ಹ ನಕ್ಕು ನಕ್ಕು ಸಾಕಾಯ್ತು. ಚಪಾತಿ ಪುರಾಣ ೨೦೦೭ ರಿಂದ ನಡಿತಾ ಇದೆ.

 48. ಚಪಾತಿ ಹಿಟ್ಟು ಕಲಸುವ ಮೋದಲು ಸ್ವಲ್ಪ ಏಣ್ಣೆಯನ್ನು ಹಾಕಿ ಕಲಸಿದರೆ
  ಚಪಾತಿ ಮೃದುವಾಗಿರುತ್ತದೆ ನ೦ತರ ಸ್ವಲ್ಪ ಏಣ್ಣೆಯನ್ನು ಹಾಕಿ ಕಲಸಿ ಲಟ್ಟಿಸಿ
  ರುಚಿಯಾದ ಚಾಪಾತಿ ರೆಡಿ………

 49. ಹಾಯ್ ನಾನೂ ಕಾವ್ಯ
  ನಿಮ್ಗೇ ನನ್ನದೊ೦ದು ಸಲಹೆ ೧) ಪಾತ್ರೆಗೆ ಗೋದಿ ಹಿಟ್ಟು ರುಚಿಗೆ ತಕ್ಕಸ್ಟು ಉಪ್ಪು ಮತ್ತು ತಣ್ಣೀರನ್ನು ಹಾಕಿ ಬೇಗನೆ ಕಲಿಸಿ ನ೦ತರ ಸ್ವಲ್ಪ ಎಣ್ಣೆಯನ್ನು ಹಾಕಿ ಕಲಿಸಿ ಕೊ೦ಡು ಬೇಗನೇ (ಕೆಲ ಕಾಲ ಇಡ ಬಾರದು) ಸಣ್ಣ ಸಣ್ಣ ಉ೦ಡೆಗಳಾಗಿ ಮಾಡಿ ಲಟ್ಟಿಸಿ ಕೊ೦ಡು ತವದ ಮೇಲೆ ಕಾಯಿಸಿ (ಎಣ್ಣೆಯನ್ನು ಹಾಕ ಬಾರದು ತು೦ಬಾ ಕಾಯಿಸಬಾರದು)

  (ಕೆಲ ಕಾಲ ಇಡ ಬಾರದು ಯಾಕೆ೦ದರೆ , ಹಿಟ್ಟು ನೀರನ್ನು ಹೀರಿಕೊ೦ಡು ಗಟ್ಟಿಯಾಗುತ್ತದೆ.) ಹೀಗೆ ಮಾಡಿದರೆ ಮೃದುವಾದ ಚಪಾತಿ ತಿನ್ನಲು ಸಿದ್ದ.

  ದನ್ಯವಾದಗಳು.

 50. ಇವತ್ತಿನ ಪ್ರಜಾವಾಣಿಯಲ್ಲಿ ತುಳಸಿವನದ ಬಗ್ಗೆ ಓದಿ ಈ ಕನ್ನಡಮ್ಮನ ದೇವಾಲಯಕ್ಕೆ ಅರ್ಧ ಪ್ರದಕ್ಷಿಣೆ ಹಾಕಿದೆ. (ಮುಂದೆ ಪೂರ್ತಿ ಹಾಕಲಿದೆ)
  ವರ್ಷಗಳಷ್ಟು ಹಳೆಯ ಪೋಸ್ಟ್ ಆದರೂ ಚಪಾತಿ ಸರ್ವ ಕಾಲಕ್ಕೂ ಸಲ್ಲುವಂಥದ್ದಾದ್ದರಿಂದ ಈಗ ಇದಕ್ಕೆ ಪ್ರತಿಕ್ರಿಯಿಸಿರುವೆ!
  ಚಪಾತಿ ಮಾಡುವಾಗ ಹಿಟ್ಟನ್ನು ಗುದ್ದಿ ಗುದ್ದಿ ಮತ್ತೆ ಲಟ್ಟಿಸಬೇಕು. ಎಂದು ಸಲಹೆ ಕೊಟ್ಟಿದ್ದಾರಲ್ಲ. ಅದು ಒಳ್ಳೆ ಸಲಹೆ. ನಿಮಗೆ ಯಾರಲ್ಲಾದರೂ ಸಿಟ್ಟಿದ್ದರೆ ಅವರಿಗೆ ಗುದ್ದಲು ಆಗದಿದ್ದರೆ ಮನ್ಸೋ ಇಚ್ಛೆ ಗೋಧಿ ಹಿಟ್ಟಿಗೆ ಗುದ್ದಿ ಗುದ್ದಿ……….ಗುದ್ದಿ ನಿಮ್ಮ ಸಿಟ್ಟನ್ನು ಕಡಿಮೆಗೊಳಿಸಿ. ಅದರಿಂದ ನಿಮಗೆ ಎರಡು ಲಾಭ. ಒಂದು. ಸಿಟ್ಟು ಕ್ಷಮನ, ಎರಡು. ನಿಮಗೆ ಮೆದು ಮೆದು….ಮೆದುವಾದ ಚಪಾತಿ ತಿನ್ನುವ ಭಾಗ್ಯ.
  ಮಾಲಾ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.